samachara
www.samachara.com
ಭಾರತದಲ್ಲಿ ಫೂಟ್‌ಬಾಲ್ ಇತಿಹಾಸ: ನಾವೇಕೆ ಫಿಫಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ? 
COVER STORY

ಭಾರತದಲ್ಲಿ ಫೂಟ್‌ಬಾಲ್ ಇತಿಹಾಸ: ನಾವೇಕೆ ಫಿಫಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ? 

ಇಡೀ ಜಗತ್ತಿನಲ್ಲಿ ನೆಲೆಯನ್ನು ಕಲ್ಪಿಸಿಕೊಂಡಿರುವ ಫೂಟ್‌ಬಾಲ್‌ಗೆ ಭಾರತದಲ್ಲಿ ಮಾತ್ರ ಶೋಚನೀಯ ಸ್ಥಿತಿ. ಹಿಂದೊಮ್ಮೆ ಫೂಟ್‌ಬಾಲ್‌ನಲ್ಲಿ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದ ಭಾರತ ಈಗ ‘ಮಲಗಿರುವ ದೈತ್ಯ ಎನಿಸಿಕೊಂಡಿದೆ. ಇದು ಬದಲಾಗುವುದು ಯಾವಾಗ?

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಇತ್ತೀಚಿಗಷ್ಟೇ ಫೂಟ್‌ಬಾಲ್‌ನಲ್ಲಿ ಸತತ ಗೋಲ್‌ಗಳನ್ನು ಹೊಡೆದು ಇತಿಹಾಸ ಸೃಷ್ಟಿಸಿದ ಪ್ರಸಿದ್ಧ ಆಟಗಾರ ಸುನಿಲ್‌ ಛೇಟ್ರಿ, ಭಾರತದ ಫೂಟ್‌ಬಾಲ್‌ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದರು. ‘ಕ್ರೀಡಾಂಗಣಕ್ಕೆ ಬಂದು ಪಂದ್ಯವನ್ನು ವೀಕ್ಷಿಸಿ, ಭಾರತದ ತಂಡದ ಬಗ್ಗೆ ವಿಮರ್ಶೆ ಮಾಡಿ,’ ಎಂದಿದ್ದರು. ನಂತರ ಮುಂಬೈನಲ್ಲಿ ನಡೆದ ಕೀನ್ಯಾ ವಿರುದ್ಧದ ಪಂದ್ಯಾವಳಿಯಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿದ್ದವು. ಎಷ್ಟೋ ಜನಕ್ಕೆ ಟಿಕೆಟ್‌ ಸಿಕ್ಕಿರಲಿಲ್ಲ. ಭಾರತೀಯರ ಫೂಟ್‌ಬಾಲ್‌ ಅಭಿಮಾನ ಅಂದು ಇಡೀ ಜಗತ್ತಿಗೆ ತಿಳಿಯಿತು. ಅಂದಿನಿಂದ ಭಾರತದಲ್ಲೂ ಕೂಡ ಫೂಟ್‌ಬಾಲ್‌ ಸದ್ದು ಜೋರಾಗಿದೆ. ಅದಕ್ಕೆ ಛೇಟ್ರಿ ಅವರ ಮನವಿ ಒಂದು ಕಾರಣವಾಗಿರಬಹುದು.

ಜಗತ್ತಿನ ಬಹುಸಂಖ್ಯಾತರು ಜನರು ಆಡುವ ಆಟ ಎನಿಸಿಕೊಂಡಿರುವ ಫೂಟ್‌ಬಾಲ್‌ ಕೇವಲ ಕ್ರೀಡೆಯಾಗಿಯಷ್ಟೇ ಉಳಿದುಕೊಂಡಿಲ್ಲ. ಯುದ್ಧದಲ್ಲಿ ಜರ್ಮನಿಯ ವಿರುದ್ಧ ಸೋತು ಹೈರಾಣಾಗಿದ್ದ ಯುಗೋಸ್ಲಾವಿಯಾ ಮತ್ತು ಸ್ಲಾವೇನಿಯಾ ದೇಶಗಳ ಫೂಟ್‌ಬಾಲ್‌ನಲ್ಲಿ ಜರ್ಮನಿ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದ್ದವು. ಚಿಲಿ ಎಂಬ ಚಿಕ್ಕ ರಾಷ್ಟ್ರ ದೈತ್ಯ ಅಮೆರಿಕಾವನ್ನು ಫೂಟ್‌ಬಾಲ್‌ನಲ್ಲಿ ಮಣ್ಣು ಮುಕ್ಕಿಸಿತ್ತು. ಹೀಗೆ, ಕ್ರೀಡೆ ಮತ್ತು ಅದಕ್ಕಿರುವ ರಾಜಕೀಯ ಆಯಾಮಗಳೂ ತೀರ ಕ್ರೀಡಾಭಿಮಾನಿಗಳಿಗೆ ಅಪರಿಚಿತವೂ ಅಲ್ಲ.

ಫೂಟ್‌ಬಾಲ್‌ನ ಮೂಲ:

ಕ್ರೀಡೆಗಳ ರಾಜ ಎನಿಸಿಕೊಂಡಿರುವ ಫೂಟ್‌ಬಾಲ್‌ ಆರಂಭಗೊಂಡಿದ್ದು ಬ್ರೆಜಿಲ್‌, ಅರ್ಜೆಂಟೈನಾ, ಚಿಲಿ ಮುಂತಾದ ವಸಹಾತು ರಾಷ್ಟ್ರಗಳಲ್ಲಿ. ಈ ರಾಷ್ಟ್ರಗಳ ಸ್ಲಂ ಮಕ್ಕಳು ಗೋಣಿ ಚೀಲವನ್ನು ಉಂಡೆಯನ್ನಾಗಿ ಮಾಡಿಕೊಂಡು ಕಾಲಿನಲ್ಲಿ ತಳ್ಳುತ್ತಾ ಆಟವಾಡುತ್ತಿದ್ದರು. ಇದೇ ಆಟ ಮುಂದೆ ವಿಶ್ವಾದ್ಯಂತ ಫೂಟ್‌ಬಾಲ್‌ ಎಂದು ಜನಮನ್ನಣೆ ಗಳಿಸಿತು ಎಂಬ ಮಾಹಿತಿ ಅಂರ್ಜಾಲದಲ್ಲಿ ಸಿಗುತ್ತದೆ. ಶ್ರಮಜೀವಿಗಳಿಂದ ಆರಂಭಗೊಂಡ ಆಟ ಇವತ್ತಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದೆ.

ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಕಾರ್ಖಾನೆಗಳಲ್ಲಿ ದುಡಿದು ಹೈರಾಣಾಗಿದ್ದ ಕಾರ್ಮಿಕರಿಂದ ಆಡಲ್ಪಡುತ್ತಿದ್ದ ಆಟವಿದು. ಕಾರ್ಖಾನೆ ಮಾಲೀಕರ ನಿಷೇಧದ ನಡುವೆಯೂ ಉಸಿರಾಡಿಕೊಂಡಿತ್ತು. ಜಾಗತಿಕ ಮಾರುಕಟ್ಟೆ ವ್ಯವಸ್ಥೆ ವಿಸ್ತರಣೆಯಾದಂತೆಲ್ಲಾ ಫೂಟ್‌ಬಾಲ್‌ ಕೂಡ ತನ್ನ ಬಾಹುಗಳನ್ನು ಚಾಚಿ ಬೆಳೆಯತೊಡಗಿತು. ಕರಿಯರಿಂದ ಅರಂಭವಾದ ಈ ಆಟದಲ್ಲಿ ಇಂದಿಗೂ ಕಪ್ಪು ಜನರದ್ದೇ ಪಾರುಪತ್ಯ ಎದ್ದು ಕಾಣಿಸುತ್ತದೆ.

ಹಲವಾರು ಯುದ್ಧದ ಸಂಧರ್ಭಗಳಲ್ಲಿ ಫೂಟ್‌ಬಾಲ್‌ನಿಂದಾಗಿ ಕದನ ವಿರಾಮ ಘೋಷಣೆಯಾಗಿವೆ. ಬಾಂಗ್ಲಾ ದೇಶದಲ್ಲಿ ಫೂಟ್‌ಬಾಲ್‌ ಪಂದ್ಯಾವಳಿಗಳ ಸಮಯದಲ್ಲಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಹೋರಾಟಗಳು ಜರುಗಿವೆ. ಕೆಲವು ದೇಶಗಳ ಜೈಲಿನಲ್ಲಿ ಖೈದಿಗಳು ಟಿವಿಯಲ್ಲಿ ಫೂಟ್‌ಬಾಲ್‌ ಪಂದ್ಯಗಳ ವೀಕ್ಷಣೆಗೆ ಅನುವು ಮಾಡಿಕೊಡಲಿಲ್ಲವೆಂದು ದಂಗೆಯೆದ್ದ ದೃಷ್ಟಾಂತಗಳಿವೆ. ವಿಶ್ವಕಪ್ ವೇಳೆ ಇಂಗ್ಲೆಂಡಿನಲ್ಲಿ ದಿನವೊಂದಕ್ಕೆ 4 ಶತಕೋಟಿ ಡಾಲರ್ ಉತ್ಪಾದನೆ ಕುಸಿತವಾಗುತ್ತಿದೆ. ಜಗತ್ತಿನಾದ್ಯಂತ ವಿಶ್ವಕಪ್ ಫೂಟ್‌ಬಾಲ್‌ ಸಂದರ್ಭದಲ್ಲಿ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತವೆ. ಇದು ಇವತ್ತು ಫೂಟ್‌ಬಾಲ್‌ ಕ್ರೀಡೆಯ ಜಾಗತಿಕ ಪರಿಣಾಮ.

ಭಾರತದಲ್ಲಿ ಫೂಟ್‌ಬಾಲ್‌:

ಇಡೀ ಜಗತ್ತಿನ್ನು ಆವರಿಸಿಕೊಂಡಿರುವ ಫೂಟ್‌ಬಾಲ್‌ 212 ದೇಶಗಳಲ್ಲಿ ನೆಲೆ ಕಂಡುಕೊಂಡಿದೆ. ಆದರೆ ವಿಶ್ವ ಕಪ್‌ಗೆ ಆಯ್ಕೆಯಾಗುವುದು 32 ತಂಡಗಳು ಮಾತ್ರ. ಹೊರಗುಳಿಯುವ ತಂಡಗಳ ಪೈಕಿ ಭಾರತವೂ ಕೂಡ ಒಂದು. ಸ್ವಾತಂತ್ರ ದೊರೆತು 7 ಶತಮಾನಗಳಾದರೂ ಫೂಟ್‌ಬಾಲ್‌ ವಿಚಾರದಲ್ಲಿ ಭಾರತ ವಿಶ್ವಕಪ್‌ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸಿಲ್ಲ. ಕ್ರಿಕೆಟ್‌ಗಿರುವ ಕ್ರೀಡಾಂಗಣಗಳಿಗೆ ಹೋಲಿಸಿದರೆ ಭಾರತದಲ್ಲಿ ಸುಸಜ್ಜಿತವಾದ ಫೂಟ್‌ಬಾಲ್ ಕ್ರೀಡಾಂಗಣಗಳಿಲ್ಲ ಎನ್ನುವುದು ಭಾರತದಲ್ಲಿ ಫೂಟ್‌ಬಾಲ್‌ನ ಶೋಚನೀಯ ಸ್ಥಿತಿಯನ್ನು ಸೂಚಿಸುತ್ತದೆ.

ದೇಶದಲ್ಲಿ ಅತಿ ಹೆಚ್ಚಿನ ಕ್ರೇಝ್ಙ್ ಹುಟ್ಟಿಹಾಕಿರುವ ಆಟಗಳ ಪೈಕಿ ಎರಡನೇ ಸ್ಥಾನ ಹೊಂದಿರುವ ಫೂಟ್‌ಬಾಲ್‌ಗೆ ಭಾರತದಲ್ಲಿ ಸರಿಸುಮಾರು 150 ವರ್ಷಗಳ ಇತಿಹಾಸವಿದೆ. ಶತಮಾನಗಳಷ್ಟು ಇತಿಹಾಸವಿರುವ ಕ್ರಿಕೆಟ್‌ಗೆ ಹೋಲಿಕೆ ಮಾಡಿದರೆ ಭಾರತಕ್ಕೆ ಪರಿಚಯಗೊಂಡು, ಸ್ಥಳಿಯವೆನಿಸಿಕೊಂಡು ಭಾರತೀಯರಿಗೆ ಹೊಂದಿಕೊಂಡ ಆಟ ಫೂಟ್‌ಬಾಲ್‌ ಎಂದು ವರದಿಗಳು ಹೇಳುತ್ತವೆ.

ಭಾರತಕ್ಕೆ ಫೂಟ್‌ಬಾಲ್‌ಅನ್ನು ಪರಿಚಯಿಸಿದ್ದು ಬ್ರಿಟಿಷ್ ಸೈನಿಕರು. ನಂತರದಲ್ಲಿ ನಾಗೇಂದ್ರ ಪ್ರಸಾದ್‌ ಸರ್ಬಾಧಿಕಾರಿ ಎನ್ನುವವರಿಂದ ಫೂಟ್‌ಬಾಲ್‌ ದೇಶದೆಲ್ಲೆಡೆ ಪಸರಿಸಿತು. 19ನೇ ಶತಮಾನದ ಕೊನೆಯಲ್ಲೇ ಭಾರತದಲ್ಲಿ ಫೂಟ್‌ಬಾಲ್‌ ಟೂರ್ನಿಮೆಂಟ್‌ ಆಯೋಜನೆಗೊಂಡಿತ್ತು. ಬ್ರಿಟಿಷ್‌ ಆಡಳಿತದಲ್ಲಿ ಸಿಲ್ಮಾ ಪ್ರದೇಶದಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದ ಮೋರ್ತಿಮರ್‌ ಡುರಾಂಡ್‌ 1888ರಲ್ಲೇ ಫುಟ್‌ಬಾಲ್‌ ಟೂರ್ನಿಮೆಂಟ್‌ ಆಯೋಜಿಸಿದ್ದರು. ‘ಡುರಾಂಡ್‌ ಕಪ್‌’ ಹೆಸರಿನಲ್ಲಿ ನಡೆದ ಈ ಟೂರ್ನಿಮೆಂಟ್‌ ವಿಶ್ವ ಹಳೆಯ ಫುಟ್‌ಬಾಲ್‌ ಟೂರ್ನಿಮೆಂಟ್‌ಗಳ ಪೈಕಿ ಮೂರನೇ ಸ್ಥಾನಪಡೆದಿದೆ. ಈ ಟೂರ್ನಿಮೆಂಟ್‌ ನಡೆದದ್ದು ಬ್ರಿಟೀಷ್‌ ಸೈನಿಕ ತುಕಡಿಗಳ ಮಧ್ಯೆ. ಈ ಮೊದಲು ಜಗತ್ತಿಗೆ ‘ಎಫ್‌ಎಕಪ್‌’ ಮತ್ತು ‘ಸ್ಕಾಟಿಷ್‌ ಕಪ್‌’ಗಳು ಅದಾಗಲೇ ಪರಿಚಿತಗೊಂಡಿದ್ದವು.

ವಿಶ್ವದ ನಾಲ್ಕನೇ ಫೂಟ್‌ಬಾಲ್‌ ಟೂರ್ನಿಮೆಂಟ್‌ ನಡೆದಿದ್ದು ಭಾರತದಲ್ಲೇ. 1893ರಲ್ಲಿ ಬ್ರಿಟಿಷರ ಭಾರತದ ರಾಜಧಾನಿಯಾಗಿದ್ದ ಕೊಲ್ಕತ್ತಾದಲ್ಲಿ ‘ಐಎಫ್‌ಎ ಶೀಲ್ಡ್’ ಎಂಬ ಟೂರ್ನಿಮೆಂಟ್‌ ಆರಂಭಗೊಂಡಿತ್ತು. ಭಾರತದ ಮೊದಲ ಫೂಟ್‌ಬಾಲ್‌ ಕ್ಲಬ್‌ ಎಂದರೆ ಸರದಾ ಎಫ್‌ಸಿ(ಫುಟ್‌ಬಾಲ್‌ ಕ್ಲಬ್‌). ನಂತರದಲ್ಲಿ ಡಾಲ್‌ಹೌಸಿ ಕ್ಲಬ್‌, ಟ್ರೇಡರ್ಸ್ ಕ್ಲಬ್‌, ನಾವಲ್‌ ವಾಲೆಂಟಿಯರ್ಸ್ ಕ್ಲಬ್‌, ಕೋಲ್ಕತ್ತಾ ಎಫ್‌ಸಿ ಹೀಗೆ ನಾನಾ ಹೆಸರಿನ ಫೂಟ್‌ಬಾಲ್‌ ಕ್ಲಬ್‌ಗಳು ಭಾರತದಲ್ಲಿ ಸ್ಥಾಪನೆಗೊಂಡವು.

1880ರ ದಶಕದಲ್ಲಿ ಮೋಹುನ್‌ ಬಗನ್‌ ಎನ್ನುವವರು ಆರಂಭಿಸಿದ ಫೂಟ್‌ಬಾಲ್‌ ತಂಡ ಭಾರತದ ಮೊದಲ ತಂಡ ಎನಿಸಿಕೊಂಡಿದೆ. ಮೋಹುನ್‌ ಬಗನ್‌ ಎನ್ನುವವರು ತಮ್ಮ ಹೆಸರಿನಲ್ಲಿಯೇ ಆರಂಭಿಸಿದ ‘ಮೋಹುನ್‌ ಬಗನ್‌ ಸ್ಪೋರ್ಟಿಂಗ್ ಕ್ಲಬ್‌’ ಮೊದಲ ಬಾರಿಗೆ ಭಾರತೀಯರಲ್ಲಿ ಫೂಟ್‌ಬಾಲ್‌ಅನ್ನು ಪಸರಿಸಲು ನೆರವಾಯಿತು. ಸೈನಿಕರ ಕಾನೂನುಗಳ ಅಡಿಯಲ್ಲಿ ಪ್ರಾರಂಭಗೊಂಡ ಮೊದಲ ಕ್ಲಬ್‌ ಇದು. ಹಿಂದುಗಳು ಮತ್ತು ಮುಸ್ಲಿಮರು ಇಬ್ಬರೂ ಕೂಡ ಈ ಸ್ಪೋರ್ಟ್ ಕ್ಲಬ್‌ನಲ್ಲಿ ಜತೆಯಾಗಿ ಆಟವಾಡುತ್ತಿದ್ದರು. ಮೋಹುನ್‌ ಬಗನ್‌ರ ನಂತರ ಸೋವಾ ಬಜಾರ್‌ ಮತ್ತು ಆರ್ಯನ್‌ ಕ್ಲಬ್‌ಗಳು ಕೊಲ್ಕತ್ತಾದಲ್ಲಿ ಸ್ಥಾಪಿಸಲ್ಪಟ್ಟವು. ಗ್ಲಾಡ್‌ಸ್ಟೋನ್‌ ಕ್ಲಬ್‌, ಟ್ರೇಡ್ಸ್‌ ಕ್ಲಬ್‌ ಮತ್ತು ಕೂಕ್ಬೇಹಾರ್‌ ಕಪ್‌ಗಳು ಈ ಸಮಯದಲ್ಲಿ ಆರಂಭಗೊಂಡಿದ್ದವು.

ಡುರಾಂಡ್‌ ಕಪ್‌ ಪಂದ್ಯಾವಳಿಯ ಚಿತ್ರ.
ಡುರಾಂಡ್‌ ಕಪ್‌ ಪಂದ್ಯಾವಳಿಯ ಚಿತ್ರ.
ಚಿತ್ರ ಕೃಪೆ: ಹಿಂದೂಸ್ತಾನ್‌ ಟೈಮ್ಸ್

ಆರ್‌ಬಿ ಫೆರ್ಗ್ಯುಸನ್‌ ಫೂಟ್‌ಬಾಲ್‌ ಕ್ಲಬ್‌ ದಕ್ಷಿಣ ಭಾರತದಲ್ಲಿ ಸ್ಥಾಪನೆಗೊಂಡ ಮೊದಲ ಫೂಟ್‌ಬಾಲ್‌ ಕ್ಲಬ್‌. ಕೇರಳವನ್ನು ಆಳುತ್ತಿದ್ದ ಕೊಚ್ಚಿನ್ ರಾಜಾಡಳಿತ ಪ್ರದೇಶದಲ್ಲಿನ ತ್ರಿಸ್ಸೂರ್‌ ಎಂಬಲ್ಲಿ 1899ರ ಫೆಬ್ರವರಿ 20ರಂದು ಸ್ಥಾಪನೆಗೊಂಡ ಈ ಕ್ಲಬ್‌ ಯಂಗ್‌ ಮನ್ಸ್ ‘ಫೂಟ್‌ಬಾಲ್‌ ಕ್ಲಬ್‌’ ಎಂಬ ಅಡ್ಡೆಸರನ್ನೂ ಹೊಂದಿತ್ತು. 20ನೇ ಶತಮಾದಲ್ಲಿ ಕೇರಳದಲ್ಲಿ ಫೂಟ್‌ಬಾಲ್‌ ಹುಚ್ಚು ಹಬ್ಬಲು ಈ ಕ್ಲಬ್‌ ಮುಖ್ಯ ಕಾರಣವಾಗಿ ಪರಿಣಮಿಸಿತ್ತು.

ಭಾರತದಲ್ಲಿ ಮೊದಲು ಕಾಣಿಸಿಕೊಂಡ ಫೂಟ್‌ಬಾಲ್‌ ಕ್ಲಬ್‌ಗಳ ಒಕ್ಕೂಟವೆಂದರೆ ‘ಇಂಡಿಯನ್‌ ಫೂಟ್‌ಬಾಲ್‌ ಅಸೊಸಿಯೇಷನ್‌’. 1893ರಲ್ಲಿ ಭಾರತೀಯರ ಹೆಸರಿನಲ್ಲಿ ಸ್ಥಾಪನೆಯಾದ ಈ ಅಸೋಸಿಯೇಷನ್‌ನ ಆಡಳಿತ ಮಂಡಳಿಯಲ್ಲಿ ಒಬ್ಬ ಭಾರತೀಯನೂ ಇರಲಿಲ್ಲ.

ಹಲವಾರು ಕ್ಲಬ್ ಮತ್ತು ಫೂಟ್‌ಬಾಲ್‌ ಟೂರ್ನಿಮೆಂಟ್‌ಗಳ ಮಧ್ಯೆ ಹೆಚ್ಚಿನ ಭಾರತೀಯರ ಕಿವಿಗೆ ಫೂಟ್‌ಬಾಲ್ ಹೆಸರು ಬಿದ್ದಿದ್ದು ಮೋಹುನ್ ಬಗನ್‌ ತಂಡದಿಂದ. 1911ರ ‘ಐಎಫ್‌ಎ ಶೀಲ್ಡ್’ನ ಕೊನೆಯ ಪಂದ್ಯದಲ್ಲಿ ಬ್ರಿಟಿಷರ ಈಸ್ಟ್ ಯಾರ್ಕ್‌ಶೈರ್‌ ರೆಜಿಮೆಂಟ್‌ನ ತಂಡವನ್ನು 2-1 ಅಂತರದಲ್ಲಿ ಮಣಿಸಿದ ಮೊದಲ ಭಾರತೀಯರ ತಂಡ ಸ್ವತಂತ್ರಪೂರ್ವ ಭಾರತದಲ್ಲಿ ಸದ್ದು ಮಾಡಿತ್ತು. ಇಡೀ ಭಾರತವನ್ನು ಆಳುತ್ತಿದ್ದ ಬ್ರಿಟಿಷರಿಗೆ ಭಾರತ ಫೂಟ್‌ಬಾಲ್‌ನಲ್ಲಿ ಉತ್ತರ ನೀಡಿತ್ತು. 1888ರಲ್ಲಿ ಮೋರ್ತಿಮೆರ್‌ ಡುರಾಂಡ್‌ ಆರಂಬಿಸಿದ 'ಡುರಾಂಡ್‌ ಕಪ್’ ಭಾರತದಲ್ಲಿ ನಡೆದ ಮೊದಲ ಫೂಟ್‌ಬಾಲ್‌ ಟೂರ್ನಿಮೆಂಟ್‌ ಎನಿಸಿಕೊಂಡಿದ್ದು ಇಂದಿಗೂ ನಡೆಯುತ್ತಿರುವ ಜಗತ್ತಿನ ಹಳೆಯ ಕೆಲವೇ ಕೆಲವು ಫೂಟ್‌ಬಾಲ್‌ ಟೂರ್ನಿಮೆಂಟ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

1911ರಲ್ಲಿ ಐಎಫ್‌ಎ ಶೀಲ್ಡ್ ಜತೆ ಮೋಹುನ್‌ ಬಗನ್‌ ತಂಡ.
1911ರಲ್ಲಿ ಐಎಫ್‌ಎ ಶೀಲ್ಡ್ ಜತೆ ಮೋಹುನ್‌ ಬಗನ್‌ ತಂಡ.

19ನೇ ಶತಮಾನದ 2ನೇ ದಶಕದಲ್ಲಿ ಫೂಟ್‌ಬಾಲ್‌ ಸದ್ದು ಕಡಿಮೆಯಾಗಿತ್ತು. 1940ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡ ‘ಅರೋರಾ ಫೂಟ್‌ಬಾಲ್‌ ಕ್ಲಬ್‌’ ದಕ್ಷಿಣ ಭಾರತದ 2ನೇ ಕ್ಲಬ್ ಎನಿಸಿಕೊಂಡಿತು. ಭಾರತದ ತಂಡಗಳು ಆಸ್ಟ್ರೇಲಿಯಾ, ಜಪಾನ್, ಮಲೇಷ್ಯಾ, ತೈಲ್ಯಾಂಡ್‌ಗಳ ಟೂರ್ನಿಮೆಂಟ್‌ಗಳಲ್ಲಿ ಭಾಗವಹಿಸಿದ್ದವು. 1937ರಲ್ಲಿ ಆಲ್‌ ಇಂಡಿಯಾ ಫೂಟ್‌ಬಾಲ್‌ ಫೆಡರೇಷನ್‌ ಪ್ರಾರಂಭವಾಯಿತು. 1948ರಲ್ಲಿ ನಡೆದ ಲಂಡನ್‌ ಒಲಂಪಿಕ್ಸ್‌ನಲ್ಲಿ ಭಾರತದ ತಂಡ ಸ್ಥಾನ ಪಡೆದಿತ್ತು. ಆದರೆ ಮೊದಲ ಪಂದ್ಯದಲ್ಲೇ ಭಾರತ ಫ್ರಾನ್ಸ್ ವಿರುದ್ಧ 2-1 ಅಂತರ ಸೋಲು ಅನುಭವಿಸಿತು. ಆದರೆ ಭಾರತೀಯ ತಂಡದ ಸರಂಗಪಾಣಿ ರಾಮನ್‌ ತಂಡದ ಪರವಾಗಿ ಒಂದು ಗೋಲ್‌ ದಾಖಲಿಸಿದ್ದರು. ಒಲಂಪಿಕ್‌ನಲ್ಲಿ ಭಾರತದ ಮೊದಲ ಹಾಗೂ ಇಲ್ಲಿವರೆಗಿನ ಗೋಲ್‌ ಸರಂಗಪಾಣಿ ರಾಮನ್‌ ಅವರದ್ದು.

ಭಾರತದ ಮೊದಲ ಬಾರಿಗೆ 1950ರಲ್ಲಿ ಫಿಫಾ ವರ್ಡ್ಲ್‌ ಕಪ್‌ಗೆ ಆಯ್ಕೆಯಾಗಿ ಫೈನಲ್ಸ್ ಹಂತಕ್ಕೆ ತಲುಪಿತ್ತು. ಆದರೆ ಭಾರತದ ಫೂಟ್‌ಬಾಲ್ ಆಡಳಿತ ಮಂಡಳಿ ಎಐಎಫ್‌ಎಫ್‌ ವಿಶ್ವಕಪ್‌ನಿಂದ ಹಿಂದೆ ಉಳಿಯಿತು. ಇದರಿಂದಾಗಿ ಫೂಟ್‌ಬಾಲ್‌ನಲ್ಲಿ ಭಾರತ ಹಿನ್ನಡೆ ಕಾಣಬೇಕಾಯಿತು. ರದ್ದುಗೊಳಿಸಿದ್ದಕ್ಕೆ ಕಾರಣಗಳಾಗಿ ಎಐಎಫ್‌ಎಫ್‌ ಅಭ್ಯಾಸಕ್ಕೆ ಸಮಯದ ಕೊರತೆ, ಆಟಗಾರರ ಆಯ್ಕೆಯಲ್ಲಿ ಗೊಂದಲ, ಹಣದ ಸಮಸ್ಯೆಗಳನ್ನು ಮುಂದಿಟ್ಟಿತ್ತು. ಇದರಿಂದಾಗಿ ಭಾರತದ ತಂಡ ಫಿಫಾ ವರ್ಡ್ಲ್‌ಕಪ್‌ನಿಂದ ನಿಷೇಧಕ್ಕೆ ಒಳಗಾಗಬೇಕಾಯಿತು. ಭಾರತದ ತಂಡ ಮತ್ತೆ ಫಿಫಾ ವರ್ಡ್ಲ್‌ಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿದ್ದು 2018ರಲ್ಲಿ.

ಭಾರತೀಯ ಫೂಟ್‌ಬಾಲ್‌ನ ‘ಬಂಗಾರದ ಯುಗ’:

ಭಾರತದಲ್ಲಿ 1951ರಿಂದ 1962ರವರೆಗಿನ ದಶಕದ ಕಾಲವನ್ನು ‘ಫೂಟ್‌ಬಾಲ್‌ನ ಸುವರ್ಣ ಯುಗ’ ಎಂದು ಕರೆಯಲಾಗುತ್ತದೆ. ಸೈಯದ್ ಅಬ್ದುಲ್‌ ರಹೀಮ್‌ ಎಂಬ ಆಟಗಾರನ ಬಲದಲ್ಲಿ ಭಾರತ ಏಷ್ಯಾದ ಫೂಟ್‌ಬಾಲ್‌ ಟೀಮ್‌ಗಳ ಪೈಕಿ ಮೊದಲನೇ ಸ್ಥಾನದಲ್ಲಿತ್ತು. 1951ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಫೂಟ್‌ಬಾಲ್‌ ತಂಡ ಜಯಗಳಿಸಿತ್ತು. ಇಂಡೋನೇಷ್ಯಾ ಮತ್ತು ಆಫ್ಘಾನಿಸ್ತಾನ್‌ ತಂಡಗಳನ್ನು 3-0 ಅಂತರದಲ್ಲಿ ಸೋಲಿಸಿದ ಭಾರತೀಯ ತಂಡ ಕೊನೆಯ ಪಂದ್ಯದಲ್ಲಿ ಇರಾನ್‌ ತಂಡವನ್ನು 1-0 ಅಂತರದಲ್ಲಿ ಸೋಲಿಸಿತ್ತು. ನಂತರದಲ್ಲಿ ಶ್ರೀಲಂಕಾದಲ್ಲಿ ನಡೆದ ಕೊಲಂಬೂ ಕ್ವಾಡ್ರಾಂಗ್ಯುಲರ್‌ ಕಪ್‌ನಲ್ಲಿ ಭಾರತ ಜಯಗಳಿಸಿತ್ತು. ಆವರೆಗೂ ಭಾರತದ ಆಟಗಾರರು ಬೂಟುಗಳಿಲ್ಲದ ಕಾಲುಗಳಲ್ಲಿ ಫೂಟ್‌ಬಾಲ್‌ ಆಡುತ್ತಿದ್ದರು. ನಂತರದಲ್ಲಿ ಎಐಎಫ್‌ಎಫ್‌ ಆಟಗಾರರು ಬೂಟು ಧರಿಸುವುದನ್ನು ಕಡ್ಡಾಯಗೊಳಿಸಿತು.

1950ರಲ್ಲಿ ಭಾರತದ ಫೂಟ್‌ಬಾಲ್‌ ತಂಡ.
1950ರಲ್ಲಿ ಭಾರತದ ಫೂಟ್‌ಬಾಲ್‌ ತಂಡ.

ನಂತರದ ದಿನಗಳಲ್ಲಿ ಭಾರತದ ತಂಡ ಬರ್ಮಾ, ಕೊಲ್ಕತ್ತಾ ಮತ್ತು ಢಾಕಾಗಳಲ್ಲಿ ನಡೆದ ಸತತ 3 ಪಂದ್ಯಗಳಲ್ಲೂ ಕೂಡ ಜಯ ದಾಖಲಿಸಿತು. 1954ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲೂ ಕೂಡ ಭಾರತದ ತಂಡ ವಿಜಯ ಪತಾಕೆ ಹಾರಿಸಿತು. 1956ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಫೂಟ್‌ಬಾಲ್‌ ಆಟದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ನಾಲ್ಕನೇ ಹಂತದಲ್ಲಿ 4-2 ಅಂತರದಿಂದ ಸೋಲಿಸಿ ಸೆಮಿ-ಫೈನಲ್ ತಲುಪಿತ್ತು. ಅದುವರೆಗೂ ಒಲಂಪಿಕ್ಸ್‌ ನಲ್ಲಿ ಸೆಮಿ ಫೈನಲ್‌ ತಲುಪಿದ ಏಷ್ಯಾದ ಮೊದಲ ತಂಡ ಭಾರತದ್ದು. ನಂತರದ ದಿನಗಳಲ್ಲೂ ಕೂಡ ಭಾರತೀಯ ತಂಡ ಉತ್ತಮ ಫಾರ್ಮ್‌ ಕಾಯ್ದುಕೊಂಡು ಹಲವಾರು ಟೂರ್ನಿಮೆಂಟ್‌ಗಳಲ್ಲಿ ಭಾಗವಹಿಸಿತ್ತು. 1962ರಲ್ಲಿ ಮತ್ತೊಮ್ಮೆ ಏಷ್ಯಾ ಕಪ್‌ ಗೆದ್ದಿತ್ತು. ಆದರೆ ಮುಂದಿನ ದಿನಗಳ ಟೂರ್ನಿಮೆಂಟ್‌ಗಳಲ್ಲಿ ಭಾರತದ ತಂಡ ತಲುಪಿದ್ದು 2 ಮತ್ತು 3ನೇ ಹಂತಗಳನ್ನಷ್ಟೇ.

ಭಾರತದಲ್ಲಿ ಕುಸಿಯತೊಡಗಿದ ಫೂಟ್‌ಬಾಲ್‌:

1960ರ ದಶಕದಲ್ಲಿ ಭಾರತದ ಆಟಗಾರ ರಹೀಮ್‌ ಮೃತರಾದ ನಂತರ ಭಾರತ ತಂಡ ಹಲವಾರು ಟೂರ್ನಿಮೆಂಟ್‌ಗಳಲ್ಲಿ ಭಾಗವಹಿಸಿತಾದರೂ ಗೆಲುವು ದಾಖಲಿಸಲಿಲ್ಲ. 1973ರಲ್ಲಿ ಭಾರತದ ತಂಡ ಉತ್ತರ ಕೊರಿಯಾ ವಿರುದ್ಧ ಐಎಫ್‌ಎ ಕಪ್‌ನಲ್ಲಿ ಜಯಗಳಿಸಿದ್ದನ್ನು ಬಿಟ್ಟರೆ ಭಾರತದ ತಂಡ 1960 ಮತ್ತು 70ರ ದಶಕದಲ್ಲಿ ಇನ್ನೆಲ್ಲೂ ಸದ್ದು ಮಾಡಲಿಲ್ಲ.

ಫೂಟ್‌ಬಾಲ್‌ನ ಹೆಸರು ಮತ್ತಷ್ಟು ಕೇಳಿಬಂದಿದ್ದು 1984 ಮತ್ತು 1987ರ ಎಸ್‌ಎಎಫ್‌ ಗೇಮ್ಸ್‌ ನಲ್ಲಿ ಭಾರತದ ತಂಡ ಜಯಗಳಿಸಿದಾಗ. ನಂತರದಲ್ಲಿ 1997 ಮತ್ತು 1999ರಲ್ಲಿ ನಡೆದ ಎಸ್‌ಎಎಫ್‌ ಗೇಮ್ಸ್‌ನಲ್ಲಿ ಜಯಗಳಿಸಿತ್ತು. 1996ರಲ್ಲಿ ಭಾರತದಲ್ಲಿ ದೇಶಿಯ ಟೂರ್ನಿಮೆಂಟ್‌ ಆಗಿ ‘ನ್ಯಾಷನಲ್‌ ಫೂಟ್‌ಬಾಲ್‌ ಲೀಗ್‌’ ನಡೆದಿತ್ತು.

ಮುಂದಿನ ಆಂತರರಾಷ್ಟ್ರೀಯ ಆಟಗಳಲ್ಲಿ ಭಾರತದ ಫೂಟ್‌ಬಾಲ್‌ ತಂಡ ಕಂಡಿದ್ದು ಸೋಲನ್ನಷ್ಟೇ. 2011ರಲ್ಲಿ ಭಾರತ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಭಾಗವಹಿಸಿತು. ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲನ್ನೇ ತನ್ನದಾಗಿಸಿಕೊಂಡಿತು.

ಜಾಗೃತವಾಗಿರುವ ಎಐಎಫ್ಎಫ್‌:

ಭಾರತದಲ್ಲಿ ಫೂಟ್‌ಬಾಲ್‌ ಜಾಗೃತಗೊಂಡಿದ್ದು 2011ರಿಂದ. ಎಐಎಫ್‌ಎಫ್‌ ಫೂಟ್‌ಬಾಲ್‌ ಕಡೆಗೆ ವಿಶೇಷ ಗಮನ ನೀಡಲಾರಂಬಿಸಿತು. 2012ರ ಎಎಫ್‌ಸಿ ಏಷ್ಯನ್‌ ಗೇಮ್ಸ್‌ ನಲ್ಲಿ ಮೊದಲ ಬಾರಿಗೆ ಒಂದೇ ಟೂರ್ನಿಮೆಂಟ್‌ನಲ್ಲಿ ಹಲವಾರು ಗೋಲ್‌ಗಳನ್ನು ದಾಖಲಿಸಿತ್ತು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ನಂತರದ ವರ್ಡ್ಲ್‌ಕಪ್‌ನಲ್ಲಿ ಭಾರತದ ತಂಡಕ್ಕೆ ರೆಡ್‌ ಕಾರ್ಡ್ ದೊರೆತಿತ್ತು. 2 ಬಾರಿ ದಂಡವನ್ನು ಕೂಡ ತೆರಬೇಕಾಯಿತು. 2016ರಲ್ಲಿ ಕೊಲ್ಕತ್ತಾದ ಮೋಹುನ್ ಬಗನ್‌ ಕ್ಲಬ್‌ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಎರಡನೇ ಹಂತ ತಲುಪಿದ್ದನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಫುಟ್‌ಬಾಲ್‌ ತಂಡ ಸದ್ದೇನು ಮಾಡಲಿಲ್ಲ. ಆದರೆ ಈ ಲೀಗ್‌ನಲ್ಲಿ ಭಾರತದ ಹಾಂಗ್‌ಕಾಂಗ್‌ನ ‘ಸೌತ್‌ ಚೈನಾ ಎಎ' ತಂಡವನ್ನು 4-0 ಅಂತರದಲ್ಲಿ ಸೋಲಿಸಿತ್ತು. ಭಾರತದ ಮಟ್ಟಿಗೆ ಇದೇ ದೊಡ್ಡ ಸಾಧನೆ.

ಈಗ ಭಾರತದ ಫೂಟ್‌ಬಾಲ್‌ಗೆ ಮತ್ತೊಮ್ಮೆ ಚೈತನ್ಯ ದೊರೆತಂತಾಗಿದೆ. ಕಳೆದ ವರ್ಷ ಗೋವಾದಲ್ಲಿ ಆಯೋಜನೆಗೊಂಡ ಫೀಫಾ ವರ್ಡ್ಲ್‌ ಕಪ್‌ ಭಾರತೀಯರಿಗೆ ಫೂಟ್‌ಬಾಲ್‌ ಮೇಲಿರುವ ಪ್ರೀತಿಯನ್ನು ಜಗತ್ತಿಗೆ ತಿಳಿಸಿದೆ. ಫೂಟ್‌ಬಾಲ್‌ನಲ್ಲಿ ‘ಮಲಗಿರುವ ದೈತ್ಯ’ ಎನಿಸಿಕೊಂಡಿದ್ದ ಭಾರತ ಈಗ ಮತ್ತೆ ಎಚ್ಚೆತ್ತಿದೆ. 21 ವರ್ಷಗಳ ನಂತರ ಭಾರತ ಫೀಫಾ ವಿಶ್ವದ ತಂಡಗಳ ಪಟ್ಟಿಯಲ್ಲಿ ಮೊದಲ 100 ದೇಶಗಳ ಪೈಕಿ ಸ್ಥಾನ ಪಡೆದಿದೆ. ಕೇವಲ 2 ವರ್ಷಗಳ ಕಾಲ ತರಬೇತಿ ಪಡೆದಿದ್ದ ಭಾರತದ ಕಿರಿಯರ ಫೂಟ್‌ಬಾಲ್‌ ತಂಡ ಕಳೆದ ವರ್ಷ 7 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿತ್ತು. ಇದೊಂದು ಸಾಧನೆಯ ಗರಿ ಕೂಡ ಭಾರತದ ಮುಡಿಗೇರಿತು. 13,47,000 ವೀಕ್ಷಕರು 2017ರ ಫೀಫಾ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ಅತಿ ಹೆಚ್ಚು ಜನ ಫೀಫಾ ವರ್ಡ್ಲ್‌ ಕಪ್ಅನ್ನು ನೇರವಾಗಿ ವೀಕ್ಷಿಸಿದ ಸಾಧನೆ ಭಾರತದಲ್ಲೇ ನೆರವೇರಿತು.

ಭಾರತದ ಕಿರಿಯರ ಫೂಟ್‌ಬಾಲ್‌ ತಂಡ.
ಭಾರತದ ಕಿರಿಯರ ಫೂಟ್‌ಬಾಲ್‌ ತಂಡ.

ಆದರೆ ಭಾರತದ ಕ್ರಿಕೆಟ್‌ ತಂಡಕ್ಕೆ ಹೋಲಿಸಿಕೊಂಡರೆ ಫೂಟ್‌ಬಾಲ್‌ ತಂಡದ ಸಾಧನೆ ನಗಣ್ಯವೆನಿಸುತ್ತಿದೆ. ಇದಕ್ಕೆ ದೇಶದಲ್ಲಿ ಫೂಟ್‌ಬಾಲ್‌ಗೆ ಸಿಗುತ್ತಿರುವ ಮಾನ್ಯತೆಯೂ ಕೂಡ ಕಾರಣವಾಗುತ್ತದೆ. ಕ್ರಿಕೆಟ್‌ಗೆ ಸಿಗುತ್ತಿರುವಷ್ಟು ಮನ್ನಣೆ ಫೂಟ್‌ಬಾಲ್‌ಗಿಲ್ಲ. ಕ್ರಿಕೆಟ್‌ನಲ್ಲಿ ಭಾರತ ಅಗ್ರಾಂಕ ಸ್ಥಾನಗಳಲ್ಲಿ ಜಾಗ ಪಡೆದಿದ್ದರೆ ಫೂಟ್‌ಬಾಲ್‌ನಲ್ಲಿ 97ನೇ ಸ್ಥಾನದಲ್ಲಿದೆ. 2021ರಲ್ಲಿ ಭಾರತದ ಫೂಟ್‌ಬಾಲ್‌ ತಂಡ ಫೀಫಾ ವರ್ಡ್ಲ್‌ ಕಪ್‌ನಲ್ಲಿ ಶಕ್ತಿಯುತವಾಗಿ ಭಾಗವಹಿಸಬಹುದು ಎಂದು ವರದಿಗಳು ತಿಳಿಸುತ್ತವೆ. ಭಾರತದ ತಂಡ ಹೆಚ್ಚಿನ ಪಂದ್ಯಗಳಲ್ಲಿ ಜಯಗಳಿಸಲು ಸಾಧ್ಯವಾಗುವುದು 2030ರ ನಂತರದಿಂದಲೇ ಎನ್ನುವ ಮಾತುಗಳಿವೆ.

ಇವೆಲ್ಲವನ್ನೂ ಸುಳ್ಳಾಗಿಸಿ ಭಾರತದ ಫೂಟ್‌ಬಾಲ್‌ ತಂಡ ಸದೃಢವಾಗಿ ಆಟವಾಡಲು ಶಕ್ತವಾಗುವುದು ಬೆಂಬಲ ದೊರೆತಾಗ ಮಾತ್ರ. ಅಭಿಮಾನ ಹೆಚ್ಚಿ, ದೊರೆಯುವ ಅನುಕೂಲಗಳೂ ಕೂಡ ಜಾಸ್ತಿಯಾದಲ್ಲಿ ಮಾತ್ರ ಫೂಟ್‌ಬಾಲ್‌ನಲ್ಲಿ ಭಾರತ ಅಗ್ರ ಸ್ಥಾನಗಳತ್ತ ಹೆಜ್ಜೆ ಹಾಕಬಹುದು. ಇಲ್ಲವಾದರೆ ಫೂಟ್‌ಬಾಲ್‌ ಎಂಬ ರೋಚಕ ಆಟ ಬಹುಸಂಖ್ಯಾತ ಭಾರತೀಯರಿಗೆ ಪರಕೀಯವಾಗಿಯೇ ಉಳಿದುಕೊಳ್ಳುತ್ತದೆ.