samachara
www.samachara.com
ಉತ್ತರ ಕರ್ನಾಟಕಕ್ಕೆ ಬಜೆಟ್ ತಾರತಮ್ಯ; ಮತ್ತೆ ಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು
COVER STORY

ಉತ್ತರ ಕರ್ನಾಟಕಕ್ಕೆ ಬಜೆಟ್ ತಾರತಮ್ಯ; ಮತ್ತೆ ಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಬಜೆಟ್‌ ಮಂಡನೆ ಮಾಡಿ ಕೆಲ ದಿನಗಳು ಕಳೆಯುವ ಮೊದಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿದೆ. ಇಷ್ಟು ದಿನ ಒಳಗೇ ಇದ್ದ ಈ ಬೇಡಿಕೆ ಈಗ ಮುಖ್ಯ ವಾಹಿನಿಗೆ ಬಂದಿದೆ.

ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾಗಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ರಾಜ್ಯ ಬಜೆಟ್‌. ಮಂಗಳವಾರ ವಿಧಾನ ಮಂಡಲದಲ್ಲಿ ಬಜೆಟ್‌ ಕುರಿತಾದ ಚರ್ಚೆ ನಡೆಯುತ್ತಿದ್ದ ವೇಳೆ ಮೊಳಕಾಲ್ಮೂರಿನ ಶಾಸಕ ಶ್ರೀರಾಮುಲು ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬಜೆಟ್‌ ಚರ್ಚೆಯ ವೇಳೆ ಮಾಡನಾಡಿದ ಶ್ರೀರಾಮುಲು, ಬಜೆಟ್‌ನಲ್ಲಿರುವ ತಾರತಮ್ಯವನ್ನು ಗಮನಿಸಿದರೆ ನೋವಾಗುತ್ತದೆ ಎಂದಿದ್ದಾರೆ. ಬಜೆಟ್‌ನಲ್ಲಿ ಹೈದರಾಬಾದ್‌ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳು ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮೂಲಕ ಈ ಭಾಗಗಳ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ನಾನು ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲ, ಯಾವ ಯಾವ ಜಿಲ್ಲೆಗಳಲ್ಲಿ ಜೆಡಿಎಸ್ ಜಯಗಳಿಸಿದೆಯೋ ಆ ಕ್ಷೇತ್ರಗಳಿಗೆ ಹೆಚ್ಚು ಯೋಜನೆ ಮಂಜೂರು ಮಾಡಿ, ಉತ್ತರ ಕರ್ನಾಟಕ ಭಾಗದ ಜನತೆಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಜೆಟ್‌ ಹಿಡಿದು ಪ್ರತ್ಯೇಕ ರಾಜ್ಯವನ್ನು ಪ್ರಸ್ತಾಪಿಸಿರುವುದು ಶ್ರೀರಾಮುಲು ಮಾತ್ರವಲ್ಲ. ಬಜೆಟ್‌ ಮಂಡನೆಯಾಗಿ ಕೆಲವು ದಿನಗಳು ಕಳೆಯುವುದಕ್ಕೆ ಮೊದಲೇ ಉತ್ತರ ಕರ್ನಾಟಕದ ರೈತರು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ರೈತ ಸಂಘ ಸುದ್ದಿಗೋಷ್ಠಿ ನಡೆಸಿದೆ. ಗೋಷ್ಠಿಯಲ್ಲಿ ಮಾತನಾಡಿರುವ ರಾಜ್ಯಾಧ್ಯಕ್ಷ ಬಸವರಾಜ್‌ ಕರಿಗಾರ, ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿರುವ ಕಾರಣದಿಂದ ಆಗಸ್ಟ್‌ 2ರಂದು ಪ್ರತ್ಯೇಕ ರಾಜ್ಯದ ಬೇಡಿಕೆಗಾಗಿ ಇಡೀ ಉತ್ತರ ಕರ್ನಾಟಕದಲ್ಲಿ ಬಂದ್‌ ಆಚರಿಸಲಾಗುವುದು ಎಂದಿದ್ದಾರೆ.

ಏಕೆ ಈ ಪ್ರತ್ಯೇಕ ರಾಜ್ಯದ ಕೂಗು?:

ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು. ಈ ಸಂದರ್ಭದಲ್ಲಿ ಕನ್ನಡ ನಾಡನ್ನು ಒಂದು ಆಡಳಿತದ ಅಡಿಯಲ್ಲಿ ತರಲು ಉತ್ತರ ಕರ್ನಾಟಕದ ಸಹಸ್ರಾರು ಜನ ಶ್ರಮವಹಿಸಿದ್ದರು. ಏಕೀಕೃತ ಕರ್ನಾಟಕ ನಿರ್ಮಾಣವಾಗುವಲ್ಲಿ ಉತ್ತರ ಕರ್ನಾಟಕ ಭಾಗದ ಪಾಲೂ ಕೂಡ ಅಗಾಧವಾಗಿತ್ತು. ಆದರೆ ಅಂದು ಕರ್ನಾಟಕವನ್ನು ಒಗ್ಗೂಡಿಸಲು ರಕ್ತ ಹರಿಸಿದ ಉತ್ತರ ಕರ್ನಾಟಕದ ಜನರು, ಇಂದು ಪ್ರತ್ಯೇಕ ನಾಡಿನ ಬೇಡಿಕೆ ಇಡುವುದಕ್ಕೆ ಕಾರಣವಾಗಿರುವುದು ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಗಳ ನಡುವೆ ಸರಕಾರಗಳು ಎಸಗುತ್ತಿರುವ ತಾರತಮ್ಯ.

ಸ್ವತಂತ್ರ ಪೂರ್ವದಲ್ಲಿ ಮುಂಬೈ ಮತ್ತು ಹೈದರಾಬಾದ್‌ ಪ್ರಾಂತ್ಯಗಳ ಭಾಗವಾಗಿದ್ದ ಉತ್ತರ ಕರ್ನಾಟಕದ 13 ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿನ್ನಡೆಯನ್ನೇ ಅನುಭವಿಸಿಕೊಂಡು ಬಂದಿದ್ದವು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರದಲ್ಲಿ ಕನ್ನಡ ನಾಡು ಏಕೀಕರಣಗೊಂಡಿತಾದರೂ ಹಿಂದಿನಿಂದ ಕನ್ನಡ ಭೂಮಿಯಲ್ಲಿ ಆಡಳಿತ ನಡೆಸಿಕೊಂಡು ಬಂದ ಹಳೇ ಮೈಸೂರು ಭಾಗವೇ ಆಡಳಿತವನ್ನು ಹಿಡಿದುಕೊಂಡಿತ್ತು. ಮೈಸೂರಿಗೆ ಸಮೀಪದಲ್ಲಿಯೇ ಇರುವ ಬೆಂಗಳೂರು ನಗರ ರಾಜಧಾನಿ ಪಟ್ಟವನ್ನು ಅಲಂಕರಿಸಿತು. ಉತ್ತರ ಕರ್ನಾಟಕದ ಬೆಳಗಾವಿಯ ಜನ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರೆ 510 ಕಿಮೀ ದೂರದ ಪ್ರಯಾಣ ಮಾಡಬೇಕಾಯಿತು. ಅದೇ ರೀತಿ ಕಲ್ಬುರ್ಗಿಯ ಜನ ಸರಿಸುಮಾರು 650 ಕಿಮೀ, ಭಾಗಲಕೋಟೆಯ ಜನ 500 ಕಿಮೀ, ಬೀದರ್‌ನ ಜನ 700 ಕಿಮೀಗಳಷ್ಟು ದೂರಕ್ಕೆ ಬರಬೇಕಾಯಿತು. ತಮ್ಮ ರಾಜ್ಯದ ರಾಜಧಾನಿ ತಮಗೆಯೇ ಅಪರಿಚಿತ ಎನ್ನುವ ಭಾವನೆ ಉತ್ತರ ಕರ್ನಾಟಕದ ಜನರಲ್ಲಿ ಮೂಡತೊಡಗಿತ್ತು.

ಇದು ಪ್ರಾದೇಶಿಕತೆಯ ಕಾರಣವಾಗಿ ಕಂಡರೆ, ಹಿಂದಿನಿಂದಲೂ ಆಳ್ವಿಕೆ ಮಾಡಿಕೊಂಡುಬಂದ ಸರಕಾರಗಳ ಬಗ್ಗೆ ಉತ್ತರ ಕರ್ನಾಟಕದ ಜನರಿಗೆ ಸಮಾಧಾನವಿಲ್ಲ. ಹಿಂದೆಯೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದ ಹೈದರಾಬಾದ್‌ ಮತ್ತು ಮುಂಬೈ ಕರ್ನಾಟಕದ ಭಾಗಗಳ ಕಡೆಗೆ ಸರಕಾರಗಳು ಹೆಚ್ಚಿನ ಗಮನ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಜನರಲ್ಲಿ ವೈರುಧ್ಯ ವ್ಯಕ್ತವಾಗಲು ಪ್ರಾರಂಭಗೊಂಡು, ಪ್ರತ್ಯೇಕ ರಾಜ್ಯ ಕೂಗು ಕೇಳಿಸಲು ಅರಂಭಿಸಿದೆ.

ಉತ್ತರ ಕರ್ನಾಟಕಕ್ಕೆ ಬಜೆಟ್ ತಾರತಮ್ಯ; ಮತ್ತೆ ಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

ದಶಕಗಳ ಹೋರಾಟ:

ಪ್ರತ್ಯೇಕ ರಾಜ್ಯದ ಹೋರಾಟ ಇಂದು ನಿನ್ನೆಯದೇನಲ್ಲ. 2 ದಶಕಗಳ ಹಿಂದೆಯೇ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಕೇಳಿಸಿತ್ತು. ಚಿಂಚೊಳ್ಳಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದ ವೈಜನಾಥ್‌ ಪಾಟೀಲ್‌ ಮೊದಲು ಪ್ರತ್ಯೇಕ ರಾಜ್ಯದ ಕೂಗನ್ನು ಗಟ್ಟಿಗೊಳಿಸಿದ್ದರು. ಅಂದಿನಿಂದಲೂ ಕೂಡ ಹಲವಾರು ಹೋರಾಟಗಳು ನಡೆಯುತ್ತಲೇ ಬಂದಿದೆ.

371 ಜೆ ಕಲಂ:

ಉತ್ತರ ಕರ್ನಾಟಕ ಭಾಗದ ಹೋರಾಟಗಾರರ ಶ್ರಮದಿಂದಾಗಿ 371 ಜೆ ಕಲಂ ಅಡಿಯಲ್ಲಿ ಹಲವಾರು ಅವಕಾಶಗಳು ಹೈಕ ಭಾಗಕ್ಕೆ ದೊರೆತಿದ್ದವು. ಎಚ್‌ಕೆಆರ್‌ಡಿಬಿ (ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ)ಗೆ ಪ್ರತಿ ವರ್ಷ 1,000 ಕೊಟಿ ರೂಪಾಯಿ ಅನುದಾನ ದೊರೆಯುವಂತಾಯಿತು. ಅದರಲ್ಲಿ ಕೇಂದ್ರ ಸರಕಾರದ್ದು ಶೇ.30ರಷ್ಟಾದರೆ ರಾಜ್ಯ ಸರಕಾರ ಶೇ.70ರಷ್ಟು ಅನುದಾನವನ್ನು ತನ್ನ ಬೊಕ್ಕಸದಿಂದ ಬಿಡುಗಡೆ ಮಾಡಬೇಕಾಯಿತು. ಈ ಅನುದಾನದಲ್ಲಿ ಕೈಗಾರಿಕೆ, ರಸ್ತೆ, ಶಿಕ್ಷಣ ಅರೋಗ್ಯ ವ್ಯವಸ್ಥೆಗಳನ್ನು ಸುಧಾರಿಸಬೇಕಿತ್ತು. ಆದರೆ ಸರಕಾರದ ನಿರ್ಲಕ್ಷ್ಯದಿಂದಾಗಿ ಇದ್ಯಾವುದೂ ಸರಿಯಾಗಿ ನಡೆಯುತ್ತಿಲ್ಲ ಎಂದು ಹೋರಾಟಗಾರರು ಆಕ್ಷೇಪಿಸುತ್ತಾರೆ.

371 ಜೆ ಕಲಂ ಹೇಳುವಂತೆ ಹೈದರಾಬಾದ್‌ ಕರ್ನಾಟಕಕ್ಕೆ ಒಳಪಡುವ 6 ಜಿಲ್ಲೆಗಳಲ್ಲಿ ದೊರೆಯುವ ಹುದ್ದೆಗಳಲ್ಲಿ ಸ್ಥಳೀಯ ಜನರಿಗೆ ಶೇ.80 ಮೀಸಲಾತಿಯನ್ನು ಒದಗಿಸಬೇಕಿತ್ತು. ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಈ ಭಾಗದ ಜನರಿಗೆ ಶೇ.8ರಷ್ಟು ಮೀಸಲಾತಿಯನ್ನು ನೀಡಬೇಕಿತ್ತು. ಆದರೆ ಶೇ.1ರಷ್ಟು ಮೀಸಲಾತಿಯೂ ಕೂಡ ಸಿಕ್ಕಿಲ್ಲ. ಮೈಸೂರಿನವರೊಬ್ಬರು ಈ ಕುರಿತು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆದ್ದರಿಂದ ಶೇ.8ರ ಮೀಸಲಾತಿ ನೆನೆಗುದಿಗೆ ಬಿದ್ದಿದೆ. ಇದನ್ನು ಬಗೆಹರಿಸಬೇಕು ಎಂಬ ಕಾಳಜಿ ಸರಕಾರಕ್ಕೆ ಇಲ್ಲವಾಗಿದೆ.
ಎಂ.ಎಸ್‌. ಪಾಟೀಲ್‌, ಹೋರಾಟಗಾರರು.

ಎಂ.ಎಸ್‌. ಪಾಟೀಲ್‌ ಹೇಳುವಂತೆ ಈ ಭಾಗದ ತೊಗರಿ ಬೇಲೆ, ಕಬ್ಬುಗಳಿಗೆ ಉತ್ತಮ ಬೆಲೆಯಿಲ್ಲ. ಮೈಸೂರು ಬೆಂಗಳೂರು ಪ್ರಾಂತ್ಯದ ರೈತರಿಗೆ ನೀಡುವಷ್ಟು ಗಮನವನ್ನು ಸರಕಾರಗಳು ಈ ಭಾಗದ ಮಂದಿಯತ್ತ ತೋರುತ್ತಿಲ್ಲ. ಹೋರಾಟಗಳನ್ನು ಮಾಡಿದರೂ ಕೂಡ ಉಪಯೋಗವಾಗುತ್ತಿಲ್ಲ. ಜತೆಗೆ ಪ್ರಸ್ತುತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ಕೆಲವು ಜಿಲ್ಲೆಗಳಿಗಷ್ಟೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಉತ್ತರ ಕರ್ನಾಟಕದ ಭಾಗಕ್ಕೆ ಮೋಸ ಮಾಡಿದ್ದಾರೆ. ಉತ್ತರ ಕರ್ನಾಟಕದ ಜನರೇನು ತೆರಿಗೆ ಕಟ್ಟುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ ಎಂ.ಎಸ್‌. ಪಾಟೀಲ್‌.

ರಾಮನಗರಕ್ಕೆ ಆಸ್ಪತ್ರೆ, ಫಿಲ್ಮ್‌ ಇಂಡಸ್ಟ್ರಿ ಇತ್ಯಾದಿ ಹೆಸರಿನಲ್ಲಿ 300 ಕೊಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ಆದರೆ ಒಟ್ಟಾರೆ ಹೈದರಾಬಾದ್‌ ಕರ್ನಾಟಕವನ್ನು ಗಣನೆಗೆ ತೆಗೆದುಕೊಂಡರೆ ಅದರ ಅರ್ಧದಷ್ಟನ್ನೂ ಕೂಡ ನೀಡಿಲ್ಲ. ಈ ಭಾಗದವರೇನು ತೆರಿಗೆ ಕಟ್ಟುವುದಿಲ್ಲವೇ? ಈ ಭಾಗದಲ್ಲಿಯೂ ಪ್ರಮುಖ ಸಿಮೆಂಟ್‌ ಕಂಪನಿಗಳಿವೆ. ಪ್ರಮುಖ ಬೆಳೆಗಳನ್ನು ಬೆಳಯಲಾಗುತ್ತದೆ. ಪ್ರಮುಖ ನದಿಗಳಿವೆ. ನೀರಾವರಿ ಪ್ರದೇಶವಿದೆ. ಎಲ್ಲದರಿಂದಲೂ ಕೂಡ ತೆರಿಗೆ ಸಂಗ್ರಹಿಸಲಾಗುತ್ತದೆ. ಆದರೆ ನಾವು ಕಟ್ಟುವ ತೆರಿಗೆ ನಮಗೆ ಬಳಕೆಯಾಗುವುದಿಲ್ಲ ಎಂದ ಮೇಲೆ ನಾವೇಕೆ ಪ್ರತ್ಯೇಕ ರಾಜ್ಯದ ಕೂಗು ಎತ್ತಬಾರದು?
ಎಂ.ಎಸ್‌. ಪಾಟೀಲ್‌, ಹೋರಾಟಗಾರರು.

ಈಗಿನ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲೂ ಕೂಡ ಉತ್ತರ ಕರ್ನಾಟಕದ ಭಾಗಕ್ಕೆ ಹೇಳಿಕೊಳ್ಳುವಂತದ್ದೇನು ಸಿಕ್ಕಿಲ್ಲ ಎನ್ನುತ್ತಾರೆ ಬಳ್ಳಾರಿಯ ಇಮಾಮ್‌ ಸಾಬ್‌. ಹಿಂದಿನಿಂದಲೂ ಸರಕಾರದ ಯೋಜನೆಗಳು ಈ ಭಾಗವನ್ನು ತಲುಪುವ ವೇಗ ಕಡಿಮೆಯಿದೆ. ಅಭಿವೃದ್ಧಿಯಲ್ಲಿ, ಪ್ರಾದೇಶಿಕ ಸಾಮಾನತೆಯಲ್ಲಿ, ಅಧಿಕಾರದ ಹಂಚಿಕೆಯಲ್ಲಿ ಈ ಭಾಗಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಈ ಬಾರಿಯ ಸರಕಾರದಲ್ಲೂ ಅನ್ಯಾಯವೇ ಆಗಿದೆ. ಸರಕಾರ ರಚನೆಯಾಗುವ ಸಂಧರ್ಭದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂಬ ವಾದ ಕೇಳಿಬಂದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಅಷ್ಟೇ ಅಲ್ಲದೇ ಬಹಳಷ್ಟು ಜನ ಸಚಿವರು ಮೈಸೂರು ಕರ್ನಾಟಕದವರೇ ಆಗಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಕೂಡ ಮೈಸೂರು ಕರ್ನಾಟಕದವರು. ಬಹಳಷ್ಟು ಜನ ಒಕ್ಕಲಿಗರಿಗೆ ಸಚಿವ ಸ್ಥಾನಗಳನ್ನು ನೀಡಲಾಗಿದೆ. ಅಧಿಕಾರ ಹಂಚಿಕೆಯಲ್ಲಿನ ಈ ಅಸಮಾನತೆ ಮತ್ತೆ ಪ್ರತ್ಯೇಕ ರಾಜ್ಯ ನಿರ್ಮಾಣ ಆಗಬೇಕು ಎನ್ನುವ ಕೂಗಿಗೆ ಇಂಬು ತುಂಬಿದೆ ಎನ್ನುತ್ತಾರೆ ಇಮಾಮ್‌ ಸಾಬ್‌.

ಉತ್ತರ ಕರ್ನಾಟಕ ಅಖಂಡ ಕರ್ನಾಟಕದಿಂದ ಬೇರ್ಪಟ್ಟ ನಂತರ ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಎಂ.ಎಸ್‌. ಪಾಟೀಲ್‌. “ತೆಲಂಗಾಣ ಪ್ರತ್ಯೇಕ ರಾಜ್ಯವಾಗುವುದಕ್ಕೂ ಮುಂಚೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿತ್ತು. ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿರಲಿಲ್ಲ. ಸರಿಯಾದ ರಸ್ತೆಗಳಿರಲಿಲ್ಲ. ಇವತ್ತು ಇಡೀ ವ್ಯವಸ್ಥೆಯೇ ಬದಲಾಗಿದೆ. ಪ್ರತ್ಯೇಕ ರಾಜ್ಯವಾದ ನಂತರ ತೆಲಂಗಾಣ ಮಾದರಿ ರಾಜ್ಯ ಎಂದು ಗುರುತಿಸಿಕೊಳ್ಳುತ್ತಿದೆ. ನಿಜಾಮ್‌ ಸರ್ಕಾರದ ಭಾಗವಾಗಿದ್ದ ತೆಲಂಗಾಂಣ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾದರೆ ಏಕೆ ಪ್ರತ್ಯೇಕ ರಾಜ್ಯವಾಗಬಾರದು ಎಂಬ ಪ್ರಶ್ನೆ ಮೂಡುತ್ತದೆ,” ಎನ್ನುತ್ತಾರೆ ಎಂ.ಎಸ್‌. ಪಾಟೀಲ್‌.

ಹೈದರಾಬಾದ್‌ ಕರ್ನಾಟಕದ ಪ್ರತ್ಯೇಕ ಧ್ವಜ.
ಹೈದರಾಬಾದ್‌ ಕರ್ನಾಟಕದ ಪ್ರತ್ಯೇಕ ಧ್ವಜ.

ಉತ್ತರ ಕರ್ನಾಟಕ ಹೋರಾಟ ಸಮಿತಿ, ಕಳಸಾ ಬಂಡೂರಿ ಹೋರಾಟ ಸಮಿತಿ, ಪಕ್ಷಾತೀತ ಹೋರಾಟ ಸಮಿತಿ ಇತ್ಯಾದಿ ದೊಡ್ಡ ಸಂಘಟನೆಗಳು ಪ್ರತ್ಯೇಕ ರಾಜ್ಯದ ಧ್ವನಿಯೆತ್ತಿವೆ. ಕಳೆದ ಕೆಲವು ವರ್ಷಗಳಿಂದ ಕಲ್ಬುರ್ಗಿ, ಬೀದರ್‌ ಭಾಗದ ಜನರು ನವೆಂಬರ್‌ 1ರಂದು ಕರ್ನಾಟಕದ ನಾಡ ಧ್ವಜದ ಬದಲಾಗಿ ತಮ್ಮದೇ ಆದ ಪ್ರತ್ಯೇಕ ಧ್ವಜವನ್ನು ಹಾರಿಸಿ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಪ್ರತ್ಯೇಕ ರಾಜ್ಯಕ್ಕಾಗಿ ಕಾನೂನು ಹೋರಾಟ, ಬೀದಿ ಹೋರಾಟಗಳು ನಡೆಯುತ್ತಿವೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗ ಜನರಿಗೆ ಮಾಹಿತಿ ನೀಡಲು ವೆಬ್‌ಸೈಟ್‌ಅನ್ನು ಕೂಡ ಸೃಷ್ಟಿಸಿದೆ. ಸದ್ಯ ಇನ್ನೂ ಗುಪ್ತ ಗಾಮಿನಿಯಂತಿರುವ ಈ ಕೂಗು ಇನ್ನು ಕೆಲವು ದಿನಗಳಲ್ಲಿ ದೊಡ್ಡ ಚಳುವಳಿಯ ಸ್ವರೂಪ ಪಡೆಯಲಿದೆ ಎನ್ನುತ್ತಾರೆ ಪ್ರತ್ಯೇಕ ಧ್ವಜ ಹಾರಿಸಿ ಜೈಲು ಕಂಡ ಹೋರಾಟಗಾರ ಎಂ.ಎಸ್‌. ಪಾಟೀಲ್‌

ಪ್ರತ್ಯೇಕ ರಾಜ್ಯ ಮಾಡಿ ಎಂಬ ಕೂಗು ಕೇವಲ ಕರ್ನಾಟಕದಲ್ಲಿ ಮಾತ್ರವಿಲ್ಲ. ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲೂ ಕೂಡ ವಿದರ್ಭ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವಾಗಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಇತ್ತೀಚಿಗಷ್ಟೇ ನೆರೆಯ ಅಂಧ್ರ ಪ್ರದೇಶ 2 ಭಾಗವಾಗಿದೆ. ಜಾರ್ಖಂಡ್‌, ಛತ್ತೀಸ್‌ಗಢ, ಉತ್ತರಾಂಚಲ ರಾಜ್ಯಗಳೂ ಕೂಡ ಹೀಗೇ ಅಸ್ತಿತ್ವಕ್ಕೆ ಬಂದಂತವು. ಹಾಗಾದರೆ ಈ ರಾಜ್ಯಗಳು ಅಭಿವೃದ್ಧಿ ಸಾಧಿಸಿ ಬೆಳವಣಿಗೆಯ ನಾಗಾಲೋಟದಲ್ಲಿವೆಯೇ ಎಂದರೆ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಈ ರಾಜ್ಯಗಳು ಕೇಂದ್ರದಿಂದ ದೊರೆಯುವ ಅನುದಾನಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಇದಕ್ಕೆ ಕಾರಣ ಆಳುವ ಸರಕಾರಗಳು ಅನುಸರಿಸುವ ಮಲತಾಯಿ ಧೋರಣೆ.

ಸದ್ಯ ಕರ್ನಾಟಕದಲ್ಲಿನ ಪ್ರತ್ಯೇಕ ರಾಜ್ಯದ ಕೂಗಿಗೂ ಕೂಡ ಕಾರಣವಾಗಿರುವುದು ಈ ಮಲತಾಯಿ ಧೋರಣೆಯೇ. ಇಂದು ರಾಜ್ಯದ ಮಟ್ಟಿಗೆ ಸದ್ದು ಮಾಡುತ್ತಿರುವ ಈ ಕೂಗು, ಮುಂದಿನ ದಿನಗಳಲ್ಲಿ ದೊಡ್ಡ ಚಳವಳಿಯ ರೂಪ ಪಡೆದು ದೇಶಾದ್ಯಂತ ಸುದ್ದಿಯಾಗಬಹುದು. ಅಖಂಡ ಕರ್ನಾಟಕ 2 ಭಾಗವಾಗುವ ಸಾಧ್ಯತೆಗಳೂ ಕೂಡ ಎದುರಾಗಬಹುದು. ಇದನ್ನು ತಡೆಗಟ್ಟಲು ಇರುವುದು ಒಂದೇ ದಾರಿ. ಸರಕಾರಗಳು, ರಾಜಕಾರಣಿಗಳು ತಮ್ಮ ಮಲತಾಯಿ ಧೋರಣೆಯನ್ನು ಬದಿಗೆ ಸರಿಸಿ ಇಡೀ ರಾಜ್ಯವನ್ನು ಒಂದೇ ಎಂದು ಕಾಣಬೇಕಿದೆ. ತಮ್ಮ ಜಿಲ್ಲೆಗಳಿಗೆ ಹೆಚ್ಚು ಹೆಚ್ಚು ಅನುದಾನಗಳನ್ನು ನೀಡಿ ಸೈ ಎನ್ನಿಸಿಕೊಳ್ಳುವ ಮೊದಲು ಇದು ನನ್ನದೇ ರಾಜ್ಯ ಎಂಬ ಕನಿಷ್ಠ ಪ್ರಜ್ಞೆಯನ್ನು ಆಳುವ ವರ್ಗ ಉಳಿಸಿಕೊಳ್ಳಬೇಕಿದೆ.