ದಲಿತರು ಬರುವರು ದಾರಿಬಿಡಿ
COVER STORY

ದಲಿತರು ಬರುವರು ದಾರಿಬಿಡಿ

ದಲಿತರು ಮದುವೆ ಮೆರವಣಿಗೆ ಹೋಗುವಂತಿಲ್ಲ, ಕುದುರೆ ಏರುವಂತಿಲ್ಲ, ಬ್ಯಾಂಡ್‌ಸೆಟ್‌ ಬಳಸುವಂತಿಲ್ಲ ಎಂದು ಬೆದರಿಸುತ್ತಿರುವ ದಿನಗಳು ಇವು. ಹೀಗಾಗಿ ‘ದಲಿತರು ಬರುವರು ದಾರಿಬಿಡಿ..’ ಎಂದು ಇನ್ನೂ ಹೆಚ್ಚಿನ ರೊಚ್ಚಿನಿಂದ ಹೇಳಬೇಕಾದ ಕಾಲ ಇದು.

ಹಿರಿಯ ಪತ್ರಕರ್ತ ಪಿ. ಸಾಯಿನಾಥ್‌ 18 ವರ್ಷಗಳ ಹಿಂದೆ ‘ದಿ ಹಿಂದೂ’ಗಾಗಿ ಬರೆದಿದ್ದ ದಲಿತರ ಸ್ಥಿತಿಯ ಬಗೆಗಿನ ವಿಶೇಷ ವರದಿಗಳನ್ನು ಜಿ.ಎನ್‌. ಮೋಹನ್‌ ಕನ್ನಡಕ್ಕೆ ತಂದಿದ್ದಾರೆ. ‘ದಲಿತರು ಬರುವರು ದಾರಿಬಿಡಿ’ ಹೆಸರಿನ ಈ ಪುಸ್ತಕ ಶುಕ್ರವಾರ (ಜುಲೈ 6) ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕದಿಂದ ಆಯ್ದ ಒಂದು ಲೇಖನ ನಿಮ್ಮ ಓದಿಗಾಗಿ ಇಲ್ಲಿದೆ…

ಬನ್ವಾರಿದೇವಿಯ 13 ವರ್ಷದ ಮಗಳನ್ನು ಜೋಳದ ಹೊಲದಲ್ಲಿ ಮೇಲ್ಜಾತಿಯ ಯುವಕನೊಬ್ಬ ಅತ್ಯಾಚಾರ ಮಾಡಿದಾಗ, ಆಕೆ ಕೈಗೆ ಲಾಠಿ ತೆಗೆದುಕೊಂಡವಳೇ ಅವನನ್ನು ಅಟ್ಟಿಸಿಕೊಂಡು ಹೋದಳು. ಯಾಕೆಂದರೆ ಪೋಲೀಸರ ಮೇಲಾಗಲೀ ಅಥವಾ ನ್ಯಾಯಾಲಯದ ಮೇಲಾಗಲಿ ಅವಳಿಗೆ ಯಾವ ವಿಶ್ವಾಸವೂ ಇರಲಿಲ್ಲ.

ಅಹಿರೋಂಕಿರಾಂಪುರದಲ್ಲಿ ಈ ಎರಡರಿಂದಲೂ ನ್ಯಾಯ ಪಡೆದುಕೊಳ್ಳುವುದರಿಂದ ಅಲ್ಲಿನ ಪ್ರಬಲ ಜಾತಿಗಳು ಅವಳನ್ನು ತಡೆದಿದ್ದವು. “ಗ್ರಾಮಸ್ಥರು ಹಾಗೂ ಪಂಚಾಯತ್‌ ನನಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿತ್ತು. ಆ ಬದಲಿಗೆ ನನ್ನನ್ನು, ನನ್ನ ಇಡೀ ಕುಟುಂಬವನ್ನು ರಾಂಪುರದಿಂದ ಹೊರಗೆ ಎಸೆಯಿತು” ಎಂದು ಬನ್ವಾರಿದೇವಿ ಭಿಕ್ಕುತ್ತಾಳೆ.

ಅತ್ಯಾಚಾರ ನಡೆದು ಒಂದು ದಶಕ ಕಳೆದರೂ ಅಜ್ಮಲ್‌ ಜಿಲ್ಲೆಯ ಈ ಗ್ರಾಮದಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ರಾಜಸ್ಥಾನದಲ್ಲಿ ಇದು ಅಂತಹ ದೊಡ್ಡ ವಿಚಾರವೇನೂ ಅಲ್ಲ. ಈ ರಾಜ್ಯದಲ್ಲಿ ಸರಾಸರಿ ಪ್ರತಿ 60 ಗಂಟೆಗೆ ಒಬ್ಬ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರಾಷ್ಟ್ರೀಯ ಆಯೋಗದ ಅಂಕಿ ಅಂಶಗಳ ಪ್ರಕಾರ 1991 ರಿಂದ 1996 ರವರೆಗೆ ದಲಿತ ಮಹಿಳೆಯರ ಮೇಲಿನ ದೌರ್ಜನ್ಯದ 900 ಪ್ರಕರಣಗಳು ಪೋಲೀಸರ ಬಳಿ ದಾಖಲಾಗಿವೆ. ಅಂದರೆ ವರ್ಷಕ್ಕೆ 150 ಪ್ರಕರಣ ಅಥವಾ ಪ್ರತಿ 60 ಗಂಟೆಗೆ ಒಂದು ಪ್ರಕರಣ (ಕೆಲವು ತಿಂಗಳ ರಾಷ್ಟ್ರಪತಿ ಆಳ್ವಿಕೆ ಹೊರತು ಪಡಿಸಿದರೆ ಈ ಅವಧಿಯಲ್ಲಿ ಭಾರತೀಯ ಜನತಾ ಪಕ್ಷವೇ ಅಧಿಕಾರದಲ್ಲಿತ್ತು) ಅಂಕಿಸಂಖ್ಯೆಗಳು ಇಲ್ಲಿನ ವಾಸ್ಥವಸ್ಥಿತಿಗೆ ಕನ್ನಡಿಯೇನೂ ಅಲ್ಲ. ಈ ರಾಜ್ಯದಲ್ಲಿ ಇಂತಹ ಎಷ್ಟೋ ಪ್ರಕರಣಗಳು ದಾಖಲೇ ಆಗುವುದಿಲ್ಲ. ಇಡೀ ದೇಶದಲ್ಲಿ ಈ ರಾಜ್ಯವೇ ಇಂತಹ ದಾಖಲಾಗದ ಪ್ರಕರಣಗಳಲ್ಲಿ ಎತ್ತಿದಕೈ.

ಜೋದ್ಪುರ ಜಿಲ್ಲೆಯ ನಾಕೋಡ ಗ್ರಾಮದಲ್ಲಿ ಅತ್ಯಂತ ನಾಟಕೀಯ ದೌರ್ಜನ್ಯಕ್ಕೆ ಗುರಿಯಾದ ದಲಿತನೊಬ್ಬ ಊರನ್ನೇ ಬಿಟ್ಟು ಹೋಗಿದ್ದಾನೆ. 1998 ರ ಏಪ್ರಿಲ್‌ನಲ್ಲಿ ರಾಮೇಶ್ವರ ಜಾಧವ್ ಎನ್ನುವ ದಲಿತನೊಬ್ಬ ಗುಜ್ಜರ್‌ ಜಾತಿಗೆ ಸೇರಿದ ವ್ಯಕ್ತಿಗೆ ನೀಡಿದ್ದ 150 ರೂ ಗಳನ್ನು ವಾಪಸ್‌ ಕೊಡುವಂತೆ ಕೇಳಿದ. ಇದು ಬೀದಿಯಲ್ಲಿ ಹೋಗುವ ಮಾರಿಯನ್ನು ಒಳಗೆ ಕರೆದಂತಾಯಿತು. ಸಾಲ ವಾಪಸ್‌ ಕೇಳಿದ್ದರಿಂದ ಕೆರಳಿದ ಗುಜ್ಜರ್‌ ಗುಂಪು ಆತನ ಮೂಗನ್ನು ಚುಚ್ಚಿ ಒಂದು ಮೀಟರ್‌ ಉದ್ದ, 2 ಮಿಮೀ ದಪ್ಪನೆಯ ಸೆಣಗಿನ ದಾರವನ್ನು ತೂರಿಸಿ ಅದನ್ನು ಜಗ್ಗುತ್ತಾ ಊರ ತುಂಬಾ ಮೆರವಣಿಗೆ ಮಾಡಿದರು.

ಈ ಪ್ರಕರಣ ಸಾಕಷ್ಟು ಸುದ್ದಿಯಾಗಿ ಇಡೀ ರಾಷ್ಟ್ರದ ಆಕ್ರೋಶಕ್ಕೆ ಕಾರಣವಾಯಿತು. ಎಲ್ಲಾ ಪತ್ರಿಕೆ ಹಾಗೂ ಟಿವಿಗಳಲ್ಲಿ ಈ ಸುದ್ದಿ ಸಾಕಷ್ಟು ಪ್ರಸಾರವಾಯಿತು. ಆದರೂ ನ್ಯಾಯ ಒದಗಿಸುವಲ್ಲಿ ಇದರ ಪರಿಣಾಮ ಏನೇನೂ ಆಗಲಿಲ್ಲ. ಹಳ್ಳಿಯೊಳಗೆ ಹಬ್ಬಿಸಿದ್ದ ದ್ವೇಷದ ವಾತಾವರಣ ಹಾಗೂ ಅಲ್ಲಿನ ಪ್ರತಿಕೂಲ ಸರ್ಕಾರಿ ವ್ಯವಸ್ಥೆ ಏನೂ ಆಗದಂತೆ ನೋಡಿಕೊಂಡಿತು. ನಿಧಾನವಾಗಿ ಪತ್ರಿಕೆಗಳೂ ಉತ್ಸಾಹ ಕಳೆದುಕೊಂಡವು. ಹಾಗೆಯೇ ಮಾನವ ಹಕ್ಕುಗಳ ಗುಂಪುಗಳು...

ಮಾಧ್ಯಮದ ಇಷ್ಟೆಲ್ಲಾ ಅಬ್ಬರದ ನಂತರದ ಬೆಳವಣಿಗೆಯಲ್ಲಿ ದುರಂತಕ್ಕೊಳಗಾದವರೇ ಅದರ ಬಿಸಿ ಅನುಭವಿಸಬೇಕಾಯಿತು. ನ್ಯಾಯಾಲಯದಲ್ಲಿ ರಾಮೇಶ್ವರ್‌ ತನ್ನ ಹೇಳಿಕೆಯನ್ನೇ ಬದಲಾಯಿಸಿದ. “ಹೌದು ದೌರ್ಜನ್ಯ ನಡೆಯಿತು, ಆದರೆ ದೂರಿನಲ್ಲಿ ಹೆಸರಿಸಲಾದ ಆರು ಜನರಿಂದ ಅಲ್ಲ. ಯಾರು ಆ 6 ಜನರು ಎಂದು ಗುರುತಿಸಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಹೇಳಿಬಿಟ್ಟ.

ಈ ಪ್ರಕರಣದಲ್ಲಿ ರಾಮೇಶ್ವರ್‌ ಆದ ಎಲ್ಲಾ ಗಾಯಗಳನ್ನೂ ವಿವರವಾಗಿ ದಾಖಲಿಸಿಕೊಂಡಿದ್ದ ಹಿರಿಯ ವೈದ್ಯಾಧಿಕಾರಿ ಸಹಾ ಮರೆವಿನ ಮೊರೆ ಹೋದ. “ಹೌದು ರಾಮೇಶ್ವರ ತಮ್ಮ ಗಾಯಗಳೊಂದಿಗೆ ನನ್ನ ಬಳಿ ಬಂದಿದ್ದರು. ಆದರೆ ಈ ಅಸ್ವಾಭಾವಿಕ ಗಾಯಗಳು ಹೇಗೆ ಆಯಿತು ಎಂದು ಹೇಳಿದ್ದ ಎನ್ನುವುದು ನೆನಪಿಗೆ ಬರುತ್ತಿಲ್ಲ” ಎಂದು ಹೇಳಿ ಕೈತೊಳೆದುಕೊಂಡರು.

ರಾಮೇಶ್ವರನ ತಂದೆ ಮಂಗಿಲಾಲನೇ ಈ ಪ್ರಕರಣಕ್ಕೆ ಪ್ರತಿಕೂಲ ಸಾಕ್ಷಿಯಾದರು. ನಾನು ಆತನನ್ನು ನಾಕೋಡದಲ್ಲಿ ಭೇಟಿಯಾದಾಗ, “ನಾವು ಇನ್ನೇನನ್ನು ತಾನೇ ಮಾಡಬೇಕು ಎಂದು ಯಾರಾದರೂ ನಿರೀಕ್ಷಿಸಲು ಸಾಧ್ಯ” ಎಂದು ಕೇಳಿದ. “ನಾವು ಇಲ್ಲಿ ಭಯದಿಂದ ಬದುಕುತಿದ್ದೇವೆ, ಅಧಿಕಾರಿಗಳೇ ಸಂಪೂರ್ಣವಾಗಿ ನಮ್ಮ ವಿರುದ್ಧ ಇದ್ದಾರೆ. ಈ ಗುಜ್ಜರ್‌ಗಳು ನಮ್ಮನ್ನು ಯಾವಾಗ ಬೇಕಾದರೂ ಮುಗಿಸಿ ಹಾಕಬಹುದು. ಅಧಿಕಾರಿಗಳು ಅದರಲ್ಲೂ ಪೊಲೀಸ್ ವ್ಯವಸ್ಥೆಯೊಳಗೆ ಇರುವ ಅಧಿಕಾರಿಗಳು ಈ ಸ್ಥಿತಿಯನ್ನು ನಮ್ಮ ಮೇಲೆ ಹೇರಿದ್ದಾರೆ” ಎಂದರು. ರಾಮೇಶ್ವರ್‌ ಈಗ ಊರು ಬಿಟ್ಟು ಹೋಗಿದ್ದಾನೆ. ಮಂಗಿಲಾಲ್ ಈ ಕೇಸ್‌ಗಾಗಿ ತನ್ನ ಬಳಿ ಇದ್ದ ಮೂರೇ ಮೂರು ಬಿಘಾ ಜಮೀನನ್ನೂ ಮಾರಿದ್ದಾನೆ.

ಜಗತ್ತಿಗೆ ಇದು ಅತ್ಯಂತ ದುರ್ಬರ ಘಟನೆ. ಆದರೆ ರಾಜಸ್ಥಾನಕ್ಕೆ ಇದು ಸಾವಿರಾರು ‘ಇತರೆ’ ಐಪಿಸಿ( ಇಂಡಿಯನ್‌ ಪೀನಲ್‌ ಕೋಟ್‌ – ಭಾರತೀಯ ದಂಡ ಸಂಹಿತೆ) ಕಾನೂನುಗಳಲ್ಲೊಂದು. ಅಂದರೆ ಕೊಲೆ, ಅತ್ಯಾಚಾರ, ಗಲಭೆ, ಹಾಗೂ ಗಂಭೀರಗಾಯದಂತಹ ಪ್ರಕರಣಗಳಲ್ಲದ್ದು. 1991 ರಿಂದ 96 ರವರೆಗೆ ಪ್ರತೀ ನಾಲ್ಕು ಗಂಟೆಗೆ ಒಂದು ಪ್ರಕರಣ ಇಲ್ಲಿ ದಾಖಲಾಗಿದೆ.

ಭರತಪುರ ಜಿಲ್ಲೆಯ ಸೈಂತ್ರಿಯಲ್ಲಿ ಕಳೆದ ಏಳು ವರ್ಷಗಳಿಂದ ಮದುವೆಗಳೇ ಜರುಗಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. (ಹುಡುಗಿಯರದ್ದು ಬಿಡಿ ಹುಡುಗರದ್ದೂ ಆಗಿಲ್ಲ) 1992ರ ಜೂನ್‌ನಿಂದಲೂ ವ್ಯವಸ್ಥೆ ಇಲ್ಲಿ ಈ ರೀತಿ ಇದೆ. ಆಗ ಸೈಂತ್ರಿಯ ಮೇಲ್ಜಾತಿಯ ಗುಂಪು ದಲಿತರ ಮೇಲೆ ದಾಳಿ ಮಾಡಿತು. 6 ಮಂದಿ ಸತ್ತರು. ಅನೇಕ ಮನೆಗಳನ್ನೂ ನಾಶ ಮಾಡಲಾಯಿತು. ಸತ್ತವರ ಪೈಕಿ ಎಷ್ಟೋ ಮಂದಿ ತಾವು ಅಡಗಿದ್ದ ಬೆರಣಿ ಹಾಗೂ ಸೌದೆ ದಾಸ್ತಾನಿಗೆ ಬೆಂಕಿ ಹಚ್ಚಿದಾಗ ಅದರಲ್ಲಿ ಸುಟ್ಟು ಹೋದರು.

“ಸೈಂತ್ರಿಯ ಹುಡುಗಿಯರಿಗೆ ಮದುವೆ ಸಾಧ್ಯ, ಏಕೆಂದರೆ ಹಾಗೆ ಮದುವೆಯಾದವರು ಊರು ಬಿಟ್ಟು ಹೋಗುತ್ತಾರೆ. ಆದರೆ ಹುಡುಗರ ಪರಿಸ್ಥಿತಿ ಹಾಗಲ್ಲ. ಕೆಲವು ಹುಡುಗರು ಮದುವೆ ಆಗಲಿಕ್ಕಾಗಿಯೇ ಊರು ತೊರೆದಿದ್ದಾರೆ. ಏಕೆಂದರೆ ಈ ಊರಿಗೆ ಹೆಣ್ಣು ಕೊಡಲು ಯಾರೂ ಒಪ್ಪುತ್ತಿಲ್ಲ. ಮತ್ತೊಮ್ಮೆ ದಾಳಿ ನಡೆದರೆ ಪೋಲೀಸರಾಗಲೀ ನ್ಯಾಯಾಲಯವಾಗಲಿ ನಮ್ಮ ರಕ್ಷಣೆಗೆ ನಿಲ್ಲುವುದಿಲ್ಲ ಎಂದು ಅವರಿಗೆ ಗೊತ್ತಾಗಿ ಹೋಗಿದೆ” ಎನ್ನುತ್ತಾಳೆ ಭಗವಾನ್‌ದೇವಿ.

ಆಕೆಯ ಸಿನಿಕ ಮಾತುಗಳ ಬೇರು ಇಲ್ಲಿನ ವಾಸ್ತವದಲ್ಲಿದೆ. ಈ ದೌರ್ಜನ್ಯ ಕೊಲೆ ನಡೆದು ಏಳು ವರ್ಷ ಕಳೆದರೂ ಈ ಪ್ರಕರಣದ ಆರೋಪಪಟ್ಟಿ ತಯಾರಿಸಿಲ್ಲ. ಅದೂ ಕೂಡ ಇಲ್ಲಿ ಒಂದು ವಿಷಯವಲ್ಲ. ಈ ರಾಜ್ಯದಲ್ಲಿ ಪ್ರತಿ 9 ದಿನದಲ್ಲಿ ಒಬ್ಬ ದಲಿತನ ಹತ್ಯೆಯಾಗುತ್ತದೆ.

ಇದೇ ಗ್ರಾಮದಲ್ಲಿ ತಾನ್‌ಸಿಂಗ್‌ ಇದ್ದಾನೆ. ಈತ ಆಗಲೇ ಹೇಳಿದನಲ್ಲಾ ಸಗಣಿ ಹಾಗೂ ಸೌದೆ ದಾಸ್ತಾನಿನಲ್ಲಿ ಅಡಗಿದ್ದವನು. ಈ ಪ್ರಕರಣದಲ್ಲಿ ಈತನಿಗೆ ಶೇ.35 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿಗಳು ನಮೂದಿಸಿವೆ. ಈತನ ಕಿವಿ ಬಹುತೇಕ ನಾಶವಾಗಿದೆ. ಈತನ ಸಹೋದರ ಈ ಪ್ರಕರಣದಲ್ಲಿ ಹತ್ಯೆಗೊಳಗಾಗಿದ್ದರಿಂದ ಈತನಿಗೆ ಸಿಕ್ಕಚೂರುಪಾರು ಪರಿಹಾರ ಹಣವೂ ಆಸ್ಪತ್ರೆ ಖರ್ಚಿಗೆ ಮುಗಿದು ಹೋಗಿತ್ತು.

“ನನ್ನ ಬಳಿ ಇದ್ದ ಒಂದಿಷ್ಟು ಜಮೀನನ್ನೂ ಈ ಎಲ್ಲಾ ಖರ್ಚಿಗಾಗಿ ಮಾರಬೇಕಾಗಿ ಬಂತು” ಎಂದು ಇಡೀ ಪ್ರಕರಣದಿಂದ ಸುಸ್ತಾಗಿ ಹೋಗಿರುವ ಈ ಯುವಕ ಹೇಳುತ್ತಾನೆ. ಇದರಲ್ಲಿ ಓಡಾಟದ ವೆಚ್ಚವೂ ಒಂದು. ಜೈಪುರಕ್ಕೆ ಹೋಗಿ ಬರುವ ಖರ್ಚೇ ನೂರಾರು ರೂಪಾಯಿ ತಿಂದುಹಾಕಿದೆ. ತಾನ್‌ಸಿಂಗ್‌ ಕೇವಲ ಒಂದು ಅಂಕೆ ಅಥವಾ ಸಂಖ್ಯೆ ಅಷ್ಟೆ. ಈ ರಾಜ್ಯದಲ್ಲಿ ಪ್ರತಿ 65 ಗಂಟೆಗೆ ಒಬ್ಬ ದಲಿತ ಗಂಭೀರ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾನೆ.

ಟೋಂಕ್‌ ಜಿಲ್ಲೆಯ ರಾಹೋಲಿಯಲ್ಲಿ ಸ್ಥಳೀಯ ಶಾಲಾ ಶಿಕ್ಷಕರಿಂದ ಉದ್ದೀಪನಗೊಂಡು ನಡೆದ ದಲಿತರ ಮೇಲಿನ ದೌರ್ಜನ್ಯ ಸಾಕಷ್ಟು ದೊಂಬಿಯನ್ನು ಕಂಡಿತು. “ನಮಗೆ ಆದ ನಷ್ಟ ಅಷ್ಟಿಷ್ಟಲ್ಲ” ಎನ್ನುತ್ತಾಳೆ ಅಂಜುಪುಲ್ವಾರಿಯಾ. ಈಕೆ ಇಲ್ಲಿನ ಚುನಾಯಿತ ಸರಪಂಚ್. ದಲಿತಳು. “ನನ್ನನ್ನು ಸುಳ್ಳು ಆರೋಪದ ಮೇಲೆ ವಜಾ ಮಾಡಿದ್ದಾರೆ” ಎನ್ನುತ್ತಾಳೆ. ಆದರೆ ಈ ಪ್ರಕರಣದಲ್ಲಿ ಯಾರೊಬ್ಬರಿಗೂ ಶಿಕ್ಷೆಯೇ ಆಗಿಲ್ಲ ಎನ್ನುವುದು ಆಕೆಗೆ ಆಶ್ಚರ್ಯದ ವಿಷಯವೇನೂ ಅಲ್ಲ.

ರಾಜಸ್ಥಾನದಲ್ಲಿ ಅಂದಾಜಿನ ಪ್ರಕಾರ ಪ್ರತೀ 5 ದಿನಕ್ಕೊಮ್ಮೆ ಒಬ್ಬ ದಲಿತನ ಮನೆ ಅಥವಾ ಆಸ್ತಿಯ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಎಲ್ಲಾ ವಿಧದ ದೌರ್ಜನ್ಯದಲ್ಲೂ ದಾಳಿಕೋರರಿಗೆ ಶಿಕ್ಷೆಯಾದ ಉದಾಹರಣೆ ಅತಿ ಕಡಿಮೆ.

ರಾಜಸ್ಥಾನ ಸರ್ಕಾರದ ಮುಖ್ಯಕಾರ್ಯದರ್ಶಿ ಮೆಲುಮಾತಿನ ಅರುಣ್‌ ಕುಮಾರ್‌ ದಲಿತರ ಮೇಲಿನ ದಾಳಿಯಲ್ಲೊಂದು ವಿನ್ಯಾಸವಿದೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ, ರಾಜ್ಯ ಸರ್ಕಾರ ಇಂತಹ ಪ್ರಕರಣಗಳನ್ನು ನೊಂದಾಯಿಸಿಕೊಳ್ಳುವಲ್ಲಿ ತೋರಿಸುತ್ತಿರುವ ಕಾಳಜಿಯ ಪ್ರತೀಕ ಎಂದು ಅವರು ನಂಬಿದ್ದಾರೆ. “ಇಂತಹ ಪ್ರಕರಣಗಳನ್ನು ನೊಂದಾಯಿಸಿಕೊಳ್ಳದ ಬಗ್ಗೆ ದೇಶದ ಎಲ್ಲೆಡೆ ದೂರುಗಳಿದ್ದು ನಮ್ಮ ರಾಜ್ಯದ ಬಗ್ಗೆ ಮಾತ್ರವೇ ಅಂತಹ ದೂರಿಲ್ಲ. ಏಕೆಂದರೆ ನಾವು ಈ ಬಗ್ಗೆ ಎಚ್ಚರದ ಕಣ್ಣು ಹೊಂದಿದ್ದೇವೆ. ಹೆಚ್ಚಿನ ಪ್ರಕರಣಗಳನ್ನು ನಾವು ನೊಂದಾಯಿಸಿಕೊಂಡಿದ್ದೇವೆ. ಹಾಗಾಗಿ ಅಪರಾಧ ಅಂಕಿಸಂಖ್ಯೆ ಜಾಸ್ತಿ ಇದೆ” ಎನ್ನುತ್ತಾರೆ. ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ರಾಜಸ್ಥಾನದಲ್ಲಿ ಶಿಕ್ಷೆ ನೀಡಿದ ಪ್ರಮಾಣವೂ ಹೆಚ್ಚಿದೆ ಎನ್ನುವುದು ಅವರ ನಂಬಿಕೆ.

ಅಂಕಿಸಂಖ್ಯೆಗಳು ಏನನ್ನುತ್ತವೆ? 90ರ ದಶಕದ ಆರಂಭದಲ್ಲಿ ದಲಿತರ ಮೇಲೆ ಜರುಗಿದ ದೌರ್ಜನ್ಯಗಳ ತನಿಖೆ ನಡೆಸಲು ನೇಮಿಸಿದ್ದ ಆಯೋಗದಲ್ಲಿ ತಾನ್ಸಿಂಗ್‌ ಸಹಾ ಒಬ್ಬರು. ಇವರು ಜನತಾದಳದ ಮಾಜಿ ಸಂಸದರು. ಜೈಪುರದ ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಶಿಕ್ಷೆ ಪ್ರಮಾಣ ಕೇವಲ ಶೇಕಡಾ 3 ರಷ್ಟು ಮಾತ್ರ ಎಂದರು.

ದೋಲ್ಪುರ ಜಿಲ್ಲೆಯ ನಾನು ಭೇಟಿ ಕೊಟ್ಟ ನ್ಯಾಯಾಲಯಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇತ್ತು. 1996 ರಿಂದ 98 ರವರೆಗೆ 359 ಪ್ರಕರಣಗಳು ಸೆಷನ್‌ ಕೋರ್ಟ್‌ಗೆ ಬಂದಿದ್ದು ಇನ್ನು ಕೆಲವೊಂದನ್ನು ಬೇರೆ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಲಾಗಿತ್ತು. ಅಥವಾ ಬಾಕಿಇತ್ತು. ಆದರೆ ಶಿಕ್ಷೆಯ ಪ್ರಮಾಣ ಶೇ 2.5ಕ್ಕಿಂತ ಕಡಿಮೆ ಇತ್ತು.

ದೋಲ್ಪುರದಲ್ಲಿ ನನ್ನ ಜೊತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ನನ್ನ ವ್ಯಥೆ ಎಂದರೆ ನಮ್ಮ ನ್ಯಾಯಾಲಗಳು ಎಷ್ಟೊಂದು ಸುಳ್ಳು ಪ್ರಕರಣಗಳ ಭಾಗವಾಗಿದೆ ಎನ್ನುವುದು” ಎಂದರು. “ದಲಿತರ ಮೇಲೆ ದಾಖಲಾದ ದೂರುಗಳಲ್ಲಿ ಶೇ 50ರಷ್ಟು ಸುಳ್ಳು ದೂರುಗಳೇ ಇವೆ. ಇಂತಹ ಕೇಸುಗಳಿಂದ ವಿನಾಕಾರಣ ಜನರಿಗೆ ಹಿಂಸೆ” ಎನ್ನುತ್ತಾರೆ.

ರಾಜಸ್ಥಾನದ ಪೊಲೀಸ್ ಅಧಿಕಾರಿಗಳ ಪೈಕಿ ಬಹುತೇಕ ಉನ್ನತ ಜಾತಿಯ ಅಧಿಕಾರಿಗಳು ಇಂತಹ ಅಭಿಪ್ರಾಯವನ್ನೇ ಹೊಂದಿದ್ದಾರೆ. (ಒಬ್ಬ ಹಿರಿಯ ಅಧಿಕಾರಿ ಇದನ್ನು ಸಿಆರ್‌ಪಿ ಎಂದೇ ಬಣ್ಣಿಸುತ್ತಾರೆ.) ಅಂದರೆ ‘ಚಾರಂಗ್-ರಾಜಪುತ್-ಪೊಲೀಸ್’. 90 ರ ದಶಕದವರೆಗೂ ಈ ಎರಡೂ ಪ್ರಬಲ ಜಾತಿಗಳೇ ಪೊಲೀಸ್‌ ವ್ಯವಸ್ಥೆಯಲ್ಲಿ ತುಂಬಿ ಹೋಗಿದ್ದವು.

ಸಾಮಾನ್ಯ ಜನರು, ಅದರಲ್ಲೂ ಬಡವರು ಮತ್ತು ದುರ್ಬಲರು ಸುಳ್ಳುಕೋರರು ಎಂಬುವ ನಂಬಿಕೆ ಪೊಲೀಸರಲ್ಲಿ ಆಳವಾಗಿ ಬೇರೂರಿದೆ. ಎಲ್ಲಾ ಸಮುದಾಯದಲ್ಲಿನ ಅತ್ಯಾಚಾರ ಪ್ರಕರಣಗಳನ್ನೇ ತೆಗೆದುಕೊಳ್ಳಿ ತನಿಖೆ ಮುಗಿದ ಮೇಲೆ ಇದು ಸುಳ್ಳು ಪ್ರಕರಣ ಎಂದು ಬಯಲಾಗಿರುವುದರ ಸಂಖ್ಯೆ ರಾಷ್ಟ್ರೀಯ ಸರಾಸರಿ ಶೇಕಡಾ 5. ರಾಜಸ್ಥಾನದಲ್ಲಿ ಬಯಲಾಗಿರುವ ಸುಳ್ಳು ಪ್ರಕರಣಗಳ ಸಂಖ್ಯೆಶೇ 27. ಅಂದರೆ ಈ ರಾಜ್ಯದ ಹೆಣ್ಣುಮಕ್ಕಳು ದೇಶದ ಇತರ ಭಾಗಗಳಿಗಿಂತ ಐದು ಪಟ್ಟು ಹೆಚ್ಚು ಸುಳ್ಳು ಹೇಳುತ್ತಾರೆ ಎಂದು ಹೇಳಿದಂತೆ. ಇದು ಬಹುಶಃ ಸರಿಯಾದ ವಿವರಣೆಯೇನೋ? ಮಹಿಳೆಯರ ವಿರುದ್ಧದ ಪೂರ್ವಗ್ರಹ ವ್ಯವಸ್ಥೆಯೊಳಗೆ ಆಳವಾಗಿ ಇಳಿದು ಹೋಗಿದೆ. ‘ಸುಳ್ಳು ಅತ್ಯಾಚಾರ’ ಅಂಕಿಸಂಖ್ಯೆಗಳು ಎಲ್ಲಾ ಸಮುದಾಯಗಳನ್ನೂ ಒಳಗೊಳ್ಳುತ್ತದೆ.

ಆದರೆ ಈ ಅಂಕಿಸಂಖ್ಯೆಯನ್ನು ಕೆದಕಿ ನೋಡಿದರೆ ದಲಿತರು ಮತ್ತು ಆದಿವಾಸಿಗಳು ಈ ಪೂರ್ವಾಗ್ರಹದಿಂದ ಹೆಚ್ಚು ಶೋಷಿತರಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಅವರು ಎದುರಿಸುವ ದೌರ್ಜನ್ಯದ ರೀತಿಗಳು ಇತರೆ ಸಮುದಾಯಗಳಿಗಿಂತ ಹೆಚ್ಚು.

ರಾಜಸ್ಥಾನದಲ್ಲಿ ನಾನು ಹೋದೆಡೆಯೆಲ್ಲಾ ದಲಿತರು ಕಾನೂನನ್ನು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ವಿರೋಧಿ) ಕಾಯಿದೆ 1989 ಕಾಯಿದೆಯ ಅನುಕೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮನೋಭಾವವೇ ಇತ್ತು. ಇದಕ್ಕೂ ಮಿಗಿಲಾಗಿ ಈ ಕಾಯಿದೆಯ ಮೂರನೇ ಪರಿಚ್ಚೇದದ ದುರಪಯೋಗದ ಬಗ್ಗೆ ಹೆಚ್ಚು ದೂರಿತ್ತು. ಈ ಪರಿಚ್ಚೇದ ದಲಿತರು ಹಾಗೂ ಆದಿವಾಸಿಗಳ ಮೇಲೆ ದೌರ್ಜನ್ಯವೆಸಗಿದವರಿಗೆ ಐದು ವರ್ಷ ಜೈಲು ಹಾಗೂ ದಂಡದ ಅವಕಾಶ ನೀಡುತ್ತದೆ.

ನಿಜಕ್ಕೂ ಹೇಳಬೇಕೆಂದರೆ ಈ ದೌರ್ಜನ್ಯವೆಸಗಿದವರಿಗೆ ಇಂತಹ ಗಂಭೀರ ಶಿಕ್ಷೆ ನೀಡಿದ ಒಂದು ಪ್ರಕರಣವನ್ನೂ ನಾನು ನೋಡಿಲ್ಲ.

ದೋಲ್ಪುರದಲ್ಲಿಯೇ ದಲಿತರನ್ನು ಒಳಗೊಂಡಿರುವ ದೌರ್ಜನ್ಯ ಪ್ರಕರಣಗಳಲ್ಲಿ ನೀಡಿರುವ ಕೆಲವು ಶಿಕ್ಷೆಗಳು ಸಹಾ ಅಪರಾಧಿಗಳನ್ನೇನೂ ಭಯಕ್ಕೀಡು ಮಾಡಿಲ್ಲ. 100 ಅಥವಾ 250 ಅಥವಾ 500 ರೂ ದಂಡದಿಂದ ಒಂದು ತಿಂಗಳ ಸರಳ ಜೈಲು ವಾಸ ಮಾತ್ರ ನೀಡಲಾಗಿದೆ. ನಾನು ಕಂಡ ಅತ್ಯಂತ ಗಂಭೀರ ಶಿಕ್ಷೆ ಎಂದರೆ 6 ತಿಂಗಳ ಸರಳ ಜೈಲು ವಾಸ. ಒಂದು ಪ್ರಕರಣದಲ್ಲಿ ಆರೋಪಿಗೆ ‘ಪ್ರೊಬೇಷನ್‌ ಜಾಮೀನು’ ನೀಡಲಾಗಿತ್ತು. ಈ ‘ಪ್ರೊಬೇಷನ್’ ಎನ್ನುವ ಕಲ್ಪನೆಯೇ ವಿಚಿತ್ರ. ನಾನಂತೂ ಇಲ್ಲಿಯವರೆಗೂ ಎಲ್ಲಿಯೂ ಇಂತಹ ವಿಚಿತ್ರವಾದುದನ್ನು ನೋಡಿಲ್ಲ.

ದೋಲ್ಪುರ ಮಾತ್ರ ಒಂದು ಪ್ರತ್ಯೇಕ ಪ್ರಕರಣವಲ್ಲ. ಟೋಂಕ್‌ ಜಿಲ್ಲೆಯ ಎಸ್ಸಿಎಸ್ಟಿ ನ್ಯಾಯಾಲಯದ ಕೇಂದ್ರ ಕಚೇರಿಯಲ್ಲಿ ಶಿಕ್ಷೆಯ ಪ್ರಮಾಣ ಶೇ.2ಕ್ಕಿಂತ ಕಡಿಮೆ ಎನ್ನುವುದು ತಿಳಿದುಬಂತು.

ಇವೆಲ್ಲಾ ಅಂಕಿಸಂಖ್ಯೆಗಳಾದವು. ಒಬ್ಬ ದಲಿತ ನ್ಯಾಯಾಲಯದ ಮೆಟ್ಟಿಲು ಏರಲು ಇರುವ ಅಡೆತಡೆಗಳು, ಪಡಿಪಾಟಲುಗಳು ಏನು? ಅದು ಇನ್ನೊಂದೇ ಕಥೆ....

ದಲಿತರು ಬರುವರು ದಾರಿಬಿಡಿ