samachara
www.samachara.com
ತೆರೆ ಮರೆಗೆ ಸರಿದ ‘ಸಾಫ್ಟ್‌ ಹಿಂದುತ್ವ’; 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಜೆಂಡಾ?
COVER STORY

ತೆರೆ ಮರೆಗೆ ಸರಿದ ‘ಸಾಫ್ಟ್‌ ಹಿಂದುತ್ವ’; 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಜೆಂಡಾ?

‘ಸಾಫ್ಟ್‌ ಹಿಂದುತ್ವ’ ತನ್ನ ಪಾಲಿಗೆ ನಿರೀಕ್ಷಿತ ಲಾಭ ತಂದುಕೊಡುವುದಿಲ್ಲ ಎಂಬುದು ಈಗ ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಾಗಿದೆ. ಹೀಗಾಗಿ ಸಾಫ್ಟ್‌ ಹಿಂದುತ್ವದಿಂದ ದೂರ ಬಂದು ‘ಎಲ್ಲರಿಗಾಗಿ ಅಜೆಂಡಾ’ ಎನ್ನುತ್ತಿದೆ ಕಾಂಗ್ರೆಸ್‌.

ದಯಾನಂದ

ದಯಾನಂದ

2019ರ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಈಗಾಗಲೇ ತಳಮಟ್ಟದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿವೆ. ಬಿಜೆಪಿ ಯಾವ ಯಾವ ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡರೆ ಲಾಭ ಎಂಬ ಬಗ್ಗೆ ಚಿಂತಿಸುತ್ತಿದ್ದರೆ, ಕಾಂಗ್ರೆಸ್‌ ಚುನಾವಣಾ ಅಜೆಂಡಾ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಈ ಮಧ್ಯೆ ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿರುವ ಕೆಲ ಮುಸ್ಲಿಂ ಮುಖಂಡರು ಹಾಗೂ ವಿಚಾರವಾದಿಗಳು ಕಾಂಗ್ರೆಸ್‌ನ ‘ಸಾಫ್ಟ್‌ ಹಿಂದುತ್ವ’ದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಗುಜರಾತ್‌ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ತೋರಿದ ಸಾಫ್ಟ್‌ ಹಿಂದುತ್ವ ದೇಶದ ಮುಸ್ಲಿಂ ಮತ್ತು ದಲಿತರಲ್ಲಿ ಕಳವಳ ಉಂಟು ಮಾಡಿದೆ ಎಂದು ಮುಸ್ಲಿಂ ಮುಖಂಡರು ಹೇಳಿಕೊಂಡಿದ್ದಾರೆ.

ಆದರೆ, ರಾಹುಲ್‌ ಗಾಂಧಿ ಸಾಫ್ಟ್‌ ಹಿಂದುತ್ವ ಅಥವಾ ಯಾವುದೇ ಒಂದು ಸಿದ್ಧಾಂತದ ಪರವಾದ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ 2019ರ ಚುನಾವಣೆಗೆ ಹೋಗುವುದಿಲ್ಲ ಎಂದಿದ್ದಾರೆ. ಅಲ್ಲದೆ, “ಕಾಂಗ್ರೆಸ್ ಯಾವುದೇ ಒಂದು ಧರ್ಮ ಅಥವಾ ಒಂದು ಜನಾಂಗದ ಪರವಾಗಿ ಇರುವುದಿಲ್ಲ. ಎಲ್ಲರನ್ನೂ ಒಂದಾಗಿ ಮುನ್ನಡೆಸುವ ಅಜೆಂಡಾ ಕಾಂಗ್ರೆಸ್‌ನದ್ದು” ಎಂದು ರಾಹುಲ್‌ ಹೇಳಿದ್ದಾರೆ.

ಗುಜರಾತ್‌ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಪರವಾದ ಅಲೆ ಹೆಚ್ಚಾಗಿರುವ ಕಾರಣ ಕಾಂಗ್ರೆಸ್‌ ಸಾಫ್ಟ್‌ ಹಿಂದುತ್ವ ಅಳವಡಿಸಿಕೊಂಡಿತ್ತು. ರಾಹುಲ್‌ ಗಾಂಧಿ ದೇವಸ್ಥಾನ ಭೇಟಿ, ಜನಿವಾರ ಧರಿಸಿರುವ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬಂದಿದ್ದವು. ಈ ಸಾಫ್ಟ್‌ ಹಿಂದುತ್ವ ಗುಜರಾತ್‌ನಲ್ಲಿ ಕಾಂಗ್ರೆಸ್‌ ಬಿಜೆಪಿಯನ್ನು ಸೋಲಿಸಲಾಗದಿದ್ದರೂ, ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ನೆರವಾಗಿತ್ತು.

ಗುಜರಾತ್‌ ಚುನಾವಣಾ ಮಾದರಿಯಿಂದ ದೇಶದ ಇತರೆ ಭಾಗಗಳ ಚುನಾವಣೆಗಳಲ್ಲೂ ಕಾಂಗ್ರೆಸ್‌ ಈ ಸಾಫ್ಟ್‌ ಹಿಂದುತ್ವದ ಪ್ರಯೋಗ ಮಾಡುತ್ತಾ ಬಂದಿತು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಟೆಂಪಲ್‌ ರನ್‌ ನಡೆಸಿತು. ಕಾಲಕ್ಕೆ ತಕ್ಕಂತೆ ಚುನಾವಣಾ ಅಜೆಂಡಾಗಳೂ ಬದಲಾಗಬೇಕೆಂಬುದನ್ನು ಅರಿತ ಕಾಂಗ್ರೆಸ್‌ ‘ಸೆಂಟರ್‌ ಲೆಫ್ಟ್‌’ನಿಂದ ಸ್ವಲ್ಪ ಮಟ್ಟಿಗೆ ಬಲಕ್ಕೆ ವಾಲಿದ್ದು ಗುಜರಾತ್‌ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬಂತು.

ರಾಹುಲ್‌ ಗಾಂಧಿ ಟೆಂಪಲ್‌ ರನ್‌ ಗುಜರಾತ್‌ನಲ್ಲಿ ಲಾಭ ಮಾಡಿಕೊಟ್ಟಂತೆ ಕರ್ನಾಟಕದಲ್ಲಿ ಫಲ ಕೊಡಲಿಲ್ಲ. ಹೀಗಾಗಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ದಾಳ ಉರುಳಿಸುವ ಸಾಧ್ಯತೆ ಕಡಿಮೆ. ಸಾಫ್ಟ್‌ ಹಿಂದುತ್ವದಿಂದ ಈಗ ಕಾಂಗ್ರೆಸ್‌ಗೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.
- ಡಾ. ಹರೀಶ್‌ ರಾಮಸ್ವಾಮಿ, ಹಿರಿಯ ರಾಜಕೀಯ ವಿಶ್ಲೇಷಕ

ಆದರೆ, ಸಾಫ್ಟ್‌ ಹಿಂದುತ್ವ ಕರ್ನಾಟಕದಲ್ಲಿ ಕೆಲಸ ಮಾಡಲಿಲ್ಲ. ರಾಹುಲ್‌ ಗಾಂಧಿ ನಡೆಸಿದ ಟೆಂಪಲ್‌ ರನ್‌ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರಲು ಸಾಧ್ಯವಾಗುವಷ್ಟು ಬಹುಮತ ತಂದುಕೊಡಲಿಲ್ಲ. ಹೀಗಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್‌ ತನ್ನ ಚುನಾವಣಾ ಅಜೆಂಡಾಗಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿರುವಂತಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಸೆಂಟರ್‌ ಲೆಫ್ಟ್‌ ಆಗಿದ್ದರೂ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವರು ಆರ್‌ಎಸ್‌ಎಸ್‌ನವರಿಗಿಂತ ಹೆಚ್ಚು ಹಿಂದುತ್ವ ತೋರಿಸುವವರಿದ್ದಾರೆ. ಕಾಂಗ್ರೆಸ್‌ನ ಹಳೇ ತಲೆಗಳಿಂದ ಹಿಡಿದು ಹೊಸಬರವೆರಗೂ ಹಲವು ನಾಯಕರು ಹಿಂದುತ್ವವನ್ನು ಮೆರೆಸುತ್ತಿದ್ದಾರೆ.

ಈ ನಾಯಕರ ಆಚರಣೆಗಳಲ್ಲಿ ಕಂಡು ಬರುವ ಹಿಂದುತ್ವ ಕಟ್ಟಾ ಹಿಂದುತ್ವವಾದಿಗಳಿಗಿಂತಲೂ ನಾಲ್ಕು ಹೆಜ್ಜೆ ಮುಂದೆ ಇರುತ್ತದೆ. ರಾಜ್ಯ ಕಾಂಗ್ರೆಸ್‌ನ ಮುಂಚೂಣಿಯಲ್ಲಿರುವ ಶಾಮನೂರು ಶಿವಶಂಕರಪ್ಪ, ಆರ್.ವಿ. ದೇಶಪಾಂಡೆಯಿಂದ ಹಿಡಿದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ವರೆಗೂ ಕಾಂಗ್ರೆಸ್‌ ಪಾಳಯದಲ್ಲಿರುವ ಬಹುತೇಕರು ಹಿಂದುತ್ವ ಧರ್ಮ ಪಾಲನೆಯನ್ನು ಬಿಂಬಿಸಿಕೊಂಡು ಬಂದಿರುವವರೇ.

ದಲಿತ ಸಮುದಾಯದ ಪರಮೇಶ್ವರ್‌ ಕೆಲವು ವೇದಿಕೆಗಳಲ್ಲಷ್ಟೇ ಬೌದ್ಧ ಧರ್ಮದ ಬಗ್ಗೆ ಮಾತನಾಡುತ್ತಾರೆ ಬಿಟ್ಟರೆ ಅವರ ಆಚರಣೆಯಲ್ಲಿ ಹಿಂದುತ್ವಕ್ಕೇ ಮೊದಲ ಸ್ಥಾನ. ಉಪ ಮುಖ್ಯಮಂತ್ರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವುದರಿಂದ ಹಿಡಿದು ಹೋಮ ಹವನಗಳವರೆಗೂ ಪರಮೇಶ್ವರ್‌ ಹಿಂದುತ್ವವನ್ನು ಮೆರೆಸುತ್ತಲೇ ಬರುತ್ತಿದ್ದಾರೆ.

ಈ ರೀತಿಯ ಹಿಂದುತ್ವದ ತೋರಿಕೆಯಿಂದ ರಾಜಕೀಯವಾಗಿ ಸ್ವಲ್ಪಮಟ್ಟಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರಕ್ಕೆ ಇಂಬು ಕೊಟ್ಟಿದ್ದು ಗುಜರಾತ್‌ ಚುನಾವಣೆ. ಒಟ್ಟು 182 ಸ್ಥಾನಗಳಿರುವ ಗುಜರಾತ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 2017ರ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೂ ಹಿಂದಿನ ಚುನಾವಣೆಯಲ್ಲಿ (2012) ಕಾಂಗ್ರೆಸ್‌ ಗಳಿಸಿದ್ದ ಸ್ಥಾನಗಳು ಕೇವಲ 16. ಈ ಸಂಖ್ಯೆ ಕಾಂಗ್ರೆಸ್‌ ಪಾಲಿಗೆ ಭಾರೀ ಪ್ರಮಾಣದ ಏರಿಕೆಯೇ ಆಗಿತ್ತು.

16ರಿಂದ 77 ಸ್ಥಾನಗಳಿಗೆ ತಲುಪಲು ಕಾಂಗ್ರೆಸ್‌ಗೆ ನೆರವಾಗಿದ್ದು ಸಾಫ್ಟ್‌ ಹಿಂದುತ್ವ ಎಂಬ ನಂಬಿಕೆಯ ಮೇಲೆಯೇ ಕಾಂಗ್ರೆಸ್‌ ಮುಂದಿನ ಚುನಾವಣೆಗಳಲ್ಲೂ ಇದೇ ಮಾದರಿಯನ್ನು ಮುಂದುವರಿಸಿತ್ತು. ಆದರೆ, ಈ ಪ್ರಯೋಗ ಹೆಚ್ಚಿನ ಸಂದರ್ಭದಲ್ಲಿ ಲಾಭ ತಂದುಕೊಡಲಿಲ್ಲ. ಆದರೂ ಹಿಂದುತ್ವವನ್ನೇ ಪ್ರತಿಪಾದಿಸುವ ಪಕ್ಷವಾಗಿರು ಬಿಜೆಪಿ ಬಿಟ್ಟರೆ ಕಾಂಗ್ರೆಸ್‌ನಲ್ಲಿರುವ ಹೆಚ್ಚು ರಾಜಕಾರಣಿಗಳು ಹಿಂದುತ್ವವನ್ನು ತಮ್ಮ ಆಚರಣೆಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ಗಾಗಿ ಇರುವ ಓಟ್‌ ಬ್ಯಾಂಕ್‌ ಜತೆಗೆ ಒಂದಷ್ಟು ಹಿಂದೂ ಮತಗಳು ಸಿಕ್ಕರೂ ಅದು ಬೋನಸ್‌ ಎಂದು ಕಾಂಗ್ರೆಸ್‌ ಮುಖಂಡರು ಭಾವಿಸಿರುವಂತಿದೆ. ಹೀಗಾಗಿ ಯಾರು ಎಷ್ಟೇ ಟೀಕೆಗಳನ್ನು ಮಾಡಿದರೂ ಆಚರಣೆಯಲ್ಲಿ ಅವರು ಹಿಂದುತ್ವ ತೋರಿಸಿಕೊಳ್ಳುವುದನ್ನು ಕೈಬಿಟ್ಟಿಲ್ಲ. ವೈಯಕ್ತಿಕ ಎಂಬ ಹೆಸರಿನಲ್ಲಿ ಹಿಂದುತ್ವದ ಆಚರಣೆಗಳನ್ನು ನಡೆಸಿದರೂ ಅದು ರಾಜಕೀಯವಾಗಿ ಒಂದಷ್ಟಾದರೂ ಲಾಭವಾಗುತ್ತದೆ ಎಂಬುದು ಈ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ.

ಮನೆಗಳಲ್ಲಿ ಹೋಮ– ಹವನ ಮಾಡಿಸುವುದು, ಊರ ದೇವಸ್ಥಾನದಲ್ಲಿ ದೊಡ್ಡ ಉತ್ಸವ ಮಾಡಿಸುವುದು, ಮಠ ಹಾಗೂ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಭೇಟಿ ಕೊಡುವುದು, ಸ್ವಾಮೀಜಿಗಳ ಕಾಲಿಗೆ ಬೀಳುವುದು, ತಮ್ಮ ಕ್ಷೇತ್ರದಲ್ಲಿ ದೇವಸ್ಥಾನ ಕಟ್ಟಿಸಲು ಹಣ ಕೊಡುವುದು – ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ರಾಜಕಾರಣಿಗಳು ಪಕ್ಷ ಭೇದವಿಲ್ಲದೆ ಹಿಂದುತ್ವವನ್ನು ಮೆರೆಸುವುದು ಕಾಣುತ್ತದೆ.

ರಾಜಕಾರಣಿಗಳ ವೈಯಕ್ತಿಕವಾದ ಹಿಂದುತ್ವದ ಆಚರಣೆಗಳು ಪಕ್ಷದ ಮಟ್ಟಿಗೆ ಹೆಚ್ಚಿನ ಲಾಭವನ್ನೇನೂ ಮಾಡುವುದಿಲ್ಲ. ಸಾಫ್ಟ್‌ ಹಿಂದುತ್ವ ಅಥವಾ ಹಿಂದುತ್ವದಿಂದ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಲಾಭವಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಫ್ಟ್‌ ಹಿಂದುತ್ವ ಪ್ರಯೋಗಿಸದು.
- ಡಾ. ಎಲ್‌. ಹನುಮಂತಯ್ಯ, ರಾಜ್ಯಸಭಾ ಸದಸ್ಯ

ಇಂಥ ಆಚರಣೆಯ ಹಿಂದುತ್ವ ತಕ್ಕಮಟ್ಟಿಗೆ ಆಯಾ ರಾಜಕಾರಣಿಗಳಿಗೆ ವೈಯಕ್ತಿಕ ಮಟ್ಟದಲ್ಲಿ ಲಾಭವಾಗಬಹುದೇ ಹೊರತು ಅದರಿಂದ ಪಕ್ಷಗಳ ಬಗ್ಗೆ ಅಭಿಪ್ರಾಯ ಮೂಡುವುದು ಕಷ್ಟ. ಅಲ್ಲದೆ, ವೈಯಕ್ತಿಕ ಮಟ್ಟದ ಆಚರಣೆಗಳನ್ನು ಬಿಡುವುದು ಹಾಗೂ ಉಳಿಸಿಕೊಳ್ಳುವುದು ಆಯಾ ರಾಜಕಾರಣಿಗಳಿಗೆ ಬಿಟ್ಟಿದ್ದು. ಅದರಿಂದ ಪಕ್ಷದ ಮೇಲೇನೂ ಪರಿಣಾಮ ಉಂಟಾಗದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

“ಹಿಂದಿನಿಂದಲೂ ಕಾಂಗ್ರೆಸ್‌ ಸೆಂಟರ್‌ ಲೆಫ್ಟ್‌ ಎಂದು ಗುರುತಿಸಿಕೊಂಡು ಬಂದ ಪಕ್ಷ. ಎಡಪಂಥದ ಸಿದ್ಧಾಂತಗಳನ್ನು ಪೂರ್ತಿಯಾಗಿ ಒಪ್ಪದ ಆದರೆ, ಬಲಪಂಥೀಯವೂ ಅಲ್ಲದ ಪಕ್ಷ ಕಾಂಗ್ರೆಸ್‌. ಹೀಗಾಗಿ ಕಾಂಗ್ರೆಸ್‌ ಹಿಂದಿನಿಂದಲೂ ಹಿಂದುತ್ವದ ಪರವಾಗಿ ಹೋಗಿರಲಿಲ್ಲ. 2017ರ ಗುಜರಾತ್‌ ಚುನಾವಣೆಯಲ್ಲಿ ಆಚರಣೆಯ ಹಿಂದುತ್ವವನ್ನು ರಾಹುಲ್‌ ಗಾಂಧಿ ಮಾಡಿದರು. ಈ ಪ್ರಯೋಗ ಸ್ವಲ್ಪ ಮಟ್ಟಿಗೆ ಗುಜರಾತ್‌ನಲ್ಲಿ ಫಲಕೊಟ್ಟಿತ್ತು. ಆದರೆ, ಅದು ಉಳಿದ ಕಡೆ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ.. ಹೀಗಾಗಿ ಕಾಂಗ್ರೆಸ್‌ ಪಕ್ಷದ ಮಟ್ಟಿಗೆ ಈಹೊತ್ತಿಗೆ ಸಾಫ್ಟ್‌ ಹಿಂದುತ್ವ ಹೆಚ್ಚೇನೂ ಕೆಲಸ ಮಾಡದು” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ.

“ವೈಯಕ್ತಿಕ ಎಂಬ ಹೆಸರಿನಲ್ಲಿ ಹಲವು ರಾಜಕಾರಣಿಗಳು ಹಿಂದುತ್ವವನ್ನು ಹೆಚ್ಚಾಗಿ ಆಚರಣೆಯಲ್ಲಿ ತೋರುತ್ತಾರೆ. ಜಾತ್ಯತೀತ ಎಂಬ ಹೆಸರಿನಲ್ಲಿರುವ ಜೆಡಿಎಸ್‌ನಲ್ಲಿ ದೇವೇಗೌಡ ಮತ್ತು ಅವರ ಮಕ್ಕಳು ಮಾಡುವ ಹಿಂದುತ್ವದ ಆಚರಣೆಗಳನ್ನು ಕಟ್ಟಾ ಹಿಂದೂವಾದಿಗಳು, ಬ್ರಾಹ್ಮಣರೂ ಮಾಡಲಾರರು. ಅಷ್ಟರ ಮಟ್ಟಿಗೆ ಅವರು ಹಿಂದುತ್ವವನ್ನು ಆಚರಣೆಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ಹೀಗೆ ಬಿಂಬಿಸಿಕೊಳ್ಳುವುದು ತಕ್ಕಮಟ್ಟಿಗೆ ರಾಜಕೀಯ ಲಾಭ ಮಾಡಿಕೊಡಬಹುದು. ಆದರೆ, ಅದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಬೀಳಬಹುದು. ರಾಹುಲ್‌ ಗಾಂಧಿ ಟೆಂಪಲ್‌ ರನ್‌ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಆದ ಪರಿಸ್ಥಿತಿಯೂ ಅದೇ” ಎಂಬುದು ಅವರ ಮಾತು.

ಹಿಂದುತ್ವವನ್ನೇ ಚುನಾವಣಾ ಅಜೆಂಡಾ ಆಗಿಸಿಕೊಂಡಿರುವ ಬಿಜೆಪಿಗೆ ಪೈಪೋಟಿ ಕೊಡಲು ಹಾಗೂ ಅಂತಿಮವಾಗಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್‌ಗೆ ಈಗ ಸಾಫ್ಟ್‌ ಹಿಂದುತ್ವ ಕೂಡಾ ಕೆಲಸ ಮಾಡುವುದಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್‌ ಸಾಫ್ಟ್‌ ಹಿಂದುತ್ವದಿಂದ ನಿಧಾನವಾಗಿ ಹೊರ ಬಂದು ಅಜೆಂಡಾ ಶೂನ್ಯ ಅಥವಾ ಎಲ್ಲರಿಗಾಗಿ ಅಜೆಂಡಾ ಎಂಬುದರ ಮೇಲೆ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಮುಂದಾಗಿದೆ.