ಪೋಸ್ಟ್‌ಕಾರ್ಡ್‌ ಇಂಗ್ಲೀಷ್ ಪೇಜ್‌ಗೆ ಗೇಟ್‌ ಪಾಸ್:  ಕನ್ನಡದಲ್ಲಿ ಮೋದಿಯೇ ಬ್ರಾಂಡ್ ಅಂಬಾಸಿಡರ್!
COVER STORY

ಪೋಸ್ಟ್‌ಕಾರ್ಡ್‌ ಇಂಗ್ಲೀಷ್ ಪೇಜ್‌ಗೆ ಗೇಟ್‌ ಪಾಸ್: ಕನ್ನಡದಲ್ಲಿ ಮೋದಿಯೇ ಬ್ರಾಂಡ್ ಅಂಬಾಸಿಡರ್!

‘ಪೋಸ್ಟ್‌ಕಾರ್ಡ್‌ ನ್ಯೂಸ್‌ ಇಂಗ್ಲೀಷ್‌’ನ ಪೇಜನ್ನು ಫೇಸ್ಬುಕ್‌ ರದ್ದುಗೊಳಿಸಿದೆ. ಆದರೆ ಕನ್ನಡ ಪೇಜ್ ಮಾತ್ರ ಚಾಲ್ತಿಯಲ್ಲಿದೆ. ಅಷ್ಟೆ ಅಲ್ಲ, ಪೋಸ್ಟ್‌ಕಾರ್ಡ್‌ ತನ್ನ ಸುದ್ದಿ ಹಂಚಲು ಇಲ್ಲಿ ಬಳಸಿಕೊಳ್ಳುತ್ತಿರುವುದು ನಮೋ ಹೆಸರು.

ಶುಕ್ರವಾರವಷ್ಟೇ ಬೀದರ್‌ನಲ್ಲಿ ವಾಟ್ಸಾಪ್ ಸುಳ್ಳು ಸುದ್ದಿಗೆ ವ್ಯಕ್ತಿಯೊಬ್ಬರು ಬಲಿಯಾದ ಪ್ರಕರಣ ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಲಾಗಿದೆ. ಇದೇ ಹೊತ್ತಲ್ಲಿ ‘ಫೇಕ್ ನ್ಯೂಸ್ ಫ್ಯಾಕ್ಟರಿ’ ಎಂಬ ಕುಖ್ಯಾತಿಗೆ ಈಡಾಗಿರುವ ‘ಪೋಸ್ಟ್‌ಕಾರ್ಡ್‌ ನ್ಯೂಸ್‌’ ಇಂಗ್ಲೀಷ್‌ ಫೇಸ್ಬುಕ್ ಫೇಜನ್ನು ಸ್ವತಃ ಫೇಸ್ಬುಕ್‌ ರದ್ದುಗೊಳಿಸಿದೆ. ಇಂಗ್ಲೀಷಿನದು ರದ್ದಾದರೂ ಕನ್ನಡ ಪೇಜ್ ಮಾತ್ರ ಚಾಲ್ತಿಯಲ್ಲಿದೆ. ಹೀಗಾಗಿ ಕನ್ನಡದ ಪೇಜ್ ರದ್ದಾಗುವುದು ಯಾವಾಗ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಜತೆಗೆ ಫೇಸ್ಬುಕ್ ಮಾದರಿಯಲ್ಲಿ ಟ್ಟಿಟ್ಟರ್ ನಿರ್ಧಾರ ತೆಗೆದುಕೊಳ್ಳುವುದು ಯಾವಾಗ ಎಂದೂ ಜನರು ಕೇಳುತ್ತಿದ್ದಾರೆ.

ಹಾಗೆ ನೋಡಿದರೆ ಪೋಸ್ಟ್‌ಕಾರ್ಡ್‌ನ ಕನ್ನಡ ವೆಬ್‌ಸೈಟ್‌ ಕೂಡ ಸರಣಿ ಆಪಾದನೆಗಳಿಗೆ ಗುರಿಯಾಗಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಹುಟ್ಟಿಕೊಂಡ ಈ ವಿವಾದಿತ ಜಾಲತಾಣದ ಮೇಲೆ ಈ ಹಿಂದೆ 7 ದೂರುಗಳು ದಾಖಲಾಗಿದ್ದವು. ಮತ್ತು ಇದರ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಮಾರ್ಚ್ 29ರಂದು ರಾಜ್ಯದ ಸಿಸಿಬಿ ಪೊಲೀಸರು ಬಂಧಿಸಿದ್ದರು.

‘ಜೈನ ಮುನಿ ಉಪಾಧ್ಯಾಯ ಮಾಯಾಂಕ್ ಸಾಗರ್‌ ಜೀ ಅವರ ಮೇಲೆ ಮುಸ್ಲಿಂ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ’ ಎಂಬ ಸುದ್ದಿಯನ್ನು ಪ್ರಕಟಿಸಿದ ಆರೋಪದ ಮೇಲೆ ಪೋಸ್ಟ್‌ಕಾರ್ಡ್‌ಗೆ ಸಂಬಂಧಿಸಿದ ಗೌರವ್ ಪ್ರಧಾನ್, ವಿವೇಕ್ ಶೆಟ್ಟಿ ಮತ್ತು ಮಹೇಶ್ ವಿಕ್ರಂ ಹೆಗ್ಡೆಯವರ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಗಫರ್ ಬೇಗ್‌ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆಗಳ ಆಧಾರದಲ್ಲಿ ಗುಂಪುಗಳ ಮಧ್ಯೆ ದ್ವೇಷ ಬಿತ್ತುವುದು, ಸಾಮರಸ್ಯಕ್ಕೆ ಧಕ್ಕೆ ತರುವುದು), 295ಎ (ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವುದು) ಮತ್ತು 120ಬಿ (ಅಪರಾಧ ಸಂಚು) ಅಡಿಯಲ್ಲಿ ದೂರು ದಾಖಲಿಸಿಕೊಂಡು ಹೆಗ್ಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಮೂರು ದಿನ ವಶಕ್ಕೆ ಪಡೆದಿದ್ದರು.

ಇದೀಗ ಹೊಸದಾಗಿ ಕಳೆದ ಗುರುವಾರ ಮತ್ತೆ ಮಹೇಶ್ ವಿಕ್ರಂ ಹೆಗ್ಡೆ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸ್ಲಾಂ ಪಾಷಾ ಕೆ. ಎನ್ನುವವರು ‘ಶೇಕಡಾ 95 ಮುಸ್ಲಿಂ ಸಮುದಾಯದವರು ಅತ್ಯಾಚಾರವೆಸಗಿದ್ದಾರೆ ಎಂಬುದಾಗಿ ಹೆಗ್ಡೆ ಟ್ಟೀಟ್ ಮಾಡಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯದವರಿಗೆ ನೋವುಂಟಾಗಿದೆ ಮತ್ತು ಸಮಾಜದ ಐಕ್ಯತೆಗೆ ಧಕ್ಕೆಯುಂಟಾಗಿದೆ’ ಎಂದು ದೂರು ನೀಡಿದ್ದರು. ಈ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 66, ಐಪಿಸಿ ಸೆಕ್ಷನ್ 153ಎ, 295ಎ, 120ಬಿ, 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೀಗಿದ್ದೂ ಈ ಜಾಲತಾಣದ ಫೇಸ್ಬುಕ್ ಪೇಜ್ ಮಾತ್ರ ರಾಷ್ಟ್ರೀಯತೆ, ದೇಶಪ್ರೇಮದ ಸೋಗಿನಲ್ಲಿ ನಿರಾತಂಕವಾಗಿ ಧ್ವೇಷ ಬಿತ್ತುವ, ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸದಲ್ಲಿ ನಿರತವಾಗಿದೆ ಎಂಬ ಆಪಾದನೆಗೆ ಈಡಾಗುತ್ತಲೇ ಇದೆ. ಇಂಗ್ಲೀಷ್ ಪೇಜ್ ಬಗ್ಗೆ ಬಲ್ಲವರು ಫೇಸ್ಬುಕ್‌ ಸಂಸ್ಥೆಗೆ ರಿಪೋರ್ಟ್‌ ಮಾಡಿ ಅದನ್ನು ಕಿತ್ತು ಹಾಕಿಸಿದ್ದಾರೆ. ಅಂಥಹ ಕೆಲಸ ಕನ್ನಡದಲ್ಲಿ ನಡೆಯುವುದು ಯಾವಾಗ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಕುರಿತು ರಿಪೋರ್ಟ್‌ ಮಾಡಿ ಎಂದು ಈಗಾಗಲೆ ಹಲವರು ಫೇಸ್ಬುಕ್‌ನಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ.

ಹಾಗೆ ನೋಡಿದರೆ, ಪೋಸ್ಟ್‌ ಕಾರ್ಡ್‌ ಕನ್ನಡದಲ್ಲಿ ತನ್ನ ಸುದ್ದಿಗಳನ್ನು ಹಂಚಲು ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಧಾನಿ ಮೋದಿ ಹೆಸರನ್ನು. ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಂ ಕರುನಾಡು’, ‘ನರೇಂದ್ರ ಮೋದಿ ಫ್ಯಾನ್ಸ್: ಕರ್ನಾಟಕ’ ಹೆಸರಿನಲ್ಲಿ ಆರಂಭಗೊಂಡ ಪೇಜುಗಳು ಇದೇ ಪೋಸ್ಟ್‌ಕಾರ್ಡ್‌ನ ಸರಕುಗಳನ್ನು ಫೇಸ್ಬುಕ್‌ನಲ್ಲಿ ನಿರಂತರವಾಗಿ ಹರಡುವ ಕೆಲಸದಲ್ಲಿ ನಿರತವಾಗಿವೆ. ಇದು ಪರೋಕ್ಷವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಬಗೆಗಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಕೆಲಸ ಅಷ್ಟೆ. ಈ ಬಗ್ಗೆ ಬಿಜೆಪಿ ಸ್ಥಳೀಯ ನಾಯಕರು ಗಮನ ಹರಿಸಬೇಕಿದೆ.

ಹೀಗಾಗಿ ಕೇವಲ ಪೋಸ್ಟ್‌ಕಾರ್ಡ್‌ನ ಪೇಜುಗಳನ್ನು ರಿಮೂವ್‌ ಮಾಡಿದರಷ್ಟೇ ಸಾಕಾಗುವುದಿಲ್ಲ ಎಂಬುದನ್ನು ಇವು ಸಾರಿ ಹೇಳುತ್ತಿದೆ. ಜತೆಗೆ ಒಂದು ಪೇಜ್ ಡಿಲೀಟ್ ಆದರೆ, ಮತ್ತೊಂದು ಪೇಜ್ ಆಗಲೇ ಸೃಷ್ಟಿಯಾಗಿದೆ. ಇದನ್ನು ಮತ್ತೆ ಫೇಸ್ಬುಕ್ ಡಿಲೀಟ್ ಮಾಡಲಿದೆಯಾ? ಇನ್ನೊಂದು ಕಡೆ ಟ್ಟಿಟ್ಟರ್ ಅಕೌಂಟ್ ಇನ್ನೂ ಜಾಗೃತವಾಗಿದೆ. ಫೇಸ್ಬುಕ್‌ನಂತೆ ಟ್ಟಿಟ್ಟರ್ ಕೂಡ ಅಕೌಂಟ್ ಡಿಲೀಟ್ ಮಾಡುವುದು ಯಾವಾಗ ಎಂಬುದೂ ಚರ್ಚೆಯಲ್ಲಿ ಸೇರಿಕೊಂಡಿದೆ.

ಪೋಸ್ಟ್‌ಕಾರ್ಡ್‌ ಇಂಗ್ಲೀಷ್ ಪೇಜ್‌ಗೆ ಗೇಟ್‌ ಪಾಸ್:  ಕನ್ನಡದಲ್ಲಿ ಮೋದಿಯೇ ಬ್ರಾಂಡ್ ಅಂಬಾಸಿಡರ್!

ಇವೆಲ್ಲದರ ನಡುವೆ, ಪೋಸ್ಟ್‌ಕಾರ್ಡ್ ಫೇಕ್‌ನ್ಯೂಸ್ ಫ್ಯಾಕ್ಟರಿಯಲ್ಲ ಎಂಬುದಕ್ಕೆ ಅದರದ್ದೇ ವೆಬ್‌ಸೈಟ್‌ನಲ್ಲಿ ವಿಚಿತ್ರ ವಾದವನ್ನು ಮಂಡಿಸಲಾಗಿದೆ. “ಪೋಸ್ಟ್ ಕಾರ್ಡ್ ಫೇಕ್ ನ್ಯೂಸ್ ಎಂದು ಸಾಬೀತು ಪಡಿಸಲು ವಿರೋಧಿಗಳು ಪೋಸ್ಟ್ ಕಾರ್ಡಿನ 10-12 ಲೇಖನಗಳನ್ನು ಫೇಕ್ ಎಂದು ವರ್ಗೀಕರಿಸಿದ್ದಾರೆ. ಇವುಗಳಲ್ಲಿ 7 ಲೇಖನಗಳಿಗೆ ಮೂಲವನ್ನು ನೀಡಲಾಗಿತ್ತು ಮತ್ತು ಅವುಗಳು ಫೇಕ್ ಆಗಿರಲಿಲ್ಲ. ಇನ್ನುಳಿದ 7 ಲೇಖನಗಳು ತಪ್ಪು ಗ್ರಹಿಕೆಯಿಂದಾಗಿ ಬರೆಯಲ್ಪಟ್ಟವು. ಇದುವರೆಗೂ ಪೋಸ್ಟ್ ಕಾರ್ಡ್ 12,000 ಲೇಖನಗಳನ್ನು ಬರೆದಿದೆ. ಅದರಲ್ಲಿ 10-12 ಲೇಖನಗಳು ತಪ್ಪು ಮಾಹಿತಿಯಿಂದಾಗಿ ಬರೆಯಲ್ಪಟ್ಟಿದೆ ಎಂದಿಟ್ಟುಕೊಳ್ಳೋಣ, ಹಾಗಿದ್ದರೆ ಈ ತಪ್ಪು ಮಾಹಿತಿ ಸರಾಸರಿ 0.087 % ಎಂದಾಗುತ್ತದೆ. ಹಾಗಿದ್ದರೆ 99.91 ರಷ್ಟು ಲೇಖನಗಳು ನೈಜವಾಗಿದೆ ಎಂದು ಇದರ ಅರ್ಥವಲ್ಲವೆ? ಇದನ್ನು ವಿರೋಧಿಗಳೆ ಒಪ್ಪಿಕೊಂಡಂತಲ್ಲವೆ?” ಎಂಬ ವಾದ ಮಂಡಿಸಲಾಗಿದೆ. ವರ್ಗೀಕರಣ ಮಾಡಿದವರು ಯಾರು? ಹೇಗೆ ಮಾಡಿದರು ಎಂಬುದಕ್ಕೆ ಇಲ್ಲಿ ಯಾವುದೇ ಮೂಲವಿಲ್ಲ.

ಇಷ್ಟೆಲ್ಲಾ ನಡೆಯುತ್ತಿರುವಾಗಲೇಪೋಸ್ಟ್‌ಕಾರ್ಡ್‌ ಟಿವಿ’ ಬರಲಿದೆ ಎಂಬ ಕಳಪೆ ಪ್ರೋಮೋವೊಂದು ಕಳೆದ ಮೂರು ತಿಂಗಳಿ ಹಿಂದೆ ಹರಿಯಬಿಡಲಾಗಿತ್ತು. ಆದರೆ ಇಲ್ಲಿಯವರೆಗೆ ಚಾನಲ್ ಬಂದಿಲ್ಲ, ಮತ್ತು ಈ ಬಗ್ಗೆ ಬೇರಾವ ಮಾಹಿತಿಗಳೂ ಇಲ್ಲ.

ಅಂದ ಹಾಗೆ 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಇದೇ ಹೊತ್ತಲ್ಲಿ ಪೋಸ್ಟ್‌ಕಾರ್ಡ್‌ನಂತ ದೇಶಪ್ರೇಮಿ ಸೋಗಿನ ಸುಳ್ಳು ಸುದ್ದಿ, ಆತ್ಮವಂಚಕ ಮಾಹಿತಿಯ ಫ್ಯಾಕ್ಟರಿಗಳು ಹಿಂದಿ, ಇಂಗ್ಲೀಷ್, ಕನ್ನಡ ಭಾಷೆಗಳಲ್ಲಿ ಕ್ರೀಯಾಶೀಲವಾಗುತ್ತಿವೆ. ಗಮನಾರ್ಹ ಸಂಗತಿ ಏನೆಂದರೆ, ಈ ಹಿಂದೆ ಇವುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಇದ್ದ ಪ್ರತಿಕ್ರಿಯೆ ಮಟ್ಟ ಕುಸಿದಿದೆ. ಎಂತಹ ಬಲಪಂಥೀಯರೇ ಆದರೂ, ಸುಳ್ಳು ಸರಕುಗಳನ್ನು ಹೆಚ್ಚು ದಿನ ಕೊಳ್ಳಲು ಸಾಧ್ಯವಿಲ್ಲ ಎಂಬುದು ಇದಕ್ಕೆ ಕಾರಣವಿರಬಹುದು.

ಸದ್ಯ ಫೇಸ್‌ಬುಕ್ ತೆಗೆದುಕೊಂಡ ನಿರ್ಧಾರ ಹಾಗೂ ತಪ್ಪು ಮಾಹಿತಿಯ ಸುದ್ದಿಗಳ ಪ್ರಕಟಣೆ ಕುರಿತು ಪ್ರತಿಕ್ರಿಯೆಗಾಗಿ ಪೋಸ್ಟ್‌ ಕಾರ್ಡ್‌ ಕನ್ನಡ ಪೇಜ್‌ನಲ್ಲಿ ನೀಡಿರುವ ದೂರವಾಣಿಯನ್ನು ಸಂಪರ್ಕಿಸಲಾಯಿತಾದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.