samachara
www.samachara.com
‘ಡೌಟೇ ಬೇಡ, ಜನ ಮರಳು’: ವಾಟ್ಸ್‌ಆಪ್‌ ವದಂತಿಗೆ ರಾಜ್ಯದಲ್ಲಿ ಮತ್ತೊಂದು ಬಲಿ
COVER STORY

‘ಡೌಟೇ ಬೇಡ, ಜನ ಮರಳು’: ವಾಟ್ಸ್‌ಆಪ್‌ ವದಂತಿಗೆ ರಾಜ್ಯದಲ್ಲಿ ಮತ್ತೊಂದು ಬಲಿ

ಮಕ್ಕಳ ಕಳ್ಳರು ಎಂಬ ವದಂತಿಗೆ ಬೀದರ್‌ನಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಇಡೀ ವ್ಯವಸ್ಥೆ ಮಕ್ಕಳ ಕಳ್ಳರು ಎಂಬುದು ಸುಳ್ಳು ಸುದ್ದಿ ಎಂದು ಸಾರಿ ಸಾರಿ ಹೇಳುತ್ತಿದ್ದರೂ ಕೂಡ ಜನರ ತಲೆಯೊಳಗೆ ತುಂಬಿರುವ ವಿಷ ಹೋದಂತಿಲ್ಲ.

ಮಕ್ಕಳ ಕಳ್ಳರು ಎಂಬ ಅನುಮಾನದಿಂದಒಬ್ಬ ವ್ಯಕ್ತಿಯನ್ನು ಕೊಂದು, ಆತನ 3 ಜನ ಸ್ನೇಹಿತರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬೀದರ್‌ನಲ್ಲಿ ಘಟಿಸಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.

ಬೀದರ್‌ ಜಿಲ್ಲೆಯ ಔರದ್‌ ತಾಲೂಕಿನ ಮುರ್ಕಿ ಎಂಬ ಗ್ರಾಮದ ಜನರು ಶುಕ್ರವಾರ ಮಕ್ಕಳ ಕಳ್ಳರೆಂಬ ಅನುಮಾನದಿಂದ 4 ಜನರನ್ನು ಮನಬಂದಂತೆ ಥಳಿಸಿದ್ದಾರೆ. ಥಳಿತಕ್ಕೆ ಒಳಪಟ್ಟವರಲ್ಲಿ ಒಬ್ಬ ವ್ಯಕ್ತಿ ಅಸುನೀಗಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಭಾನುವಾರ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿತ್ತು. ಈಗ ಪೊಲೀಸರು ದುರ್ಘಟನೆಗೆ ಸಂಬಂಧಿಸಿದಂತೆ ಮುರ್ಕಿಯ 30 ಗ್ರಾಮಸ್ಥರನ್ನು ಬಂಧಿಸಿದ್ದಾರೆ.

ವಾಟ್ಸ್‌ಆಪ್‌ ಗ್ರೂಪ್‌ ಒಂದರಲ್ಲಿ ಮಕ್ಕಳ ಕಳ್ಳರ ಕುರಿತಾದ ವದಂತಿಗಳು ಹರಿದಾಡಿದ್ದವು. ಶುಕ್ರವಾರ ನಡೆದ ಈ ಘಟನೆಗೆ ಈ ಸುಳ್ಳು ಸುದ್ದಿಗಳೇ ಕಾರಣವಾಗಿದ್ದವು. ಈಗ ಪೊಲೀಸರು ವಾಟ್ಸ್‌ಆಪ್‌ ಗುಂಪಿನ ಅಡ್ಮಿನ್‌ ಹಾಗೂ ಗುಂಪಿನಲ್ಲಿ ಸುಳ್ಳು ಸುದ್ದಿಯನ್ನು ಹರಡಿದ ವ್ಯಕ್ತಿಯನ್ನು ಕೂಡ ಬಂಧಿಸಿದ್ದಾರೆ.

ಜನ ಅಮಾಯಕರಿಗೆ ಥಳಿಸುತ್ತಿದ್ದ ವೇಳೆ ಮಾಡಿದ ವೀಡಿಯೋ ತುಣುಕಿನ ಆಧಾರದ ಮೇಲೆ ಉಳಿದ 28 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸ್‌ ಅಧೀಕ್ಷಕ ದೇವರಾಜ್‌ ‘ಹಿಂದೂಸ್ತಾನ್‌ ಟೈಮ್ಸ್’ ಪತ್ರಿಕೆಗೆ ತಿಳಿಸಿದ್ದಾರೆ.

ಹೈದರಾಬಾದ್‌ ಮೂಲದವರಾದ ಮೊಹಮ್ಮದ್‌ ಅಝಾಮ್‌, ತಲ್ಹಾ ಇಸ್ಮಾಯಿಲ್‌ ಹಾಗೂ ಮೊಹಮ್ಮದ್‌ ಸಲ್ಮಾನ್‌ ತಮ್ಮ ಸ್ನೇಹಿತ ಮೊಹಮ್ಮದ್ ಬಷೀರ್‌ ಜತೆ ಹಂದಿಕೇರಾ ಗ್ರಾಮದ ಅವರ ಮನೆಗೆ ತೆರಳುತ್ತಿದ್ದರು. ಬಾಲ್ಕುತ್‌ ತಾಂಡದ ಬಳಿ ಕೆಲನಿಮಿಷ ತಮ್ಮ ಕಾರನ್ನು ನಿಲ್ಲಿಸಿದ್ದರು. ಕತಾರ್‌ನಲ್ಲಿ ನೆಲೆಸಿದ್ದ ತಲ್ಹಾ ಇಸ್ಮಾಯಿಲ್‌ ಸುತ್ತಮುತ್ತ ಇದ್ದ ಶಾಲಾ ಮಕ್ಕಳಿಗೆ ಚಾಕಲೇಟ್‌ಗಳನ್ನು ಹಂಚಲು ಮುಂದಾಗಿದ್ದರು. ಇದನ್ನು ಕಂಡ ಗ್ರಾಮಸ್ಥರು ಮಕ್ಕಳ ಕಳ್ಳರು ಎಂಬ ಗುಮಾನಿಯ ಮೇಲೆ 4 ಜನರನ್ನೂ ಥಳಿಸಲು ಮುಂದಾದರು.

ಜನರಿಂದ ಬಿಡಿಸಿಕೊಂಡ ನಾಲ್ಕೂ ಜನರು ತಮ್ಮ ಕಾರನ್ನೇರಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಸ್ಥಳೀಯರು ರಸ್ತೆಯಲ್ಲಿ ಮುಂದೆ ಸಿಗುವ ಮುರ್ಕಿ ಗ್ರಾಮದ ಸ್ನೇಹಿತರಿಗೆ ವಿಷಯ ಮುಟ್ಟಿಸಿ, ಕಾರನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ. ಮರವೊಂದನ್ನು ಬೀಳಿಸಿ ರಸ್ತೆಗೆ ತಡೆಯೊಡ್ಡಿದ ಮುರ್ಕಿ ಗ್ರಾಮಸ್ಥರು ಮೊಹಮ್ಮದ್‌ ಅಝಾಮ್‌ರನ್ನು ಕಾರಿನಿಂದ ಹೊರಗೆಳೆದು ಕಲ್ಲುಗಳಿಂದ ಹೊಡೆದಿದ್ದಾರೆ. ಕಲ್ಲಿನ ಹೊಡೆತಕ್ಕೆ ಜರ್ಜರಿತಗೊಂಡ ಅಝಾಮ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರನ್ನೂ ಕೂಡ ತಗ್ಗು ಪ್ರದೇಶಕ್ಕೆ ನೂಕಿದ್ದಾರೆ.

ರಸ್ತೆಯಿಂದ ಕೆಳಗೆ ಬಿದ್ದ ಕಾರು.
ರಸ್ತೆಯಿಂದ ಕೆಳಗೆ ಬಿದ್ದ ಕಾರು.

“ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹರಸಾಹಸ ಪಟ್ಟು ಜನರನ್ನು ತಡೆದು ನಿಲ್ಲಿಸಿದ್ದು, ಗಾಯಗೊಳಗಾದವರನ್ನು ಬೀದರ್‌ನ ಆಸ್ಪತ್ರೆಗೆ ಸೇರಿಸಿದ್ದಾರೆ. ಶನಿವಾರ ಅವರನ್ನು ಹೈದರಾಬಾದ್‌ಗೆ ಸಾಗಿಸಲಾಗಿದೆ. ಜನರನ್ನು ತಡೆಯುವ ವೇಳೆ 10 ಜನ ಪೊಲೀಸರಿಗೂ ಕೂಡ ಗಾಯಗಳಾಗಿವೆ,” ಎಂದು ಪೊಲೀಸ್‌ ಅಧಿಕಾರಿ ದಿಲೀಪ್‌ ಸಾಗರ್‌ ತಿಳಿಸಿದ್ದಾರೆ.

ಮಕ್ಕಳ ಕಳ್ಳರು ಎಂಬ ಶಂಕೆಯ ಮೇಲೆ ಭಾರತದಾದ್ಯಂತ ಹಲವಾರು ಅಮಾಯಕರು ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗುತ್ತಲೇ ಇದ್ದಾರೆ. ಈ ಕುರಿತು ಕೇಂದ್ರ ಸರಕಾರ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಿದೆ. ಮಕ್ಕಳ ಕಳ್ಳರು ಎಂಬ ಶಂಕೆಯಿಂದ ಅಮಾಯಕರು ಬಲಿಯಾಗುವುದನ್ನು ತಡೆಗಟ್ಟಲು ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದೆ.

ಸಾರ್ವಜನಿಕ ಥಳಿತದ ಬಗ್ಗೆ ಪ್ರಸ್ತಾಪ ಮಾಡಿದ್ದ ಸುಪ್ರಿಂ ಕೋರ್ಟ್, ಈ ಸಮಸ್ಯೆಗಳು ಕಾನೂನು ಮತ್ತು ಸುವ್ಯವಸ್ಥೆಗಳ ಅಡಿಯೊಳಗೆ ಬರುವುದಿಲ್ಲ ಎಂದಿತ್ತು. ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ‘ಜನರ ಈ ಹಿಂಸೆಯನ್ನು ಜಾತಿ ಅಥವಾ ಧರ್ಮದೊಂದಿಗೆ ತಳುಕು ಹಾಕಬೇಡಿ’ ಎಂದು ಎಚ್ಚರಿಸಿದ್ದರು.

“ಜನಸಮೂಹ ನಡೆಸುವ ಹತ್ಯೆ ಕಾನೂನು ಸುವ್ಯವಸ್ಥೆಯ ಗಡಿಯೊಳಗೆ ಬರುವುದಿಲ್ಲ. ಆದಾಗ್ಯೂ ಕೂಡ ಇದು ಅಪರಾಧವೇ. ಆದರೆ ಇದು ಯಾವುದೇ ಉದ್ದೇಶವನ್ನಿಟ್ಟುಕೊಂಡು ಮಾಡುತ್ತಿರುವುದಲ್ಲ,” ಎಂದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಗೋ ರಕ್ಷಣೆ, ಮಕ್ಕಳ ಕಳ್ಳತನ ಇತ್ಯಾದಿ ವದಂತಿಗಳು ಜನರ ಮನಸ್ಸಿನಲ್ಲಿ ಕೆಲಸ ಮಾಡುತ್ತಿವೆ ಎಂದಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಧೂಳೆ ಜಿಲ್ಲೆಯಲ್ಲಿ ಜನ 5 ಅಮಾಕರನ್ನು ಹೊಡೆದು ಸಾಯಿಸಿದ್ದರು. ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವೀಡಿಯೋ ವಾಟ್ಸ್‌ಆಪ್‌ನಲ್ಲಿ ಹೆಚ್ಚಾಗಿ ಹರಿದಾಡಿದ್ದ ಕಾರಣದಿಂದಾಗಿ ಜನ ಗೊತ್ತುಗುರಿ ಇಲ್ಲದವರನ್ನು ಥಳಿಸಲು ಮುಂದಾಗಿದ್ದರು.

ಇಂತಹದ್ದೇ ಘಟನೆಯೊಂದು ತ್ರಿಪುರದಲ್ಲಿ ವರದಿಯಾಗಿತ್ತು. ಮಕ್ಕಳ ಕಳ್ಳರು ಎಂಬ ಗುಮಾನಿಯ ಕಾರಣಕ್ಕೆ ಜನರಿಂದ ಥಳಿಸಲ್ಪಟ್ಟು ಒಬ್ಬ ವ್ಯಕ್ತಿ ಮೃತಪಟ್ಟರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

Also read: ಮಕ್ಕಳ ಕಳ್ಳರ ವದಂತಿ; ಜನರಿಂದ ಸಾಧುಗಳನ್ನು ರಕ್ಷಿಸಿದ ಸೈನಿಕರು

ಕೆಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ಮಕ್ಕಳ ಕಳ್ಳರ ಕುರಿತಾದ ವದಂತಿ ಹಬ್ಬಿತ್ತು. ಈ ವದಂತಿಗೆ ಮೊದಲ ಬಲಿಯಾದವರು ತಿರುವಣ್ಣಾಮಲೈನ 65ರ ಪ್ರಾಯದ ವೃದ್ಧೆ ರುಕ್ಮಿಣಿ. “ಉತ್ತರ ಭಾರತದಿಂದ 300 ಜನ ಮಕ್ಕಳ ಕಳ್ಳರು ಬಂದಿದ್ದಾರೆ. ಯಾವ ಕ್ಷಣದಲ್ಲಿ ಆದರೂ ನಿಮ್ಮ ಮಕ್ಕಳನ್ನು ಅಪಹರಿಸಿ ಅಂಗಾಂಗ ಕದಿಯುತ್ತಾರೆ. ಎಲ್ಲರೂ ಜಾಗೃತರಾಗಿರಿ. ಈ ಸಂದೇಶವನ್ನು ಇತರರಿಗೂ ಕಳಿಸಿ, ಅವರ ಮಕ್ಕಳನ್ನೂ ರಕ್ಷಿಸಿ,” ಎಂಬ ವದಂತಿ ಜನರನ್ನು ಬೆಚ್ಚಿ ಬೀಳಿಸಿತ್ತು.

ಕರ್ನಾಟಕದಲ್ಲೂ ಕೂಡ ಮಕ್ಕಳ ಕಳ್ಳರ ವದಂತಿ ದೊಡ್ಡದಾಗಿ ಹಬ್ಬಿತ್ತು. ಮೇ ತಿಂಗಳಲ್ಲಿ ರಾಜ್ಯದಲ್ಲಿ ಮಕ್ಕಳ ಕಳ್ಳರೆಂದು ಥಳಿಸಿದ 68 ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆ 81 ಅಮಾಯಕರನ್ನು ಜನ ಹೊಡೆದಿದ್ದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಜಸ್ತಾನ ಮೂಲದ ಕಾಲೂರಾಮ್‌ ಎಂಬ ವ್ಯಕ್ತಿ ಜನರಿಂದ ಭೀಕರವಾಗಿ ಹಲ್ಲೆಗೊಳಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಜನರ ಏಟಿಗೆ ಜರ್ಜರಿತನಾಗಿದ್ದ ಕಾಲೂರಾಮ್‌, ಯಾವ ಅಪರಾಧವನ್ನೂ ಕೂಡ ಮಾಡದೇ ಸಾವನ್ನಪ್ಪಿದ್ದ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ತಮ್ಮೂರಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗೆ ಕಿವಿಗೊಟ್ಟ ಬಳ್ಳಾರಿಯ ಕೆಲ ಹಳ್ಳಿಗಳ ಜನ ರಾತ್ರಿಯಡೀ ದೊಣ್ಣೆಗಳನ್ನು ಹಿಡಿದು ಕಾದುಕುಳಿತಿದ್ದರು. ಹುಬ್ಬಳ್ಳಿಯ ಕೆಲವು ಮಹಿಳೆಯರು ಕೈಯಲ್ಲಿ ಕಾರದಪುಡಿ, ಬಡಿಗೆಗಳನ್ನಿಡಿದು ಮಕ್ಕಳ ಕಳ್ಳರ ಶೋಧ ನಡೆಸಿದ್ದರು. ಚಿತ್ರದುರ್ಗ, ಕೊಲಾರದಲ್ಲೂ ಕೂಡ ಜನ ಇದೇ ರೀತಿ ವರ್ತಿಸಿದ್ದರು.

ಅನುಮಾನಕ್ಕೆ ಒಳಗಾದ ಸಾರ್ವಜನಿಕರು ಅಮಾಯಕರನ್ನು ಥಳಿಸಿ ಕೊಲ್ಲುತ್ತಿರುವ ಘಟನೆಗಳು ದೇಶದ ನಾನಾ ರಾಜ್ಯಗಳಲ್ಲಿ ವರದಿಯಾಗುತ್ತಲೇ ಇವೆ. ದೇಶಾದ್ಯಂತ ಪೊಲೀಸರು ವದಂತಿಗಳಿಗೆ ಕಿವಿಗೊಟ್ಟು ನಿರಪರಾಧಿಗಳನ್ನು ಕೊಲ್ಲುವುದನ್ನು ತಡೆಗಟ್ಟಲು ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಆದರೂ ಕೂಡ ಕೊಲೆಗಳು ಕಡಿಮೆಯಾಗುತ್ತಿಲ್ಲ.

Also read: ವಾಟ್ಸ್‌ಆಪ್‌ ವದಂತಿಗಳಿಗೆ ಕಡಿವಾಣ ಹಾಕಲು ‘ಜಾಹೀರಾತು ಟಿಪ್ಸ್‌’

ಸುಳ್ಳು ಸುದ್ದಿ ಹರಡಲು ಸುಲಭ ಮಾರ್ಗವಾಗಿರುವ ಮಾಟ್ಸ್‌ಆಪ್‌ ಮೆಸೇಂಜರ್‌ ಕೂಡ ತನ್ನೊಳಗೆ ಹರಿದಾಡುತ್ತಿರುವ ವದಂತಿಗಳನ್ನು ತಡೆಯಲು ಹಲವು ಕ್ರಮಗಳಿಗೆ ಮುಂದಾಗಿದೆ. ರಾಷ್ಟ್ರದ ಪ್ರಮುಖ ಪತ್ರಿಕೆಗಳ ಹಿಂಪುಟದಲ್ಲಿ ಸುಳ್ಳು ಸುದ್ದಿಗಳನ್ನು ಹೇಗೆ ಗುರುತಿಸಬೇಕು ಎಂದು ಜಾಹಿರಾತುಗಳನ್ನು ನೀಡಿದೆ. ಫಾರ್‌ವರ್ಡ್‌ ಮೇಸಜ್‌ಗಳ ಮೇಲೆ ‘ಫಾರ್‌ವರ್ಡೆಡ್‌’ ಎಂದು ನಮೂದಿಸುವ ಕೆಲಸಕ್ಕೆ ಕೂಡ ವಾಟ್ಸ್‌ಆಪ್‌ ಮುಂದಾಗಿದೆ.

‘ಮಕ್ಕಳ ಕಳ್ಳರು’ ಎಂಬ ಸುದ್ದಿ ನಿಜವಲ್ಲ ಎಂದು ಪತ್ರಿಕೆಗಳು, ಟಿವಿಗಳು, ಪೊಲೀಸ್‌ ಇಲಾಖೆಗಳು, ಸರಕಾರಗಳು ಅಷ್ಟೇ ಅಲ್ಲದೇ ಸುಪ್ರಿಂ ಕೋರ್ಟ್ ಹೇಳಿದರೂ ಕೂಡ ಜನ ನಿಧಾನಗತಿಯಲ್ಲಿ ಚಿಂತಿಸುತ್ತಿಲ್ಲ. ಸಮಸ್ಯೆ ಇರುವುದು ಜನರಲ್ಲೋ ಅಥವಾ ದೇಶದ ಎಲ್ಲಾ ಜನರಿಗೆ ಸತ್ಯವನ್ನು ಮನದಟ್ಟು ಮಾಡಿಸಲು ಸಾಧ್ಯವಾಗುತ್ತಿಲ್ಲದ ವ್ಯವಸ್ಥೆಯಲ್ಲೋ ಎನ್ನುವುದು ತಿಳಿಯದಾಗಿದೆ.

ಚಿತ್ರ ಕೃಪೆ: ಸತೀಶ ಆಚಾರ್ಯ ಕಾರ್ಟೂನ್.