‘ಇನ್‌ ಗ್ರೂಪ್ ಫೀಲಿಂಗ್’: ಹಿಮಾ ದಾಸ್‌ ಜಾತಿಯನ್ನು ಹುಡುಕುವ ಮನಸ್ಥಿತಿ ಎಂತದ್ದು?
COVER STORY

‘ಇನ್‌ ಗ್ರೂಪ್ ಫೀಲಿಂಗ್’: ಹಿಮಾ ದಾಸ್‌ ಜಾತಿಯನ್ನು ಹುಡುಕುವ ಮನಸ್ಥಿತಿ ಎಂತದ್ದು?

ಸಾಧಕರ ಜಾತಿಯ ಆಧಾರದ ಮೇಲೆ ಅವರನ್ನು ದೂರ ಇಡುವ ಒಂದು ವರ್ಗ ಇರುವಂತೆ, ಜಾತಿಯ ಕಾರಣಕ್ಕೆ ಸಾಧಕರನ್ನು ತಮ್ಮವರು ಎಂದು ಗುರುತಿಸಿಕೊಳ್ಳವ ಜನ ವರ್ಗವೂ ಇರುತ್ತದೆ.

ಕ್ರೀಡಾಪಟು ಹಿಮಾ ದಾಸ್ ಜಾತಿ ಯಾವುದು ಎಂಬುದನ್ನು ಹೆಚ್ಚಿನ ಜನ ಗೂಗಲ್‌ನಲ್ಲಿ ಹುಡುಕಿರುವುದು ಸುದ್ದಿಯಾಗಿದೆ. ಸಾಧಕರ ಜಾತಿ ಹುಡುಕಾಟದ ಈ ಸುದ್ದಿ ನೋಡಿ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಹಲವರ ರಕ್ತ ಕುದಿಯುತ್ತಿರುತ್ತದೆ. ಆದರೆ, ಈ ಜಾತಿ ಹುಡುಕಾಟದ ಹಿಂದೆ ನಕಾರಾತ್ಮಕ (ನೆಗೆಟಿವ್‌) ಅಂಶದಂತೆ ಸಕಾರಾತ್ಮಕ (ಪಾಸಿಟಿವ್‌) ಅಂಶಗಳೂ ಇವೆ.

ಹಿಮಾ ದಾಸ್‌ ಜಾತಿ ಹುಡುಕಾಟವನ್ನು ವಿರೋಧಿಸಿರುವ ಹಲವರು, “ಸಾಧನೆಯಲ್ಲೂ ಜಾತಿ ಹುಡುಕುವ ಹೀನ ಜನ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಆದರೆ, ಜಾತಿಯ ಹುಡುಕಾಟದ ಹಿಂದೆ ಕೇವಲ ನೆಗೆಟಿವ್‌ ಮನಸ್ಥಿತಿಯಷ್ಟೇ ಕೆಲಸ ಮಾಡಿರುವುದಿಲ್ಲ. ಸಾಧಕರ ಜಾತಿ ಹಾಗೂ ಹಿನ್ನೆಲೆಯ ಹುಡುಕಾಟದಲ್ಲಿ ಮನುಷ್ಯನ ಸಹಜ ಕುತೂಹಲದ ಜತೆಗೆ ಪಾಸಿಟಿವ್‌ ಮನಸ್ಥಿತಿಯೂ ಕೆಲಸ ಮಾಡಿರುತ್ತದೆ.

ಸಾಧಕರ ಜಾತಿಯ ಹುಡುಕಾಟ ಇದೇ ಮೊದಲೇನಲ್ಲ. ಈ ಹಿಂದೆ ಪಿ.ವಿ. ಸಿಂಧು ಪ್ರಶಸ್ತಿ ಪಡೆದಾಗ ಕೂಡಾ ಜಾತಿಯ ಹುಡುಕಾಟ ಜೋರಾಗಿಯೇ ನಡೆದಿತ್ತು. ಪಿ.ವಿ. ಸಿಂಧು ಜಾತಿ ಯಾವುದು ಎಂದು ಹಲವರು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದರು. ಹೀಗೆ ಹೊಸ ಪ್ರತಿಭೆಗಳು ಹೊರ ಹೊಮ್ಮಿದ ಸಂದರ್ಭದಲ್ಲೆಲ್ಲಾ ಜಾತಿಯ ಹುಡುಕಾಟ ಹೆಚ್ಚಾಗಿಯೇ ನಡೆದಿರುವುದು ಸುದ್ದಿಯಾಗುತ್ತಿದೆ. ಸಾಧನೆಗೆ ಜಾತಿ ಇಲ್ಲದೆ ಇರಬಹುದು, ಸಾಧಕರಿಗೆ ಜಾತಿ ಇರುತ್ತದೆ ಎಂದು ನಂಬುವ ಜನರ ಮನಸ್ಥಿತಿ ಇದು.

ಭಾರತದಂತಹ ದೇಶದಲ್ಲಿ ಆಧುನಿಕ ಎಂದು ಹೇಳಿಕೊಳ್ಳುವ ಮನುಷ್ಯ ತಾನು ಜಾತಿಯನ್ನು ಎಷ್ಟೇ ವಿರೋಧಿಸಿ, ಅದನ್ನು ಬಿಟ್ಟಿದ್ದೇನೆ ಎಂದರೂ ಜಾತಿ ಮನುಷ್ಯನನ್ನು ಬಿಟ್ಟಿಲ್ಲ. ಮೇಲ್ವರ್ಗ ಮತ್ತು ಕೆಳವರ್ಗ ಎನ್ನುವ ಜತೆಗೆ ಮೇಲು ಜಾತಿ, ಕೀಳು ಜಾತಿ ಎಂಬ ವರ್ಗೀಕರಣ ಭಾರತೀಯ ಸಮಾಜದಲ್ಲಿ ಇಂದಿಗೂ ಉಳಿದಿದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿಯನ್ನು ಸುಲಭದಲ್ಲಿ ಕಿತ್ತುಹಾಕುವುದು ಸಾಧ್ಯವಿಲ್ಲ. ವೇದಿಕೆಗಳಲ್ಲಿ ಸಮಾನತೆಯ ಭಾಷಣ ಮಾಡುವ ಹಲವರ ಮನೆಗಳಲ್ಲಿ ಜಾತಿಯ ಆಚರಣೆ ಇಂದಿಗೂ ನಡೆಯುತ್ತಿದೆ.

ಸಾಧಕರ ಜಾತಿಯ ಹುಡುಕಾಟದಲ್ಲಿ ಕೂಡಾ ಈ ಸಾಮಾಜಿಕ ಮನಸ್ಥಿತಿಯೇ ಕೆಲಸ ಮಾಡಿರುತ್ತದೆ. ಸಾಧನೆ ಮಾಡಿರುವವರು ಯಾವ ಜಾತಿಯವರು, ಅವರ ಊರು ಯಾವುದು, ಅವರ ವಿದ್ಯಾಭ್ಯಾಸ ಏನು, ಅವರ ಆರ್ಥಿಕ ಪರಿಸ್ಥಿತಿ ಎಂಥದ್ದು, ಅವರ ತಂದೆ- ತಾಯಿ ಏನು ಮಾಡುತ್ತಿದ್ದಾರೆ, ಅವರ ಸಾಧನೆಗೆ ಯಾರೆಲ್ಲಾ ಬೆಂಬಲವಾಗಿದ್ದರು ಎಂಬ ವಿಚಾರಗಳನ್ನು ತಿಳಿದುಕೊಳ್ಳುವುದು ಮನುಷ್ಯ ಸಹಜ ಕುತೂಹಲ. ಇಂತಹ ಕುತೂಹಲ ಎಲ್ಲಾ ದೇಶಗಳಲ್ಲೂ, ಎಲ್ಲಾ ಬಗೆಯ ಜನರಲ್ಲೂ ಕಂಡುಬರುತ್ತದೆ ಎನ್ನುತ್ತಾರೆ ಮನೋ ವಿಜ್ಞಾನಿಗಳು ಹಾಗೂ ಸಮಾಜಶಾಸ್ತ್ರಜ್ಞರು.

ಜಾತಿಯ ಹುಡುಕಾಟ ಯಾವಾಗಲೂ ಒಂದೇ ಬಗೆಯಾಗಿರುವುದಿಲ್ಲ. ಸಾಧನೆ ಮಾಡಿದವರ ಹಿನ್ನೆಲೆ ಏನು ಎಂಬ ಹುಡುಕಾಟ ಆರಂಭದಲ್ಲಿ ಒಂದು ಕುತೂಹಲವಷ್ಟೇ. ಇಂತಹ ಕುತೂಹಲ ಜಗತ್ತಿನ ಎಲ್ಲಾ ಕಡೆಯೂ ಇದೆ. ನಮ್ಮಲ್ಲಿ ಜಾತಿ ಹುಡುಕಿದಂತೆ ಉಳಿದ ಕಡೆಗಳಲ್ಲಿ ಸಾಧಕರ ಸಾಮಾಜಿಕ ಹಿನ್ನೆಲೆ, ವರ್ಗ ಇತ್ಯಾದಿ ಹುಡುಕಾಟ ನಡೆಯುತ್ತದೆ. ಜಾತಿಯನ್ನು ಹುಡುಕಾಡಿ ಅವರನ್ನು ದೂರ ಇಡುವ ವರ್ಗ ಒಂದು ಕಡೆಗಿದ್ದರೆ, ಸಾಧಕರನ್ನು ಅವರ ಜಾತಿಯ ಕಾರಣಕ್ಕೆ ತಮ್ಮವರು ಎಂದು ಹೆಮ್ಮೆಯಿಂದ ಅಪ್ಪಿಕೊಳ್ಳುವ ವರ್ಗ ಇನ್ನೊಂದು ಕಡೆಗಿರುತ್ತದೆ.

ಜಾತಿ ಹುಡುಕಾಟದ ಸಾಮಾಜಿಕ ಆಯಾಮ:

ತೀರಾ ಬಡತನದಿಂದ ಬಂದು ಸಾಧನೆ ಮಾಡಿದವರು ಅಂತಹ ಕಷ್ಟದಲ್ಲೂ ಎಂತಹ ಸಾಧನೆ ಮಾಡಿದ್ದಾರೆ ಎಂದು ಹೊಗಳುವ ಉದ್ದೇಶದಿಂದ ಜಾತಿ ಹಾಗೂ ಅವರ ಹಿನ್ನೆಲೆ ಹುಡುಕಬಹುದು. ಹಾಗೆಯೇ ಅವರು ಯಾವ ಜಾತಿ ಎಂದು ಹುಡುಕಿ ಅದರ ಆಧಾರದ ಮೇಲೆ ಅವರ ಕಾಲೆಳೆಯಲೂ ಇಂತಹ ಹುಡುಕಾಟ ನಡೆಯಬಹುದು. ಪಾಸಿಟಿವ್‌ ಉದ್ದೇಶದಿಂದ ಜಾತಿ, ಹಿನ್ನೆಲೆ ಹುಡುಕಿದರೆ ಅದನ್ನು ಒಪ್ಪಬಹುದು. ಆದರೆ, ಸಾಧಕರ ಕಾಲೆಳೆಯಲು ಈ ಹುಡಕಾಟ ನಡೆಸುವುದು ಕೆಟ್ಟ ಮನಸ್ಥಿತಿ.

“ಜಾತಿ ಭೇದ ಮಾಡುವ ಕಾರಣಕ್ಕೆ ಸಾಧಕರ ಜಾತಿ ಹುಡುಕುವುದು ತಪ್ಪು. ಕಷ್ಟದ ಹಿನ್ನೆಲೆಯಿಂದ, ತಳಸಮುದಾಯದಿಂದ ಬಂದ ಸಾಧನೆ ಮಾಡಿದ್ದರೆ ಅದನ್ನು ಮೆಚ್ಚಬೇಕಾದ್ದು ಸಾಮಾಜಿಕ ಜವಾಬ್ದಾರಿ. ಅಂತಹ ಸಾಧಕರ ಬಗ್ಗೆ ಹೆಮ್ಮೆ ಪಡಬೇಕಾದ್ದು ನಾಗರಿಕ ಸಮಾಜದ ಪ್ರತಿ ವ್ಯಕ್ತಿಯ ಕರ್ತವ್ಯ. ಆದರೆ, ಜಾತಿ ಹಾಗೂ ಹಿನ್ನೆಲೆಯ ಕಾರಣಕ್ಕೆ ಸಾಧನೆ ಮಾಡಿದವರನ್ನು ಹೀಯಾಳಿಸುವುದು, ಕಾಲೆಳೆಯಲು ಮುಂದಾಗುವುದು ತಪ್ಪು” ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಆರ್‌. ರಾಜೇಶ್‌.

“ಜಗತ್ತಿನ ಯಾವುದೇ ಸಮಾಜದಲ್ಲಿ ಸಾಧಕರ ಹಿನ್ನೆಲೆ ಹುಡುಕುವುದು ಸರ್ವೇ ಸಾಮಾನ್ಯ. ಸಾಧಕರ ಬಗ್ಗೆ ಜನ ಹುಡುಕುವ ಹಲವು ವಿಚಾರಗಳಲ್ಲಿ ಜಾತಿಯ ಆಯಾಮವೂ ಒಂದು. ಸಾಧಕರ ಹಿನ್ನೆಲೆ ಹುಡುಕುವ ಈ ಕುತೂಹಲ ಅಲ್ಲಿಗೇ ನಿಲ್ಲಬೇಕು. ಅದನ್ನು ಜಾತಿಯ ಕಾರಣಕ್ಕೆ ಮುಂದುವರೆಸುವುದು ತಪ್ಪು. ಈ ಹುಡುಕಾಟವನ್ನು ಪಾಸಿಟೀವ್‌ ಆಗಿ ನೋಡಿದರೆ ಸಾಧಕರು ತಳ ಸಮುದಾಯದಿಂದ, ಬಡತನದಿಂದ ಬಂದೂ ಇಂತಹ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸುವುದು ಒಳ್ಳೆಯದು. ಆದರೆ, ಆ ಸಾಧಕರನ್ನು ಹಳಿಯಲು, ಅವರ ಕಾಲೆಳೆಯಲು ಹುಡುಕಾಟಕ್ಕೆ ಹೊರಟರೆ ಅದು ತಪ್ಪು” ಎಂಬುದು ಅವರ ಅಭಿಪ್ರಾಯ.

ಸಾಧಕರ ಜಾತಿಯ ಹುಡುಕಾಟದ ಹಿಂದೆ ನೆಗೆಟಿವ್‌, ಪಾಸಿಟಿವ್ ಎರಡೂ ಆಯಾಮಗಳಿರುತ್ತವೆ. ಸಾಧಕರನ್ನು ಅವರ ಜಾತಿ, ವರ್ಗದಿಂದ ಗುರುತಿಸಿ ನಿಂದಿಸುವುದು, ಅಪಮಾನ ಮಾಡುವುದು ಸರಿಯಲ್ಲ. ತಳಮಟ್ಟದಿಂದ ಬಂದ ಸಾಧಕರನ್ನು ಗೌರವಿಸಬೇಕಾದ್ದು ಆಧುನಿಕ ಸಮಾಜದ ಜವಾಬ್ದಾರಿ.
-ಡಾ. ಆರ್‌. ರಾಜೇಶ್‌, ಸಮಾಜಶಾಸ್ತ್ರ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ

“ಸಾಧಕರ ಜಾತಿಯನ್ನು ಯಾರು ಹುಡುಕಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಲಕ್ಷಾಂತರ ಜನರಲ್ಲಿ ಎಲ್ಲರೂ ಸಾಧಕರ ಜಾತಿಯನ್ನೇ ಹುಡುಕುತ್ತಿರುವುದಿಲ್ಲ. ಜಾತಿ ಹುಡುಕುತ್ತಿರುವವರಿಗೆ ಒಂದು ಉದ್ದೇಶವಿರುತ್ತದೆ. ಕೆಲವೊಮ್ಮೆ ಅದು ನೆಗೆಟಿವ್‌ ಆಗಿರಬಹುದು, ಕೆಲವೊಮ್ಮೆ ಪಾಸಿಟಿವ್‌ ಕೂಡಾ ಆಗಿರಬಹುದು. ನಾನೂ ಸಾಧಕನಾಗಬಹುದೇ ಎಂಬ ಆಸೆ ಇರುವವನು ಸಾಧಕರ ಹಿನ್ನೆಲೆ ಹುಡುಕಬಹುದು. ಅದೇ ರೀತಿ ಇವರು ಯಾರು, ಇವರ ಹಿನ್ನೆಲೆ ಏನು, ಹೇಗೆ ಸಾಧನೆ ಮಾಡಿದರು, ಇವರ ಕಾಲೆಳೆಯಬೇಕು ಎಂಬ ಉದ್ದೇಶವೂ ಈ ಹುಡುಕಾಟದ ಹಿಂದೆ ಇರಬಹುದು.

ಜಾತಿಯ ಮನೋವಿಜ್ಞಾನ:

“ಸಾಮಾನ್ಯವಾಗಿ ಮನುಷ್ಯ ಮೊದಲಿಗೆ ತಾನು, ತನ್ನದು ಎಂದು ಯೋಚಿಸುವ ಪ್ರಾಣಿ. ವಿದೇಶದಲ್ಲಿ ಭಾರತೀಯನೊಬ್ಬ ಸಿಕ್ಕರೆ ಒಬ್ಬ ಮನುಷ್ಯ ಸಾಮಾನ್ಯವಾಗಿ ಅವನೊಂದಿಗೆ ಗುರುತಿಸಿಕೊಳ್ಳುತ್ತಾನೆ. ಬೇರೆ ರಾಜ್ಯದಲ್ಲಿ ಕನ್ನಡಿಗ ಸಿಕ್ಕರೆ ಅವನೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾನೆ. ಕನ್ನಡಿಗನೋ, ಭಾರತೀಯನೋ ಯಾವುದೋ ಕಾಲದಲ್ಲಿ ವಿದೇಶಕ್ಕೆ ಹೋಗಿದ್ದು ಅವನ ಮಗನೋ, ಮೊಮ್ಮಗನೋ ಯಾವುದಾದರು ಸಾಧನೆ ಮಾಡಿದಾಗ ಅವನು ನಮ್ಮವನು ಎಂದು ಸಂಭ್ರಮಿಸುವುದು ಮನುಷ್ಯನ ಸ್ವಭಾವ. ಹಾಗೆಯೇ ಒಂದು ಊರಿನಲ್ಲಿ ತನ್ನ ಜಾತಿ, ವರ್ಗದ ಜನರೊಂದಿಗೆ ಮನುಷ್ಯ ವಾಸಿಸಲು ಬಯಸುತ್ತಾನೆ. ಮನುಷ್ಯನ ವಿಕಾಸದ ಜತೆಗೇ ಈ ತನ್ನವರು ಎನ್ನುವ ಈ ಗುಣ ಬೆಳೆದುಬಂದಿದೆ” ಎನ್ನುತ್ತಾರೆ ಮನೋವಿಜ್ಞಾನಿ ಡಾ. ಅ. ಶ್ರೀಧರ್.

“ಯಾರೇ ಸಾಧಕರಿರಲಿ ಮೊದಲು ಅವರು ನಮ್ಮ ಗುಂಪಿಗೆ ಸೇರಿದವರೇ ಎಂದು ಹುಡುಕುವುದು ಮನುಷ್ಯನ ಗುಣ. ಇದನ್ನು ‘ಇನ್‌ ಗ್ರೂಪ್‌ ಫೀಲಿಂಗ್‌ ಮತ್ತು ಔಟ್‌ ಗ್ರೂಪ್‌ ಫೀಲಿಂಗ್‌’ ಎಂದು ಮನಃಶಾಸ್ತ್ರದಲ್ಲಿ ಗುರುತಿಸುತ್ತೇವೆ. ಸಾಮಾಜಿಕ ಅಂತರಗಳಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜತೆಗೆ ಇರಬೇಕೆಂದರೆ ಏನೇನು ನಿರೀಕ್ಷೆ ಇರುತ್ತವೆ ಎಂಬ ಅಂಶಗಳಲ್ಲಿ ಜಾತಿ ಕೂಡಾ ಒಂದು. ಮನುಷ್ಯ ಮೊದಲಿಗೆ ತಾನು, ನಂತರ ತನ್ನವರು ಎಂಬ ಮನೋಭಾವ ಶುರುವಾಗುತ್ತದೆ. ತನ್ನವರು ಅನ್ನುವ ವರ್ಗದ ಬಗ್ಗೆ ಹೆಚ್ಚು ಒಲವಿರುತ್ತದೆ. ಮನುಷ್ಯ ಅಂತಹ ತನ್ನವರೊಂದಿಗೆ ಹೆಚ್ಚು ಗುರುತಿಸಿಕೊಳ್ಳಲು ಇಷ್ಟಪಡುತ್ತಾನೆ. ಜಾತಿ ಹುಡುಕಾಟದ ಹಿಂದೆ ಈ ಮನಸ್ಥಿತಿಯೂ ಕೆಲಸ ಮಾಡಿರುತ್ತದೆ” ಎಂಬುದು ಅವರ ಮಾತು.

ಸಾಧಕರ ಜತೆಗೆ ಗುರುತಿಸಿಕೊಳ್ಳುವ ಉದ್ದೇಶದಿಂದ ಜಾತಿಯ ಹುಡುಕಾಟ ಸಾಮಾನ್ಯ. ಇವರು ಯಾರು, ತಮಗಿಂತ ಕೆಳಗಿನವರೂ ಇಂತಹ ಸಾಧನೆ ಮಾಡಿದರೇ ಎಂಬ ಮನುಷ್ಯನ ಹೊಟ್ಟೆಕಿಚ್ಚು ಕೂಡಾ ಜಾತಿಯ ಹುಡುಕಾಟದ ಹಿಂದೆ ಇರಬಹುದು.
-ಡಾ. ಅ. ಶ್ರೀಧರ್‌, ಮನೋವಿಜ್ಞಾನಿ

“ಸಾಧನೆ ಮಾಡಿರುವವರು ಯಾವುದೇ ಜಾತಿಗೆ ಸೇರಿದ್ದರೂ, ಅವರು ನಮ್ಮ ಜಾತಿಯವರೇ ಎಂಬ ಕುತೂಹಲವೂ ಈ ಹುಡುಕಾಟದ ಹಿಂದೆ ಇರಬಹುದು. ಇತ್ತೀಚಿನ ದಿನಗಳಲ್ಲಿ ಜಾತಿಯ ಆಧಾರದ ಮೇಲೆ ಸಾಧಕರ ಸಾಧನೆಯನ್ನು ತಮ್ಮ ಜಾತಿಯ ಸಾಧನೆ ಎಂದು ಬಿಂಬಿಸಿಕೊಳ್ಳುವ ಇಚ್ಛೆಯೂ ಮನುಷ್ಯನಲ್ಲಿ ಹೆಚ್ಚಾಗುತ್ತಿದೆ. ಹೀಗೆ ಗುರುತಿಸಿಕೊಳ್ಳುವ ಮೂಲಕ ತಮ್ಮವರ ಸಾಧನಾ ಸಾಮರ್ಥ್ಯ ಜಾಸ್ತಿ ಇದೆ, ಇತರರಿಗಿಂತ ತಮ್ಮ ಸಾಮರ್ಥ್ಯ ಹೆಚ್ಚು ಎಂದು ತೋರಿಸಿಕೊಳ್ಳಲೂ ಈ ಜಾತಿಯ ಹುಡುಕಾಟ ನಡೆಸಬಹುದು. ಕೇವಲ ಅಭಿಮಾನಕ್ಕಷ್ಟೇ ಈ ಜಾತಿಯ ಹುಡುಕಾಟ ನಡೆದಿರುವುದಿಲ್ಲ” ಎನ್ನುತ್ತಾರೆ ಶ್ರೀಧರ್‌.

ಹುಡುಕಾಟವನ್ನು ತಂತ್ರಜ್ಞಾನ ಸುಲಭವಾಗಿಸಿರುವ ಇಂದಿನ ದಿನಗಳಲ್ಲಿ ಈ ಜಾತಿಯ ಹುಡುಕಾಟ ಹೊರನೋಟಕ್ಕೆ ಮನುಷ್ಯನ ಹೀನಬುದ್ಧಿಯ ಪ್ರದರ್ಶನದಂತೆ ಕಾಣುವುದು ಸಹಜ. ಆದರೆ, ಸಾಧಕರೊಂದಿಗೆ ತಮ್ಮನ್ನು ಗುರುಸಿಕೊಳ್ಳಲು ಬಯಸುವ ಒಂದು ಜನ ಸಮೂಹ ಕೂಡಾ ಅವರ ಜಾತಿಯನ್ನು ಹುಡುಕಿರುತ್ತದೆ. ಆದರೆ, ತಕ್ಷಣಕ್ಕೆ ಇದನ್ನು ಜಾತೀಯತೆಯ ಆಯಾಮದಿಂದಲೇ ನೋಡುವುದು ಕೂಡಾ ಮನುಷ್ಯ ಸ್ವಭಾವ. ಹೀಗಾಗಿ ಜಾತಿ ಹುಡುಕಾಟವನ್ನು ಕೇವಲ ನೆಗೆಟೀವ್‌ ದೃಷ್ಟಿಯಿಂದಷ್ಟೇ ನೋಡುವ ಅಗತ್ಯವಿಲ್ಲ.