samachara
www.samachara.com
ಶರಾವತಿಯಂಚಿನ ಕಥೆ-ವ್ಯಥೆ; ಬೆಂಗಳೂರಿನ ‘ಕಾರು-ಬಾರಿ’ಗೇಕೆ ಕಾನನದ ನೀರು? 
COVER STORY

ಶರಾವತಿಯಂಚಿನ ಕಥೆ-ವ್ಯಥೆ; ಬೆಂಗಳೂರಿನ ‘ಕಾರು-ಬಾರಿ’ಗೇಕೆ ಕಾನನದ ನೀರು? 

ಇಲ್ಲಿನವರಿಗೆ ಬೇಸಿಗೆಯಲ್ಲಿ ಕುಡಿಯುವ ನೀರೇ ಸರಿಯಾಗಿ ಲಭ್ಯವಾಗುತ್ತಿಲ್ಲ. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂಧಿಸುವುದನ್ನು ಬಿಟ್ಟು ದೂರದ ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಎಂದರೆ ಸ್ಥಳೀರ ಆಕ್ರೋಶ ಸಹಜವಾಗಿಯೇ ಹುಟ್ಟುತ್ತದೆ. 

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ ಜೋಗ ಸಮೀಪ ಇದೆ ಕಾರ್ಗಲ್ ಪಟ್ಟಣ. ಶರಾವತಿ ಅಣೆಕಟ್ಟು ಲಿಂಗನಮಕ್ಕಿಯಿಂದ 5 ಕಿ. ಮೀ ಹಾಗೂ ಸಾಗರದಿಂದ 30 ಕಿ. ಮೀ ದೂರದಲ್ಲಿದೆ. ಇಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರೇ ಸರಿಯಾಗಿ ಲಭ್ಯವಾಗುತ್ತಿಲ್ಲ. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂಧಿಸುವುದನ್ನು ಬಿಟ್ಟು ದೂರದ ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಎಂಬ ಮಾತುಗಳೀಗ ಇಲ್ಲಿ ಕೇಳಿಬರುತ್ತಿವೆ. ಸಹಜವಾಗಿಯೇ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ಯಾವ ಸ್ಥಿತಿಯಲ್ಲಿದೆ?:

ಸಣ್ಣಗೆ ಚಳಿ ಕೊರೆಯುವ ಮುಂಜಾವು, ಜುಮುರು ಮಳೆ, ಕಾಡನ್ನು ಸೀಳಿ ಮಲಗಿದ ರಸ್ತೆ. ಒಂದೆಡೆ ತನ್ನ ಪಾಡಿಗೆ ತಾನು ಹರಿಯುತ್ತಿರುವ ಶರಾವತಿ. ದುತ್ತೆಂದು ಎದುರಾಗುವ ತಿರುವುಗಳು. ಹೊಸನೋಟಕ್ಕೆ ಸುಂದರ ತಾಣ. ಹೊರಗಿನವರು ಇಲ್ಲಿಗೆ ಬಂದರೆ, ‘ನೀವೆಷ್ಟು ಅದೃಷ್ಟವಂತರು’ ಎಂಬ ಉದ್ಘಾರವೊಂದು ಸಾಮಾನ್ಯವಾಗಿ ಇಲ್ಲಿನ ಜನರ ಬಗೆಗೆ ಕೇಳಿಬರುತ್ತದೆ.

ಕಾರ್ಗಲ್ ಕಡೆಗೆ ಕಾಲಿಟ್ಟರೆ ಸುತ್ತೆಲ್ಲ ಹಸಿರು ತುಂಬಿದ ಸಹ್ಯಾದ್ರಿ ಪರ್ವತ ತಪ್ಪಲಿನಲ್ಲಿ ಪ್ರಯಾಣ. ಕೆಲವು ಕಡೆಗಳಲ್ಲಿ ಹರಿವೇ ಇಲ್ಲವೇನೋ ಎಂಬಷ್ಟು ಶಾಂತವಾಗಿರುವ ಶರಾವತಿ ದರ್ಶನ. ಆಹ್ಲಾದಮಯ ವಾತಾವರಣವನ್ನು ನೋಡಿ ಆನಂದವನ್ನು ಕೊಂಚ ಮಟ್ಟಿಗೆ ತುಂಡರಿಸುವುದು ಕಾರ್ಗಲ್ ಚಕ್ ಪೋಸ್ಟ್.

ಶರಾವತಿಯಂಚಿನ ಕಥೆ-ವ್ಯಥೆ; ಬೆಂಗಳೂರಿನ ‘ಕಾರು-ಬಾರಿ’ಗೇಕೆ ಕಾನನದ ನೀರು? 

ಗುಂಡಿಬೈಲ್ ಮರಾಠಿಕೇರಿ; ಕಾರ್ಗಲ್ ಪಟ್ಟಣ ಪಂಚಾಯಿತಿದ ವಾರ್ಡ್. ಅಲ್ಲಿನ ಜನರನ್ನು ‘ಸಮಾಚಾರ’ ಮಾತನಾಡಿಸಿದಾಗ ನೈಜ ಸ್ಥಿತಿ ತೆರೆದುಕೊಳ್ಳತೊಡಗಿತು. ಆ ಭಾಗದಲ್ಲಿ ಮೇನ್ 8 ಮಜರೆಗಳಿವೆ. ಸುಮಾರು 180 ಕುಟುಂಬಗಳಿವೆ. ಅಷ್ಟೆ ಸಂಖ್ಯೆಯ ಮತದಾರರು ಇದ್ದಾರೆ. ಚಿಕ್ಕಮಕ್ಕಳೆಲ್ಲ ಸೇರಿ ಸುಮಾರು 1500ಸಾವಿರ ಜನಸಂಖ್ಯೆ ಇಲ್ಲಿದೆ.

ಅರ್ಲಗೋಡ್ ಪಂಚಾಯತ್ ವ್ಯಾಪ್ತಿಯ ಸುಂಕನೂರಿನ ಬಿದ್ರೂರು ಕಡೆಯಿಂದ ನಮ್ಮಲ್ಲಿಗೆ ಇನ್ನೊಂದು ರೂಟ್ ನಿರ್ಮಾಣವಾಗಿದೆ. ರಿಸರವೈರ್ ಆ ಕಡೆ ಭಟ್ಕಳ ರೋಡಿಗೆ ಸೇರಿಸುತ್ತೆ. ನಮ್ಮ ಊರಿಗಿಂತಲೂ ಮುಂದೆ 4 ಹಳ್ಳಿಗಳಿವೆ. ಅವರ ಪರಿಸ್ಥಿತಿಯೂ ಇದೇ ತೆರನಾಗಿದೆ. ಬಸ್ ವ್ಯವಸ್ಥೆ ದಿನಕ್ಕೆ ಮೂರು ಬಾರಿ ಮಾತ್ರ. ಖಾಸಗಿ ಸಾರಿಗೆಗಳನ್ನೇ ನೆಚ್ಚಿಕೊಳ್ಳಬೇಕಿದೆ.

ಕಾರ್ಗಲ್ ಪಟ್ಟಣವೆಂದು ಘೋಷಣೆಯಾದಮೇಲೆ ಸಮಸ್ಯೆ ಆಗರವಾಗಿದೆ. 2011ರ ಗಣತಿ ಪ್ರಕಾರ 10,847 ಜನಸಂಖ್ಯೆ ಹೊಂದಿದೆ. 2649 ಮನೆಗಳಿವೆ. 13 ವಾರ್ಡ್ಗಳನ್ನು ಹೊಂದಿದ್ದು ಕಾರ್ಮಿಕರಿರುವ ಪೇಟೆ ಭಾಗವನ್ನು ಬಿಟ್ಟರೆ ಇತರ ಭಾಗಗಳಲ್ಲಿ ಅಭಿವೃದ್ಧಿ ತೀರಾ ಹಿಂದಿದೆ.

“ಬೇಸಿಗೆಯಲ್ಲಿ ನಮಗೆ ಡ್ಯಾಮಿನದ್ದು ಬಿಡಿ ಹಿನ್ನೀರಿನ ನೀರೂ ಕುಡಿಯಲು ಸಿಗೋದಿಲ್ಲ. ಹಿಂದಿನ ಹಾಗೂ ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಯಿತು. ಯಾರೂ ಸರಿಯಾಗಿ ಸ್ಪಂದಿಸಲಿಲ್ಲ. ಇಲ್ಲಿನ ಸುತ್ತಮುತ್ತ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸದೇ ದೂರದ ಐಶಾರಾಮಿ ಮಹಾನಗರಗಳಿಗೆ ಇಲ್ಲಿನ ನೀರು ಸಾಗಿಸುವುದು ಮೂರ್ಖತನದ ಪರಮಾವಧಿ” ಎನ್ನುತ್ತಾರೆ ಹರಿ ಮರಾಠೆ.

ಪಟ್ಟಣ ಪಂಚಾಯತ್ ಭಾಗದಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲೇ ಜೀವನ ಸಾಗಿಸುತ್ತಿರುವ ಎಷ್ಟೋ ಬಡ ಕುಟುಂಬಗಳಿವೆ. ಆರ್ಥಿಕ, ಆರೋಗ್ಯ, ಶಿಕ್ಷಣ ಮತ್ತು ಸಾಗಾಟ ಮುಂತಾದವುಗಳು ಸರಕಾರದಿಂದ ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದು, ಬದುಕು ದುಃಸ್ತರವಾಗಿದೆ ಎಂಬುದು ಅಲ್ಲಿಯ ನಿವಾಸಿಗಳ ಅನುಭವ ಬೆರೆತ ಅಭಿಪ್ರಾಯ.

ಎಲ್ಲೋ ಕಾಡಿನಲ್ಲಿದ್ದ ಕಾರ್ಗಲ್ ಹೆಸರು ಲಿಂಗನಮಕ್ಕಿ ಜಲಾಶಯವಾದ ಮೇಲೆ ಮುಂಚೂಣಿಗೆ ಬಂತು. ಸ್ಥಳೀಯರಿಗೆ ಹೊಸದಾದ ಯೋಜನೆ ಅದು. ಅಂದಿನ ಡ್ಯಾಮ್ ನಿರ್ಮಾಣ ಹಂತದ ಕಾರ್ಮಿಕರ, ಮಶಿನ್ ಗಳ ಜೋಶ್ ಸ್ಥಳಿಯರನ್ನು ಇನ್ನಿಲ್ಲದ ಆಶಾ ಗೋಪುರ ಕಟ್ಟಿಕೊಳ್ಳುವಂತೆ ಮಾಡಿದ್ದು ಇತಿಹಾಸ. ಹತ್ತಿರದ ಹಿನ್ನೀರಿನ ಪ್ರದೇಶದ ಸಂಬಂಧಿಕರು, ಸ್ನೇಹಿತರು ಅಲ್ಲಿನ ಎಲ್ಲವನ್ನೂ ಬಿಟ್ಟು, ಆಯಾ ವಂಶದ ಎಷ್ಟೋ ತಲೆಮಾರುಗಳನ್ನು ಸಲಹಿದ್ದ ಜಮೀನಿಗೆ ಪರಿಹಾರವಾಗಿ ವಿವೇಚನೆ ಇಲ್ಲದೇ ನಿರ್ಧರಿಸಲಾದ ಪುಡಿಗಾಸನ್ನು ಪಡೆದು ನೆನೆಪನ್ನು ಮಾತ್ರ ಹೊತ್ತು ನಿಟ್ಟುಸಿರು ಬಿಡುತ್ತಾರೆ. ಅವರು ಇಂತಹ ದುಗುಡ ಬೆಟ್ಟದಂತೆ ಬೆಳೆದು ಇಂದು ಭವಿಷ್ಯವೇ ಶೂನ್ಯ ಎಂಬ ನಿರಾಶಾದಾಯಕ ಸನ್ನಿವೇಶದಲ್ಲಿ ಸ್ಥಳೀಯ ಕುಟುಂಬಗಳು ಜೀವನ ನಡೆಸುತ್ತಿವೆ.

ಮೊದಲು ಬೆಳಿಗ್ಗೆ ಮತ್ತು ಸಂಜೆ ಕೆಲವು ಸಮಯ ಮಾತ್ರ ಸ್ಥಳೀಯರಿಗೆ ಕಾರ್ಗಲ್ಲಿನಿಂದ ಬೇರೆ ಕಡೆ ಹೋಗಿ ಬರಲು ಅನುಮತಿ ನೀಡಲಾಗಿತ್ತಂತೆ. ಈಗ ಈ ನಿಯಮ ಸ್ವಲ್ಪ ಸಡಿಲಿಸಲಾಗಿದೆ. ಇದರಿಂದ ಸಾಮಾಜಿಕ ಸಮಸ್ಯೆಗೇನೂ ಪರಿಹಾರ ದೊರಿತಿಲ್ಲ. ಬ್ಯಾಗು, ಚೀಲ, ಸಂಚಿಗಳನ್ನೆಲ್ಲ ಪರಿಶೀಲಿಸಲಾಗುತ್ತೆ. ನಮ್ಮ ಸಂಬಂಧಿಕರೆಲ್ಲ ಬೇಜಾರು ಮಾಡಿಕೊಂಡು ಈ ಕಡೆ ಬರುವುದೇ ಅಪರೂಪವಾಗಿದೆ.

“ಖಾಸಗಿ ವಾಹನದಲ್ಲಿ ಬಂದರೆ ಇವೆಲ್ಲ ತೊಂದರೆ. ಆದರೆ ಸರಕಾರಿ ಬಸ್ಸಿನಲ್ಲಿ ಬಂದರೆ ಯಾವ ತೊಂದರೆಯೂ ಇಲ್ಲ. ನಮಗೆಲ್ಲ ಪಾಸ್ ನೀಡಲಾಗಿದೆ,” ಎಂದು ಸ್ಥಳೀಯರು ನೋವು ಹಂಚಿಕೊಂಡರು

ಅಭಿವೃದ್ಧಿ ಏಕಾಗುತ್ತಿಲ್ಲ?

ಹಲವು ಕುಟುಂಬಗಳು ಜೀವನಾಧಾರವಾಗಿ ತೋಟಗಾರಿಕೆ ಹಾಗೂ ಕೃಷಿಯನ್ನು ಅವಲಂಬಸಿವೆ. ಈ ಭಾಗ ಪಟ್ಟಣ ಪಂಚಾಯತ್ ಎಂದು ಘೋಷಣೆಯಾದ್ದರಿಂದ ಗ್ರಾಮೀಣ ಭಾಗದ ರೈತರಿಗೆ ಲಭ್ಯವಿರುವ ಹಲವಾರು ಸರಕಾರಿ ಯೋಜನೆಗಳು ದೊರಕದೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ತೋಟಗಾರಿಕೆ, ಕೃಷಿ ಮುಂತಾದ ಇಲಾಖೆಗಳ ಯಾವ ಸಹಾಯಧನ, ಬೆಳೆವಿಮೆ, ಬೆಳೆಸಾಲಗಳೂ ಸಿಗುತ್ತಿಲ್ಲ. ಬೆಳೆ ನಷ್ಟವಾದರೆ ಬಚಾವಾಗೋದು ಕಷ್ಟ. ಕೆಲಸಕ್ಕೆ ಪುರುಷರು ದೂರದೂರುಗಳಿಗೆ ಹೋಗಬೇಕಾಗುತ್ತದೆ. ಕೌಟುಂಬಿಕ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿದೆ.

ಶರಾವತಿಯಂಚಿನ ಕಥೆ-ವ್ಯಥೆ; ಬೆಂಗಳೂರಿನ ‘ಕಾರು-ಬಾರಿ’ಗೇಕೆ ಕಾನನದ ನೀರು? 

ಇಲ್ಲಿನ ಬಡ ಕುಟುಂಬಗಳು ತೀರಾ ಸಂಕಷ್ಟ ಅನುಭವಿಸುತ್ತಿವೆ. ಹುಲ್ಲು ಅಥವಾ ಸೋಗೆ ಮೇಲ್ಛಾವಣಿಯ ಮನೆ. ಬಹುತೇಕ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣ ಮಾತ್ರ ಪೂರೈಸಿದ್ದು, ಅವರನ್ನು ಮನೆಯಲ್ಲೇ ಇರಿಸಿಕೊಳ್ಳಲಾಗಿದೆ. ಚರಂಡಿ ಇಲ್ಲದೇ ಮನೆ ಎದುರೇ ಕೊಚ್ಚೆ ಹರಿಯುತ್ತಿದೆ. ಅದನ್ನು ತುಳಿದುಕೊಂಡೇ ಸಾಗಬೇಕು.

“ನಮ್ಮ ಮನೆಗಳ ಸ್ಥಿತಿಗತಿ ನೋಡಿ ಇಲ್ಲಿನ ಹೆಣ್ಣುಮಕ್ಕಳನ್ನು ಹೊರಗಿನ ಒಳ್ಳೆಯ ಮನೆತನದವರು ಮದುವೆಯಾಗಲು ಅನುಮಾನಿಸುತ್ತಾರೆ. ಇವರೂ ಮುಂದೆ ನಮ್ಮಂಥ ಸ್ಥಿತಿಯಲ್ಲೇ ಬದುಕು ಸಾಗಿಸುವ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ.” ಎಂಬುದು ನಿವಾಸಿಗಳ ಅಳಲು.

ಮನುಕುಲ ನಾಶಕ್ಕೇ ರಹದಾರಿ ಸೃಷ್ಠಿ:

ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರ, ಸರ್ವ ಋತು ಜಲಪಾತ, ಇಲ್ಲಿನ ನೀರನ್ನು ದೂರದ ಬೆಂಗಳೂರಿಗೆ ಸಾಗಿಸುವುದು, ಶರಾವತಿಗೆ ಬಂದು ಸೇರುವ ಚಿಕ್ಕ ಚಿಕ್ಕ ಹಳ್ಳಗಳಲ್ಲಿ ವಿದ್ಯುತ್ ತಯಾರಿಕೆ ಮೈಕ್ರೋ ಘಟಕ ನಿರ್ಮಿಸಲು ಖಾಸಗಿ ಪ್ರಸ್ತಾವನೆ ಮುಂತಾದ ಯೋಜನೆಗಳು ಶರಾವತಿ ಜಲಾನಯನ ಭಾಗದ ಜನರನ್ನು ಭೀತಿಯಲ್ಲೇ ಜೀವಿಸುವಂತೆ ಮಾಡಿದೆ. ಎಲ್ಲಾ ಯೋಜನೆಗಳೂ ಬೌಗೋಳಿಕವಾಗಿ ಒಂದೇ ಕಡೆ ಕೇಂದ್ರಿತವಾದರೆ ಅಲ್ಲಿನ ಪಾರಿಸಾರಿಕ ಸಾಮರ್ಥ್ಯ ನಶಿಸಿ ಅವಘಡಗಳಿಗೆ ಕಾರಣವಾಗಬಹುದು.

ಜಗತ್ತಿನಲ್ಲೇ ಮತ್ತೆಲ್ಲೂ ಕಾಣದ ವಿಶೇಷ ಜೀವಿಗಳಿಗೆ ಆವಾಸ ಸ್ಥಾನವಾಗಿರುವ ಶರಾವತಿ ಕೊಳ್ಳವನ್ನು ಸಂರಕ್ಷಿಸಲೇಬೇಕಾಗಿದೆ. ಒಂದೇ ಪ್ರಭೇಧದ ಮಾನವ ಪ್ರಾಣಿಗಳಿಗಾಗಿ ಇಲ್ಲಿನ ನೀರು ಸಾಗಿಸಿ ಇಲ್ಲಿರುವ ಅಪರೂಪದ ಪ್ರಾಣಿ-ಜೀವಸಂಕುಲಗಳನ್ನು ಕೊಲ್ಲುವುದು ಯಾವ ನ್ಯಾಯ? ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶರಾವತಿ ಹಿನ್ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ ಕೈಬಿಡುವುದೇ ಸೂಕ್ತ ಎಂಬುದು ಇಲ್ಲಿ ಹುಟ್ಟುಕೊಂಡಿರುವ ಆಕ್ರೋಶದ ಹಿಂದಿರುವ ಬೇಡಿಕೆಗಳು.