samachara
www.samachara.com
‘ಸ್ವಾಮಿನಾಥನ್‌ ವರದಿ’ ಎಂಬ ರೈತ ಸಂಜೀವಿನಿ; ಸಮಗ್ರ ಅನುಷ್ಠಾನಕ್ಕೆ ಬೇಕಿದೆ ಇಚ್ಛಾಶಕ್ತಿ
COVER STORY

‘ಸ್ವಾಮಿನಾಥನ್‌ ವರದಿ’ ಎಂಬ ರೈತ ಸಂಜೀವಿನಿ; ಸಮಗ್ರ ಅನುಷ್ಠಾನಕ್ಕೆ ಬೇಕಿದೆ ಇಚ್ಛಾಶಕ್ತಿ

ಕೃಷಿ ಬಗ್ಗೆ ಮಾತು ಬಂದಾಗಲೆಲ್ಲಾ ಪ್ರಸ್ತಾಪವಾಗುವ ಸ್ವಾಮಿನಾಥನ್‌ ವರದಿಯಲ್ಲಿ ಏನಿದೆ? ಆ ವರದಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಹೇಗೆ ಎಂಬ ಬಗ್ಗೆ ನಮ್ಮ ರಾಜಕಾರಣಿಗಳು ಗಂಭೀರವಾಗಿ ಚಿಂತಿಸಿದಂತಿಲ್ಲ.

ರೈತರ ಕಷ್ಟಗಳು, ಕೃಷಿ ಸಮಸ್ಯೆಗಳ ಮಾತು ಬಂದಾಗಲೆಲ್ಲಾ ಮುನ್ನೆಲೆಗೆ ಬರುವುದು ಸ್ವಾಮಿನಾಥನ್‌ ವರದಿ. ಸಾಮಾನ್ಯ ಪ್ರತಿಭಟನೆಗಳಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನಮಂತ್ರಿವರೆಗೆ ನಿಯೋಗ ಹೋಗುವ ರೈತ ಮುಖಂಡರು ಪ್ರಸ್ತಾಪಿಸುವುದು ಇದೇ ವರದಿಯನ್ನು.

ಭಾರತದ ಹಸಿರು ಕ್ರಾಂತಿಯ ಹರಿಕಾರ ಎನಿಸಿದ ಎಂ. ಎಸ್‌. ಸ್ವಾಮಿನಾಥನ್‌ ಭಾರತದ ಕೃಷಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ದೇಶದ ಕೃಷಿ ಸಮಸ್ಯೆ ಸಾಕಷ್ಟು ಪರಿಹಾರಗಳಿವೆ. ಪ್ರತಿ ಚುನಾವಣೆಗಳಲ್ಲೂ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವ ಎಲ್ಲಾ ಪಕ್ಷಗಳ ರಾಜಕಾರಣಿಗಳೂ ಸ್ವಾಮಿನಾಥನ್‌ ವರದಿ ಜಾರಿ ಮಾಡಲು ಬೇಕಾದ ಬದ್ಧತೆ ತೋರುತ್ತಿಲ್ಲ.

ರೈತರ ಜಮೀನಿಗೆ ನೀರು ಹಾಯಿಸುವ ವ್ಯವಸ್ಥೆಯಿಂದ ಹಿಡಿದು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವವರೆಗೂ ಭಾರತದಲ್ಲಿ ಯಾವುದೂ ಇನ್ನೂ ವ್ಯವಸ್ಥಿತವಾಗಿಲ್ಲ. ಹೀಗಾಗಿ ಸ್ವಾಮಿನಾಥನ್‌ ವರದಿಯ ಜಾರಿ ಎಂಬುದು ದೇಶದ ರೈತರ ಪಾಲಿಗೆ ಹಗಲುಗನಸಾಗಿಯೇ ಉಳಿದುಕೊಂಡಿದೆ.

ಇತ್ತೀಚೆಗೆ ಕೇಂದ್ರ ಸರಕಾರವು ಸ್ವಾಮಿನಾಥನ್‌ ವರದಿ ಹೇಳಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ಹೇಳಿಕೊಂಡಿತ್ತು. ಆದರೆ, ವರದಿಯ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಆಗಿಲ್ಲ ಎಂದು ಖುದ್ದು ಸ್ವಾಮಿನಾಥನ್‌ ಅವರೇ ಹೇಳಿದ್ದರು!

ಹೀಗೆ ರಾಜಕಾರಣಿಗಳು ಸ್ವಾಮಿನಾಥನ್‌ ವರದಿಯನ್ನಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಹಾಗೂ ಗೆದ್ದು ಬಂದು ಅಧಿಕಾರ ಪಡೆದ ನಂತರವೂ ರೈತರಿಗೆ ಮೋಸ ಮಾಡುವ ಕೆಲಸ ಮುಂದುವರಿಸಿದ್ದಾರೆ. ಸ್ವಾಮಿನಾಥನ್‌ ವರದಿ ಎಂಬುದು ರೈತರನ್ನು ಮರಳು ಮಾಡಲು ಇರುವ ಸುಲಭ ಸಾಧನ ಎಂದು ರಾಜಕಾರಣಿಗಳು ಭಾವಿಸಿರುವಂತಿದೆ.

ಇದೆಲ್ಲದರ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಧುನಿಕ ಕೃಷಿ, ಇಸ್ರೇಲ್‌ ಮಾದರಿ ಕೃಷಿ, ರೈತರಿಗೆ ಶಾಶ್ವತ ಪರಿಹಾರ ಯೋಜನೆಗಳ ಮಾತನಾಡುತ್ತಿದ್ದಾರೆ. ಇದರ ಮುಂದುವರಿಕೆ ಎಂಬಂತೆ ಶುಕ್ರವಾರ ಎಂ.ಎಸ್‌. ಸ್ವಾಮಿನಾಥನ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ ಕುಮಾರಸ್ವಾಮಿ ಪರಿಷ್ಕೃತ ಕೃಷಿ ನೀತಿ ಜಾರಿಗೆ ತರುವುದಾಗಿ ಹೇಳಿದ್ದಾರೆ.

ಸ್ವಾಮಿನಾಥನ್‌ ವರದಿ ಹಾಗೂ ಸ್ವಾಮಿನಾಥನ್ ಅವರು ಈಗ ನೀಡಿದ ಸಲಹೆಗಳ ಆಧಾರದ ಮೇಲೆ 2006 ಕೃಷಿ ನೀತಿಯನ್ನು ಮತ್ತೆ ಪರಿಷ್ಕರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ತಮ್ಮ ಸರಕಾರದ ಆದ್ಯತೆ ಎಂದಿದ್ದಾರೆ ಎಚ್‌ಡಿಕೆ.

ಏನಿದು ಸ್ವಾಮಿನಾಥನ್‌ ವರದಿ?

ಕೃಷಿ ಸುಧಾರಣೆಯ ವಿಷಯಕ್ಕೆ ಬಂದಾಗಲೆಲ್ಲಾ ಪ್ರಸ್ತಾಪವಾಗುವ ಸ್ವಾಮಿನಾಥನ್‌ ವರದಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ, ಸುಸ್ಥಿರ ಕೃಷಿ, ನೀರಾವರಿ ವ್ಯವಸ್ಥೆ, ಒಣಭೂಮಿ ಬೇಸಾಯ, ಕೃಷಿ ಉತ್ತೇಜನ ಯೋಜನೆಗಳ ಬಗ್ಗೆ ಶಿಫಾರಸುಗಳಿವೆ.

ಒಂದು ದಶಕದ ಹಿಂದೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸುಧಾರಣೆಯ ಉದ್ದೇಶದಿಂದ ಕೇಂದ್ರ ಸರಕಾರ 2004ರ ನವೆಂಬರ್‌ 18ರಂದು ಪ್ರೊ. ಎಂ.ಎಸ್‌. ಸ್ವಾಮಿನಾಥನ್‌ ಅವರ ಅಧ್ಯಕ್ಷತೆಯಲ್ಲಿ ರೈತರಿಗಾಗಿ ರಾಷ್ಟ್ರೀಯ ಆಯೋಗವನ್ನು (ನ್ಯಾಷನಲ್‌ ಕಮಿಷನ್‌ ಆನ್‌ ಫಾರ್ಮರ್ಸ್‌) ರಚಿಸಿತು.

ಸ್ವಾಮಿನಾಥನ್‌ ಆಯೋಗವು 2004ರ ಡಿಸೆಂಬರ್, 2005ರ ಆಗಸ್ಟ್‌, ಡಿಸೆಂಬರ್‌ ಮತ್ತು 2006ರ ಏಪ್ರಿಲ್‌ನಲ್ಲಿ ಹಂತ ಹಂತವಾಗಿ ತನ್ನ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿತ್ತು. 2006ರ ಅಕ್ಟೋಬರ್‌ 4ರಂದು ತನ್ನ ಅಂತಿಮ ವರದಿಯನ್ನು ಆಯೋಗ ಕೇಂದ್ರ ಸರಕಾರಕ್ಕೆ ಸಲ್ಲಿಸಿತು. 2007ರಲ್ಲಿ ಈ ವರದಿಯನ್ನು ಅಂಗೀಕರಿಸಿದ ಕೇಂದ್ರ ಸರಕಾರ ಆದಷ್ಟು ಬೇಗ ಈ ವರದಿಯ ಪ್ರಮುಖ ಅಂಶಗಳನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿತ್ತು. ಆದರೆ, ಇದಿನ್ನೂ ಸಾಧ್ಯವಾಗಿಲ್ಲ.

ಸ್ವಾಮಿನಾಥನ್‌ ವರದಿ ರಾಜಕಾರಣಿಗಳಿಗೆ ಚುನಾವಣಾ ಸರಕಾಗಿದೆ. ಹೀಗಾಗಿ ಯಾವ ಸರಕಾರವೂ ಕೂಡಾ ಸ್ವಾಮಿನಾಥನ್‌ ವರದಿ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಸ್ವಾಮಿನಾಥನ್‌ ವರದಿಯ ಹೆಸರಲ್ಲಿ ಸರಕಾರಗಳು ರೈತರನ್ನು ವಂಚಿಸುತ್ತಿವೆ.
- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ವರದಿಯ ಪ್ರಮುಖ ಶಿಫಾರಸುಗಳು:

 • ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಕೃಷಿಯನ್ನು ಸೇರಿಸಬೇಕು
 • ಭೂಮಿಯ ಹಂಚಿಕೆ ಸರಿಯಾಗಿ ಆಗಬೇಕು.
 • ಉತ್ತಮ ಇಳುವರಿಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸುವುದನ್ನು ನಿಯಂತ್ರಿಸಬೇಕು
 • ವ್ಯವಸ್ಥಿತ ಭೂ ಹಂಚಿಕೆ ಹಾಗೂ ನಿರ್ವಹಣೆಗಾಗಿ ‘ರಾಷ್ಟ್ರೀಯ ಭೂ ಬಳಕೆ ಸಲಹಾ ಸೇವೆ’ಯನ್ನು ಆರಂಭಿಸಬೇಕು
 • ಎಲ್ಲಾ ಕೃಷಿ ಭೂಮಿಗೂ ವ್ಯವಸ್ಥಿತವಾಗಿ ನೀರನ್ನು ಒದಗಿಸುವಂಥ ನೀರಾವರಿ ಯೋಜನೆಗಳನ್ನು ರೂಪಿಸಬೇಕು
 • ಮಳೆ ನೀರು ಸಂಗ್ರಹಣೆ ಹಾಗೂ ಬಳಕೆ ಮತ್ತು ಅಂತರ್ಜಲ ಮರುಪೂರಣವನ್ನು ಕಡ್ಡಾಯಗೊಳಿಸಬೇಕು.
 • ಅಂತರ್ಜಲ ಮರುಪೂರಣಕ್ಕಾಗಿ ಕನಿಷ್ಠ 10 ಲಕ್ಷ ಬಾವಿಗಳ ಮೂಲಕ ಮಳೆ ನೀರನ್ನು ತುಂಬಿಸಬೇಕು. (ಮಿಲಿಯನ್‌ ವೆಲ್ಸ್‌ ರಿಚಾರ್ಜ್‌ ಪೋಗ್ರಾಮ್‌)
 • ಸಣ್ಣ ನೀರಾವರಿ ಯೋಜನೆಗಳಲ್ಲಿ ಅಂತರ್ಜಲ ಮರುಪೂರಣಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರಬೇಕು.
 • ಕೃಷಿ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿಸಲು ಕೃಷಿ ವಲಯಕ್ಕೆ ಹೆಚ್ಚಿನ ಹೂಡಿಕೆಯನ್ನು ಸರಕಾರ ಮಾಡಬೇಕು.
 • ಆಯಾ ಪ್ರದೇಶಗಳಿಗೆ ಅನುಗುಣವಾಗಿ ತಳಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು.
 • ಭೂ ಅಭಿವೃದ್ಧಿ, ನಾಲೆ ವ್ಯವಸ್ಥೆ, ನೀರನ್ನು ಸಂರಕ್ಷಿಸುವ ವ್ಯವಸ್ಥೆ, ಕೃಷಿ ಸಂಶೋಧನೆಗಳು ಹಾಗೂ ಗ್ರಾಮೀಣ ಭಾಗದ ರಸ್ತೆ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಬೇಕು.
 • ಮಣ್ಣು ಪರೀಕ್ಷೆ ವ್ಯವಸ್ಥೆ ಸುಲಭವಾಗಿಸಬೇಕು. ಮಣ್ಣಿನ ಗುಣಮಟ್ಟ ವೃದ್ಧಿಗೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಣ್ಣಿನ ಆರೋಗ್ಯದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು.
 • ಬಡ ರೈತರು ಹಾಗೂ ಅಗತ್ಯವಿರುವ ರೈತರಿಗೆ ಸುಲಭವಾಗಿ ಸರಳ ಸಾಲ ಸಿಗುವಂತಾಗಬೇಕು.
 • ಸರ್ಕಾರದ ನೆರವಿನೊಂದಿಗೆ ರೈತರ ಬೆಳೆಗಳಿಗೆ ಶೇಕಡ 4ಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು.
 • ರೈತರ ಮರುಪಾವತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲವಸೂಲಿ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ರೈತರ ಸಾಲ ವಸೂಲಿಯನ್ನು ಮುಂದೂಡಬೇಕು.
 • ರೈತರ ಕಷ್ಟದ ಪರಿಸ್ಥಿತಿಯಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.
 • ರೈತರ ಅನುಕೂಲಕ್ಕಾಗಿ ‘ಕೃಷಿ ವಿಪತ್ತು ನಿಧಿ’ ಸ್ಥಾಪಿಸಬೇಕು.
 • ಜಂಟಿ ‘ಪಟ್ಟಾ’ ಜತೆಗೆ ರೈತ ಮಹಿಳೆಯರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಬೇಕು.
 • ಬೆಳೆ, ಸಾಲ ಹಾಗೂ ಆರೋಗ್ಯ ಒಳಗೊಂಡ ಏಕೀಕೃತ ವಿಮೆಯನ್ನು ರೈತರಿಗೆ ನೀಡಬೇಕು.
 • ‘ಗ್ರಾಮೀಣ ವಿಮೆ ಅಭಿವೃದ್ಧಿ ನಿಧಿ’ಯನ್ನು ಸ್ಥಾಪಿಸಬೇಕು.
 • ಬೆಳೆ ವಿಮೆಯನ್ನು ಎಲ್ಲಾ ಬೆಳೆಗಳಿಗೂ ವಿಸ್ತರಿಸಬೇಕು. ಬೆಳೆ ವಿಮೆಯ ಪ್ರೀಮಿಯಂ ಅನ್ನು ಕಡಿಮೆ ಮಾಡಬೇಕು.
 • ರೈತರ ಜೀವನ ಮಟ್ಟ ಸುಧಾರಣೆ ಹಾಗೂ ಕೃಷಿ ಉತ್ಪಾದಕತೆಯ ಹೆಚ್ಚಳಕ್ಕಾಗಿ ಸುಸ್ಥಿರ ಯೋಜನೆಗಳನ್ನು ಜಾರಿಗೆ ತರಬೇಕು. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
 • ಆಹಾರ ಭದ್ರತೆಗಾಗಿ ದೇಶದೆಲ್ಲೆಡೆ ಒಂದೇ ತೆರನಾದ ಹಂಚಿಕೆ ವ್ಯವಸ್ಥೆ ಜಾರಿಗೆ ತರಬೇಕು.
 • ರೈತರ ಆತ್ಮಹತ್ಯೆ ತಡೆಯಲು ರೈತರಿಗೆ ಆರ್ಥಿಕ ಹೊರೆಯಾಗದಂತೆ ತಡೆಯಬೇಕು. ರೈತ ಸ್ನೇಹಿಯಾದ ಕಿರು ಸಾಲ ಯೋಜನೆಗಳನ್ನು ಜಾರಿಗೆ ತರಬೇಕು.
 • ಬೆಳೆ ವಿಮೆಯ ಹಣ ಸಮರ್ಪಕವಾಗಿ ರೈತರಿಗೆ ಸೇರುವ ವ್ಯವಸ್ಥೆ ಬರಬೇಕು.
 • ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿರುವ ಪ್ರದೇಶಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಹಾಗೂ ಆತ್ಮಹತ್ಯೆ ಮನಸ್ಥಿತಿ ಲಕ್ಷಣಗಳನ್ನು ಗುರುತಿಸಲು ನೆರವಾಗುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು.
 • ಸ್ಥಳೀಯ ಜ್ಞಾನ ಪ್ರಸಾರಕ್ಕಾಗಿ ‘ಗ್ರಾಮ ಜ್ಞಾನ ಕೇಂದ್ರ’ಗಳನ್ನು ಆರಂಭಿಸಬೇಕು.
 • ರೈತರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಹಾಗೂ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರತಿ ರಾಜ್ಯದಲ್ಲೂ ‘ರೈತರ ಆಯೋಗ’ಗಳನ್ನು ರಚಿಸಬೇಕು.
 • ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂಥ ಮಾರುಕಟ್ಟೆ ವ್ಯವಸ್ಥೆ ರೂಪಿಸಬೇಕು.
 • ಕೃಷಿ ಉತ್ಪನ್ನದ ಅಂದಾಜು ಉತ್ಪಾದನಾ ಖರ್ಚಿನ ಮೇಲೆ ಕನಿಷ್ಠ ಶೇಕಡ 50ರಷ್ಟನ್ನು ಕನಿಷ್ಠ ಬೆಂಬಲ ಬೆಲೆ ಎಂದು ಘೋಷಿಸಬೇಕು.
 • ಎಪಿಎಂಸಿ ವ್ಯವಸ್ಥೆಯನ್ನು ಬಲಪಡಿಸಬೇಕು. ಕೃಷಿ ಉತ್ಪನ್ನಗಳ ಸಂಗ್ರಹಣೆಗೆ ಸೂಕ್ತ ಉಗ್ರಾಣ, ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಬೇಕು.
 • ರೈತರ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಸಿಗಲು ಗುಣಮಟ್ಟ ಶ್ರೇಣಿ, ಬ್ರಾಂಡ್‌, ಪ್ಯಾಕೇಜಿಂಗ್‌ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು.
 • ಕೃಷಿ ಕೂಲಿಕಾರ್ಮಿಕರ ಕೊರತೆ ನೀಗಿಸಲು ಕುಶಲ ಕೃಷಿ ಕಾರ್ಮಿಕರ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
 • ಗ್ರಾಮೀಣ ಭಾಗದ ಜನರಿಗೆ ಕೃಷಿ ಜತೆಗೆ ವ್ಯಾಪಾರ, ಹೋಟೆಲ್‌, ಸಾರಿಗೆ, ನಿರ್ಮಾಣ, ರಿಪೇರಿ – ಇನ್ನಿತರ ಕೆಲಸಗಳ ಬಗ್ಗೆಯೂ ತರಬೇತಿ ಕೊಡಿಸಬೇಕು.
 • ರೈತರ ತಲಾ ಆದಾಯವು ಸರಕಾರಿ ಸೇವೆಯಲ್ಲಿರುವವರ ಆದಾಯಕ್ಕೆ ಸಮೀಪದಲ್ಲಾದರೂ ಇರಬೇಕು.
 • ಕೃಷಿಯ ಜತೆಗೆ ಪಶುಪಾಲನೆ, ಮೀನು ಸಾಕಣೆಯಂಥ ಉಪ ಕಸುಬುಗಳನ್ನು ರೈತರು ಅಳವಡಿಸಿಕೊಳ್ಳಲು ಉತ್ತೇಜನ ನೀಡಬೇಕು.
 • ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ ಮಾಡಲು ಸಾಧ್ಯವಿರುವ ಕಡೆಗಳಲ್ಲಿ ಕಿರು ಉತ್ಪಾದನೆಗೆ ಉತ್ತೇಜಕ ಕಾರ್ಯಕ್ರಮಗಳನ್ನು ರೂಪಿಸಬೇಕು.
 • ಸಾಮುದಾಯಿಕ ಕೃಷಿ ವ್ಯವಸ್ಥೆ ಹಾಗೂ ಬೀಜ ಸಂರಕ್ಷಣೆಗೆ ಒತ್ತು ನೀಡಬೇಕು.
 • ಸುಸ್ಥಿರ ಕೃಷಿ ಹಾಗೂ ಸುಸ್ಥಿರ ಆರ್ಥಿಕತೆಗೆ ರೈತರನ್ನು ಸಜ್ಜುಗೊಳಿಸಬೇಕು.

ಸ್ವಾಮಿನಾಥನ್‌ ವರದಿ ಹೇಳುವ ಈ ಪ್ರಮುಖ ಶಿಫಾರಸುಗಳನ್ನು ಜಾರಿಗೆ ತರಲು ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೂ ಸಾಕು, ರೈತರ ಬಾಳು ಹಸನಾಗುತ್ತದೆ. ಆದರೆ, ಬರುವ ಸರಕಾರಗಳು ಕೇವಲ ಸ್ವಾಮಿನಾಥನ್‌ ವರದಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆಯೇ ಹೊರತು ನಿಜವಾಗಿ ರೈತ ಪರ ಕಾಳಜಿ ತೋರುತ್ತಿಲ್ಲ.