‘ದಯವಿಟ್ಟು ಗಮನಿಸಿ’: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ, ರಾಜಕೀಯ ಮುನ್ಸೂಚನೆ ಇದ್ದಂತೆ…!
COVER STORY

‘ದಯವಿಟ್ಟು ಗಮನಿಸಿ’: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ, ರಾಜಕೀಯ ಮುನ್ಸೂಚನೆ ಇದ್ದಂತೆ…!

ನಿಖರತೆ ಇಲ್ಲದ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಜನ ಸಾಮಾನ್ಯರಷ್ಟೇ ಅಲ್ಲ ಸರಕಾರದ ಇತರೆ ಇಲಾಖೆಗಳೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಅಂತಿಮವಾಗಿ ಕಷ್ಟಕ್ಕೆ ಸಿಲುಕುವುದು ಜನ ಸಾಮಾನ್ಯರೇ.

ಕರ್ನಾಟಕದಲ್ಲಿ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ನಾಲ್ಕು ದಿನ ಭಾರೀ ಮಳೆ ಸುರಿಯುತ್ತದೆ ಎಂಬುದು ಹವಾಮಾನ ಇಲಾಖೆಯ ಮುನ್ಸೂಚನೆ. ಆದರೆ, ಅದೆಷ್ಟೋ ಬಾರಿ ಭಾರೀ ಮಳೆಯ ಮುನ್ಸೂಚನೆ ಇದ್ದಾಗಲೂ ಮಳೆಯಾಗದಿರುವ ಉದಾಹರಣೆಗಳೂ ಇವೆ.

ಭಾರತದ ಹವಾಮಾನ ಇಲಾಖೆಯ ಬಗ್ಗೆ ಹಿಂದಿನಿಂದಲೂ ಇಂತಹ ದೂರುಗಳಿವೆ. ಯಾವ ವರ್ಷ ಹೆಚ್ಚು ಮಳೆ ಬರುತ್ತದೆ ಎಂದು ಇಲಾಖೆ ಮುನ್ಸೂಚನೆ ನೀಡುತ್ತದೆಯೋ ಆ ವರ್ಷ ನಿರೀಕ್ಷಿತ ಪ್ರಮಾಣದ ಮಳೆ ಬಾರದಿರುವ ಹಾಗೂ ಮಳೆಯ ಮುನ್ಸೂಚನೆ ಇಲ್ಲದೇ ಇರುವಾಗ ಭಾರೀ ಮಳೆ ಸುರಿದಿರುವುದೂ ಇದೆ.

ಹಾಗೆಂದು ಹವಾಮಾನ ಇಲಾಖೆಯ ಮಾಹಿತಿ ಪೂರ್ತಿ ಸುಳ್ಳಾಗಿರುತ್ತದೆ ಎಂದು ಹೇಳುವುದೂ ಸರಿಯಲ್ಲ. ಏಕೆಂದರೆ ಭಾರತೀಯ ಹವಾಮಾನ ಇಲಾಖೆ ಸದ್ಯದ ‘ಮಿತಿ’ಗಳ ನಡುವೆ ನೀಡುತ್ತಿರುವ ಶೇಕಡ 60ರಿಂದ 70ರಷ್ಟು ಮುನ್ಸೂಚನೆಗಳು ನಿಜವಾಗುತ್ತಿವೆ.

ಆದರೆ, ಅದೆಷ್ಟೋ ಸಂದರ್ಭಗಳಲ್ಲಿ ಹವಾಮಾನ ಇಲಾಖೆ ಶೇಕಡ 100ರಷ್ಟು ನಿಖರ ಮುನ್ಸೂಚನೆ ನೀಡಲು ಸೋಲುತ್ತಿದೆ. ಇದಕ್ಕೆ ಕಾರಣಗಳೂ ಕೂಡಾ ಕಡಿಮೆ ಏನಿಲ್ಲ. ಕರಾವಳಿ ಪ್ರದೇಶದಲ್ಲಿ ಸಮುದ್ರದ ಮೇಲಿಂದ ಬೀಸುವ ಬಿರುಗಾಳಿ, ಸೈಕ್ಲೋನ್‌ನ ಮುನ್ಸೂಚನೆಯನ್ನು ಶೇಕಡ 95ರಷ್ಟರ ಮಟ್ಟಿಗೆ ನಿಖರ ಮಾಹಿತಿ ನೀಡುವ ಹವಾಮಾನ ಇಲಾಖೆ ಇತರೆ ಭಾಗಗಳ ನಿಖರ ಮುನ್ಸೂಚನೆ ನೀಡುವುದರಲ್ಲಿ ಹಿಂದೆ ಉಳಿದಿದೆ.

ಭಾರತೀಯ ಹವಾಮಾನ ಇಲಾಖೆಗೆ ಪ್ರತಿ ವರ್ಷ ಕೋಟಿ ಕೋಟಿ ಹಣ ಬಿಡುಗಡೆಯಾಗುತ್ತದೆ. 2017-18ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಭೂ ವಿಜ್ಞಾನ ಸಚಿವಾಲಯಕ್ಕೆ ಮೀಸಲಿಟ್ಟಿರುವ ಹಣ 1,596.10 ಕೋಟಿ ರೂಪಾಯಿ. ಇದೇ ಸಚಿವಾಲಯದ ಕೆಳಗೆ ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಇಲಾಖೆಗೆ ‘ನೈಪುಣ್ಯ ವಿಜ್ಞಾನಿ’ ಗ್ರೇಡ್‌ ನೂರಾರು ಜನ ಸಿಬ್ಬಂದಿ ಇದ್ದಾರೆ. ಪ್ರತಿ ರಾಜ್ಯಗಳಲ್ಲೂ ಇಲಾಖೆಯ ಸ್ಥಳೀಯ ಕಚೇರಿಗಳಿವೆ. ಕೆಲವು ಜಿಲ್ಲೆಗಳಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಕೆಲವು ಜಿಲ್ಲೆಗಳಲ್ಲಿ ಬೇರೆ ಇಲಾಖೆಯ ಎರವಲು ಸಿಬ್ಬಂದಿ ಪ್ರತಿನಿತ್ಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಕಚೇರಿಗೆ ಮಾಹಿತಿ ರವಾನಿಸುತ್ತಾರೆ.

ಭಾರತದಲ್ಲಿ ಪ್ರತಿ 300- 350 ಕಿ.ಮೀ. ಅಂತರದಲ್ಲಿ ಪ್ರತಿದಿನ ಹವಾಮಾನ ಮಾಪನದ ಉಪಕರಣಗಳನ್ನು ಹೊತ್ತ, ಸುಮಾರು 700 ಗ್ರಾಂ ತೂಕದ ಮಾಪನ ಬಲೂನ್‌ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಈ ಬಲೂನ್‌ಗಳನ್ನು ಬಿಡಲಾಗುತ್ತದೆ. ಆಕಾಶಕ್ಕೆ ಹಾರುವ ಹೀಲಿಯಂ ಗ್ಯಾಸ್‌ ತುಂಬಿದ ಈ ಬಲೂನ್‌ಗಳು 20-30 ಕಿ.ಮೀ. ಮೇಲಕ್ಕೆ ಹೋಗುತ್ತಿದ್ದಂತೆ ಸ್ಫೋಟಗೊಳ್ಳುತ್ತವೆ. ಅದರಲ್ಲಿರುವ ಉಪಕರಣಗಳೂ ಎಲ್ಲೋ ಹೋಗಿ ಬೀಳುತ್ತವೆ.

ಭಾರತದಲ್ಲಿ ಸುಮಾರು 40 ಕೇಂದ್ರಗಳಿಂದ ಇಂತಹ ಬಲೂನ್‌ಗಳನ್ನು ದಿನಕ್ಕೆರಡು ಬಾರಿ ಹಾರಿ ಬಿಡಲಾಗುತ್ತದೆ. ಈ ಪ್ರತಿ ಬಲೂನ್‌ ತಗುಲುವ ವೆಚ್ಚ ಸುಮಾರು 5 ಸಾವಿರದಿಂದ 7 ಸಾವಿರ ರೂಪಾಯಿ. ಅಂದರೆ ವರ್ಷದ 365 ದಿನ 40 ಕೇಂದ್ರಗಳಿಂದ 2 ಬಾರಿ ಹಾರುವ ಈ ಬಲೂನ್‌ಗಳ ವಾರ್ಷಿಕ ಖರ್ಚೇ ಸುಮಾರು 40 ಕೋಟಿ ರೂಪಾಯಿ ದಾಟುತ್ತದೆ. ಇನ್ನು ಇಲಾಖೆಯ ಸಿಬ್ಬಂದಿ ನಿರ್ವಹಣೆ, ವೇತನ, ಕಚೇರಿ, ಪ್ರಯೋಗಾಲಯ ನಿರ್ವಹಣೆ, ಮಾಪನಗಳ ಖರೀದಿ, ಸಿಬ್ಬಂದಿ ತರಬೇತಿ – ಹೀಗೆ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಹವಾಮಾನ ಇಲಾಖೆಗಾಗಿ ವ್ಯಯಿಸಲಾಗುತ್ತಿದೆ. ಆದರೂ ನಿಖರವಾದ ಮುನ್ಸೂಚನೆ ನೀಡಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕಿನಲ್ಲಿ ಯಾವ ರೀತಿಯ ಹವಾಮಾನ ಇದೆ ಎಂಬುದು ಗೊತ್ತಾಗಬೇಕಿದ್ದರೆ ಹೆಚ್ಚು ಅಂತರವಿಲ್ಲದಂತೆ ಮಾಪನ ಕೇಂದ್ರಗಳನ್ನು ಸ್ಥಾಪಿಸಬೇಕು. ನಿಖರವಾಗಿ ಮುನ್ಸೂಚನೆ ಕೊಡುವ ಖಾಸಗಿ ಏಜೆನ್ಸಿಗಳು ಸಾಕಷ್ಟಿವೆ. ಆದರೆ, ಹವಾಮಾನ ಇಲಾಖೆ ಶೇಕಡ 100ರಷ್ಟು ನಿಖರ ಮುನ್ಸೂಚನೆ ನೀಡಲು ಇನ್ನೂ 10- 15 ವರ್ಷ ಹೋಗಬೇಕು.
-ನಾಗೇಶ್‌ ಹೆಗಡೆ, ಹಿರಿಯ ವಿಜ್ಞಾನ ಲೇಖಕ

ನಿಜಕ್ಕೂ ಸಮಸ್ಯೆ ಇರುವುದೆಲ್ಲಿ?

ಹವಾಮಾನ ಇಲಾಖೆ ನೀಡುವ ಬಹಳಷ್ಟು ಮುನ್ಸೂಚನೆಗಳು ವಿಫಲವಾಗಲು ಕಾರಣಗಳನ್ನು ಹುಡುಕಿ ಹೊರಟರೆ ನಮ್ಮ ವ್ಯವಸ್ಥೆಯೊಳಗಿನ ಅವ್ಯವಸ್ಥೆಗಳು ಇಲಾಖೆಯೊಳಗೂ ಕಾಣುತ್ತವೆ. ಅಲ್ಲದೆ ನೂರಾರು ಕೋಟಿ ಇಲಾಖೆಗೆ ಬರುತ್ತಿದ್ದರೂ ಇನ್ನೂ ಹಲವು ಕೊರತೆಗಳು ಇಲಾಖೆಯಲ್ಲಿವೆ.

ಕೇಂದ್ರ ಲೋಕಸೇವಾ ಆಯೋಗದಿಂದ ಹವಾಮಾನ ಇಲಾಖೆಗೆ ನೇಮಕವಾಗುವವರಿಗೆ ಆರಂಭದ ಹಂತದಲ್ಲೇ ಹವಾಮಾನ ಕುರಿತಾದ ಸಂಪೂರ್ಣ ತರಬೇತಿ ನೀಡಲಾಗಿರುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನ ಸಿಬ್ಬಂದಿಯ ಕೆಲಸವನ್ನು ಸಾಕಷ್ಟು ಕಡಿಮೆ ಮಾಡಿದೆ. ಆದರೆ, ತಳಮಟ್ಟದ ವ್ಯವಸ್ಥೆ ಸೂಕ್ತವಾಗಿಲ್ಲದೇ ಇರುವುದು ಸಮಸ್ಯೆಯ ಮೂಲ.

ಕನಿಷ್ಠ ಪ್ರತಿ 50 ಕಿ.ಮೀ. ದೂರಕ್ಕೆ ಒಂದು ಹವಾಮಾನ ಮಾಪನ ಹಾಗೂ ಒಬ್ಬ ನುರಿತ ಸಿಬ್ಬಂದಿ ಇದ್ದರೆ ಹಾಗೂ ಪ್ರತಿ ನೂರು ಕಿ.ಮೀ.ಗೆ ಒಂದೊಂದು ಮಾಪನ ಬಲೂನ್‌ ಹಾರಿಸಿದರೆ ಆಯಾ ಭಾಗದ ಗಾಳಿಯ ಒತ್ತಡ, ವಾತಾವರಣದ ತೇವಾಂಶದ ಮಾಹಿತಿ ಲಭ್ಯವಾಗುತ್ತದೆ. ಇಷ್ಟನ್ನು ಇಲಾಖೆ ಒದಗಿಸಿದರೆ ಬಹುತೇಕ ನಿಖರವಾಗಿ ಹವಾಮಾನ ಮುನ್ಸೂಚನೆ ನೀಡಲು ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು.

‘ದಯವಿಟ್ಟು ಗಮನಿಸಿ’: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ, ರಾಜಕೀಯ ಮುನ್ಸೂಚನೆ ಇದ್ದಂತೆ…!

“ಹವಾಮಾನ ಇಲಾಖೆಗೆ ನೇಮಕವಾಗುವವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಆರಂಭದಿಂದಲೇ ಹವಾಮಾನ ಬದಲಾವಣೆಯ ಸಂಭವನೀಯತೆಗಳ ಪರಿಚಯ ಅಧಿಕಾರಿಗಳಿಗೆ ಇರುತ್ತದೆ. ಆದರೆ, ‘ವೆದರ್‌ ಮನ್‌’ ಆಗಲು ಕಲಿಕೆ, ತರಬೇತಿಯ ಜತೆಗೆ ಈ ಕ್ಷೇತ್ರದ ಬಗ್ಗೆ ಅಪಾರವಾದ ಆಸಕ್ತಿಯೂ ಇರಬೇಕು. ಅದರ ಕೊರತೆ ಇದ್ದಾಗ ಮಾತ್ರ ನಿಖರ ಮುನ್ಸೂಚನೆ ನೀಡಲು ಸಾಧ್ಯವಾಗುವುದಿಲ್ಲ” ಎನ್ನುತ್ತಾರೆ ಬೆಂಗಳೂರು ಹವಾಮಾನ ಕೇಂದ್ರದ ನಿವೃತ್ತ ನಿರ್ದೇಶಕ ಬಿ. ಪುಟ್ಟಣ್ಣ.

“ಸ್ವಯಂಚಾಲಿತ ಮಾಪನಗಳಿಂದ ಕ್ರೋಡೀಕರಿಸಿದ ಮಾಹಿತಿ, ತಳಮಟ್ಟದ ಸಿಬ್ಬಂದಿ ನೀಡಿರುವ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಮುನ್ಸೂಚನೆ ನೀಡುತ್ತಾರೆ. ಭಾರೀ ಮಳೆ ಮುನ್ಸೂಚನೆ ನೀಡಿದರೆ ಪೂರ್ತಿಯಾಗಿ ಮಳೆ ಬಾರದಿರುವ ಸಾಧ್ಯತೆ ಕಡಿಮೆ. ಆದರೆ, ಅಧಿಕಾರಿ ಹೇಳಿದ ಪ್ರಮಾಣದಲ್ಲಿ ಮಳೆಯಾಗದೆ ಹೋಗಬಹುದಷ್ಟೇ. ಆದರೆ, ಇಂತಹ ಸಂದರ್ಭ ಕೂಡಾ ಮುನ್ಸೂಚನೆಯ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಬಹುದು” ಎಂಬುದು ಅವರ ಅಭಿಪ್ರಾಯ.

ಹವಾಮಾನ ಇಲಾಖೆಗೆ ಕೋಟಿ ಕೋಟಿ ರೂಪಾಯಿ ಬರುತ್ತಿದ್ದರೂ ತಳಮಟ್ಟದಲ್ಲಿ ಸಿಬ್ಬಂದಿ ಕೊರತೆ, ಅಧಿಕಾರಿಗಳ ಅನುಭವದ ಕೊರತೆ ಹಾಗೂ ಮಾಪನ ಪ್ರದೇಶಗಳ ಅಂತರ ಹೆಚ್ಚಾಗಿರುವುದು ಕೆಲವೊಮ್ಮೆ ಮುನ್ಸೂಚನೆಯ ನಿಖರತೆ ತಪ್ಪುವಂತೆ ಮಾಡುತ್ತಿದೆ.
- ಬಿ. ಪುಟ್ಟಣ್ಣ, ಹವಾಮಾನ ತಜ್ಞ

“ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ – ಹೀಗೆ ರಾಜ್ಯದ ಭೂ ಪ್ರದೇಶದ ವಿಂಗಡಣೆಯೇ ವಿಸ್ತಾರವಾಗಿದೆ. ಆದರೆ, ಭೂ ಭಾಗ ಯಾವಾಗಲೂ ಸಮತಟ್ಟಾಗಿರುವುದಿಲ್ಲ. ಕೆಲವು ಪ್ರದೇಶ ಸಮುದ್ರಮಟ್ಟದಿಂದ ಸಾಕಷ್ಟು ಎತ್ತರದಲ್ಲಿದ್ದರೆ ಕೆಲ ಪ್ರದೇಶ ತಗ್ಗಿನಲ್ಲಿರುತ್ತದೆ. ಕೊಡಗಿಗೆ ಭಾರೀ ಮಳೆಯಾದರೂ ಪಕ್ಕದ ಮೈಸೂರಿಗೆ ತುಂತುರು ಮಳೆಯಷ್ಟೇ ಆಗಬಹುದು. ಇದನ್ನು ಕರಾರುವಕ್ಕಾಗಿ ಹೇಳುವ ವ್ಯವಸ್ಥೆ ಇನ್ನೂ ನಮ್ಮಲ್ಲಿಲ್ಲ” ಎನ್ನುತ್ತಾರೆ ಅವರು.

“ತಳಮಟ್ಟದ ಸಿಬ್ಬಂದಿಯ ಕೊರತೆ, ಮಾಪನ ಬಲೂನ್‌ಗಳನ್ನು ಹಾರಿಸುವ ಅಂತರದ ಹೆಚ್ಚಳ ಹಾಗೂ ವೆದರ್‌ ಮನ್‌ಗಳ ಅನುಭವದ ಕೊರತೆ ಸರಿಯಾದ ಮುನ್ಸೂಚನೆ ದೊರೆಯದಿರುವಂತೆ ಮಾಡಬಹುದು. ಹಲವು ಸಂದರ್ಭಗಳಲ್ಲಿ ಉಪಗ್ರಹಗಳು ನೀಡುವ ಮಾಹಿತಿ, ಸ್ವಯಂಚಾಲಿತ ಯಂತ್ರಗಳು ಹಾಗೂ ಬಲೂನ್‌ನಿಂದ ಲಭ್ಯವಾದ ಮಾಹಿತಿಯನ್ನು ತಾಳೆ ನೋಡಬೇಕಾಗುತ್ತದೆ. ಯಾವ ಪ್ರಮಾಣದ ಗಾಳಿಯ ಒತ್ತಡದಲ್ಲಿ ಯಾವ ಪ್ರಮಾಣದ ಮೋಡಗಳು ಹಾದು ಹೋಗುತ್ತಿವೆ. ಯಾವ ಪ್ರದೇಶದಲ್ಲಿ ಈ ಮೋಡಗಳು ಮಳೆ ಸುರಿಸಲಿವೆ ಎಂಬುದನ್ನು ವೆದರ್‌ ಮನ್‌ಗಳು ಗುರುತಿಸಬೇಕಾಗುತ್ತದೆ. ಇದಕ್ಕೆ ನೈಪುಣ್ಯವೂ ಅಗತ್ಯ” ಎಂಬುದು ಅವರ ಮಾತು.

“ಮಳೆ ಸುರಿಸುವ ಮೋಡಗಳಲ್ಲಿ ಸುಮಾರು 27 ರೀತಿಯ ಮೋಡಗಳಿವೆ. ಯಾವ ಪ್ರದೇಶದಲ್ಲಿ ಯಾವ ಮೋಡ ಹೇಗೆ ಚಲಿಸುತ್ತದೆ, ಎಲ್ಲಿ ಮಳೆ ಸುರಿಸುತ್ತದೆ ಎಂಬುದನ್ನು ಹೇಳಲು ಕೇವಲ ತಂತ್ರಜ್ಞಾನವಷ್ಟೇ ಸಾಲದು. ಅದಕ್ಕೆ ಅಪಾರ ಆಸಕ್ತಿ ಹಾಗೂ ಅನುಭವ ಬೇಕು. ಆದರೆ, ಸೂಕ್ತವಾದ ಮುನ್ಸೂಚನೆ ನೀಡದಿದ್ದರೆ ಮರುದಿನವೇ ಅದನ್ನು ಪ್ರಶ್ನಿಸುವ ವ್ಯವಸ್ಥೆ ಇಲಾಖೆಯಲ್ಲಿದೆ. ಆದರೆ, ಇರುವ ಕೆಲವು ಕೊರತೆಗಳನ್ನು ಇಲಾಖೆ ತುಂಬಿಕೊಳ್ಳಬೇಕು” ಎನ್ನುತ್ತಾರೆ ಅವರು.

ಹವಾಮಾನದ ವಿಷಯಕ್ಕೆ ಬಂದಾಗ ನಮ್ಮ ಜನರಲ್ಲೂ ನಿರ್ಲಕ್ಷದ ಮನೋಭಾವ ಕಾಣುತ್ತದೆ. ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆಗೆ ಹೋಗಿದ್ದ ಹಲವರು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆ. ಹವಾಮಾನ ಇಲಾಖೆ ಕೊಡುವ ಮುನ್ಸೂಚನೆಯ ಬಹುತೇಕ ನಿಜವಾಗುವುದಿಲ್ಲ ಎಂದುಕೊಳ್ಳುವ ಜನ ಸಾಮಾನ್ಯರಂತೆ ಸರಕಾರ ಕೂಡಾ ಈ ಬಾರಿ ನಡೆದುಕೊಂಡಿದೆ.

ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳ ಪೊಲೀಸ್‌ ಮಹಾ ನಿರ್ದೇಶಕರಿಗೆ ಕಳಿಸುವ ‘ಸಂಭವನೀಯ ಉಗ್ರರ ದಾಳಿ’ಯಂತೆ, ಹವಾಮಾನ ಇಲಾಖೆ ಕೂಡಾ ಮಳೆಯಾಗುವ ಪ್ರದೇಶಗಳಲ್ಲಿ ‘ಸಾಧಾರಣದಿಂದ ಭಾರೀ ಮಳೆಯ ಮುನ್ಸೂಚನೆ’ಯನ್ನು ಪ್ರತಿನಿತ್ಯ ನೀಡುತ್ತಲೇ ಇರುತ್ತದೆ. ಹೀಗಾಗಿ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಜನ ಸಾಮಾನ್ಯರಷ್ಟೇ ಅಲ್ಲ ಸರಕಾರದ ಇತರೆ ಇಲಾಖೆಗಳೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆದರೆ, ಇದರಿಂದ ಅಂತಿಮವಾಗಿ ಕಷ್ಟಕ್ಕೆ ಸಿಲುಕುವುದು ಜನ ಸಾಮಾನ್ಯರೇ.

ಮೊದಲೆಲ್ಲಾ ಹವಾಮಾನ ಮುನ್ಸೂಚನೆ ಎಂಬುದು ಕೇವಲ ವಿಮಾನ ಸಂಚಾರಕ್ಕೆ, ನಾವಿಕರಿಗೆ, ರೈತರಿಗಷ್ಟೇ ಎಂಬಂತಿತ್ತು. ಆದರೆ, ನಗರಗಳಲ್ಲಿ ಕೆಲಸಕ್ಕೆ ಹೋಗಿಬರುವ ಜನರಿಂದ ಹಿಡಿದು ಶಾಲೆಗೆ ಹೋಗಿ ಬರುವ ಮಕ್ಕಳವರೆಗೆ ಹವಾಮಾನ ಮುನ್ಸೂಚನೆ ಅಗತ್ಯ.

ತಂತ್ರಜ್ಞಾನ ಮುಂದುವರಿದಿರುವ ಇಂದಿನ ಕಾಲದಲ್ಲಿ ಹವಾಮಾನ ಇಲಾಖೆ 100ಕ್ಕೆ 100ರಷ್ಟು ನಿಖರತೆಯ ಮುನ್ಸೂಚನೆ ನೀಡಬೇಕೇ ಹೊರತು ಮುಂದಿನ ಸಾಧ್ಯತೆಗಳ ಬಗೆಗಿನ ಊಹೆಯನ್ನಲ್ಲ. ಆದರೆ, ಭಾರತದಲ್ಲಿ ಹವಾಮಾನ ಮುನ್ಸೂಚನೆಯೂ, ರಾಜಕೀಯ ಅನಿಶ್ಚಿತತೆಯ ಮುನ್ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿರುವುದು ದುರಂತ.