samachara
www.samachara.com
‘ವಾಟ್ ಇಸ್ ದಿಸ್ ಬ್ರದರ್’: ಸರಳ ಸರಕಾರದ ಮಾತು; ಪ್ರಮಾಣ ವಚನ ಸ್ವೀಕಾರಕ್ಕೆ 59 ಲಕ್ಷ ಖರ್ಚು!
COVER STORY

‘ವಾಟ್ ಇಸ್ ದಿಸ್ ಬ್ರದರ್’: ಸರಳ ಸರಕಾರದ ಮಾತು; ಪ್ರಮಾಣ ವಚನ ಸ್ವೀಕಾರಕ್ಕೆ 59 ಲಕ್ಷ ಖರ್ಚು!

ವಾರದ ಅಂತರದಲ್ಲಿ ಇಬ್ಬರು ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರಕ್ಕೆ ಖರ್ಚಾದ ಸಾರ್ವಜನಿಕರ ತೆರಿಗೆಯ ಹಣ 59,04,690 ರೂಪಾಯಿ.

Team Samachara

ಸುಮಾರು ಒಂದೂವರೆ ತಿಂಗಳ ಹಿಂದೆ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅವಸರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಅವಸರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅತಿಥಿಗಳ ‘ಹೈ ಟೀ’ಗಾಗಿ (ಸರಕಾರಿ ಆತಿಥ್ಯದ ‘ದುಬಾರಿ’ ಟೀ) ಸರಕಾರ ಖರ್ಚು ಮಾಡಿದ್ದು 15,93,000 ರೂಪಾಯಿ.

ಮೇ ತಿಂಗಳ 17ರಂದು ಬೆಂಗಳೂರಿನ ರಾಜಭವನದಲ್ಲಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿತ್ತು. ಅಂದು ಹೈ ಟೀಗಾಗಿ ಸರಕಾರದ ರಾಜ್ಯ ಆತಿಥ್ಯ ಸಂಸ್ಥೆಯ ಉಗ್ರಾಣ ಶಾಖೆಯಿಂದ 15,93,000 ರೂಪಾಯಿ ಖರ್ಚಾಗಿದ್ದರೆ, ‘ಶಿಷ್ಟಾಚಾರ’ದ ಹೂಗುಚ್ಛಕ್ಕಾಗಿ ಖರ್ಚು ಮಾಡಿರುವ ಹಣ 21,750 ರೂಪಾಯಿ.

ಮೂರು ದಿನದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಮಾರಂಭದಕ್ಕೆ ಖರ್ಚಾದ ಒಟ್ಟು ಹಣ 16,14,750 ರೂಪಾಯಿ.

‘ವಾಟ್ ಇಸ್ ದಿಸ್ ಬ್ರದರ್’: ಸರಳ ಸರಕಾರದ ಮಾತು; ಪ್ರಮಾಣ ವಚನ ಸ್ವೀಕಾರಕ್ಕೆ 59 ಲಕ್ಷ ಖರ್ಚು!

ಯಡಿಯೂರಪ್ಪ ಬಳಿಕ ಇನ್ನು ವಾರದ ಅಂತರದಲ್ಲೇ ನಾಡಿನ ಜನ ಹೊಸ ಮುಖ್ಯಮಂತ್ರಿಯನ್ನು ಕಾಣುವಂತಾಗಿತ್ತು. ಸರಕಾರಿ ವ್ಯವಸ್ಥೆಯಲ್ಲಿ ಖರ್ಚಿಗೆ ಕಡಿವಾಣ ಹಾಕುವುದಾಗಿ ಹೇಳುತ್ತಲೇ ಬರುತ್ತಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನೇನೂ ಸರಳವಾಗಿ ನಡೆಸಲಿಲ್ಲ.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್‌ ಮೇ 23ರಂದು ವಿಧಾನಸೌಧದ ಎದುರು ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದು ನಡೆದ ಸಮಾರಂಭಕ್ಕೆ ಸರಕಾರ ಖರ್ಚು ಮಾಡಿರುವ ಹಣ 42,89,940 ರೂಪಾಯಿ. ರಾಜ್ಯ ಆತಿಥ್ಯ ಸಂಸ್ಥೆಯ ವಸತಿ ಶಾಖೆಯಿಂದ ಈ ಹಣ ಬಿಡುಗಡೆಯಾಗಿದೆ.

‘ವಾಟ್ ಇಸ್ ದಿಸ್ ಬ್ರದರ್’: ಸರಳ ಸರಕಾರದ ಮಾತು; ಪ್ರಮಾಣ ವಚನ ಸ್ವೀಕಾರಕ್ಕೆ 59 ಲಕ್ಷ ಖರ್ಚು!

ವಾರದ ಅಂತರದಲ್ಲಿ ನಡೆದ ಈ ಎರಡೂ ಕಾರ್ಯಕ್ರಮಗಳಿಗೆ ಖರ್ಚಾದ ಜನರ ತೆರಿಗೆಯ ಒಟ್ಟು ಹಣ 59,04,690 ರೂಪಾಯಿ. ಮಾಹಿತಿ ಹಕ್ಕು ಕಾರ್ಯಕರ್ತ ಟಿ. ನರಸಿಂಹಮೂರ್ತಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಂಡ ದಾಖಲೆಗಳು ಎರಡೂ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳ ಭಾರೀ ಖರ್ಚಿನ ಲೆಕ್ಕವನ್ನು ಬಹಿರಂಗ ಪಡಿಸಿವೆ.