samachara
www.samachara.com
ಉರ್ದು ಭಾಷೆಯ ಬಗ್ಗೆ ಜನಗಣತಿ ವರದಿಗಳು ಬಹಿರಂಗ ಪಡಿಸಿದ ಮಾಹಿತಿ ಏನು ಗೊತ್ತೇ?
COVER STORY

ಉರ್ದು ಭಾಷೆಯ ಬಗ್ಗೆ ಜನಗಣತಿ ವರದಿಗಳು ಬಹಿರಂಗ ಪಡಿಸಿದ ಮಾಹಿತಿ ಏನು ಗೊತ್ತೇ?

ಭಾರತದಲ್ಲಿ ಹುಟ್ಟಿ ಬೆಳೆದು ಅಭಿವೃದ್ಧಿಗೊಂಡ ಭಾಷೆ ಉರ್ದು. ಇಂದು ಭಾರತದಲ್ಲಿಯೇ ಉರ್ದು ಭಾಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. 2001 ಮತ್ತು 2011ರ ಜನಗಣತಿ ಅಂಕಿ ಅಂಶಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸುತ್ತವೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಭಾರತದಲ್ಲಿ ಅಸ್ತಿತ್ವದಲ್ಲಿರುವ ಭಾಷೆಗಳ ಪೈಕಿ ಉರ್ದು ಕೂಡ ಒಂದು. ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿರುವ ಉರ್ದು ಭಾಷೆ ಭಾರತೀಯ ಮುಸಲ್ಮಾನರ ತಾಯಿ ನುಡಿ. ಉರ್ದು ದೇಶದ ಯಾವ ನಿರ್ಧಿಷ್ಟ ರಾಜ್ಯ, ಪ್ರಾಂತ್ಯದ ಭಾಷೆಯಲ್ಲ. ಬದಲಾಗಿ ದೇಶಾದ್ಯಂತ ಹರಡಿದೆ. 

ಭಾರತದಲ್ಲಿ ಜನ್ಮ ತಾಳಿದ ಭಾಷೆಗಳ ಪೈಕಿ ಉರ್ದು ಕೂಡ ಒಂದು. ಭಾರತದ ಮಧ್ಯಯುಗೀನ ಕಾಲವಾದ 6ರಿಂದ 13ನೇ ಶತಮಾನದ ಅವಧಿಯೊಳಗೆ ಹುಟ್ಟಿ ಬೆಳೆದ ಉರ್ದು ಭಾಷೆ, ಮುಸ್ಲಿಂ ದೊರೆಗಳ ಅವಧಿಯಲ್ಲಿ ಅಭಿವೃದ್ಧಿಗೊಂಡಿತ್ತು. ಉರ್ದು ಸ್ವಂತ ಪದಗಳನ್ನು ಸೃಷ್ಠಿಸಿಕೊಂಡು ಬೆಳದೆ ಭಾಷೆಯಲ್ಲ. ಹಲವಾರು ಭಾರತೀಯ ಹಾಗೂ ಕೆಲವು ವಿದೇಶಿ ಭಾಷೆಗಳ ಪದಕೋಶ ಸೇರಿ ಪ್ರತ್ಯೇಕ ಭಾಷೆಯಾಗಿ ರೂಪುಗೊಂಡಿರುವ ಉರ್ದು ಭಾಷೆಗೆ ತನ್ನದೇ ಸ್ವಂತ ವ್ಯಾಕರಣವಿಲ್ಲ.

ಉರ್ದು ಭಾಷೆಯ ಶೇ.75ರಷ್ಟು ಪದಗಳು ಸಂಸ್ಕೃತ ಮತ್ತು ಪ್ರಾಕೃತ ಮೂಲದವು. ಶೇ.99ರಷ್ಟು ನಾಮ ಪದಗಳೆಲ್ಲವೂ ಕೂಡ ಇವೇ ಭಾಷೆಗಳಿಂದ ಎರವಲಾಗಿ ಪಡೆದಂತವು. ಜತೆಗೆ ಪರ್ಷಿಯನ್‌ ಮತ್ತು ಅರೇಬಿಕ್‌ ಭಾಷೆಗಳ ಪ್ರಭಾವಕ್ಕೆ ಒಳಗಾಗಿರುವ ಉರ್ದು, ಅವುಗಳಿಂದಲೂ ಕೂಡ ಶೇ.25ರಷ್ಟು ಪದಗಳನ್ನು ಪಡೆದುಕೊಂಡಿದೆ. ‘ಉರ್ದು’ ಪದದ ಮೂಲ ತುರ್ಕಿಕ್‌ ಭಾಷಾ ಜನಾಂಗದ ‘ಓರ್ದಾ’ ಪದವಾಗಿದ್ದು, ಸೈನ್ಯ ಎಂಬ ಅರ್ಥವನ್ನು ಧ್ವನಿಸುತ್ತದೆ ಎನ್ನುತ್ತಾರೆ ಭಾಷಾತಜ್ಞರು.

ಉರ್ದು ಭಾಷೆಯನ್ನು ಪ್ರಸ್ತುತ ಭಾರತದ ಹಲವಾರು ಜನರು ಮಾತನಾಡುತ್ತಾರಾದರೂ ಮೂಲವಾಗಿ ಮುಸ್ಲಿಂ ಸಮುದಾಯದ ಭಾಷೆಯಾಗಿಯೇ ಗುರುತಿಸಿಕೊಂಡಿದೆ. ಭಾರತದ 22 ಅಧಿಕೃತ ಭಾಷೆಗಳ ಪೈಕಿ ಒಂದಾಗಿರುವ ಉರ್ದು ಭಾಷೆಗೆ ದೇಶದ 6 ರಾಜ್ಯಗಳಲ್ಲಿ ಅಧಿಕೃತ ಸ್ಥಾನಮಾನವಿದೆ. ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಅಧಿಕೃತವೆನಿಸಿಕೊಂಡಿರುವ ಉರ್ದುವಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡ ವಿಶೇಷ ಸ್ಥಾನಮಾನ ದೊರೆತಿದೆ.

ಇಂದು ಕೇವಲ ಭಾರತ, ಪಾಕಿಸ್ತಾನ ಮತ್ತು ಸುತ್ತಮುತ್ತಲಿನ ರಾಷ್ಟ್ರಗಳಷ್ಟೇ ಅಲ್ಲದೇ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲೂ ಕೂಡ ಉರ್ದು ಮಾತನಾಡುವ ಜನರಿದ್ದಾರೆ. ಇಂಗ್ಲೆಂಡ್‌, ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ನಾರ್ವೇ ಮುಂತಾದ ದೇಶಗಳಲ್ಲಿ ಉರ್ದು ಭಾಷಿಕರು ನೆಲೆಸಿದ್ದಾರೆ.

ವಿಶ್ವದೆಲ್ಲೆಡೆ ಹಬ್ಬಿರುವ ಉರ್ದು ಭಾಷಿಕರ ಮೂಲವಾದ ಭಾರತದಲ್ಲಿ ಇಂದು ಉರ್ದು ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ. ಉತ್ತರ ಭಾರತದಲ್ಲಿ ಉರ್ದು ಭಾಷಿಕರ ಸಂಖ್ಯೆ ಹೆಚ್ಚು. ಮುಖ್ಯವಾಗಿ ಉತ್ತರ ಪ್ರದೇಶ ರಾಜ್ಯ ಉರ್ದು ಭಾಷಿಕರ ಕೋಟೆ ಎಂದು ಕರೆಸಿಕೊಂಡಿದೆ. ಆದರೆ 2011ರ ಜನಗಣತಿಯ ಆಧಾರವನ್ನಿಡಿದು ನೋಡುವುದಾದರೆ ದೇಶದಲ್ಲಿ ಉರ್ದು ಭಾಷಿಕರ ಸಂಖ್ಯೆ ಕುಸಿತಗೊಳ್ಳುತ್ತಿದೆ. ಉರ್ದು ತಮ್ಮ ಮಾತೃಭಾಷೆ ಎಂದು ಹೇಳಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚಿಗೆ ಭಾಷೆ ಮತ್ತು ಮಾತೃಭಾಷೆಗಳ ಕುರಿತಾದ ಅಂಕಿ ಅಂಶಗಳ ಮೇಲೆ ಬೆಳಕು ಚೆಲ್ಲಿದ ವರದಿಗಳು ಕೂಡ ಇದೇ ಅಂಶವನ್ನು ಸ್ಪಷ್ಟಪಡಿಸುತ್ತಿವೆ.

ಭಾರತದ ಹಲವಾರು ಭಾಷೆಗಳು 1 ಕೋಟಿಗೂ ಹೆಚ್ಚು ಜನ ಭಾಷಿಕರನ್ನು ಹೊಂದಿವೆ. ಅದರಲ್ಲಿ ಉರ್ದು ಭಾಷೆಯೂ ಒಂದು. ಆದರೆ ಈ ಭಾಷೆಗಳ ಪೈಕಿ ತನ್ನ ಭಾಷಿಕರನ್ನು ಕೆದುಕೊಳ್ಳುತ್ತಿರುವುದು ಉರ್ದು ಮಾತ್ರ. ದೇಶದೆಲ್ಲೆಡೆ ಜನಸಂಖ್ಯೆ ವೃದ್ಧಿಯಾಗುತ್ತಿರುವ ಸಂಧರ್ಭದಲ್ಲಿ ಉರ್ದು ಭಾಷಿಕರ ಸಂಖ್ಯೆ ಮಾತ್ರ ಶೇ.4.2ಕ್ಕೆ ಇಳಿದಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಕೊಂಕಣಿ ಭಾಷೆಯನ್ನು ಬಿಟ್ಟರೆ, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಭಾಷೆ ಉರ್ದು.

ಭಾರತ ಸ್ವತಂತ್ರ ಗಳಿಸಿದ ನಂತರದ ಮೊದಲ ದಶಕಗಳಲ್ಲಿ ಉರ್ದು ಭಾಷೆ ಇತರೆ ಭಾಷೆಗಳಂತೆ ಹೆಚ್ಚಿನ ಭಾಷಿಕರನ್ನು ಹೊಂದುತ್ತಾ ಸಾಗಿತ್ತು. 1971ರ ಜನ ಗಣತಿಯ ಪ್ರಕಾರ ದೇಶದಲ್ಲಿ 2.86 ಕೋಟಿ ಜನ ಉರ್ದುವನ್ನು ತಮ್ಮ ಮಾತೃಭಾಷೆ ಎಂದಿದ್ದರು. ಈ ಸಂಖ್ಯೆ 1981ರ ಜನಗಣತಿಯಲ್ಲಿ 3.5 ಕೋಟಿಗೆ ಏರಿಕೆಯಾಗಿತ್ತು. 1991ರ ವೇಳೆಗೆ 4.4 ಕೋಟಿ ತಲುಪಿದ್ದ ಉರ್ದು ಭಾಷಿಕರ ಸಂಖ್ಯೆ 2001ರ ವೇಳೆಗೆ 5.15 ಕೋಟಿ ಜನರನ್ನು ತಲುಪಿತ್ತು. ಆದರೆ 2011ರ ಜನಗಣತಿಯಲ್ಲಿ ಉರ್ದು ಭಾಷಿಕರ ಸಂಖ್ಯೆ ಇಳಿಮುಖಗೊಂಡಿದ್ದು, 5.07 ಕೋಟಿಗೆ ಇಳಿದಿದೆ. ಒಂದು ದಶಕದ ಅವಧಿಯಲ್ಲಿ ಸುಮಾರು 8 ಲಕ್ಷದಷ್ಟು ಜನರನ್ನು ಉರ್ದು ಭಾಷೆ ಕಳೆದುಕೊಂಡಿದೆ.

2001ರ ಜನಗಣತಿ ಹೇಳುವಂತೆ ದೇಶದಲ್ಲಿ ಅತಿಹೆಚ್ಚು ಜನ ಮಾತನಾಡುವ 6ನೇ ಭಾಷೆ ಉರ್ದು ಆಗಿತ್ತು. 2011ರಲ್ಲಿ ಉರ್ದು 7ನೇ ಸ್ಥಾನಕ್ಕೆ ಇಳಿದಿದೆ. ಉರ್ದು ಭಾಷೆಯ ಜಾಗವನ್ನು ಗುಜರಾತಿ ಭಾಷೆ ಆಕ್ರಮಿಸಿದೆ. ದಿನದಿಂದ ದಿನಕ್ಕೆ ತನ್ನ ಸಂಖ್ಯೆಯನ್ನು ಏರಿಸಿಕೊಳ್ಳುತ್ತಿರುವ ಹಿಂದಿ 2001ರಿಂದ 2011ರ ಅವಧಿಯೊಳಗೆ 10 ಕೋಟಿ ಜನರನ್ನು ಹೆಚ್ಚಾಗಿಸಿಕೊಂಡಿದೆ.

ಭಾಷೆ ಎನ್ನುವುದು ಕೇವಲ ಜನಾಂಗೀಯವಾಗಿ ಅಷ್ಟೇ ಗುರುತಿಸಲ್ಪಡುವುದಿಲ್ಲ. ಉರ್ದು ಭಾಷೆಯನ್ನು ಸರಿಯಾಗಿ ಮಾತನಾಡಲು ಮತ್ತು ಅರ್ಥೈಸಿಕೊಳ್ಳಲು ಬರುವವರೆಲ್ಲರೂ ಕೂಡ ಉರ್ದುವನ್ನು ತಮ್ಮ ಮಾತೃ ಭಾಷೆ ಎಂದು ನಮೂದಿಸುತ್ತಾರೆ. ಆದರೆ ಉರ್ದುವನ್ನು ತಮ್ಮ ಮಾತೃ ಭಾಷೆ ಎಂದು ಕರೆದುಕೊಳ್ಳುವವರಲ್ಲಿ ಮುಸಲ್ಮಾನ ಸಮುದಾಯದವರೇ ಹೆಚ್ಚು ಮಂದಿ.

ಹೆಚ್ಚು ಉರ್ದು ಭಾಷಿಕರನ್ನು ಹೊಂದಿದ್ದ ಉತ್ತರ ಭಾರತದಲ್ಲಿ ಉರ್ದು ಭಾಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತರ ಪ್ರದೇಶ ರಾಜ್ಯವು ಸುಮಾರು 3.85 ಕೋಟಿ ಮುಸಲ್ಮಾನರನ್ನು ಹೊಂದಿದೆ. ಆದರೆ ಉರ್ದುವನ್ನು ತಮ್ಮ ಮಾತೃಭಾಷೆ ಎಂದು ಹೇಳಿರುವವರು 1.08 ಕೋಟಿ ಮುಸಲ್ಮಾನರು ಮಾತ್ರ. ಮುಸಲ್ಮಾನರು ಮಾತ್ರವೇ ಉರ್ದು ಭಾಷೆಯನ್ನು ತಮ್ಮ ಮಾತೃ ಭಾಷೆ ಎಂದು ನಮೂದಿಸುತ್ತಾರೆ ಎಂದು ನಂಬುವುದಾದರೆ ಶೇ.28ರಷ್ಟು ಮುಸಲ್ಮಾನರಷ್ಟೇ ಉರ್ದುವನ್ನು ತಮ್ಮ ಮಾತೃಭಾಷೆ ಎಂದು ಕರೆದುಕೊಂಡಿದ್ದಾರೆ.

ಇನ್ನಿತರ ಉತ್ತರ ಭಾರತದ ರಾಜ್ಯಗಳಾದ ಮಧ್ಯ ಪ್ರಧೇಶದಲ್ಲಿ ಒಟ್ಟು 9.16 ಲಕ್ಷ ಉರ್ದು ಮಾತೃಭಾಷಿಕರಿದ್ದಾರೆ. ರಾಜಸ್ಥಾನದಲ್ಲಿ 6.64 ಲಕ್ಷ ಜನ ಉರ್ದುವನ್ನು ಮಾತೃಭಾಷೆ ಎಂದಿದ್ದಾರೆ. ಬಿಹಾರದಲ್ಲಿ ಈ ಸಂಖ್ಯೆ 87.7 ಲಕ್ಷವಿದೆ.

ವ್ಯತಿರಿಕ್ತವಾಗಿ ದಕ್ಷಿಣ ಭಾರತದಲ್ಲಿ ಉರ್ದು ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಮಾತ್ರವಲ್ಲದೇ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲೂ ಕೂಡ ಉರ್ದು ಭಾಷಿಕರ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸಿಕೊಳ್ಳುತ್ತಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 75.4 ಲಕ್ಷ ಜನ ಮುಸಲ್ಮಾನರು ಉರ್ದುವನ್ನು ತಮ್ಮ ಮಾತೃಭಾಷೆ ಎಂದಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಒಟ್ಟು 75 ಲಕ್ಷ ಜನ ಉರ್ದುವನ್ನು ತಾಯಿ ನುಡಿ ಎಂದು ಕರೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈ ಸಂಖ್ಯೆ 66.18 ಲಕ್ಷವನ್ನು ತಲುಪಿದೆ. ಈ ನಾಲ್ಕೂ ರಾಜ್ಯಗಳಲ್ಲಿ ಉರ್ದುವನ್ನು ಮಾತೃಭಾಷೆ ಎಂದಿರುವ ಒಟ್ಟು ಜನರ ಸಂಖ್ಯೆ 2.15 ಕೋಟಿ.

ದೇಶದಲ್ಲಿ ಉರ್ದುವನ್ನು ಮಾತೃಭಾಷೆ ಎನ್ನುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಮಾತ್ರಕ್ಕೆ ಉರ್ದು ಸಾಯುತ್ತಿದೆ ಎಂದು ಅರ್ಥವೇನಲ್ಲ. ಶತ ಶತಮಾನಗಳಿಂದ ಅಭಿವೃದ್ಧಿ, ಹೊಸತನ, ಕೊಡುಕೊಳ್ಳುವಿಕೆಯಿಂದ ಕೂಡಿರುವ ಭಾಷೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಡುತ್ತಲೇ ಬಂದಿವೆ. ದೇಶದ ಹಲವಾರು ರಾಜ್ಯಗಳಲ್ಲಿ ತನ್ನ ಬಾಹುಗಳನ್ನು ಚಾಚಿರುವ ಉರ್ದು ಭಾಷೆಯನ್ನು ದೇಶಾದ್ಯಂತ ಕೋಟ್ಯಾಂತರ ಮಂದಿ ಮಾತನಾಡುತ್ತಾರೆ. ಜಾರ್ಖಂಡ್‌ನಲ್ಲಿ 19.6 ಲಕ್ಷ, ಪಶ್ಚಿಮ ಬಂಗಾಳದಲ್ಲಿ 16.6 ಲಕ್ಷ, ಮತ್ತು ದಕ್ಷಿಣ ಭಾರತದ ರಾಜ್ಯ ತಮಿಳು ನಾಡಿನಲ್ಲೂ ಕೂಡ 12.6 ಲಕ್ಷ ಜನ ಉರ್ದುವನ್ನು ಮಾತನಾಡುತ್ತಾರೆ.

ಅಂಕಿ ಅಂಶಗಳು ಹೇಳುವಂತೆ ಉತ್ತರ ಭಾರತದಲ್ಲಿ ಉರ್ದು ಮಾತೃ ಭಾಷಿಕರ ಸಂಖ್ಯೆ ಕುಸಿಯುತ್ತಿರುವುದೇನೋ ನಿಜ, ಆದರೆ ದಕ್ಷಿಣ ಭಾರತದಲ್ಲಿ ಉರ್ದು ಭಾಷೆ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿದೆ. ದಕ್ಷಿಣ ಭಾರತದ ಔರಂಗಾಬಾದ್‌ನಿಂದ ಕಲಬುರ್ಗಿಯವರೆಗೂ, ಹೈದರಾಬಾದ್‌ನಿಂದ ವೆಲ್ಲೋರ್‌ವರೆಗೂ ಉರ್ದು ಭಾಷಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಭಾಷೆಯೊಂದರ ಸಮಾನ್ಯ ಲಕ್ಷಣವಾದ ಈ ಹರಡುವಿಕೆ ಭಾಷೆಗಳ ಉಳಿಯುವಿಕೆ ಮತ್ತು ಬೆಳೆಯುವಿಕೆಗೆ ಅತ್ಯಗತ್ಯವೂ ಹೌದು. ಹಾಗೇ ಹಲವಾರು ಭಿನ್ನತೆಗಳನ್ನು ಹೊಂದಿರುವ ಭಾಷೆಯೊಂದನ್ನು ಉಳಿಸಿಕೊಳ್ಳುವುದು ದೇಶದ ನಾಗರಿಕರ ಕರ್ತವ್ಯವೂ ಹೌದು.

ಮೂಲ ಮಾಹಿತಿ: ‘ದಿ ವೈರ್’