samachara
www.samachara.com
ನಿರ್ಭಯಾ ತೀರ್ಪು: ‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಸುಡಿ’ ಎಂದ ಸಂತ್ರಸ್ತ ತಾಯಿ
COVER STORY

ನಿರ್ಭಯಾ ತೀರ್ಪು: ‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಸುಡಿ’ ಎಂದ ಸಂತ್ರಸ್ತ ತಾಯಿ

ಕೊನೆಗೂ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆ ಜಾರಿಗೊಳಿಸಿ ಎಂದು ನಿರ್ಭಯಾ ಪೋಷಕರು ಒತ್ತಾಯಿಸಿದ್ದಾರೆ.

ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪು ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ನಿರ್ಭಯಾ ಪೋಷಕರು, “ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆ ಜಾರಿಗೊಳಿಸಿ” ಎಂದು ಒತ್ತಾಯಿಸಿದ್ದಾರೆ.

ಆರು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಐದು ಮಂದಿ ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ಕಳೆದ ವರ್ಷದ ಮೇ ತಿಂಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಗಲ್ಲು ಶಿಕ್ಷೆಯ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಅಪರಾಧಿಗಳ ಪರವಾಗಿ ವಾದಿಸಿದ್ದ ವಕೀಲರು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್‌ ಸೋಮವಾರ ಈ ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.

“ಸುಪ್ರೀಂಕೋರ್ಟ್‌ ತೀರ್ಪು ನಿರ್ಭಯಾ ಪರವಾಗಿ ಹೋರಾಡಿದ ಎಲ್ಲರಿಗೆ ಸಿಕ್ಕ ನ್ಯಾಯ” ಎಂದು ನಿರ್ಭಯಾ ತಾಯಿ ಆಶಾದೇವಿ ಸಿಂಗ್ ಹೇಳಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ” ಎಂದಿದ್ದಾರೆ.

ಅಪರಾಧಿಗಳು ಈ ತೀರ್ಪನ್ನು ಪ್ರಶ್ನಿಸಿ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆ ಮೇಲ್ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದರೆ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಬಹುದು. ರಾಷ್ಟ್ರಪತಿಯವರೂ ಅಪರಾಧಿಗಳ ಮನವಿಯನ್ನು ತಿರಸ್ಕರಿಸಿದರೆ ಅಪರಾಧಿಗಳು ಗಲ್ಲಿಗೇರುವುದು ಖಚಿತ.

ಆದರೆ, ನ್ಯಾಯದಾನದ ಪ್ರಕ್ರಿಯೆಯ ಈ ವಿಳಂಬದ ಬಗ್ಗೆ ಮಾತನಾಡಿರುವ ಆಶಾದೇವಿ ಸಿಂಗ್‌ ಮತ್ತು ನಿರ್ಭಯಾ ತಂದೆ ಬದ್ರೀನಾಥ್‌ ಸಿಂಗ್‌, “ಶೀಘ್ರ ನ್ಯಾಯದಾನ ಪ್ರಕ್ರಿಯೆ ನಡೆಯಬೇಕು. ಆದಷ್ಟು ಬೇಗ ಅಪರಾಧಿಗಳನ್ನು ಗಲ್ಲಿಗೇರಿಸುವ ಮೂಲಕ ನಿರ್ಭಯಾಗೆ ನ್ಯಾಯ ಒದಗಿಸಬೇಕು” ಎಂದಿದ್ದಾರೆ.

2012ರ ಡಿಸೆಂಬರ್‌ 16ರಂದು ತನ್ನ ಸ್ನೇಹಿತನೊಂದಿಗೆ ಸಿನಿಮಾ ನೋಡಲು ಹೋಗಿದ್ದ 23 ವರ್ಷದ ಯುವತಿಯ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಮಂದಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಲಿಸುತ್ತಿದ್ದ ಬಸ್‌ನಿಂದ ಇಬ್ಬರನ್ನೂ ಹೊರಗೆ ದೂಡಿದ್ದರು. ತೀವ್ರವಾಗಿ ಹಲ್ಲೆಗೊಳಗಾಗಿದ್ದ ಯುವತಿ 13 ದಿನಗಳ ಜೀವನ್ಮರಣ ಹೋರಾಟದ ಬಳಿಕ ಸಿಂಗಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಅತ್ಯಾಚಾರಿಗಳ ಪೈಕಿ ಒಬ್ಬ ವಿಚಾರಣಾ ಹಂತದಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದ. ಈ ಪ್ರಕರಣದ ಮತ್ತೊಬ್ಬ ಬಾಲಾಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಹೀಗಾಗಿ ಗಲ್ಲು ಶಿಕ್ಷೆಯ ವ್ಯಾಪ್ತಿಯಿಂದ ಆತ ಹೊರಗುಳಿದಿದ್ದಾನೆ. ಉಳಿದ ನಾಲ್ಕು ಮಂದಿಗೆ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಅಪರಾಧಿಗಳಾದ ಮುಖೇಶ್‌ (29), ಪವನ್‌ ಗುಪ್ತಾ (22) ಮತ್ತು ವಿನಯ್‌ ಶರ್ಮಾ (23) ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮತ್ತೊಬ್ಬ ಅಪರಾಧಿ ಅಕ್ಷಯ್‌ ಕುಮಾರ್‌ ಸಿಂಗ್ (31) ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರಲಿಲ್ಲ.

ತೀರ್ಪಿನ ಬಳಿಕ ನಿರ್ಭಯಾ ತಾಯಿ ಆಶಾದೇವಿ ಸಿಂಗ್‌ ಆಡಿರುವ ಮಾತುಗಳು ಇಲ್ಲಿವೆ:

“ಹಲವು ವರ್ಷಗಳ ನಮ್ಮ ಹೋರಾಟದ ಬಳಿಕ ಈ ತೀರ್ಪು ಬಂದಿದೆ. ಆದರೆ, ನಿರ್ಭಯಾಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಕಾನೂನು ಪ್ರಕ್ರಿಯೆಗಳು ಬೇಗ ಮುಗಿದು ಆದಷ್ಟು ಬೇಗ ಅಪರಾಧಿಗಳನ್ನು ಗಲ್ಲಿಗೆ ಏರಿಸಬೇಕು.

ಈ ಅಪರಾಧಿಗಳಿಗೆ ಆದಷ್ಟು ಬೇಗ ಗಲ್ಲು ಶಿಕ್ಷೆ ಜಾರಿಯಾಗುವ ವಿಶ್ವಾಸವಿದೆ. ಭಾರತದಲ್ಲಿ ಸಾವಿರಾರು ಮಂದಿ ಅತ್ಯಾಚಾರಿಗಳಿದ್ದಾರೆ. ಈ ಅತ್ಯಾಚಾರಿಗಳು ನಿಧಾನಗತಿಯ ಕಾನೂನು ಪ್ರಕ್ರಿಯೆಯ ಲಾಭ ಪಡೆಯುತ್ತಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಬೇಗ ಶಿಕ್ಷೆ ಜಾರಿಯಾದರೆ ಈ ಎಲ್ಲಾ ಅತ್ಯಾಚಾರಿಗಳಿಗೆ ಅದು ಎಚ್ಚರಿಕೆ ಸಂದೇಶವಾಗಲಿದೆ. ಅತ್ಯಾಚಾರದ ಮನಸ್ಥಿತಿ ಹೊಂದಿರುವವರಿಗೆ ಇದೊಂದು ಪಾಠವಾಗಲಿದೆ.

ನಿರ್ಭಯಾಗಾಗಿ ನ್ಯಾಯ ಕೊಡಿಸಲು ನಾನು ಮತ್ತು ನನ್ನ ಕುಟುಂಬದ ಜತೆ ಇಡೀ ದೇಶವೇ ನಮ್ಮ ಹೋರಾಟದಲ್ಲಿ ಭಾಗಿಯಾಯಿತು. ಅಪರಾಧ ಎಷ್ಟೇ ಗಂಭೀರ ಪ್ರಮಾಣದ್ದಾಗಿದ್ದರೂ ನ್ಯಾಯದಾನ ಪ್ರಕ್ರಿಯೆ ಮಾತ್ರ ನಮ್ಮಲ್ಲಿ ವಿಳಂಬ. ರಸ್ತೆಯಲ್ಲಿ ಮಾಡುವ ಹೋರಾಟಕ್ಕೂ, ನ್ಯಾಯಾಲಯದಲ್ಲಿ ಮಾಡುವ ಹೋರಾಟಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಸಂತ್ರಸ್ತರು ನ್ಯಾಯ ಪಡೆಯಲು ಕಾನೂನು, ನಿಯಮ ಹಾಗೂ ಪ್ರಕ್ರಿಯೆಗಳನ್ನು ಪಾಲಿಸಬೇಕು. ಆದರೆ, ಅಪರಾಧಿಗಳಿಗೆ ಹಲವು ಬಾರಿ ಮೇಲ್ಮನವಿ ಸಲ್ಲಿಸುತ್ತಾ ಕಾನೂನು ಪ್ರಕ್ರಿಯೆ ನಿಧಾನಗೊಳಿಸಲು ಅವಕಾಶವಿದೆ. ಇದು ಯಾವ ನ್ಯಾಯ?

ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಈ ಕಾನೂನು ಪ್ರಕ್ರಿಯೆಯೊಳಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ. ಸಂತ್ರಸ್ತರು ನ್ಯಾಯಾಲಯದಲ್ಲಿ ಏನನ್ನೂ ಮಾತನಾಡದೆ ಸುಮ್ಮನೆ ಬಾಯಿ ಮುಚ್ಚಿಕೊಂಡು ಕೂರಬೇಕು. ಮೊದಲಿಗೆ ನ್ಯಾಯಾಲಯದಲ್ಲಿ ಯಾವ ರೀತಿ ವಾದ ನಡೆಯುತ್ತಿದೆ ಎಂಬುದೂ ನನಗೆ ಗೊತ್ತಾಗುತ್ತಿರಲಿಲ್ಲ. ಪೊಲೀಸರು ನಮ್ಮ ಪರವಾಗಿ ಹೋರಾಡುತ್ತಿದ್ದಾರೆ ಎಂದು ನಾನು ತಿಳಿದಿದ್ದೆ. ಆದರೆ, ಅವರು ಯಾವ ರೀತಿ ನಮ್ಮ ಪರವಾಗಿದ್ದಾರೆ ಎಂದು ಗೊತ್ತಾಗಿರಲಿಲ್ಲ. 2016ರ ಜೂನ್‌ ತಿಂಗಳಲ್ಲಿ ನಾನು ಈ ಪ್ರಕರಣದ ಭಾಗಿಯಾಗಿ ನ್ಯಾಯಾಲಯ ಕಲಾಪಕ್ಕೆ ಹೋಗಿ ಕುಳಿತುಕೊಳ್ಳುವ ಅನುಮತಿ ಪಡೆದುಕೊಂಡೆ.

ಮಹಿಳೆ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ಮನೆಯವರು ಆಕೆಯನ್ನು ಹೆಚ್ಚು ಪ್ರಶ್ನಿಸುವುದು ಸರಿಯಲ್ಲ. ಅಲ್ಲದೆ ಮೌನ ವಹಿಸದೆ ಪೊಲೀಸ್‌ ದೂರು ದಾಖಲಿಸಬೇಕು. ಪ್ರಕರಣ ತಾರ್ತಿಕ ಅಂತ್ಯ ಕಾಣುವವರೆಗೂ ಹೋರಾಟ ನಡೆಸಬೇಕು. ಆಗ ಮಾತ್ರ ಅತ್ಯಾಚಾರಿಗಳು ಕಡಿಮೆಯಾಗಲು ಸಾಧ್ಯ. ಆದರೆ, ನಮ್ಮ ಸಮಾಜದಲ್ಲಿ ಹೋರಾಟ ನಡೆಸಲು ಮುಂದೆ ಬರುವುದು ಅವಮಾನ ಎಂದು ಭಾವಿಸಿ, ಅತ್ಯಾಚಾರವನ್ನೂ ಮುಚ್ಚಿಡುವವರು ಹೆಚ್ಚಾಗಿದ್ದಾರೆ. ಇದರಿಂದ ಅತ್ಯಾಚಾರದ ಮನಸ್ಥಿತಿಗಳು ಹೆಚ್ಚಾಗುತ್ತಿವೆ.

ಪೊಲೀಸರು ನ್ಯಾಯಾಲಯದಲ್ಲಿ ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಹಿಂದೆ ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಸಂತ್ರಸ್ತರು ಹಾಗೂ ಅವರ ಕುಟುಂಬದವರು ಏಕಾಂಗಿಯಾಗಿ ಹೋರಾಟ ನಡೆಸಬೇಕಾಗುತ್ತದೆ. ಆರೋಪಿಗಳು ಜೈಲಿನಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಊಟೋಪಚಾರ ಮಾಡಿಕೊಂಡು ಇರುತ್ತಾರೆ. ನ್ಯಾಯಾಲಯಕ್ಕೆ ಬರುವಾಗಿ ಪೊಲೀಸರ ಭದ್ರತೆಯಲ್ಲಿ ಬಂದು ಹೋಗುತ್ತಾರೆ. ಆದರೆ, ಸಂತ್ರಸ್ತ ಕುಟುಂಬದ ಕಷ್ಟಗಳನ್ನು ಯಾರೂ ಕೇಳುವುದಿಲ್ಲ.

ಈ ತೀರ್ಪಿನ ಬಳಿಕವೂ ನನಗೆ ಪೂರ್ತಿಯಾಗಿ ಸಮಾಧಾನವಾಗಿಲ್ಲ. ಈ ಪ್ರಕರಣದ ಬಾಲಾಪರಾಧಿ ಶಿಕ್ಷೆಯಿಂದ ಹೊರ ಉಳಿದಿದ್ದಾನೆ. ಅವನು ನಮ್ಮ ಸುತ್ತಲೇ ಇದ್ದಾನೆ. ಬಾಲಾಪರಾಧಿಗಳ ರಿಮ್ಯಾಂಡ್ ಹೋಮ್‌ನಲ್ಲಿ ಅವನನ್ನು ಮಗುವಿನ ಹಾಗೆ ನೋಡಿಕೊಂಡಿರುತ್ತಾರೆ. ಅವನು ಯಾವ ರೀತಿ ಬದಲಾಗಿದ್ದಾನೋ ಗೊತ್ತಿಲ್ಲ. 20 ವರ್ಷದ ಸಮೀಪದಲ್ಲಿರುವ ಅವನು ಒಬ್ಬ ನಾಗರಿಕನಾಗಿ ಬದಲಾಗಿರುತ್ತಾನೆ ಎಂಬುದರ ಬಗ್ಗೆ ನನಗೆ ಅನುಮಾನವಿದೆ.

ಇಷ್ಟೆಲ್ಲಾ ಆದ ಮೇಲೂ ಕೆಲವರು ಅಪರಾಧಿಗಳಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಈ ಅತ್ಯಾಚಾರಿಗಳಿಗೆ ಬದುಕಲು ಇನ್ನೊಂದು ಅವಕಾಶ ಕೊಡಬೇಕು ಎಂಬುದು ಅವರ ವಾದ. ಆದರೆ, ಇದು ಕೇವಲ ರಾಜಕೀಯ ಪ್ರೇರಿತ.

ಗಲ್ಲುಶಿಕ್ಷೆ ತಪ್ಪು ಎಂದು ಹೇಳುವವರಿಗೆ ಈ ಅತ್ಯಾಚಾರಿಗಳು ಒಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಅಂಗಾಂಗಗಳನ್ನು ಕಿತ್ತು ಕ್ರೂರವಾಗಿ ಆಕೆಯನ್ನು ಕೊಂದಿದ್ದು ತಪ್ಪು ಎನಿಸುವುದಿಲ್ಲವೇ? ಇಂಥವರು ಇನ್ನೂ ಬದುಕಿರಬೇಕು ಎಂದು ಹೇಳುವುದು ಎಷ್ಟು ಸರಿ? ಅತ್ಯಾಚಾರಿಗಳು ಬದುಕಿದ್ದರೆ ನಮ್ಮ ಸಮಾಜದಲ್ಲಿ ಸುಧಾರಣೆ ಬರುವುದು ಯಾವಾಗ?

ಗಲ್ಲು ಶಿಕ್ಷೆಗೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ಆ ವ್ಯವಸ್ಥೆ ಹೇಗಾಗುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಜೈಲಿನಲ್ಲಿದ್ದರೂ ಅವರ ಕುಟುಂಬದವರೊಂದಿಗೆ ವ್ಯವಹರಿಸುತ್ತಾ, ಕುಟುಂಬದ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾ, ಚಿಕಿತ್ಸೆ ಪಡೆಯುತ್ತಾ ಆರಾಮಾಗಿ ಕಾಲ ಕಳೆಯುತ್ತಾರೆ. ಇದು ನಿಜಕ್ಕೂ ಶಿಕ್ಷೆ ಎನಿಸುತ್ತದೆಯೇ?

ಗಲ್ಲು ಶಿಕ್ಷೆಯಿಂದ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುವುದಿಲ್ಲ ಎಂದು ಕೆಲವರು ಅಂಕಿಸಂಖ್ಯೆಗಳ ಸಹಿತ ವಾದಿಸಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಷ್ಟು ಮಂದಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ?

ಶಿಕ್ಷೆಗೊಳಗಾಗಿರುವ ಅಪರಾಧಿಗಳು ನನ್ನ ಮಗಳೊಂದಿಗೆ ನಡೆದುಕೊಂಡಿರುವುದನ್ನು ನೋಡಿದರೆ ಗಲ್ಲು ಶಿಕ್ಷೆಗಿಂತಲೂ ಕ್ರೂರವಾದ ಶಿಕ್ಷೆ ವಿಧಿಸಬೇಕೆನಿಸುತ್ತದೆ. ಅವರನ್ನು ಸಾರ್ವಜನಿಕವಾಗಿ ಸುಟ್ಟು ಹಾಕಲಿ.”