samachara
www.samachara.com
ಸರಕಾರಿ ಶಿಕ್ಷಣ: ಏನಿದು, ‘ಆಮ್‌ ಆದ್ಮಿ ಶಾಲೆ’ಗಳಲ್ಲಿ ಸಂತೋಷ ಹೆಚ್ಚಳಕ್ಕೆ ಹೊಸ ಪಠ್ಯಕ್ರಮ?
COVER STORY

ಸರಕಾರಿ ಶಿಕ್ಷಣ: ಏನಿದು, ‘ಆಮ್‌ ಆದ್ಮಿ ಶಾಲೆ’ಗಳಲ್ಲಿ ಸಂತೋಷ ಹೆಚ್ಚಳಕ್ಕೆ ಹೊಸ ಪಠ್ಯಕ್ರಮ?

ಟೀಚ್‌ ಫಾರ್‌ ಇಂಡಿಯಾ, ಡ್ರೀಮ್‌ ಎ ಡ್ರೀಮ್‌, ಮಕ್ಕಳ ಜಾಗೃತಿ ಇತ್ಯಾದಿ ಸಂಸ್ಥೆಗಳು ಈ ಕುರಿತು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ.

ರಾಷ್ಟ್ರ ರಾಜಧಾನಿ ದೆಹಲಿಯ ಸರಕಾರಿ ಶಿಕ್ಷಣ ಕ್ಷೇತ್ರದ ಪ್ರಯೋಗಗಳು ಮುಂದುವರಿದಿವೆ. ಇನ್ನು ಮುಂದೆ 'ಆಮ್‌ ಆದ್ಮಿ’ ಶಾಲೆಗಳಲ್ಲಿ ಸಂತೋಷವಾಗಿರುವುದು ಕೂಡ ಒಂದು ಪಠ್ಯಕ್ರಮವಾಗಲಿದೆ. ಜಡ್ಡುಗಟ್ಟಿರುವ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಪ್ರಯೋಗಗಳ ಅಗತ್ಯವಿರುವ ದಿನಗಳಲ್ಲಿ ಸರಕಾರವೊಂದು ಆದ್ಯತೆಯಾಗಿ ತೆಗೆದುಕೊಂಡಿದೆ. ಹಾಗಾಗಿಯೇ, ಒಂದಷ್ಟು ಹೊಸ ನಿರೀಕ್ಷೆಗಳನ್ನು ಇದು ಹುಟ್ಟುಹಾಕಿದೆ.

ಜುಲೈ 3ರ ಮಂಗಳವಾರ ‘ಹ್ಯಾಪಿನೆಸ್‌ ಕರಿಕ್ಯುಲಮ್‌’ ಹೆಸರಿನ ಹೊಸ ಪಠ್ಯಕ್ರಮ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಲೈಲಾಮಾ, “ಕೇವಲ ಭಾರತವಷ್ಟೇ ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ಪುರಾತನ ಜ್ಞಾನವನ್ನು ನೀಡುವ ಶಕ್ತಿಯನ್ನು ಹೊಂದಿದೆ. ಮಾನವನ ಭಾವನೆಗಳನ್ನು ಪೂರೈಸಲು ಇದು ಅತ್ಯಗತ್ಯ,” ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, “ನಮ್ಮ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡರುವ ಸುಧಾರಣೆಗಳ ಮೂರನೇ ಹಂತವಿದು. ಒಳ್ಳೆಯ ಮನುಷ್ಯರನ್ನು ಸೃಷ್ಟಿಸುವಲ್ಲಿ ಹ್ಯಾಪಿನೆಸ್ ಕರಿಕ್ಯುಲಮ್‌ ಮಹತ್ವಪೂರ್ಣ ಹೆಜ್ಜೆ,” ಎಂದಿದ್ದಾರೆ.

ಏನಿದು ‘ಹ್ಯಾಪಿನೆಸ್‌ ಕರಿಕ್ಯುಲಮ್‌’?:

ದೆಹಲಿಯ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ನಡೆಸಲಾಗುತ್ತಿರುವ ಹ್ಯಾಪಿನೆಸ್‌ ಕೋರ್ಸ್‌ಗಳಿಂದ ಪ್ರಭಾವಿತರಾದ ಸಿಸೋಡಿಯಾ, ದೆಹಲಿಯ ಮಕ್ಕಳಿಗೂ ಕೂಡ ಅಂತಹ ಶಿಕ್ಷಣವನ್ನು ನೀಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಜತೆಗೆ ಭಾರತದ ಕೆಲವು ಸ್ವಯಂ ಸೇವಾ ಸಂಸ್ಥೆಗಳಿಂದಲೂ ಕೂಡ ಈ ಕುರಿತು ಮಾಹಿತಿ ಕಲೆಹಾಕಲಾಗಿತ್ತು. ಜನವರಿಯಲ್ಲಿ ಈ ಕರಿಕ್ಯುಲಮ್‌ಅನ್ನು ಸಿದ್ಧಪಡಿಸುವ ಕಾರ್ಯ ಆರಂಭಗೊಂಡಿತ್ತು. 40 ಜನ ತಜ್ಞರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

ಈ ತಜ್ಞರ ಪರಿಶ್ರಮದಿಂದ ರೂಪುಗೊಂಡಿರುವ ಈ ಕರಿಕ್ಯುಲಮ್‌ ಸಂಪೂರ್ಣವಾಗಿ ಕಾರ್ಯ ಚಟುವಟಿಕೆಗಳ ಮೇಲೆ ಆಧಾರವಾಗಿದೆ. ಇಲ್ಲಿ ಸಾಂಪ್ರದಾಯಕ ಪರೀಕ್ಷೆಗಳಿರುವುದಿಲ್ಲ. ನಿಗದಿತ ಕಾಲಾವಧಿಗೊಮ್ಮೆ ಸಂತೋಷ ಸೂಚ್ಯಾಂಕದ ಮೂಲಕ ಮಕ್ಕಳ ಕಲಿಕೆಯ ಮಟ್ಟವನ್ನು ಅಳೆಯಲಾಗುತ್ತದೆ. ಮಕ್ಕಳನ್ನು ಸರ್ವ ಸಂಪನ್ನರಾಗಿಸುವ ನಿಟ್ಟಿನಲ್ಲಿ ಧ್ಯಾನ, ನೈತಿಕ ಮೌಲ್ಯಗಳು ಮತ್ತು ಮಾನಸಿಕ ವ್ಯಾಯಾಮಗಳನ್ನು ಕಲಿಸಲಾಗುತ್ತದೆ. ಒಟ್ಟಾರೆಯಾಗಿ ಇಲ್ಲಿ ದೊರೆಯುವ ಶಿಕ್ಷಣವು ಜ್ಞಾನ ಕೇಂದ್ರಿತವಾಗಿರದೇ, ವ್ಯಕ್ತಿ ಕೇಂದ್ರಿತ ಶಿಕ್ಷಣವಾಗಿರುತ್ತದೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಪಠ್ಯಕ್ರಮದ ಅನುಷ್ಠಾನ ಹೇಗೆ?:

ವಾರಕ್ಕೆ ಒಂದು ತರಗತಿಯನ್ನು ಹ್ಯಾಪಿನೆಸ್‌ ಕರಿಕ್ಯುಲಮ್‌ ಅಡಿಯಲ್ಲಿ ನಡೆಸಲಾಗುತ್ತದೆ. ಒಂದು ತರಗತಿ ಒಟ್ಟು 45 ನಿಮಿಷಗಳ ಕಾಲ ನಡೆಯಲಿದ್ದು, ತರಗತಿ ಆರಂಭವಾಗುವ ಮೊದಲು 5 ನಿಮಿಷಗಳ ಕಾಲ ಧ್ಯಾನ ಮಾಡಿಸಲಾಗುತ್ತದೆ. ಇಲ್ಲಿ ಪಾಠದ ಬದಲಾಗಿ ಚರ್ಚೆಗಳು ನಡೆಯುತ್ತವೆ. ಕತೆಗಳು, ಕಾರ್ಯ ಚಟುವಟಿಕೆಗಳು ಮತ್ತು ಉದಾಹರಣೆಗಳ ಮೂಲಕ ತರಗತಿಗಳು ನಡೆಯುತ್ತವೆ. ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸಲು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನಿರ್ಮಿಸಲಾಗುತ್ತದೆ. ‘ಹ್ಯಾಪಿನೆಸ್ ಕರಿಕ್ಯುಲಮ್‌' ಶಿಕ್ಷಕರ ಕೌಶಲ್ಯ ವೃದ್ಧಿಗೂ ಒತ್ತು ನೀಡುತ್ತದೆ. ದಿಲ್ಲಿಯಲ್ಲಿ ಯೋಜನೆ ಜಾರಿಗಾಗಿ 45 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ವಿದ್ಯಾರ್ಥಿಗಳು ತಮ್ಮ ವಾರದ ಒಂದು ಶಾಲಾ ಅವಧಿಯನ್ನು ಸಂತೋಷವನ್ನು ಅನುಭವಿಸಲೆಂದೇ ಮೀಸಲಾಗಿಡುತ್ತಾರೆ. ಮಕ್ಕಳು ಎಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಗುರುತಿಸಲೂ ಕೂಡ ಈ ತರಗತಿ ಸಹಕಾರಿಯಾಗಲಿದೆ. ನರ್ಸರಿಯಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಈ ತರಗತಿಗಳು ನಡೆಯಲಿವೆ. ದೆಹಲಿಯ ಸರಕಾರಿ ಶಾಲೆಗಳಿಗೆ ಈ ಕರಿಕ್ಯುಲಮ್‌ಅನ್ನು ಪರಿಚಯಿಸಲಿದ್ದು, 8 ಲಕ್ಷ ವಿದ್ಯಾರ್ಥಿಗಳು ಮತ್ತು 50,000 ಶಿಕ್ಷಕರು ಇದರಿಂದ ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

“ಸದ್ಯ ದೇಶದಲ್ಲಿನ ವಾತಾವರಣವನ್ನು ನೋಡಿದರೆ ಇಂತಹದ್ದೊಂದು ಶಿಕ್ಷಣ ಪದ್ಧತಿಯ ಅಗತ್ಯವಿದೆ,” ಎನ್ನುತ್ತಾರೆ ಮಕ್ಕಳ ಹಕ್ಕುಗಳ ಕಾರ್ಯಕರ್ತ ವಾಸುದೇವ ಶರ್ಮಾ. ದೇಶದಲ್ಲಿ ಇಂತಹ ಹೊಸ ಹೊಸ ಪ್ರಯೋಗಗಳ ಅಗತ್ಯವಿದೆ. ಎಲ್ಲದರಿಂದಲೂ ನಾವು ಕಲಿಯಬೇಕಿದೆ. ಆದರೆ, “ಕೇವಲ ವಾರಕ್ಕೆ ಒಂದು ಪೀರಿಯಡ್‌ ಮಾತ್ರ ಸಂತೋಷದ ಪಾಠ ಹೇಳಿಕೊಡುವುದು ಸೂಕ್ತವೆನಸುವುದಿಲ್ಲ,” ಎನ್ನುತ್ತಾರೆ ಶರ್ಮಾ.

ಹ್ಯಾಪಿನೆಸ್‌ ಕರಿಕ್ಯುಲಮ್‌ ಅತ್ಯವಶ್ಯಕವಾಗಿದೆ. ಆದರೆ ಅದನ್ನು ಒಂದು ಪೀರಿಯಡ್‌ ಎಂದು ಮಾಡಿಬಿಟ್ಟರೆ ಉಪಯೋಗವಿಲ್ಲ. ಮುಂಚೆಯೆಲ್ಲಾ ಮಾರಲ್ ಎಜುಕೇಷನ್‌ ಕ್ಲಾಸ್‌ ಎಂದಿತ್ತು. ಶಿಕ್ಷಕರು ಸತ್ಯವನ್ನೇ ನುಡಿಯಿರಿ, ಶಾಂತಿಯಿಂದಿರಿ, ಜಗಳ ಆಡಬೇಡಿ ಎಂದು ಹೇಳುತ್ತಿದ್ದರು. ಉಳಿದ ಅವಧಿಗಳಲ್ಲಿ ಅದೇ ಶಿಕ್ಷಕರೇ ಬಂದು ಹೊಡೆಯುತ್ತಿದ್ದರು. ಹ್ಯಾಪಿನೆಸ್‌ ಕ್ಲಾಸ್‌ ಕೂಡ ಹೀಗೆ ಆದರೆ ಉಪಯೋಗವಿಲ್ಲ. ಸಂತೊಷವೆನ್ನುವುದು ಕೇವಲ ಒಂದು ತರಗತಿಗೆ ಮಾತ್ರ ಸೀಮಿತವಾಗಬಾರದು. 
- ವಾಸುದೇವ ಶರ್ಮಾ, ಮಕ್ಕಳ ಹಕ್ಕುಗಳ ಕಾರ್ಯಕರ್ತರು.

ಭಾರತದಲ್ಲಿನ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಇದೇ ರೀತಿಯ ಕರಿಕ್ಯುಲಮ್‌ ಅಡಿಯಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತಿವೆ. ಟೀಚ್‌ ಫಾರ್‌ ಇಂಡಿಯಾ, ಡ್ರೀಮ್‌ ಎ ಡ್ರೀಮ್‌, ಮಕ್ಕಳ ಜಾಗೃತಿ ಇತ್ಯಾದಿ ಸಂಸ್ಥೆಗಳು ಈ ಕುರಿತು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ.

‘ಡ್ರೀಮ್‌ ಎ ಡ್ರೀಮ್‌’ ಸಂಸ್ಥೆಯ ಮೂಲಕ ಬೆಂಗಳೂರಿನ ಶಾಲೆಯೊಂದರಲ್ಲಿ ‘ಲೈಫ್‌ ಸ್ಕಿಲ್ಸ್ ಫೆಸಿಲಿಟೇಟರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್‌ ಹೇಳುವಂತೆ, “ಸಮಯವೆಷ್ಟು ಎಂದು ನೋಡುವುದಕ್ಕಿಂತ ಈ ಅವಧಿಯಲ್ಲಿ ಮಕ್ಕಳಿಗೆ ದೊರೆಯುವುದೇನು ಎನ್ನುವುದರ ಕುರಿತು ಚಿಂತಿಸಬೇಕಾಗುತ್ತದೆ. ಮಕ್ಕಳು ತಮ್ಮ ಮಾನಸಿಕ ಸ್ಥೀಮಿತತೆಯನ್ನು ಕಾಯ್ದುಕೊಳ್ಳಲು ಈ ತರಗತಿಗಳು ಸಹಾಯ ಮಾಡುತ್ತವೆ. ತಮ್ಮೊಳಗಿನ ಅನಿಸಿಕೆಗಳನ್ನು ಹಂಚಿಕೊಳ್ಳಲು ಮುಕ್ತವಾಗುತ್ತವೆ. ಎಲ್ಲರೆದುರು ನಿಂತು ಮಾತನಾಡಲು ಕಲಿಯುತ್ತಾರೆ.”

ಮಕ್ಕಳಿಗೂ ಕೂಡ ಅವರದ್ದೇ ಆದ ಮಾನಸಿಕ ಸಮಸ್ಯೆಗಳಿರುತ್ತವೆ. ಮನೆಯಲ್ಲಿನ ವಾತಾವರಣ ಅವರಿಗೆ ಸರಿಹೊಂದುತ್ತಿರುವುದಿಲ್ಲ. ಅಥವಾ ಸ್ನೇಹಿತರೊಟ್ಟಿಗೆ ಜಗಳವಾಡಿರುತ್ತಾರೆ. ಇಂತಹವೆಲ್ಲವೂ ಕೂಡ ಅವರ ಮನಸ್ಸಿಲ್ಲಿಯೇ ಉಳಿದುಬಿಡುತ್ತವೆ. ಸಂತೋಷದ ತರಗತಿಗಳು ಮಕ್ಕಳೊಳಗಿನ ಭಾರವನ್ನು ಕಡಿಮೆ ಮಾಡುತ್ತವೆ. ಮಕ್ಕಳಿಗೆ ತಮಗನ್ನಿಸಿದ್ದನ್ನು ಮಾತನಾಡಲು ಜಾಗ ಸಿಗುತ್ತದೆ. ಶಿಕ್ಷಕರೊಂದಿಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ಅವಕಾಶ ದೊರೆಯುತ್ತದೆ. ನಿಮಗೇನು ಮುಖ್ಯ ಎಂದು ಕೇಳುವವರೆ ಇಲ್ಲದಿರುವಾಗ, ತಾವಾಗಿಯೇ ಬಂದು ಮಾತನಾಡಿಸಿ, ಸ್ಪಂದಿಸುವ ಶಿಕ್ಷಕರು ಸಿಕ್ಕರೆ ಮಕ್ಕಳ ಮನಸಿಗ ದುಗುಡ ತಾನಾಗಿಯೇ ಕಡಿಮೆಯಾಗಿ ಸಂತೋಷ ಹೆಚ್ಚುತ್ತದೆ 
-ಚಂದ್ರಶೇಖರ್‌ ಎನ್‌, ಲೈಫ್‌ ಸ್ಕಿಲ್ಸ್ ಫೆಸಿಲಿಟೇಟರ್‌.

ಮುಂದುವರಿದು ಮಾತನಾಡಿದ ಚಂದ್ರಶೇಖರ್‌, “ಈ ತರಗತಿಗಳಿಗೆ ವಿಶೇಷವಾಗಿ ಪರಿಣಿತಿ ಹೊಂದಿದ ಫೆಸಿಲಿಟೇಟರ್‌ಗಳನ್ನೇ ನೀಡಬೇಕಾಗುತ್ತದೆ. ಪಠ್ಯದ ಪಾಠಗಳನ್ನು ಮಾಡುವ ಶಿಕ್ಷಕರಿಂದ ಈ ಕೆಲಸ ನಿರ್ವಹಿಸಲು ಸಾಧ್ಯವಾಗದು. ನಿತ್ಯ ತರಗತಿಗಳಲ್ಲಿ ಪಾಠ ಮಾಡುವ ಶಿಕ್ಷಕರೇ ಇಲ್ಲಿಯೂ ಕೂಡ ಬರುತ್ತಾರೆಂದರೆ ಮಕ್ಕಳು ಮುಕ್ತವಾಗಿರಲು ಸಾಧ್ಯವಿಲ್ಲ. ಇದರಷ್ಟೇ ಮುಖ್ಯವಾಗಿ ಹ್ಯಾಪಿನೆಸ್‌ ಕರಿಕ್ಯುಲಮ್‌ಗೆ ನೀಡಿರುವ ಅವಧಿ ಯಾವುದಕ್ಕೂ ಸಾಲುವುದಿಲ್ಲ. ವಾರಕ್ಕೊಂದು ತರಗತಿ ಎಂದರೆ ಕನಿಷ್ಟ ಪಕ್ಷ 1 ಗಂಟೆ 30 ನಿಮಿಷಗಳ ಅವಧಿಯಾದರೂ ಬೇಕು. ಇಲ್ಲವಾದರೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ,” ಎನ್ನುತ್ತಾರೆ.

ಭಾರತದಲ್ಲಿ ಹ್ಯಾಪಿನೆಸ್‌:

ಸದ್ಯ ಭಾರತೀಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಮಾನಸಿಕ ಖಿನ್ನತೆಯೂ ಒಂದು. ಜನರ ಮಾನಸಿಕ ಖಿನ್ನತೆಯನ್ನು ತೊಲಗಿಸಲು ಹಲವಾರು ಪ್ರಯತ್ನಗಳು ಭಾರತದಲ್ಲೂ ಕೂಡ ನಡೆದಿವೆ. 2016ರ ಜುಲೈನಲ್ಲಿ ಮಧ್ಯಪ್ರದೇಶದ ಸರಕಾರ ‘ಸಂತೋಷ ಸಚಿವಾಲಯ’ವನ್ನು ತೆರೆದಿತ್ತು. ಈ ಸಚಿವಾಲಯಕ್ಕೆ ವಾರ್ಷಿಕ 3.8 ಕೋಟಿ ಅನುದಾನವನ್ನು ನೀಡಿತ್ತು. 2017ರಲ್ಲಿ ಆಂಧ್ರ ಪ್ರದೇಶವೂ ಕೂಡ ಜನರ ಸಂತೋಷವನ್ನು ಹೆಚ್ಚಿಸುವ ಪ್ರಯತ್ನ ಮಾಡಿತ್ತು. ಆದರೆ ಈ ಪ್ರಯತ್ನಗಳು ಹಲವಾರು ಟೀಕೆಗೆ ಗುರಿಯಾಗಿದ್ದವು. ಸಂತೋಷ ಇಲಾಖೆ ಎನ್ನುವುದು ಜನರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಬಳಸುತ್ತಿರುವ ಹೊಸ ಸಾಧನವಷ್ಟೇ ಎಂದು ಅಲ್ಲಗೆಳೆಯಲಾಗಿತ್ತು. ನಂತರದ ದಿನಗಳಲ್ಲಿ ಸಂತೋಷವನ್ನು ಹೆಚ್ಚಿಸುವ ವಿಷಯ ತೆರೆಮರೆಗೆ ಸರಿದಿತ್ತು. ಟೀಕೆಗಳ ಹೊರತಾಗಿಯೂ ಕೂಡ ಈ ಸಚಿವಾಲಯಗಳು ಹೇಳಿಕೊಳ್ಳುವಂತ ಕೆಲಸಗಳನ್ನೇನೂ ಮಾಡಿಲ್ಲ.

2012ರಲ್ಲಿ ಬಂದಿದ್ದ ವರದಿಯೊಂದರ ಪ್ರಕಾರ ಅತಿ ಹೆಚ್ಚು ಯುವಜನರು ಆತ್ಮಹತ್ಯೆಗೆ ಒಳಗಾಗುವ ದೇಶಗಳ ಪೈಕಿ ಭಾರತ ಮೊದಲನೇ ಸ್ಥಾನದಲ್ಲಿತ್ತು. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಅತಿಹೆಚ್ಚು ಯುವಜನರ ಆತ್ಮಹತ್ಯೆಯನ್ನು ಕಂಡಿದ್ದವು. ಸದ್ಯ ಭಾರತದ 5.8 ಕೋಟಿಗೂ ಹೆಚ್ಚು ಜನ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇಡೀ ದೇಶದಲ್ಲಿ ಸರಕಾರ ನಡೆಸುತ್ತಿರುವ ಮಾನಸಿಕ ಆಸ್ಪತ್ರೆಗಳ ಸಂಖ್ಯೆ 43 ಮಾತ್ರ. ದೇಶದಲ್ಲಿ 1 ಲಕ್ಷ ಜನ ಮಾನಸಿಕ ರೋಗಿಗಳಿಗೆ 0.30ರಷ್ಟು ಮನೋವೈದ್ಯರು, 0.17ರಷ್ಟು ನರ್ಸ್‌ಗಳು ಮತ್ತು 0.05ರಷ್ಟು ಮನೋ ವಿಜ್ಞಾನಿಗಳಿದ್ದಾರೆ. ಜನರ ಮಾನಸಿಕತೆಯನ್ನು ಭಾರತ ಎಷ್ಟು ಸುಭದ್ರವಾಗಿಡುತ್ತಿದೆ ಎನ್ನುವುದನ್ನು ಈ ಅಂಕಿ ಆಂಶಗಳೇ ಹೇಳುತ್ತವೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.
ಚಿತ್ರ ಕೃಪೆ: The Economic Times

2017ರ ವಿಶ್ವ ಸಂತೋಷ ವರದಿಯ ಪ್ರಕಾರ, 155 ದೇಶಗಳ ಪೈಕಿ ಭಾರತ 122ನೇ ಸ್ಥಾನದಲ್ಲಿದೆ. 2016ರಲ್ಲಿ 118 ಸ್ಥಾನದಲ್ಲಿತ್ತು. ಅಂದರೆ ಭಾರತದಲ್ಲಿ ಸಂತೋಷವೆನ್ನುವುದು ಕಡಿಮೆಯಾಗುತ್ತಿದೆ. ಬಹುಪಾಲು ಭಾರತೀಯರು ಸಂತೋಷ ಕಾಣದೇ ಕೊರಗುತ್ತಿದ್ದಾರೆ. ಭಾರತದ ಅಗತ್ಯಕ್ಕಿಂತ ಶೇ.87ರಷ್ಟು ಮಾನಸಿಕ ಆರೋಗ್ಯ ತಜ್ಞರ ಕೊರತೆಯನ್ನು ಎದುರಿಸುತ್ತಿದೆ. ಜಿಡಿಪಿಯಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರಬಹುದು, ಆದರೆ ಸಂತೋಷವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ.

ಭಾರತದ ಗಡಿ ಹಂಚಿಕೊಂಡಿರುವ, ಕರ್ನಾಟಕದ ಅರ್ಧದಷ್ಟೂ ಕೂಡ ಇಲ್ಲದ ಭೂತಾನ್‌, ತನ್ನ ದೇಶದ ಜನರ ಸಂತೋಷದ ಕಡೆಗೆ ಕಾಳಜಿ ನೀಡಿದೆ. ಜಿಡಿಪಿಯ ಬದಲು ಒಟ್ಟು ರಾಷ್ಟ್ರೀಯ ಸಂತೋಷ(ಜಿಎನ್‌ಎಚ್‌) ಸೂಚ್ಯಾಂಕವನ್ನು ದೇಶದ ಅಭಿವೃದ್ಧಿಯನ್ನು ಅಳೆಯುವ ಅಳತೆಗೋಲನ್ನಾಗಿಸಿಕೊಂಡಿದೆ. ನಂತರದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್ ಕೂಡ ಭೂತಾನ್‌ನ ಹಾದಿಯನ್ನೇ ಹಿಡಿದಿದೆ. ವೆಜೆಜುವೆಲ್ಲಾ ದೇಶ ಸಾಮಾಜಿಕ ಸಂತೋಷ ಸಚಿವಾಲಯವನ್ನು ಸ್ಥಾಪಿಸಿದೆ. ಎಕ್ವೆಡಾರ್‌ ಕೂಡ ಇದೇ ಮಾರ್ಗದಲ್ಲಿ ಕ್ರಮಿಸುತ್ತಿದೆ. ಇತ್ತಿಚಿಗಷ್ಟೇ ಇಂಗ್ಲೆಂಡ್‌ ‘ಒಂಟಿತನ ಸಚಿವ’ರನ್ನು (Minister of Loneliness) ನೇಮಿಸಿಕೊಂಡಿದೆ. ಈ ದೇಶಗಳೊಟ್ಟಿಗೆ ಭಾರತವನ್ನು ಹೋಲಿಸಿದರೆ, ದೇಶದ ಜನರ ಸಂತೋಷ ಹೆಚ್ಚಿಸುವ ಸಲುವಾಗಿ ಭಾರತ ಕೈಗೊಂಡಿರುವ ಕ್ರಮಗಳು ನಗಣ್ಯ ಎನಿಸುತ್ತಿವೆ.

ದೊಡ್ಡವರಾದ ಮೇಲೆ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಿ, ಸಂತೋಷವನ್ನು ತುಂಬುವುದು ಕಷ್ಟಕರ ಕೆಲಸ. ಅದಕ್ಕಾಗಿ ಬಾಲ್ಯದಲ್ಲಿಯೇ ಮಕ್ಕಳನ್ನು ಸಂತೋಷವಾಗಿರಿಸುವುದು ಉತ್ತಮ ಮಾರ್ಗ ಎನಿಸುತ್ತದೆ. ಈ ನಿಟ್ಟಿನಲ್ಲಿ ದೆಹಲಿ ಸರಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹವೇ. ಆದರೆ ವಾರಕ್ಕೆ 45 ನಿಮಿಷವಷ್ಟೇ ಮಕ್ಕಳು ಸಂತೋಷದಿಂದಿದ್ದು, ಉಳಿದ ಅವಧಿಗಳಲ್ಲಿ ಹಿಂದಿನಂತೆಯೇ ಹೋಮ್‌ವರ್ಕ್‌, ಕಂಠಪಾಠ, ಭಯದಲ್ಲೇ ತರಗತಿಯಲ್ಲಿ ಹಾಜಾರಿರುವಂತಾದರೆ ಅದರಿಂದ ಯಾವುದೇ ಲಾಭ ದೊರೆಯುವುದಿಲ್ಲ. ಈ ಅವಧಿಯನ್ನು 1 ಗಂಟೆಯಷ್ಟಾದರೂ ಹೆಚ್ಚಿಸಬೇಕಿದೆ. ಅದೇ ವೇಳೆ ಕರ್ನಾಟಕದಂತಹ ರಾಜ್ಯಗಳಲ್ಲಿ ಸರಕಾರಿ ಶಾಲೆಗಳನ್ನು ಸುಧಾರಣೆಗೂ ಅಲೋಚನೆ ಮಾಡಬೇಕಿದೆ. ಆದರೆ ‘ಶಿಕ್ಷಣ ಲಾಬಿ’ ಸಂಪುಟದೊಳಗೇ ಇರುವಾಗ ಇದನ್ನು ನಿರೀಕ್ಷೆ ಮಾಡಲು ಹೇಗೆ ಸಾಧ್ಯವಿದೆ?