samachara
www.samachara.com
ಸರಕಾರಿ ಶಾಲೆಗಳ ವಿಲೀನ, ಇಂಗ್ಲಿಷ್ ಮಾಧ್ಯಮದ ಆಕರ್ಷಣೆ; ನಿಜಕ್ಕೂ ಸರಕಾರ ಮಾಡಬೇಕಾಗಿದ್ದೇನು?
COVER STORY

ಸರಕಾರಿ ಶಾಲೆಗಳ ವಿಲೀನ, ಇಂಗ್ಲಿಷ್ ಮಾಧ್ಯಮದ ಆಕರ್ಷಣೆ; ನಿಜಕ್ಕೂ ಸರಕಾರ ಮಾಡಬೇಕಾಗಿದ್ದೇನು?

ಸರಕಾರಿ ಶಾಲೆಗಳ ವಿಲೀನ ಘೋಷಣೆಯ ಹಿಂದೆಯೇ ಕುಮಾರಸ್ವಾಮಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಹಾಗೂ ಎಲ್‌ಕೆಜಿ/ ಯುಕೆಜಿ ಆರಂಭದ ಮಾತಾಡಿದ್ದಾರೆ. ಆದರೆ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಇದಿಷ್ಟೇ ಸಾಕೇ?

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಜುಲೈ 5ರಂದು ಮೈತ್ರಿ ಸರಕಾರದ ಮೊದಲ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ರಾಜ್ಯದಲ್ಲಿನ 28,847 ಸರಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಹತ್ತಿರದ 8,530 ಶಾಲೆಗಳೊಂದಿಗೆ ವಿಲೀನ ಮಾಡುವುದಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿಯವರ ಈ ನಿರ್ಧಾರಕ್ಕೆ ಹಲವಾರು ಜನ ವಿರೋಧ ವ್ಯಕ್ತಪಡಿಸಿದ್ದಾರೆ. 

ಕಡಿಮೆ ದಾಖಲಾತಿಯನ್ನು ಹೊಂದಿರುವ ಶಾಲೆಗಳನ್ನು 1 ಕಿಲೋ ಮೀಟರ್‌ ದೂರದೊಳಗಿನ ಮತ್ತೊಂದು ಶಾಲೆಯ ಜತೆ ವಿಲೀನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಸದ್ಯ ನಡೆಯುತ್ತಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ತರಗತಿಗಳ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುವುದು, ಈ ಮೂಲಕ ಹೆಚ್ಚು ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಬಹುದು ಎಂದು ಬಜೆಟ್‌ನಲ್ಲಿ ಹೇಳಿದ ಕುಮಾರಸ್ವಾಮಿ, ಪ್ರಾಯೋಗಿಕವಾಗಿ 1,000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಶಿಕ್ಷಣಕ್ಕೆ ಈ ಘೋಷಣೆಗಳ ಜತೆಗೆ ಆಯ್ದ 4,100 ಅಂಗನವಾಡಿಗಳನ್ನು ಸರಕಾರಿ ಶಾಲೆಗಳ ಜಾಗದಲ್ಲಿಯೇ ಆರಂಭಿಸಿ ‘ಬಾಲಸ್ನೇಹಿ ಕೇಂದ್ರ’ ಎಂದು ಹೆಸರಿಡುವುದು, ಹಂತ ಹಂತವಾಗಿ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ಯುಕೆಜಿ ಪ್ರಾರಂಬಿಸುವುದು ಸೇರಿದಂತೆ ಕೆಲವು ಯೋಜನೆಗಳನ್ನು ಮಂಡಿಸಿದ್ದಾರೆ. ಆದರೆ ಸರಕಾರಿ ಶಾಲೆಗಳ ವಿಲೀನ ಎಂಬ ಯೋಜನೆ ಹಲವಾರು ಹೋರಾಟಗಾರರ, ಮಕ್ಕಳ ಹಕ್ಕುಗಳ ಕಾರ್ಯಕರ್ತರ, ಶಿಕ್ಷಣ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ.

ಕಡಿಮೆ ದಾಖಲಾತಿ ಹೊಂದಿರುವ ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಇಂದು ನಿನ್ನೆಯದೇನಲ್ಲ. 2011ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಈ ಕಾರ್ಯವನ್ನು ಆರಂಭಿಸಿತ್ತು. ಅಂದಿನಿಂದ ಪ್ರತಿವರ್ಷವೂ ಕೂಡ ನೂರಾರು ಸರಕಾರಿ ಶಾಲೆಗಳು ಮುಚ್ಚುತ್ತಲೇ ಬರುತ್ತಿವೆ. ಆದರೆ ಏಕಾಏಕಿ 28,000ದಷ್ಟು ಸರಕಾರಿ ಶಾಲೆಗಳನ್ನು ಮುಚ್ಚುವ ಧೈರ್ಯವನ್ನು ತೋರಿರುವುದು ಕುಮಾರಸ್ವಾಮಿಯಷ್ಟೇ. ಇಷ್ಟು ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸಿ, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಈಗಿರುವ ಪ್ರಶ್ನೆ ಶಾಲೆಗಳನ್ನು ವಿಲೀನಗೊಳಿಸಿದರೆ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬಲ್ಲದೇ ಎನ್ನುವುದು.

ಶಾಲೆಗಳ ವಿಲೀನದಿಂದೇನು ಲಾಭ?:

ವಾಸ್ತವದಲ್ಲಿ ರಾಜ್ಯದ ಸಹಸ್ರಾರು ಸರಕಾರಿ ಶಾಲೆಗಳಲ್ಲಿ 1, 2, 5 ಅಥವಾ 10 ಮಕ್ಕಳಷ್ಟೇ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಒಬ್ಬರೇ ಶಿಕ್ಷಕರಿರುವ 4,800 ಶಾಲೆಗಳಿವೆ. ಏಕೋಪಾಸಕ ಶಾಲೆಗಳು ಎಂದು ಕರೆಯುವ ಈ ಶಾಲೆಗೆ ಮತ್ತೊಬ್ಬ ಶಿಕ್ಷಕರು ವಾರಕ್ಕಿಷ್ಟು ದಿನ ಎಂದು ಬಂದು ಪಾಠ ಮಾಡಿ ಹೋಗುತ್ತಾರೆಯೇ ವಿನಃ ಆ ಶಾಲೆಯಲ್ಲಿಯೇ ಖಾಯಂ ಆಗಿ ಕಾರ್ಯ ನಿರ್ವಹಿಸುವುದಿಲ್ಲ. ಇಂತಹ ಶಾಲೆಗಳಲ್ಲಿ ಮಕ್ಕಳು ಕಲಿಯುತ್ತಿರುವುದಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರಿಯಾದ ಮೇಲ್ವಿಚಾರಣೆ ಇಲ್ಲದ ಈ ಶಾಲೆಗಳು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎನ್ನುವ ರೀತಿ ಕೆಲಸ ನಿರ್ವಹಿಸುತ್ತಿವೆ. ಮಕ್ಕಳ ಕಲಿಕೆಯ ದೃಷ್ಠಿಯಿಂದ ನೋಡುವುದಾದರೆ ಈ ಶಾಲೆಗಳು ಉಪಯೋಗಕ್ಕೆ ಬಾರದಂತವು.

ಇಂತಹ ಶಾಲೆಗಳನ್ನು ಮುಚ್ಚಿ, ಇಲ್ಲಿನ ಮಕ್ಕಳನ್ನೂ, ಶಿಕ್ಷಕರನ್ನೂ ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಿದರೆ ಮಕ್ಕಳ ಹಾಗೂ ಶಿಕ್ಷಕರ ಸಂಖ್ಯೆ ಹೆಚ್ಚಾಗಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬಹುದು ಎನ್ನುವ ವಾದವಿದೆ. ಆದರೆ ಸದ್ಯದ ಸರಕಾರಿ ಶಾಲೆಗಳ ಪರಿಸ್ಥಿತಿಯನ್ನು ಗಮನಿಸಿದರೆ ಉತ್ತಮ ಗುಣಮಟ್ಟದ ಶಿಕ್ಷಣ ಎನ್ನುವುದು ಮರೀಚಿಕೆ ಎಂಬುದು ಹಲವರ ಅಭಿಪ್ರಾಯ.

ಈ ನಿರ್ಧಾರದಿಂದ ಅನುಕೂಲಕ್ಕಿಂತ ಹೆಚ್ಚಾಗಿ ಹಲವು ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಪ್ರಸಂಗವೇ ಹೆಚ್ಚು. ವಿಲೀನದಿಂದಾಗಿ ಹಳ್ಳಿಯೊಳಗಿನ ಶಾಲೆಗಳು ಪಾಳು ಕಟ್ಟಡಗಳಾಗುತ್ತವೆ. ಕಿಲೋಮೀಟರ್‌ಗಟ್ಟಲೇ ದೂರ ಹೋಗಿ ಪಾಠ ಕಲಿಯಬೇಕೆಂಬ, ದೂರವಾದರೂ ಸರಿ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂಬ ಅಭಿಲಾಶೆ ಎಷ್ಟೋ ಬಡ ಪೋಷಕರಲ್ಲಿಲ್ಲ. ಇದಕ್ಕೆ ಕಾರಣ ಅವರವರ ಸಾಮಾಜಿಕ ಸ್ಥಿತಿಗತಿಗಳು. ಇಂತಹ ಸಂದರ್ಭಗಳಲ್ಲಿ ಮಾನಸಿಕವಾಗಿ ಶಾಲೆಯಿಂದ ದೂರವೇ ಇದ್ದ ಮಕ್ಕಳು ಸಂಪೂರ್ಣವಾಗಿ ಶಾಲೆಯಿಂದ ದೂರವಾಗಬಹುದು. ಎಷ್ಟೋ ಜನ ಹೆಣ್ಣುಮಕ್ಕಳನ್ನು ದೂರದ ಶಾಲೆಗೆ ಕಳುಹಿಸಲು ಅಂಜಿ ಪೋಷಕರು ಅವರ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಬಹುದು.

ಸರಕಾರಿ ಶಾಲೆಗಳಲ್ಲಿದ್ದ ಮಕ್ಕಳೆಲ್ಲಿಗೆ ಹೋದರು?:

ಮಕ್ಕಳೆಲ್ಲಾ ಖಾಸಗಿ ಶಾಲೆಗೆ ಸೇರಿಕೊಂಡರು ಎನ್ನುವುದು ಎಷ್ಟು ಸರಳವಾದ ಉತ್ತರವೋ ಅಷ್ಟೇ ನೈಜವಾದ ಉತ್ತರವೂ ಹೌದು. ಕುಟುಂಬ ಯೋಜನೆಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಕಾರಣ ಎನ್ನುವ ಮಾತುಗಳಿವೆ. ಆದರೆ ಈ ವಾದಕ್ಕೆ ಯಾವುದೇ ಹುರುಳಿಲ್ಲ.

ಇಂದು ರಸ್ತೆಯಿಲ್ಲದ ಹಳ್ಳಿಗಳಲ್ಲೆಲ್ಲಾ ಖಾಸಗಿ ಶಾಲೆಗಳು ತಲೆಯೆತ್ತಿವೆ. ಹಿಂದೊಮ್ಮೆ ಸರಕಾರಿ ಶಾಲೆಯಲ್ಲಿ ಓದಿದವರು ಇಂದು ತಮ್ಮ ಮಕ್ಕಳನ್ನು ತಮ್ಮದೇ ಹಳ್ಳಿಯ ತಾವೇ ಓದಿದ ಸರಕಾರಿ ಶಾಲೆಯ ಬದಲು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸರಕಾರಿ ಶಾಲೆಗಳಲ್ಲಿನ ಅವ್ಯವಸ್ಥೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ, ಸರಕಾರಿ ಶಾಲೆಯಲ್ಲಿ ಓದಬೇಕು ಎಂಬ ಆದರ್ಶ ಬಹುತೇಕ ತಂದೆ ತಾಯಿಗಳಲಿಲ್ಲ. ಅವರಿಗೆ ತಮ್ಮ ಮಕ್ಕಳು ಏನನ್ನಾದರೂ ಕಲಿಯಬೇಕು ಎಂದಿರುತ್ತದಷ್ಟೇ. ಮಕ್ಕಳು ಸರಕಾರಿ ಶಾಲೆಯಲ್ಲಿ ಓದಿ ಏನಾದರೂ ಹೆಚ್ಚಿನದಾಗಿ ಕಲಿಯುತ್ತಿದ್ದರೆ ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಬರುತ್ತಿರಲಿಲ್ಲ. ಸದ್ಯದ ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದರೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸರಕಾರಿ ಶಾಲೆಗಳು ಇರಬೇಕು. ಬಡವರ್ಗದ ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಯಬೇಕು ಎನ್ನುವುದು ನಮ್ಮೆಲ್ಲರ ಇಷ್ಟವೇ. ಆದರೆ ಸರಕಾರಿ ಶಾಲೆಗಳ ಪರಿಸ್ಥಿತಿ ಇಷ್ಟು ಶೋಚನೀಯವಾಗಿದ್ದಾಗ ಮಕ್ಕಳ ಕಳುಹಿಸಿ ಎಂದು ಪೋಷಕರಿಗೆ ಹೇಳುವುದಾದರೂ ಹೇಗೆ?
- ವಾಸುದೇವ ಶರ್ಮ, ಮಕ್ಕಳ ಹಕ್ಕುಗಳ ಕಾರ್ಯಕರ್ತ.

ಖಾಸಗಿ ಶಾಲೆಗಳು ಶೇ.25ರಷ್ಟು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು ಎಂಬ ಆರ್‌ಟಿಇ ಕಾನೂನು ಕೂಡ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎನ್ನುತ್ತಾರೆ ವಾಸುದೇವ ಶರ್ಮ.

“ಖಾಸಗಿ ಶಿಕ್ಷಣ ಸಂಸ್ಥೆಗಳು ಹಳ್ಳಿಗಳಿಗೆ ಹೋಗಿ ಪೋಷಕರನ್ನು ಪುಸಲಾಯಿಸಿ, ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿಕೊಂಡಿರುವುದನ್ನು ನಾನೇ ನೋಡಿದ್ದೇನೆ. ಶೇ.25ರಷ್ಟು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡದಿದ್ದರೆ ಖಾಸಗಿ ಶಾಲೆಗಳ ಮಾನ್ಯತೆ ರದ್ದಾಗುತ್ತದೆ. ಶುಲ್ಕ ಕಟ್ಟಬಲ್ಲವರ ಮಕ್ಕಳು ಸರಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಹೋದರೆ, ಶುಲ್ಕ ಕಟ್ಟಲಾಗದ ಬಡವರ್ಗದವರ ಮಕ್ಕಳು ಈ ಮೀಸಲಾತಿಯ ಕಾರಣದಿಂದ ಸರಕಾರಿ ಶಾಲೆಯನ್ನು ಬಿಟ್ಟು ಖಾಸಗಿ ಶಾಲೆಗಳನ್ನು ಸೇರಿಕೊಂಡಿದ್ದಾರೆ,” ಎನ್ನುತ್ತಾರೆ ವಾಸುದೇವ ಶರ್ಮ.

ಈಗ ಮುಚ್ಚಲು ಹೊರಟಿರುವ ಸರಕಾರಿ ಶಾಲೆಗಳಲ್ಲಿ ಹಿಂದೆ ಹೆಚ್ಚಿನ ಮಕ್ಕಳೇ ಇದ್ದರು. ಆದರೆ ಸರಿಯಾದ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷ ನೀಡಲು ಸರಕಾರದಿಂದ ಸಾಧ್ಯವಾಗದಿರುವುದು ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲು ಕಾರಣ ಎನ್ನುವ ವಾದ ಸಮಾನ ಶಿಕ್ಷಣಕ್ಕಾಗಿ ಜನಾಂದೋಲದ ಸಂಚಾಲಕರಾದ ಮುತ್ತುರಾಜು ಅವರದ್ದು.

ಮುಚ್ಚಲು ಹೊರಟಿರುವ 28,000 ಶಾಲೆಗಳ 10 ವರ್ಷದ ಅಂಕಿ ಅಂಶಗಳನ್ನು ತೆಗೆಯಲಿ. ಅಂದು ಅಷ್ಟೇ ಮಕ್ಕಳಿದ್ದು, ಇಂದಿಗೂ ಕೂಡ ಅಷ್ಟೇ ಮಕ್ಕಳಿದ್ದಾರೆ ಎಂದರೆ ಮುಚ್ಚಲು ಮುಂದಾಗಬಹುದು. ಆದರೆ ಬಹುತೇಕ ಶಾಲೆಗಳು 100, 200, 300 ಮಕ್ಕಳನ್ನು ಹೊಂದಿದ್ದವು. ಖಾಸಗೀ ಶಾಲೆಗಳ ಹೆಚ್ಚಳ ಮತ್ತು ಸರಕಾರಿ ಶಾಲೆಗಳಲ್ಲಿ ಸರಿಯಾದ ಸೌಲಭ್ಯಗಳು ಇರದಿರುವುದು ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.
- ಮುತ್ತುರಾಜು, ಸಂಚಾಲಕರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ.

ಸರಕಾರ ಮುಂದಿಟ್ಟಿರುವ ಪರ್ಯಾಯಗಳೇನು?:

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತೆರೆದು ಮಕ್ಕಳನ್ನು ಆರ್ಕಷಿಸಲಾಗುತ್ತದೆ ಎಂದಿರುವ ಕುಮಾರಸ್ವಾಮಿ, ಪ್ರಾಯೋಗಿಕವಾಗಿ 1,000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆ ಪ್ರಾರಂಭಿಸಲಾಗುವುದು ಎಂದಿದ್ದಾರೆ. ಈ ಯೋಜನೆ ಪರ್ಯಾಯ ಎಂದು ಭಾವಿಸುವ ಮೊದಲು ಈಗಾಗಲೇ ಅಂಗ್ಲ ಮಾಧ್ಯಮ ಹೊಂದಿರುವ ಸರಕಾರಿ ಶಾಲೆಗಳು ಈ ನಿಟ್ಟಿನಲ್ಲಿ ಎಷ್ಟು ಸಾಧನೆ ಮಾಡಿವೆ ಎಂದು ಯೋಚಿಸಬೇಕಿದೆ.

ಇಂಗ್ಲಿಷ್‌ ಮಾಧ್ಯಮ ಮತ್ತು ಇಂಗ್ಲಿಷ್‌ ಭೋಧನೆಗಳ ಮಧ್ಯೆ ವ್ಯತ್ಯಾಸವಿದೆ. ಇಂಗ್ಲಿಷ್‌ ಮೀಡಿಯಂ ಎಂದಾಗ ಗಣಿತ, ವಿಜ್ಞಾನ, ಸಮಾಜ ವಿಜ್ಞಾನದ ಪಠ್ಯ ಪುಸ್ತಕಗಳು ಇಂಗ್ಲಿಷ್‌ ಭಾಷೆಯಲ್ಲಿರುತ್ತವೆ. ಸರಕಾರಿ ಶಾಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಇಂಗ್ಲಿಷ್‌ ಬರುವ ಶಿಕ್ಷಕರು ಇಂಗ್ಲಿಷ್‌ ಭಾಷೆಯ ಕುರಿತು ಸ್ವಲ್ಪ ಮಟ್ಟಿಗೆ ಭೋದಿಸಬಲ್ಲರೇ ವಿನಃ ಭಾಷೇತರ ವಿಷಯಗಳನ್ನೂ ಇಂಗ್ಲಿಷ್‌ನಲ್ಲಿ ಕಲಿಸುವುದು ಕಷ್ಟಸಾಧ್ಯ.

1,000 ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ತೆರೆಯುತ್ತೇವೆ ಎಂದು ಘೋಷಿಸುವ ಬದಲು, ಮುಂದಿನ ವರ್ಷ ಇಂಗ್ಲಿಷ್‌ ಶಾಲೆಗಳನ್ನು ತೆರಯಲಿದ್ದು, ಈ ವರ್ಷ ಇಂಗ್ಲಿಷ್‌ ಮಾಧ್ಯಮದಲ್ಲಿ ಪಾಠ ಮಾಡಲು ಸಾಧ್ಯವಾಗುವಂತೆ ಶಿಕ್ಷಕರನ್ನು ತಯಾರು ಮಾಡುತ್ತೇವೆ ಎಂದಿದ್ದರೆ ಒಪ್ಪಿಕೊಳ್ಳಬಹುದಿತ್ತು. ಸರಕಾರಿ ಶಾಲೆಗಳಲ್ಲಿರುವ ಹಲವಾರು ಶಿಕ್ಷಕರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಬರುತ್ತದೆ. ಆದರೆ ಭೋದಿಸಲು ಬೇಕಾದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ನಾವು ಇಂಗ್ಲಿಷ್‌ ಮೀಡಿಯಂಗೆ ಮಕ್ಕಳನ್ನು ಸೇರಿಸುತ್ತೇವೆ ಎಂಬ ಆಸೆ ಹೊಂದಿರುವ ಪೋಷಕರ ಮನವೊಲಿಸುವ ಸಾಮರ್ಥ್ಯವನ್ನು ಮೊದಲು ಸರಕಾರಿ ಶಾಲೆಗಳು ಹೊಂದಬೇಕು
-ವಾಸುದೇವ ಶರ್ಮ, ಮಕ್ಕಳ ಹಕ್ಕುಗಳ ಕಾರ್ಯಕರ್ತರು.

ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು(ನರ್ಸರಿ/ ಎಲ್‌ಕೆಜಿ/ಯುಕೆಜಿ) ನೀಡಬೇಕು ಎಂಬ ವಾದ ಹಿಂದಿನಿಂದಲೇ ಇದೆ. ಕುಮಾರಸ್ವಾಮಿ ತಮ್ಮ ಬಜೆಟ್‌ ಮಂಡನೆ ವೇಳೆಯಲ್ಲಿ ಹಂತ ಹಂತವಾಗಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ. ಹಿಂದಿನ ಸರಕಾರಗಳೂ ಕೂಡ ಇದೇ ಮಾತುಗಳನ್ನು ಹೇಳಿದ್ದವು. ಆದರೆ ಫಲಿತಾಂಶ ಮಾತ್ರ ಶೂನ್ಯ ಎನ್ನುತ್ತಾರೆ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಸಂಚಾಲಕರಾದ ಮುತ್ತುರಾಜು.

1975ರಲ್ಲಿ 3 ದಶಕಗಳ ಹಿಂದೆ ಮಾತ್ರ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸರಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆದಿದ್ದ ಉದಾಹರಣೆ ಬಿಟ್ಟರೆ ಈವರೆಗೂ ಒಂದೂ ಶಾಲೆಯಲ್ಲಿಯೂ ಎಲ್‌ಕೆಜಿ ಯುಕೆಜಿ ಇಲ್ಲ. ಸರಕಾರಿ ಶಾಲೆಗಳಿಗೂ ಕೂಡ ವ್ಯಾನ್‌ ಸೌಲಭ್ಯವನ್ನು ಒದಗಿಸುವುದಾಗಿ ಸರಕಾರ ಹೇಳುತ್ತಲೇ ಬರುತ್ತಿದೆ. ಆದರೆ ಇದುವರೆಗೆ ಈ ಭರವಸೆ ಸಾಕಾರಗೊಂಡಿಲ್ಲ.
-ಮುತ್ತರಾಜು, ಸಂಚಾಲಕರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ.

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ಯುಕೆಜಿಯನ್ನು ಪ್ರಾರಂಭಿಸಿದರೆ ಖಂಡಿತವಾಗಿಯೂ ಮಕ್ಕಳು ಬಂದೇ ಬರುತ್ತಾರೆ. ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳನ್ನು ಸೇರಿದ ಮಕ್ಕಳು 1ನೇ ತರಗತಿಗೆ ಅಲ್ಲಿಯೇ ದಾಖಲಾಗುತ್ತಾರೆಯೇ ಹೊರತು ಸರಕಾರಿ ಶಾಲೆಗಳತ್ತ ಬರುವುದಿಲ್ಲ. ಹಾಗಾಗಿ ಸರಕಾರಿ ಶಾಲೆಯಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದರೆ, ಇಲ್ಲಿ ದಾಖಲಾದ ಮಕ್ಕಳು ಇಲ್ಲಿಯೇ ಮುಂದುವರೆಯುತ್ತಾರೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಆದರೆ ಸರಕಾರ ಈ ಕುರಿತು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಬದಲು ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಇದು ಖಂಡಿತವಾಗಿಯೂ ಸರಿಯಾದ ನಡೆಯಲ್ಲ ಎನ್ನುತ್ತಾರೆ ಅವರು.

ಸರಕಾರಿ ಶಾಲೆಗಳ ಸಬಲೀಕರಣ ಹೇಗೆ?:

ಸರಕಾರಿ ಅಂಕಿ ಅಂಶಗಳಂತೆಯೇ ಈಗಾಗಲೇ 28,582ರಷ್ಟು ಶಿಕ್ಷಕರ ಕೊರತೆಯಿದೆ. ಇಲ್ಲಿಯವರೆಗೂ ಸರಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದೆಡೆ ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಮತ್ತೊಂದೆಡೆ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಇವುಗಳ ಹೊರತಾಗಿ ಬೇಕಾದೆಡೆ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡುತ್ತಿದೆ. ಇದರಿಂದಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನುವ ವಾದಗಳಿವೆ.

ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ, ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಿಸಿದರೆ ಈಗಲೂ ಕೂಡ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ 1,000ಕ್ಕೂ ಹೆಚ್ಚು ಉದಾಹರಣೆಗಳಿವೆ. ಪೋಷಕರು, ಹಳೆ ವಿದ್ಯಾರ್ಥಿಗಳ ಸಂಘ, ಸಂಘಟನೆಗಳು ಸೇರಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡಿರುವದರಿಂದ ದಾಖಲೆ ಮಟ್ಟದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿನ ಶಾಲೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ 3 ವರ್ಷಗಳ ಹಿಂದೆ ಆ ಶಾಲೆಯಲ್ಲಿ 130 ಜನ ಮಕ್ಕಳಿದ್ದರು. ಈ ವರ್ಷ ಶಾಲೆಯಲ್ಲಿನ ಮಕ್ಕಳ ಸಂಖ್ಯೆ 713ನ್ನು ತಲುಪಿದೆ. ಸುಮಾರು 600ರಷ್ಟು ಮಕ್ಕಳು ಜಾಸ್ತಿಯಾಗಿದ್ದಾರೆ. ಈ ಶಾಲೆಯಲ್ಲಿ ಒಳ್ಳೆ ಇಂಗ್ಲಿಷ್‌ ಭೋಧನೆಯಿದೆ. ಎಲ್‌ಕೆಜಿ/ಯುಕೆಜಿ ಪ್ರಾರಂಭವಾಗಿದೆ. 8 ಜನ ಹೊಸ ಶಿಕ್ಷಕರ ನೇಮಕವಾಗಿದೆ. ಸರಕಾರಿ ಶಿಕ್ಷಕರು, ಉಪನ್ಯಾಸಕರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸಿದ್ದಾರೆ. ಹಾಗಾಗಿ ಶಾಲೆ ದಾಖಲೆ ಪ್ರಮಾಣದ ದಾಖಲಾತಿಯನ್ನು ನೋಡಿದೆ.
-ಮುತ್ತುರಾಜು, ಸಂಚಾಲಕರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ.

ಶಾಲೆಗಳನ್ನು ವಿಲೀನಗೊಳಿಸುವ ನಿರ್ಧಾರವನ್ನೇನೋ ಸರಕಾರ ಕೈಗೊಂಡಿದೆ. ಆದರೆ ದೂರದಿಂದ ಮಕ್ಕಳು ಹೇಗೆ ಶಾಲೆಗಳಿಗೆ ಬರುತ್ತಾರೆ ಎಂದು ಸರಕಾರ ಚಿಂತಿಸಿದಂತಿಲ್ಲ. ಸರಕಾರಿ ಶಾಲೆಗಳಲ್ಲೂ ಕೂಡ ವ್ಯಾನ್ ಸೌಲಭ್ಯವನ್ನು ಒದಗಿಸುವುದಾಗಿ ಹಿಂದೆಯೇ ಮಾತು ಕೇಳಿಬಂದಿದ್ದವು. ಆದರೆ ಈವರೆಗೂ ರಾಜ್ಯದ ಯಾವ ಸರಕಾರಿ ಶಾಲೆಗಳಲ್ಲೂ ಕೂಡ ಒಂದೇ ಒಂದು ವ್ಯಾನ್‌ ಇಲ್ಲ.

ಶಿಕ್ಷಕರಿಲ್ಲದೇ, ಸರಿಯಾದ ಕಟ್ಟಡಗಳಿಲ್ಲದೇ, ಶೌಚಾಲಯ, ಗ್ರಂಥಾಲಯ, ಬೆಂಚುಗಳು ಇಲ್ಲದೇ, ದೂಳು ಬೀಳುವ ಸೀಮೆಸುಣ್ಣದಿಂದ ಬಣ್ಣ ಮಾಸಿದ ಬೋರ್ಡಿನ ಮೇಲೆ ಬರೆದು ಪಾಠ ಮಾಡಿದರೆ ಇನ್ಯಾವ ಪೋಷಕರು ತಾನೇ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿಯಾರು? ಇವೆಲ್ಲಾ ಸೌಲಭ್ಯಗಳನ್ನು ಹೊಂದಿಸುವತ್ತ ಸರಕಾರ ಚಿಂತಿಸಬೇಕಿದೆ.

ಹೆಚ್ಚಿನ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ಸರಕಾರಿ ಶಾಲೆಗಳಿಗಿಂತ ತುಸು ಹೆಚ್ಚಿನ ಗುಣಮಟ್ಟದ ಶಿಕ್ಷಣ ದೊರೆಯಬಹುದೇನೋ ಎಂಬ ಕಾರಣದಿಂದ. ಆದರೆ ಎಲ್ಲಾ ಖಾಸಗಿ ಶಾಲೆಗಳೂ ಕೂಡ ಉತ್ತಮ ಗುಣಮಟ್ಟವನ್ನು ಹೊಂದಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಎಷ್ಟೋ ಖಾಸಗಿ ಶಾಲೆಗಳಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಬಡ ಮತ್ತು ಕೆಳ ಮಧ್ಯಮ ವರ್ಗದ ಜನರ ಆರ್ಥಿಕ ಸಾಮರ್ಥ್ಯಕ್ಕೆ ಒಗ್ಗುವ, 5,000- 10,000 ವಾರ್ಷಿಕ ಶುಲ್ಕವನ್ನು ಪಡೆಯುವ ನೂರಾರು ಶಾಲೆಗಳು ಬೆಂಗಳೂರಿನಲ್ಲೇ ಇವೆ.

ಕೇವಲ ಎಸ್‌ಎಸ್‌ಎಲ್‌ಸಿ, ಪಿಯುಸಿ ಶಿಕ್ಷಣವನ್ನು ಮುಗಿಸಿರುವವರನ್ನು ಕೇವಲ ನಾಲ್ಕು ಸಾಲು ಇಂಗ್ಲಿಷ್‌ ಬರುತ್ತದೆಂಬ ಕಾರಣದಿಂದ ಇಂಥ ಅದೆಷ್ಟೋ ಖಾಸಗಿ ಶಾಲೆಗಳಲ್ಲಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಉಸಿರುಗಟ್ಟಿಸುವ, ಬೆಳಕು ಬಾರದ, ಗಾಳಿಯಾಡದ ಕೋಣೆಗಳನ್ನು ಹೊಂದಿರುವ, ತನ್ನದೆಂದು ಕೆಲವು ಅಂಗುಲಗಳಷ್ಟು ಮೈದಾನವೂ ಕೂಡ ಇಲ್ಲದ ಖಾಸಗಿ ಶಾಲೆಗಳತ್ತ ಪೋಷಕರು ಮುಖಮಾಡಿರುವುದು ಸರಕಾರಿ ಶಾಲೆಗಳ ಅವ್ಯವಸ್ಥೆಯ ಕಾರಣದಿಂದಾಗಿ. ಈಗಿರುವ ಸರಕಾರಿ ಶಾಲೆಗಳನ್ನು ಮುಚ್ಚಿದರೆ ಇಂತಹ ನೂರಾರು ಕೆಲಸಕ್ಕೆ ಬಾರದ ಖಾಸಗಿ ಶಾಲೆಗಳು ತೆರೆಯಲೂ ಕೂಡ ಸರಕಾರವೇ ಅವಕಾಶ ನೀಡಿದಂತಾಗುತ್ತದೆ. ಅದರ ಬದಲು ಇರುವ ಸರಕಾರಿ ಶಾಲೆಗಳಲ್ಲಿ ಸೌಲಭ್ಯ ಹಾಗೂ ಗುಣಮಟ್ಟದ ಬೋಧನೆಯ ಬಗ್ಗೆ ಸರಕಾರ ಚಿಂತಿಸಬೇಕಿದೆ.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕೆಂದರೆ 28,847 ಶಾಲೆಗಳನ್ನು ಹತ್ತಿರದ 8,530 ಶಾಲೆಗಳೊಂದಿಗೆ ವಿಲೀನ ಮಾಡುವುದಲ್ಲ. ಇದರಿಂದ ಶಾಲೆಗಳ ಸಂಖ್ಯೆಗಳ ಕಡಿಮೆಯಾಗುತ್ತದೆಯೇ ಹೊರತು ಶಿಕ್ಷಣದ ಗುಣಮಟ್ಟ ವೃದ್ಧಿಯಾಗುವುದಿಲ್ಲ. ಶಿಕ್ಷಣದ ಸುಧಾರಣೆಗೆ ಬೇಕಿರುವುದು ಶಿಕ್ಷಣ ಕ್ಷೇತ್ರದ ಸರ್ವತೋಮುಖ ಬೆಳವಣಿಗೆ. ಈ ಅಂಶವನ್ನು ಸರಕಾರ ಈಗಲೇ ಮನಗಂಡರೆ ಮಾತ್ರ ಸರಕಾರಿ ಶಾಲೆಗಳು ಉಳಿಯಬಲ್ಲದು. ಇಲ್ಲವಾದರೆ ಬಡತನದಲ್ಲಿ ಬೆಂದು, ಬಿಸಿಯೂಟ, ಮೊಟ್ಟೆ, ಹಾಲು, ಸಮವಸ್ತ್ರ, ಪುಸ್ತಕ, ಸೈಕಲ್‌ ಇತ್ಯಾದಿಗಳ ಆಸೆಯಿಂದಾದರೂ ಕಲಿಕೆಗೆ ಮುಂದಾಗಿರುವ ಬಡ ಮಕ್ಕಳು ಮುಂದಿನ ದಿನಗಳಲ್ಲಿ ಶಾಲೆ ಹೋಗುವ ಆಸೆಯನ್ನೇ ಬಿಟ್ಟುಬಿಡಬಹುದು.