samachara
www.samachara.com
ಫಾಲ್ಕನ್‌ ಟೈರ್ಸ್‌ಗೆ ಬೀಗ: 2,500 ಅತಂತ್ರ ಕಾರ್ಮಿಕರ ಕಷ್ಟಕ್ಕೆ ಸರಕಾರ ಕುರುಡು
COVER STORY

ಫಾಲ್ಕನ್‌ ಟೈರ್ಸ್‌ಗೆ ಬೀಗ: 2,500 ಅತಂತ್ರ ಕಾರ್ಮಿಕರ ಕಷ್ಟಕ್ಕೆ ಸರಕಾರ ಕುರುಡು

ಹೊಸ ಕೈಗಾರಿಕೆಗಳ ಆರಂಭಕ್ಕೆ, ಹೂಡಿಕೆ ಉತ್ತೇಜನಕ್ಕೆ ಅತಿಯಾದ ಆಸಕ್ತಿ ತೋರುವ ಸರಕಾರ ಇರುವ ಕಂಪೆನಿಗಳ ಮೇಲೆ ನಿಗಾ ವಹಿಸುವ, ಸಮಸ್ಯೆ ಬಗೆಹರಿಸುವ ಮನಸ್ಸು ಮಾಡುತ್ತಿಲ್ಲ.

ಕೈಗಾರಿಕಾ ಅಭಿವೃದ್ಧಿ, ಬಂಡವಾಳ ಆಕರ್ಷಣೆ, ಹೂಡಿಕೆಗೆ ಉತ್ತೇಜನ ಮುಂತಾದ ಹೆಸರಿನಲ್ಲಿ ಹೊಸ ಕಾರ್ಖಾನೆಗಳ ಆರಂಭಕ್ಕೆ ಸರಕಾರಗಳು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡೇ ಬರುತ್ತಿವೆ. ಆದರೆ, ಇರುವ ಕೈಗಾರಿಕೆಗಳ ಉಳಿವಿಗೆ ಸರಕಾರಗಳು ಬದ್ಧತೆ ತೋರುತ್ತಿಲ್ಲ. ಇದಕ್ಕೊಂದು ಉದಾಹರಣೆ ಮೈಸೂರಿನ ‘ಫಾಲ್ಕನ್‌ ಟೈರ್ಸ್‌ ಕಂಪೆನಿ’.

ಹಲವು ಕಾನೂನು ಹೋರಾಟದ ನಂತರವೂ ಸದ್ಯ ಬೀಗ ಜಡಿದುಕೊಂಡಿರುವ ಫಾಲ್ಕನ್‌ ಫಾಕ್ಟರಿ ಇಂದಿಲ್ಲ ನಾಳೆ ಕಾರ್ಯಾರಂಭ ಮಾಡುತ್ತದೆ, ನಮಗೆ ಬರಬೇಕಾದ ಬಾಕಿ ಹಣ ಸಿಗುತ್ತದೆ, ನಾವು ಮತ್ತೆ ಇದೇ ಕಾರ್ಖಾನೆಯಲ್ಲಿ ಹಿಂದಿನಂತೆ ಕೆಲಸ ಮಾಡುತ್ತೇವೆ ಎಂದು ಇಲ್ಲಿನ ಸುಮಾರು 2,500 ಕಾರ್ಮಿಕರು ಆಶಾವಾದಿಗಳಾಗಿದ್ದಾರೆ. ಆದರೆ, ಬಿಕ್ಕಟ್ಟಿನಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದ್ದ ಸರಕಾರಕ್ಕೆ ಈ ಬಗ್ಗೆ ಆಸಕ್ತಿ ಇಲ್ಲ.

ಮೈಸೂರಿನ ಮೇಟಗಳ್ಳಿಯ ಕೆಆರ್‌ಎಸ್‌ ರಸ್ತೆಯಲ್ಲಿರುವ ಫಾಲ್ಕನ್‌ ಟೈರ್ಸ್‌ ಕಂಪೆನಿ ಅಸ್ತಿತ್ವಕ್ಕೆ ಬಂದಿದ್ದು 1973ರಲ್ಲಿ. ಈ ಕಂಪೆನಿ ಸಂಸ್ಥಾಪಕರು ಮಂಗಳೂರು ಮೂಲದ ಉದ್ಯಮಿ ಎಚ್‌. ಡಿ. ಶೆಟ್ಟಿ. 80ರ ದಶಕದಲ್ಲಿ ಫಾಲ್ಕನ್‌ ಟೈರ್ಸ್‌ ಮುಂಬೈ ಮೂಲದ ‘ಛಾಬ್ರಿಯಾ ಗ್ರೂಪ್ಸ್‌’ ಪಾಲಾಗಿತ್ತು. 2005ರಲ್ಲಿ ಕೋಲ್ಕತ್ತ ಮೂಲದ ‘ರೂಯಿಯಾ ಗ್ರೂಪ್‌’ ಈ ಕಂಪೆನಿಯನ್ನು ಖರೀದಿಸಿತು. 2010ರವರೆಗೂ ಕಂಪೆನಿ ಚೆನ್ನಾಗಿಯೇ ನಡೆಯುತ್ತಿತ್ತು.

“ಕಂಪೆನಿ ಹಿಂದೆ ಯಾವತ್ತೂ ನಷ್ಟದಲ್ಲಿರಲಿಲ್ಲ. ದಿನಕ್ಕೆ ಸುಮಾರು 30 ಸಾವಿರ ಟೈರ್‌, 10 ಸಾವಿರ ಟ್ಯೂಬ್‌ ಉತ್ಪಾದನೆಯಾಗುತ್ತಿದ್ದ ಕಾರ್ಖಾನೆಯಲ್ಲಿ ಬರಬರುತ್ತಾ ಉತ್ಪಾದನೆ ತಗ್ಗಿಸಲಾಯಿತು. 2010ರ ನಂತರ ಕಂಪೆನಿಯಲ್ಲಿ ಅನೇಕ ಬೆಳವಣಿಗೆಗಳಾದವು. 2014ರ ನಂತರ ಕಂಪೆನಿ ಇಳಿಮುಖ ಕಾಣಲು ಶುರುವಾಯಿತು” ಎಂದು ನೆನಪಿಸಿಕೊಳ್ಳುತ್ತಾರೆ ಫಾಲ್ಕನ್‌ ಟೈರ್ಸ್‌ ನೌಕರರ ಒಕ್ಕೂಟದ ಅಧ್ಯಕ್ಷ ಆನಂದ್‌.

“2010ರಿಂದಲೂ ಕಾರ್ಖಾನೆಯಲ್ಲಿ ಸಮಸ್ಯೆ ಇದ್ದರೂ ಅದು ಒಳಗಿನ ಕಾರ್ಮಿಕರ ಗಮನಕ್ಕೆ ಬಂದಿದ್ದು 2014ರಲ್ಲಿ. 2014ರಿಂದ ಸಂಬಳ ವಿಳಂಬವಾಗುವ ಸಮಸ್ಯೆ ಶುರುವಾಯಿತು. ಬಳಿಕ ಆಡಳಿತ ಮಂಡಳಿ ಕಾರ್ಮಿಕರ ಸಂಬಳ ಕಡಿತ ಮಾಡಲು ಮುಂದಾಯಿತು. ಕಾರ್ಮಿಕರು ಪ್ರಶ್ನಿಸಿದರೆ ಕಂಪೆನಿ ನಷ್ಟದಲ್ಲಿದೆ ಎಂಬ ಉತ್ತರ ಬರುತ್ತಿತ್ತು. 2015ರಲ್ಲಿ ಉತ್ಪಾದನೆಯನ್ನೇ ನಿಲ್ಲಿಸಿ ಕಾರ್ಖಾನೆಗೆ ಬೀಗ ಹಾಕಲಾಯಿತು. ಆಗ ಕಾನೂನು ಬಾಹಿರವಾಗಿ ಬೀಗಮುದ್ರೆ ಹಾಕಲಾಗಿದೆ ಎಂದು ಕಾರ್ಮಿಕ ಇಲಾಖೆ ಸೂಚನೆ ಕೊಟ್ಟ ಬಳಿಕ ಮತ್ತೆ ಕಾರ್ಖಾನೆ ತೆರೆದು ಉತ್ಪಾದನೆ ಆರಂಭಿಸಲಾಯಿತು. ಆದರೆ, ನೌಕರರ ಸಮಸ್ಯೆ ಮುಂದುವರಿದೇ ಇದೆ” ಎನ್ನುತ್ತಾರೆ ಆನಂದ್‌.

“2016ರ ಫೆಬ್ರುವರಿಯಲ್ಲಿ ಕೊನೆಯ ಬಾರಿಗೆ ಉತ್ಪಾದನೆ ನಿಲ್ಲಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಕಾರ್ಮಿಕರಿಗೆ ವೇತನ, ವೇತನ ಬಾಕಿ ಯಾವುದೂ ಪಾವತಿಯಾಗಿಲ್ಲ. ಪಿಎಫ್‌, ಇಎಸ್‌ಐಗೆಂದು ಸಂಬಳದಲ್ಲಿ ಕಡಿತ ಮಾಡಿದ್ದ ಹಣವನ್ನೂ ಆಯಾ ಇಲಾಖೆಗಳಿಗೆ ಪಾವತಿಸಿಲ್ಲ. 2016ರಿಂದ ಸುಮಾರು 2500 ಕಾರ್ಮಿಕರು ಕೆಲಸವಿಲ್ಲದೆ, ಸಂಬಳವಿಲ್ಲದೆ ಅತಂತ್ರದಲ್ಲಿ ಬದುಕು ನಡೆಸುತ್ತಿದ್ದೇವೆ. ನಮ್ಮಲ್ಲಿ ಅನೇಕರಿಗೆ 40 ವರ್ಷ ದಾಟಿದೆ. ಈ ವಯಸ್ಸಿನಲ್ಲಿ ಬೇರೆ ಕಡೆ ಸರಿಯಾದ ಕೆಲಸವೂ ಸಿಗುತ್ತಿಲ್ಲ. ಜೀವನ ನಿರ್ವಹಣೆಯೇ ಕಷ್ಟವಾಗಿದೆ” ಎಂದು ತಮ್ಮ ನೋವು ತೋಡಿಕೊಳ್ಳುತ್ತಾರೆ ಅವರು.

“ಕಾರ್ಮಿಕರ ವೇತನ ಬಾಕಿ ಹಾಗೂ ಪಿಎಫ್‌, ಇಎಸ್‌ಐ ಬಾಕಿ ಪಾವತಿಗೆ 22 ಕೋಟಿ ರೂಪಾಯಿ ಮೀಸಲಿಡುವಂತೆ ಕಂಪೆನಿ ನ್ಯಾಯ ಮಂಡಳಿ ಆದೇಶದಲ್ಲಿ ತಿಳಿಸಿದೆ. ಆದರೆ, ಕ್ಲಿಯರೆನ್ಸ್‌ ಸಿಗುವವರೆಗೂ ನಮಗೆ ಯಾವುದೇ ಬಾಕಿ ಬರುವುದಿಲ್ಲ. ಕಂಪೆನಿಯ ಒಟ್ಟು ಮೌಲ್ಯದಲ್ಲಿ ಕಾರ್ಮಿಕರ ಬಾಕಿಗಳ ಪಾವತಿಗಾಗಿ ಕನಿಷ್ಠ 100 ಕೋಟಿ ರೂಪಾಯಿ ಮೀಸಲಿಡಬೇಕೆಂಬುದು ನಮ್ಮ ಬೇಡಿಕೆ. ಕಾರ್ಖಾನೆ ಪುನರಾರಂಭಿಸಲು ಮುಂದೆ ಬರುವ ಕಂಪೆನಿ ನಮ್ಮ ಬಾಕಿಯನ್ನು ಹಂತ ಹಂತವಾಗಿ ಪಾವತಿಸಿದರೂ ಸಾಕು. ಒಂದೇ ಬಾರಿ ಬಾಕಿ ಪಾವತಿ ಮಾಡಬೇಕೆಂದು ನಾವು ಪಟ್ಟುಹಿಡಿದಿಲ್ಲ” ಎನ್ನುತ್ತಾರೆ ಅವರು.

ಕಂಪೆನಿ ನ್ಯಾಯ ಮಂಡಳಿಯ ಆದೇಶ, ಹೈಕೋರ್ಟ್‌ ಆದೇಶ ನಮ್ಮ ಪರವಾಗಿಯೇ ಇದೆ. ಕಾರ್ಖಾನೆ ಪುನರಾಂಭವಾಗಬೇಕು ಎಂಬುದು ನಮ್ಮ ಉದ್ದೇಶ. ನಾವು ಕೇವಲ ನಮಗೆ ಬರಬೇಕಾದ ಬಾಕಿಗಾಗಿ ಹೋರಾಡುತ್ತಿಲ್ಲ. ಕಾರ್ಖಾನೆಯ ಉಳಿವಿಗಾಗಿಯೂ ಹೋರಾಡುತ್ತಿದ್ದೇವೆ.
-ಆನಂದ್‌, ಅಧ್ಯಕ್ಷ, ಫಾಲ್ಕನ್‌ ಟೈರ್ಸ್‌ ನೌಕರರ ಒಕ್ಕೂಟ

148 ದಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ:

2015ರಲ್ಲಿ ಉತ್ಪಾದನೆ ನಿಲ್ಲಿಸಿ ಕಾರ್ಖಾನೆಗೆ ಬೀಗ ಹಾಕಿದಾಗ ಕಾರ್ಮಿಕರು 148 ದಿನಗಳ ಕಾಲ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದರು. ಅಂದು ಮಧ್ಯಪ್ರವೇಶಿಸಿದ ಸರಕಾರ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ, ಕೈಗಾರಿಕಾ ಸಚಿವ, ಕಾರ್ಮಿಕ ಸಚಿವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿತ್ತು.

“ಹಲವು ಬಾರಿ ಸಭೆ ನಡೆಸಿದ ಈ ಸಮಿತಿ ಉತ್ಪಾದನೆ ಆರಂಭಿಸಿ ಕಾರ್ಮಿಕರಿಗೆ ಸೂಕ್ತ ವೇತನ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿ ಮೇಲೆ ಒತ್ತಡ ತಂದಾಗ ಮತ್ತೆ ಕಾರ್ಖಾನೆ ಉತ್ಪಾದನೆ ಆರಂಭಿಸಿತ್ತು. ಆದರೆ, ಮುಂದಿನ ಕೆಲವು ತಿಂಗಳಲ್ಲಿ ಮತ್ತೆ ಉತ್ಪಾದನೆ ನಿಲ್ಲಿಸಲಾಯಿತು” ಎನ್ನುತ್ತಾರೆ ಫಾಲ್ಕನ್‌ ಟೈರ್ಸ್‌ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಣ್ಣಗೌಡ.

“ಸಮಸ್ಯೆಗೆ ಪರಿಹಾರ ಒದಗಿಸುವಂತೆ ನಾವು ಹೈಕೋರ್ಟ್‌ ಮೊರೆ ಹೋಗಿದ್ದೆವು. ‘ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ’ ಎಂದು 2017ರ ಫೆಬ್ರುವರಿ 10ರಂದು ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಕಾರ್ಖಾನೆಯ ಮಾಲೀಕ ಹಾಗೂ ಸ್ಥಳೀಯ ಆಡಳಿತ ಮಂಡಳಿ ಹೈಕೋರ್ಟ್‌ ಆದೇಶವನ್ನೂ ಪಾಲಿಸಿಲ್ಲ. ಕಾರ್ಖಾನೆ ನಷ್ಟದಲ್ಲಿದೆ ಎಂದು ಹೇಳಿಕೊಳ್ಳುವ ಮಾಲೀಕ ಪವನ್‌ ಕುಮಾರ್‌ ರೂಯಿಯಾ ಕಾರ್ಖಾನೆಯನ್ನು ಮತ್ತೊಂದು ಕಂಪೆನಿಗೆ ಹಸ್ತಾಂತರ ಮಾಡಲು ಸಿದ್ಧರಿಲ್ಲ” ಎಂಬುದು ಶಿವಣ್ಣಗೌಡ ಅವರ ದೂರು.

“ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಪೀಠವು ವ್ಯಾಜ್ಯ ಇತ್ಯರ್ಥ ಪಡಿಸಿಕೊಂಡು 6 ತಿಂಗಳಲ್ಲಿ ಕಂಪೆನಿಯನ್ನು ಪುನರಾರಂಭಿಸಲು ಈ ವರ್ಷದ ಮೇ 1ರಂದು ಆದೇಶ ನೀಡಿದೆ. ಆದರೆ, ಈ ಆದೇಶವನ್ನು ಪ್ರಶ್ನಿಸಿ ಮಾಲೀಕ ಪವನ್‌ ಕುಮಾರ್‌ ರೂಯಿಯಾ ದೆಹಲಿಯಲ್ಲಿರುವ ಎನ್‌ಸಿಎಲ್‌ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಎನ್‌ಸಿಎಲ್‌ಟಿ ಆದೇಶ ನೀಡಿದ ಸಂದರ್ಭದಲ್ಲೆಲ್ಲಾ ತಾವೇ ಕಾರ್ಖಾನೆ ಪುನರಾರಂಭಿಸುವುದಾಗಿ ಹೇಳುವ ಪವನ್‌ ಕುಮಾರ್‌ ತಮ್ಮ ಮಾತಿಗೆ ತಪ್ಪುತ್ತಿದ್ದಾರೆ. ತಾವೂ ಕಾರ್ಖಾನೆ ಪುನರಾರಂಭ ಮಾಡುತ್ತಿಲ್ಲ. ಬೇರೆಯವರು ಕಂಪೆನಿ ವಹಿಸಿಕೊಳ್ಳಲೂ ಕ್ಲಿಯರೆನ್ಸ್‌ ಕೊಡುತ್ತಿಲ್ಲ” ಎನ್ನುತ್ತಾರೆ ಅವರು.

ಪವನ್‌ ಕುಮಾರ್‌ ಅವರಿಗೆ ಸೇರಿದ್ದೆನ್ನಲಾದ ‘ಜೆಸ್ಸಪ್‌ ಕಂಪೆನಿ’ಯ ಉಗ್ರಾಣದಲ್ಲಿದ್ದ ರೈಲ್ವೆ ಇಲಾಖೆಯ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಕಳವು ಪ್ರಕರಣದಲ್ಲಿ ಪವನ್‌ ಕುಮಾರ್‌ ಅವರನ್ನು 2016ರ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು.

1,200 ಕೋಟಿ ಪಾಲುದಾರಿಕೆ:

ಫಾಲ್ಕನ್‌ ಟೈರ್ಸ್‌ ನಷ್ಟ ಘೋಷಿಸಿಕೊಂಡ ಸಂದರ್ಭದಲ್ಲಿ ಮುಂಬೈ ಮೂಲದ ‘ಎಡಿಲ್ವಿಸ್‌ ಅಸೆಟ್‌ ರಿಕನ್‌ಸ್ಟ್ರಕ್ಷನ್‌ ಕಂಪೆನಿ’ ಫಾಲ್ಕನ್‌ ಕಂಪೆನಿಯ ನಷ್ಟ ಮರುಭರ್ತಿಗೆ ಹಣ ಹೂಡಿಕೆ ಮಾಡಿದೆ. ಹಲವು ಬ್ಯಾಂಕ್‌ಗಳ ಸಾಲವನ್ನು ಎಡಿಲ್ವಿಸ್‌ ತೀರಿಸಿದೆ. ಇಂದು ಫಾಲ್ಕನ್‌ ಕಂಪೆನಿಯಲ್ಲಿ ತನ್ನ ಪಾಲುದಾರಿಕೆ 1,200 ಕೋಟಿ ರೂಪಾಯಿ ಎಂಬುದು ಎಡಿಲ್ವಿಸ್‌ ಕಂಪೆನಿ ವಾದ.

“ಸಾಲ ಮರುಪಾವತಿಗಾಗಿ ಎಡಿಲ್ವಿಸ್‌ ಸುಮಾರು 300 ಕೋಟಿ ರೂಪಾಯಿ ಹೂಡಿಕೆ ಮಾಡಿದೆಯಷ್ಟೇ. ಆದರೆ, ಹೂಡಿಕೆ, ಬಡ್ಡಿ, ನಿರ್ವಹಣಾ ವೆಚ್ಚ ಎಂದೆಲ್ಲಾ ಸೇರಿ ಇಂದು ತನ್ನ ಪಾಲುದಾರಿಕೆಯನ್ನು 1,200 ಕೋಟಿ ರೂಪಾಯಿ ತೋರಿಸುತ್ತಿದೆ. ಆದರೆ, ಸುಮಾರು 500 ಕೋಟಿ ರೂಪಾಯಿ ಮರು ಪಾವತಿ ಮಾಡಿದರೂ ಸಾಕು ಕ್ಲಿಯರೆನ್ಸ್‌ ಮಾಡಿಕೊಡಲು ಎಡಿಲ್ವಿಸ್‌ ಸಿದ್ಧವಿದೆ” ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾರ್ಖಾನೆಯ ನೌಕರರೊಬ್ಬರು.

“2010ರಿಂದ ಕಂಪೆನಿ ಹಲವು ಬ್ಯಾಂಕ್‌ಗಳಿಂದ ಸಾಲ ಪಡೆದಿದೆ. 2010ರಿಂದ ಕಂಪೆನಿಯ ಸಾಲ ಹೆಚ್ಚಾಗಿದೆ. ಆದರೆ, ಅದು ನೌಕರರಿಗೆ ಗೊತ್ತಾಗಿರಲಿಲ್ಲ. ಆಗಿನಿಂದಲೇ ಉತ್ಪಾದನೆ ಕಡಿಮೆ ಮಾಡಲಾಗಿತ್ತು. ಕೇಳಿದರೆ, “ನಿಮಗೆ ಬರುತ್ತಿರುವ ಸಂಬಳ ಬರುತ್ತಿದೆಯಲ್ಲಾ ಸುಮ್ಮನೆ ಕೆಲಸ ಮಾಡಿ” ಎಂದು ಆಡಳಿತ ಮಂಡಳಿ ಹೇಳುತ್ತಿತ್ತು. 2014ರಲ್ಲಿ ಸರಿಯಾಗಿ ಸಂಬಳ ಕೊಡದ ಸ್ಥಿತಿ ನಿರ್ಮಾಣವಾಯಿತು. ಅಲ್ಲಿಂದ ಈಚೆಗೇ ಕಂಪೆನಿ ಒಳಗಿನ ಹಣಕಾಸು ಸ್ಥಿತಿ ನೌಕರರಿಗೆ ಗೊತ್ತಾಗಿದ್ದು. ಕಂಪೆನಿಯನ್ನು ಹಳ್ಳಹಿಡಸಲು ಸ್ಥಳೀಯ ಆಡಳಿತ ಮಂಡಳಿ ಸದಸ್ಯರೂ ಕಾರಣ. ಇಂದು ಅವರೆಲ್ಲಾ ಕಂಪೆನಿಯನ್ನೇ ಬಿಟ್ಟು ನಾಪತ್ತೆಯಾಗಿದ್ದಾರೆ” ಎಂಬುದು ಅವರ ದೂರು.

ಫಾಲ್ಕನ್‌ ಪಾಲುದಾರಿಕೆ:

  • ಎಡಿಲ್ವಿಸ್ ಕಂಪೆನಿ = 1,251 ಕೋಟಿ
  • ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ = 71 ಕೋಟಿ
  • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ = 59 ಕೋಟಿ
  • ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ = 25 ಕೋಟಿ
  • ಕಂಪೆನಿಯ ಒಟ್ಟು ಮೌಲ್ಯ= 1,407 ಕೋಟಿ

“ಕೈಗಾರಿಕಾ ಸಚಿವರು ಹಾಗೂ ಮುಖ್ಯಮಂತ್ರಿಗಳು ಸ್ವಲ್ಪ ಗಮನ ಹರಿಸಿದರೂ ಸಾಕು ಈ ಸಮಸ್ಯೆ ಪರಿಹಾರವಾಗುತ್ತದೆ. ಕಂಪೆನಿಯನ್ನು ವಹಿಸಿಕೊಂಡು ಕಾರ್ಖಾನೆ ಪುನರಾರಂಭ ಮಾಡಲು ಸಿಯಟ್‌, ಅಪೋಲೊ, ಬ್ರಿಡ್ಜ್‌ಸ್ಟೋನ್‌, ಟಿವಿಎಸ್‌, ಜೆಕೆ ಟೈರ್ಸ್‌ ಮೊದಲಾದ ಕಂಪೆನಿಗಳ ಆಸಕ್ತಿ ತೋರಿವೆ. ರೂಯಿಯಾ ಗ್ರೂಪ್‌ನಿಂದ ಕ್ಲಿಯರೆನ್ಸ್‌ ಸಿಕ್ಕರೆ ಯಾವುದಾದರೂ ಕಂಪೆನಿ ಕಾರ್ಖಾನೆಯನ್ನು ವಹಿಸಿಕೊಳ್ಳುತ್ತದೆ. ಇದಕ್ಕೆ ಸರಕಾರ ಮಧ್ಯಪ್ರವೇಶ ಮಾಡಬೇಕು. ಸರಕಾರ ಮಧ್ಯ ಪ್ರವೇಶಿದರೆ ಈ ಸಮಸ್ಯೆ ಪರಿಹಾರ ಕಾಣುತ್ತದೆ” ಎನ್ನುತ್ತಾರೆ ಆನಂದ್‌.

ಹೂಡಿಕೆ ಉತ್ತೇಜನಕ್ಕಾಗಿಯೇ ನೂರಾರು ಕೋಟಿ ಖರ್ಚು ಮಾಡಿ ಸಮಾವೇಶ ನಡೆಸುವ ಕೈಗಾರಿಕಾ ಇಲಾಖೆ ನಮ್ಮಲ್ಲಿರುವ ಕೈಗಾರಿಕೆಗಳ ನಿರ್ವಹಣೆ ಕಡೆಗೆ ಗಮನ ಹರಿಸಲು ಅಸಡ್ಡೆ ತೋರುತ್ತಿದೆ. ಕಂಪೆನಿಗಳ ಆಡಳಿತ ಮಂಡಳಿಗಳ ಅವ್ಯವಸ್ಥೆಯಿಂದ ನಷ್ಟ ತೋರಿಸುತ್ತಿರುವ ಕಾರ್ಖಾನೆಗಳ ಮೇಲೆ ನಿಗಾ ವಹಿಸಿ, ಅಲ್ಲಿನ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಮಧ್ಯ ಪ್ರವೇಶಿಸಬೇಕು. ಇಲ್ಲವಾದರೆ ಫಾಲ್ಕನ್‌ ಕಂಪೆನಿಯಂತೆ ಇನ್ನಷ್ಟು ಕಂಪೆನಿಗಳು ಕಾನೂನು ಬಾಹಿರವಾಗಿಯೇ ಬೀಗಮುದ್ರೆ ಹಾಕಿ ಕಾರ್ಮಿಕರನ್ನು ಬೀದಿಗೆ ದೂಡುವ ದಿನಗಳು ದೂರವಿಲ್ಲ.

ಫಾಲ್ಕನ್‌ ಕಾರ್ಖಾನೆಯ ಕಾರ್ಮಿಕರ ಸಮಸ್ಯೆಯ ಬಗ್ಗೆ ನನಗೆ ಸದ್ಯ ಮಾಹಿತಿ ಇಲ್ಲ. ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದು ಕಾರ್ಮಿಕರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ.
- ವೆಂಕಟರಮಣಪ್ಪ, ಕಾರ್ಮಿಕ ಸಚಿವ