samachara
www.samachara.com
ಬೆಳೆ ಸಾಲಮನ್ನಾ, ಸಾರಾಯಿ ದುಬಾರಿ: ಮಧ್ಯಮ ವರ್ಗದ ಮೇಲೆ ಮಣ್ಣಿನ ಮೊಮ್ಮಗನ ‘ಸುಂಕಹೊರೆ’
COVER STORY

ಬೆಳೆ ಸಾಲಮನ್ನಾ, ಸಾರಾಯಿ ದುಬಾರಿ: ಮಧ್ಯಮ ವರ್ಗದ ಮೇಲೆ ಮಣ್ಣಿನ ಮೊಮ್ಮಗನ ‘ಸುಂಕಹೊರೆ’

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಎಂಬ ಜನಪ್ರಿಯ ಘೋಷಣೆಯ ಜತೆಗೆ ಮಧ್ಯಮ ವರ್ಗದ ಮೇಲೆ ಬಜೆಟ್‌ ಹೆಸರಿನಲ್ಲಿ ತೆರಿಗೆಯ ಹೊರೆ ಹೊರಿಸಿದ್ದಾರೆ.

ದಯಾನಂದ

ದಯಾನಂದ

ಪ್ರತಿ ಬಜೆಟ್‌ ಸಂದರ್ಭದಲ್ಲೂ ಜನ ಸಮೂಹದಲ್ಲಿ ವಿಚಿತ್ರವಾದ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಬಜೆಟ್‌ನಲ್ಲಿ ತಮಗಾಗಿ ಯಾವ ಹೊಸ ಯೋಜನೆಗಳು ಜಾರಿಯಾಗುತ್ತವೆ ಎಂದು ಆಯಾ ವಲಯಗಳ ಜನ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಎಲ್ಲಾ ಸಂದರ್ಭದಲ್ಲೂ ಬಜೆಟ್‌ ಜನಪ್ರಿಯವಾಗೇನೂ ಇರುವುದಿಲ್ಲ. ಆದರೆ, ಈ ಬಾರಿಯ ರಾಜ್ಯ ಬಜೆಟ್‌ ಇಡೀ ದೇಶದ ಗಮನ ಸೆಳೆದಿದ್ದು ರೈತರ ಸಾಲಮನ್ನಾ ವಿಚಾರಕ್ಕೆ.

ಹಾಗೆ ನೋಡಿದರೆ ಆಯಾ ರಾಜ್ಯಗಳು ಪ್ರತಿ ವರ್ಷ ಅವುಗಳದ್ದೇ ಆದ ವಾರ್ಷಿಕ ಬಜೆಟ್‌ ಮಂಡಿಸುತ್ತಿರುತ್ತವೆ. ರಾಜ್ಯ ಬಜೆಟ್‌ ಎಂಬುದು ಆಯಾ ರಾಜ್ಯಗಳಿಗೆ ಮುಖ್ಯವಷ್ಟೇ ಹೊರತು ಇಡೀ ದೇಶಕ್ಕೇನಲ್ಲ. ಆದರೆ, ಕರ್ನಾಟಕ ಮಾತ್ರ ಕಳೆದ ಬಾರಿ ಹಾಗೂ ಈ ಬಾರಿ ಬಜೆಟ್‌ನ ಕಾರಣಕ್ಕೆ ಸುದ್ದಿಯಾಗಿದ್ದು ಸುಳ್ಳಲ್ಲ.

ಫೆಬ್ರುವರಿ ತಿಂಗಳಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ ಹಾಗೂ ಜುಲೈ ತಿಂಗಳಲ್ಲಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ ಎರಡೂ ರೈತರ ಹೆಸರಿನಲ್ಲಿ, ಅದೂ ಸಾಲಮನ್ನಾ ಕಾರಣಕ್ಕಾಗಿಯೇ ತೀವ್ರ ಕುತೂಹಲ ಹುಟ್ಟಿಸಿದ್ದವು. ಈ ಬಾರಿಯ ಬಜೆಟ್‌ನಲ್ಲಂತೂ ಆರ್ಥಿಕತೆಯ ಬೇರೆ ಯಾವ ಆಯಾಮಗಳ ಕಡೆಗೂ ನೋಡದೆ ನೇರವಾಗಿ ಚರ್ಚೆಗೆ ಬಂದಿದ್ದು ರೈತರ ಸಾಲಮನ್ನಾ.

34,000 ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತದ, ಅದರಲ್ಲೂ ರೈತರ ಹೆಸರಿನಲ್ಲಿ ನಡೆಯುತ್ತಿರುವ ಸಾಲಮನ್ನಾ ನಿರ್ಧಾರ ಸಮ್ಮಿಶ್ರ ಸರಕಾರಕ್ಕೆ ಸುಲಭದ ಮಾತೇನಾಗಿರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಈವರೆಗೂ ರಾಜ್ಯದಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟಿದ್ದು ಸಾಲಮನ್ನಾ ವಿಚಾರವೇ.

ದೇಶದಲ್ಲಿ ರೈತರ ಸಾಲಮನ್ನಾ ವಿಚಾರ ಮುನ್ನೆಲೆಗೆ ಬಂದಿರುವುದು ಇದೇ ಮೊದಲೇನಲ್ಲ. ನೆರೆಯ ಮಹಾರಾಷ್ಟ್ರದಿಂದ ಹಿಡಿದು ಉತ್ತರಪ್ರದೇಶದವರೆಗೆ ಹಲವು ರಾಜ್ಯಗಳಲ್ಲಿ ರೈತರ ಸಾಲಮನ್ನಾ ವಿಚಾರ ಪ್ರಸ್ತಾಪಗೊಂಡಿದೆ. ಆದರೆ, ಲಭ್ಯ ಸಂಪನ್ಮೂಲ ಹಾಗೂ ನಿರ್ಧಾರದ ವಿಷಯಕ್ಕೆ ಬಂದಾಗ ಯಾವ ರಾಜ್ಯಗಳೂ ದೊಡ್ಡ ಮಟ್ಟದಲ್ಲಿ ರೈತರ ಸಾಲಮನ್ನಾ ಹೊರೆಯನ್ನು ಮೈಮೇಲೆ ಎಳೆದುಕೊಳ್ಳುವ ಮನಸ್ಸು ಮಾಡಿಲ್ಲ.

ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ತಮ್ಮ ಮೊದಲ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಘೋಷಣೆಯ ಮೂಲಕ ರೈತರ ಓಲೈಕೆಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ, ರೈತರ ಸಾಲಮನ್ನಾ ಎಂಬ ಹೊರೆಯನ್ನು ಸರಿದೂಗಲು ಅವರು ಮಧ್ಯಮ ವರ್ಗದ ಮೇಲೆ ಹೆಚ್ಚುವರಿ ಭಾರ ಹೇರಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳದ ಮೂಲಕ ಕುಮಾರಸ್ವಾಮಿ ರಾಜ್ಯದಲ್ಲಿ ಹಣದುಬ್ಬರಕ್ಕೆ ಚಾಲನೆ ನೀಡಿದ್ದಾರೆ. ಪೆಟ್ರೋಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ 1.14 ರೂಪಾಯಿ (30 % ರಿಂದ 32% ತೆರಿಗೆ ಹೆಚ್ಚಳ) ಹಾಗೂ ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ 1.12 ರೂಪಾಯಿ (19 % ರಿಂದ 21% ತೆರಿಗೆ ಹೆಚ್ಚಳ) ಹೆಚ್ಚಿಸಲಾಗಿದೆ. ವಿದ್ಯುತ್‌ ಬಳಕೆ ಮೇಲಿನ ತೆರಿಗೆಯನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ 20 ಪೈಸೆಗೆ ಏರಿಸಲಾಗಿದೆ. ಮದ್ಯದ ಮೇಲೆ ಅಬಕಾರಿ ಸುಂಕವನ್ನು ಶೇಕಡ 4ರಷ್ಟು ಹೆಚ್ಚಿಸಲಾಗಿದೆ.

ಐಷಾರಾಮಿ ಕಾರುಗಳು ಹಾಗೂ ಐಷಾರಾಮಿ ಉಡುಗೊರೆಗಳ ಮೇಲಿನ ಆಮದು ಸುಂಕ ಹೆಚ್ಚಿಸುವ ಅಥವಾ ಅಂತಹ ಮೇಲ್ವರ್ಗದ ಜೇಬಿಗೆ ಕತ್ತರಿ ಹಾಕುವ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಇದ್ದ ಮಾರ್ಗವನ್ನು ಕುಮಾರಸ್ವಾಮಿ ಕೈ ಬಿಟ್ಟಿದ್ದಾರೆ. ಬದಲಿಗೆ ಇಂಧನದ ಮೇಲೆ ತೆರಿಗೆ ಹೊರೆಯನ್ನು ಹೊರಿಸುವ ಮೂಲಕ ಸರಕಾರವನ್ನು ಸಾಕಲು ಮಧ್ಯಮ ವರ್ಗವನ್ನೇ ಆಶ್ರಯಿಸಿಕೊಳ್ಳುವ ಮುನ್ನೋಟ ಬಜೆಟ್‌ನಲ್ಲಿ ಕಾಣಿಸುತ್ತದೆ.

ರೈತರ ಸಾಲಮನ್ನಾ ಕಾರಣಕ್ಕಾಗಿ ತೀವ್ರ ಕುತೂಹಲ ಮೂಡಿಸಿದ್ದ ಈ ಬಾರಿಯ ರಾಜ್ಯ ಬಜೆಟ್‌ ಆ ವಿಚಾರದ ಮಟ್ಟಿಗೆ ನಿರೀಕ್ಷೆಯನ್ನು ತಣಿಸಿದೆ. ಆದರೆ, ಉಳಿದಂತೆ ಮಧ್ಯಮ ವರ್ಗದ ಮೇಲೆ ಹೊರೆ ಹೆಚ್ಚಾಗಿದೆ. ರೈತರ ಹಾಗೂ ತವರು ಜಿಲ್ಲೆಗಳ ‘ತಮ್ಮ ಜನರ’ ವಿಶ್ವಾಸ ಉಳಿಸಿಕೊಳ್ಳುವ ಕಸರತ್ತನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮೊದಲ ಬಜೆಟ್‌ನಲ್ಲೇ ಮಾಡಿದ್ದಾರೆ.

ಪ್ರತಿ ಕುಟುಂಬಗಳ ತಲಾ 2 ಲಕ್ಷದೊಳಗಿನ ಬೆಳೆ ಸಾಲಮನ್ನಾ ಮಾಡಿರುವುದಾಗಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದರಿಂದ 34,000 ಕೋಟಿ ರೂಪಾಯಿಯ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ಆಗಲಿದೆ. ಸಾಲ ಮರುಪಾವತಿಸಿರುವ ರೈತರಿಗೆ 25,000 ವಾಪಸ್‌ ಜಮೆ ಮಾಡಲಾಗುವುದು ಹಾಗೂ ಒಂದು ತಿಂಗಳೊಳಗೆ ಋಣಮುಕ್ತ ಪತ್ರವನ್ನು ಫಲಾನುಭವಿ ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಜೆಟ್‌ನಲ್ಲಿ ಶೇಕಡ 4ರಷ್ಟನ್ನು ಆರೋಗ್ಯ ಕ್ಷೇತ್ರಕ್ಕಾಗಿ ಮೀಸಲಿಡಲಾಗಿದೆ. ಹಲವು ದಶಕಗಳಿಂದ ಈ ಪ್ರಮಾಣ ಹೆಚ್ಚಾಗಿಲ್ಲ. ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆಈ ಬಜೆಟ್‌ ಒತ್ತು ಕೊಟ್ಟಿಲ್ಲ.
-ಕರ್ನಾಟಕ ಜನಾರೋಗ್ಯ ಚಳವಳಿ

ಹಾಲುಂಡ ತವರಿಗೆ ಕೈ ತುಂಬ ಕೊಡುಗೆ!:

ಕುಮಾರಸ್ವಾಮಿ ಬಜೆಟ್‌ನಲ್ಲಿ ಹಾಸನ, ಮಂಡ್ಯ, ರಾಮನಗರ, ತುಮಕೂರಿಗೆ ಹೆಚ್ಚಿನ ಘೋಷಣೆಗಳಿದ್ದವು. ಕೆರೆ ತುಂಬಿಸುವ ಯೋಜನೆಯಿಂದ ಹಿಡಿದು ಹೊರ ವರ್ತುಲ ರಸ್ತೆ ನಿರ್ಮಾಣದವರೆಗೆ ಹಾಸನಕ್ಕೆ ಬಜೆಟ್‌ನಲ್ಲಿ ಸಿಂಹ ಪಾಲು.

ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂಪಾಯಿ, ಹಾಸನ ವೈದ್ಯಕೀಯ ಕಾಲೇಜಿನಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆ, ಹಾಸನ ತಾಲ್ಲೂಕಿನ 160 ಕೆರೆಗಳಿಗೆ ನೀರು ತುಂಬಿಸಲು 70 ಕೋಟಿ ರೂಪಾಯಿಯ ಯೋಜನೆ, ಹಾಸನದ ಕೆಎಸ್‌ಆರ್‌ಟಿಸಿ ಕಾರ್ಯಾಗಾರ ಮೇಲ್ದರ್ಜೆಗೆ 10 ಕೋಟಿ ರೂಪಾಯಿ, ಹಾಸನ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿ, ಹಾಸನದಲ್ಲಿ ಬಾತ್‌ರೂಮ್‌ ಫ್ಲೋರ್‌ ಟೈಲ್ಸ್‌ ಮತ್ತು ಸ್ಯಾನಿಟರಿ ವಸ್ತುಗಳ ನಿರ್ಮಾಣ ಘಟಕ ಸ್ಥಾಪನೆ, ಹಾಸನ ಚನ್ನಪಟ್ಣ ಕೆರೆಯ ಅಭಿವೃದ್ಧಿಗೆ 36 ಕೋಟಿ ರೂಪಾಯಿ – ಹೀಗೆ ತವರು ಋಣ ತೀರಿಸಿಕೊಳ್ಳುವ ಯೋಜನೆಗಳು ಈ ಬಾರಿಯ ಬಜೆಟ್‌ನಲ್ಲಿದ್ದವು.

ಇದಿಷ್ಟೇ ಅಲ್ಲ ತಮ್ಮನ್ನು ಆಯ್ಕೆ ಮಾಡಿದ ರಾಮನಗರ ಜಿಲ್ಲೆಯ ಜನರ ಋಣ ತೀರಿಸಲೂ ಈ ಬಜೆಟ್‌ ಅನ್ನು ಕುಮಾರಸ್ವಾಮಿ ‘ಸದುಪಯೋಗ’ಪಡಿಸಿಕೊಂಡಿದ್ದಾರೆ. 40 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮನಗರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕನಕಪುರದಲ್ಲಿ ವೈದ್ಯಕೀಯ ಕಾಲೇಜು, ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಜಾಗ ಸಿಕ್ಕಿದೆ.

ಇನ್ನು ‘ತಮ್ಮ ಜನ’ ಹೆಚ್ಚಾಗಿರುವ ಮಂಡ್ಯ, ತುಮಕೂರಿಗೂ ಈ ಬಜೆಟ್‌ನಲ್ಲಿ ಹಲವು ಕೊಡುಗೆಗಳನ್ನು ಕೊಡಲಾಗಿದೆ. ಮಂಡ್ಯ ನಗರದ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ, ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಉನ್ನತೀಕರಣಕ್ಕೆ 30 ಕೋಟಿ ರೂಪಾಯಿ, ಮಂಡ್ಯ ಪ್ರವಾಸಿತಾಣಗಳ ಅಭಿವೃದ್ಧಿಗೆ 5 ಕೋಟಿ ರೂಪಾಯಿ, ಮಂಡ್ಯ ತಾಲ್ಲೂಕಿನ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಯೋಜನೆಗಳಿಗೆ 30 ಕೋಟಿ ರೂಪಾಯಿ ಮೀಸಲಿಡಲಾಗಿದೆ. ತುಮಕೂರಿಗೆ ಕ್ರೀಡೆ ಹಾಗೂ ಅಂಗಸಾಧನೆ ವಿಶ್ವವಿದ್ಯಾಲಯದ ಜತೆಗೆ ಕ್ರೀಡಾ ಸಲಕರಣೆಗಳನ್ನು ಉತ್ಪಾದಿಸುವ ಘಟಕ ನಿರ್ಮಾಣವನ್ನು ಘೋಷಿಸಲಾಗಿದೆ.

ಬ್ರಾಹ್ಮಣೋ ರಕ್ಷತಿ ರಕ್ಷಿತಃ!

ಈ ಬಾರಿಯ ಬಜೆಟ್‌ನಲ್ಲಿ ಸಮಾಜ ಕಲ್ಯಾಣಕ್ಕಿಂತ ಹೆಚ್ಚಾಗಿ ವಿಪ್ರ ಕಲ್ಯಾಣದ ಕಡೆಗೆ ಕುಮಾರಸ್ವಾಮಿ ಒಲವು ತೋರಿದ್ದಾರೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಅದಕ್ಕೆ 25 ಕೋಟಿ ರೂಪಾಯಿ ಮೀಸಲಿಡುವ ಹಾಗೂ ಶಂಕರಾಚಾರ್ಯ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವ ಘೋಷಣೆ ಮಾಡಿದ್ದಾರೆ. ಈ ಮೂಲಕ ತಾನು ‘ಸ್ವಜನ’ ಪಕ್ಷಪಾತಿಯಲ್ಲ ಎಂದು ಕುಮಾರಸ್ವಾಮಿ ಸಾಬೀತು ಮಾಡಲು ಮುಂದಾಗಿರುವಂತಿದೆ!

ಭಗೀರಥ ಪೀಠ, ಮಾದಾರ ಚೆನ್ನಯ್ಯ ಪೀಠ, ಸಿದ್ದರಾಮೇಶ್ವರ ಬೋವಿ ಗುರುಪೀಠ, ಕಾಗಿನೆಲೆ ಕನಕ ಗುರು ಪೀಠ ಹಾಗೂ ಗಂಗಾಮತಸ್ಥ / ಮೊಗವೀರ / ಬೆಸ್ತ / ಕೋಳಿ/ ಸವಿತಾ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಸೇರಿದ ಮಠ, ಪೀಠ ಮತ್ತು ಸಮಾಜಗಳಿಗೆ ಒಟ್ಟಾರೆ 25 ಕೋಟಿ ಮೀಸಲಿರಿಸಿರುವ ಕುಮಾರಸ್ವಾಮಿ ಶೃಂಗೇರಿ ಗುರುಋಣ ಹಾಗೂ ವಿಪ್ರಋಣ ತೀರಿಸಲು ಬ್ರಾಹ್ಮಣ ಕಲ್ಯಾಣಕ್ಕೇ 25 ಕೋಟಿ ಮೀಸಲಿರಿಸಿದ್ದಾರೆ.

ಒಟ್ಟು 2 ಲಕ್ಷದ 18 ಸಾವಿರ ಕೋಟಿ ರೂಪಾಯಿಯ ಬಜೆಟ್‌ನಲ್ಲಿ ಕುಮಾರಸ್ವಾಮಿ ಸಾಲಮನ್ನಾದಂತಹ ಜನಪ್ರಿಯ ಘೋಷಣೆ ಹಾಗೂ ತಮ್ಮ ತವರು ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದನ್ನು ಬಿಟ್ಟರೆ ಕರಾವಳಿ ಭಾಗವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಯೂ ಇಲ್ಲ.

ಇಸ್ರೇಲ್‌ ಕೃಷಿ, ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ/ ಯುಕೆಜಿ ಆರಂಭ, ನೀರಾವರಿ ಯೋಜನೆಗಳಿಗೆ ವೇಗ, ಬೆಂಗಳೂರು ಅಭಿವೃದ್ಧಿ ಹಾಗೂ ನಮ್ಮ ಮೆಟ್ರೊ ವಿಸ್ತರಣೆಯಂಥ ಘೋಷಣೆಗಳೂ ಈ ಬಜೆಟ್‌ನಲ್ಲಿವೆ. ಸುಮಾರು 5 ತಿಂಗಳ ಅಂತರದಲ್ಲಿ ಎರಡು ಬಜೆಟ್‌ ನೋಡಿರುವ ಕರ್ನಾಟಕದ ಜನಕ್ಕೆ ಈ ಬಾರಿಯ ‘ಮಣ್ಣಿನ ಮಗ’ನ ಬಜೆಟ್‌ ಎಂದಿಗಿಂತ ತುಸು ಹೆಚ್ಚೇ ಹೊರೆಯಾಗಲಿದೆ.