samachara
www.samachara.com
ಆಶಯದ ನೆಲೆಯಲ್ಲಷ್ಟೇ ಉಳಿದಿರುವ ಸಮಾನತೆ; ಹೊಸ್ತಿಲಾಚೆ ನಿಂತಿರುವ ಮೀಸಲಾತಿ ಚರ್ಚೆ!
COVER STORY

ಆಶಯದ ನೆಲೆಯಲ್ಲಷ್ಟೇ ಉಳಿದಿರುವ ಸಮಾನತೆ; ಹೊಸ್ತಿಲಾಚೆ ನಿಂತಿರುವ ಮೀಸಲಾತಿ ಚರ್ಚೆ!

ಮೀಸಲಾತಿಯಿಂದ ಸಾಮಾಜಿಕ ಸಮಾನತೆ ಸಾಕಾರವಾಗಿಲ್ಲ ನಿಜ. ಹಾಗೆಂದು ಮೀಸಲಾತಿ ಬೇಡವೇಬೇಡ ಎಂದು ಹೇಳುವುದೂ ಕೂಡಾ ಸರಿಯಲ್ಲ. 

ದಯಾನಂದ

ದಯಾನಂದ

ಮೀಸಲಾತಿಯ ಪರ- ವಿರೋಧ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ತಮ್ಮ ಅವಕಾಶವನ್ನೆಲ್ಲಾ ದಲಿತರು, ಹಿಂದುಳಿದ ವರ್ಗದವರೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಬ್ರಾಹ್ಮಣರು ಸೇರಿದಂತೆ ಮೇಲ್ವರ್ಗದ ಜನ ವಾದಿಸುತ್ತಿದ್ದಾರೆ. ಆದರೆ, ಮೀಸಲಾತಿಯ ಪ್ರಯೋಜನ ನಿಜಕ್ಕೂ ದಲಿತರು, ಹಿಂದುಳಿದ ವರ್ಗದ ಜನರಿಗೆ ಪೂರ್ತಿಯಾಗಿ ಸಿಕ್ಕಿದೆಯೇ ಎಂಬ ಪ್ರಶ್ನೆಗಳೂ ಈಗ ಎದ್ದಿವೆ.

ಮೀಸಲಾತಿ ವ್ಯವಸ್ಥೆಯಿಂದಾಗಿ ಮೇಲ್ವರ್ಗದ ಜನರಿಗಷ್ಟೇ ಅಲ್ಲ ದಲಿತರಲ್ಲದ ಎಲ್ಲರಿಗೂ ಅನ್ಯಾಯವಾಗುತ್ತಿದೆ ಎಂಬ ವಾದ ಇತ್ತೀಚೆಗೆ ಬಲವಾಗುತ್ತಿದೆ. ಹೀಗಾಗಿ ಬ್ರಾಹ್ಮಣರು ಮಾತ್ರವಲ್ಲದೆ ವೀರಶೈವ- ಲಿಂಗಾಯತ, ಒಕ್ಕಲಿಗ ಸೇರಿದಂತೆ ಹಲವು ಬ್ರಾಹ್ಮಣೇತರ ಜಾತಿಗಳೂ ಮೀಸಲಾತಿಗೆ ವಿರುದ್ಧವಾಗಿ ನಿಂತಿವೆ.

ಪ್ರತಿಭೆ, ಅರ್ಹತೆಗಳಿದ್ದರೂ ಮೇಲ್ವರ್ಗದ ಬಡವರೂ ಮೀಸಲಾತಿಯ ಕಾರಣಕ್ಕಾಗಿ ಉದ್ಯೋಗ ವಂಚಿತರಾಗಬೇಕಾಗುತ್ತಿದೆ ಎಂಬ ಅಸಮಾಧಾನ ಬ್ರಾಹ್ಮಣೇತರ ಶೂದ್ರ ಜಾತಿಗಳಲ್ಲೂ ಇದೆ. ಇತ್ತೀಚೆಗೆ ಅನೇಕರು ದಲಿತರು ಹಾಗೂ ಹಿಂದುಳಿದ ವರ್ಗದ ಮೀಸಲಾತಿಯ ವಿರುದ್ಧ ತಮ್ಮ ಈ ಅಸಮಾಧಾನವನ್ನು ಸಾರ್ವಜನಿಕವಾಗಿಯೇ ಹೊರಹಾಕುತ್ತಿದ್ದಾರೆ.

ಜಾತಿ ಆಧಾರಿತ ಮೀಸಲಾತಿಯು ಮೇಲ್ಜಾತಿಗಳಲ್ಲಿರುವ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂಬ ಮೇಲ್ಜಾತಿಗಳ ಸಿಟ್ಟು ಇಂದು ನಿನ್ನೆಯದಲ್ಲ. ಮೇಲ್ಜಾತಿಗಳು ಆರಂಭದಿಂದಲೂ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಬಂದಿವೆ. ಮೀಸಲಾತಿಯಿಂದ ತಳವರ್ಗದ ಜನರಿಗೆ ಅನುಕೂಲವಾಗುತ್ತದೆ ಎಂಬುದಕ್ಕಿಂತ ಮೇಲ್ವರ್ಗಕ್ಕೆ ಅನ್ಯಾಯವಾಗುತ್ತದೆ ಎಂಬ ಆಧಾರದ ಮೇಲೆಯೇ ಮೇಲ್ಜಾತಿಗಳು ತಮ್ಮ ವಾದ ಮಂಡಿಸುತ್ತಾ ಬರುತ್ತಿವೆ.

ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕತೆಯ ಆಧಾರದ ಮೀಸಲಾತಿ ಇದ್ದರೆ ಒಳ್ಳೆಯದು ಎಂಬುದು ಬಹುತೇಕ ಮೇಲ್ವರ್ಗದ ಜನರ ಅಭಿಪ್ರಾಯ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯಿಂದ ದೇಶದಲ್ಲಿ ಸಮಾನತೆ ತರಲು ಸಾಧ್ಯವಾಗಿಲ್ಲ ಎನ್ನುವ ಬಹುತೇಕರು ಇದರ ಆಧಾರದಲ್ಲೇ ಮೀಸಲಾತಿ ವಿಫಲವಾಗಿದೆ ಎಂಬ ವಾದವನ್ನೂ ಮುಂದಿಡುತ್ತಾರೆ.

ಮೀಸಲಾತಿ ವಿರೋಧಿ ಮನಸ್ಸುಗಳು ಸುಳ್ಳು ಹೇಳುತ್ತಾ ಬರುತ್ತಿವೆ. ಮೀಸಲಾತಿಯಿಂದ ಏಕಾಏಕಿ ಸಮಾನತೆ ಬಂದುಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಮಾನತೆಗಾಗಿ ಇರುವ ಸಾಧನಗಳಲ್ಲಿ ಮೀಸಲಾತಿಯೂ ಒಂದು. ಮೀಸಲಾತಿ ವಿರೋಧಿಗಳ ವ್ಯವಸ್ಥಿತ ಸಂಚು. ಮೀಸಲಾತಿ ತೆಗೆದುಕೊಂಡು ಸ್ವಲ್ಪಮಟ್ಟಿಗೆ ಬೆಳೆದ ದಲಿತ, ಹಿಂದುಳಿದ ವರ್ಗದ ಕೆಲವು ನವ ಬ್ರಾಹ್ಮಣರು ತಮ್ಮ ನಾಯಕರ ಓಲೈಕೆ ಮಾಡಲು ಮೀಸಲಾತಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ.
-ಡಾ. ಸಿ.ಎಸ್‌.ದ್ವಾರಕಾನಾಥ್, ಹಿರಿಯ ವಕೀಲ

ಆದರೆ, ಮೀಸಲಾತಿ ಎಂಬುದು ಸಮಾನತೆಗೆ ಇರುವ ಹಲವು ಸಾಧನಗಳ ಪೈಕಿ ಒಂದೇ ಹೊರತು ಮೀಸಲಾತಿಯಿಂದ ಮಾತ್ರ ಸಮಾನತೆ ಸಾಧ್ಯವಿಲ್ಲ ಎಂಬುದೂ ಮುಖ್ಯವಾದ ವಿಚಾರ. ಸಮಾನತೆಯ ವಿಷಯ ಬಂದಾಗ ಇರುವ ಮಿತ ಸಂಪನ್ಮೂಲದಲ್ಲೇ ಹಂಚಿಕೆ ವ್ಯವಸ್ಥೆಯನ್ನು ಅಲ್ಪಸ್ವಲ್ಪ ಬದಲಾವಣೆ ಮಾಡುವುದೇ ಮೀಸಲಾತಿ.

ಸಾರ್ವಭೌಮ ರಾಷ್ಟ್ರ ಎಂದು ಘೋಷಿಸಿಕೊಂಡಿರುವ ಭಾರತದಲ್ಲಿ ಯಾರೂ ಧರ್ಮ, ಜಾತಿ, ಲಿಂಗ ಹಾಗೂ ಹುಟ್ಟಿದ ಸ್ಥಳದ ಕಾರಣಕ್ಕೆ ಅಸಮಾನತೆ ಅನುಭವಿಸಬಾರದು ಎಂದು ಸಂವಿಧಾನವೇ ಹೇಳಿದೆ. ಹೀಗಾಗಿ ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

ಆದರೆ, ಮೀಸಲಾತಿಯಿಂದ ಇಂದಿಗೂ ಸಮಾನತೆ ಸಾಧ್ಯವಾಗಿಲ್ಲ. ಹಾಗೆಂದು ಸಮಾನತೆ ಸಂಪೂರ್ಣ ಸಾಕಾರವಾಗದ ಕಾರಣಕ್ಕೆ ಮೀಸಲಾತಿ ವ್ಯವಸ್ಥೆಯೇ ವಿಫಲವಾಗಿದೆ ಎಂಬುದು ತಪ್ಪು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್‌ ಐಜೂರ್.

“ದಲಿತರು, ಹಿಂದುಳಿದ ವರ್ಗದವರು ಇಂದು ಉನ್ನತ ವಿದ್ಯಾಭ್ಯಾಸ ಪಡೆದಿದ್ದರೆ, ಕೆಲವು ಕಡೆಗಳಲ್ಲಾದರೂ ಉನ್ನತ ಸ್ಥಾನಗಳಲ್ಲಿದ್ದರೆ ಅದಕ್ಕೆ ಮೀಸಲಾತಿಯೇ ಕಾರಣ. ಆದರೆ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆ, ಅಂತರ ಎಂಬುದು ಮನುಷ್ಯರ ಮನಸ್ಸಿನ ಒಳಗೇ ಹಾಸುಹೊಕ್ಕಾಗಿದೆ. ಹೀಗಾಗಿ ಕಾನೂನುಗಳ ಮೂಲಕ ಈ ಮನಸ್ಸಿನ ಕೊಳೆಯನ್ನು ತೊಳೆಯುವುದು ಕಷ್ಟ” ಎನ್ನುತ್ತಾರೆ ಐಜೂರ್.

“ಸಾಮಾಜಿಕ ಮೇಲು ಕೀಳು ಇಂದಿಗೂ ಇದೆ. ಮನುಸ್ಮೃತಿ ಹೇಳುತ್ತಿದ್ದ ಅಂತರದಲ್ಲಿ ಈಗ ಮೇಲು ಕೀಳು ಕಾಣುತ್ತಿಲ್ಲ. ಮೊದಲು ಬಾಹ್ಯ ಕ್ರಿಯೆಗಳಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ಈಗ ಮನಸ್ಸಿನೊಳಕ್ಕೆ ಬಂದಿದೆ. ಮೇಲ್ವರ್ಗವು ದಲಿತರ ಬಗ್ಗೆ ಇಂದಿಗೂ ಮನಸ್ಸಿನಲ್ಲಿ ಕೆಟ್ಟದಾಗಿ ಯೋಚಿಸುತ್ತಿದೆ. ಮೀಸಲಾತಿ ಇಲ್ಲದಿದ್ದರೆ ಹಲವು ದಲಿತರು ಕಾಲೇಜು ಮೆಟ್ಟಿಲು ಹತ್ತಿ ಉದ್ಯೋಗ ಹಿಡಿಯಲು ಆಗುತ್ತಿರಲಿಲ್ಲ” ಎಂಬುದು ಅವರ ಅಭಿಪ್ರಾಯ.

“ಮೀಸಲಾತಿ ಎಂಬ ವಿಚಾರ ಬಂದಾಗ ಅದು ಜಾತಿ ಮೀಸಲಾತಿ ಎಂದೇ ಹಲವರ ಕಣ್ಣಿಗೆ ಕಾಣುತ್ತದೆ. ಆದರೆ, ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನ ಹಲವು ಪ್ರಾತಿನಿಧ್ಯಗಳನ್ನು ನೀಡಿದೆ. ಮೀಸಲಾತಿ ಎಂಬುದು ಕೂಡಾ ಇಂಥ ಪ್ರಾತಿನಿಧ್ಯವೇ ಹೊರತು ಅದು ಮೇಲ್ವರ್ಗವು ಕೆಳವರ್ಗಕ್ಕೆ ಬಿಟ್ಟುಕೊಡುತ್ತಿರುವ ಭಿಕ್ಷೆಯಲ್ಲ” ಎನ್ನುತ್ತಾರೆ ಅವರು.

“ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರು ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹಾಗೂ ಅದರ ಆಡಳಿತವನ್ನು ನಾವೇ ನಿರ್ವಹಿಸಲು ಸಂವಿಧಾನದ 30ನೇ ಪರಿಚ್ಛೇದ ಅವಕಾಶ ಮಾಡಿಕೊಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿರುವ ಪ್ರಮುಖ ಶಿಕ್ಷಣ ಸಂಸ್ಥೆಗಳು ಇದೇ ಪ್ರಾತಿನಿಧ್ಯದ ಮೂಲಕ ಆರಂಭವಾದಂಥವು. ಒಂದು ವೇಳೆ ಈ ಪ್ರಾತಿನಿಧ್ಯಕ್ಕೆ ಅವಕಾಶ ಸಿಗದೇ ಇದ್ದಿದ್ದರೆ ಶಿಕ್ಷಣ ಸಂಸ್ಥೆಗಳು ಬಹಳ ಹಿಂದೆಯೇ ಉದ್ಯಮಿಗಳ ಪಾಲಾಗುತ್ತಿದ್ದವು” ಎಂಬುದು ಅವರ ಮಾತು.

ಮೀಸಲಾತಿ ವ್ಯವಸ್ಥೆ ವಿಫಲವಾಗಿದೆ ಎಂದು ಹೇಳುವುದು ಸರಿಯಲ್ಲ. ಮೀಸಲಾತಿಯಿಂದ ಇಂದು ದಲಿತರು ತಕ್ಕಮಟ್ಟಿಗಾದರೂ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯವಾಗಿದೆ. ಕೆಳವರ್ಗದವರನ್ನೂ ತಮ್ಮಂತೆ ಮನುಷ್ಯರು ಎಂದು ಒಪ್ಪುವ ಅರಿವು ಮೇಲ್ವರ್ಗದ ಮನಸ್ಸುಗಳಲ್ಲಿ ಮೂಡಬೇಕು.
- ಚಂದ್ರಶೇಖರ ಐಜೂರ್, ಸಾಮಾಜಿಕ ಕಾರ್ಯಕರ್ತ

ಆರ್ಥಿಕತೆ ಆಧಾರದ ಮೀಸಲಾತಿ?:

ಜಾತಿ ಆಧಾರದ ಮೀಸಲಾತಿಯನ್ನು ವಿರೋಧಿಸುವ ಮೇಲ್ವರ್ಗದ ಹಲವರು ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಇರಬೇಕು ಎನ್ನುತ್ತಾರೆ. ಇಂಥ ಮೀಸಲಾತಿ ಜಾರಿಗೆ ಬಂದರೆ ಯಾವುದೇ ಜಾತಿಯ ಬಡವರಿದ್ದರೂ ಅವರನ್ನು ಮೇಲೆತ್ತಿದಂತಾಗುತ್ತವೆ ಎಂಬುದು ಅವರ ವಾದ.

“ಜಾತಿ ಆಧಾರಿತ ಮೀಸಲಾತಿಯಿಂದ ಇಂದಿಗೂ ಸಮಾನತೆ ಸಾಧ್ಯವಾಗಿಲ್ಲ. ಹೀಗಾಗಿ ಇಂಥ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ತರಬೇಕು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇನ್ನೂ ಜಾತಿ ಆಧಾರಿತ ಮೀಸಲಾತಿಯನ್ನು ವ್ಯವಸ್ಥೆಯನ್ನು ಮುಂದುವರಿಸುವುದು ಸರಿಯಲ್ಲ” ಎನ್ನುತ್ತಾರೆ ಸಂಸ್ಕೃತ ಉಪನ್ಯಾಸಕ ಡಾ. ಗಣಪತಿ ಭಟ್‌.

ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆ ಬಲವಾದಷ್ಟೂ ಅಸಮಾನತೆಯನ್ನು ಬೆಳೆಸಿದಂತಾಗುತ್ತದೆ. ದಲಿತರು, ಹಿಂದುಳಿವರು ಮೇಲ್ವರ್ಗದಿಂದ ದೂರ ಉಳಿಯಲು ಇಂಥ ಮೀಸಲಾತಿಯೇ ಕಾರಣ. ಹೀಗಾಗಿ ಶಿಕ್ಷಣದಲ್ಲಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ತರಬೇಕು.
- ಡಾ. ಗಣಪತಿ ಭಟ್‌, ಸಂಸ್ಕೃತ ಉಪನ್ಯಾಸಕ

“ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಜಾರಿಗೆ ತಂದರೆ ಅದರಿಂದ ಎಲ್ಲಾ ಬಡವರಿಗೂ ಅನುಕೂಲವಾಗುತ್ತದೆ. ಜಾತಿ ಆಧಾರದ ಮೀಸಲಾತಿ ಜಾತಿ ಜಾತಿಗಳಲ್ಲಿ ಅಂತರಗಳನ್ನು ಸೃಷ್ಟಿಸುತ್ತಲೇ ಹೋಗುತ್ತದೆ. ಅದರ ಬದಲಿಗೆ ಆರ್ಥಿಕತೆಯ ಆಧಾರದಲ್ಲಿ ಶೈಕ್ಷಣಿಕ ಮೀಸಲಾತಿ ನೀಡಬೇಕು. ಉದ್ಯೋಗದ ವಿಚಾರಕ್ಕೆ ಬಂದಾಗ ಮಹಿಳಾ ಮೀಸಲಾತಿ, ಗ್ರಾಮೀಣ ಮೀಸಲಾತಿಗಳನ್ನು ಉಳಿಸಿಕೊಳ್ಳಬಹುದು. ಆದರೆ, ಜಾತಿ ಆಧಾರಿತ ಮೀಸಲಾತಿಯನ್ನು ಆದಷ್ಟು ಬೇಗ ತೆಗೆದು ಹಾಕಬೇಕು” ಎಂಬ ವಾದ ಅವರದ್ದು.

ಒಂದು ಕಡೆಗೆ ದಲಿತರು ಹಾಗೂ ಹಿಂದುಳಿದವರು ಮೀಸಲಾತಿ ಎಂಬುದು ಸಮಾನತೆಗಾಗಿ ಇರುವ ಒಂದು ಪ್ರಮುಖ ಸಾಧನ ಎಂದು ಹೇಳುತ್ತಿದ್ದರೆ ಮತ್ತೊಂದು ಕಡೆಗೆ ಮೇಲ್ವರ್ಗದವರು ಜಾತಿ ಆಧಾರಿತ ಮೀಸಲಾತಿ ಹಾಗೂ ಔದ್ಯೋಗಿಕ ಮೀಸಲಾತಿಯನ್ನೇ ತೆಗೆದು ಹಾಕಬೇಕೆಂಬ ಮಾತನ್ನಾಡುತ್ತಿದ್ದಾರೆ.

ಸಾವಿರಾರು ಜಾತಿಗಳು, ಲಕ್ಷಾಂತರ ಉಪ ಜಾತಿಗಳು, ನೂರಾರು ಭಾಷೆಗಳು, ಸಾವಿರಾರು ಉಪಭಾಷೆಗಳು ಹಾಗೂ ಬಹುಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಸಮಾನತೆ ಎಂಬುದನ್ನು ಕೇವಲ ಮೀಸಲಾತಿಯ ಮೇಲೆ ಸಾಧಿಸುವುದು ಕಷ್ಟವಿದೆ. ಆದರೆ, ಅದೇ ಕಾರಣವನ್ನು ಮುಂದಿಟ್ಟುಕೊಂಡು ಮೀಸಲಾತಿ ಬೇಡ ಎಂದು ಹೇಳುವುದು ಕೂಡಾ ಸರಿಯಲ್ಲ.

ಎಲ್ಲಿಯವರೆಗೂ ಅಸಮಾನತೆ ಇರುತ್ತದೋ ಅಲ್ಲಿಯವರೆಗೂ ಅಸಮಾಧಾನವೂ ಇರುತ್ತದೆ. ಈ ಅಸಮಾನತೆ, ಅಸಮಾಧಾನವನ್ನು ತಗ್ಗಿಸಲು ಮೇಲ್ವರ್ಗ ಕೆಳವರ್ಗದ ಕಡೆಗೆ ಕೈ ಚಾಚುವ, ಅವರನ್ನೂ ಮೇಲೆತ್ತಿ ಜತೆಗೆ ಕರೆದೊಯ್ಯುವ ಉದಾರತೆಯನ್ನೂ ತೋರಬೇಕಿದೆ. ಆದರೆ, ‘ನೆಲ ಸಪಾಟಿಲ್ಲ’ ಎಂದು ಹೇಳುತ್ತಾ ಸಾಮಾಜಿಕ ಅಂತರವನ್ನು ಇನ್ನಷ್ಟು ಹಿಗ್ಗಿಸುವ ಮನಸ್ಸುಗಳು ಇರುವವರೆಗೂ ಇದೆಲ್ಲವೂ ಕೇವಲ ಆಶಯದ ನೆಲೆಗಟ್ಟಿನಲ್ಲಷ್ಟೇ ನಿಲ್ಲುತ್ತದೆ.