samachara
www.samachara.com
‘ಮೇಕಿಂಗ್ ಆಫ್ ಕಿಲಿಯನ್ ಬಾಪೆ’: ಸದ್ಯ ಫೂಟ್ಬಾಲ್‌ನ ಸ್ಟಾರ್, ಭವಿಷ್ಯದ ಸೂಪರ್ ಸ್ಟಾರ್!
COVER STORY

‘ಮೇಕಿಂಗ್ ಆಫ್ ಕಿಲಿಯನ್ ಬಾಪೆ’: ಸದ್ಯ ಫೂಟ್ಬಾಲ್‌ನ ಸ್ಟಾರ್, ಭವಿಷ್ಯದ ಸೂಪರ್ ಸ್ಟಾರ್!

“ಆತ ಒಬ್ಬ ಆಟಗಾರ ಆಗುತ್ತಾನೆ ಎಂದು ನಾವಂದುಕೊಂಡಿದ್ದೆವು. ಅದರೆ ಇಷ್ಟು ಬೇಗ ಇಷ್ಟೆಲ್ಲಾ ನಡೆಯುತ್ತದೆ ಎಂದು ನಾವೆಲ್ಲಾ ಅಂದುಕೊಂಡಿರಲೇ ಇಲ್ಲ”: ಬಾಪೆ ಗೆಳೆಯ ಮೊಮೇಜ್.

ಇವೆಲ್ಲಾ ಕೆಲವು ವರ್ಷಗಳ ಹಿಂದಿನ ಕಥೆ. ಆತ ಪ್ಯಾರಿಸ್‌ಗೆ ಸಮೀಪದ ಉಪನಗರದ ಬೀದಿಯಲ್ಲಿ ಓಡುತ್ತಿದ್ದರೆ ಓರಗೆಯವರೆಲ್ಲಾ ನಿಂತು ನಗುತ್ತಿದ್ದರು. ಸಣಕಲು ದೇಹ, ದೇಹದ ಗಾತ್ರಕ್ಕಿಂತ ದೊಡ್ಡದಾಗಿ ಬೆಳೆದಿದ್ದ ತಲೆ, ಆತನ ತುಟಿಗಳು, ಮುಖ ಚಹರೆ ನೋಡುಗರಿಗೆ ನಗೆ ಉಕ್ಕಿಸುತ್ತಿದ್ದವು. ಹೀಗೆ ಕೆಲವೇ ವರ್ಷಗಳ ಹಿಂದೆ ಜೋಕರ್ ಆಗಿದ್ದ ಅದೇ ಹುಡುಗನ ಇವತ್ತಿನ ಸಾಧನೆಗೆ ಅವರೇಕೆ ಇಡೀ ಜಗತ್ತಿನ ಜನರೇ ಚಪ್ಪಾಳೆ ತಟ್ಟುತ್ತಿದ್ದಾರೆ. ಇದು 2018ರ ವಿಶ್ವಕಪ್‌ನಲ್ಲಿ ‘ಫೀಫಾ ಯುವ ಆಟಗಾರ’ ಪ್ರಶಸ್ತಿ ಬಾಚಿಕೊಂಡ ಫ್ರಾನ್ಸ್‌ ತಂಡದ ಯುವ ಆಟಗಾರ ಕಿಲಿಯನ್ ಬಾಪೆಯ ವಿಸ್ಮಯಕಾರಿ ಕಥೆ.

ಅದು ಬಾಂಡಿ ಎಂಬ ಪ್ಯಾರಿಸ್‌ನಿಂದ ಸುಮಾರು 48 ಕಿಲೋಮೀಟರ್ ದೂರದಲ್ಲಿರುವ ಉಪನಗರ. 2005ರ ಫ್ರೆಂಜ್ ಗಲಭೆಯಲ್ಲಿ ಗುರುತಿಸಿಕೊಂಡು ಕುಖ್ಯಾತಿ ಪಡೆದುಕೊಂಡ ನಗರವದು. ನಿರುದ್ಯೋಗಕ್ಕೆ ಅನ್ವರ್ಥನಾಮದಂತಿತ್ತು. ಅಲ್ಲಿ ಬಾಪೆಯ ತಾಯಿ ಮಾಜಿ ಹ್ಯಾಂಡ್‌ಬಾಲ್ ಆಟಗಾರ್ತಿ ಫೈಝ, ಸ್ಥಳೀಯ ಫೂಟ್ಬಾಲ್ ಕ್ಲಬ್‌ ಒಂದರಲ್ಲಿ ಕೋಚ್ ಆಗಿದ್ದ ತಂದೆ ವಿಲ್‌ಫ್ರೆಡ್ ವಾಸವಾಗಿದ್ದರು. ತನಗೆ ಎರಡು ವರ್ಷ ತುಂಬುತ್ತಲೇ ತನ್ನ ಉದ್ದನೆ ಕೈಯಡಿಯಲ್ಲಿ ಫುಟ್‌ಬಾಲ್ ಹಿಡಿದುಕೊಂಡು ಪುಟ್ಟ ಬಾಲಕ ಕಿಲಿಯನ್ ಬಾಪೆ ತಂದೆ ಹಿಂದೆ ಓಡಿ ಬಿಡುತ್ತಿದ್ದ. ಕ್ಲಬ್ ಆಟಗಾರರಿಗೆ ತಂದೆ ಮಾಡುತ್ತಿದ್ದ ಪಾಠ, ತರಬೇತಿಗಳನ್ನು ಕಿವಿ ನಿಮಿರಿಸಿಕೊಂಡು ಕೇಳುತ್ತಿದ್ದ.

ಹೀಗೊಂದು ಫೂಟ್ಬಾಲ್ ಹಿನ್ನೆಲೆ ಇದ್ದ ಬಾಪೆ ಬಾಂಡಿಯ ಬೀದಿಗಳಿಗೆ ನಿಧಾನಕ್ಕೆ ಕಾಲಿಟ್ಟ. ಒಂದಷ್ಟು ಹುಡುಗರನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಫುಟ್‌ಬಾಲ್ ಒದೆಯಲು ಆರಂಭಿಸಿದ. ಆಗ ಆತನಿಗೆ ಅವರೆಲ್ಲಾ ‘ಪೀನಟ್’ (ಶೇಂಗ) ಎಂಬ ಅಡ್ಡ ಹೆಸರು ಇಟ್ಟಿದ್ದರು. ಅವತ್ತಿಗೆ ಬಾಪೆ ಆಟಕ್ಕಿಂತ ಹೆಚ್ಚಾಗಿ ಜನರು ಆತನನ್ನೇ ನೋಡುತ್ತಿದ್ದರು; ಬಾಪೆಯ ದೈಹಿಕ ಆಕಾರ ಅವರೆಲ್ಲರ ಪಾಲಿಗೆ ಹಾಸ್ಯದ ವಸ್ತುವಾಗಿತ್ತು.

ಮುಂದೆ ಬಾಪೆ ಕ್ಲೇರ್‌ಫೊಂಟೈನ್‌ ಅಕಾಡೆಮಿಯಲ್ಲಿ ಫೂಟ್ಬಾಲ್ ಅಭ್ಯಾಸಕ್ಕೆ ಸೇರಿಕೊಂಡ. ಅದು 13 -15 ವರ್ಷ ವಯಸ್ಸಿನ ಮಕ್ಕಳಿಗೆ ಫೂಟ್ಬಾಲ್ ತರಬೇತಿ ನೀಡುವ ಒಂದು ಸಣ್ಣ ಸಂಸ್ಥೆ. ಅಲ್ಲೂ ಮತ್ತದೇ ತಮಾಷೆ ಮುಂದುವರಿಯಿತು. ಇಲ್ಲಿ ಫುಟ್‌ಬಾಲ್ ಆತನಿಗೆ ಆರಂಭದಲ್ಲಿ ಪ್ರಯಾಸದಾಯವಾಗಿತ್ತು ಎನ್ನುತ್ತಾರೆ ಆತನ ಸಹಪಾಠಿ ಸ್ಯಾಮಿ ಹ್ಯಾಮರ್. “ಆತನಲ್ಲಿ ಫುಟ್‌ಬಾಲ್‌ನ ಎಲ್ಲಾ ತಂತ್ರಗಳೂ ಇದ್ದವು. ಆದರೆ ತುಂಬಾ ಸಣಕಲು ದೇಹ ಹೊಂದಿದ್ದ. ಶಕ್ತಿವಂತನಾಗಿರಲಿಲ್ಲ,” ಎನ್ನುತ್ತಾನೆ ಹ್ಯಾಮರ್. ಅಲ್ಲಿ ಬಾಪೆಗಿಂತಲೂ ಉತ್ತಮವಾಗಿ ಆಡುವವರಿದ್ದರು. ಅವರೆಲ್ಲಾ ಬಾಪೆಗೆ ತಮಾಷೆ ಮಾಡುತ್ತಾ ಕ್ಲಬ್‌ನಲ್ಲಿ ಕಾಲ ಕಳೆಯುತ್ತಿದ್ದರು. ಹಾಗೆ ಮಾಡಿದಾಗೆಲ್ಲಾ ಯಾವತ್ತೋ ಒಮ್ಮೆ ಬಾಪೆ ಕೆಲವು ಮಾತುಗಳನ್ನು ಹೇಳುತ್ತಿದ್ದನೇ ಹೊರತು ಹೆಚ್ಚಿನ ಸಂದರ್ಭ ಮೌನವಾಗಿರುತ್ತಿದ್ದ.

ಅಕಾಡೆಮಿಯಲ್ಲಿದ್ದಾಗೆಲ್ಲಾ ಬಾಪೆ ನೇರವಾಗಿ ಗೋಲ್ ಪೆಟ್ಟಿಗೆಗೆ ಬಾಲ್‌ ನುಗ್ಗಿಸುತ್ತಿದ್ದ. ಇನ್ನೊಬ್ಬರಿಗೆ ಪಾಸ್ ನೀಡುವ ಗುಣಗಳು ಆತನಿಗೆ ಇರಲಿಲ್ಲ. ಇದು ಕೋಚ್‌ಗಳಿಗೆ ಸಿಟ್ಟು ಹತ್ತಿಸುತ್ತಿದ್ದವು. ಜತೆಗೆ ಅಭ್ಯಾಸದ ವೇಳೆ ಸಮಯ ವ್ಯರ್ಥ ಮಾಡುತ್ತಿದ್ದ. ಇದಕ್ಕಾಗಿ ಆತನಿಗೆ ಸಂಜೆ ಸ್ಪೆಷಲ್ ಕ್ಲಾಸ್ ಸಿದ್ಧವಾಗಿರುತ್ತಿತ್ತು ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಮೊಮೇಜ್.

ಇವೆಲ್ಲದರ ನಡುವೆ ಈ ಫೂಟ್ಬಾಲ್ ಅಕಾಡೆಮಿಯಿಂದ ತನ್ನ 15ನೇ ವರ್ಷದಲ್ಲಿ ಬಾಪೆ ಹೊರಬಿದ್ದಾಗ 2014ರ ವಿಶ್ವಕಪ್ ಮುಗಿದಿತ್ತಷ್ಟೇ. ಅವತ್ತಿಗೆ ಆತ ಅಲ್ಲಿ ಅತ್ಯುತ್ತಮ ಫೂಟ್ಬಾಲ್ ಆಟಗಾರನೇನೂ ಆಗಿರಲಿಲ್ಲ.

ಸಣಕಲನಾಗಿದ್ದ ಬಾಪೆ ನೋಡು ನೋಡುತ್ತಲೇ ದಪ್ಪಗಾದ. ದೇಹ ದಂಡಿಸಿ ಹುರಿಗಟ್ಟಿಸಿಕೊಂಡ. ಅವತ್ತಿಗೆ ರಿಯಲ್‌ ಮ್ಯಾಡ್ರಿಡ್‌ ಆತನ ಮೆಚ್ಚಿನ ತಂಡವಾಗಿತ್ತು. ರೊನಾಲ್ಡೋ ಆತನ ನೆಚ್ಚಿನ ಆಟಗಾರನಾಗಿದ್ದ. ಹೀಗೆ ಬೇರೆಯವರನ್ನು ನೋಡುತ್ತಾ ಬೆಳೆದ ಬಾಪೆಗೆ ಅದೊಂದು ದಿನ ಸ್ಪೇನ್‌ನ ಕ್ಲಬ್‌ ಒಂದರಿಂದ ಕರೆ ಬಂತು. ಅದು ಆತನ ಸಹಪಾಠಿಗಳಿಗೆ ಅಚ್ಚರಿಯನ್ನುಂಟು ಮಾಡಿತ್ತು. ಅದಾಗಿ 6 ತಿಂಗಳು ಕಳೆದಿತ್ತು ಅಷ್ಟೇ. ಮೊನಾಕೋ ಫೂಟ್ಬಾಲ್ ಕ್ಲಬ್‌ ಆತನಿಗೆ ಜಾಗ ನೀಡಿತು. ದಾಖಲೆಯ ಅತ್ಯಂತ ಕಿರಿಯ ವಯಸ್ಸಿಗೆ ಅಂದರೆ 16 ವರ್ಷ 347 ದಿನಕ್ಕೆ ಕ್ಲಬ್‌ ಪರ ಆಡುವ ಅವಕಾಶ ಪಡೆದ ಬಾಪೆ.

ಗೋಲ್ ಹೊಡೆದ ನಂತರ ಬಾಪೆ ಸಂಭ್ರಮಿಸುವ ಸ್ಟೈಲ್
ಗೋಲ್ ಹೊಡೆದ ನಂತರ ಬಾಪೆ ಸಂಭ್ರಮಿಸುವ ಸ್ಟೈಲ್
ಚಿತ್ರ ಕೃಪೆ: ಗೋಲ್ ಡಾಟ್ ಕಾಂ

ಸಿಕ್ಕಿದ ಅವಕಾಶ ಸದುಪಯೋಗ ಪಡಿಸಿಕೊಂಡ ಬಾಪೆ 44 ಪಂದ್ಯಗಳಲ್ಲಿ ಬರೋಬ್ಬರಿ 26 ಗೋಲ್‌ಗಳನ್ನು ಗಳಿಸಿದ. ಅದಾಗಿ ಕೇವಲ ಎರಡು ವರ್ಷ ಅಷ್ಟೇ. ಬಾಪೆ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದ. ಪ್ಯಾರಿಸ್ ಸೇಂಟ್ ಜರ್ಮನ್ ತಂಡ ಬರೋಬ್ಬರಿ 1500 ಕೋಟಿ ರೂಪಾಯಿ (165 ಮಿಲಿಯನ್ ಪೌಂಡ್) ನೀಡಿ ಕಿಲಿಯನ್ ಬಾಪೆಯನ್ನು ಖರೀದಿಸಿತು. 18 ವರ್ಷದ ಆಟಗಾರನೊಬ್ಬನಿಗೆ ಫೂಟ್ಬಾಲ್ ಕ್ಲಬ್‌ಗಳ ಇತಿಹಾಸದಲ್ಲಿ ನೀಡಿದ ಅತೀ ದೊಡ್ಡ ಮೊತ್ತದ ಹಣವಿದು.

ಅದಾದ ಮರುದಿನವೇ ಬಾಂಡಿಯ ರಸ್ತೆಗಳಲ್ಲಿ ಕ್ಯಾಮೆರಾಮನ್‌ಗಳು, ವಿದೇಶಿ ಪತ್ರಿಕೆಗಳ ವರದಿಗಾರರಿಂದ ತುಂಬಿಕೊಂಡಿತ್ತು. 2005ರ ಗಲಭೆಯಲ್ಲಿ ಕಳೆದುಕೊಂಡಿದ್ದ ಹೆಸರನ್ನು ಬಾಂಡಿ ಉಪನಗರ ರಾತೋರಾತ್ರಿ ಸಂಪಾದಿಸಿಕೊಂಡಿತ್ತು. ಜತೆಗೆ ರಾತೋರಾತ್ರಿ ಫೂಟ್ಬಾಲ್ ಜಗತ್ತಿನಲ್ಲಿ ರೊನಾಲ್ಡೋ, ಮೆಸ್ಸಿ, ನೇಮರ್ ಸಾಲಿನಲ್ಲಿ ಹೊಸ ಹೆಸರು ‘ಬಾಪೆ’ ಕಾಣಿಸಿಕೊಂಡಿತು. ಬಾಪೆ ಇಷ್ಟಕ್ಕೆ ನಿಲ್ಲಲಿಲ್ಲ.

ಇದಾಗಿ ವಿಶ್ವಕಪ್ ಬಂತು. ಕಳೆದ ವಿಶ್ವಕಪ್ ಸಮಯದಲ್ಲಿ ಕ್ಲಬ್‌ನಲ್ಲಿದ್ದ ‘ಸಣಕಲ’ ಎಲ್ಲಾ ಊಹೆ, ನಿರೀಕ್ಷೆಗಳನ್ನು ಮೀರಿ ಫ್ರಾನ್ಸ್ ತಂಡದ ಫಾರ್ವರ್ಡ್ ಆಟಗಾರನಾಗಿ ನಿಂತಿದ್ದ. ಫ್ರಾನ್ಸ್‌ ತಂಡ ಫೈನಲ್‌ಗೂ ಬಂತು. ಅದೇ ಬಾಪೆ ಭಾನುವಾರ ನಡೆದ ಪಂದ್ಯದಲ್ಲಿ ಕ್ರೊವೇಷ್ಯಾಗೆ ನಡುಕ ಹುಟ್ಟಿಸುವ ಮಟ್ಟಕ್ಕೆ ಬೆಳೆದು ಬಂದ. 1982ರ ನಂತರ ವಿಶ್ವಕಪ್ ಫೂಟ್ಬಾಲ್ ಫೈನಲ್ ಪಂದ್ಯವಾಡಿದ ಮೊದಲ ಯುವ ಆಟಗಾರ ಎಂಬ ವಿಶೇಷಣಗಳ ಜತೆಗೆ ಫೈನಲ್‌ನಲ್ಲಿ ದಂತಕತೆ ಪೀಲೆ ನಂತರ ಗೋಲ್ ಹೊಡೆದ ಕಿರಿಯ ಆಟಗಾರ ಎಂಬ ಮತ್ತೊಂದು ದಾಖಲೆಯನ್ನೂ ಬರೆದ.

‘ಫೀಫಾ ಯುವ ಆಟಗಾರ’ ಪ್ರಶಸ್ತಿಯೊಂದಿಗೆ ಬಾಪೆ
‘ಫೀಫಾ ಯುವ ಆಟಗಾರ’ ಪ್ರಶಸ್ತಿಯೊಂದಿಗೆ ಬಾಪೆ
ಚಿತ್ರ ಕೃಪೆ: paemuka.com

ದೇಶಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರ ಜೊತೆಗೆ ಬಾಪೆ ‘ಫೀಫಾ ಯುವ ಆಟಗಾರ’ ಪ್ರಶಸ್ತಿಯನ್ನೂ ಬಾಚಿಕೊಂಡ. ಇವತ್ತು ಬಾಪೆ ಲಿಯನಲ್‌ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋನ ನಂತರ ಫೂಟ್ಬಾಲ್‌ನ ಸೂಪರ್‌ಸ್ಟಾರ್ ಎನ್ನುವ ಚರ್ಚೆಗಳು ಆರಂಭವಾಗಿದೆ. ಪೀಲೆ ಜತೆಗೆ ಆತನನ್ನು ಹೋಲಿಸಲಾಗುತ್ತಿದೆ.

ಫ್ರಾನ್ಸ್ ಫೂಟ್ಬಾಲ್ ಜಗತ್ತಿನ ರಾಜನಾಗಿ ಮೆರೆಯುತ್ತಿದ್ದರೆ ಇದೇ ‘ಸಣಕಲ’ನ ಹೆಸರು ಜಗತ್ತಿನ ಮೂಲೆ ಮೂಲೆಯಲ್ಲಿ ಅನುರಣಿಸುತ್ತಿದೆ. “ಆತ ಒಬ್ಬ ಆಟಗಾರ ಆಗುತ್ತಾನೆ ಎಂದು ನಾವಂದುಕೊಂಡಿದ್ದೆವು. ಅದರೆ ಇಷ್ಟು ಬೇಗ ಇಷ್ಟೆಲ್ಲಾ ನಡೆಯುತ್ತದೆ ಎಂದು ನಾವೆಲ್ಲಾ ಅಂದುಕೊಂಡಿರಲೇ ಇಲ್ಲ,” ಎನ್ನುತ್ತಾನೆ ದೊಡ್ಡ ಟಿವಿ ಪರದೆ ಮೇಲೆ ಬಾಪೆ ಆಟ ನೋಡುತ್ತಾ ಮಾತನಾಡುವ ಆತನ ಗೆಳೆಯ ಅಲನ್ ಮೊಮೇಜ್.

ಇಂದು ಬಾಪೆ ಮೊಮೇಜ್ ಪಾಲಿಗೆ ಮಾತ್ರವಲ್ಲ ಇಡೀ ಜಗತ್ತಿನ ಪಾಲಿಗೆ ಅಚ್ಚರಿ. ಸದ್ಯದ ಸ್ಟಾರ್. ಭವಿಷ್ಯದ ಸೂಪರ್‌ ಸ್ಟಾರ್. ಇದಿಷ್ಟು ಆತನ ಈವರೆಗಿನ ಬದುಕಿನ ಹೆಜ್ಜೆ ಗುರುತುಗಳು. ದೈಹಿಕ ಹೊರಸಹರೆ, ಬಾಲ್ಯದ ಅವಮಾನಗಳು ಸಾಧನೆಗೆ ಸಮಸ್ಯೆಯಲ್ಲ ಎಂಬುದಕ್ಕೆ ಮತ್ತೊಂದು ಜೀವಂತ ಉದಾಹರಣೆ ಈ ಬಾಪೆ.