samachara
www.samachara.com
ಹುಟ್ಟದ ಕೂಸಿಗೆ ಮೀಸಲಾತಿ ಕುಲಾವಿ; ‘ಮುಕ್ತ ಪುಸ್ತಕ’ ಪ್ರಸ್ತಾವಕ್ಕೆ ಪವನಜ ವ್ಯಾಖ್ಯಾನ!
COVER STORY

ಹುಟ್ಟದ ಕೂಸಿಗೆ ಮೀಸಲಾತಿ ಕುಲಾವಿ; ‘ಮುಕ್ತ ಪುಸ್ತಕ’ ಪ್ರಸ್ತಾವಕ್ಕೆ ಪವನಜ ವ್ಯಾಖ್ಯಾನ!

ಮುಕ್ತ ಪುಸ್ತಕ ಪರೀಕ್ಷಾ ಪ್ರಸ್ತಾವಕ್ಕೆ ಯು.ಬಿ. ಪವನಜ ಮೀಸಲಾತಿಯ ವರ್ಗೀಕರಣದ ವ್ಯಂಗ್ಯ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಶಾಲಾ ಮಕ್ಕಳ ವಾರ್ಷಿಕ ಪರೀಕ್ಷೆಯಲ್ಲಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಕುರಿತು ಪ್ರಸ್ತಾಪಿಸಿದ್ದಾರೆ. ಈ ವಿಷಯವಿನ್ನೂ ಚರ್ಚೆಯಲ್ಲಿರುವಾಗಲೇ ಇದಕ್ಕೆ ಜಾತಿ ಬಣ್ಣವನ್ನು ಬಳಿಯುವ ಪ್ರಯತ್ನಗಳು ನಡೆಯುತ್ತಿದೆ. ಗ್ಯಾಜೆಟ್‌ಗಳ ಬಗ್ಗೆ ನಾಡಿನ ಪ್ರಮುಖ ಪತ್ರಿಕೆಯೊಂದರಲ್ಲಿ ಅಂಕಣ ಬರೆಯುವ ಯು.ಬಿ. ಪವನಜ ಎಂಬುವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್‌ ಮೀಸಲಾತಿಯ ಪರ ವಿರೋಧ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾರತದ ಸಂವಿಧಾನದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಸಹಸ್ರಮಾನಗಳಿಂದ ಶೋಷಣೆಗೆ ಒಳಗಾಗುತ್ತಲೇ ಬಂದ ಸಮುದಾಯಗಳಿಗೆ ಬೆನ್ನೆಲುಬಾಗಿ ನಿಂತು, ಈ ಸಮುದಾಯಗಳನ್ನು ಸದೃಢಗೊಳಿಸುವ ಉದ್ದೇಶ ಮೀಸಲಾತಿಯ ಹಿಂದಿತ್ತು. ಕೆಲ ವರ್ಷಗಳ ಕಾಲ ಮೀಸಲಾತಿಯನ್ನು ನೀಡಿ ಶೋಷಿತ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಗಟ್ಟಿಗೊಂಡ ನಂತರ ಮೀಸಲಾತಿಯನ್ನು ರದ್ದು ಮಾಡಬೇಕೆಂಬ ಚರ್ಚೆ ಹಿಂದಿನಿಂದಲೇ ಇದೆ. ಆದರೆ ಈವರೆಗೂ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಪೂರ್ಣವಾಗಿ ಸಿಕ್ಕಿಲ್ಲ.

ಆದರೆ ಸದ್ಯ ಚರ್ಚೆಗೆ ಗ್ರಾಸವಾಗಿರುವುದು ಇನ್ನೂ ಪ್ರಸ್ತಾವದ ಹಂತದಲ್ಲಿರುವ ಯೋಜನೆಗೆ ಜಾತಿ ಬಣ್ಣ ಬಳಿಯುವ ಪ್ರಯತ್ನ. ಯು.ಬಿ. ಪವನಜ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿರುವ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದೆ. ಪರ ವಿರೋಧ ಚರ್ಚೆಗಳಿಗಿಂತ ಹೆಚ್ಚಾಗಿ ಜಾತಿ ಹಿಡಿದು ನೋಡುವ ಮನಸ್ಥಿತಿಯನ್ನು ಇದು ಬಯಲಿಗೆ ತಂದಿದೆ.

ಪವನಜ ಅವರ  ಫೇಸ್‌ಬುಕ್‌ ಖಾತೆಯಲ್ಲಿನ ಬರಹ.
ಪವನಜ ಅವರ ಫೇಸ್‌ಬುಕ್‌ ಖಾತೆಯಲ್ಲಿನ ಬರಹ.

ಜೂನ್‌ 25ರ ಮಂಗಳವಾರದಂದು ಈ ಬರಹವನ್ನು ತಮ್ಮ ಖಾತೆಯಲ್ಲಿ ಪ್ರಕಟಿಸಿರುವ ಪವನಜ, ವ್ಯಾಪಕ ಚರ್ಚೆಗಳು ಪ್ರಾರಂಭವಾಗುತ್ತಿದ್ದಂತೆ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. ಆದ್ಯಾಗೂ ಕೂಡ ಈ ಪೋಸ್ಟ್‌ನ ಸ್ಕ್ರೀನ್‌ ಶಾಟ್‌ಗಳು ಫೇಸ್‌ಬುಕ್‌, ವಾಟ್ಸ್‌ಆಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಪವನಜ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಕೆಲವರು ಆಗ್ರಹಿಸಿದರೆ, ಇನ್ನೂ ಕೆಲವರು ಪವನಜರಂತವರಿಗೆ ಅಂಕಣ ಬರೆಯಲು ಅವಕಾಶ ನೀಡುತ್ತಿರುವ ಪತ್ರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪವನಜ ವಿರುದ್ಧ ಪತ್ರ ಚಳವಳಿ ನಡೆಸುವ ಯೋಚನೆಗಳೂ ಕೂಡ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.

ತಮ್ಮ ಪೋಸ್ಟ್‌ ಬಗ್ಗೆ ಫೇಸ್‌ಬುಕ್‌ಗಳಲ್ಲಿ ಬಂದ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದೇ ‘ಸಮಾಚಾರ’ದ ಜತೆ ಮಾತು ಆರಂಭಿಸಿದ ಯು.ಬಿ. ಪವನಜ, ಪುಸ್ತಕಗಳನ್ನು ನೋಡಿ ಪರೀಕ್ಷೆ ಬರೆಯುವುದು ಮತ್ತು ಜಾತಿ ಆಧಾರಿತ ಮೀಸಲಾತಿಗಳು ಎಷ್ಟು ಸೂಕ್ತ ಎನ್ನುವುದರ ಬಗ್ಗೆ ತಾವೇ ಸುದೀರ್ಘವಾದ ಅಂಕಿ ಅಂಶಗಳನ್ನು ಒಳಗೊಂಡ ಲೇಖನಗಳನ್ನು ಬರೆಯುವುದಾಗಿ ತಿಳಿಸಿದರು.

ನಾನೂ ಕೂಡ ಫೇಸ್‌ಬುಕ್‌ನಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸುತ್ತಿದ್ದೇನೆ. ಅವರವರ ವಾಲ್‌ಗಳಲ್ಲಿ ತಮಗೆ ತೋಚಿದ್ದನ್ನು ಬರೆಯುತ್ತಿದ್ದಾರೆಯೇ ವಿನಃ ನನ್ನ ವಾಲ್‌ನಲ್ಲಿ ಹೆಚ್ಚಿನ ವಿರೋಧಿ ಪ್ರಕ್ರಿಯೆಗಳು ಬಂದಿಲ್ಲ. ವಿರೋಧಿಸುತ್ತಿರುವವರು ಬಹುಪಾಲು ಕನ್ನಡ, ಸಮಾಜ ಶಾಸ್ತ್ರದ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರುಗಳು. ತಂತ್ರಜ್ಞಾನ ವಲಯದ ಬಗ್ಗೆ ಅವರಿಗೆ ತಿಳಿದಿಲ್ಲ. ಬೇರೆಯವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಜಾತಿ ಆಧಾರಿತ ಮೀಸಲಾತಿ ಬಗ್ಗೆ ನನಗೆ ಸಹಮತವಿಲ್ಲ. ಈ ಕುರಿತು ನಾನೇ ದೀರ್ಘವಾದ ಲೇಖನಗಳನ್ನು ಬರೆಯುತ್ತೇನೆ.
ಯು.ಬಿ. ಪವನಜ

ಈ ಬೆಳವಣಿಗೆಗಳ ಬಗ್ಗೆ ‘ಸಮಾಚಾರ’ದ ಜತೆ ಮಾತನಾಡಿದ ಡಾ.ಸಿ.ಎಸ್‌. ದ್ವಾರಕಾನಾಥ್‌, “ಮೀಸಲಾತಿಯನ್ನು ಇಲ್ಲವಾಗಿಸಲು ಹೊರಟಿರುವವರ ಮನಸ್ಥಿತಿ ಯತಾಸ್ಥಿತಿವಾದವನ್ನು ಒಪ್ಪಿಕೊಂಡಿರುತ್ತದೆ. ಅವರಿಗೆ ಬದಲಾವಣೆ ಬೇಕಿರುವುದಿಲ್ಲ. ಇಲ್ಲೂ ಕೂಡ ಅದೇ ಆಗುತ್ತಿದೆ. ಶ್ರಮ ಸಂಸ್ಕೃತಿಯವರು ಕೆಲಸ ಮಾಡುವುದು ಬೆರಳುಗಳಿಂದ, ಮೆದುಳಿನಿಂದಲ್ಲ. ಮೊದಲಿನಿಂದಲೂ ಕಂಠಪಾಠ ಮಾಡಿ ಪರೀಕ್ಷೆ ಬರೆಯುತ್ತಿದ್ದವರಿಗೆ ಇದನ್ನು ಒಪ್ಪಲಾಗುತ್ತಿಲ್ಲ ಅಷ್ಟೇ,” ಎಂದರು.

ಭಾರತದಲ್ಲಿ ಮೀಸಲಾತಿ ವಿರೋಧಿ ಮನಸ್ಥಿತಿಗಳು:

ಭಾರತದಲ್ಲಿ ಮೀಸಲಾತಿ ಆರಂಭವಾದ ಕಾಲದಿಂದಲೂ ಕೂಡ ಮೀಸಲಾತಿ ವಿರೋಧಿ ಮನಸ್ಥಿತಿಗಳು ಬೆಳೆಯುತ್ತಲೇ ಬಂದಿವೆ. ಭಾರತೀಯ ಸಂವಿಧಾನ ಹೇಳುವ ‘ಸಮಾನತೆ’ ಭಾರತದಲ್ಲಿ ಉಳಿಯಬೇಕು ಎಂದರೆ ಮೀಸಲಾತಿ ಅಳಿಯಬೇಕು ಎಂಬ ವಾದ ಬಲಪಂಥೀಯರ ಮನಸ್ಸುಗಳಲ್ಲಿದೆ. ಮೀಸಲಾತಿ ವ್ಯವಸ್ಥೆಯು ಅರ್ಹತೆಯುಳ್ಳವರನ್ನು ಹಿಂದೆ ಸರಿಸಿ, ಅರ್ಹತೆ ಇಲ್ಲದವರಿಗೆ ಅವಕಾಶ ನೀಡುತ್ತದೆ ಎನ್ನುವುದು ಬುಹುಪಾಲು ಮೀಸಲಾತಿ ವಿರೋಧಿಗಳ ವಾದ.

‘ದಿ ಇರಿಟೇಟೆಡ್‌ ಇಂಡಿಯನ್‌’ ಎಂಬ ಆಂಗ್ಲ ಜಾಲತಾಣವೊಂದರಲ್ಲಿ ಪ್ರಕಟಗೊಂಡಿರುವ ‘ಮೀಸಲಾತಿ ವಿರೋಧಿಸಲು 19 ಕಾರಣಗಳು’ ಎಂಬ ಲೇಖನದಲ್ಲಿ ಮೀಸಲಾತಿ ಏಕೆ ಬೇಡ ಎಂಬ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಆಧಾರ ರಹಿತವಾದ, ತರ್ಕವಿಲ್ಲದ ಈ ಮಾಹಿತಿಗಳು ಭಾರತದ ಮೀಸಲಾತಿ ವಿರೋಧಿ ಪಡೆಯ ಭೌದ್ಧಿಕ ಉಡಾಳತನವನ್ನು ಸೂಚಿಸುತ್ತದೆ. ಮೀಸಲಾತಿ ನಾಶವಾಗದಿದ್ದರೆ ಭಾರತ ನಾಶವಾಗುತ್ತದೆ ಎನ್ನುವ ಈ ಲೇಖನದ ಪ್ರಕಾರ ಮೀಸಲಾತಿಯಿಂದ ಭಾರತದ ಏಕೆತೆಗೆ ಮತ್ತು ಸಮಾನತೆಗೆ ದಕ್ಕೆಯುಂಟಾಗುತ್ತಿದೆಯಂತೆ.

ಮೀಸಲಾತಿಯ ಅಗತ್ಯವೇನು?:

ನೇರವಾಗಿ ಜಾತಿ ಆಧಾರಿತ ಮೀಸಲಾತಿ ಬೇಡ ಎಂದು ಸಾರ್ವಜನಿಕವಾಗಿ ಹೇಳಲಾಗದೇ, ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ವಾದಿಸುವ ದೊಡ್ಡ ಪಡೆಯೇ ಭಾರತದಲ್ಲಿದೆ. ತಜ್ಞರು, ತಂತ್ರಜ್ಞರು, ಉಪಾಧ್ಯಾಯರು, ಪ್ರಾಧ್ಯಾಪಕರು, ಶಿಕ್ಷಕರು ಹೀಗೆ ಎಲ್ಲಾ ವರ್ಗದ ಜನರೂ ಕೂಡ ಈ ಪಡೆಯ ಭಾಗವಾಗಿದ್ದಾರೆ. ಮುಂದಿನ ಪೀಳಿಗೆಗೆ ಮೀಸಲಾತಿ ಏನು ಎಂದು ಅರ್ಥೈಸುವುದರ ಬದಲು, ಕೇವಲ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಬಿತ್ತುವ ಕೆಲಸವನ್ನಷ್ಟೇ ಇವರು ಮಾಡುತ್ತಿದ್ದಾರೆ.

“ಮೊದಲಿನಿಂದಲೂ ಋಷಿಮುನಿಗಳು, ಅರ್ಚಕರು, ಪ್ರಾಧ್ಯಾಪಕರು, ಶಿಕ್ಷಕರು ಹೇಳಿದ್ದನ್ನೇ ಕೇಳಿಕೊಂಡು ಬಂದಿರುವವರು ನಾವು. ನಮ್ಮಲ್ಲಿ ಮುಂದೆಯೂ ಕೂಡ ಅವರ ಮಾತುಗಳನ್ನು ಕೇಳಿಕೊಂಡು ಹೋಗಬೇಕು ಎನ್ನುವವರೇ ಹೆಚ್ಚು. ಆದ್ದರಿಂದಾಗಿ ಈ ಮೀಸಲಾತಿ ವಿರೋಧಿ ಧೋರಣೆ ಕೇವಲ ಮೇಲ್ಜಾತಿಗಳಲ್ಲಷ್ಟೇ ಅಲ್ಲ, ಎಲ್ಲಾ ವರ್ಗಗಳಲ್ಲೂ ಇದೆ,” ಎನ್ನುತ್ತಾರೆ ದ್ವಾರಕಾನಾಥ್‌.

ಮೀಸಲಾತಿಯಿಂದಾಗಿ ಸವರ್ಣೀಯ ಜಾತಿಗಳ ಕೆಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಿನ್ನಡೆಯುಂಟಾಗಿದೆ ಎನ್ನುವುದೇನೋ ನಿಜ. ಅದರಿಂದಲೇ ದೇಶ ಹಿಂದುಳಿಯುತ್ತಿದೆ ಎಂಬ ವಾದವನ್ನು ಒಪ್ಪಲಾಗದು.

ಶತಶತಮಾನಗಳಿಂದಲೂ ತುಳಿತಕ್ಕೆ ಒಳಪಟ್ಟ ಸಮುದಾಯಗಳನ್ನು ಮೇಲೆತ್ತುವ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸುವ ಕಾರಣದಿಂದಾಗಿ ಮೀಸಲಾತಿ ಜಾರಿಗೆ ಬಂದಿದೆ. ಮೀಸಲಾತಿ ಇರದಿದ್ದರೆ ಶೋಷಿತ ಸಮುದಾಯಗಳಿಗೆ ಬಹುಪಾಲು ಅವಕಾಶಗಳು ದೊರೆಯುತ್ತಲೇ ಇರಲಿಲ್ಲ ಎನ್ನುವುದನ್ನು ಅಲ್ಲಗೆಳೆಯಲಾಗದು. ಸಮಾಜದಲ್ಲಿನ ಎಲ್ಲರೂ ಕೂಡ ಸಮಾನವಾದ ಅವಕಾಶಗಳನ್ನು ಪಡೆಯಲು ಮೀಸಲಾತಿ ದಾರಿಯಾಗಿ ಕಾಣಿಸಿಕೊಂಡಿದೆ ಎನ್ನುವ ವಾದಗಳು ಮೀಸಲಾತಿ ಪರ ಮನಸ್ಸುಗಳಿಂದ ಕಡೆಯಿಂದ ದೊರೆಯುತ್ತದೆ.

ಮೀಸಲಾತಿ ಏಕೆ ಬೇಕು ಎಂಬುದನ್ನು ಇದಕ್ಕಿಂತ ಸರಳವಾಗಿ ಹೇಳಲು ಸಾಧ್ಯವಿಲ್ಲ
ಮೀಸಲಾತಿ ಏಕೆ ಬೇಕು ಎಂಬುದನ್ನು ಇದಕ್ಕಿಂತ ಸರಳವಾಗಿ ಹೇಳಲು ಸಾಧ್ಯವಿಲ್ಲ

ಮೀಸಲಾತಿ ಕೇವಲ ದಲಿತ ಸಮುದಾಯವನ್ನಷ್ಟೇ ಪೋಷಿಸುತ್ತಿದೆ ಎಂದು ದೇಶದ ಬಹುತೇಕ ಮೀಸಲಾತಿ ವಿರೋಧಿಗಳು ನಂಬಿದ್ದಾರೆ. ಇವರಲ್ಲಿ ಬಹುಪಾಲು ಜನರಿಗೆ ಯಾರಿಗೆ ಎಷ್ಟು ಮೀಸಲಾತಿ ದೊರೆಯುತ್ತಿದೆ ಎಂಬ ನಿರ್ದಿಷ್ಟ ಅಂಕಿ ಅಂಶಗಳ ಮಾಹಿತಿ ಇಲ್ಲ.

ಭಾರತದಲ್ಲಿ ಜಾತಿ ಆಧಾರಿತ ಮೀಸಲಾತಿ ಎಲ್ಲ ಭಾಗಗಳಲ್ಲಿಯೂ ಒಂದೇ ರೀತಿಯಲ್ಲಿಲ್ಲ. ರಾಜ್ಯ ರಾಜ್ಯಕ್ಕೂ ಕೂಡ ಮೀಸಲಾತಿಯ ಶೇಕಡವಾರು ಅಂಕಿ ಅಂಶಗಳು ಬದಲಾಗುತ್ತಾ ಸಾಗುತ್ತವೆ. ಹರಿಯಾಣದಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ.18, ಹಿಂದುಳಿದ ವರ್ಗಗಳಿಗೆ ಶೇ.1ರಷ್ಟು ಮೀಸಲಾತಿಯಿದೆ. ಎಸ್‌ಟಿ ಜನಾಂಗಕ್ಕೆ ಯಾವುದೇ ಮೀಸಲಾತಿಯಿಲ್ಲ.

ಕೇರಳದಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ.18 ಮೀಸಲಾತಿಯಿದ್ದರೆ, ಎಸ್‌ಟಿಗೆ ಶೇ.1 ಮಾತ್ರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಶೇ.29ರಷ್ಟು ಶೈಕ್ಷಣಿಕ ಸೀಟುಗಳು ಮತ್ತು ಸರಕಾರಿ ಹುದ್ದೆಗಳು ಇತರೆ ಹಿಂದುಳಿದ ವರ್ಗಕ್ಕೆ ದೊರೆತಿವೆ. ಹಿಂದುಳಿದ ವರ್ಗಗಳಿಗೆ ಹೋಲಿಸಿದರೆ, ಎಸ್‌ಸಿ ಎಸ್‌ಟಿ ಸಮುದಾಯವೇ ಆಂಧ್ರದಲ್ಲಿ ಕಡಿಮೆ ಮೀಸಲಾತಿ ಹೊಂದಿವೆ.

ಕರ್ನಾಟಕದಲ್ಲಿ ಶೇ.32ರಷ್ಟು ಮೀಸಲಾತಿ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಜನರೇ ಅನುಭವಿಸುತ್ತಿದ್ದಾರೆ. ಹೀಗಿದ್ದಾಗೂ ಕೂಡ ಕೇವಲ ದಲಿತ ಸಮುದಾಯವಷ್ಟೇ ಹೆಚ್ಚಿನ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿದೆ.

ಪವನಜ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದ ಮಾಹಿತಿಯೂ ಕೂಡ ಇಂತಹದ್ದೇ ತರ್ಕರಹಿತ, ಕೇವಲ ಜಾತಿಯನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡಿರುವ ಹೇಳಿಕೆಯಷ್ಟೇ ಎಂಬ ಮಾತುಗಳು ಕೇಳಿ ಬಂದಿವೆ. ಎಸ್‌ಸಿ ವಿದ್ಯಾರ್ಥಿಗಳು 10 ಪುಸ್ತಕಗಳು, ಎಸ್‌ಟಿ 7, ಓಬಿಸಿ ವಿದ್ಯಾರ್ಥಿಗಳು 3 ಪುಸ್ತಕಗಳು, ಜನರಲ್‌ ವಿದ್ಯಾರ್ಥಿಗಳು 1 ಪುಸ್ತಕವನ್ನು ನೋಡಿ ಪರೀಕ್ಷೆ ಬರೆಯಬಹುದು, ಆದರೆ ಬ್ರಾಹ್ಮಣರಿಗೆ ಮಾತ್ರ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಅವಕಾಶವಿಲ್ಲ ಎನ್ನುವ ರೀತಿಯಲ್ಲಿ ಪವನಜ ಮೀಸಲಾತಿಯ ಕುರಿತು ವ್ಯಂಗ್ಯವಾಡಿದ್ದಾರೆ. ಜತೆಗೆ ಶಿಕ್ಷಣ ಸುಧಾರಣೆಯ ಚರ್ಚೆಯನ್ನೇ ಹಾದಿ ತಪ್ಪಿಸಲೂ ಯತ್ನಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

ಅಗತ್ಯವೇ ಇಲ್ಲದೆಡೆ ಜಾತಿ ತಂದು, ಮೀಸಲಾತಿಯ ಪ್ರಸ್ತಾಪ ಮಾಡಿರುವುದು, ಭಾರತದಲ್ಲಿ ಜಾತಿ ವ್ಯವಸ್ಥೆಯ ಮನಸ್ಥಿತಿ ಹೇಗಿದೆ ಎನ್ನುವುದಕ್ಕೆ ಕೈಗನ್ನಡಿ ಹಿಡಿದಂತಿದೆ. ಇನ್ನೂ ಕಲ್ಪನೆಯಲ್ಲಿರುವ ಕೂಸಿಗೆ ಆದಾಗಲೇ ಜಾತಿಯ ಕುಲಾವಿ ತೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಧುನಿಕ ಕಾಲದಲ್ಲೂ ಸನಾತನ ಮನಸ್ಥಿತಿ ಯಾವ ಬಗೆಯಲ್ಲಿ ಅಸ್ವಸ್ಥಗೊಂಡಿದೆ ಎಂಬುದಕ್ಕೆ ಈ ಬೆಳವಣಿಗೆ ಉದಾಹರಣೆಯಷ್ಟೇ.