‘RiP ಇಂಡಿಯಾ’: ಇದನ್ನು ಓದಿ ಮತ್ತು ನಮ್ಮ ನ್ಯಾಯ ವ್ಯವಸ್ಥೆಗಾಗಿ ಒಂದು ನಿಮಿಷ ಮೌನ  ಆಚರಿಸಿ...
COVER STORY

‘RiP ಇಂಡಿಯಾ’: ಇದನ್ನು ಓದಿ ಮತ್ತು ನಮ್ಮ ನ್ಯಾಯ ವ್ಯವಸ್ಥೆಗಾಗಿ ಒಂದು ನಿಮಿಷ ಮೌನ ಆಚರಿಸಿ...

2016ರ ಆಗಸ್ಟ್‌ 11ರ ಮುಂಜಾನೆ ದಾಸ್ ಮನೆ ಬಾಗಿಲಿನಲ್ಲಿ ಪೇಪರ್‌ಗಳ ಕಟ್ಟೊಂದು ಬಂದು ಬಿತ್ತು. ಅದರಲ್ಲಿತ್ತು ಸಿಬಿಐ ವರದಿ ಮತ್ತು ಅದರ 30ನೇ ಪುಟದಲ್ಲಿ ‘ದೀಪಕ್ ಮಿಶ್ರಾ’ ಹೆಸರು. 

ಒಡಿಶಾದ ಪುರಿಯಲ್ಲಿ ವಾಸವಾಗಿರುವ ಜಯಂತ ಕುಮಾರ್ ದಾಸ್ ಅವರಿಗೆ ಇದೆಲ್ಲಾ ಹೊಸದೇನೂ ಅಲ್ಲ. ಅವರ ಮನೆ ಬಾಗಿಲಿನಲ್ಲಿ ದಿನ ಬೆಳಗಾಗುತ್ತಿದ್ದರೆ ಒಂದಲ್ಲ ಒಂದು ದಾಖಲೆಗಳ ಬಂಡಲ್ ಬಿದ್ದಿರುತ್ತಿತ್ತು. ಸುಮಾರು ಎರಡು ದಶಕಗಳ ಕಾಲ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ 2001ರಲ್ಲಿ ಸಾರ್ಜೆಂಟ್ ಹುದ್ದೆಯಲ್ಲಿರುವಾಗ ನಿವೃತ್ತರಾದವರು ದಾಸ್. ಆಗ ಅವರಿಗೆ 39 ವರ್ಷ ವಯಸ್ಸು.

ಇನ್ನೂ ವಯಸ್ಸಿತ್ತು, ಹೀಗಾಗಿ ಬ್ರೋಕರ್‌ ಕೆಲಸಕ್ಕೆ ಇಳಿದರು. ಜಮೀನಿಗೆ ಸಂಬಂಧಿಸಿದ ಬ್ರೋಕರ್ ಕೆಲಸ ಅವರದ್ದು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ಹೇಗೆಲ್ಲಾ ನಡೆಯುತ್ತದೆ ಎಂಬುದನ್ನು ಖುದ್ದು ತಿಳಿದುಕೊಂಡರು ದಾಸ್. ಹೀಗಿರುವಾಗಲೇ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂತು. ಕಾಯ್ದೆ ನೆರವಿನಿಂದ ಪ್ರಖ್ಯಾತ ‘ಒಡಿಶಾ ಚಿಟ್‌ ಫಂಡ್‌ ಹಗರಣ’ವನ್ನು ಬಯಲಿಗೆಳದರು ದಾಸ್. ಸಹಜವಾಗಿಯೇ ಮಾಧ್ಯಮಗಳಲ್ಲಿ ಅವರ ಹೆಸರು ಕಾಣಿಸಿಕೊಳ್ಳಲು ಆರಂಭಿಸಿತು. “ಜನರಿಗೆ ನನ್ನ ಪರಿಚಯವಿದೆ. ನಾನು ನಿಯತ್ತಿನಿಂದ ಕೆಲಸ ಮಾಡುತ್ತೇನೆ ಎಂಬ ನಂಬಿಕೆ ಮೇಲೆ ಜನರು ನನಗೆ ಮಾಹಿತಿಗಳನ್ನು ಕಳುಹಿಸುತ್ತಾರೆ,” ಎನ್ನುತ್ತಾರೆ ದಾಸ್.

ಹೀಗಿರುವಾಗಲೇ 2016ರ ಆಗಸ್ಟ್‌ 11ರ ಮುಂಜಾನೆ ಅವರ ಮನೆ ಬಾಗಿಲಿನಲ್ಲಿ ಪೇಪರ್‌ಗಳ ಕಟ್ಟೊಂದು ಬಂದು ಬಿತ್ತು. ಅದು ಕಟಕ್‌ನಿಂದ ಬಂದಿದ್ದಾಗಿ ಅದರಲ್ಲಿದ್ದ ವಿಳಾಸ ಹೇಳುತ್ತಿತ್ತು. ಒರಿಸ್ಸಾ ಹೈಕೋರ್ಟ್‌ ಆದೇಶದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಯ ಮಧ್ಯಂತರ ವರದಿಯದು. ಸರಕಾರಿ ಭೂಮಿಯನ್ನು ಕಳ್ಳ ಮಾರ್ಗದಲ್ಲಿ ಪಡೆದುಕೊಂಡ ಜನಪ್ರತಿನಿಧಿಗಳ, ಸಾರ್ವಜನಿಕ ಸೇವೆಯಲ್ಲಿರುವವರ ಹೆಸರು ಅದರಲ್ಲಿತ್ತು.

ವರದಿಯ 30ನೇ ಪುಟದಲ್ಲಿ ಪ್ರಕರಣ ಸಂಖ್ಯೆ 588/79ರ ಅಡಿಯಲ್ಲಿ ದೀಪಕ್ ಮಿಶ್ರಾ (Deepak Mishra) ಎಂಬ ಹೆಸರು ದಾಸ್ ಕಣ್ಣಿಗೆ ಬಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂರು ದಶಕದ ಹಿಂದೆ ‘ಸ್ಟೇಟ್ ವರ್ಸಸ್ ಶ್ರೀ ದೀಪಕ್‌ ಮಿಶ್ರಾ’ ಪ್ರಕರಣದಲ್ಲಿ ಕಟಕ್‌ ವಿಶೇಷ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶದ ಪ್ರತಿಯೂ ದಾಸ್ ಅವರಿಗೆ ಸಿಕ್ಕಿತ್ತು.

ಮೇವು ಕೃಷಿ ಮಾಡಲು ಕಟಕ್‌ನಲ್ಲಿ ಮೂರು ಎಕರೆ ಸರಕಾರಿ ಭೂಮಿ ಮಂಜೂರು ಮಾಡುವಂತೆ ದೀಪಕ್ ಮಿಶ್ರಾ ಮನವಿ ಸಲ್ಲಿಸಿದ್ದರು. ಆರ್ಥಿಕವಾಗಿ ದುರ್ಬಲವಾದವರನ್ನು ಮೇಲೆತ್ತಲು ಮಾಡಿದ ಯೋಜನೆಯದು. ತಮಗೆ ಜಾಗ ಮಂಜೂರಾಗಬೇಕು ಎಂಬ ಕಾರಣಕ್ಕೆ ದೀಪಕ್ ಮಿಶ್ರಾ ತಾನು ಜಮೀನಿಲ್ಲದ ಬ್ರಾಹ್ಮಣ ಕುಟುಂಬದಿಂದ ಬಂದವ ಎಂದು ಅಫಿಡವಿಟ್‌ ಸಲ್ಲಿಸಿದ್ದರು. “ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೆಟ್‌ ಇದನ್ನು ಒಪ್ಪಿಕೊಳ್ಳುವುದರೊಂದಿಗೆ ಅರ್ಜಿದಾರರಿಗೆ ತಪ್ಪು ಮಾಹಿತಿ ಮತ್ತು ವಂಚನೆಯ ಮೂಲಕ ಜಮೀನು ದಕ್ಕಿತು,” ಎನ್ನುತ್ತಾರೆ ದಾಸ್.

ಈ ಪ್ರಕರಣದ ಸಂಬಂಧ ಸಿಬಿಐ ತನಿಖೆ ನಡೆದಾಗ 2012ರ ಜನವರಿಯಲ್ಲಿ ಕಟಕ್ ತಹಶೀಲ್ದಾರ್‌ ಜಮೀನಿಗಾಗಿ ದಾಖಲೆಗಳನ್ನು ಸರಿ ಮಾಡಿರುವುದು ತಿಳಿದು ಬಂದಿತ್ತು. ಇದರರ್ಥ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಆದೇಶವಾಗಿ 26 ವರ್ಷ ನಂತರವೂ ಅರ್ಜಿದಾರರು ಪ್ರಶ್ನಾರ್ಹವಾದ ಜಮೀನಿನ ಒಡೆತನವನ್ನು ಅನುಭವಿಸಿಕೊಂಡು ಬಂದಿದ್ದರು. ಮಾತ್ರವಲ್ಲ ಈ 26 ವರ್ಷಗಳಲ್ಲಿ ಅರ್ಜಿದಾರರ ಪರಿಸ್ಥಿತಿಯಲ್ಲಿ ತುಂಬಾ ಬದಲಾವಣೆಯಾಗಿತ್ತು.

1984ರಲ್ಲಿ ಒರಿಸ್ಸಾ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದ ದೀಪಕ್ ಮಿಶ್ರಾ 2012ರ ಹೊತ್ತಿಗೆ ಅಲ್ಲೇ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದರು. ಮುಂದೆ ಪದೋನ್ನತಿ ಹೊಂದಿ ಪಾಟ್ನಾ ಮತ್ತು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಹೊಣೆಗಾರಿಕೆ ನಿಭಾಯಿಸಿದರು. ಇದೇ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ಗೆ ತೆರಳುವ ದಾರಿಯಲ್ಲಿ ದೀಪಕ್‌ ಮಿಶ್ರಾ (Dipak Misra) ತಮ್ಮ ಹೆಸರಿನ ಸ್ಪೆಲ್ಲಿಂಗ್‌ನ್ನು ಬದಲಾವಣೆಯೂ ಮಾಡಿಕೊಂಡರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೀಪಕ್‌ ಮಿಶ್ರಾ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೀಪಕ್‌ ಮಿಶ್ರಾ
ಚಿತ್ರ ಕೃಪೆ: ಕ್ಯಾರವಾನ್

ದೀಪಕ್‌ ಮಿಶ್ರಾ ಹೀಗೆ ಒಡಿಶಾದಿಂದ ಬಂದು ದೆಹಲಿಯಲ್ಲಿ ನೆಲೆನಿಂತ ಹೊತ್ತಲ್ಲಿಯೇ ಇತ್ತ ದಾಸ್ ಭಾರತೀಯ ನಾಗರೀಕರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಲು ನಿಂತಿದ್ದರು. ‘ಉನ್ನತ ನ್ಯಾಯಾಮೂರ್ತಿಗಳು ಕಳಂಕ ರಹಿತ ಹಿನ್ನೆಲೆಗಳನ್ನು ಹೊಂದಿದ್ದಾರೆ ಎಂದು ನಿರೀಕ್ಷಿಸಲಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನೇಮಕಾತಿ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಆದರೆ ಮಿಶ್ರಾ ಪ್ರಕರಣದಲ್ಲಿ ನಿರಂತರವಾಗಿ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ಹಿನ್ನೆಲೆಯನ್ನು ಪರಿಶೀಲನೆಗೆ ಒಳಪಡಿಸಬೇಕಿದ್ದ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ತೋರಿವೆ. ಜತೆಗೆ 1993 ರಿಂದ ಉನ್ನತ ನ್ಯಾಯಾಂಗದ ಎಲ್ಲಾ ನೇಮಕಾತಿಗಳನ್ನು ನೋಡಿಕೊಳ್ಳುವ ಕೊಲಿಜಿಯಂನಲ್ಲೂ ತಪ್ಪುಗಳಾಗಿವೆ,’ ಎನ್ನುತ್ತಾರೆ ದಾಸ್.

ವಂಚನೆಯಲ್ಲಿ ಭಾಗಿಯಾದವರೊಬ್ಬರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಬಹುದೇ? ಅದರಲ್ಲೂ ಮಿಶ್ರಾ ಸಾಮಾನ್ಯ ನಾಯಮೂರ್ತಿಗಳಲ್ಲ, ಹಿರಿತನದ ಆಧಾರದ ಮೇಲೆ ಭಾರತದ ಪ್ರಜಾಪ್ರಭುತ್ವ ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಹೀಗಿರುವವರು ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಬಹುದೇ? ಎನ್ನುವುದು ದಾಸ್ ಅವರ ಪ್ರಶ್ನೆ.

ತಮ್ಮೊಳಗಿನ ಪ್ರಶ್ನೆಗಳನ್ನು ಒಳಗೆ ಅದುಮಿಟ್ಟುಕೊಳ್ಳದೆ ಹೊರಹಾಕಿದರು ದಾಸ್. ಮಿಶ್ರಾರ ತಪ್ಪುಗಳು ಸುಲಭದಲ್ಲಿ ಮರೆತು ಹೋಗಿರಬೇಕು ಎಂದುಕೊಂಡು 2016 ಸೆಪ್ಟೆಂಬರ್‌ನಲ್ಲಿ ಆಗಿನ ಮುಖ್ಯನ್ಯಾಯಮೂರ್ತಿಯಾಗಿದ್ದ ಟಿ. ಎಸ್. ಠಾಕೂರ್ ಅವರಿಗೆ ಪತ್ರವೊಂದನ್ನು ಬರೆದರು. "ಭಾರತದ ಪ್ರಜೆಯಾಗಿ ಸಂವಿಧಾನದ ಕಲಂ 51ಎ ಅಡಿಯಲ್ಲಿ ನನಗೆ ಕೆಲವು ಜವಾಬ್ದಾರಿಗಳನ್ನು ನೀಡಲಾಗಿದೆ. ಹೀಗಾಗಿ ಇದನ್ನು ಬಹಿರಂಗಪಡಿಸುವುದು ನನ್ನ ಕರ್ತವ್ಯ,” ಎಂದು ಬರೆದಿದ್ದ ದಾಸ್, ನ್ಯಾ. ಮಿಶ್ರಾ ಅವರ ಜಮೀನಿನ ವಿಷಯಗಳನ್ನು ಪ್ರಸ್ತಾಪಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಇದೇ ಮನವಿಯ ಪ್ರತಿಯನ್ನು ಅವರು ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಸುಪ್ರೀಂ ಕೋರ್ಟ್‌ನ ಕೊಲಿಜಿಯಂನಲ್ಲಿದ್ದ ಹಿರಿಯ ನ್ಯಾಯಮೂರ್ತಿಗಳಿಗೂ ಕಳುಹಿಸಿದ್ದರು. ಅಲ್ಲದೆ ದಾಸ್ ತಮಗೆ ಇ-ಮೇಲ್ ಐಡಿ ಸಿಕ್ಕಿದ ಸುಮಾರು 700 ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರಿಗೂ ಇದೆ ಪತ್ರದ ಪ್ರತಿಯನ್ನು ಮೇಲ್ ಮಾಡಿದ್ದರು.

ಅದಾಗಿ ಎರಡು ತಿಂಗಳು ಕಳೆಯಿತು. ಆದರೆ ಏನೂ ಆಗಲೇ ಇಲ್ಲ. ಮತ್ತೆ 2016ರ ನವೆಂಬರ್‌ನಲ್ಲಿ ಅಂದಿನ ಸಿಜೆಐ ಟಿ. ಎಸ್. ಠಾಕೂರ್ ಅವರಿಗೆ ನೆನಪಿನ ಓಲೆಯನ್ನು ಬರೆದರು. ಅದರಲ್ಲಿ ಅವರು ತಮ್ಮ ದೂರಿನ ಬಗ್ಗೆ ನೆನಪಿಸಿದ್ದರು. ಈ ಬಾರಿಯೂ ತಮ್ಮ ಪತ್ರದ ಪ್ರತಿಯನ್ನು ಕೊಲಿಜಿಯಂನಲ್ಲಿದ್ದ ಎಲ್ಲರಿಗೂ ಕಳುಹಿಸಿದರು. ಈ ಬಾರಿಯೂ ಉತ್ತರ ಬರಲಿಲ್ಲ.

ಇದಾಗಿ 2017ರ ಜನವರಿಯಲ್ಲಿ ಠಾಕೂರ್ ಅವರ ಜಾಗಕ್ಕೆ ಜೆ. ಎಸ್. ಖೇಹರ್ ಬಂದು ಕುಳಿತರು. ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ತಾವು ಈ ಹಿಂದೆ ಬರೆದಿದ್ದ ಪತ್ರವನ್ನು ಮತ್ತೊಮ್ಮೆ ನೆನಪಿಸಿದರು ದಾಸ್. ಇದಾಗಿ ಒಂದು ವಾರ ಕಳೆಯಿತು. ಮತ್ತೆ ಮೌನ. ಕೊನೆಗೆ ಸ್ಥಳೀಯ ಪೋಸ್ಟ್‌ ಮಾಸ್ಟರ್‌ಗೆ ‘ತಮ್ಮ ಪತ್ರಗಳು ತಲುಪಿವೆಯೇ’ ಎಂಬುದನ್ನು ಪತ್ರ ಬರೆದು ವಿಚಾರಿಸಿಕೊಂಡರು. ಈ ಬಾರಿ ಅವರು ಕೊಲಿಜಿಯಂನಲ್ಲಿದ್ದ ನ್ಯಾಯಮೂರ್ತಿಗಳಾದ ಖೇಹರ್, ಚೆಲಮೇಶ್ವರ್‌, ರಂಜನ್‌ ಗೊಗೋಯಿ, ಮದನ್‌ ಲೋಕುರ್‌ ಅವರಿಗೆ ತಮ್ಮ ಪತ್ರದ ಬಗ್ಗೆ ನೆನಪಿಸಿದ್ದರು. ಅಷ್ಟೊತ್ತಿಗೆ ಅವರು ಮೊದಲ ಪತ್ರ ಬರೆದು 146 ದಿನಗಳು ಕಳೆದಿತ್ತು.

ಇದೇ ಹೊತ್ತಲ್ಲಿ ಹೊಸ ವಿಚಾರವೊಂದು ಹೊರಬಂತು. ಒರಿಸ್ಸಾ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ಪಿ. ದಾಸ್ ಅವರ ಪೀಠದಿಂದ ಈ ಹಿಂದೆ ಸಿಬಿಐ ತನಿಖೆಗೆ ಆದೇಶ ನೀಡಲಾಗಿತ್ತು. ಸದ್ಯ ನಿವೃತ್ತರಾಗಿರುವ ಬಿ.ಪಿ. ದಾಸ್ ಡಿಸೆಂಬರ್‌ 2016ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ 2012ರಲ್ಲಿ ತಾವು ಆದೇಶ ನೀಡಿದ ಮೂರು ತಿಂಗಳ ನಂತರ ತನ್ನನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಪದನ್ನೋತಿ ನೀಡುವುದಕ್ಕೆ ಮಿಶ್ರಾ ವಿರೋಧ ವ್ಯಕ್ತಪಡಿಸಿದ್ದರು ಎಂದು ಆರೋಪಿಸಿದ್ದರು.

“ಈ ವಿರೋಧ ಆಧಾರ ರಹಿತವಾಗಿತ್ತು,” ಎಂದು ಅವರು ವಾದಿಸಿದ್ದರು. ಕಾರಣ, “ಇಬ್ಬರೂ ನ್ಯಾಯಮೂರ್ತಿಗಳು ಒಟ್ಟಿಗೆ ಕೆಲಸ ಮಾಡದ ಕಾರಣ ಮಿಶ್ರಾಗೆ ನ್ಯಾಯಮೂರ್ತಿಯಾಗಿ ನನ್ನ ಕೆಲಸದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಿದ್ದೂ ಕೊಲಿಜಿಯಂಗೆ ತಾವು ಬರೆದ ಪತ್ರದಲ್ಲಿ ಅವರು ನನ್ನ ನೇಮಕಾತಿಯನ್ನು ವಿರೋಧಿಸಿದ್ದರು,” ಎಂದು ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರ ಜಯಂತ ದಾಸ್ ಪ್ರಯತ್ನಕ್ಕೆ ಸ್ವಲ್ಪ ಮಟ್ಟಿಗೆ ಜನರಿಂದ ಬೆಂಬಲ ವ್ಯಕ್ತವಾಯಿತು. ಅಂತಾರಾಷ್ಟ್ರೀಯ ನ್ಯಾಯಧೀಶರ ಸಂಘದ ಅಧ್ಯಕ್ಷ ಆದೀಶ್ ಅಗರ್ವಾಲ್ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರಿಗೆ ಪತ್ರ ಬರೆದರು. ಮಾಜಿ ಕೇಂದ್ರ ಕಾನೂನು ಸಚಿವರು ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೂ ಆದ ಶಾಂತಿ ಭೂಷಣ್, “ಗಂಭೀರ ನೈತಿಕ ನ್ಯೂನತೆಯುಳ್ಳ ನ್ಯಾಯಾಧೀಶರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಬೇಕೆ?” ಎಂಬ ಲೇಖನವೊಂದನ್ನು ಬರೆದರು. ಆದರೆ ನ್ಯಾಯಾಂಗದ ಭ್ರಷ್ಟಾಚಾರದ ಸಂದರ್ಭದಲ್ಲಿ ಸಾಮಾನ್ಯವಾಗಿ ಮೌನಕ್ಕೆ ಜಾರುವ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಈ ಬಾರಿಯೂ ಅದೇ ಮೌನವ್ರತ ಮುಂದುವರಿಸಿದವು.

ಇಷೆಲ್ಲಾ ಬೆಳವಣಿಗೆಗಳ ಮಧ್ಯೆ ಅದೊಂದು ದಿನ ಬಂದೇ ಬಿಟ್ಟಿತು. ಅದು 27 ಆಗಸ್ಟ್‌ 2017. ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ದೀಪಕ್‌ ಮಿಶ್ರಾ ಕುಳಿತಿದ್ದರು. ಸಣ್ಣ ಔಪಚಾರಿಕ ಸಮಾರಂಭವದು. ಅದರಲ್ಲಿ ತಮ್ಮ ಹೊಸ  ಜವಾಬ್ದಾರಿಯನ್ನು ‘ಭಯ ಮುಕ್ತ ಅಥವಾ ನೇರ ಮಾರ್ಗದಲ್ಲಿ’ ನಿರ್ವಹಿಸುವುದಾಗಿ ದೀಪಕ್‌ ಮಿಶ್ರಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಲ್ಲಿ ಮೋದಿ, ಖೇಹರ್, ರವಿಶಂಕರ್ ಪ್ರಸಾದ್ ಎಲ್ಲರೂ ಇದ್ದರು. ಸರಕಾರ ಮತ್ತು ವಿರೋಧ ಪಕ್ಷದ ಹಿರಿಯ ನಾಯಕರು ಅದನ್ನೆಲ್ಲಾ ಸುಖಾಸೀನರಾಗಿ ನೋಡುತ್ತಿದ್ದರು. ಹಲವು ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳೂ ಅಲ್ಲಿದ್ದರು. ಅವರೆಲ್ಲರೂ ದಾಸ್ ಅವರು ಬರೆದ ಪತ್ರ ತಲುಪಿತ್ತು. ಮತ್ತು ಅದನ್ನು ಅವರೆಲ್ಲಾ ನಿರ್ಲಕ್ಷ್ಯ ಮಾಡಿದ್ದರು. ಮಿಶ್ರಾ ಎಲ್ಲರ ಸಮ್ಮುಖದಲ್ಲಿ ಪ್ರಮಾಣ ಪತ್ರಕ್ಕೆ ಸಹಿ ಹಾಕಿದರು; ರಾಷ್ಟ್ರಪತಿಗಳ ಕೈಕುಲುಕಿದರು. ಹಿನ್ನೆಲಯಲ್ಲಿ ಚಪ್ಪಾಳೆಯ ಸುರಿಮಳೆಯ ಶಬ್ದ ಕೇಳಿ ಬಂತು.

ಮೂಲ: ಕ್ಯಾರವಾನ್.