‘ಆಕಾಂಕ್ಷಿಗಳ ಗಮನಕ್ಕೆ’: ಕುಸಿಯುತ್ತಿದೆ ಇಂಜಿನಿಯರಿಂಗ್‌ ದಾಖಲಾತಿ; ಕರ್ನಾಟಕದ  ಸ್ಥಿತಿ ಚಿಂತಾಜನಕ
COVER STORY

‘ಆಕಾಂಕ್ಷಿಗಳ ಗಮನಕ್ಕೆ’: ಕುಸಿಯುತ್ತಿದೆ ಇಂಜಿನಿಯರಿಂಗ್‌ ದಾಖಲಾತಿ; ಕರ್ನಾಟಕದ ಸ್ಥಿತಿ ಚಿಂತಾಜನಕ

ಯುವಜನರು ಇಂದು ಇಂಜಿನಿಯರಿಂಗ್‌ನಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ನೀಡಿ ಕೌಶಲ್ಯ ತುಂಬದ ಕಾಲೇಜುಗಳು ಮತ್ತು ಮುಂದಾಲೋಚನೆ ಇಲ್ಲದೇ ಕಾಲೇಜುಗಳ ಸ್ಥಾಪನೆಗೆ ಅವಕಾಶ ನೀಡಿ ಉದ್ಯೋಗ ಸೃಷ್ಠಿಸದ ಸರಕಾರಗಳು. 

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಭಾಷಣಗಳಲ್ಲಿ ‘ಮೇಕ್‌ ಇನ್‌ ಇಂಡಿಯಾ’ ಹೆಸರನ್ನು ಪ್ರಸ್ತಾಪಿಸಿ, ಭಾರತವು ಹೆಚ್ಚಿನ ಔದ್ಯಮಿಕ ಸಾಮರ್ಥ್ಯವನ್ನು ಹೊಂದಲಿದೆ ಎನ್ನುತ್ತಾರೆ. ಆದರೆ ಉದ್ಯೋಗಗಳು ಮಾತ್ರ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಈ ನಿರುದ್ಯೋಗದಿಂದ ಬಳಲಿ ಬೆಂಡಾಗಿರುವವರ ಪೈಕಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ವಿದ್ಯಾಭ್ಯಾಸ ನಡೆಸಿದ ಇಂಜಿನಿಯರಿಂಗ್‌ ಪದವೀಧರರ ವರ್ಗವೂ ಒಂದು. ಇದರ ಪರಿಣಾಮವಾಗಿಯೇ ಭಾರತೀಯರಲ್ಲಿ ಇಂಜಿನಿಯರಿಂಗ್‌ ವಿದ್ಯಾಭ್ಯಾಸದ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿದೆ. ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಎಂಜಿನಿಯರಿಂಗ್‌ ಸೀಟುಗಳು ಖಾಲಿ ಉಳಿಯುತ್ತಾ ಬರುತ್ತಿವೆ. ಕರ್ನಾಟಕವೂ ಕೂಡ ಇದರಿಂದ ಹೊರತೇನಲ್ಲ.  

ತೆಲಂಗಾಣದಲ್ಲಿ ಪ್ರಸಕ್ತ 2018-19ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಲಭ್ಯವಿರುವ ಇಂಜಿನಿಯರಿಂಗ್‌ ಸೀಟುಗಳ ಸಂಖ್ಯೆ 65,648. ಆದರೆ ಇದರಲ್ಲಿ 51,157 ಸೀಟಗಳ ಮಾತ್ರ ಭರ್ತಿಯಾಗಿವೆ. ಒಟ್ಟು 14,491 ಎಂಜಿನಿಯರಿಂಗ್‌ ಸೀಟುಗಳು ಖಾಲಿ ಉಳಿದಿದ್ದು ಶೇ.74.18ರಷ್ಟು ಮಾತ್ರ ದಾಖಲಾತಿಯಾಗಿದೆ ಎಂದು ತೆಲಂಗಾಣದ ತಾಂತ್ರಿಕ ಶಿಕ್ಷಣ ಆಯುಕ್ತ ನವೀನ್‌ ಮಿತ್ತಲ್‌ ಗುರುವಾರ ಹೇಳಿದ್ದಾರೆ.

ನವೀನ್‌ ಮಿತ್ತಲ್‌ ಹೇಳುವಂತೆ, ಶೇ.25.82ರಷ್ಟು ಸೀಟುಗಳು ಖಾಲಿ ಉಳಿದಿವೆ. ವಿಶ್ವ ವಿದ್ಯಾಲಯದ 12 ಕಾಲೇಜುಗಳು ಮತ್ತು 48 ಖಾಸಗಿ ಕಾಲೇಜುಗಳು ಮಾತ್ರ ಶೇ.100ರಷ್ಟು ದಾಖಲಾತಿಯನ್ನು ಹೊಂದಿವೆ. 43 ಕಾಲೇಜುಗಳು 100ಕ್ಕಿಂತ ಕಡಿಮೆ ದಾಖಲಾತಿಗಳನ್ನು ಕಂಡಿದ್ದರೆ, 24 ಕಾಲೇಜುಗಳು 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿವೆ. 7 ಕಾಲೇಜುಗಳು ಒಂದಂಕಿಯ ದಾಖಲಾತಿಯನ್ನು ಕಂಡಿದ್ದು, 2 ಕಾಲೇಜುಗಳ ಪ್ರಧ್ಯಾಪಕರಿಗೆ ಭೋದನೆ ಮಾಡಲು ಹೊಸ ವಿದ್ಯಾರ್ಥಿಗಳೇ ದಾಖಲಾಗಿಲ್ಲ.

ಗುಜರಾತ್‌ನಲ್ಲಿ 2018-19ರ ಇಂಜಿನಿಯರಿಂಗ್‌ ಕೋರ್ಸ್‌ಗಳಿಗೆ ನೊಂದಣಿಯಾಗಲು ಮಾರ್ಚ್‌ 31ನ್ನು ಕೊನೆಯ ದಿನಾಂಕವಾಗಿ ನಿಗಧಿಪಡಿಸಲಾಗಿತ್ತು. ಗುಜರಾತ್‌ನ ವೃತ್ತಿಪರ ಕೋರ್ಸ್‌ಗಳ ದಾಖಲಾತಿ ಸಮಿತಿ ಹೇಳಿರುವಂತೆ, ರಾಜ್ಯದಲ್ಲಿ ನೊಂದಣಿಯ ಹಂತದಲ್ಲೇ 22,000 ಎಂಜಿನಿಯರಿಂಗ್‌ ಸೀಟುಗಳು ಖಾಲಿ ಉಳಿದಿವೆ. 2017-18ನೇ ಶಯಕ್ಷಣಿಕ ಸಾಲಿನಲ್ಲೂ ಕೂಡ ಇಷ್ಟೇ ಪ್ರಮಾಣದ ಸೀಟುಗಳು ಭರ್ತಿಯಾಗದೇ ಉಳಿದಿದ್ದವು.

ಕರ್ನಾಟಕದ ಪರಿಸ್ಥಿತಿಯೇನು ಭಿನ್ನವಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಇಂಜಿನಿಯರಿಂಗ್‌ ಕಾಲೇಜುಗಳೂ ಕೂಡ ದಾಖಲಾತಿಯಲ್ಲಿ ಹಿನ್ನಡೆಯನ್ನು ಕಾಣುತ್ತಿವೆ. 2016-17ನೇ ಸಾಲಿನಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಕಾಲೇಜುಗಳಲ್ಲಿನ 51,443 ಸೀಟುಗಳ ಪೈಕಿ 36,174 ಸೀಟುಗಳಷ್ಟೇ ಭರ್ತಿಯಾಗಿತ್ತು. 15,269 ಸೀಟುಗಳು ಖಾಲಿ ಉಳಿದು, ಶೇ.70.32ರಷ್ಟು ದಾಖಲಾತಿ ನಡೆದಿತ್ತು.

Also read: ‘ಕಾಲೈ ತಸ್ಮೈ ನಮಃ’: ಬೆಲೆ ಕಳೆದುಕೊಂಡ ಒಂದು ಕಾಲದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ

ಈ ದಾಖಲಾತಿಯ ಕುಸಿತ ಮುಂದುವರೆದಿದ್ದು, 2017-18ನೇ ಸಾಲಿನಲ್ಲಿ ದಾಖಲಾತಿಯ ಪ್ರಮಾಣ ಕಳೆದ ಸಾಲಿಗಿಂತ ಶೇ.4.32ರಷ್ಟು ಕುಸಿತ ಕಂಡಿದೆ. 63,731 ಸೀಟುಗಳ ಪೈಕಿ 42,036 ಸೀಟುಗಳು ಭರ್ತಿಯಾಗಿದ್ದು, 21,695 ಸೀಟುಗಳು ಖಾಲಿ ಉಳಿದಿವೆ. ಒಟ್ಟಾರೆ ಶೇ.66ರಷ್ಟು ಮಾತ್ರ ದಾಖಲಾತಿ ಕಂಡಿದೆ.

ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪ್ರವೇಶದಲ್ಲೂ ಸಹ ಕುಸಿತ ಕಂಡು ಬಂದಿದೆ. 2016-17ರಲ್ಲಿ ಬೆಂಗಳೂರು ವಲಯದಲ್ಲಿ ಪಿಜಿ ಕೋರ್ಸ್‌ಗಳಿಗೆ ಶೇ.46.83 ರಷ್ಟು ಪ್ರವೇಶಾತಿ ನಡೆದರೆ ಮೈಸೂರು ವಲಯದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು, ಅಂದರೆ ಶೇ.51.86 ರಷ್ಟು ಪ್ರವೇಶಾತಿಯಾಗಿದೆ. ಇಡೀ ರಾಜ್ಯದಲ್ಲಿ 2016-17ಕ್ಕೆ ಹೋಲಿಸಿದರೆ 2017-18ನೇ ಸಾಲಿನ ಪ್ರವೇಶಾತಿಯಲ್ಲಿ ಶೇ.3.68 ಕುಸಿತ ಕಂಡಿದೆ.

2016-17ರಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಲಯದಲ್ಲಿ ಲಭ್ಯವಿದ್ದ 95,863 ಸೀಟುಗಳ ಪೈಕಿ 68,749 ಸೀಟುಗಳು ಭರ್ತಿಯಾಗಿದ್ದವು. 27,114 ಸೀಟುಗಳು ಭರ್ತಿಯಾಗದೆ ಉಳಿದಿದ್ದವು. 2017-18 ರಲ್ಲಿ ಲಭ್ಯವಿದ್ದ 1,18,272 ಸೀಟುಗಳ ಪೈಕಿ 81,113 ಸೀಟು ಭರ್ತಿಯಾದರೆ 37,129 ಸೀಟುಗಳು ಖಾಲಿ ಉಳಿದಿವೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೇಳುವಂತೆ ದಾಖಲಾತಿಗಳು ಕುಸಿದಿರುವ ಕಾರಣ ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜು ಮತ್ತು ಬಿಎಂಎಸ್ ಇಂಜಿನಿಯರ್ ಕಾಲೇಜು ಸೇರಿದಂತೆ 35ಕ್ಕೂ ಹೆಚ್ಚು ಕಾಲೇಜುಗಳು 75 ಇಂಜಿನಿಯರಿಂಗ್ ಕೋರ್ಸ್‌ಗಳ ಸ್ಥಗಿತಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದವು. ಈ ಮನವಿಗೆ ಎಐಸಿಟಿಇ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ.

ಕೆಲವು ಕಾಲೇಜುಗಳ ಮಂಡಳಿಗಳು ಹೇಳುವಂತೆ, ದೇಶಾದ್ಯಂತ ಇಂಜಿನಿಯರಿಂಗ್‌ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣ. ಆದರೆ ಈ ಕಾಲೇಜುಗಳಲ್ಲೂ ಕೂಡ ದಾಖಲಾತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದಕ್ಕಿಂತ ಇಂಜಿನಿಯರಿಂಗ್‌ ಕಡೆಗೆ ವಿದ್ಯಾರ್ಥಿಗಳ ಗಮನವೇ ಕಡಿಮೆಯಾಗುತ್ತಿದೆ ಎನ್ನುವುದು ಸೂಕ್ತವಾಗಬಲ್ಲದು. ಕಾರಣ ಇದಾಗಲೇ ಎಂಜಿನಿಯರಿಂಗ್‌ ಪದವಿ ಪಡೆದ ಯುವಜನರು ಅನುಭವಿಸುತ್ತಿರುವ ನಿರುದ್ಯೋಗ.

ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌ 2017ರ ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ್ದ ಅಂಕಿ ಅಂಶಗಳ ಪ್ರಕಾರ, ದೇಶದ ಶೇ.60ರಷ್ಟು ಇಂಜಿನಿಯರಿಂಗ್‌ ಪದವೀಧರರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಶೇ.1ರಷ್ಟು ಪದವೀಧರರು ಮಾತ್ರ ಬೇಸಿಗೆ ಕಾಲದಲ್ಲಿ ನಡೆಯುವ ಇಂಟರ್ನ್‌ಶಿಪ್‌ಗಳಲ್ಲಿ ಭಾಗವಹಿಸುತ್ತಾರೆ. ಉಳಿದವರದೆಲ್ಲಾ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ‘ಉದ್ಯೋಗಕ್ಕಾಗಿ ಯುವಜವರು’ ಸಂಘಟನೆಯ ಸಂಚಾಲಕ ಮುತ್ತುರಾಜು, ಅತಿಯಾಗಿ ಕಾಡುತ್ತಿರುವ ನಿರುದ್ಯೋಗ ಮತ್ತು ಮುಂದಾಲೋಚನೆಯಿಂದ ಸರಕಾರಗಳು ಈ ಅವ್ಯವಸ್ಥೆಗೆ ಕಾರಣ ಎಂದರು.

ಹಿಂದೆ ಬಿ.ಎಡ್‌/ಡಿ.ಎಡ್‌ ಕೋರ್ಸ್‌ಗಳು ಇಂಜಿನಿಯರಿಂಗ್‌ನಷ್ಟೇ ಚಾಲ್ತಿಯಲ್ಲಿದ್ದವು. ಈ ಕೋರ್ಸ್‌ಗಳ ಕಾಲೇಜು ಮತ್ತು ಕೋರ್ಸ್‌ಗಳನ್ನು ಓದುವವರ ಸಂಖ್ಯೆ ಹೆಚ್ಚಾಗಿ ಇಂದು ಲಕ್ಷಾಂತರ ಬಿಎಡ್‌/ಡಿಎಡ್‌ ಮುಗಿಸಿರುವವರು ಕೆಲಸವಿಲ್ಲದೇ ಖಾಲಿ ಕೂರಬೇಕಾಗಿದೆ. ಅಂತಹದ್ದೇ ಸ್ಥಿತಿ ಈಗ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೂ ಬಂದಿದೆ.  ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನವನ್ನು ಓದಿದವರಿಗೆ ಡಾಕ್ಟರ್‌ ಅಥವಾ ಇಂಜಿನಿಯರಿಂಗ್‌ ಎರಡೇ ದಾರಿ ಎನ್ನುವಂತಾಗಿತ್ತು. ಆದ್ದರಿಂದಾಗಿ ಇಂಜಿನಿಯರಿಂಗ್‌ ಓದುವವರ ಸಂಖ್ಯೆಯೂ ಹೆಚ್ಚಾಯಿತು. ರಾಜ್ಯದ ಅಥವಾ ದೇಶದ ಜನಸಂಖ್ಯೆ ಎಷ್ಟು, ಇಷ್ಟು ಜನಕ್ಕೆ ಎಷ್ಟು ಜನ ಇಂಜಿನಿಯರ್‌ಗಳ ಅಗತ್ಯವಿದೆ, ಅಷ್ಟು ಇಂಜಿನಿಯರ್‌ಗಳನ್ನು ತಯಾರು ಮಾಡಲು ಎಷ್ಟು ಕಾಲೇಜುಗಳ ಅಗತ್ಯವಿದೆ ಎಂಬ ಮುನ್ನೋಟವಿಲ್ಲದೇ ಸರಕಾರಗಳು ಕಾಲೇಜುಗಳನ್ನು ತೆರೆಯಲು ಮಾನ್ಯತೆ ಕೊಟ್ಟವು. ಇದರಿಂದಾಗಿ ಇಂಜಿನಿಯರಿಂಗ್‌ ಪದವಿಧರರ ಸಂಖ್ಯೆ ಜಾಸ್ತಿಯಾಗಿದೆ. ಅಗತ್ಯವಿರುವಷ್ಟು ಕೆಲಸಗಳೂ ಇಲ್ಲದೇ ನಿರುದ್ಯೋಗದಿಂದ ಪರಿತಪಿಸುವಂತಾಗಿದೆ.
ಮುತ್ತುರಾಜು, ಸಂಚಾಲಕ, ಉದ್ಯೋಗಕ್ಕಾಗಿ ಯುವಜನರು.

ಈಗಾಗಲೇ ಸರಕಾರಗಳು ನೂರಾರು ಇಂಜಿನಿಯರಿಂಗ್‌ ಕಾಲೇಜುಗಳನ್ನು ಮುಚ್ಚಿವೆ. ಈಗ ಮತ್ತೆ 300 ಕಾಲೇಜುಗಳನ್ನು ಮುಚ್ಚುವ ಭಯವೂ ಕೂಡ ಕಾಲೇಜು ಮಂಡಳಿಗಳಲ್ಲಿ ಕಾಡುತ್ತಿದೆ. ಕೆಲವು ವರ್ಷಗಳಿಂದ ಶೇ.30ಕ್ಕಿಂತಲೂ ಕಡಿಮೆ ದಾಖಲಾತಿಯನ್ನು ಹೊಂದುತ್ತಿರುವುದೇ ಈ ಮುಚ್ಚುವಿಕೆಗೆ ಕಾರಣ. ಈ ಕಾಲೇಜುಗಳನ್ನು ಮುಚ್ಚುವಂತೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್(ಎಐಸಿಟಿಎ) ಸೂಚಿಸುವ ಸಾಧ್ಯತೆಗಳು ಇವೆ. ಈ ಕುರಿತು ಚರ್ಚೆಗಳು ಕೂಡ ನಡೆಯುತ್ತಿವೆ.

ಭಾರತದಲ್ಲಿ ಅಂದಾಜು 3,000 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಪದವಿ ಶಿಕ್ಷಣವನ್ನು ನೀಡುತ್ತಿದ್ದು, 13.6 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿ ಸುಮಾರು 800 ಕಾಲೇಜುಗಳು ಶೇ.50 ಕ್ಕಿಂತ ಕಡಿಮೆ ದಾಖಲಾತಿಯನ್ನು ಹೊಂದಿವೆ. ಇವುಗಳಲ್ಲಿ 300 ಕಾಲೇಜುಗಳನ್ನು ನಿಲ್ಲಿಸುವಂತೆ ಈಗಾಗಲೇ ಕೇಳಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು 150 ಕಾಲೇಜುಗಳು ಅವುಗಳ ಸಾಮರ್ಥ್ಯದಲ್ಲಿ ಶೇ.20 ರಷ್ಟು ದಾಖಲಾತಿಗಳನ್ನು ಮಾತ್ರ ಹೊಂದಿವೆ. ಈ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಕೂಡ ಸಂದೇಹಾಸ್ಪದವೇ ಆಗಿದೆ.

ಇಂದು ವಿದ್ಯಾರ್ಥಿಗಳು ಇಂಜಿನಿಯರಿಂಗ್‌ನಿಂದ ವಿಮುಖರಾಗಿ, ಸೀಟುಗಳು ಖಾಲಿ ಉಳಿಯುತ್ತಿರುವುದರ ಹಿಂದೆ ಕಾಲೆಜುಗಳು ಹಾಗೂ ಸರಕಾರಗಳ ಪಾತ್ರ ಬಹುಮುಖ್ಯವಾದದ್ದು. ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಕೌಶಲ್ಯಯುತರನ್ನಾಗಿಸದ ಕಾಲೇಜುಗಳು ದಾಖಲಾತಿ ಕಡಿಮೆ ಪ್ರಮಾಣವನ್ನು ಕಡಿಮೆಯಾಗಿಸಿಕೊಳ್ಳುತ್ತಿವೆ. ಮತ್ತೊಂದೆಡೆ ಸರಕಾರ ಮುಂದಾಲೋಚನೆಯಿಲ್ಲದೆ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿ, ಈಗ ವಿದ್ಯಾಭ್ಯಾಸ ಮುಗಿಸಿದವರಿಗೆ ಉದ್ಯೋಗವನ್ನೂ ನೀಡಲಾಗದೇ ಯುವಜನರನ್ನು ಸಂಕಷ್ಟಕ್ಕೆ ದೂಡಿದೆ. ಮುಂದಿನ ದಿನಗಳಲ್ಲಾದರೂ ಕಾಲೇಜುಗಳ ತೆರಿಯುವಿಕೆ ಬಗ್ಗೆ ಮುಂದಾಲೋಚಿಸಿ, ಅಗತ್ಯವಿರುವಷ್ಟು ಉದ್ಯೋಗಗಳನ್ನು ಸೃಷ್ಟಿಸದಿದ್ದರೆ ಬಿಎಡ್‌/ಡಿಎಡ್‌, ಇಂಜಿನಿಯರಿಂಗ್‌ ಪದವೀಧರರ ಸ್ಥಿತಿಯೇ ಇನ್ನಿತರ ವರ್ಗದ ವಿದ್ಯಾರ್ಥಿಗಳಿಗೆ ಬರುವುದರಲ್ಲಿ ಸಂದೇಹವಿಲ್ಲ.