ಚುನಾವಣೆ ಸಮೀಪದಲ್ಲಿ ‘ಕನಿಷ್ಠ ಬೆಂಬಲ ಬೆಲೆ’ ಎಂಬ ರೈತನ ಮೂಗಿಗೆ ತುಪ್ಪ ಸವರುವ ತಂತ್ರ!
COVER STORY

ಚುನಾವಣೆ ಸಮೀಪದಲ್ಲಿ ‘ಕನಿಷ್ಠ ಬೆಂಬಲ ಬೆಲೆ’ ಎಂಬ ರೈತನ ಮೂಗಿಗೆ ತುಪ್ಪ ಸವರುವ ತಂತ್ರ!

ಚುನಾವಣೆ ಸಮೀಪಿಸುತ್ತಿದ್ದಂತೆ ರೈತರ ಓಲೈಕೆಗೆ ಮುಂದಾಗಿರುವ ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಎಂಬ ಘೋಷಣೆಯ ಮೂಲಕ ರೈತರನ್ನು ಮರುಳು ಮಾಡಲು ಮುಂದಾಗಿದೆ.

ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಕೇಂದ್ರ ಸರಕಾರಕ್ಕೆ ರೈತರು ನೆನಪಾಗಿದ್ದಾರೆ. 14 ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಎಂಬ ಘೋಷಣೆ ಮೂಲಕ ರೈತರ ಓಲೈಕೆಗೆ ಕೇಂದ್ರದ ಎನ್‌ಡಿಎ ಸರಕಾರ ಮುಂದಾಗಿದೆ. ಈ ಮೂಲಕ ಅನ್ನದಾತರನ್ನು ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳುವ ತಂತ್ರವನ್ನು ಕೇಂದ್ರ ಸರಕಾರ ಪ್ರಯೋಗಿಸಿದೆ.

ಕೇಂದ್ರ ಸರಕಾರ 14 ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೆಲ ದಿನಗಳ ಹಿಂಧೆ ಪ್ರಕಟಿಸಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಕರೆದಿರುವ ಕೇಂದ್ರ, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚಕ್ಕಿಂತ ಶೇಕಡ 50ಕ್ಕಿಂತ ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದಿದೆ. ಆದರೆ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ವಾಸ್ತವವೇ ಬೇರೆ ಇದೆ.

ಭತ್ತ, ಜೋಳ ಸೇರಿದಂತೆ ಹಲವು ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳ ಮಾಡಿರುವುದರಿಂದ ಎಂ.ಎಸ್‌. ಸ್ವಾಮಿನಾಥನ್‌ ವರದಿಯಲ್ಲಿ ಹೇಳಿದ್ದ ಉತ್ಪಾದನಾ ವೆಚ್ಚಕ್ಕಿಂತ ಶೇಕಡ 50ಕ್ಕಿಂತ ಹೆಚ್ಚಿನ ಬೆಂಬಲ ಬೆಲೆಯ ಬೇಡಿಕೆ ಸಾಕಾರವಾಗಿದೆ ಎಂದು ಹಲವರು ಕೇಂದ್ರ ಸರಕಾರವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಆದರೆ, ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆಯ ಲೆಕ್ಕಾಚಾರದಲ್ಲಿ ಕೃಷಿ ಭೂಮಿಯನ್ನು ಉತ್ಪಾದನಾ ವೆಚ್ಚಕ್ಕೆ ಸೇರಿಸಿಯೇ ಇಲ್ಲ.

ಕೃಷಿ ಉತ್ಪನ್ನದ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇಕಡ 50ರಷ್ಟು ಹೆಚ್ಚು ಬೆಂಬಲ ಬೆಲೆ ಇರಬೇಕು ಎಂದು ಸ್ವಾಮಿನಾಥನ್‌ ವರದಿ ಹೇಳುತ್ತದೆ. ಬೆಳೆಗಳ ಉತ್ಪಾದನಾ ವೆಚ್ಚದ ವಿಷಯಕ್ಕೆ ಬಂದರೆ ಸರಕಾರ ಈವರೆಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರುವುದು ಬೀಜ ಖರೀದಿ, ಗೊಬ್ಬರ, ಉಳುಮೆ ಉಪಕರಣಗಳ ವೆಚ್ಚ, ಕೃಷಿ ಕೂಲಿಕಾರರ ಅಂದಾಜು ವೆಚ್ಚಗಳನ್ನು ಮಾತ್ರ. ಆದರೆ, ಉತ್ಪಾದನಾ ವೆಚ್ಚ ಎಂದರೆ ಇಷ್ಟು ಮಾತ್ರವಲ್ಲ.

ಬೆಳೆ ಬೆಳೆಯಲು ಮೂಲವಾದ ಕೃಷಿ ಭೂಮಿ ಹಾಗೂ ರೈತನ ಮತ್ತು ಅವನ ಮನೆಯವರ ಶ್ರಮವನ್ನು ಉತ್ಪಾದನಾ ವೆಚ್ಚದಲ್ಲಿ ಸೇರಿಸಿಲ್ಲ. ಬೆಳೆ ಬೆಳೆಯಲು ರೈತ ಮಾಡುವ ಮೇಲು ಖರ್ಚನ್ನಷ್ಟೇ ಉತ್ಪಾದನಾ ವೆಚ್ಚ ಎಂದು ಸರಕಾರ ಪರಿಗಣಿಸುತ್ತಿರುವುದು ಹಾಗೂ ಇದರ ಆಧಾರದ ಮೇಲೆಯೇ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತಿರುವುದು ಅವೈಜ್ಞಾನಿಕ ಎಂಬುದು ರೈತ ಮುಖಂಡರ ಅಭಿಪ್ರಾಯ.

ಚುನಾವಣೆ ಸಮೀಪಿಸುತ್ತಿರುವುದರಿಂದ ದೇಶದ ದೊಡ್ಡ ಓಟ್ ಬ್ಯಾಂಕ್‌ ಆಗಿರುವ ಗ್ರಾಮೀಣ ಭಾಗದ ರೈತರ ಓಲೈಕೆಗೆ ಕೇಂದ್ರದ ಎನ್‌ಡಿಎ ಸರಕಾರ ಕನಿಷ್ಠ ಬೆಂಬಲ ಬೆಲೆ ಎಂಬ ರೈತರ ಮೂಗಿಗೆ ತುಪ್ಪ ಸವರುವ ತಂತ್ರ ಮಾಡುತ್ತಿದೆ ಎನ್ನುತ್ತಾರೆ ರೈತ ಮುಖಂಡರು.

“ಕೇಂದ್ರದ ಮೋದಿ ನೇತೃತ್ವದ ಸರಕಾರಕ್ಕೆ ನಾಲ್ಕು ವರ್ಷಗಳ ಕಾಲ ರೈತರ ನೆನಪಾಗಲಿಲ್ಲ. ಈಗ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಎಂಬ ನಾಟಕದ ಮೂಲಕ ರೈತ ಸಮುದಾಯವನ್ನು ಯಾಮಾರಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಸದ್ಯ ಸುಲಭವಾಗಿ ಯಾಮಾರಿಸಲು ಉಳಿದಿರುವವರು ರೈತರು ಮಾತ್ರ” ಎಂದು ಬೇಸರಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್.

“ಮೋದಿ ಅವರ ಕಣ್ಣಿಗೆ ನಾಲ್ಕು ವರ್ಷದಿಂದ ರೈತ ಕಾಣಲೇ ಇಲ್ಲ. ಈಗ ಚುನಾವಣೆ ಹತ್ತಿರದಲ್ಲಿರುವಾಗ ರೈತರು ನೆನಪಾಗಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಎಂದು ಕೇಂದ್ರ ಸರಕಾರ ತುತ್ತೂರಿ ಊದುತ್ತಿದೆ. ಆದರೆ, ಕೃಷಿ ಉತ್ಪಾದನಾ ವೆಚ್ಚಕ್ಕೂ ಅದು ಸಮನಾಗಿಲ್ಲ. ಸ್ವಾಮಿನಾಥನ್‌ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿ ಬಿಜೆಪಿ 2014ರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿತ್ತು. ಆದರೆ, ಆ ವರದಿ ಅರ್ಧದಷ್ಟೂ ಜಾರಿಯಾಗಿಲ್ಲ” ಎನ್ನುತ್ತಾರೆ ಶಾಂತಕುಮಾರ್‌.

“ನೈಜ ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕುವಲ್ಲೇ ಸರಕಾರ ವಿಫಲವಾಗಿದೆ. ಸರಕಾರ ಅಂದಾಜು ಮಾಡುತ್ತಿರುವ ಕೃಷಿ ಉತ್ಪಾದನಾ ವೆಚ್ಚ ಅವೈಜ್ಞಾನಿಕವಾದುದು. ಜಮೀನಿನಲ್ಲಿ ಉತ್ತು, ಬಿತ್ತನೆ ಮಾಡುವ ರೈತನ ಹಾಗೂ ರೈತ ಕುಟುಂಬದ ದುಡಿಮೆಯನ್ನೇ ಇಲ್ಲಿ ಮರೆಮಾಚಲಾಗಿದೆ. ಬೇರೆ ಜಾಗಕ್ಕೆ ಸಭೆಗೆಂದೋ ಅಥವಾ ಭೇಟಿಗೆಂದೋ ಹೋದಾಗ ಪ್ರಯಾಣ ಭತ್ಯೆ, ದಿನ ಭತ್ಯೆ ಪಡೆಯುವ ಸಚಿವರು, ಸರಕಾರಿ ಅಧಿಕಾರಿಗಳಿಗೆ ರೈತರ ವಿಚಾರದಲ್ಲಿ ಈ ಕನಿಷ್ಠ ಮಾನವೀಯತೆ ಬೇಡವೇ” ಎಂಬ ಪ್ರಶ್ನೆ ಅವರದ್ದು.

ಎಲ್ಲಾ ಸರಕಾರಗಳೂ ರೈತರನ್ನು ವಂಚಿಸುತ್ತಲೇ ಬರುತ್ತಿವೆ. ಎಲ್ಲಾ ಕಾಲಕ್ಕೂ, ಎಲ್ಲಾ ರಾಜಕೀಯ ಪಕ್ಷಗಳೂ ಈವರೆಗೆ ಮಾಡುತ್ತಾ ಬಂದಿರುವುದು ಇದನ್ನೇ. ಅದು ಕನಿಷ್ಠ ಬೆಂಬಲ ಬೆಲೆ ಇರಲಿ, ಸಾಲಮನ್ನಾ ವಿಚಾರವಿರಲಿ. ಟೋಪಿ ಹಾಕಿಸಿಕೊಳ್ಳುತ್ತಿರುವುದು ರೈತ ಮಾತ್ರ.
- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಎಂಎಸ್‌ಪಿ ಕಾಯ್ದೆ ಜಾರಿಗೆ ತರಲಿ:

ಸರಕಾರ ತನ್ನ ಪಾಡಿಗೆ ತಾವು ಕನಿಷ್ಠ ಬೆಂಬಲ ಬೆಲೆ ಎಂದು ಘೋಷಿಸುತ್ತದೆ. ಆದರೆ, ಬಹಳಷ್ಟು ಬಾರಿ ಅದಕ್ಕಿಂತ ಕಡಿಮೆ ಬೆಲೆಗೇ ಕೃಷಿ ಉತ್ಪನ್ನಗಳನ್ನು ರೈತರಿಂದ ಕೊಂಡುಕೊಳ್ಳಲಾಗುತ್ತಿದೆ. ಇದರ ಮೇಲೆ ನಿಯಂತ್ರಣ ತರಲು ಸರಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಬೇಕು ಎಂಬ ಒತ್ತಾಯವನ್ನೂ ರೈತ ಮುಖಂಡರು ಮಾಡುತ್ತಾರೆ.

“ಸರಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ನ್ಯಾಯಯುತವಾಗಿಲ್ಲ. ಆದರೂ ಕೆಲ ರೈತರು ತಮಗೇನೋ ಒಳ್ಳೆಯದಾಗುತ್ತದೆ ಎಂದು ಸಂತೋಷಗೊಂಡಿದ್ದಾರೆ. ಆದರೆ, ವಾಸ್ತವವಾಗಿ ಘೋಷಣೆಯಾಗುವ ಕನಿಷ್ಠ ಬೆಂಬಲ ಬೆಲೆಯಲ್ಲೂ ರೈತರ ಉತ್ಪನ್ನಗಳು ಖರೀದಿಯಾಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲೇ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ನಡೆಯುತ್ತಿದೆ. ಅಸಹಾಯಕ ರೈತ ಸಿಕ್ಕಷ್ಟು ಬೆಲೆಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುವ ಪರಿಸ್ಥಿತಿ ಇದೆ” ಎನ್ನುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌.

“ಸರಕಾರ ಘೋಷಿಸುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ನಡೆಯಬಾರದು ಎಂದು ಕಾಯ್ದೆ ತಂದರೆ ರೈತರಿಗೆ ಒಂದಿಷ್ಟು ಅನುಕೂಲವಾಗಬಹುದು. ಅದರ ಹೊರತಾಗಿ ಕೇವಲ ಕೇವಲ ಕನಿಷ್ಠ ಬೆಂಬಲ ಬೆಲೆ ಘೋಷಣೆಗಳಿಂದ ರೈತರಿಗೆ ಹೆಚ್ಚೇನೂ ಪ್ರಯೋಜನವಿಲ್ಲ” ಎಂಬುದು ಅವರ ಅಭಿಪ್ರಾಯ.

“ಚುನಾವಣೆ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಎಂಬ ರೈತರ ಕಣ್ಣೊರೆಸುವ ನಾಟಕ ನಡೆಯುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ ಚುನಾವಣಾ ತಂತ್ರಗಾರಿಕೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದರೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಬೆಳೆಗಳು ಖರೀದಿಯಾಗದಂತೆ ಕಟ್ಟು ನಿಟ್ಟಿನ ಕಾಯ್ದೆ ಜಾರಿಗೆ ತರಲಿ” ಎಂಬ ಒತ್ತಾಯ ಅವರದ್ದು.

ಒಂದು ಕಡೆಗೆ ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಎಂಬ ಹೆಸರಿನಲ್ಲಿ ರೈತರನ್ನು ಮರುಳು ಮಾಡಲು ಹೊರಟಿದ್ದರೆ, ಸಾಲಮನ್ನಾ ಹೆಸರಿನಲ್ಲಿ ರಾಜ್ಯ ಸರಕಾರ ಅನ್ನದಾತನನ್ನು ‘ಋಣಮುಕ್ತ’ಗೊಳಿಸಲು ಮುಂದಾಗಿದೆ. ಆದರೆ, ಈ ಘೋಷಣೆಗಳು, ಯೋಜನೆಗಳು ನಿಜಕ್ಕೂ ಯಾವ ಪ್ರಮಾಣದಲ್ಲಿ, ಅರ್ಹ ಫಲಾನುಭವಿ ರೈತರಿಗೆ ತಲುಪುತ್ತಿವೆ ಎಂಬ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಚಿಂತಿಸಿದಂತಿಲ್ಲ. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ಹಸಿರು ಕ್ರಾಂತಿಯಾಗಿ ನಾಲ್ಕು ದಶಕಗಳಾದರೂ ದೇಶದ ಅನ್ನದಾತನ ಪರಿಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ.