ಕುಮಾರಸ್ವಾಮಿ ಕಣ್ಣೀರು; ರಾಜಕೀಯ ನಾಟಕದಲ್ಲಿ ಜನ ಮರುಳೋ, ಜಾತ್ರೆಯೇ ಮರುಳೋ!
COVER STORY

ಕುಮಾರಸ್ವಾಮಿ ಕಣ್ಣೀರು; ರಾಜಕೀಯ ನಾಟಕದಲ್ಲಿ ಜನ ಮರುಳೋ, ಜಾತ್ರೆಯೇ ಮರುಳೋ!

ಕುಮಾರಸ್ವಾಮಿ ಕಣ್ಣೀರು ಹಾಕುವುದೇನೂ ಹೊಸದಲ್ಲ. ಚುನಾವಣೆ ಸಮಯದಲ್ಲಿ ‘ನನ್ನನ್ನು ಗೆಲ್ಲಿಸಿ’ ಎಂದು ಕಣ್ಣೀರು ಹಾಕಿದ್ದ ಕುಮಾರಸ್ವಾಮಿ, ಈಗ ಪಕ್ಷಕ್ಕಾಗಿ ಕಣ್ಣೀರು ಹಾಕಿದ್ದಾರೆ.

‘ಪ್ರೀತಿ ಮತ್ತು ಯುದ್ಧದಲ್ಲಿ ಯಾವುದೂ ತಪ್ಪಲ್ಲ’ ಎಂಬ ಮಾತಿದೆ. ಈ ಮಾತಿಗೆ ಈಗ ‘ರಾಜಕೀಯ’ವನ್ನೂ ಸೇರಿಸಿಕೊಂಡಿರುವ ರಾಜಕಾರಣಿಗಳು, ‘ರಾಜಕೀಯದಲ್ಲಿ ಯಾವುದೂ ತಪ್ಪಲ್ಲ’ ಎಂಬ ಮಾತನ್ನು ಗಟ್ಟಿಯಾಗಿಸಲು ಮುಂದಾಗಿದ್ದಾರೆ. ತಮ್ಮ ರಾಜಕೀಯ ಉಳಿವಿಗಾಗಿ ವೇದಿಕೆ ಮೇಲೆ ಕಣ್ಣೀರು ಹಾಕುವುದರಿಂದ ಹಿಡಿದು, ಎದುರಾಳಿಯನ್ನು ಮುಗಿಸುವವರೆಗೂ, ‘ಇಲ್ಲಿ ಯಾವುದೂ ತಪ್ಪಲ್ಲ’ ಎಂದು ಸಾಧಿಸಲು ಹೊರಟಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ನ ಬೂತ್‌ ಘಟಕಗಳ ಕಾರ್ಯಕರ್ತರ ಸಮಾವೇಶದಲ್ಲಿ ಕುಮಾರಸ್ವಾಮಿ, “ಜನ ನನ್ನ ಮೇಲೆ ತೋರುವ ಪ್ರೀತಿಯನ್ನು ಪಕ್ಷದ ಮೇಲೆ ತೋರುತ್ತಿಲ್ಲ. ವಿಷಕಂಠನಾಗಿ ನೋವನ್ನು ನಾನೇ ನುಂಗುತ್ತಿದ್ದೇನೆ. ಮುಖ್ಯಮಂತ್ರಿಯಾಗಿ ನಾನು ಸಂತೋಷವಾಗಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

ಅಂದಹಾಗೆ ಕುಮಾರಸ್ವಾಮಿ ಹೀಗೆ ವೇದಿಕೆ ಮೇಲೆ ಕಣ್ಣೀರು ಹಾಕುತ್ತಿರುವುದು ಇದೇ ಮೊದಲೇನಲ್ಲ. ಚುನಾವಣೆಗೂ ಮುನ್ನಾ “ಜನತೆ ನನ್ನನ್ನು ಗೆಲ್ಲಿಸದಿದ್ದರೆ ಪ್ರಾಣ ಬಿಡುತ್ತೇನೆ” ಎಂದಿದ್ದ ಕುಮಾರಸ್ವಾಮಿ, ಪ್ರಚಾರ ಸಭೆಗಳಲ್ಲಿ ಕಣ್ಣೀರಿಟ್ಟು ಜನರ ಮನವೊಲಿಸಲು ಯಶಸ್ವಿಯಾಗಿದ್ದರು. ಹಿಂದೆ ತಮ್ಮನ್ನು ಗೆಲ್ಲಿಸಲು ಜನರಲ್ಲಿ ಮನವಿ ಮಾಡುತ್ತಾ ಕಣ್ಣೀರಿಟ್ಟಿದ್ದ ಕುಮಾರಸ್ವಾಮಿ ಈಗ ಪಕ್ಷಕ್ಕಾಗಿ ಕಣ್ಣೀರು ಹಾಕಿದ್ದಾರೆ.

ಈ ಹಿಂದೆ ಹಲವು ಸಂದರ್ಭಗಳಲ್ಲಿ ಹೇಳಿದ್ದ ಮಾತನ್ನೇ ಮತ್ತೆ ಹೇಳಿರುವ ಕುಮಾರಸ್ವಾಮಿ, “ನಮ್ಮ ತಂದೆ ತಾಯಿ ಮಾಡಿದ ಪೂಜೆಯ ಫಲದಿಂದ ನನಗೆ ಅಧಿಕಾರ ಸಿಕ್ಕಿದೆ. ಮನಸ್ಸು ಮಾಡಿದರೆ ಎರಡೇ ಗಂಟೆಯಲ್ಲಿ ಅಧಿಕಾರದಿಂದ ಕೆಳಗಿಳಿಯುತ್ತೇನೆ” ಎನ್ನುವ ಮೂಲಕ ಸಮ್ಮಿಶ್ರ ಸರಕಾರದಲ್ಲಿನ ತಮ್ಮ ‘ನೋವ’ನ್ನು ಹೊರಹಾಕಿದ್ದಾರೆ.

ಕಣ್ಣೀರು ಹಾಕುವುದರಲ್ಲಿ ರಾಜಕಾರಣಿಗಳೇನೂ ಹಿಂದೆ ಉಳಿದಿಲ್ಲ. ಕುಮಾರಸ್ವಾಮಿಯಷ್ಟೇ ಅಲ್ಲ ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಕೂಡಾ ಸಾಕಷ್ಟು ವೇದಿಕೆಗಳಲ್ಲಿ ಕಣ್ಣೀರು ಹಾಕಿ ಜನರ ಅನುಕಂಪ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ, ಎಲ್ಲಾ ಸಂದರ್ಭಗಳಲ್ಲೂ ರಾಜಕಾರಣಿಗಳ ಕಣ್ಣೀರು ಅನುಕಂಪವಾಗಿ ಬದಲಾಗುತ್ತದೆ ಎಂಬ ವಿಶ್ವಾಸವಿಲ್ಲ.

ರಾಜಕಾರಣಿಗಳ ಕಣ್ಣೀರು ಪ್ರಾಮಾಣಿಕವಾದುದಲ್ಲ ಎಂದು ಜನ ತೀರ್ಮಾನಿಸಿದ್ದಾರೆ. ತಮ್ಮ ಅಸಹಾಯಕತೆಯನ್ನು ತೋರಿಸಿಕೊಳ್ಳಲು ರಾಜಕಾರಣಿಗಳು ಕಣ್ಣೀರು ಹಾಕುತ್ತಾರೆ. ಅಧಿಕಾರ ಗಳಿಸುವ ಉದ್ದೇಶದಿಂದ ರಾಜಕಾರಣಿಗಳು ಕಣ್ಣೀರು ಹಾಕುತ್ತಾರೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ.
- ಮಹದೇವ ಪ್ರಕಾಶ್‌, ಹಿರಿಯ ರಾಜಕೀಯ ವಿಶ್ಲೇಷಕ

ಸಂದರ್ಭ ನೋಡಿಕೊಂಡು ಕಣ್ಣೀರು ಹಾಕುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು ಎನ್ನುತ್ತಾರೆ ರಾಮನಗರ ಭಾಗದ ಜನ. “ಎಲ್ಲಿ ಕಣ್ಣೀರು ಹಾಕಬೇಕು, ಹೇಗೆ ಕಣ್ಣೀರು ಹಾಕಬೇಕು, ಎಷ್ಟು ಕಣ್ಣೀರು ಹಾಕಬೇಕು” ಎಂಬುದು ಕುಮಾರಸ್ವಾಮಿ ಅವರಷ್ಟು ಚೆನ್ನಾಗಿ ಬೇರೆ ರಾಜಕಾರಣಿಗಳಿಗೆ ಗೊತ್ತಿಲ್ಲ ಎನ್ನುತ್ತಾರೆ ಈ ಭಾಗದವರು.

“ಕಳೆದ ಚುನಾವಣೆಯ ಸಂದರ್ಭದಲ್ಲಿ ರಾಮನಗರದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಮಾತಿನ ನಡುವೆ ಒಂದು ಅಜ್ಜಿಯ ಕಡೆಗೆ ಕೈ ತೋರಿ, ‘ಆ ನನ್ನ ತಾಯಿ ಬಿಸಿಲಿನಲ್ಲಿ ನಿಂತು ನನ್ನ ಮಾತು ಕೇಳುತ್ತಿದ್ದಾಳೆ. ಆ ತಾಯಿಯ ಕಷ್ಟ ಬಗೆಹರಿಸಲಾದರೂ ನನಗೆ ಅಧಿಕಾರ ಕೊಡಿ’ ಎಂದು ಕಣ್ಣೀರು ಹಾಕಿದ್ದರು. ಅವರ ಆ ಮಾತು ಮತ್ತು ಕಣ್ಣೀರಿಗೆ ಇಡೀ ಸಭೆಯಲ್ಲಿದ್ದ ಜನ ಒಮ್ಮೆಗೇ ಮರುಳಾಗಿದ್ದರು” ಎಂದು ಕುಮಾರಸ್ವಾಮಿ ಕಣ್ಣೀರಿನ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ ರಾಮನಗರದ ಶಿಕ್ಷಕರೊಬ್ಬರು.

“ಕುಮಾರಸ್ವಾಮಿ ಹಲವು ಸಂದರ್ಭದಲ್ಲಿ ಕಣ್ಣೀರು ಹಾಕುವ ಮೂಲಕ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿಕೊಳ್ಳುತ್ತಾರೆ. ನಾಯಕತ್ವದ ವಿಚಾರಕ್ಕೆ ಬಂದಾಗ ಎಲ್ಲವನ್ನೂ ನಿಭಾಯಿಸುವುದು ಮುಖ್ಯ. ಆದರೆ, ಜನರ ಮುಂದೆ ಕಣ್ಣೀರು ಹಾಕುವ ಮೂಲಕ ಜನಸಮೂಹವನ್ನು ಮರುಳು ಮಾಡಿ ಅವರ ಅನುಕಂಪ ಗಿಟ್ಟಿಸುವ ನಾಟಕವನ್ನು ರಾಜಕಾರಣಿಗಳಿಗೆ ಹೊಸದೇನೂ ಅಲ್ಲ. ಕುಮಾರಸ್ವಾಮಿ ಈ ಕಣ್ಣೀರಿನ ನಾಟಕವನ್ನು ಹೆಚ್ಚಾಗಿ ಪ್ರದರ್ಶಿಸುತ್ತಿದ್ದಾರೆ” ಎನ್ನುತ್ತಾರೆ ಅವರು.

ಕಣ್ಣೀರು ರಾಜಕಾರಣಿಗಳಿಗೆ ಅನುಕೂಲವಾಗುವಂತೆ ಮುಳುವೂ ಆಗಬಹುದು. ಅತಿಯಾದ ರಾಜಕೀಯ ನಾಟಕವನ್ನೂ ಜನ ಹೆಚ್ಚು ಪ್ರೋತ್ಸಾಹಿಸುವುದಿಲ್ಲ ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್‌.

“ನಮ್ಮಲ್ಲಿ ಕಣ್ಣೀರು ಹಾಕುವ ರಾಜಕಾರಣಿಗಳ ಪೈಕಿ ಎಚ್‌.ಡಿ. ದೇವೇಗೌಡ ಮೊದಲಿಗರು. ಅವರು ಅತಿಯಾಗಿ ಕಣ್ಣೀರು ಹಾಕಿದ ಸಂದರ್ಭದಲ್ಲಿ ಜನ ಅವರನ್ನು ತಿರಸ್ಕರಿಸಿದ್ದಾರೆ. 1999ರಲ್ಲಿ ಇಡೀ ದೇವೇಗೌಡ ಕುಟುಂಬ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಹೀಗಾಗಿ ಅತಿಯಾಗಿ ಕಣ್ಣೀರು ಹಾಕಿದರೂ ಅದು ಕೈಕೊಡಬಹುದು” ಎಂಬುದು ಅವರ ಮಾತು.

“ಜನರಿಗೆ ರಾಜಕಾರಣಿಗಳ ನಡೆಗಳೆಲ್ಲವೂ ಅರ್ಥವಾಗುತ್ತವೆ. ಜನ ಉಳಿದೆಲ್ಲ ಕ್ಷೇತ್ರದವರಿಗಿಂತ ರಾಜಕಾರಣಿಗಳನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ರಾಜಕಾರಣಿಗಳ ನಾಟಕ ಜನರಿಗೆ ಬಹುಬೇಗ ಅರ್ಥವಾಗುತ್ತದೆ. ಆದರೆ, ಈ ರಾಜಕೀಯದ ನಾಟಕವನ್ನೂ ಮೀರಿ ಕೆಲವೊಮ್ಮೆ ರಾಜಕಾರಣಿಗಳು ಕಣ್ಣೀರು ಹಾಕುತ್ತಾರೆ ಅದು ಅವರ ಅಸಹಾಯಕತೆಯ ಪ್ರದರ್ಶನವಷ್ಟೆ” ಎನ್ನುತ್ತಾರೆ ಅವರು.

“ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕೂಡಾ ಕಣ್ಣೀರು ಹಾಕಿದ್ದರು. ಅಧಿಕಾರ ಕೈ ತಪ್ಪಿದ ಸಂದರ್ಭದಲ್ಲಿ ಹಾಗೂ ಬಿಜೆಪಿಯಿಂದ ಹೊರಬಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ರಾಜಕಾರಣಿಗಳೂ ಮನುಷ್ಯರಾಗಿರುವುದರಿಂದ ನೋವನ್ನು ವ್ಯಕ್ತಪಡಿಸಲು ಕಣ್ಣೀರು ಹಾಕುವುದು ಸ್ವಾಭಾವಿಕ. ಆದರೆ, ಜನ ಇತರೆ ಕಣ್ಣೀರಿನಂತೆ ರಾಜಕಾರಣಿಗಳ ಕಣ್ಣೀರನ್ನು ನೋಡುವುದಿಲ್ಲ. ರಾಜಕಾರಣಿಗಳದ್ದು ಅಪ್ರಾಮಾಣಿಕ ಕಣ್ಣೀರು ಎಂದು ಜನ ಭಾವಿಸುತ್ತಾರೆ” ಎಂಬುದು ಅವರ ಅಭಿಪ್ರಾಯ.

ಚುನಾವಣೆಗೆ ಮುನ್ನಾ ಮತ ನೀಡಿ ಎಂದು ಕಣ್ಣೀರು ಹಾಕುವುದು, ಸೋತಾಗ ಜನ ತಮ್ಮನ್ನು ಸೋಲಿಸಿದರು ಎಂದು ಕಣ್ಣೀರು ಹಾಕುವುದು ಸಾಮಾನ್ಯ. ಆದರೆ, ಸಮ್ಮಿಶ್ರ ಸರಕಾರದ ಅಡ್ಡಕತ್ತರಿಯಲ್ಲಿ ಸಿಲುಕಿರುವ ಕುಮಾರಸ್ವಾಮಿ ನಾಡಿನ ಮುಖ್ಯಮಂತ್ರಿ ಸ್ಥಾನದಲ್ಲಿದ್ದೂ ಕಣ್ಣೀರು ಹಾಕುತ್ತಿದ್ದಾರೆ.

“ನಾನು ವಿಷಕಂಠನಾಗಿ ವಿಷವನ್ನು ನನ್ನನ್ನೇ ಅದುಮಿಟ್ಟುಕೊಳ್ಳುತ್ತಿದ್ದೇನೆ” ಎಂದು ಕುಮಾರಸ್ವಾಮಿ ಹೇಳಿರುವುದು ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತಿದೆ. ಬೇಷರತ್‌ ಎಂಬ ಮಾತಿನಲ್ಲಿ ಜೆಡಿಎಸ್‌ಗೆ ಸರಕಾರ ರಚಿಸಲು ಬೆಂಬಲ ಕೊಟ್ಟ ಕಾಂಗ್ರೆಸ್‌ ಎಲ್ಲವನ್ನೂ ಕುಮಾರಸ್ವಾಮಿ ಕೈಗೆ ಕೊಟ್ಟು ಸುಮ್ಮನೆ ಕುಳಿತಿಲ್ಲ ಎಂಬುದು ಕುಮಾರಸ್ವಾಮಿ ಮಾತಿನಿಂದಲೇ ವ್ಯಕ್ತವಾಗುತ್ತಿದೆ.

ಅಧಿಕಾರ ಸಿಗುವ ಮುನ್ನಾ ಅಧಿಕಾರ ಕೊಡಿ ಎಂದು ಕಣ್ಣೀರು ಹಾಕಿದ ಹಾಗೂ ಅಧಿಕಾರ ಸಿಕ್ಕಮೇಲೆ ಯಾವುದೇ ಕ್ಷಣದಲ್ಲಾದರೂ ಅಧಿಕಾರ ಬಿಡುವುದಾಗಿ ಹೇಳುತ್ತಾ ಕಣ್ಣೀರು ಹಾಕುತ್ತಿರುವ ಕುಮಾರಸ್ವಾಮಿ ಈ ಮೂಲಕ ಜೆಡಿಎಸ್‌ ಪಕ್ಷದ ಬಗ್ಗೆ ಜನರ ಅನುಕಂಪ ಗಿಟ್ಟಿಸಲು ಮುಂದಾಗಿರುವಂತಿದೆ.

“ಜನ ನಮಗೆ ಪೂರ್ಣ ಬಹುಮತ ಕೊಡಲಿಲ್ಲ” ಎಂದು ಈಗಾಗಲೇ ಸಾಕಷ್ಟು ಬಾರಿ ಹೇಳಿರುವ ಕುಮಾರಸ್ವಾಮಿ, ವೇದಿಕೆ ಸಿಕ್ಕಾಗೆಲ್ಲಾ ಈ ಮಾತನ್ನು ಪುನರುಚ್ಛರಿಸುತ್ತಲೇ ಇದ್ದಾರೆ. ಆದರೆ, ಈ ಬಾರಿ ಮಾತ್ರ ಕುಮಾರಸ್ವಾಮಿ ಈ ಮಾತಿನ ಜತೆಗೆ ಕಣ್ಣೀರನ್ನೂ ಬೆರೆಸಿದ್ದಾರೆ. ಈ ಕಣ್ಣೀರು ಜೆಡಿಎಸ್‌ ಪಾಲಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಗೊತ್ತಾಗಲು ಮತ್ತೊಂದು ಚುನಾವಣೆವರೆಗೂ ಕಾಯಲೇಬೇಕು.