samachara
www.samachara.com
ಪುಟ್ಟ ದೇಶ ಕ್ರೊವೇಷ್ಯಾ vs ಶಿಸ್ತುಬದ್ಧ ಫ್ರಾನ್ಸ್: ಫೀಫಾ ಫೈನಲ್‌ ರೋಚಕ ಹಣಾಹಣಿಗೆ ಕ್ಷಣಗಣನೆ
COVER STORY

ಪುಟ್ಟ ದೇಶ ಕ್ರೊವೇಷ್ಯಾ vs ಶಿಸ್ತುಬದ್ಧ ಫ್ರಾನ್ಸ್: ಫೀಫಾ ಫೈನಲ್‌ ರೋಚಕ ಹಣಾಹಣಿಗೆ ಕ್ಷಣಗಣನೆ

ಕ್ರೊವೇಷ್ಯಾ ಗೆದ್ದರೂ, ಸೋತರೂ ಇದು ಆ ತಂಡದ ಪಾಲಿಗೆ ಅತ್ಯುತ್ತಮ ಪ್ರದರ್ಶನ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಒದ್ದಾಡುತ್ತಿದ್ದ ತಂಡವನ್ನು ಈ ಮಟ್ಟಕ್ಕೆ ತಂದ ಕೋಚ್ ಡಾಲಿಕ್‌ರ ಜಯವೂ ಹೌದು.

ಮೋಜು, ಮಸ್ತಿ, ಪ್ರತಿಷ್ಠೆ, ಉದ್ಯಮ, ದೇಶಭಕ್ತಿ…

ಹೀಗೆ ಎಲ್ಲಾ ಆಯಾಮಗಳನ್ನು ಒಳಗೊಂಡ ಅತೀ ದೊಡ್ಡ ಕ್ರೀಡಾಕೂಟಗಳ ಪೈಕಿ ಒಲಿಂಪಿಕ್ಸ್ ಬಿಟ್ಟರೆ ಫೂಟ್ಬಾಲ್ ವಿಶ್ವಕಪ್ ಮಾತ್ರ. ನಾಲ್ಕು ವರ್ಷಗಳಿಗೊಮ್ಮೆ ಬರುವ ಈ ಕಾಲ್ಚೆಂಡಾದ ಹಬ್ಬ ಇಡೀ ಜಗತ್ತನ್ನೇ ಗಿರಗಿಟ್ಲೆಯಂತೆ ತನ್ನ ಮೋಡಿಯ ಸುತ್ತ ಸುತ್ತುವಂತೆ ಮಾಡುತ್ತದೆ. ಕಳೆದ ಜೂನ್‌ 14ರಂದು ಆರಂಭವಾದ ಈ ಬಾರಿಯ ವಿಶ್ವಕಪ್ ಕ್ರೀಡಾಕೂಟವೀಗ ಹಲವು ಅಚ್ಚರಿಯ ಫಲಿತಾಂಶಗಳೊಂದಿಗೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯಕ್ಕಾಗಿ ಅರ್ಧ ಜಗತ್ತು ಕಾದು ಕುಳಿತಿದೆ.

ಲೀಗ್‌ನಲ್ಲೇ ಹಾಲಿ ಚಾಂಪಿಯನ್ ಜರ್ಮನಿಯ ನಿರ್ಗಮನ, ಫೂಟ್ಬಾಲ್ ಜಗತ್ತಿನ ಜೀವಂತ ದಂತಕಥೆ ಲಿಯೊನೆಲ್ ಮೆಸ್ಸಿಯಂಥ ಆಟಗಾರರಿದ್ದೂ ಪ್ರಿಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದ ಕಅರ್ಜೆಂಟೀನಾ, ಪೋರ್ಚುಗಲ್ ತಂಡದ ಪರ ಮ್ಯಾಜಿಕ್ ಮಾಡದ ಕ್ರಿಸ್ಟಿಯಾನೋ ರೊನಾಲ್ಡೋ, ಜೂ. ನೇಮರ್ ಬಲವಿದ್ದೂ ಉಪಾಂತ್ಯ ತಲುಪದ ಬ್ರೆಜಿಲ್, ಎಲ್ಲರ ನಿರೀಕ್ಷೆ ಮೀರಿ ಕ್ವಾರ್ಟರ್‌ ಫೈನಲ್‌ಗೆ ಬಂದ ಅತಿಥೇಯ ರಷ್ಯಾ, ಇದೇ ಮೊದಲ ಬಾರಿಗೆ ಫೈನಲ್ ಟಿಕೆಟ್ ಗಿಟ್ಟಿಸಿದ ಕ್ರೊವೇಷ್ಯಾ...

ಹೀಗೆ ಸಾಲು ಸಾಲು ಅಚ್ಚರಿ, ರೋಚಕ, ವಿಸ್ಮಯಕಾರಿ ಕದನಗಳಿಗೆ ಸಾಕ್ಷಿಯಾದ ಕೋಟ್ಯಂತರ ಫೂಟ್ಬಾಲ್ ಅಭಿಮಾನಿಗಳೀಗ ಭಾನುವಾರದ ಫೈನಲ್ ಸಮರವನ್ನು ಎದುರು ನೋಡುತ್ತಿದ್ದಾರೆ. ಶನಿವಾರ ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ 2-0 ಅಂತರದಿಂದ ಬೆಲ್ಜಿಯಂ ತಂಡ ಇಂಗ್ಲೆಂಡ್ ವಿರುದ್ಧ ಜಯಗಳಿದೆ. ಇನ್ನು ಬಾಕಿ ಉಳಿದಿರುವುದು ಕ್ರೊವೇಷ್ಯಾ ಹಾಗೂ ಫ್ರಾನ್ಸ್ ನಡುವಿನ ರೋಚಕ ಹಣಾಹಣಿ ಅಷ್ಟೆ.

ಫೂಟ್ಬಾಲ್ ಅಂದರೇನೆ ಹಾಗೆ. ಇಲ್ಲಿ ಒಂದು ಗೆಲುವು ವ್ಯಕ್ತಿಗಳ ಭವಿಷ್ಯ ಬದಲಿಸಿದ್ದಿದೆ. ಒಂದು ಸೋಲು ಕ್ರೀಡಾಪಟುಗಳ ಬದುಕು ಮುಗಿಸಿದ ಉದಾಹರಣೆಗಳಿವೆ. ಹೀಗಾಗಿ ಅಂಗಳದಲ್ಲಿ ಶಕ್ತಿ ಮೀರಿ ಹೋರಾಟಕ್ಕಿಳಿಯುತ್ತಾರೆ ಆಟಗಾರರು. ಅಂಗಳಕ್ಕಿಳಿಯುವವರು ಆಟಗಾರರಾದರೂ ಅದನ್ನು ಸಂಭ್ರಮಿಸಲು, ಪ್ರೋತ್ಸಾಹಿಸಲು ಬೇರೆಯದೇ ಜನರಿರುತ್ತಾರೆ. ಈ ಕ್ರೇಜ್ ಎಷ್ಟಿರುತ್ತದೆ ಎಂಬುದಕ್ಕೆ ಮೆಕ್ಸಿಕೋ ಮತ್ತು ಕ್ರೊವೇಷಿಯಾ ತಂಡದ ಗೆಲುವು ಮತ್ತು ಅರ್ಜೆಂಟೀನಾದ ಸೋಲನ್ನು ಗಮನಿಸಬೇಕು.

ಮೊದಲ ಪಂದ್ಯದಲ್ಲಿನ ಹಾಲಿ ಚಾಂಪಿಯನ್ ಜರ್ಮನಿಗೆ ಸೋಲುಣಿಸಿತು ಮೆಕ್ಸಿಕೋ. ಇದರ ಬೆನ್ನಿಗೆ ಮೆಕ್ಸಿಕೋದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಈ ಅಬ್ಬರಕ್ಕೆ ಭೂಕಂಪನವೇ ನಡೆದು ಹೋಯಿತು. ಮೆಕ್ಸಿಕೋದ ರಾಜಧಾನಿಯಲ್ಲಿ ಭೂಮಿ ಸುಮಾರು 7 ಸೆಕೆಂಡುಗಳ ಕಾಲ ತಣ್ಣಗೆ ಕಂಪಿಸಿತ್ತು.

ಅರ್ಜೆಂಟೀನಾ ತಂಡ ಕ್ರೊವೇಷ್ಯಾ ವಿರುದ್ಧ ಸೋತಿತು ಎಂಬ ಒಂದೇ ಕಾರಣಕ್ಕೆ ಮೆಸ್ಸಿ ಅಭಿಮಾನಿಯೊಬ್ಬ ಕೇರಳದಲ್ಲಿ ಪ್ರಾಣವನ್ನೇ ಕಳೆದುಕೊಂಡ. ಸಾಮಾನ್ಯ ಅಭಿಮಾನಿಗಳ ಕಥೆ ಹೀಗಾದರೆ ಫೂಟ್ಬಾಲ್ ಮೋಡಿ ದೇಶದ ಅಧ್ಯಕ್ಷ, ಪ್ರಧಾನಿಗಳನ್ನೇ ಬಿಟ್ಟಿಲ್ಲ.

ಫೈನಲ್‌ ಪ್ರವೇಶಿಸಿರುವ ಕ್ರೊವೇಷ್ಯಾದ ಅಧ್ಯಕ್ಷರೇ ಕುಣಿದು ಕುಪ್ಪಳಿಸಿದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಅತಿಥೇಯ ರಷ್ಯಾ ವಿರುದ್ಧ ಕ್ರೊವೇಷ್ಯಾ ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೆಲುವು ಸಾಧಿಸುತ್ತಿದ್ದಂತೆ ಅಧ್ಯಕ್ಷೆ ಕೊಲಿಂದ ಗ್ರಾಬರ್ ಎದ್ದು ಕುಣಿಯಲು ಆರಂಭಿಸಿದ್ದರು. ಅದೂ ರಷ್ಯಾ ಪ್ರಧಾನಿ, ಅಲ್ಲಿನ ಮಾಜಿ ಅಧ್ಯಕ್ಷ ಡಿಮಿಟ್ರಿ ಮಡ್ವಡೇವ್ ಮುಂದೆ.

ಹಾಗೆ ನೋಡಿದರೆ ಕ್ರೊವೇಷ್ಯಾ ಈ ಬಾರಿ ಫೈನಲ್‌ಗೆ ಬರುತ್ತದೆ ಎಂದು ಯಾರೂ ಅಂದುಕೊಂಡಿರಲೇ ಇಲ್ಲ. ಬಹುಷಃ ಆ ದೇಶ 41.7 ಲಕ್ಷ ಜನರಿಗೂ 10 ತಿಂಗಳ ಹಿಂದೆ ಈ ದೇಶ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸುತ್ತೆ ಎಂಬುದರ ಬಗ್ಗೆ ನಂಬಿಕೆಯೇ ಇರಲಿಕ್ಕಿಲ್ಲ. ಕಾರಣ ದೇಶ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೋತು ವಿಶ್ವಕಪ್‌ನಿಂದಲೇ ಹೊರ ಬೀಳುವ ಹಾದಿಯಲ್ಲಿತ್ತು. ಅರ್ಹತಾ ಹಂತದ ಉಳಿದೆರೆಡು ಪಂದ್ಯಗಳು ಬಾಕಿ ಉಳಿದಿದ್ದಾಗ ತೆಗೆದುಕೊಂಡ ಒಂದು ತೀರ್ಮಾನ ತಂಡದ ಭವಿಷ್ಯವನ್ನೇ ಬದಲು ಮಾಡಿತು.

ಕೋಚ್ ಬದಲಾವಣೆ, ಫಲಿಸಿದ ಲೆಕ್ಕಾಚಾರ:

ಉಕ್ರೇನ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಅಲ್ಲಿನ ಫೂಟ್ಬಾಲ್ ಸಂಸ್ಥೆ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತು. ತಂಡದ ಕೋಚನ್ನೇ ವಚಾಗೊಳಿಸಿತು. ಅವರ ಸ್ಥಾನಕ್ಕೆ ಅಂಡರ್ 21 ತಂಡದ ಕೋಚ್ ಆಗಿದ್ದ ಝ್ಲಟ್ಕೊ ಡಾಲಿಕ್‌ರನ್ನು ಕರೆ ತರಲಾಯಿತು. ಯಾವಾಗ ಡಾಲಿಕ್ ಪ್ರವೇಶವಾಯಿತೂ, ತಂಡದ ಅದೃಷ್ಟ ಖುಲಾಯಿಸಿತು.

ಉಕ್ರೇನ್ ವಿರುದ್ಧ 2-0 ಅಂತರದಿಂದ ಕ್ರೊವೇಷ್ಯಾ ಗೆಲುವು ಕಂಡಿತು. ಮುಂದಿನ ಪಂದ್ಯದಲ್ಲಿ ಗ್ರೀಸ್ ವಿರುದ್ಧ 4-1 ರಿಂದ ಗೆದ್ದು ಅಂತೂ ಇಂತೂ ವಿಶ್ವಕಪ್ ಟಿಕೆಟ್ ಪಡೆದುಕೊಂಡಿತು. ಈ ಪ್ರವೇಶ ಪ್ರಯಾಸದಾಯವಾಗಿದ್ದರಿಂದ ಇದನ್ನು ಸಂಭ್ರಮಿಸುವವರು ಯಾರೂ ಇರಲಿಲ್ಲ.

ಇದಾಗಿ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ತಂಡ ಗೆಲುವು ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟ್ರೈಕರ್ ನಿಕೋಲಾ ಕಲಿನಿಕ್‌ ಎಂಬ ಆಟಗಾರನನ್ನು ಕೋಚ್ ಡಾಲಿಕ್ ವಿಶ್ವಕಪ್ ತಂಡದಿಂದ ಕಿತ್ತು ಹಾಕಿದರು. ನೈಜೀರಿಯಾ ವಿರುದ್ಧ 2-0 ಯಿಂದ ಗೆಲುವು ಕಂಡ ಮೊದಲ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿಯಲು ನಿಕೋಲಾ ಹಿಂದೇಟು ಹಾಕಿದ್ದು ಇದಕ್ಕೆ ಕಾರಣವಾಗಿತ್ತು. ಈ ಅಶಿಸ್ತಿನ ವರ್ತನೆ ಸಹಿಸದ ಕೋಚ್ ಡಾಲಿಕ್ ಆಟಗಾರನಿಗೆ ಮನೆಗೆ ತೆರಳಲು ಆದೇಶ ನೀಡಿದರು. ಒಮ್ಮೆ ಆಯ್ಕೆ ಮಾಡಿದ ತಂಡವನ್ನು ಬದಲಿಸುವ ಆಯ್ಕೆ ಇಲ್ಲದ ಕಾರಣ ಒಟ್ಟು ಕ್ರೊವೇಷ್ಯಾ ಆಟಗಾರರ ಸಂಖ್ಯೆಯೇ 22ಕ್ಕೆ ಕುಸಿಯಿತು. ಆದರೂ ಡಾಲಿಕ್ ಗಟ್ಟಿ ನಿರ್ಧಾರ ತಳೆದಿದ್ದರು. ಅಶಿಸ್ತಿನ ಆಟಗಾರರಿಗೂ ಬಿಸಿ ಮುಟ್ಟಿಸುತ್ತಾ, ಉತ್ಸಾಹವನ್ನೂ ತುಂಬುತ್ತಾ ಗೆಲುವಿಗೆ ಸಂಘಟಿತ ಶಕ್ತಿ ಮುಖ್ಯ ಎಂಬುದನ್ನು ಮನವರಿಕೆ ಮಾಡಿದರು.

ಗೆಲುವಿನ ಸಂಭ್ರಮದಲ್ಲಿ ಕ್ರೊವೇಷ್ಯಾ ಕೋಚ್ ಡಾಲಿಕ್ (ಬಿಳಿ ಅಂಗಿ)
ಗೆಲುವಿನ ಸಂಭ್ರಮದಲ್ಲಿ ಕ್ರೊವೇಷ್ಯಾ ಕೋಚ್ ಡಾಲಿಕ್ (ಬಿಳಿ ಅಂಗಿ)
ಚಿತ್ರ ಕೃಪೆ: ವಿವೋಟಿವಿ

ಮುಂದಿನದು ಕ್ರೊವೇಷ್ಯಾ ಪಾಲಿಗೆ ವಿಸ್ಮಯವೇ ಸರಿ. ಎರಡನೇ ಪಂದ್ಯದಲ್ಲಿ ಮೆಸ್ಸಿಯಂತಹ ದಂತಕತೆಯನ್ನು ಹೊಂದಿದ್ದ ಅರ್ಜೆಂಟೀನಾಕ್ಕೆ ಕ್ರೊವೇಷಿಯಾ 3-0 ಗೋಲಿನ ಹೊಡೆತ ನೀಡಿದಾಗ ಇಡೀ ವಿಶ್ವವೇ ಬೆರಗು ಕಣ್ಣುಗಳಿಂದ ನೋಡಿತು. ಮುಂದೆ ಐರ್ಲೆಂಡ್‌ ವಿರುದ್ಧ 2-1 ರ ಗೆಲುವು. ನಂತರ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಬಲ ಡೆನ್ಮಾರ್ಕ್ ಸವಾಲು ಎದುರಾಯಿತು.

ಇಲ್ಲೂ ಡಾಲಿಕ್‌ ಹುಡುಗರು ಎದೆಗುಂದದೆ ಪಂದ್ಯ 1-1 ರಿಂದ ಡ್ರಾ ಆಯಿತು. ಪೆನಾಲ್ಟಿ ಶೂಟೌಟ್‌ ನಡೆದಾಗ ಕ್ರೊವೇಷ್ಯಾ ವಿಜಯಮಾಲೆ ಧರಿಸಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾ ವಿರುದ್ಧ 2-2 ರ ಸಮಬಲದ ಹೋರಾಟ ನೀಡಿ ಪೆನಾಲ್ಟಿಯಲ್ಲಿ 4-3 ರಿಂದ ಗೆದ್ದು ಸೆಮಿಫೈನಲ್‌ಗೆ ಬಂತು ಕ್ರೊವೇಷಿಯಾ. ಇದು ಆ ತಂಡದ ಎರಡನೇ ಸೆಮಿಫೈನಲ್.

ಹಿಂದಿನ ಪಂದ್ಯಗಳಂತೆ ಸೆಮಿಫೈನಲ್ ಸುಲಭವಿರಲಿಲ್ಲ. ಸ್ಟಾರ್ ಆಟಗಾರ ಹ್ಯಾರಿಕೇನ್ ನೇತೃತ್ವದ ಇಂಗ್ಲೆಂಡ್ ಅದಾಗಲೇ ಅಬ್ಬರಿಸುತ್ತಿತ್ತು. 1966ರ ನಂತರ ವಿಶ್ವಕಪ್ ಫೈನಲಿಗೇರಿ ಇಂಗ್ಲೆಂಡ್ ಕಪ್ ಗೆಲ್ಲಲಿದೆ ಎಂದು ತಜ್ಞರು ಭವಿಷ್ಯವನ್ನೂ ನುಡಿದಿದ್ದರು. ಹೀಗಿದ್ದೂ ತಲೆ ಕೆಡಿಸಿಕೊಳ್ಳದೆ ಆಂಗ್ಲರಿಗೆ 2-1ರಿಂದ ಸೋಲಿನ ರುಚಿ ತೋರಿಸಿತು ಕ್ರೊವೇಷ್ಯಾ. 109ನೇ ನಿಮಿಷದಲ್ಲಿ ಮಾರಿಯೋ ಮ್ಯಾಂಡಝುಕಿಕ್ ಹೊಡೆದ ಗೋಲು ಭವಿಷ್ಯವನ್ನೆಲ್ಲಾ ತಲೆಕೆಳಗು ಮಾಡಿತು.

ಈ ಮೂಲಕ ಮೊದಲ ಬಾರಿಗೆ ವಿಶ್ವಕಪ್‌ಗೆ ಪ್ರವೇಶ ಪಡೆದಿದ್ದಲ್ಲದೆ 1950ರ ನಂತರ ಫೈನಲ್‌ಗೆ ಬಂದ ಚಿಕ್ಕ ರಾಷ್ಟ ಎಂಬ ದಾಖಲೆ ಬರೆಯಿತು ಕ್ರೊವೇಷ್ಯಾ. ಈ ಹಿಂದೆ 50ರಲ್ಲಿ ಉರುಗ್ವೆ ಫೈನಲಿಗೇರಿತ್ತು.

ಕ್ರೊವೇಷ್ಯಾಗೆ ಎದುರಾಳಿಯಾಗಿ ಫೈನಲ್‌ನಲ್ಲಿ ಫ್ರಾನ್ಸ್ ತಂಡ ಬಂದು ಕುಳಿತಿದೆ. ಇಡೀ ವಿಶ್ವಕಪ್‌ನುದ್ದಕ್ಕೂ ಫ್ರಾನ್ಸ್ ಸ್ಥಿರ ಪ್ರದರ್ಶನ ತೋರುತ್ತಲೇ ಬಂದಿದ್ದು ಕಣ್ಣಿಗೆ ರಾಚುತ್ತದೆ. ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡಕ್ಕೆ 4-3 ರಿಂದ, ಕ್ವಾರ್ಟರ್ ಫೈನಲ್‌ನಲ್ಲಿ ಉರುಗ್ವೆಗೆ 2-0 ಫ್ರಾನ್ಸ್ ಸೋಲಿನ ರುಚಿ ತೋರಿಸಿತ್ತು. ಆದರೆ ಸೆಮಿಫೈನಲ್ ಫ್ರಾನ್ಸ್ ಪಾಲಿಗೆ ಕಠಿಣ ಎಂದೇ ಭಾವಿಸಲಾಗಿತ್ತು.

ಟೂರ್ನಿಯಲ್ಲಿ ಆಕ್ರಮಣಕಾರಿ ಆಟವಾಡುತ್ತಾ ಬ್ರೆಜಿಲ್ ತಂಡಕ್ಕೂ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಣಿಸಿ ಬಂದಿದ್ದ 3ನೇ ರ್ಯಾಂಕಿನ ಬೆಲ್ಜಿಯಂ ಫ್ರಾನ್ಸ್‌ಗೆ ಸೋಲುಣಿಸಬಹುದು ಎಂದುಕೊಳ್ಳಲಾಗಿತ್ತು. ಆದರೆ ಶಿಸ್ತು ಬದ್ಧ ಆಟವಾಡಿದ ಫ್ರಾನ್ಸ್‌ ಬೆಲ್ಜಿಯಂಗೆ 1-0 ಸೋಲುಣಿಸಿ ತಾನು ಬಲಿಷ್ಠವಾಗಿದ್ದೇನೆ ಎಂದು ಸಾರಿ ಹೇಳಿತು.

ಸ್ಟಾರ್ ಆಟಗಾರರ ತಂಡ ಫ್ರಾನ್ಸ್:

ಅದು ನಿಜ ಕೂಡ. ಆ ತಂಡದಲ್ಲಿ ಆಗಾಗ ಸ್ಟ್ರೈಕರ್ ರೀತಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿರುವ ಬಲಿಷ್ಠ ಮಿಡ್ ಫೀಲ್ಡರ್ ಪೌಲ್ ಪೋಗ್ಬ, ಅನುಭವಿ ಮುನ್ಪಡೆ ಆಟಗಾರ ಆಂಟನಿಯೋ ಗ್ರಿಜ್ಮನ್, ಸ್ಟಾರ್ ಯುವ ಆಟಗಾರ ಕಿಲಿಯನ್ ಬಾಪೆಯಂಥವರಿದ್ದಾರೆ. ತಂಡಕ್ಕೆ 1998ರಲ್ಲಿ ವಿಶ್ವಕಪ್ ಗೆದ್ದ ತಂಡದ ಸದಸ್ಯ ಅನುಭವಿ ಡಿಡಿಯರ್ ಡೆಶಾಂಪ್ಸ್ ತರಬೇತಿಯ ಬಲವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯುತ್ತಮ ಪಾಸ್‌ಗಳನ್ನು ನೀಡುತ್ತಾ ಶಿಸ್ತು ಬದ್ದವಾಗಿ ಆಟವಾಡುವ ತಂಡವಿದೆ.

ಎಡದಿಂದ, ಸ್ಪೌರ್ ಆಟಗಾರರಾದ ಕಿಲಿಯನ್ ಬಾಪೆ, ಪೌಲ್ ಪೋಗ್ಬ, ಆಂಟನಿಯೋ ಗ್ರಿಜ್ಮನ್. 
ಎಡದಿಂದ, ಸ್ಪೌರ್ ಆಟಗಾರರಾದ ಕಿಲಿಯನ್ ಬಾಪೆ, ಪೌಲ್ ಪೋಗ್ಬ, ಆಂಟನಿಯೋ ಗ್ರಿಜ್ಮನ್. 

ಈ ಎಲ್ಲಾ ವಿಚಾರಗಳಲ್ಲಿ ಕ್ರೊವೇಷಿಯಾ ದುರ್ಬಲ ತಂಡವೇ ಸರಿ. ಅಲ್ಲಿ ಸ್ಟಾರ್ ಪಟ್ಟ ಪಡೆದ ಆಟಗಾರರು ಯಾರೂ ಇಲ್ಲ. ಹೀಗಿದ್ದೂ ಒಂದು ತಂಡವಾಗಿ ಆಡಿ ಕ್ರೊವೇಷಿಯಾ ಫೈನಲ್‌ಗೇರಿದೆ.

ವಿಂಗರ್ಸ್‌ ಆಟಗಾರನಾದರೂ ಆಗಾಗ ಗೋಲ್ ಪೆಟ್ಟಿಗೆ ಮೇಲೆ ದಾಳಿ ಮಾಡುವ ಇವಾನ್ ಪೆರಿಸಿಕ್, ಮಿಡ್‌ ಫೀಲ್ಡರ್ ಆಗಿದ್ದುಕೊಂಡು ಗೋಲಿನ ಅವಕಾಶಗಳನ್ನು ಸೃಷ್ಟಿಸುವ ಲುಕಾ ಮೊಡ್ರಿಕ್, ಅತ್ಯುತ್ತಮ ಪಾಸ್‌ಗಳನ್ನು ನೀಡುವ ಇವಾನ್ ರಾಕಿಟಿಕ್ ತಂಡಕ್ಕೆ ಜೀವ ತುಂಬಿದ್ದಾರೆ. ಪೆರಿಸಿಕ್ ಮತ್ತು ಮತ್ತು ಮೊಡ್ರಿಕ್ ತಲಾ 2 ಗೋಲುಗಳನ್ನು ಹೊಡೆದಿದ್ದೇ ಗರಿಷ್ಠ ಸಾಧನೆಯಾಗಿದೆ. ಸ್ಟ್ರೈಕರ್‌ಗಳು ಗೋಲು ಗಳಿಕೆಯಂತೂ ನಗಣ್ಯ. ಇದು ಕ್ರೊವೇಷ್ಯಾದ ತಂಡ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆರಂಭದಲ್ಲಿ ಅಷ್ಟೇನೂ ಉತ್ತಮವಾಗಿ ಆಡದ ತಂಡ ಬರಬರುತ್ತಾ ಪಳಗಿರುವುದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಯಲಾಗಿದೆ.

ಸೇಡಿನ ಕಾತುರ

ಈ ಹಿಂದೆ 1998ರಲ್ಲಿಯೂ ಒಮ್ಮೆ ಕ್ರೊವೇಷ್ಯಾ ಸೆಮಿಫೈನಲ್‌ಗೆ ಬಂದಿತ್ತು. ಅವತ್ತು ಇದೇ ಫ್ರಾನ್ಸ್ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತು ಕ್ರೊವೇಷ್ಯಾ ಮುಗ್ಗರಿಸಿತ್ತು. ಈ ವಿಶ್ವಕಪ್‌ನ್ನು ಫ್ರಾನ್ಸ್ ಎತ್ತಿ ಹಿಡಿದರೆ, ಕ್ರೊವೇಷ್ಯಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಇದೀಗ ಮತ್ತೆ ಫ್ರಾನ್ಸ್ - ಕ್ರೊವೇಷ್ಯಾ ಮುಖಾಮುಖಿಯಾಗಿವೆ. ಅದೂ ಫೈನಲ್‌ನಲ್ಲಿ. ಒಂದು ಕಡೆ ಸೇಡು, ಇನ್ನೊಂದು ಕಡೆ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ತವಕದಲ್ಲಿ ಪುಟಾಣಿ ರಾಷ್ಟ್ರ ಕ್ರೊವೇಷ್ಯಾ ಇದೆ.

ತನ್ನ ಎರಡನೇ ವಿಶ್ವಕಪ್ ಗೆದ್ದು ಪುಟ್‌ಬಾಲ್ ಜತ್ತಿನಲ್ಲಿ ತನ್ನ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸುವ ತವಕದಲ್ಲಿ ಫ್ರಾನ್ಸ್ ಇದೆ. ಇವರಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದಕ್ಕೆ ಭಾನುವಾರದ ಫೈನಲ್ ಫಲಿತಾಂಶ ಉತ್ತರ ನೀಡಲಿದೆ.

ಕ್ರೊವೇಷ್ಯಾ ಗೆದ್ದರೂ, ಸೋತರೂ ಇದು ಆ ತಂಡದ ಪಾಲಿಗೆ ಅತ್ಯುತ್ತಮ ಪ್ರದರ್ಶನ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಒದ್ದಾಡುತ್ತಿದ್ದ ತಂಡವನ್ನು ಈ ಮಟ್ಟಕ್ಕೆ ತಂದ ಕೋಚ್ ಡಾಲಿಕ್‌ರ ಜಯವೂ ಹೌದು.

ಕೇವಲ 41 ಲಕ್ಷ ಜನರಿರುವ ಕ್ರೊವೇಷ್ಯಾ, ಅದೂ ವಿಶ್ವಕಪ್ ಅರ್ಹತೆ ಗಿಟ್ಟಿಸಲು ಒದ್ದಾಡುತ್ತಿದ್ದ ತಂಡ ಫೈನಲ್‌ಗೆ ಬರಬಹುದಾದರೆ ಭಾರತವೇಕೆ ಕನಿಷ್ಠ ಫೂಟ್ಬಾಲ್ ವಿಶ್ವಕಪ್‌ ಆಡುವ ಅರ್ಹತೆಯನ್ನಾದರೂ ಗಿಟ್ಟಿಸಬಾರದು?

6 ವರ್ಷಗಳ ಹಿಂದೆ ಫೀಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಫೂಟ್ಬಾಲ್ ವಿಚಾರದಲ್ಲಿ ‘ದೈತ್ಯ ದೇಶ ಈಗಷ್ಟೇ ನಿದ್ರೆಯಿಂದ ಏಳುತ್ತಿದೆ’ ಎಂದಿದ್ದರು. ಬಹುಶಃ ಇನ್ನೂ ಭಾರತೀಯರ ನಿದ್ರೆ ಮುಗಿದಿಲ್ಲ...

Also read: ಭಾರತದಲ್ಲಿ ಫೂಟ್‌ಬಾಲ್ ಇತಿಹಾಸ: ನಾವೇಕೆ ಫಿಫಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ?