ಜಿಎಸ್‌ಟಿಗೆ ಒಂದು ವರ್ಷ; ‘ಸಾಧನೆ’ ಎನ್ನುತ್ತಿರುವ ಆಡಳಿತ ಪಕ್ಷ, ‘ವೈಫಲ್ಯ’ ಎನ್ನುತ್ತಿದೆ ವಿರೋಧ ಪಕ್ಷ!
COVER STORY

ಜಿಎಸ್‌ಟಿಗೆ ಒಂದು ವರ್ಷ; ‘ಸಾಧನೆ’ ಎನ್ನುತ್ತಿರುವ ಆಡಳಿತ ಪಕ್ಷ, ‘ವೈಫಲ್ಯ’ ಎನ್ನುತ್ತಿದೆ ವಿರೋಧ ಪಕ್ಷ!

ಜಿಎಸ್‌ಟಿ ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಈ ಬೆನ್ನಲ್ಲೇ ಬಿಜೆಪಿ ಜಿಎಸ್‌ಟಿಯ ಸಾಧನೆಗಳ ಸಾಲು ಸಾಲು ಪೋಸ್ಟ್‌ಗಳನ್ನು ಜನರ ಮುಂದಿಡುತ್ತಿದ್ದರೆ, ಕಾಂಗ್ರೆಸ್‌ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕಾಲೆಳೆಯುವ ಪ್ರಯತ್ನ ಮಾಡುತ್ತಿದೆ. 

ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಇಂದಿಗೆ (ಜುಲೈ 1) ಒಂದು ವರ್ಷ. ಹಲವಾರು ವರ್ಷಗಳಿಂದ ಚರ್ಚೆಯಲ್ಲಿದ್ದ ಜಿಎಸ್‌ಟಿ ಜಾರಿಗೆ ಬಂದು ಒಂದು ವರ್ಷವಾಗಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜಿಎಸ್‌ಟಿ ಪರ- ವಿರೋಧದ ಟ್ರೋಲ್‌ ಆರಂಭವಾಗಿದೆ.

ಒಂದು ವರ್ಷವಾದರೂ ಕೂಡ ಭಾರತೀಯನಿಗೆ ಕಬ್ಬಿಣದ ಕಡಲೆಯೇ ಆಗಿರುವ ಜಿಎಸ್‌ಟಿಗೆ ಪ್ರಾರಂಭದಲ್ಲಿ ದೊಡ್ಡ ಪ್ರಮಾಣದ ವಿರೋಧಗಳು ವ್ಯಕ್ತವಾಗಿದ್ದವು. ಇಂದಿಗೂ ಕೂಡ ವಿರೋಧಗಳ ಪ್ರಮಾಣ ಕಡಿಮೆಯಾಗಿಲ್ಲ. ಆದಾಗ್ಯೂ ಕೂಡ ಹಲವಾರು ಆರ್ಥಿಕ ತಜ್ಞರು ಜಿಎಸ್‌ಟಿಗೆ ಉತ್ತಮ ಮಾರ್ಕ್ಸ್ ನೀಡಿದ್ದಾರೆ. ಜಿಎಸ್‌ಟಿ ಇನ್ನೂ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಆದರೆ ಸುಧಾರಣೆಯ ಮಾರ್ಗದಲ್ಲಿ ಕ್ರಮಿಸುತ್ತಿದೆ ಎನ್ನುತ್ತಾರೆ ತಜ್ಞರು.

ಭಾರತದ ಆರ್ಥಿಕ ತಜ್ಞರು ವಿರೋಧಗಳ ಹೊರತಾಗಿಯೂ ಕೂಡ ಜಿಎಸ್‌ಟಿಯಲ್ಲಿ ಕೆಲವು ಗುಣಾತ್ಮಕ ಅಂಶಗಳನ್ನು ಗುರುತಿಸಿದ್ದಾರೆ. ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ಹಣದುಬ್ಬರದ ಸಮಸ್ಯೆ ಕಾಡಿತ್ತು. ಆದರೆ ಭಾರತದಲ್ಲಿ ಹೀಗಾಗಿಲ್ಲ. ಭಾರತದಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಹಣದುಬ್ಬರದ ಸಮಸ್ಯೆ ಆಹಾರ ಮತ್ತು ತೈಲಬೆಲೆಗಳ ಏರಿಕೆ ಕಾರಣದಿಂದಾಗಿ ಉಂಟಾಗಿದೆಯೇ ಹೊರತು ಜಿಎಸ್‌ಟಿಯಿಂದಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಈ ಮುಂಚೆ ನಾಗರಿಕರು ಶೇ.30ರಷ್ಟು ತೆರಿಗೆಯನ್ನು ಬರಿಸುತ್ತಿದ್ದರು. ಆದರೆ ಜಿಎಸ್‌ಟಿ ಈ ಮೊತ್ತವನ್ನು ಶೇ.28ಕ್ಕೆ ಇಳಿಸಿದೆ. ಹಲವಾರು ಅಗತ್ಯ ವಸ್ತು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ಶೇ.18ರಷ್ಟು ಮಾತ್ರವಿದೆ. ದಿನಬಳಕೆಯ ವಸ್ತುಗಳ ಮೇಲೆ ಶೇ.0ಯಿಂದ ಶೇ.12ರವರೆಗೆ ಮಾತ್ರ ಜಿಎಸ್‌ಟಿ ವಿಧಿಸಲಾಗಿದೆ. ಈಗ ಗ್ರಾಹಕರಿಗೆ ಮುಂಚೆಗಿಂತಲೂ ಕಡಿಮೆ ತೆರಿಗೆ ಹೊರೆ ಬೀಳುತ್ತಿದೆ ಎನ್ನಲಾಗುತ್ತಿದೆ.

ಇಡೀ ದೇಶದಲ್ಲಿ ಏಕರೂಪದ ತೆರಿಗೆ ಇರುವ ಕಾರಣದಿಂದ ಹೊರರಾಜ್ಯಗಳಿಂದ ಬರುವ ಉತ್ಪನ್ನಗಳ ಮೇಲಿನ ಸುಂಕ ಕಡಿಮೆಯಾಗಿದೆ. ಇಡೀ ದೇಶದಲ್ಲಿ ಏಕರೂಪ ಮಾರುಕಟ್ಟೆಯ ವ್ಯವಸ್ಥೆ ಇರುವುದರಿಂದ ದೇಶದ ಎಲ್ಲ ಮೂಲೆಯಲ್ಲಿನ ಗ್ರಾಹಕರು ನಿರ್ಧಿಷ್ಟ ಉತ್ಪನ್ನಕ್ಕೇ ಒಂದೇ ರೀತಿಯ ತೆರಿಗೆ ಕಟ್ಟುವಂತಾಗಿದೆ.

ಜಿಎಸ್‌ಟಿ ಬಂದ ನಂತರದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ಸುಮಾರು 17 ರೀತಿಯ ತೆರಿಗೆಗಳು ರದ್ದಾಗಿವೆ. ಅಬಕಾರಿ ಸುಂಕ, ಸೇವಾ ತೆರಿಗೆ, ಕೇಂದ್ರ ತೆರಿಗೆ, ರಾಜ್ಯ ಸರಕಾರಗಳು ವಿಧಿಸುತ್ತಿದ್ದ ವ್ಯಾಟ್‌, ಮಾರಾಟ ತೆರಿಗೆ, ಆಕ್ಟ್ರಾಯ್‌ಗಳೆಲ್ಲಾ ಇಂದು ಜಾರಿಯಲ್ಲಿಲ್ಲ. ಆದ್ದರಿಂದ ನಾಗರಿಕರು ಒಂದೇ ವಸ್ತುವಿನ ಮೇಲೆ ಎರಡೆರಡು ಬಾರಿ ತೆರಿಗೆ ಕಟ್ಟುವ ಪ್ರಮೇಯ ತಪ್ಪಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಸದ್ಯ ಜಿಎಸ್‌ಟಿಯಲ್ಲಿ 5 ಶ್ರೇಣಿಗಳಲ್ಲಿ ತೆರಿಗೆಯನ್ನು ಪಡೆಯಲಾಗುತ್ತಿದೆ. ಶೇ.0, ಶೇ.5, ಶೇ.12, ಶೇ.18 ಮತ್ತು ಶೇ.28 ದರದ ತೆರಿಗೆಗಳನ್ನು ಕೇಂದ್ರ ಸರಕಾರ ವಿಧಿಸುತ್ತಿದೆ. ಈ ಶ್ರೇಣಿಯನ್ನು ಇಳಿಸುವ ಚಿಂತನೆಯೂ ಕೂಡ ಇದೆ ಎಂದಿರುವ ವಿತ್ತ ಸಚಿವ ಅರುನ್‌ ಜೇಟ್ಲಿ, ಅದಕ್ಕೂ ಮುಂಚೆ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಾಗಬೇಕು ಎಂದಿದ್ದಾರೆ.

ಭಾರತೀಯರು ಬಳಸುತ್ತಿರುವ ಎಲ್ಲಾ ವಸ್ತುಗಳೂ ಕೂಡ ಜಿಎಸ್‌ಟಿ ಅಳತೆಗೋಲಿನ ಕೆಳಗೆ ಬಂದಿಲ್ಲ. ವಿದ್ಯುತ್‌, ಮದ್ಯ, ಪೆಟ್ರೋಲಿಯಂ ಇತ್ಯಾದಿಗಳಿಗೆ ಇನ್ನೂ ಜಿಎಸ್‌ಟಿ ನಿಗದಿಪಡಿಸಿಲ್ಲ. ಪೆಟ್ರೋಲ್‌, ಡೀಸೆಲ್‌ ಮತ್ತು ಸೀಮೆ ಎಣ್ಣೆಯನ್ನು ಜಿಎಸ್‌ಟಿ ಅಡಿಗೆ ತರಬೇಕೆಂಬ ಯೋಜನೆಗೆ ಹಲವಾರು ರಾಜ್ಯಗಳು ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ಈ ಉತ್ಪನ್ನಗಳ ಮೇಲೆ ನಾಗರಿಕರು ಜಿಎಸ್‌ಟಿ ಕಟ್ಟುವ ಪ್ರಮೇಯ ಇನ್ನೂ ದೂರದಲ್ಲಿರುವಂತಿದೆ.

ಈ ಅಂಕಿ ಸಂಖ್ಯೆಗಳಾಚೆಗೂ ಕೂಡ ಜಿಎಸ್‌ಟಿ ಸದ್ದು ಮಾಡುತ್ತಿದೆ. #GSTForNewIndia , #FailedGST , ಹ್ಯಾಷ್‌ ಟ್ಯಾಗ್‌ಗಳ ಅಡಿಯಲ್ಲಿ ಜಿಎಸ್‌ಟಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಪಟ್ಟಿದೆ.

ಜಿಎಸ್‌ಟಿಗೆ ಒಂದು ವರ್ಷ ತುಂಬಿರುವಲ್ಲೇ ಬಿಜೆಪಿ ನಾಯಕರು ಜಿಎಸ್‌ಟಿ ಸಾಧನೆಗಳ ಕುರಿತಂತೆ ಸರಣಿ ಟ್ವೇಟ್‌ಗಳನ್ನು ಮಾಡಿದ್ದಾರೆ. ಜಿಎಸ್‌ಟಿ ವರ್ಷದಲ್ಲಿ ಸಾಧಿಸಿರುವುದೇನು ಎಂದು ತಿಳಿಸುವ ಪ್ರಯತ್ನದಲ್ಲಿದ್ದಾರೆ.

ಜಿಎಸ್‌ಟಿಯಿಂದ ಯಾವ ಯಾವ ವಸ್ತುಗಳಲ್ಲಿ ಎಷ್ಟೆಷ್ಟು ತೆರಿಗೆ ಪ್ರಮಾಣ ಬದಲಾಗಿದೆ ಎಂದು ಬಿಜೆಪಿ ಪೋಸ್ಟರ್‌ಗಳನ್ನು ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಒಂದೆಡೆ ಬಿಜೆಪಿ ಪಾಳಯ ಜುಲೈ 1ನ್ನು ‘ಜಿಎಸ್‌ಟಿ ಡೇ’ ಹೆಸರಿನಲ್ಲಿ ಹಬ್ಬದಂತೆ ಆಚರಣೆ ಮಾಡುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ ನಾಯಕರು ಸೇರಿದಂತೆ ಹಲವರು ಜಿಎಸ್‌ಟಿ ಹಾಗೂ ಬಿಜೆಪಿ ನಾಯಕರ ಕಾಲೆಳೆಯಲು ಮುಂದಾಗಿದ್ದಾರೆ. ಜಿಎಸ್‌ಟಿಯನ್ನು ಮತ್ತೊಮ್ಮೆ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್’ ಎಂದು ಲೇವಡಿ ಮಾಡಿದ್ದಾರೆ.

ಸಾಮಾನ್ಯ ಬಳಕೆಯ ವಸ್ತುವೊಂದರ ಫೋಟೋ ಕ್ಲಿಕ್ಕಿಸಿ ಜಾಲತಾಣದಲ್ಲಿ ಹಂಚಿಕೊಂಡಿರುವ ಟ್ವಿಟ್ಟಿಗರೊಬ್ಬರು, ಜಿಎಸ್‌ಟಿ ಜಾರಿಯಾಗುವುದಕ್ಕೂ ಹಿಂದಿನ ಬೆಲೆ ಮತ್ತು ಇವತ್ತಿನ ಬೆಲೆಗಳ ನಡುವಿನ ಅಂತರವೇನು ಎನ್ನುವುದನ್ನು ಸೂಚಿಸಿದ್ದಾರೆ.

ಜಿಎಸ್‌ಟಿಯ ಈ ಪರ ವಿರೋಧ ಚರ್ಚೆಗಳ ನಡುವೆ ‘ಇದು ಜಿಎಸ್‌ಟಿಯ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಚುನಾವಣಾ ಗಿಮಿಕ್‌ ಅಷ್ಟೇ’ ಎಂದು ಟ್ವಿಟ್ಟಿಗರೊಬ್ಬರು ಹೇಳಿದ್ದಾರೆ.