samachara
www.samachara.com
‘ಸಮ್ಮಿಶ್ರ ಕಿತ್ತಾಟ’ದಲ್ಲಿ ನೀರಲ್ಲಿ ಹೋಮವಾದ 300 ಕೋಟಿ ಚುನಾವಣೆ!
COVER STORY

‘ಸಮ್ಮಿಶ್ರ ಕಿತ್ತಾಟ’ದಲ್ಲಿ ನೀರಲ್ಲಿ ಹೋಮವಾದ 300 ಕೋಟಿ ಚುನಾವಣೆ!

ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಇತ್ತೀಚಿನ ರಾಜಕೀಯ ಬೆಳವಣಿಗೆಗಳೇ ಸಾರಿ ಹೇಳುತ್ತಿವೆ. ತಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳ ರಾಜಕೀಯ ನಾಟಕವನ್ನು ಸಮ್ಮಿಶ್ರ ಸರಕಾರದ ಪರದೆ ಮೇಲೆ ನೋಡುವ ಸರದಿ ಈಗ ರಾಜ್ಯದ ಪ್ರಜೆಗಳದ್ದು

ದಯಾನಂದ

ದಯಾನಂದ

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಈ ಹಿಂದೆ ಬಿಜೆಪಿ ಜತೆಗೆ ಸರಕಾರ ರಚಿಸಿದ ಪಾಪ ತೊಳೆದುಕೊಳ್ಳಲು ಸಿಕ್ಕ ಹೊಸ ಅವಕಾಶ ಎಂದು ಕಾಂಗ್ರೆಸ್‌ ಜತೆಗಿನ ಮೈತ್ರಿಯನ್ನು ಒಪ್ಪಿಕೊಂಡಿದ್ದ ಕುಮಾರಸ್ವಾಮಿ, ಒಂದು ತಿಂಗಳ ಅಂತರದಲ್ಲೇ ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದ್ದಾರೆ.

ರಾಜ್ಯದಲ್ಲಿ ತಿಂಗಳುಗಳ ಹಿಂದೆ ನಡೆದ ಚುನಾವಣೆಗೆ ಚುನಾವಣಾ ಆಯೋಗ ಖರ್ಚು ಮಾಡಿದ್ದು ಸುಮಾರು 300 ಕೋಟಿ ರೂಪಾಯಿ. ಅಕ್ರಮ ಹಣ ಸಾಗಣೆ ಪತ್ತೆ ಹಾಗೂ ದಾಳಿಗಳಿಂದ ಚುನಾವಣಾ ಆಯೋಗ ವಶ ಪಡಿಸಿಕೊಂಡ ಹಣ ಸುಮಾರು 120 ಕೋಟಿ. ಚುನಾವಣೆಗಾಗಿ ರಾಜ್ಯದಲ್ಲಿ ಕೆಲಸ ಮಾಡಿದ ಸಿಬ್ಬಂದಿ ಸಂಖ್ಯೆ ಸುಮಾರು 12 ಸಾವಿರ.

ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಮಾತ್ರವಲ್ಲ ಮಾಧ್ಯಮಗಳ ವಿರುದ್ಧವೂ ಚುನಾವಣಾ ಆಯೋಗಕ್ಕೆ ಹಲವು ದೂರುಗಳು ಬಂದಿದ್ದವು. ಚುನಾವಣಾ ಆಯೋಗಕ್ಕೆ ಬಂದ ಈ ದೂರುಗಳ ಪೈಕಿ ರಾಜ್ಯದ ಸುದ್ದಿವಾಹಿನಿಯೊಂದರ ವಿರುದ್ಧವೇ ಸುಮಾರು ಶೇಕಡ 90ರಷ್ಟು ದೂರುಗಳು ಬಂದಿದ್ದವು ಎನ್ನುತ್ತವೆ ಚುನಾವಣಾ ಆಯೋಗದ ಮೂಲಗಳು!

ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದು ಒಂದು ತಿಂಗಳು ಕಳೆದರೂ ಸರಕಾರದ ಮಟ್ಟದಲ್ಲಿ ಒಂದೇ ಒಂದು ಪ್ರಮುಖ ನಿರ್ಣಯವೂ ಹೊರ ಬಿದ್ದಿಲ್ಲ. ಜೆಡಿಎಸ್‌- ಕಾಂಗ್ರೆಸ್ ದೋಸ್ತಿ ಜಗಳದಲ್ಲಿ 300 ಕೋಟಿ ಹಣ ಹಾಗೂ 12 ಸಾವಿರ ಸಿಬ್ಬಂದಿಯ ಶ್ರಮ ನೀರಲ್ಲಿ ಹೋಮ ಮಾಡಿದಂತಾಗುತ್ತಿದೆ.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ವಾರದ ಅಂತರದಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡ ರಾಜ್ಯದ ಜನತೆ ಈಗ ಸಮ್ಮಿಶ್ರ ಸರಕಾರದ ಹಗ್ಗಜಗ್ಗಾಟದ ನಾಟಕವನ್ನು ನೋಡುವಂತಾಗಿದೆ. ಸಮ್ಮಿಶ್ರ ಸರಕಾರ ಎಂದರೇ ಕಚ್ಚಾಟದ ರಾಜಕಾರಣ ಎಂಬ ಲೋಕಾರೂಢಿಯ ಮಾತಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಕಡೆಯಿಂದ ಈಗ ಅಧಿಕೃತ ಮುದ್ರೆ ಬೀಳುತ್ತಿದೆ.

ಸಮ್ಮಿಶ್ರ ಸರಕಾರವನ್ನು ಸಮತೋಲನವಾಗಿ ನಡೆಸಿಕೊಂಡು ಹೋಗಬೇಕಾದ ಸಮನ್ವಯ ಸಮಿತಿಯ ಮುಖ್ಯಸ್ಥ ಸ್ಥಾನದಲ್ಲಿರುವ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಆಡಿರುವ ಮಾತು ಈಗ ಕುಮಾರಸ್ವಾಮಿ ಅವರನ್ನು ಕೆಣಕಿದೆ. ಹೀಗಾಗಿಯೇ ಕುಮಾರಸ್ವಾಮಿ ಈಗ ತಮಗೆ ಯಾರ ಮುಲಾಜೂ ಇಲ್ಲ ಎಂದು ಹೇಳುತ್ತಿದ್ದಾರೆ.

ಈ ಮೊದಲು ಸಾಲ ಮನ್ನಾ ವಿಚಾರದಲ್ಲಿ ನಾನು ಸಂದರ್ಭದ ಶಿಶು, ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಹೇಳಿದ್ದ ಕುಮಾರಸ್ವಾಮಿ ಈಗ, “ನಾನು ಯಾರ ಮುಲಾಜಿನಲ್ಲೂ ಇಲ್ಲ. ಆದರೆ, ಬಜೆಟ್‌ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ” ಎಂದಿದ್ದಾರೆ.

ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಮಾತನಾಡುವ ವೇಳೆ ಹೊಸದಾಗಿ ಬಜೆಟ್‌ ಮಂಡನೆ ವಿಷಯವಾಗಿ ಆಡಿರುವ ಮಾತು ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಹೊಸದಾಗಿ ಬಜೆಟ್‌ ಮಂಡಿಸುವ ಅಗತ್ಯವಿಲ್ಲ ಎಂಬ ಸಿದ್ದರಾಮಯ್ಯ ಮಾತಿಗೆ ಕುಮಾರಸ್ವಾಮಿ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಹಾಗೆ ನೋಡಿದರೆ ಸರಕಾರ ರಚನೆಗಾಗಿ ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಹೇಳಿಕೊಂಡು ತಾನೇ ಮುಂದೆ ಬಂದಿದ್ದು ಕಾಂಗ್ರೆಸ್‌. ಹಾಗೆಯೇ ಸಮ್ಮಿಶ್ರ ಸರಕಾರದ ಅರೆಕೊರೆಗಳ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಶಮನ ಬಗೆಹರಿಸಿಕೊಳ್ಳಬೇಕಾಗುತ್ತದೆ. ಆದರೆ, ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಆಡಿರುವ ಮಾತು ಸಮ್ಮಿಶ್ರ ಸರಕಾರದ ಸಂಬಂಧ ಹಳಸಲು ಸಾಕಾಗುವಷ್ಟಿದೆ.

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಮುಂದಿನ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಆದರೆ, ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಸಮಿತಿ ಇನ್ನೂ ಅಂತಿಮ ಸಭೆಯನ್ನೇ ನಡೆಸಿಲ್ಲ. ಜೂನ್‌ 29ಕ್ಕೆ ಸಿಎಂಪಿ ಅಂತಿಮ ಸಭೆ ನಿಗದಿಯಾಗಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಹೊಸದಾಗಿ ಬಜೆಟ್‌ ಮಂಡಿಸುವ ಅನಿವಾರ್ಯತೆ ಸಮ್ಮಿಶ್ರ ಸರಕಾರಕ್ಕಿದೆ. ಆದರೆ, ಹೊಸದಾಗಿ ಬಜೆಟ್‌ ಅಗತ್ಯವಿಲ್ಲ, ಹಳೆಯ ಬಜೆಟ್‌ ಮುಂದುವರಿಸಲಿ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ

“ಅನುಭವಿ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಈಗ ಸಮ್ಮಿಶ್ರ ಸರಕಾರವನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಹೀಗೆ ಮಾತನಾಡಿರುವುದು ಸರಿಯಲ್ಲ. ಜೆಡಿಎಸ್‌ಗೆ ಕೂಡಾ ತನ್ನ ಪ್ರಣಾಳಿಕೆಯ ಕೆಲವಾದರೂ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಸೇರಿಸುವ ಅನಿವಾರ್ಯತೆ ಇರುತ್ತದೆ” ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜಕಾರಣಿಯೊಬ್ಬರು.

“ಒಂದು ಕುಟುಂಬದಲ್ಲೇ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಹಾಗೆಯೇ ಸಮ್ಮಿಶ್ರ ಸರಕಾರದಲ್ಲಿ ಕೆಲವು ಅಪಸ್ವರಗಳು ಇರುತ್ತದೆ. ಅವನ್ನೆಲ್ಲಾ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಆದರೆ, ಸರಿದೂಗಿಸಬೇಕಾದ ಸ್ಥಾನದಲ್ಲಿರುವವರೇ ಅಪಸ್ವರ ಎತ್ತಿದರೆ ಏನು ಮಾಡಬೇಕು” ಎಂಬ ಪ್ರಶ್ನೆ ಅವರದ್ದು.

“ಸರಕಾರದೊಳಗೆ ಬೇರೆ ಯಾರೋ ಈ ಮಾತುಗಳನ್ನು ಆಡಿದ್ದರೆ ಕುಮಾರಸ್ವಾಮಿ ಇದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ಸಮನ್ವಯದ ಹೊಣೆಗಾರಿಕೆ ಇರುವ ಸಿದ್ದರಾಮಯ್ಯ ಅವರೇ ಈ ರೀತಿ ಮಾತನಾಡಿರುವುದು ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೇ ಕಾಣುವಂತಿದೆ” ಎನ್ನುತ್ತಾರೆ ಅವರು.

ರಾಜಕೀಯ ವ್ಯವಸ್ಥೆಯಲ್ಲಿ ವೈಚಾರಿಕತೆ ಇಲ್ಲದೇ ಹೋದರೆ ಅದು ತನ್ನನ್ನು ತಾನೇ ಬೆತ್ತಲು ಮಾಡಿಕೊಳ್ಳುತ್ತದೆ. ವೈಚಾರಿಕತೆಯ ಕೊರತೆ ಈಗಿನ ಬಿಕ್ಕಟ್ಟಿಗೆ ಕಾರಣ.
- ಡಾ. ಹರೀಶ್‌ ರಾಮಸ್ವಾಮಿ, ಹಿರಿಯ ರಾಜಕೀಯ ವಿಶ್ಲೇಷಕ

“ಸಮ್ಮಿಶ್ರ ಸರಕಾರದಲ್ಲಿ ಉತ್ತಮ ಆಡಳಿತ ನೀಡುವುದು ಹೇಗೆ ಎಂಬುದಕ್ಕೆ ಇಸ್ರೇಲ್‌ ಒಂದು ಉತ್ತಮ ಉದಾಹರಣೆ. ಹಲವು ಸಮ್ಮಿಶ್ರ ಸರಕಾರಗಳನ್ನು ಕಂಡಿರುವ ಇತಿಹಾಸ ಇಸ್ರೇಲ್‌ಗೆ ಇದೆ. ಅಲ್ಲಿ ಸಮ್ಮಿಶ್ರ ಸರಕಾರದ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಆದರೆ, ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವ ಅನುಭವ ಕಡಿಮೆ. ಹೀಗಾಗಿ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ.

“ಸಾಮಾನ್ಯವಾಗಿ ಸಮ್ಮಿಶ್ರ ಸರಕಾರಗಳಲ್ಲಿ ಫಲಿತಾಂಶ ಚೆನ್ನಾಗಿರುತ್ತದೆ. ಬೇರೆ ಬೇರೆ ಪಕ್ಷಗಳು ಒಂದಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿಕೊಂಡು ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿಕೊಂಡು ಹೋಗಲಾಗುತ್ತದೆ. ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿಯೂ ಸಮನ್ವಯ ಸಮಿತಿಯ ಮೇಲಿರುತ್ತದೆ. ಇಲ್ಲಿ ಸಿದ್ದರಾಮಯ್ಯ ತಾವು ಮಂಡಿಸಿರುವ ಬಜೆಟ್‌ ಅನ್ನೇ ಮುಂದುವರಿಸಬೇಕು ಎಂದು ಹೇಳಿರುವುದು ಸಹಜವಾಗಿಯೇ ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣವಾಗಿದೆ” ಎಂಬುದು ಅವರ ಅಭಿಪ್ರಾಯ.

“ಸರಕಾರ ರಚನೆಗೆ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್‌ನವರೇ ಮುಂದೆ ಬಂದು ಈಗ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕುಮಾರಸ್ವಾಮಿ ಕೋಪಗೊಂಡಿದ್ದಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಇನ್ನೂ ವರದಿಯನ್ನೇ ಕೊಟ್ಟಿಲ್ಲ. ಅದರ ಮಧ್ಯೆಯೇ ಬಜೆಟ್‌ ಮಂಡಿಸಬೇಕೇ, ಬೇಡವೇ ಎಂಬ ಚರ್ಚೆಗಳು ನಡೆಯುತ್ತಿವೆ. ಹಳೆಯ ಸರಕಾರವನ್ನು ನಡೆಸುತ್ತಿದ್ದ ಪಕ್ಷದ ಜತೆಗೇ ಸಮ್ಮಿಶ್ರ ಸರಕಾರ ರಚಿಸಿದಾಗ ಈ ಹಿಂದಿನ ಬಜೆಟ್‌ ಅನ್ನೇ ಮುಂದುವರಿಸಬೇಕೆಂಬ ನಿಯಮವೇನೂ ಇಲ್ಲ” ಎನ್ನುತ್ತಾರೆ ಅವರು.

“ಹೊಸದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದವರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಕೆಲವು ಭರವಸೆಗಳನ್ನಾದರೂ ಈಡೇರಿಸುವ ಇರಾದೆ ಹೊಂದಿರುತ್ತಾರೆ. ಅದಕ್ಕೆ ಅವಕಾಶ ಸಿಗದೇ ಇದ್ದರೆ ಸಮ್ಮಿಶ್ರ ಸರಕಾರ ಸುಗಮವಾಗಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ತಾಂತ್ರಿಕ ಬುದ್ಧಿಗಿಂತ ರಾಜಕೀಯ ಬುದ್ಧಿಯೇ ಹೆಚ್ಚಾಗಿರುವುದು ಈ ಸಮಸ್ಯೆಗಳಿಗೆಲ್ಲ ಮೂಲ ಕಾರಣ” ಎಂಬುದು ಅವರ ಮಾತು.

ರಾಜಕೀಯಕ್ಕೆ ವೈಚಾರಿಕತೆ ಬೇಕಿದ್ದರೂ ವೈಚಾರಿಕತೆ ಇರುವವರನ್ನು ಸದ್ಯದ ನಮ್ಮ ರಾಜಕೀಯ ವ್ಯವಸ್ಥೆ ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಿರುವಾಗ ಜನರ ತೆರಿಗೆಯ ಕೋಟಿ ಕೋಟಿ ಹಣ ಖರ್ಚು ಮಾಡಿ ಚುನಾವಣೆ ನಡೆಸಿ ಜನಪ್ರತಿನಿಧಿಗಳನ್ನು ಆರಿಸಿಕಳಿಸುವ ವ್ಯವಸ್ಥೆಯು ಕೊನೆಗೆ ರಾಜಕೀಯ ಕಚ್ಚಾಟಗಳಿಗೆ ವೇದಿಕೆಯಾಗುವುದು ಪ್ರಜಾಪ್ರಭುತ್ವದ ಅಣಕದಂತೆ ಕಾಣುತ್ತದೆ.