samachara
www.samachara.com
ಸೆಕ್ಷನ್‌ 377; ದಶಕಗಳ ಹೋರಾಟಕ್ಕೆ ನ್ಯಾಯ ಒದಗಿಸುತ್ತಾ ಸುಪ್ರಿಂ ಕೋರ್ಟ್?
COVER STORY

ಸೆಕ್ಷನ್‌ 377; ದಶಕಗಳ ಹೋರಾಟಕ್ಕೆ ನ್ಯಾಯ ಒದಗಿಸುತ್ತಾ ಸುಪ್ರಿಂ ಕೋರ್ಟ್?

ದಶಕಗಳಿಂದ ದೇಶದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಸೆಕ್ಷನ್‌ 377 ವಿರುದ್ಧ ಕಾನೂನು ಮತ್ತು ಬೀದಿ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಈ ಕುರಿತು ಐತಿಹಾಸಿಕ ತೀರ್ಪು ನೀಡಲಿರುವ ಸುಪ್ರಿಂ ಯಾರ ಪರವಾಗಿ ನಿಲ್ಲಲಿದೆ ಎನ್ನುವುದು ಸದ್ಯದ ಕೌತುಕ.

ಸಲಿಂಗ ಸಂಬಂಧ ಎನ್ನುವುದು ನಿಸರ್ಗ ವಿರೋಧಿ ಎಂದು ಹೇಳುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ರ ವಿರುದ್ಧ ದಾಖಲಾಗಿರುವ ಅರ್ಜಿಗಳನ್ನು ಸುಪ್ರಿಂ ಕೋರ್ಟ್‌ ಮರುಪರಿಶೀಲನೆ ನಡೆಸುತ್ತಿದೆ. ಸೆಕ್ಷನ್‌ 377ಕ್ಕೆ ತಿದ್ದುಪಡಿ ತಂದು ಸಲಿಂಗ ಕಾಮವನ್ನು ಕಾನುನು ಬದ್ಧವಾಗಿಸಬೇಕೋ ಅಥವಾ ಅಪರಾಧವೆಂದು ಪರಿಗಣಿಸಬೇಕೋ ಎಂದು ಸುಪ್ರಿಂ ಕೋರ್ಟ್‌ನ 5 ಜನ ನ್ಯಾಯಮೂರ್ತಿಗಳ ಪೀಠ ನಿರ್ಧರಿಸಲಿದೆ. 

ಏನಿದು ಸೆಕ್ಷನ್‌ 377?:

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377, ಬ್ರಿಟಿಷ್‌ ಕಾಲದಲ್ಲಿಯೇ ಜಾರಿಗೆ ಬಂದಿತ್ತು. ಈ ಕಾಯ್ದೆಗೆ ಮಾದರಿಯಾಗಿದ್ದು 1533ರ ಭಿಕ್ಷಾಟನಾ ನಿಷೇಧ ಕಾಯ್ದೆ. ಈ ಕಾಯ್ದೆಯ ಅಡಿಯಲ್ಲಿ ನೈಸರ್ಗಿಕವಲ್ಲದ ಲೈಂಗಿಕ ಕ್ರಿಯೆಗಳು ಅಪರಾಧ ಎಂದು ಪರಿಗಣಿಸಲ್ಪಡುತ್ತವೆ. ಪ್ರಕೃತಿಗೆ ವಿರುದ್ಧವಾಗಿ ಸ್ವಲಿಂಗಿಗಳ ಜತೆ ಅಥವಾ ಪ್ರಾಣಿಗಳ ಜತೆ ಸಂಭೋಗ ನಡೆಸಿದರೆ, ಅವರನ್ನು ಅಪರಾಧಿಗಳು ಎಂದು ಪರಿಗಣಿಸಿ 10 ವರ್ಷದವರೆಗೂ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು ಎಂದು ಈ ಕಾಯ್ದೆ ಹೇಳುತ್ತದೆ.

ದಶಕಗಳ ಹೋರಾಟ:

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಸೆಕ್ಷನ್‌ 377ರ ವಿರುದ್ಧ ದಶಕಗಳ ಹಿಂದೆಯೇ ಹೋರಾಟ ಆರಂಭವಾಗಿತ್ತು. ಸೆಕ್ಷನ್‌ 377ರ ವಿರುದ್ಧ ಹೋರಾಟವನ್ನು ‘ಏಡ್ಸ್‌ ಭೇದಭಾವ ವಿರೋಧಿ ಅಂದೋಲನ’ 1991ರಲ್ಲೇ ಪ್ರಾರಂಭಿಸಿತ್ತು. ಈ ಕುರಿತು ವರದಿಗಳನ್ನು ಪ್ರಕಟಿಸಿತ್ತು. 1996ರಲ್ಲಿ ವಿಮಲ್‌ ಬಾಲಸುಬ್ರಹ್ಮಣ್ಯನ್‌ ಎನ್ನುವವರು ‘ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್ಲೀ’ ಪತ್ರಿಕೆಯಲ್ಲಿ ‘ಗೇ ರೈಟ್ಸ್‌ ಇನ್‌ ಇಂಡಿಯಾ' ಹೆಸರಿನ ಲೇಖನವನ್ನು ಪ್ರಕಟಿಸಿದ್ದರು. 2001ರಲ್ಲಿ ಮುನ್ನೆಲೆಗೆ ಬಂದ ನಾಝ್‌ ಫೌಂಡೇಷನ್‌ ಟ್ರಸ್ಟ್‌ ಎಂಬ ಹೋರಾಟಗಾರರ ತಂಡ ದೆಹಲಿ ಹೈಕೋರ್ಟ್‌ನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿತ್ತು. ಪ್ರಾಪ್ತ ವಯಸ್ಕರ ನಡುವಿನ ಸಲಿಂಗ ಕಾಮವನ್ನು ಶಾಸನಬದ್ಧಗೊಳಿಸಬೇಕು ಎಂದು ನಾಝ್ ಫೌಂಡೇಷನ್‌ ವಾದಿಸಿತ್ತು. ಆದರೆ 2003ರಲ್ಲಿ ದೆಹಲಿ ಹೈಕೋರ್ಟ್‌ ಸಲಿಂಗ ಕಾಮದ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿತ್ತು.

ಇಲ್ಲಿಗೆ ಸುಮ್ಮನಾಗದ ನಾಝ್‌ ಫೌಂಡೇಷನ್‌, ಸುಪ್ರಿಂ ಕೋರ್ಟ್‌ ಮನವಿ ಸಲ್ಲಿಸಿತ್ತು. ಸುಪ್ರಿಂ ಕೋರ್ಟ್‌ ಮತ್ತೆ ಈ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಹೆಗಲಿಗೇರಿಸಿತು. ಈ ವೇಳೆಗೆ ದೆಹಲಿಯ ಎಲ್‌ಜಿಬಿಟಿ ಸಮುದಾಯ, ಮಹಿಳಾ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟ ಸಿದ್ಧವಾಗಿ, ವಾಯ್ಸ್ ಅಗೈನೆಸ್ಟ್‌ 377’ ಹೆಸರಿನಲ್ಲಿ ನಾಝ್‌ ಫೌಂಡೇಷನ್‌ಗೆ ಬೆಂಬಲವಾಗಿ ನಿಂತಿತು.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

2006ರಲ್ಲೂ ಈ ಕಾಯ್ದೆಯ ಕುರಿತು ವಿರೋಧಗಳು ಕೇಳಿ ಬಂದಿದ್ದವು. ದೇಶದ 100ಕ್ಕೂ ಹೆಚ್ಚು ಪ್ರಮುಖ ಸಾಹಿತಿಗಳು ಸೆಕ್ಷನ್‌ 377 ವಿರುದ್ಧ ಮಾತನಾಡಿದ್ದರು. ಕೊಲ್ಕತ್ತಾ ಮೂಲದ ಪ್ರಮುಖ ಕಾದಂಬರಿಕಾರ ವಿಕ್ರಮ್‌ ಸೇಟ್‌ ಈ ಸಾಲಿನಲ್ಲಿ ಮುಂದಿದ್ದರು. ಅಂಬುಮನಿ ರಾಮ್‌ದಾಸ್‌, ಆಸ್ಕರ್‌ ಫರ್ನಾಂಡಿಸ್‌ ಸೇರಿದಂತೆ ಇನ್ನಿತರೆ ರಾಜಕಾರಣಿಗಳೂ ಕೂಡ ಸೆಕ್ಷನ್‌ 377ಅನ್ನು ಟೀಕಿಸಿದ್ದರು. 2008ರಲ್ಲಿ ಬಾಂಬೆ ಹೈಕೋರ್ಟ್‌ ಕೂಡ ಕಾಯ್ದೆಯನ್ನು ರದ್ದುಗೊಳಿಸುವಂತೆ ಸೂಚಿಸಿತ್ತು.

ಸಲಿಂಗ ಕಾಮ ಅಪರಾಧವಲ್ಲ ಎಂದ ದೆಹಲಿ ನ್ಯಾಯಾಲಯ:

ಇವರೆಲ್ಲರ ಹೋರಾಟದ ಫಲವಾಗಿ 2009ರ ಜುಲೈ 2ರಂದು 105 ಪುಟಗಳ ತೀರ್ಪನ್ನು ನೀಡಿದ ನ್ಯಾಯಾಲಯ, ಸೆಕ್ಷನ್‌ 377ಕ್ಕೆ ತಿದ್ದುಪಡಿ ತರಬೇಕು ಎಂದು ಸೂಚಿಸಿತು. ತಿದ್ದಪಡಿ ತರದಿದ್ದರೆ ಭಾರತದ ದಂಡ ಸಂಹಿತೆಯ 14ನೇ ವಿಧಿ ಹೇಳುವ ‘ದೇಶದ ಎಲ್ಲಾ ಪ್ರಜೆಯನ್ನು ಸಮಾನವಾಗಿ ಬದುಕುವ ಅವಕಾಶಗಳನ್ನು ಹೊಂದಿದ್ದು, ಕಾನೂನಿನ ಮುಂದೆ ಎಲ್ಲರೂ ಒಂದೇ ಅಗಿರುತ್ತಾರೆ’ ಎಂಬ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ ಎಂದಿತ್ತು.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಆದರೆ ದೆಹಲಿ ನ್ಯಾಯಾಲಯದ ತೀರ್ಪಿನ ಕುರಿತು ಸುಪ್ರಿಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಗಳು ಬಂದಿದ್ದವು. 2013ರ ಡಿಸೆಂಬರ್‌ 11ರಂದು ಈ ತೀರ್ಪಿಗೆ ಸಂಬಂಧಿಸಿದಂತೆ ಮರುವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್‌, ಕಾಯ್ದೆಯ ತಿದ್ದುಪಡಿ ಸಂಸತ್ತಿಗೆ ಸಂಬಂಧಿಸಿದ ವಿಷಯವೇ ಹೊರತು ನ್ಯಾಯಾಂಗ ವ್ಯವಸ್ಥೆಯದ್ದಲ್ಲ ಎಂದು ತೀರ್ಪು ನೀಡಿತ್ತು. ದೆಹಲಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾಗೊಳಿಸಿತ್ತು.

ಪರ-ವಿರೋಧಗಳ ರಾಜಕಾರಣ:

2013ರಲ್ಲಿ ಸುಪ್ರಿಂ ಕೋರ್ಟ್‌ ಸೆಕ್ಷನ್‌ 377ರ ತೀರ್ಪನ್ನು ತಡೆಹಿಡಿದಿದ್ದನ್ನು ಹಲವಾರು ಧಾರ್ಮಿಕ ನಾಯಕರು ಸ್ವಾಗತಿಸಿದ್ದರು. ದೇಶಾದ್ಯಂತ ಯೋಗಗುರು ಎಂದೇ ಪ್ರಸಿದ್ಧವಾದ ಬಾಬಾ ರಾಮ್‌ದೇವ್‌ ಸಲಿಂಗ ಕಾಮವನ್ನು ‘ಕೆಟ್ಟ ಚಟ’ ಎಂದು ಕರೆದು, ಯೋಗದ ಮೂಲಕ ಸಲಿಂಗ ಕಾಮವನ್ನು ತಡೆಯುದಾಗಿ ತಿಳಿಸಿದ್ದರು. ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಓಂ ಪ್ರಕಾಶ್ ಸಿಂಗಾಲ್‌ ಮಾತನಾಡಿ, “ಸಲಿಂಗ ಕಾಮ ಎನ್ನುವುದು ಭಾರತೀಯ ಸಂಸ್ಕೃತಿಗೆ, ಪ್ರಕೃತಿ ಮತ್ತು ವಿಜ್ಞಾನಗಳಿಗೂ ಕೂಡ ವಿರುದ್ಧವಾದದ್ದು. ಸುಪ್ರಿಂ ಕೋರ್ಟ್‌ ಭಾರತದ ಸಂಸ್ಕೃತಿಯನ್ನು ರಕ್ಷಿಸಿದೆ. ಸುಪ್ರಿಂ ಕೋರ್ಟ್‌ನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ,” ಎಂದಿದ್ದರು.

2013ರಲ್ಲಿ ಸುಪ್ರಿಂ ಕೋರ್ಟ್ ಇದು ಸಂಸತ್ತಿಗೆ ಸಂಬಂಧಿಸಿದ ವಿಷಯ ಎಂದ ನಂತರದಲ್ಲಿ ಹಲವಾರು ಪಕ್ಷಗಳು ಹಲವಾರು ರೀತಿಯ ಅಭಿಪ್ರಾಯಗಳನ್ನು ಮಂಡಿಸಿದ್ದವು. ಆಡಳಿತ ಪಕ್ಷ ಬಿಜೆಪಿಯ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ, “ನಿಸ್ಸಂಶಯವಾಗಿ ನಾವು ಕಾಯ್ದೆಯ ಪರವಾಗಿದ್ದೇವೆ. ಕಾಯ್ದೆಯ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ,” ಎಂದಿದ್ದರು. ಯೋಗಿ ಆದಿತ್ಯನಾಥ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದರೆ ಖಂಡಿತವಾಗಿಯೂ ವಿರೋಧಿಸುತ್ತೇವೆ ಎಂದಿದ್ದರು. ಸಮಾಜವಾದಿ ಪಕ್ಷವೂ ಕೂಡ ಕಾಯ್ದೆಯ ಪರವಾಗಿ ಮಾತನಾಡಿತ್ತು. ಸಮಾಜವಾದಿ ಪಕ್ಷದ ನಾಯಕ ರಾಮ್‌ಗೋಪಾಲ್‌ ಯಾದವ್‌, ಸಲಿಂಗ ಕಾಮ ಎನ್ನುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು ಎಂದಿದ್ದರು.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಬಿಜೆಪಿ ಪಕ್ಷ ಕಾಯ್ದೆಗೆ ಪರವಾಗಿದ್ದ ಸಂಧರ್ಭದಲ್ಲಿ ವಿತ್ತ ಸಚಿವ ಅರುಣ್‌ ಜೇಟ್ಲಿ ಮಾತ್ರ ವಿಭಿನ್ನವೆನಿಸುವ ವಾದ ಮಂಡಿಸಿದ್ದರು. “ಸುಪ್ರಿಂ ಕೋರ್ಟ್ ದೆಹಲಿ ಹೈಕೋರ್ಟ್‌ನ ತೀರ್ಪನ್ನು ಬದಲಿಸಿಲ್ಲ. ಬದಲಾಗಿ ಸಂಸತ್ತಿಗೆ ಬಿಟ್ಟಿದೆ. ಜಗತ್ತಿನ ಲಕ್ಷಾಂತರ ಜನ ತಮಗಿಷ್ಟದ ಕಾಮವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗ ನಾವು ಭಾರತದಲ್ಲಿ ಮಾತ್ರ ವಿರೋಧಿಸುವುದು ತಪ್ಪಾಗಬಹುದು,” ಎಂದಿದ್ದರು. ಬಿಜೆಪಿಯ ವಕ್ತಾರೆ ಶೈನಾ ಎನ್‌ಸಿ ಕೂಡ ಇಂತಹದ್ದೇ ವಾದ ಮಂಡಿಸಿದ್ದರು.

ಆ ಸಮಯಕ್ಕೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ, ಎಲ್‌ಜಿಬಿಟಿ ಸಮುದಾಯದ ಪರವಾಗಿ ನಿಂತಿದ್ದರು. “ಲೈಂಗಿಕತೆ ಎನ್ನುವುದು ಅವರವರ ಆಯ್ಕೆ. ಭಾರತದ ಹೆಸರಾಗಿರುವುದು ಸ್ವಾತಂತ್ರ್ಯಕ್ಕೆ. ಅವರವರ ಸ್ವಾತಂತ್ರ್ಯವನ್ನು ಅವರವರಿಗೇ ಬಿಡಬೇಕು,” ಎಂದಿದ್ದರು. ಆಮ್‌ ಆದ್ಮಿ ಪಕ್ಷ ಎಲ್‌ಜಿಬಿಟಿ ಸಮುದಾಯದ ಜತೆ ನಿಂತಿತ್ತು. ಸಿಪಿಐ(ಎಂ) ಪಕ್ಷದ ಬೃಂದಾ ಕಾರಟ್‌, ಜನತಾದಳದ ಶಿವಾನಂದ ತಿವಾರಿ, ತೃಣಮೂಲ ಕಾಂಗ್ರೆಸ್‌ನ ದೆರೆಕ್‌ ಓ ಬ್ರೇನ್‌ ಸೇರಿದಂತೆ ಇನ್ನಿತ್ಯಾದಿ ನಾಯಕರು ಲೈಂಕಿಕತೆ ಎನ್ನುವುದು ಅವರವರ ಖಾಸಗಿ ವಿಚಾರ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು.

ಹ್ಯೂಮನ್‌ ರೈಟ್ಸ್‌ ವಾಚ್‌ ಸಂಸ್ಥೆ ಭಾರತದಲ್ಲಿ ಲೈಂಗಿಕ ಕಾರ್ಮಿಕರ, ಸಲಿಂಗ ಕಾಮಿಗಳ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ವಾದಿಸಿತ್ತು. ಪೀಪಲ್ಸ್‌ ಯೂನಿಯನ್‌ ಆಫ್‌ ಸಿವಿಲ್‌ ಲಿಬರ್ಟೀಸ್‌ ಎಂಬ ಸಂಸ್ಥೆ ಭಾರತದಲ್ಲಿನ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಕುರಿತಂತೆ 2 ವರದಿಗಳನ್ನು ಪ್ರಕಟಿಸಿತ್ತು. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ನವಿ ಪಿಲ್ಲೈ, “ಖಾಸಗಿ ಹಕ್ಕುಗಳನ್ನು ಅಪರಾಧಗಳನ್ನಾಗಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ,” ಎಂದಿದ್ದರು.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಈ ಮಧ್ಯೆ ಕಾಂಗ್ರೆಸ್ ಪಕ್ಷದ ಸಂಸದ ಶಶಿ ತರೂರ್‌ ಸೆಕ್ಷನ್‌ 377ಕ್ಕೆ ತಿದ್ದುಪಡಿ ತರುವ ಬಿಲ್‌ಅನ್ನು 2 ಬಾರಿ ಸಂಸತ್ತಿನ ಮುಂದಿಟ್ಟಿದ್ದರಾದರೂ ಕೂಡ ಹೆಚ್ಚಿನ ಸಂಸದರು ತಿದ್ದುಪಡಿಗೆ ಅಸ್ತು ಎಂದಿರಲಿಲ್ಲ.

2016ರ ಪೆಬ್ರವರಿ ತಿಂಗಳಲ್ಲಿ ನಾಝ್‌ ಫೌಂಡೇಷನ್‌, ಅಕೈ ಪದ್ಮಶಾಲಿ ಹಾಗೂ ಮತ್ತಿತರರು ಸುಪ್ರಿಂ ಕೋರ್ಟ್‌ನಲ್ಲಿ 2013ರ ತೀರ್ಪಿನ ಕುರಿತು ಪರಾಮರ್ಶಾ ಅರ್ಜಿಯನ್ನು (ಕ್ಯುರೇಟಿವ್‌ ಪಿಟಿಷನ್‌) ದಾಖಲಿಸಿದ್ದರು. ಸುಪ್ರಿಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಾದೀಶರಾಗಿದ್ದ ಟಿ. ಎಸ್‌. ಠಾಕೂರ್‌ ನೇತೃತ್ವದಲ್ಲಿ ಮೂರು ಜನ ನ್ಯಾಯಮೂರ್ತಿಗಳ ಪೀಠ ಈ ಕುರಿತು ವಿಚಾರಣೆ ನಡೆಸಿತ್ತು. ಸೆಕ್ಷನ್‌ 377ಗೆ ಸಂಬಂಧಿಸಿದಂತೆ 8 ಆದೇಶ ಪರಾಮರ್ಶಾ ಅರ್ಜಿಗಳು ದಾಖಲಾಗಿದ್ದು, 5 ನ್ಯಾಯಾದೀಶರ ಪೀಠವು ಈ ಅರ್ಜಿಗಳನ್ನು ಹೊಸದಾಗಿ ಮರುಪರಿಶೀಲಿಸುವುದು ಎಂದಿತ್ತು. ಜುಲೈ 10ರ ಮಂಗಳವಾರ ಸುಪ್ರಿಂ ಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿದೆ.

ಸುಪ್ರಿಂ ಕೋರ್ಟ್‌ ಲೈಂಗಿಕತೆ ಎನ್ನುವುದು ಖಾಸಗಿ ವಿಚಾರ, ಅದು ಅವರವರಿಗೆ ಬಿಟ್ಟದ್ದು ಎಂದು ನಿರ್ಧರಿಸಿ 377ಕ್ಕೆ ತಿದ್ದುಪಡಿ ತರಲು ಸೂಚಿಸುತ್ತದೆಯೇ ಅಥವಾ, ಸಲಿಂಗ ಸಂಬಂಧ ಪ್ರಕೃತಿ ಮತ್ತು ಸಂಸ್ಕೃತಿಗೆ ವಿರೋಧವಾದದ್ದು ಎಂದು ಕಾಯ್ದೆಯನ್ನು ಮುಂದುವರೆಸಲಿದೆಯೇ ಎನ್ನುವುದು ಶೀಘ್ರದಲ್ಲಿಯೇ ತಿಳಿಯಲಿದೆ.