samachara
www.samachara.com
‘ಮೊಟ್ಟೆ ತುಳಿದಿದ್ದಕ್ಕೆ 10 ದಿನ ಬಹಿಷ್ಕಾರ’; ದಲಿತ ಬಾಲಕಿ ಮೇಲೆ ಕಾಪ್‌ ಪಂಚಾಯತ್‌ ದೌರ್ಜನ್ಯ
COVER STORY

‘ಮೊಟ್ಟೆ ತುಳಿದಿದ್ದಕ್ಕೆ 10 ದಿನ ಬಹಿಷ್ಕಾರ’; ದಲಿತ ಬಾಲಕಿ ಮೇಲೆ ಕಾಪ್‌ ಪಂಚಾಯತ್‌ ದೌರ್ಜನ್ಯ

‘ಮಂಗಳಕರ’ ಎಂದು ಭಾವಿಸಿರುವ ಪಕ್ಷಿಯೊಂದರ ಮೊಟ್ಟೆಗಳನ್ನು ಅಚಾನಕ್ಕಾಗಿ ತುಳಿದ 5 ವರ್ಷದ ದಲಿತ ಬಾಲಕಿಗೆ ರಾಜಸ್ತಾನದ ಕಾಪ್‌ ಪಂಚಾಯಿತಿಯೊಂದು 10 ದಿನಗಳ ಬಹಿಷ್ಕಾರ ವಿಧಿಸಿದೆ.

ರಾಜಸ್ತಾನದ ಬುಂಡಿ ಜಿಲ್ಲೆಯಲ್ಲಿನ ಹೀರಾಪುರ ಎಂಬ ಚಿಕ್ಕ ಗ್ರಾಮವೊಂದರ 5 ವರ್ಷದ ಪುಟ್ಟ ಬಾಲಕಿ ಜುಲೈ 2ರಂದು ಪಕ್ಷಿಯೊಂದರ ಮೊಟ್ಟೆಯನ್ನು ಅಚಾನಕ್ಕಾಗಿ ಹೊಡೆದು ಹಾಕಿದ್ದಳು. ಆ ಕಾರಣಕ್ಕಾಗಿ ಆ ಗ್ರಾಮದ ಕಾಪ್‌ ಪಂಚಾಯತ್‌, ಪುಟ್ಟ ಬಾಲಕಿಗೆ 10 ದಿನಗಳ ಕಾಲ ಮನೆಯೊಳಗೆ ಕಾಲಿಡದಂತೆ ಶಿಕ್ಷೆ ನೀಡಿದೆ.

ಬಾಲಕಿಯ ಪೋಷಕರು ಮತ್ತು ಕಾಪ್‌ ಪಂಚಾಯತ್‌ನ ಸದಸ್ಯರೆಲ್ಲರೂ ಕೂಡ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರುವ ರೆಗಾರ್‌ ಎಂಬ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸ್ಥಳೀಯ ಪಕ್ಷಿ ರೆಡ್ ವ್ಯಾಟಲ್ಡ್ ಲ್ಯಾಪ್ವಿಂಗ್(ಕೆಂಪು ಟಿಟ್ಟಿಭ ಅಥವಾ ಕೆಂಪು ಮೂತಿಯ ದೇವನ ಹಕ್ಕಿ)ಯನ್ನು ‘ಮಂಗಳಕರ’ ಎಂದು ನಂಬಿದ್ದಾರೆ. ಈ ಹಕ್ಕಿಗಳು ಮೊಟ್ಟೆಯಿಟ್ಟರೆ, ಮಾನ್ಸೂನ್‌ ಮಳೆ ಬರಲಿದೆ ಎನ್ನುವುದು ಇಲ್ಲಿನ ಸ್ಥಳೀಯ ಸಮುದಾಯದ ನಂಬಿಕೆ.

ಜುಲೈ 2ರಂದು ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಬಾಲಕಿ ಅಚಾನಕ್ಕಾಗಿ ದೇವನ ಹಕ್ಕಿಯ ಮೊಟ್ಟೆಯ ಮೇಲೆ ಕಾಲಿಟ್ಟಿದ್ದಳು. ಮೊಟ್ಟೆ ಹೊಡೆದುಹೋಗಿತ್ತು. ದೇವನ ಹಕ್ಕಿಯನ್ನು ದೇವರ ಸ್ವರೂಪ ಎಂದು ಭಾವಿಸಿದ್ದ ಸಮುದಾಯ, ಪುಟ್ಟ ಬಾಲಕಿಯ ವಿರುದ್ಧ ಪಂಚಾಯಿತಿಯನ್ನು ಕರೆದಿತ್ತು. ಊರಿನ ಪ್ರಮುಖರೆಲ್ಲಾ ಸೇರಿ ಬಾಲಕಿಗೆ 10 ದಿನಗಳ ಕಾಲ ಮನೆಯೊಳಗೆ ಕಾಲಿಡುವಂತಿಲ್ಲ ಎಂದು ಶಿಕ್ಷೆ ವಿಧಿಸಿದರು.

ಈ ಶಿಕ್ಷೆ ಜುಲೈ 3ರಿಂದ ಪ್ರಾರಂಭವಾಯಿತು. ಕಾಪ್‌ ಪಂಚಾಯತ್‌ ನೀಡಿದ ಈ ಶಿಕ್ಷೆಯನ್ನು ಬಾಲಕಿಯ ತಂದೆ ಹುಕುಮ್‌ ಚಾಂದ್‌ ರೆಗಾರ್‌ ವಿರೋಧಿಸಿದಾಗ, ಶಿಕ್ಷೆಯನ್ನು 11 ದಿನಕ್ಕೆ ಏರಿಸುವುದಾಗಿ ಎಚ್ಚರಿಸಲಾಯಿತು. ಬಾಲಕಿಗೆ ಶಿಕ್ಷೆ ಕೊಡುವುದರ ಜತೆಗೆ ಆಕೆಯ ಕುಟುಂಬ ಗ್ರಾಮಸ್ಥರಿಗೆ ಉಪಹಾರದ ಜತೆಗೆ ಕಡಲೆಕಾಳನ್ನು ವಿತರಿಸಬೇಕು ಎಂದು ನಿರ್ಧರಿಸಲಾಯಿತು.

ನೆಲದಲ್ಲೇ ಮೊಟ್ಟೆ ಇಟ್ಟು ಮರಿ ಮಾಡುವ ಕೆಂಪು ಟಿಟ್ಟಿಭ
ನೆಲದಲ್ಲೇ ಮೊಟ್ಟೆ ಇಟ್ಟು ಮರಿ ಮಾಡುವ ಕೆಂಪು ಟಿಟ್ಟಿಭ

ಈ ಘಟನೆ ನಡೆದು ವಾರ ಕಳೆದ ಬಳಿಕ ಜುಲೈ 11ರಂದು ಜಿಲ್ಲಾ ಆಡಳಿತ ಮತ್ತು ಪೊಲೀಸರ ಗಮನಕ್ಕೆ ಬಂದಿದೆ. ಗ್ರಾಮದಲ್ಲಿ ಪೊಲೀಸರನ್ನು ಕಂಡ ನಂತರ ಕಾಪ್‌ ಪಂಚಾಯಿತಿ ಮೆತ್ತಗಾಗಿ ಬಾಲಕಿ ಮನೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ.

ಜುಲೈ 12, ಗುರುವಾರದಂದು ಬಾಲಕಿಯ ತಂದೆ ಹುಕುಮ್‌ ಚಾಂದ್‌ ರೆಗಾರ್‌ ದಂಡ ಸಂಹಿತೆಯ ಸೆಕ್ಷನ್‌ 508, 384 ಮತ್ತು 120‘ಬಿ’ಗಳ ಅಡಿಯಲ್ಲಿ ಗ್ರಾಮ 10 ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ. ಈ ಸೆಕ್ಷನ್‌ಗಳ ಜತೆಗೆ 1955ರ ಅಸ್ಪೃಶ್ಯತೆ(ಅಪರಾಧ) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಗಳ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಬಹುದಾಗಿದೆ. ಆದರೆ ದೂರು ದಾಖಲಾಗಿ 2 ದಿನಗಳಾದರೂ ಕೂಡ 10 ಜನರಲ್ಲಿ ಯಾರೊಬ್ಬರನ್ನೂ ಪೊಲೀಸರು ಬಂಧಿಸಿಲ್ಲ ಎನ್ನಲಾಗಿದೆ. ರಾಜಸ್ತಾನ ರಾಜ್ಯದ ಮಾನವ ಹಕ್ಕುಗಳ ಆಯೋಗ ಈ ಘಟನೆಯ ಕುರಿತು ಜುಲೈ 19ರ ಒಳಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಏನಿದು ಕಾಪ್‌ ಪಂಚಾಯತ್‌?:

ಕಾಪ್‌ ಪಂಚಾಯಿತಿಗಳು ಹಳ್ಳಿಗರು ಮತ್ತು ಬುಡಕಟ್ಟು ಸಮುದಾಯಗಳು ತಮ್ಮನ್ನು ತಾವು ಆಳಿಕೊಳ್ಳಲು ಮಾಡಿಕೊಂಡ ವ್ಯವಸ್ಥೆ. ಆದರೆ ಇಂದು ಮೂಲದಲ್ಲಿದ್ದ ವ್ಯವಸ್ಥೆಗೆ ವಿರುದ್ಧವಾಗಿದೆ. ಕಾಪ್‌ನಂತೆಯೇ ಪಾಲ್‌, ಜನಪದ ಮತ್ತು ಗಣ ಸಂಘ ಎಂಬ ವ್ಯವಸ್ಥೆಗಳು ಕೂಡ ಚಾಲ್ತಿಯಲ್ಲಿದ್ದವು. ಕಾಪ್‌ ಪಂಚಾಯತ್‌ ಎಂಬುದು ಸುಮಾರು 48 ಹಳ್ಳಿಗಳ ಒಕ್ಕೂಟ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
youngistan.in

ಪ್ರತಿಯೊಂದು ಹಳ್ಳಿಗಳ ಜನರು ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸಿ ಪಂಚಾಯಿತಿಯ ಸದಸ್ಯರನ್ನಾಗಿ ನೇಮಿಸುತ್ತಾರೆ. 7 ಗ್ರಾಮಗಳ ಪಂಚಾಯಿತಿ ಸೇರಿ ‘ತುಂಬಾ’ ಎಂದು ಕರೆಸಿಕೊಳ್ಳುತ್ತದೆ. ಇಂತಹ 12 ‘ತುಂಬಾ’ಗಳು ಸೇರಿ ಒಂದು ಕಾಪ್‌ ಪಂಚಾಯಿತಿಯಾಗುತ್ತದೆ.

ಕಾಪ್‌ ಪಂಚಾಯಿತಿಯ ನಾಯಕರನ್ನೂ ಕೂಡ ಜನರೇ ಆರಿಸುತ್ತಾರೆ. ಸರ್ವ ಕಾಪ್‌ ಪಂಚಾಯತ್‌ (ಎಲ್ಲಾ ಕಾಪ್‌ ಪಂಚಾಯಿತಿಗಳ ಒಕ್ಕೂಟ) ಕೂಡ ಅಸ್ತಿತ್ವದಲ್ಲಿದ್ದು, ಪ್ರತಿಯೊಂದು ಕಾಪ್‌ಗಳೂ ಕೂಡ ಸರ್ವ ಕಾಪ್‌ ಪಂಚಾಯತ್‌ಗೆ ಪ್ರತಿನಿಧಿಗಳನ್ನು ಕಳುಹಿಸುತ್ತಾರೆ. ಇದೊಂದು ರಾಜಕೀಯ ಸಂಸ್ಥೆಯಂತೆ ಕೆಲಸ ನಿರ್ವಹಿಸುತ್ತಿದ್ದು, ಆಯಾ ಪ್ರದೇಶಗಳ ಕುಲ, ಜಾತಿ, ಸಮುದಾಯಗಳೆಲ್ಲವನ್ನೂ ಕೂಡ ಒಳಗೊಂಡಿರುತ್ತವೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಮಾಲ್ವಾ, ರಾಜಸ್ತಾನ್, ಸಿಂಧ್‌, ಮುಲ್ತಾನ್‌, ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಕಾಪ್‌ ಪಂಚಾಯಿತಿಗಳು ಅಸ್ತಿತ್ವದಲ್ಲಿವೆ.

ಕಾಪ್‌ ಪಂಚಾಯತ್‌ಗಳ ಕೆಲಸವೇನು?:

ಈ ಕಾಪ್‌ ಪಂಚಾಯಿತಿಗಳು ಸ್ಥಳೀಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಘೋಷಣೆಗಳನ್ನು ಹೊರಡಿಸುತ್ತವೆ. ಸಮಸ್ಯೆಗಳನ್ನು ಹೊತ್ತು ತಂದ ಜನರಿಗೆ ನ್ಯಾಯ ಒದಗಿಸುವುದು ಇವುಗಳ ಮೂಲ ಉದ್ದೇಶ. ಭ್ರೂಣ ಹತ್ಯೆ, ಮದ್ಯಪಾನ, ವರದಕ್ಷಿಣೆ, ಮಹಿಳಾ ಶಿಕ್ಷಣ ಇತ್ಯಾದಿಗಳ ಬಗ್ಗೆಯೂ ಇವು ತೀರ್ಮಾನ ಹೊರಡಿಸುತ್ತವೆ. ಆದರೆ ಸಮಾಜದಲ್ಲಿನ ಶೋಷಣೆಗಳನ್ನು ಹಾಗೆಯೇ ಉಳಿಸಬಯಸುತ್ತವೆ. ಸಮಾಜದೊಳಗೆ ಇಲ್ಲಸಲ್ಲದ ಮೌಢ್ಯಗಳನ್ನು ಬಿತ್ತುತ್ತಿವೆ.

ಉದಾಹರಣೆಗೆ 2012 ಅಕ್ಟೋಬರ್ ತಿಂಗಳಿನಲ್ಲಿ ಹರಿಯಾಣದ ಗ್ರಾಮವೊಂದರಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಅತ್ಯಾಚಾರದ ಕುರಿತು ಮಾತನಾಡಿದ ಕಾಪ್‌ ಪಂಚಾಯಿತಿ ನಾಯಕನೊಬ್ಬ 'ಚೌ ಮಿಯನ್‌’ ಎಂಬ ನಮ್ಮ ಸಂಪ್ರದಾಯದ್ದಲ್ಲದ ಆಹಾರವನ್ನು ಸೇವಿಸುತ್ತಿರುವುದರಿಂದ ಭಾರತದಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದಿದ್ದ. ಮತ್ತೊಬ್ಬ ಕಾಪ್‌ ಪಂಚಾಯಿತಿಯ ನಾಯಕ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವಂತೆ ಸೂಚಿಸಿದ್ದ. ಯುವತಿಯರಿಗೆ ಬೇಗ ಮದುವೆ ಮಾಡಿದರೆ ಅತ್ಯಾಚಾರಗಳ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ತರ್ಕ ಅವನದ್ದು.

ಇದಕ್ಕೆ ವಿರುದ್ಧವೆನಿಸುವ ಕಾಪ್‌ ಪಂಚಾಯತ್‌ಗಳು ಕೂಡ ಅಸ್ತಿತ್ವದಲ್ಲಿದ್ದು, ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನೂ ಕೂಡ ಮಾಡುತ್ತವೆ. 2015ರಲ್ಲಿ ನಡೆದ ಸರ್ವ ಕಾಪ್‌ ಪಂಚಾಯಿತಿಗಳ ಸಭೆಯಲ್ಲಿ “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ”(Save Daughters, educate Daughter) ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು.

2014ರಲ್ಲಿ ಹರಿಯಾಣದ ದೊಡ್ಡ ಕಾಪ್‌ ಪಂಚಾಯಿತಿ ಎನಿಸಿಕೊಂಡಿರುವ ‘ಸತ್ರೋಲ್‌ ಕಾಪ್‌’ ಅಂತರ್ಜಾತಿ ವಿವಾಹವನ್ನು ಮಾನ್ಯಗೊಳಿಸಿತ್ತು. ಒಂದೇ ಗೋತ್ರದ, ಒಂದೇ ಹಳ್ಳಿಯ, ಅಥವಾ ನೆರೆಹೊರೆಯ ಹಳ್ಳಿಗಳಲ್ಲಿಯೇ ಸಂಬಂಧ ಹುಡುಕುವುದಕ್ಕೆ ಈ ಕಾಪ್‌ ಪಂಚಾಯತ್‌ ಅಸ್ತು ಎಂದಿತ್ತು. ಆದರೆ ಇಂತಹ ಕಾಪ್‌ ಪಂಚಾಯಿತಿಗಳ ಸಂಖ್ಯೆ ತೀರಾ ವಿರಳ. ಬಹುಪಾಲು ಕಾಪ್‌ ಪಂಚಾಯಿತಿಗಳು ಪುರುಷ ಪ್ರಾಧಾನ್ಯತೆಯ ದ್ಯೋತಕಗಳಂತಿದ್ದು, ‘ಮರ್ಯಾದಾ ಹತ್ಯೆ’ಗಳಂತಹ ಅಮಾನುಷ ಕ್ರೌರ್ಯಗಳಲ್ಲಿ ನೇರವಾಗಿ ಭಾಗಿಯಾಗಿವೆ.

 ಸಾಂಧರ್ಬಿಕ ಚಿತ್ರ.
ಸಾಂಧರ್ಬಿಕ ಚಿತ್ರ.
youthennews.com

ಈ ಕಾರಣದಿಂದಾಗಿಯೇ ಹಲವಾರು ಟೀಕೆಗಳನ್ನು ಕಾಪ್‌ ಪಂಚಾಯಿತಿಗಳು ಎದುರಿಸುತ್ತಿವೆ. ತಮ್ಮ ಜಾತಿ, ಪಂಗಡಗಳನ್ನು ಬಿಟ್ಟು ಮದುವೆಯಾದ ಜೋಡಿಗಳಿಗೆ ಪ್ರಾಣ ಬೆದರಿಕೆ ಹಾಕುತ್ತಿರುವ ಕಾಪ್‌ ಪಂಚಾಯಿತಿಗಳು ಸಮಾಜದಲ್ಲಿ ಹಿಂಸೆಯನ್ನು ಬಿತ್ತುತ್ತಿವೆ ಎಂದು 2012ರಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ವರದಿಯೊಂದನ್ನು ತಯಾರಿಸಿತ್ತು.

ಕಾಪ್‌ ಪಂಚಾಯಿತಿಗಳು ಅನ್ಯ ಧರ್ಮೀಯರನ್ನು, ಅನ್ಯಜಾತಿಯವರನ್ನು ಮದುವೆಯಾಗಲು ಬಯಸುವ ಅಥವಾ ಮದುವೆಯಾದವರ ಮೇಲೆ ಸಾಂಸ್ಥಿಕ ದೌರ್ಜನ್ಯವನ್ನು ಎಸಗುತ್ತಿವೆ, ‘ಮರ್ಯಾದಾ ಹತ್ಯೆಗೆ ಪ್ರೇರೇಪಿಸುತ್ತಿವೆ’ ಎಂದಿದ್ದ ಸುಪ್ರಿಂ ಕೋರ್ಟ್, ಕಾಪ್‌ ಪಂಚಾಯಿತಿಗಳು ಕಾನೂನು ಬಾಹಿರವಾದವು ಎಂದು ಘೋಷಿಸಿತ್ತು.

2012ರಲ್ಲಿ ಕಾಪ್‌ ಪಂಚಾಯಿತಿಗಳ ಮೇಲೆ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಂಬಂಧಿಸದಂತೆ ವರದಿ ತಯಾರಿಸಲು ಸುಪ್ರಿಂ ಕೋರ್ಟ್‌ ಹಿರಿಯ ವಕೀಲ ರಾಜು ರಾಮಚಂದ್ರನ್‌ ಅವರನ್ನು ನೇಮಿಸಿತ್ತು. ತಮ್ಮ ವರದಿಯಲ್ಲಿ ರಾಜು ರಾಮಚಂದ್ರನ್‌, ಸ್ವಘೋಷಿತ ನ್ಯಾಯಮೂರ್ತಿಗಳಾಗಿರುವ ಕಾಪ್‌ ಪಂಚಾಯಿತಿ ನಾಯಕರನ್ನು ಬಂಧಿಸಬೇಕು ಎಂದು ತಿಳಿಸಿದ್ದರು.

ಎಷ್ಟೇ ವಿರೋಧಗಳು, ವಿರುದ್ಧದ ತೀರ್ಪುಗಳು ಬಂದರೂ ಕೂಡ ಕಾಪ್‌ ಪಂಚಾಯಿತಿಗಳು ಇನ್ನೂ ತಮ್ಮ ಅಸ್ತಿತ್ವವನ್ನು ಭದ್ರವಾಗಿಯೇ ಉಳಿಸಿಕೊಂಡಿವೆ. ಸ್ಥಳೀಯ ರಾಜಕಾರಣಿಗಳಿಗೆ ಸಾವಿರಾರು ಮತಗಳನ್ನು ಒಟ್ಟಿಗೆ ತಂದುಕೊಡುವ ವೋಟ್‌ಬ್ಯಾಂಕ್‌ಗಳಾಗಿ ರೂಪ ತಾಳಿವೆ. ಆದ್ದರಿಂದಾಗಿ ಎಷ್ಟೋ ಜನನಾಯಕರು ಕಾಪ್‌ ಪಂಚಾಯಿತಿಗಳ ಪರವಾಗಿಯೇ ಇದ್ದಾರೆ.

ಕಾಪ್‌ ಪಂಚಾಯಿತಿಗಳ ವಿರುದ್ಧ ಮೊದಲು ದೊಡ್ಡ ದನಿ ಎದ್ದಿದ್ದು 2012ರಲ್ಲಿ. ಹರಿಯಾಣದಲ್ಲಿ ದಲಿತ ಸಮುದಾಯದ ಯುವತಿಯೊಬ್ಬಳ ಮೇಲೆ 4 ಜನ ಅತ್ಯಾಚಾರವೆಸಗಿದ್ದರು. ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಸುದ್ದಿ ದೇಶಾದ್ಯಂತ ಹಬ್ಬಿತ್ತು. ಸ್ಥಳೀಯ ಕಾಪ್‌ ಪಂಚಾಯಿತಿ ಅತ್ಯಾಚಾರ ನಡೆಸಿದವರಿಗೆ ಶಿಕ್ಷೆ ನೀಡುವುದರ ಬದಲು, ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಬೇಕು ಎಂದಿತ್ತು. ಆತ್ಮಹತ್ಯೆ ಮಾಡಿಕೊಂಡ ಯುವತಿಯ ಮನೆಗೆ ತೆರಳಿದ್ದ ಅಂದಿನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಕೃತ್ಯದ ವಿರುದ್ಧ ಹರಿಹಾಯ್ದಿದ್ದರು. ಆದರೆ ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರದ ಬಗ್ಗೆ ಒಂದು ಮಾತನ್ನೂ ಅಡಿರಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿದ್ದವು.

ಹೀಗೆ ಕಾಪ್‌ ಪಂಚಾಯಿತಿಗಳನ್ನು ತಡೆಯಲು ಅಗತ್ಯವಾದ ಯಾವ ಕ್ರಮಗಳಿಗೂ ಮುಂದಾಗದ ರಾಜಕಾರಣಿಗಳು, ಶೋಷಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆದ್ದರಿಂದಲೆ ಕಾಪ್‌ ಪಂಚಾಯಿತಿಗಳು 21ನೇ ಶತಮಾನದಲ್ಲಿಯೂ ಕೂಡ ಗಟ್ಟಿಯಾಗಿ ನಿಂತು ದೌರ್ಜನ್ಯವನ್ನು ಮಾನ್ಯ ಮಾಡುತ್ತಿವೆ. ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ದುರ್ಬಲರ ಮೇಲೆ ಸವಾರಿ ಮಾಡುತ್ತಿವೆ.

5 ವರ್ಷದ ಪುಟ್ಟ ಬಾಲಕಿಯ ಮೇಲೆ ಹೇರಿರುವ ಬಹಿಷ್ಕಾರ ಕಾಪ್‌ ಪಂಚಾಯಿತಿಗಳ ಅಮಾನುಷ ನಿರ್ಧಾರಗಳಿಗೆ ಚಿಕ್ಕ ಉದಾಹರಣೆಯಷ್ಟೆ. ಇದಕ್ಕಿಂತಲೂ ದೊಡ್ಡವೆನಿಸುವ ಎಷ್ಟೋ ಪ್ರಕರಣಗಳು ಬೆಳಕಿಗೇ ಬಾರದಿರುವುದು ದುರಂತ.