samachara
www.samachara.com
ಲೋಕಸಭಾ ಚುನಾವಣೆ: ಮೋದಿ ವಿರೋಧಿಗಳ ಕೊನೆಯ ಆಯ್ಕೆಗೆ ಕರ್ನಾಟಕವೇ ಮಾದರಿ!
COVER STORY

ಲೋಕಸಭಾ ಚುನಾವಣೆ: ಮೋದಿ ವಿರೋಧಿಗಳ ಕೊನೆಯ ಆಯ್ಕೆಗೆ ಕರ್ನಾಟಕವೇ ಮಾದರಿ!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಕೆಡವಲು ಎಲ್ಲಾ ಪಕ್ಷಗಳು ಒಂದಾಗಬೇಕಾದ ಅನಿವಾರ್ಯತೆ ಇದೆ. ಇದನ್ನು ಸ್ವತಃ ದೇಶದ ಅತೀ ದೊಡ್ಡ ‘ವಿರೋಧ ಪಕ್ಷ’ ಕಾಂಗ್ರೆಸ್‌ನ ಮಾಜಿ ಅಧಿನಾಯಕಿಯೇ ಒಪ್ಪಿಕೊಂಡಿದ್ದಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

“2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸಲು ವಿರೋಧ ಪಕ್ಷಗಳೆಲ್ಲಾ ಒಂದಾಗಬೇಕು. ಆದರೆ, ಇದು ಅಷ್ಟು ಸುಲಭವಲ್ಲ. ಕಾರಣ ತಳಮಟ್ಟದಲ್ಲಿ ನಾವೆಲ್ಲಾ ಪರಸ್ಪರ ವಿರೋಧಿಗಳಾಗಿದ್ದೇವೆ”- ಹೀಗಂಥ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ 2018ರ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಹೇಳಿದ್ದರು. ಇದೀಗ ಹೆಚ್ಚು ಕಡಿಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ. ಹಾಗಿದ್ದರೆ ಮೋದಿ ವಿರೋಧಿಗಳಿಗೆ ಉಳಿದಿರುವ ಆಯ್ಕೆ ಏನು? ಈ ಉತ್ತರಕ್ಕಾಗಿ ಹುಡುಕಾಟವೀಗ ಆರಂಭವಾಗಿದೆ.

ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಬಾಕಿ ಉಳಿದಿರುವುದು ಬೆರಳೆಣಿಕೆಯ ತಿಂಗಳುಗಳಷ್ಟೆ. ಈ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಕೆಡವಲು ಎಲ್ಲಾ ಪಕ್ಷಗಳು ಒಂದಾಗಬೇಕಾದ ಅನಿವಾರ್ಯತೆ ಇದೆ. ಇದನ್ನು ಸ್ವತಃ ದೇಶದ ಅತೀ ದೊಡ್ಡ ‘ವಿರೋಧ ಪಕ್ಷ’ ಕಾಂಗ್ರೆಸ್‌ನ ಮಾಜಿ ಅಧಿನಾಯಕಿಯೇ ಒಪ್ಪಿಕೊಂಡಿದ್ದಾರೆ. ಹೀಗಿದ್ದೂ ಅವರೇ ಹೇಳಿದಂತೆ ಪ್ರಾದೇಶಿಕ, ರಾಜ್ಯಗಳ ಮಟ್ಟದಲ್ಲಿ ಹೆಚ್ಚಿನ ಪಕ್ಷಗಳು ವಿರುದ್ಧ ನೆಲೆಯಲ್ಲಿರುವುದು ‘ಮಹಾಘಟಬಂಧನ’ದ ರಚನೆಗೆ ಅಡ್ಡಗಾಲಾಗಿದೆ.

ಉದಾಹರಣೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಪ್ರಬಲ ಪಕ್ಷ ತೃಣಮೂಲ ಕಾಂಗ್ರೆಸ್ ಮತ್ತು ಅಲ್ಲಿನ ವಿರೋಧಿ ಪಕ್ಷ ಸಿಪಿಐಎಂ ನಡುವೆ ಕಡು ವೈರತ್ವ ಇದೆ. ಸಮಾನ ವಿರೋಧಿ ನರೇಂದ್ರ ಮೋದಿಯವರ ಕಾರಣಕ್ಕೂ ಇವರು ಚುನಾವಣೆಗೆ ಮೊದಲು ಒಂದಾಗುವ ಲಕ್ಷಣಗಳಿಲ್ಲ. ಇನ್ನು ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷಗಳು ಪರಸ್ಪರ ವಿರುದ್ಧ ದ್ರುವದಲ್ಲಿವೆ. ಕಾಂಗ್ರೆಸ್, ಬಿಜೆಪಿ ಹೊರತಾದ ತೃತೀಯ ರಂಗದ ರಚನೆಗೆ ಟಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಓಡಾಡುತ್ತಿದ್ದರೂ, ಕಾಂಗ್ರೆಸ್ ಪಕ್ಷವನ್ನು ಪಕ್ಕಕ್ಕೆ ಎತ್ತಿಟ್ಟು ಮೋದಿ ಎದುರು ಸೋ ಕಾಲ್ಡ್ ‘ತೃತೀಯ ರಂಗ’ ಅಧಿಕಾರಕ್ಕೇರುವುದು ದೂರದ ಮಾತೇ ಸರಿ.

ಇದನ್ನು ಮನಗಂಡೇ ಸೀತರಾಂ ಯೆಚೂರಿ ಮೈತ್ರಿ ನಡೆಯಬೇಕಾದ ಸ್ವರೂಪದ ಬಗ್ಗೆ ತಮ್ಮ ಮುಕ್ತ ನಿಲುವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಮಾದರಿಯಲ್ಲಿರುವ ಈ ಸೂತ್ರ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಚಲಾವಣೆಗೆ ಬಂದರೆ ಅಚ್ಚರಿಯಿಲ್ಲ.

ಯೆಚೂರಿ ಸೂತ್ರ, ಕರ್ನಾಟಕ ಮಾದರಿ:

“ಚುನಾವಣೆಗೂ ಮೊದಲು ಭಾರತದಲ್ಲಿ ‘ಮಹಾಘಟಬಂಧನ’ದ ರಚನೆಯಾಗಲು ಸಾಧ್ಯವಿಲ್ಲ. ಇದು ಯಾವತ್ತಿಗೂ ಅಸಾಧ್ಯ. ಯಾವುದೇ ಪರ್ಯಾಯ ಸರಕಾರವೂ ಚುನಾವಣೆ ನಂತರವಷ್ಟೇ ರಚನೆಯಾಗಬಹುದು. ಇದೀಗ ಗುರಿ ಇಡಬೇಕಾಗಿದ್ದು ಪ್ರಾದೇಶಿಕ ಹೊಂದಾಣಿಕೆಗಳ ಬಗ್ಗೆ,” ಎಂಬುದಾಗಿ ಯೆಚೂರಿ ಹೇಳಿದ್ದಾರೆ. ಅಳೆದೂ ತೂಗಿ ಅವರು ಈ ಮಾತನ್ನು ಹೇಳಿದಂತಿದೆ.

ಲೋಕಸಭಾ ಚುನಾವಣೆ: ಮೋದಿ ವಿರೋಧಿಗಳ ಕೊನೆಯ ಆಯ್ಕೆಗೆ ಕರ್ನಾಟಕವೇ ಮಾದರಿ!
ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಪದಗ್ರಹಣದಲ್ಲಿ ಒಂದಾಗಿದ್ದ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಗುಂಪು (ಚಿತ್ರ ಕೃಪೆ: ದಿವೈರ್/ಪಿಟಿಐ)

ಹಾಗೆ ನೋಡಿದರೆ ಯೆಚೂರಿ ಹೇಳಿದ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ವಿಧಾನಸಭೆ ಚುನಾವಣೆ ನಡೆದಿತ್ತು. ಪರಸ್ಪರ ವಿರೋಧಿ ಪಕ್ಷಗಳಾಗಿದ್ದ ಜಾತ್ಯಾತೀತ ಜನತಾದಳ (ಜೆಡಿಎಸ್) ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸಿದ್ದವು. ಮತ್ತು ಜೆಡಿಎಸ್ ಜೊತೆಗೆ ಬಿಎಸ್‌ಪಿ ಚುನಾವಣಾ ಪೂರ್ವದಲ್ಲೇ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆ ಮುಗಿಯುತ್ತಲೂ ಅತಂತ್ರ ವಿಧಾನಸಭೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಮಾನ ಎದುರಾಳಿ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿತ್ತು. ಇದರೊಂದಿಗೆ ಬಿಎಸ್‌ಪಿ ಕೂಡ ಬಂದು ಸೇರಿಕೊಂಡಿತ್ತು. ಒಂದೊಮ್ಮೆ ಇಲ್ಲಿ ಜೆಡಿಎಸ್ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲೇ ಕನಿಷ್ಠ ಮೈತ್ರಿಗೆ ಬದಲು ‘ಹೊಂದಾಣಿಕೆ’ ಮಾಡಿಕೊಂಡಿದ್ದರೂ ಬಿಜೆಪಿ ಅಧಿಕಾರದ ಸಮೀಪಕ್ಕೆ ಬರಲೂ ಸಾಧ್ಯವಿರಲಿಲ್ಲ.

ಇದೀಗ ದೇಶದಲ್ಲೂ ಇದೇ ಮಾದರಿ ಅನುಸರಿಸುವ ಅನಿವಾರ್ಯತೆ ವಿರೋಧಿ ಪಕ್ಷಗಳ ಮುಂದಿದೆ. ಚುನಾವಣೆಗೆ ಮೊದಲು ಪರಸ್ಪರ ಸಹಮತ ಇರುವ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು. ಕೆಲವು ಕಡೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದು. ನಂತರ ಚುನಾವಣೆ ಮುಗಿದ ಮೇಲೆ ಸಮಾನ ವಿರೋಧಿಯನ್ನು ಅಧಿಕಾರದಿಂದ ದೂರವಿಡಲು ಸರಕಾರ ರಚಿಸುವ ಸಾಮರ್ಥ್ಯ ಇದ್ದ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು. ಸಾಧ್ಯವಾಗದಿದ್ದಲ್ಲಿ ಹೊರಗಿನಿಂದ ಬೆಂಬಲ ನೀಡುವುದು ವಿರೋಧ ಪಕ್ಷಗಳ ಮುಂದಿರುವ ಸರಳ ಸೂತ್ರದಂತೆ ಭಾಸವಾಗುತ್ತಿದೆ.

2004ರಲ್ಲೂ ಇದೇ ಮಾದರಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಅವತ್ತು ಟಿಎಂಸಿ ಸರಕಾರದ ಭಾಗವಾಗಿದ್ದರೆ, ಸಿಪಿಐಎಂ ಹೊರಗಿನಿಂದ ಬೆಂಬಲ ನೀಡಿ ಕೇಂದ್ರದಲ್ಲಿ ಮನ್‌ಮೋಹನ್ ಸಿಂಗ್ ರಚನೆಗೆ ಅಗತ್ಯ ಕೊಡುಗೆ ನೀಡಿತ್ತು. ಎಲ್ಲಾ ಸಂಘರ್ಷಗಳಾಚೆಗೆ ಟಿಎಂಸಿ ಮತ್ತು ಸಿಪಿಐಎಂ ಒಂದೇ ಸರಕಾರದ ಭಾಗವಾಗಿದ್ದವು. ಮತ್ತೆ 2019ರಲ್ಲಿ ಇದೇ ಸ್ವರೂಪದ ಹೊಂದಾಣಿಕೆಗಳು ನಡೆಯಲಿವೆಯಾ? ಮೋದಿಯನ್ನು ಸೋಲಿಸಲು ವಿರೋಧಿಗಳು ಸಫಲರಾಗಲಿದ್ದಾರಾ? ಕಾಲವೇ ಉತ್ತರಿಸಲಿದೆ.