samachara
www.samachara.com
ಹಳೇ ಮೈಸೂರಿನಲ್ಲಿ ಹೊಸ ಸ್ಥಿತ್ಯಂತರ: ಮಹದೇವಪ್ಪ ಬಿಜೆಪಿಗೆ?
COVER STORY

ಹಳೇ ಮೈಸೂರಿನಲ್ಲಿ ಹೊಸ ಸ್ಥಿತ್ಯಂತರ: ಮಹದೇವಪ್ಪ ಬಿಜೆಪಿಗೆ?

ವಿಧಾನಸಭೆ ಚುನಾವಣೆ ಮುಗಿಯುವ ವೇಳೆಗಾಗಲೇ ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮೊದಲಿನ ಸಂಬಂಧ ಉಳಿದಿರಲಿಲ್ಲ. ಚುನಾವಣೆಯಲ್ಲಿ ಹಣಕಾಸಿನ ಹಂಚಿಕೆ ಅದಕ್ಕಿರುವ ಪ್ರಮುಖ ಕಾರಣ. 

ಟಿ. ನರಸೀಪುರದ ಶಾಸಕ, ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಹಿಂದಿನ ಸರಕಾರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತವಲಯದಲ್ಲಿದ್ದವರು ಮಹದೇವಪ್ಪ. ಲೋಕೋಪಯೋಗಿ ಇಲಾಖೆಯ ಜತೆಗೆ ಪಕ್ಷದ ಆರ್ಥಿಕತೆಯನ್ನೂ ನಿಭಾಯಿಸುತ್ತಿದ್ದವರು. ಅವರೇ ಈಗ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕಳೆದ ವಾರದಿಂದ ಈಚೆಗೆ ಹೀಗೊಂದು ಸುದ್ದಿ ರಾಜಕೀಯವಲಯದಲ್ಲಿ ಹರಿದಾಡಲು ಶುರುವಾಗಿತ್ತು.

ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ವೇಳೆ ಹಳೇ ಮೈಸೂರು ಭಾಗದ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಾಲಿಗೆ ಅವರ ಸ್ಥಾನವನ್ನು ತುಂಬಿದ್ದವರು ಮಹದೇವಪ್ಪ.

ಆದರೆ ವಿಧಾನಸಭೆ ಚುನಾವಣೆ ಮುಗಿಯುವ ವೇಳೆಗಾಗಲೇ ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮೊದಲಿನ ಸಂಬಂಧ ಉಳಿದಿರಲಿಲ್ಲ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಎಚ್. ಎಂ. ರೇವಣ್ಣ ಜತೆ ಮಹದೇವಪ್ಪ ಒಮ್ಮೆ ಮಾತ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿ ಆತ್ಮಾವಲೋಕನ ಸಭೆ ನಡೆದಾಗ, ಮೈಸೂರು ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ಮಹದೇವಪ್ಪ ಪಾಲ್ಗೊಂಡಿರಲಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಾ. ಎಚ್. ಸಿ. ಮಹದೇವಪ್ಪ. 
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಾ. ಎಚ್. ಸಿ. ಮಹದೇವಪ್ಪ. 

ಮಹದೇವಪ್ಪ ಮತ್ತು ಸಿದ್ದರಾಮಯ್ಯ ಸಂಬಂಧದಲ್ಲಿ ಬಿರುಕು ಮೂಡಲು ಚುನಾವಣೆ ವೇಳೆಯಲ್ಲಿ ಹಣಕಾಸು ಹಂಚಿಕೆ ವಿಚಾರ ಪ್ರಮುಖ ಕಾರಣ ಎನ್ನುತ್ತವೆ ಮೂಲಗಳು.

“ಚುನಾವಣೆ ವೇಳೆಯಲ್ಲಿ ಮಹದೇವಪ್ಪ ಬಳಿ ಪಕ್ಷಕ್ಕಾಗಿ ಸಂಗ್ರಹಿಸಿ ಹಣವನ್ನು ನೀಡಲಾಗಿತ್ತು. ಆದರೆ ಸಕಾಲದಲ್ಲಿ ಅವರು ಕೈ ಎತ್ತಿದರು. ಹೀಗಾಗಿ ಕೊನೆ ಗಳಿಗೆಯಲ್ಲಿ ಸಿದ್ದರಾಮಯ್ಯ 50 ಕೋಟಿಯಷ್ಟು ಸಾಲ ಮಾಡಿದರು. ಡಿ. ಕೆ. ಶಿವಕುಮಾರ್ ಕಡೆಯಿಂದ ಒಂದಷ್ಟು ಹಣವನ್ನು ಸಿದ್ದರಾಮಯ್ಯ ಚುನಾವಣೆಗೆ ಖರ್ಚು ಮಾಡಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಲು ಮಹದೇವಪ್ಪ ಕೂಡ ಕಾರಣರಾದರು ಎಂಬ ಅನುಮಾನ ಇಬ್ಬರ ನಡುವೆ ಅಸಮಾಧಾನ ಹುಟ್ಟುಹಾಕಿದೆ,’’ ಎನ್ನುತ್ತವೆ ಸಿದ್ದರಾಮಯ್ಯ ಅವರ ಆಪ್ತ ಮೂಲಗಳು.

ಇದೀಗ, ಮಹದೇವಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು ನಿಜವೇ ಆಗಿದ್ದರೆ ಅದಕ್ಕೆ ಪ್ರಮುಖ ಐದು ಕಾರಣಗಳನ್ನು ಸ್ಥಳೀಯ ರಾಜಕಾರಣದ ಒಳಹೊರಗನ್ನು ಬಲ್ಲವರು ಮುಂದಿಡುತ್ತಿದ್ದಾರೆ.

1. ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸಲು ಪ್ರಮುಖ ನಾಯಕರ ಮೇಲೆ ಐಟಿ ದಾಳಿಗಳನ್ನು ಬಳಸಿಕೊಳ್ಳುತ್ತಿದೆ. ಅದೇ ಮಾದರಿಯಲ್ಲಿ ಎಚ್. ಸಿ. ಮಹದೇವಪ್ಪ ಅಥವಾ ಅವರ ಆಪ್ತ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆದಿರುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆಯಲ್ಲಿ ಮಹದೇವಪ್ಪ ಭ್ರಷ್ಟಾಚಾರ ನಡೆಸಿದ್ದಾರೆ, ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಐಟಿ ದಾಳಿ ಮೂಲಕ ಮಹದೇವಪ್ಪ ಅವರನ್ನು ಬಿಜೆಪಿ ಕಟ್ಟಿಹಾಕಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.

2. ಜಾತ್ಯಾತೀತ ಆಧಾರದ ಮೇಲೆ ಸಮ್ಮಿಶ್ರ ಸರಕಾರ ರಚನೆಯಾದರೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಮಹದೇವಪ್ಪ ಮೂಗಿಗೆ ತುಪ್ಪ ಸವರಲಾಗಿತ್ತು. ದಲಿತ ಸಮುದಾಯದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ಮಾತುಕತೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಹದೇವಪ್ಪ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಅದು ನೆರವೇರದ ಹಿನ್ನೆಲೆಯಲ್ಲಿ ಮಹದೇವಪ್ಪ ಪಕ್ಷ ತೊರೆಯುವ ಮನಸ್ಸು ಮಾಡಿರಬಹುದು ಎಂಬುದು ಇನ್ನೊಂದು ವಾದ.

3. ಕೇಂದ್ರ ಸರಕಾರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಐಟಿ, ಇಡಿಯಂತಹ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನು ಕಟ್ಟಿಹಾಕಲಾಗುತ್ತಿದೆ. ಇದೇ ಪ್ರಯೋಗ ಮಹದೇವಪ್ಪರ ಮೇಲೂ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಸೇರುವ ಮೂಲಕ ಸಂಭವನೀಯ ಐಟಿ ದಾಳಿಯಿಂದ ಪಾರಾಗುವ ನಡೆಯನ್ನು ಅನುಸರಿಸಿರಬಹುದು ಎಂದು ಮೂಲಗಳು ಹೇಳುತ್ತಿವೆ.

4. ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದಾಗ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಜತೆ ಉತ್ತಮ ಸಂಬಂಧ ಹೊಂದಿದ್ದರು. ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ದೊಡ್ಡ ಪಾಲವನ್ನು ಮಹದೇವಪ್ಪ ರಾಜ್ಯಕ್ಕೆ ತಂದಿದ್ದರು. ಹಿಂದೆ, ಐಟಿ ದಾಳಿಯನ್ನು ಗಡ್ಕರಿ ಜತೆಗಿನ ಸಂಬಂಧ ಬಳಸಿಕೊಂಡು ತಪ್ಪಿಸಿಕೊಂಡಿದ್ದರು. ಇದೀಗ ನಿತಿನ್ ಗಡ್ಕರಿ ಜತೆಗಿನ ಸಂಬಂಧದ ಹಿನ್ನೆಲೆಯಲ್ಲಿ ಬಿಜೆಪಿ ಸೇರುವ ಆಹ್ವಾನ ಸಿಕ್ಕಿರಬಹುದು ಎಂಬ ವಾದಗಳು ಕೇಳಿಬರುತ್ತಿವೆ.

5. ಮಹದೇವಪ್ಪ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಬಗೆಗೆ ಅಸಮಾಧಾನಗೊಳ್ಳಲು ಮಗ ಸುನೀಲ್ ಬೋಸ್‌ಗೆ ಟಿಕೆಟ್ ನೀಡದಿರುವುದು ಒಂದು ಕಾರಣ. ಬೆಂಗಳೂರು ಅಥವಾ ನಂಜನಗೂಡು ಕ್ಷೇತ್ರದಲ್ಲಿ ಸುನೀಲ್ ಬೋಸ್ ಕಣಕ್ಕಿಳಿಯುವ ಇರಾದೆ ಹೊಂದಿದ್ದರು. ಆದರೆ, ಹಳೇ ಮೈಸೂರು ಭಾಗದಲ್ಲಿ ಮಗ ಯತೀಂದ್ರನಿಗೆ ಪರ್ಯಾಯವಾಗಿ ಸುನೀಲ್ ಬೋಸ್ ಬೆಳೆಯುವ ಸಾಧ್ಯತೆ ಇರುವುದರಿಂದ ಸಿದ್ದರಾಮಯ್ಯ ಬೋಸ್ ಸ್ಪರ್ಧೆಯಿಂದ ದೂರ ಇಟ್ಟರು ಎಂದು ಮೂಲಗಳು ಹೇಳುತ್ತವೆ. ಇದರಿಂದ ಮಹದೇವಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಮೂಲಕ ತಮ್ಮ ಹಾಗೂ ಮಗನ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ ಎಂಬ ಮತ್ತೊಂದು ವಾದವೂ ಕೇಳಿ ಬರುತ್ತಿದೆ.

ಮಹದೇವಪ್ಪ ಜೆಡಿಎಸ್‌ನಿಂದ ಗೆದ್ದು ಮತ್ತೆರಡು ಬಾರಿ ಸೋತು, ಮಗದೊಮ್ಮೆ ಗೆದ್ದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಯಾಗಿ ಅಧಿಕಾರ ಕಳೆದುಕೊಂಡಿದ್ದರು. ಸಿದ್ದರಾಮಯ್ಯ ಜತೆ ಅವರೂ ಜೆಡಿಎಸ್ ಬಿಟ್ಟು ಕಾಂಗ್ರೆಸಿಗೆ ವಲಸೆ ಬಂದಿದ್ದವರು, 2008ರ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದರು. ಯಾವಾಗ 2013ರ ಚುನಾವಣೆ ಬಂತೋ ಮಹದೇವಪ್ಪ ಪ್ರಯಾಸದಿಂದ (ಇದರ ಬಗ್ಗೆಯೂ ಕೋರ್ಟ್ ಕೇಸು ದಾಖಲಾಗಿ ದೂರುದಾರ ಹಾಗೂ ಜೆಡಿಎಸ್ ಅಭ್ಯರ್ಥಿ ಸುಂದರೇಶ್ ಕೋರ್ಟ್ ಕಲಾಪಕ್ಕೆ ಸತತ ಗೈರು ಹಾಜರಾಗಿ ಕೇಸು ಬಿದ್ದು ಹೋಗಿತ್ತು) ಗೆದ್ದು ಬಂದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರು; ಮಹದೇವಪ್ಪಗೆ ಪ್ರಭಾವಿ ಖಾತೆಯೂ ಸಿಕ್ಕಿತ್ತು.

ಇದೀಗ ಅವರು ಬಿಜೆಪಿಗೆ ಸೇರಿದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಾಲಿಗೆ ದಲಿತ ಸಮುದಾಯದ ನಾಯಕರಾಗಿ ದೃವನಾರಾಯಣ್ ಹಾಗೂ ಹಿರಿಯ ದಲಿತ ನಾಯಕ ರಾಚಯ್ಯ ಅವರ ಮಗ ಎ. ಆರ್. ಕೃಷ್ಣಮೂರ್ತಿ ಉಳಿದುಕೊಳ್ಳಲಿದ್ದಾರೆ. ಆದರೆ ಎಂಬಿಬಿಎಸ್ ಪದವಿ ಪಡೆದುಕೊಂಡಿರುವ ಮಹದೇವಪ್ಪ ಹಿಂದೆ ಸಮಾಜವಾದಿ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದವರು. ಫುಲೆ ಬಗ್ಗೆ ಭಾಷಣ ಮಾಡಿದ್ದವರು. ಅವರೇ ಈಗ ಅಸ್ಥಿತ್ವಕ್ಕಾಗಿ ಬಿಜೆಪಿ ಸೇರಿದರೆ, ರಾಜಕಾರಣದಲ್ಲಿ ಸಿದ್ಧಾಂತ ಎಂಬುದು ನೆಪ ಅಷ್ಟೆ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ.

Also read: ‘ದಿ ಸ್ಟೋರಿ ಆಫ್ ಸುನೀಲ್ ಬೋಸ್’: ಅಪ್ಪ ಸಚಿವ ಮಹದೇವಪ್ಪ; ಮಗ ‘ಗುದ್ದಲಿ ಪೂಜೆ’ ಸರದಾರ!