samachara
www.samachara.com
ಸರಕಾರಿ ಕೃಷಿ ವಿವಿ ವಿದ್ಯಾರ್ಥಿಗಳು ಖಾಸಗಿ ಕೃಷಿ ಕಾಲೇಜುಗಳನ್ನು ವಿರೋಧಿಸುತ್ತಿರುವುದೇಕೆ?
COVER STORY

ಸರಕಾರಿ ಕೃಷಿ ವಿವಿ ವಿದ್ಯಾರ್ಥಿಗಳು ಖಾಸಗಿ ಕೃಷಿ ಕಾಲೇಜುಗಳನ್ನು ವಿರೋಧಿಸುತ್ತಿರುವುದೇಕೆ?

ರಾಜ್ಯದ ಸರಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಅನಿರ್ಧಿಷ್ಠಾವಧಿ ಹೋರಾಟ ಶನಿವಾರ 19ನೇ ದಿನಕ್ಕೆ ಕಾಲಿಟ್ಟಿದೆ. ಆದಾಗ್ಯೂ ಕೂಡ ವಿದ್ಯಾರ್ಥಿಗಳ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ರಾಜ್ಯದ 6 ಸರಕಾರಿ ಕೃಷಿ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಖಾಸಗಿ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪಿಸಲು ಹೊರಟಿರುವ ಸರಕಾರದ ನಡೆಯನ್ನು ವಿರೋಧಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಜುಲೈ 2ರಂದು ಬೆಂಗಳೂರಿನಲ್ಲಿ ರಾಜ್ಯದ 1,000ಕ್ಕೂ ಹೆಚ್ಚು ಕೃಷಿ ಕೋರ್ಸ್‌ಗಳ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ತಮ್ಮ ಪ್ರತಿರೋಧವನ್ನು ತೋರಿಸಲು ಸಿದ್ಧರಾಗಿದ್ದಾರೆ. 

ಖಾಸಗಿ ಕೃಷಿ ವಿವಿಗಳ ಸ್ಥಾಪನೆಯನ್ನು ವಿರೋಧಿಸಿ ನಡೆಸುತ್ತಿರುವ ಸತತ ಹೋರಾಟ ಶನಿವಾರಕ್ಕೆ 19ನೇ ದಿನಕ್ಕೆ ಕಾಲಿಟ್ಟಿದೆ. ಹೀಗಿದ್ದರೂ ಕೂಡ ಸರಕಾರ ವಿದ್ಯಾರ್ಥಿಗಳ ಬೇಡಿಕೆಗಳತ್ತ ಗಮನ ಹರಿಸಿಲ್ಲ. ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಬಹಿಷ್ಕರಿಸಿ, ಉರುಳು ಸೇವೆ ಮಾಡಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ವಿದ್ಯಾರ್ಥಿಗಳೊಟ್ಟಿಗೆ ಚರ್ಚಿಸಿಲ್ಲ.

ಕೃಷಿ ವಿದ್ಯಾರ್ಥಿಗಳ ಉರುಳು ಸೇವೆ ಪ್ರತಿಭಟನೆ.
ಕೃಷಿ ವಿದ್ಯಾರ್ಥಿಗಳ ಉರುಳು ಸೇವೆ ಪ್ರತಿಭಟನೆ.
ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್

ಹಲವಾರು ವರ್ಷಗಳ ಹೋರಾಟಕ್ಕೆ ಸರಕಾರ ಕಿವಿಗೊಡದ ಕಾರಣ ಈಗ ಕೃಷಿ ವಿದ್ಯಾರ್ಥಿಗಳು ‘ಬೆಂಗಳೂರು ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ರೂಪಿಸಿದ್ದಾರೆ. ರಾಜ್ಯದಲ್ಲಿನ ಬೆಂಗಳೂರು, ಧಾರವಾಡ, ಶಿವಮೊಗ್ಗ, ಕಲಬುರ್ಗಿ, ಬೀದರ್‌ ಮತ್ತು ಬಾಗಲಕೋಟೆಗಳಲ್ಲಿರುವ 6 ಸರಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಜುಲೈ 2, ಸೋಮವಾರದಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವತಂತ್ರ ಉದ್ಯಾನವನದವರೆಗೆ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ.

ಕೃಷಿ ವಿದ್ಯಾರ್ಥಿಗಳ ಈ ಹೋರಾಟ ಇಂದು ನಿನ್ನೆಯದೇನಲ್ಲ. 2016ರಲ್ಲೇ ವಿದ್ಯಾರ್ಥಿಗಳು 8 ದಿನಗಳ ಕಾಲ ಸತತ ಹೋರಾಟ ನಡೆಸಿದ್ದರು. ಆ ಸಂಧರ್ಭದಲ್ಲಿ ಸರಕಾರದ ಕಡೆಯಿಂದ ಸಕಾರಾತ್ಮಕ ಸ್ಪಂದನೆಯೇನೋ ದೊರೆತಿತ್ತು. ಆದರೆ ಸದನದಲ್ಲಿ ಈ ಕುರಿತು ಚರ್ಚೆ ನಡೆಯಲಿಲ್ಲ. ಆಗಿಂದಲೂ ಕೂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಲೇ ಬರುತ್ತಿದ್ದಾರೆ. ಖಾಸಗಿ ವಿವಿಗಳನ್ನು ಮುಚ್ಚಬೇಕು ಎಂಬ ತಮ್ಮ ಹಕ್ಕೊತ್ತಾಯವನ್ನು ಸಚಿವರು, ಕೃಷಿ ಇಲಾಖೆಯ ಮುಂದಿಡುತ್ತಲೇ ಬಂದಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ.

ಜೂನ್‌ ತಿಂಗಳ 13ರಿಂದ ಅನಿರ್ಧಿಷ್ಠಾವಧಿ ಹೋರಾಟವನ್ನು ರೂಪಿಸಿರುವ ವಿದ್ಯಾರ್ಥಿಗಳು ಸತತ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ವಿಶ್ವವಿದ್ಯಾಲಯದ ಪೂರಕ ಪರೀಕ್ಷೆಗಳು ನಡೆದಿದ್ದು, ಹೋರಾಟದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಜುಲೈ 2ರಿಂದ 6ರವರೆಗೆ 2ನೇ ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆಗಳು ನಿಗದಿಯಾಗಿವೆ. ಆದರೆ ಪರೀಕ್ಷೆ ಪ್ರಾರಂಭದ ದಿನದಂದೇ ವಿದ್ಯಾರ್ಥಿಗಳು ಬೆಂಗಳೂರು ಚಲೋ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಹೋರಾಟವನ್ನು ಮಣಿಸಲಾಗದ ಸರಕಾರಿ ಕೃಷಿ ವಿಶ್ವವಿದ್ಯಾಲಯ, ಪೋಷಕರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೂ ಕೂಡ ನಡೆಸಿದೆ.ವಿದ್ಯಾರ್ಥಿಗಳು ಹೋರಾಟವನ್ನು ನಿಲ್ಲಿಸದಿದ್ದರೆ ಕಾಲೇಜು ಮತ್ತು ಹಾಸ್ಟೆಲ್‌ಅನ್ನು ಮುಚ್ಚುವುದಾಗಿ ವಿವಿ ಆಡಳಿತ ಮಂಡಳಿ ತಿಳಿಸಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಸರಕಾರಿ ಕೃಷಿ ವಿವಿ ವಿದ್ಯಾರ್ಥಿಗಳು ಖಾಸಗಿ ಕೃಷಿ ಕಾಲೇಜುಗಳನ್ನು ವಿರೋಧಿಸುತ್ತಿರುವುದೇಕೆ?
ಚಿತ್ರ ಕೃಪೆ: ದಿ ನ್ಯೂಸ್‌ ಮಿನಿಟ್

ಕರ್ನಾಟಕದಲ್ಲಿ ಮೊದಲ ಬಾರಿಗೆ 1963ರಲ್ಲಿ ಕೃಷಿ ವಿಶ್ವವಿದ್ಯಾಲಯದ ಕಾಯ್ದೆ ರೂಪುಗೊಂಡಿತ್ತು. ಈ ಕಾಯ್ದೆ ಖಾಸಗಿ ವಿವಿಗಳ ಸ್ಥಾಪನೆಗೆ ಅವಕಾಶ ನೀಡಿರಲಿಲ್ಲ. ಆದರೆ 2009ರಲ್ಲಿ ಬಿಜೆಪಿ ಸರಕಾದ ಅವಧಿಯಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ವಿವಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಆನಂತರದಲ್ಲಿ ಕರ್ನಾಟಕದಲ್ಲಿ ಹಲವಾರು ಖಾಸಗಿ ವಿವಿಗಳು ತೆಲೆಯೆತ್ತಿವೆ. ಅವುಗಳ ಪೈಕಿ ಮುಖ್ಯವಾಗಿ ದೊಡ್ಡಬಳ್ಳಾಪುರದಲ್ಲಿರುವ ‘ರೈ ಟೆಕ್ನಾಲಜಿ’, ಕಲಬುರ್ಗಿಯ ‘ಸಿಂಗಾನಿಯಾ ವಿವಿ’, ಪೀಣ್ಯದಲ್ಲಿರುವ ‘ಜಿಪಿ ಶೆಟ್ಟಿ ಶಿಕ್ಷಣ ಸಂಸ್ಥೆ’, ಕನಕಪುರದ ‘ರೂರಲ್ ಎಜುಕೇಷನ್ ಸೊಸೈಟಿ’, ರಾಮನಗರದ ‘ಸಂಪೂರ್ಣ ತಾಂತ್ರಿಕ ಮಹಾವಿದ್ಯಾಲಯ’ಗಳು ಕಾರ್ಯ ನಿರ್ವಹಿಸುತ್ತಿವೆ.

ಸರಕಾರಿ ಕೃಷಿ ವಿವಿ ವಿದ್ಯಾರ್ಥಿ ಹೋರಾಟದ ಪ್ರತಿನಿಧಿ ಪ್ರವೀಣ್‌ ಹೇಳುವಂತೆ, “ಖಾಸಗಿ ವಿವಿಗಳ ಪೈಕಿ ದೊಡ್ಡಬಳ್ಳಾಪುರದ ರೈ ಟೆಕ್ನಾಲಜಿ ಹಾಗೂ ಕಲಬುರ್ಗಿಯ ಸಿಂಗಾನಿಯಾ ವಿಶ್ವವಿದ್ಯಾಲಯಗಳು ಆರಂಭವಾಗಿ 4 ವರ್ಷಗಳಾಗಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳು ನಾಲ್ಕನೇ ವರ್ಷದ ಕೃಷಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ಈ ಕಾಲೇಜುಗಳು ಸರಕಾರದಿಂದ ಮಾನ್ಯತೆ ಪಡೆದುಕೊಂಡಿಲ್ಲ. ಈ ಕಾಲೇಜುಗಳಲ್ಲಿ ಬೇಕಾಬಿಟ್ಟಿ ದಾಖಲಾತಿಗಳು ನಡೆಯುತ್ತಿವೆ”

ಸಿಂಗಾನಿಯಾ ಕೃಷಿ ವಿಶ್ವ ವಿದ್ಯಾಲಯ.
ಸಿಂಗಾನಿಯಾ ಕೃಷಿ ವಿಶ್ವ ವಿದ್ಯಾಲಯ.

ಪ್ರವೀಣ್ ಪ್ರಕಾರ, ಸರಕಾರದ 6 ಕೃಷಿ ವಿಶ್ವವಿದ್ಯಾಲಯಗಳ ಕೆಳಗೆ ಸುಮಾರು 25 ಕೃಷಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾಲೇಜುಗಳಲ್ಲಿ ಬಿಎಸ್‌ಸಿ ಅಗ್ರಿ, ಬಿಎಸ್‌ಸಿ ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌, ಮಾರ್ಕೆಟಿಂಗ್‌ ಹೀಗೆ ಹಲವಾರು ವಿಭಾಗಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ 6 ವಿಶ್ವವಿದ್ಯಾಲಯದ ಅಡಿಯಲ್ಲಿ ಶಿಕ್ಷಣ ಒದಗಿಸುತ್ತಿರುವ ಕಾಲೇಜುಗಳಲ್ಲಿ ಪ್ರತಿ ವರ್ಷ ಸರಿಸುಮಾರು 2,500 ವಿದ್ಯಾರ್ಥಿಗಳನ್ನಷ್ಟೇ ದಾಖಲು ಮಾಡಿಕೊಳ್ಳಲಾಗುತ್ತದೆ. ಸಿಇಟಿ ಪರೀಕ್ಷೆಯ ಮುಖಾಂತರ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಈ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾಗಳಿಲ್ಲ.

ಆದರೆ ದೊಡ್ಡಬಳ್ಳಾಪುರ ರೈ ಟಿಕ್ನಾಲಜೀಸ್‌ ಕಾಲೇಜು ಮಾತ್ರವೇ ಒಂದು ವರ್ಷಕ್ಕೆ ಸರಿಸುಮಾರು 1,500 ವಿದ್ಯಾರ್ಥಿಗಳನ್ನು ಡಿಗ್ರಿ ವಿದ್ಯಾಭ್ಯಾಸಕ್ಕೆ ದಾಖಲು ಮಾಡಿಕೊಳ್ಳುತ್ತಿದೆ. ಈ ದಾಖಲಾತಿಯಲ್ಲಿ ಯಾವ ಸಿಇಟಿ ಪರೀಕ್ಷೆ, ಮೀಸಲಾತಿ, ರೈತರ ಕೋಟಾ ಯಾವ ಪ್ರಕ್ರಿಯೆಗಳನ್ನೂ ಕೂಡ ಅನುಸರಿಸುತ್ತಿಲ್ಲ.

ಭಾರತೀಯ ಕೃಷಿ ಅನುಸಂಧಾನ ಪರಿಷತ್‌ (ಇಂಡಿಯನ್‌ ಕೌನ್ಸಿಲ್ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್‌) ಕೃಷಿ ಕಾಲೇಜುಗಳನ್ನು ತೆರಯಲು ಹಲವಾರು ಕಾನೂನುಗಳನ್ನು ಮುಂದಿಟ್ಟಿದೆ. ಐಸಿಎಆರ್‌ ಹೇಳುವಂತೆ 60 ಜನ ವಿದ್ಯಾರ್ಥಿಗಳಿರುವ ಕಾಲೇಜು 75 ಎಕರೆ ಭೂಮಿಯನ್ನು ಹೊಂದಿರಬೇಕು. ಆದರೆ ಕೆಲವು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಈ ಪ್ರಮಾಣದ ವ್ಯವಸಾಯ ಭೂಮಿಯಿಲ್ಲ. ಕೃಷಿ ಕೋರ್ಸ್‌ ಸಂಪೂರ್ಣವಾಗಿ ಪ್ರಾಯೋಗಿಕ ತರಗತಿಗಳನ್ನು ಹೊಂದಿರಬೇಕು. ಆದರೆ ಈ ವಿಶ್ವವಿದ್ಯಾಲಯಗಳು ಹೆಚ್ಚಿನ ಪ್ರಾಯೋಗಿಕ ತರಗತಿಗಳನ್ನು ನಡೆಸುತ್ತಿಲ್ಲ. ಕೆಲವೇ ಕೆಲವು ಎಕರೆ ಭೂಮಿಯಲ್ಲಿ 1,500 ಜನ ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ ಕೃಷಿ ತಂತ್ರಜ್ಞರು, ವಿಜ್ಞಾನಿಗಳನ್ನು ಉತ್ಪಾದನೆ ಮಾಡುತ್ತಿವೆ ಎನ್ನುತ್ತಾರೆ ಪ್ರವೀಣ್.

ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಕೃಷಿ ಕಾರ್ಯಾನುಭವ (ರೂರಲ್ ಆಗ್ರಿಕಲ್ಚರ್‌ ವರ್ಕ್ ಎಕ್ಸ್ಪೀರಿಯನ್ಸ್) ಎಂಬ ಹೆಸರಿನಲ್ಲಿ 3 ತಿಂಗಳುಗಳ ಕಾಲ ಹಳ್ಳಿಗಳಿಗೆ ಕಳುಹಿಸಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ರೈತರ ಜಮೀನುಗಳಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ ದುಡಿಯುತ್ತಾರೆ. ಇಂಟರ್ನ್‌ಶಿಪ್‌ಗಳು ದೊರೆಯುತ್ತವೆ.

ಕೃಷಿ ಸಂಬಂಧಿತ ಅಖಿಲ ಭಾರತ ಪ್ರವಾಸವನ್ನು ಕೂಡ ನಡೆಸಲಾಗುತ್ತದೆ. ದೇಶದ ಇತರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಕರೆದೊಯ್ಯಲಾಗುತ್ತದೆ. ಒಂದು ಸಮಿಸ್ಟರ್‌ ಅವಧಿ ಪೂರ್ತಿಯಾಗಿ ಪ್ರಾಯೋಗಿಕ ತರಗತಿಗಳಿಗೆ ಮೀಸಲಾಗಿರುತ್ತದೆ. ಕ್ರಾಪ್‌ ಪ್ರೊಡಕ್ಷನ್‌ ಹೆಸರಿನಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ 30-40 ಗುಂಟೆ ಭೂಮಿ ನೀಡಲಾಗುತ್ತದೆ. ಆ ಭೂಮಿಯಲ್ಲಿ ವಿದ್ಯಾರ್ಥಿಗಳೇ ಕೃಷಿ ನಡೆಸುತ್ತಾರೆ. ಆದರೆ ಈ ಕಾರ್ಯಗಳ್ಯಾವುವೂ ಕೂಡ ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿಲ್ಲ ಎಂಬ ಆರೋಪವಿದೆ.

ಯಾವುದಾದರೂ ಹೊಸ ತಳಿಗಳು, ರಸಗೊಬ್ಬರಗಳು, ಕೀಟನಾಶಕಗಳು ಬಂದಾಗ ಮೊದಲು ಅವನ್ನು ಸರಕಾರಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣವಾದ ನಂತರವಷ್ಟೇ ಈ ಉತ್ಪನ್ನಗಳು ರೈತರ ಕೈಸೇರುತ್ತವೆ. ಖಾಸಗಿ ಕಾಲೇಜುಗಳು ಹೀಗೆ ಬೆಳೆಯುತ್ತ ಸಾಗಿದರೆ ಮುಂದಿನ ದಿನಗಳಲ್ಲಿ ಇಂತಹ ಹೊಸ ಉತ್ಪನ್ನಗಳು ಕಂಡು ಹಿಡಿಲ್ಪಟ್ಟಾಗ ಪ್ರಾಯೋಗಿಕ ಪರೀಕ್ಷೆಗೆಂದು ಖಾಸಗಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಬಹುದು. ಆದರೆ ಈ ಕಾಲೆಜುಗಳು ಸರಿಯಾಗಿ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎನ್ನುವುದು ವಿದ್ಯಾರ್ಥಿಗಳ ವಾದ.

ಪ್ರಾಯೋಗಿಕ ತರಗತಿಗಳಿಗೆ ಅಗತ್ಯವಿರುವಷ್ಟು ಭೂಮಿಯೇ ಇಲ್ಲದ ಕಾಲೇಜುಗಳು ಎಷ್ಟರಮಟ್ಟಿಗೆ ಈ ಉತ್ಪನ್ನಗಳ ಮೇಲೆ ಪ್ರಯೋಗ ಮಾಡಿ, ಉಪಯುಕ್ತತೆಯನ್ನು ದೃಢೀಕರಣಗೊಳಿಸಿ ರೈತರಿಗೆ ಸಹಕಾರಿಯಾಗಬಲ್ಲವು ಎಂಬ ಆತಂಕವನ್ನು ವಿದ್ಯಾರ್ಥಿ ಪ್ರವೀಣ್‌ ಮುಂದಿಡುತ್ತಾರೆ.

ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಯೊಬ್ಬ ವರ್ಷಕ್ಕೆ 30ರಿಂದ 40 ಸಾವಿರ ಹಣ ಕೊಟ್ಟು ಓದುತ್ತಾನೆ. ಆದರೆ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವವರೆಲ್ಲೂ ಕೂಡ ಹತ್ತಾರು ಲಕ್ಷ ಹಣ ಕೊಟ್ಟು ಓದುತ್ತಿರುವವರೇ. ಇಷ್ಟು ಹಣ ಕೊಟ್ಟು ಓದಿ ಹೊರಗೆ ಬಂದವರು ಮುಂದೆ ಲಾಭ ಮಾಡುವುದು ಹೇಗೆ ಎಂದು ಯೋಚಿಸುತ್ತಾರೆಯೇ ಹೊರತು ಪ್ರಮಾಣಿಕವಾಗಿ ರೈತರ ಸೇವೆ ಮಾಡುತ್ತಾರೆ ಎನ್ನುವುದು ಅನುಮಾನ. ಕೇವಲ ಪದವಿಗೋಸ್ಕರ ಈ ವಿಶ್ವವಿದ್ಯಾಲಗಳನ್ನು ಸೇರಿರುವವರು ರೈತರ ಪರವಾಗಿ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಯಾವ ನಂಬಿಕೆಯೂ ಇಲ್ಲ.
- ಪ್ರವೀಣ್, ಸರಕಾರಿ ಕೃಷಿ ವಿವಿ ವಿದ್ಯಾರ್ಥಿ

ಯಾವ ಪಾಠ ಕೇಳದೇ, ಅಗತ್ಯವಿರುವಷ್ಟು ಬೋಧಕರಿಲ್ಲದೇ, ಪ್ರಾಯೋಗಿಕ ತರಗತಿಗಳನ್ನು ಕಾಣದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಶೇ.95ರಷ್ಟು ಅಂಕ ಪಡೆದುಕೊಳ್ಳುತ್ತಿದ್ದಾರೆ. ಆದರೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಎನಿಸುವ ಸರಕಾರಿ ಕಾಲೇಜುಗಳಲ್ಲಿ ಶೇ.80ರಿಂದ 85ರಷ್ಟು ಅಂಕ ಬರುವುದೇ ಹೆಚ್ಚು. ಅಂಕಗಳ ಮೇಲೆ ಉದ್ಯೋಗ ದೊರೆಯುವುದಾದರೆ ಇಷ್ಟೆಲ್ಲಾ ಕಷ್ಟ ಪಟ್ಟು ಓದಿದ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ, ಏನೂ ಅರಿಯದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ದೊರೆಯುತ್ತದೆ ಎಂದು ಪ್ರವೀಣ್‌ ಅಂತಕ ವ್ಯಕ್ತ ಪಡಿಸುತ್ತಾರೆ.

ಕೃಷಿ ವಿಶ್ವವಿದ್ಯಾಲಯ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ಖಾಸಗಿ ಕಾಲೇಜುಗಳನ್ನು ತಡೆಗಟ್ಟಬೇಕು ಎಂಬ ಹಕ್ಕೊತ್ತಾಯದೊಂದಿಗೆ ರಾಜ್ಯ ಮಟ್ಟದ ಹೋರಾಟಕ್ಕೆ ಮುಂದಾಗಿದ್ದಾರೆ ಈ ವಿದ್ಯಾರ್ಥಿಗಳು. ಖಾಸಗಿ ಕೃಷಿ ವಿಶ್ವವಿದ್ಯಾಲಯಗಳೊಳಗಿನ ಅವ್ಯವಸ್ಥೆ ಮತ್ತು ಮುಂದಾಗಬಹುದಾದ ಪರಿಣಾಮವನ್ನು ಬೆಟ್ಟುಮಾಡಿ ತೋರಿಸುತ್ತಿರುವ ಈ ವಿದ್ಯಾರ್ಥಿಗಳು, ತಮ್ಮ ಅಸ್ಮಿತೆಗಾಗಿ ಹೋರಾಟಕ್ಕೆ ನಿಂತಿದ್ದಾರೆ. ಬದುಕಿನ ಆತಂಕದ ಜತೆಗೆ ರೈತರಿಗೆ ಆಗಬಹುದಾದ ಅನ್ಯಾಯಗಳನ್ನು ನಿಲ್ಲಿಸುವ ಆಶಯ ಇವರದ್ದು.

ಪರೀಕ್ಷೆಗಳನ್ನು ಧಿಕ್ಕರಿಸಿ ‘ಬೆಂಗಳೂರು ಚಲೋ’ ಪ್ರತಿಭಟನಾ ಚಳವಳಿ ನಡೆಸಲು ಮುಂದಾಗಿರುವ ಈ ವಿದ್ಯಾರ್ಥಿಗಳ ಹೋರಾಟಕ್ಕೆ ಸರಕಾರ ಈ ಬಾರಿಯೂ ಕೂಡ ಭರವಸೆಯನ್ನಷ್ಟೇ ನೀಡುತ್ತದೆಯೋ ಅಥವಾ ಸಮಸ್ಯೆ ಬಗೆಹರಿಸಲು ಮುಂದಾಗುತ್ತದೆಯೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.