samachara
www.samachara.com
ಪೊಲೀಸ್‌ ಸರ್ಪಗಾವಲಿನಲ್ಲಿ ಕುಮಾರಸ್ವಾಮಿ; ಸಿಎಂ ಬುದ್ಧಿಮಾತು ಮತ್ತು ಐಪಿಎಸ್‌ ಮನಸ್ಥಿತಿ!
COVER STORY

ಪೊಲೀಸ್‌ ಸರ್ಪಗಾವಲಿನಲ್ಲಿ ಕುಮಾರಸ್ವಾಮಿ; ಸಿಎಂ ಬುದ್ಧಿಮಾತು ಮತ್ತು ಐಪಿಎಸ್‌ ಮನಸ್ಥಿತಿ!

ಜಡ್ಡುಗಟ್ಟಿರುವ ಪೊಲೀಸ್‌ ವ್ಯವಸ್ಥೆಯನ್ನು ಸುಧಾರಿಸುವುದು ಅಷ್ಟು ಸುಲಭವಿಲ್ಲ. ಪ್ರತಿ ಬಾರಿ ಹೊಸ ಸರಕಾರ ಬಂದಾಗ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಬುದ್ಧಿವಾದ ಹೇಳುವುದು ಮಾಮೂಲಾಗಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕುಮಾರಸ್ವಾಮಿ ಪೊಲೀಸ್‌ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷವಾಗಿ ಕೆಲಸ ಮಾಡಬೇಕು ಎಂದು ಬುದ್ಧಿವಾದ ಹೇಳಿ ಬಂದಿದ್ದಾರೆ.

“ಹೊಸ ಸರಕಾರ ಬಂದಿರುವುದು ಜನರಿಗೆ ಗೊತ್ತಾಗಬೇಕು, ಯಾರ ಮುಲಾಜಿಗೂ, ಪ್ರಭಾವಕ್ಕೂ ಮಣಿಯದೆ ಪೊಲೀಸ್‌ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು” ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಐಪಿಎಸ್‌ ಅಧಿಕಾರಿಗಳು ಕುಮಾರಸ್ವಾಮಿ ಅವರ ಬುದ್ಧಿವಾದವನ್ನು ಎಷ್ಟರ ಮಟ್ಟಿಗೆ ಮನಸ್ಸಿನೊಳಕ್ಕೆ ಹಾಕಿಕೊಂಡಿದ್ದಾರೋ ಗೊತ್ತಿಲ್ಲ.

ಕರ್ನಾಟಕ ಕೇಡರ್‌ನಲ್ಲಿ ಒಟ್ಟು 176 ಮಂದಿ ಐಪಿಎಸ್‌ ಅಧಿಕಾರಿಗಳಿದ್ದಾರೆ. ಇವರಲ್ಲಿ ಕೆಲವರು ಕರ್ನಾಟಕ ಪೊಲೀಸ್‌ ಸೇವೆಯಿಂದ ಐಎಎಸ್‌ಗೆ ಬಡ್ತಿ ಪಡೆದಿದ್ದರೆ, ಕೆಲವರು ನೇರವಾಗಿ ಐಪಿಎಸ್‌ ಆಗಿ ಬಂದಿರುವವರು.

ರಾಜ್ಯ ಕೇಡರ್‌ನ ಒಟ್ಟು 176 ಮಂದಿ ಐಪಿಎಸ್‌ಗಳ ಪೈಕಿ 13 ಮಂದಿ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ. ಉಳಿದ 163 ಐಪಿಎಸ್ ಅಧಿಕಾರಿಗಳು ಆಡಳಿತ, ಕಾನೂನು- ಸುವ್ಯವಸ್ಥೆ, ಸಂಚಾರ, ಆಂತರಿಕ ಭದ್ರತೆ, ಕಾರಾಗೃಹ, ಜಿಲ್ಲಾ ಪೊಲೀಸ್‌ – ಹೀಗೆ ಗೃಹ ಇಲಾಖೆಯ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ರಾಜ್ಯ ಒಂದರ ಕಾನೂನು- ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತೆಗೆ ಪೊಲೀಸ್‌ ವ್ಯವಸ್ಥೆ ಅತಿ ಮುಖ್ಯ. ಪೊಲೀಸ್‌ ವ್ಯವಸ್ಥೆ ಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ದಕ್ಷ ಹಾಗೂ ಪಾರದರ್ಶಕವಾಗಿದ್ದರೆ ಆ ರಾಜ್ಯದ ಜನ ನೆಮ್ಮದಿಯಾಗಿ ನಿದ್ರೆ ಮಾಡಬಹುದು. ಕರ್ನಾಟಕ ಪೊಲೀಸ್‌ಗೆ ಹಿಂದಿನಿಂದಲೂ ರಾಷ್ಟ್ರಮಟ್ಟದಲ್ಲಿ ಅಂತಹದ್ದೊಂದು ಒಳ್ಳೆಯ ಹೆಸರಿದೆ. ಆದರೆ, ರಾಜ್ಯ ಪೊಲೀಸ್‌ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಕಾಲಕಾಲಕ್ಕೆ ಬಹಿರಂಗವಾಗುತ್ತಲೇ ಬಂದಿದೆ.

ಪೊಲೀಸ್‌ ವ್ಯವಸ್ಥೆಯಲ್ಲಿ ಅಡಿಯಿಂದ ಮುಡಿಯವರೆಗೆ ಗುಲಾಮಿ ಪದ್ಧತೆ ಇಂದಿಗೂ ಜೀವಂತವಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಕಾನ್‌ಸ್ಟೆಬಲ್‌ಗಳು ಹಾಗೂ ಆರ್ಡರ್ಲಿಗಳನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ಸಾಕು ಪೊಲೀಸ್‌ ವ್ಯವಸ್ಥೆಯಲ್ಲಿ ಇನ್ನೂ ಬ್ರಿಟಿಷ್ ಮನಸ್ಥಿತಿ ಇನ್ನೂ ಇದೆ ಎಂಬುದು ಮೇಲು ನೋಟಕ್ಕೇ ಗೊತ್ತಾಗುತ್ತದೆ.

Also read: ಅಮಾನವೀಯ ಆರ್ಡರ್‌ಲಿ ಪದ್ಧತಿಗೆ ಕೋಕ್ ಕೊಟ್ಟ ಕೇರಳ: ಕರ್ನಾಟಕದ ಪೊಲೀಸ್ ಸಿಬ್ಬಂದಿಗಳ ಸ್ಥಿತಿ ಹೇಗಿದೆ?

ಹೊಸದಾಗಿ ಸೇವೆಗೆ ಬಂದ ಐಪಿಎಸ್‌ ಅಧಿಕಾರಿಗಳು ತಮ್ಮನ್ನು ತಾವು ದಕ್ಷ, ಪ್ರಾಮಾಣಿಕ, ಪಾರದರ್ಶಕ, ಜನಸ್ನೇಹಿ – ಎಂದೆಲ್ಲಾ ಬಿಂಬಿಸಿಕೊಳ್ಳಲು ಹವಣಿಸುವುದು ಹೆಚ್ಚು. ಕೋಚಿಂಗ್‌ ಪಡೆದು, ಓದಿ, ಸಂದರ್ಶನ ಎದುರಿಸಿ ಐಪಿಎಸ್‌ ಸೇವೆಗೆ ಆಯ್ಕೆಯಾಗಿ ಬರುವ ಅನೇಕ ಯುವ ಮನಸ್ಸುಗಳಲ್ಲಿ ಅತಿ ಬೇಗನೆ ಬದಲಾವಣೆ ತರಬೇಕೆಂಬ ತುಡಿತ ಇರುವುದು ಸಹಜ.

ಆದರೆ, ತರಬೇತಿ ಮುಗಿಸಿ ವ್ಯವಸ್ಥೆಯೊಳಕ್ಕೆ ಬಂದಾಗ ಇಲ್ಲಿನ ವಾಸ್ತವವನ್ನು ಎದುರಿಸಬೇಕಾಗುತ್ತದೆ. ಗೃಹ ಇಲಾಖೆಯೊಳಗೆ ಬೇರು ಬಿಟ್ಟಿರುವ ಬ್ರಿಟಿಷ್‌ ರಾಜ್‌ ಮನೋಭಾವಕ್ಕೆ ಹೊಸದಾಗಿ ಸೇವೆಗೆ ಬರುವ ಐಪಿಎಸ್‌ಗಳೂ ಸಲಾಮ್‌ ಹೊಡೆಯಲೇಬೇಕಾದ ಅನಿವಾರ್ಯತೆ ಇದೆ.

ಕಾರ್ಯನಿರ್ವಾಹಕ (ಎಕ್ಸಿಕ್ಯೂಟಿವ್‌) ಹುದ್ದೆಗೆ ಬರುವ ಹೊಸ ಐಪಿಎಸ್‌ ಅಧಿಕಾರಿಗಳ ತಲೆಯೊಳಗೆ ಹೀರೋಯಿಸಂ ತುಂಬಿದ್ದರೆ ಅದು ಅವರ ತಪ್ಪಲ್ಲ. ಏಕೆಂದರೆ ಇಡೀ ವ್ಯವಸ್ಥೆ ಐಪಿಎಸ್‌ಗಳಿಗೆ ಆ ಬಗೆಯ ಹೀರೋಯಿಸಂ ಅನ್ನು ಅನ್ವಯಿಸಿಯೇ ನೋಡುತ್ತದೆ. ಜಿಲ್ಲೆಗಳಲ್ಲಿರುವ ಯುವ ಐಪಿಎಸ್‌ ಅಧಿಕಾರಿಗಳು ಈ ಕಾರಣಕ್ಕೇ ಆಗಾಗ ಸದ್ದು ಮಾಡಿ, ಸುದ್ದಿಯಾಗುತ್ತಿರುತ್ತಾರೆ.

ವ್ಯವಸ್ಥೆಗೆ ಬಂದು ವರ್ಷಗಳು ಉರುಳಿದಂತೆ ಐಪಿಎಸ್‌ ಅಧಿಕಾರಿಗಳೊಳಗಿನ ಹೀರೊ ಮರೆಯುತ್ತಾ ಬಂದಿರುತ್ತಾನೆ. ವ್ಯವಸ್ಥೆಯೊಂದಿಗೆ ರಾಜೀ ಮಾಡಿಕೊಂಡು ಹೋಗುವ ಮನೋಭಾವ ಬಲಿಯತೊಡಗಿರುತ್ತದೆ. ವ್ಯವಸ್ಥೆಯನ್ನು ಬದಲಿಸಬೇಕೆಂಬ ಕನಸು ಹೊತ್ತು ಬರುವ ಕೆಲವರು ವ್ಯವಸ್ಥೆ ಇರುವುದೇ ಹೀಗೆ ಎಂದು ಹೊಂದಾಣಿಕೆ ಸೂತ್ರಕ್ಕೆ ಕಟ್ಟು ಬೀಳುವುದು ಸಾಮಾನ್ಯ.

ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಹೊಸ ಇನ್ನೊವಾ ಕಾರುಗಳನ್ನು ನೀಡಲಾಗಿದೆ. ಬದಲಿಗೆ ಹಿಂದೆ ಬಳಸುತ್ತಿದ್ದ ಇನ್ನೊವಾ ಕಾರುಗಳನ್ನು ಮರಳಿಸುವಂತೆ ಸೂಚಿಸಲಾಗಿದೆ. ಆದರೆ, ಹಿರಿಯ ಅಧಿಕಾರಿಗಳು ಹೊಸ ಕಾರನ್ನೂ ತಮ್ಮ ಬಳಿ ಇಟ್ಟುಕೊಂಡು ಹಳೆಯ ಕಾರನ್ನು ಮರಳಿಸುತ್ತಿಲ್ಲ ಎಂಬ ಮಾಹಿತಿ ಇದೆ.

ಪೊಲೀಸ್‌ ಸರ್ಪಗಾವಲಿನಲ್ಲಿ ಕುಮಾರಸ್ವಾಮಿ; ಸಿಎಂ ಬುದ್ಧಿಮಾತು ಮತ್ತು ಐಪಿಎಸ್‌ ಮನಸ್ಥಿತಿ!

ಮಾಫಿಯಾ ರಕ್ಷಣೆಯ ಹೊಣೆ!:

ಪೊಲೀಸ್‌ ಅಧಿಕಾರಿಗಳು ಆಯಾ ಪ್ರದೇಶದ ಮಾಫಿಯಾ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ ಎಂಬ ಆರೋಪ ಸಾಮಾನ್ಯ. ಮರಳು, ಕಲ್ಲುಗಣಿಗಾರಿಕೆ, ರಿಯಲ್‌ ಎಸ್ಟೇಟ್‌ – ಇಂತಹ ಮಾಫಿಯಾಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸರೇ ಮಾಫಿಯಾ ಜತೆಗೆ ಶಾಮೀಲಾಗಿ ಜೇಬು ತುಂಬಿಸಿಕೊಳ್ಳುತ್ತಾರೆ ಎಂಬ ಆರೋಪಗಳಿವೆ.

ಪೊಲೀಸ್‌ ಔಟ್‌ಪೋಸ್ಟ್‌ನಿಂದ ಹಿಡಿದು ಐಜಿಪಿ ಕಚೇರಿಯವರೆಗೂ ವಸೂಲಿಯ ಹಣ ಹರಿದಾಡುತ್ತದೆ ಎಂಬುದನ್ನು ಇಲಾಖೆಯಲ್ಲಿರುವವರೇ ಒಪ್ಪಿಕೊಳ್ಳುತ್ತಾರೆ. ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಬಿಲ್ಡರ್‌ಗಳವರೆಗೆ ಪೊಲೀಸರ ವಸೂಲಿ ನಡೆಯುತ್ತದೆ. ಇದೆಲ್ಲಾ ಓಪನ್‌ ಸೀಕ್ರೆಟ್‌ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು.

“ಪೊಲೀಸ್‌ ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಕಂಡು ಕೆಳಹಂತದಲ್ಲಿರುವ ಕೆಲವರು ಆರಂಭದಲ್ಲೇ ಕೆಲಸ ಬಿಟ್ಟು ಹೋಗುತ್ತಾರೆ. ಕೆಲಸ ಮಾಡುವುದು ಅನಿವಾರ್ಯ ಎನ್ನುವವರು ಮಾತ್ರ ಇಲಾಖೆಯೊಳಗೆ ಉಳಿದುಕೊಳ್ಳುತ್ತಾರೆ. ಅತಿಯಾದ ಒತ್ತಡದ ನಡುವೆ ಕೆಲಸ ಮಾಡುವ ಕೆಳಹಂತದ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ತಪ್ಪಿದ್ದಲ್ಲ” ಎನ್ನುತ್ತಾರೆ ಅವರು.

“ಈಗ ಇಲಾಖೆಗೆ ಕಾನ್‌ಸ್ಟೆಬಲ್‌ಗಳಾಗಿ ಬರುತ್ತಿರುವವರು ಪದವಿ, ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಅವರಿಗೆ ಹಣಕ್ಕಾಗಿ ಕೈ ಚಾಚುವುದು ಇಷ್ಟವಿರುವುದಿಲ್ಲ. ಆದರೂ ಹಿರಿಯ ಅಧಿಕಾರಿಗಳಿಗೆ ಕೊಡಬೇಕು ಎಂಬ ಕಾರಣಕ್ಕೆ ವಸೂಲಿ ಮಾಡುವುದು ಅನಿವಾರ್ಯ. ಇದೊಂದು ವಿಷ ವರ್ತುಲ, ಪೊಲೀಸ್‌ ವ್ಯವಸ್ಥೆ ಸುಧಾರಿಸುವುದು ಅಷ್ಟು ಸುಲಭವಿಲ್ಲ” ಎಂಬುದು ಅವರ ಅಭಿಪ್ರಾಯ.

“ಬಹುತೇಕ ಐಪಿಎಸ್ ಅಧಿಕಾರಿಗಳು ತಮಗಿಂತ ಕೆಳಗಿನ ಅಧಿಕಾರಿಗಳನ್ನೂ ಗುಲಾಮರಂತೆ ಕಾಣುತ್ತಾರೆ. ಬಹುತೇಕ ಐಪಿಎಸ್‌ ಅಧಿಕಾರಿಗಳು ತಮ್ಮ ಕೆಳಗಿನ ಹಂತದ ಎಲ್ಲರನ್ನೂ ಏಕವಚನದಲ್ಲೇ ಮಾತನಾಡಿಸುತ್ತಾರೆ. ಪೊಲೀಸ್‌ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಎದುರಾಡುವವರು ಬಹಳ ಕಡಿಮೆ. ಎದುರಾಡಿದರೆ ಅಮಾನತು ತಪ್ಪಿದ್ದಲ್ಲ” ಎನ್ನುತ್ತಾರೆ ಅವರು.

ಪಾಚಿಗಟ್ಟಿರುವ ಪೊಲೀಸ್‌ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ದೂರು ಪ್ರಾಧಿಕಾರವೂ ರಚನೆಯಾಗಿದೆ. ಆದರೆ, ಸದ್ಯ ಈ ದೂರು ಪ್ರಾಧಿಕಾರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.

ಪೊಲೀಸ್‌ ವ್ಯವಸ್ಥೆಯನ್ನು ಬಲ ಪಡಿಸಬೇಕಾದ್ದು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕಾದ್ದು ಸರಕಾರದ ಜವಾಬ್ದಾರಿ. ಆದರೆ, ಅತಿಯಾದ ಭ್ರಷ್ಟಾಚಾರ ಹಾಗೂ ಹಿರಿಯ ಅಧಿಕಾರಿಗಳ ಬ್ರಿಟಿಷ್‌ ರಾಜ್‌ ಮನಸ್ಥಿತಿ ಪೊಲೀಸ್‌ ವ್ಯವಸ್ಥೆಯನ್ನು ನಿಂತ ನೀರಾಗಿಸಿದೆ.