samachara
www.samachara.com
‘ಯೋಗ’: ಭಾರತೀಯ ಸಂಪ್ರದಾಯವಷ್ಟೇ ಅಲ್ಲ, ಜಗತ್ತಿನ ಮಲ್ಟಿ ಬಿಲಿಯನ್‌ ಡಾಲರ್‌ ಮಾರುಕಟ್ಟೆ!
COVER STORY

‘ಯೋಗ’: ಭಾರತೀಯ ಸಂಪ್ರದಾಯವಷ್ಟೇ ಅಲ್ಲ, ಜಗತ್ತಿನ ಮಲ್ಟಿ ಬಿಲಿಯನ್‌ ಡಾಲರ್‌ ಮಾರುಕಟ್ಟೆ!

ಇವತ್ತಿಗೆ ಯೋಗ ಕೇವಲ ಭಾರತೀಯ ಆಧ್ಯಾತ್ಮಿಕತೆಯ ಭಾಗವಾಗಿ ಅಷ್ಟೇ ಉಳಿದಿಲ್ಲ. ಇಡೀ ಜಗತ್ತಿನ ಕೋಟ್ಯಾಂತರ ಜನರ ಲೈಫ್‌ಸ್ಟೈಲ್‌ ಆಗಿದೆ. ಜತೆಗೆ ವಿಶ್ವದಲ್ಲಿ ಅತೀ ವೇಗವಾಗಿ ವೃದ್ಧಿಯಾಗುತ್ತಿರುವ ಮಾರುಕಟ್ಟೆಗಳಲ್ಲಿ ಇದೂ ಕೂಡ ಒಂದು. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಭಾರತದ ಹಲವಾರು ನಗರ, ಪಟ್ಟಣ, ಶಾಲೆ, ಕಾಲೇಜು, ಕಚೇರಿ, ದೊಡ್ಡ ದೊಡ್ಡ ಮೈದಾನಗಳಲ್ಲಿ ಗುರುವಾರ ಯೋಗದ್ದೇ ಮಾತು. ಬರೀ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನ ತುಂಬ ಕೋಟ್ಯಾಂತರ ಜನರು ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ. ಇವತ್ತಿಗೆ ಯೋಗ ಕೇವಲ ಭಾರತದಲ್ಲ, ಇಡೀ ಜಗತ್ತಿನ ಕೋಟ್ಯಾಂತರ ಜನರ ಲೈಫ್‌ಸ್ಟೈಲ್‌. ಜತೆಗೆ ವಿಶ್ವದಲ್ಲಿ ಅತೀ ವೇಗವಾಗಿ ವೃದ್ಧಿಯಾಗುತ್ತಿರುವ ಮಾರುಕಟ್ಟೆ ಎಂಬುದನ್ನು ಗಮನಿಸಬೇಕಿದೆ. 

ಸುಮಾರು 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಯೋಗಕ್ಕೆ ವಿಶ್ವದೆಲ್ಲೆಡೆ ಎಲ್ಲಿಲ್ಲದ ಮಾನ್ಯತೆ ದೊರೆತಿದೆ. 20ನೇ ಶತಮಾನದವರೆಗೂ ಭಾರತದ ಪುರಾತನ ಸಂಪ್ರದಾಯದ ಭಾಗವಾಗಿದ್ದ ಯೋಗ ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿಯಾಗಿ ರೂಪುಗೊಳ್ಳುತ್ತಿದೆ. ಆರೋಗ್ಯ ವೃದ್ಧಿಸುವ, ಒತ್ತಡವನ್ನು ನಿವಾರಿಸುವ, ಸೌಂದರ್ಯವನ್ನು ಹೆಚ್ಚಿಸುವ ಕ್ರಿಯೆಯಾಗಿ ಜಗತ್ತಿನೆಲ್ಲೆಡೆ ಬಳಕೆಯಾಗುತ್ತದೆ. ಇದೇ ವೇಗದಲ್ಲಿ ತನ್ನ ‘ಮಾರುಕಟ್ಟೆ’ಯನ್ನೂ ಯೋಗ ಬೆಳಸಿಕೊಳ್ಳುತ್ತಿದೆ.

ಯೋಗ ವಿಶ್ವದಲ್ಲಿ 80 ಬಿಲಿಯನ್‌ ಡಾಲರ್‌ಗಳಿಗೂ ಹೆಚ್ಚಿನ ವಾರ್ಷಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ರೂಪಾಯಿಗಳ ಲೆಕ್ಕದಲ್ಲಿ ಹೇಳುವುದಾದರೆ ಒಂದು ವರ್ಷದ ಅವಧಿಗೆ ಯೋಗ ಸೃಷ್ಟಿಸುತ್ತಿರುವ ಮಾರುಕಟ್ಟೆ ಮೌಲ್ಯ ಸರಿಸುಮಾರು 5. 5 ಲಕ್ಷ ಕೋಟಿ. ಇದರಲ್ಲಿ ಬಹುದುಡ್ಡ ಪಾಲು ಅಮೆರಿಕಾದ್ದು. ಯೋಗದ ಮೂಲನೆಲೆಯಾದ ಭಾರತದಲ್ಲಿ ಯೋಗಕ್ಕಿರುವ ಮಾರುಕಟ್ಟೆ ಮೌಲ್ಯ 4, 900 ಕೋಟಿ ರೂಪಾಯಿಗಳು. ಈ ಮೌಲ್ಯದಲ್ಲಿ ಹೆಚ್ಚಿನ ಭಾಗ ದೊರೆಯುತ್ತಿರುವುದು ಸೇವಾ ವಲಯದಿಂದ. ಇನ್ನುಳಿದ ಮೌಲ್ಯ ಯೋಗಕ್ಕೆ ಅಗತ್ಯವೆನಿಸಿದ ಪರಿಕರಗಳ ಮಾರುಕಟ್ಟೆಯಿಂದ ದೊರೆಯುತ್ತಿದೆ.

ಯೋಗ ಈ ಮಟ್ಟಿಗಿನ ಮೌಲ್ಯವನ್ನು ಪಡೆದುಕೊಂಡದ್ದು ಇತ್ತೀಚಿನ ವರ್ಷಗಳಲ್ಲಿ. 2010ರ ವೇಳೆಗೆ ಜಗತ್ತಿನ ಕೆಲವು ಭಾಗಗಳಲ್ಲಷ್ಟೇ ಪರಿಚಯದಲ್ಲಿದ್ದ ಯೋಗ ಇಂದು ವಿಶ್ವ ಹಲವು ಭಾಗಗಳಿಗೆ ತನ್ನ ಬಾಹುಗಳನ್ನು ಚಾಚಿ ಬೆಳೆದಿದೆ. ಇದಕ್ಕೆ ಮುಖ್ಯವಾಗಿ ಕಾರಣವಾಗಿದ್ದು. ‘ಅಂತರರಾಷ್ಟ್ರೀಯ ಯೋಗ ದಿನ’ ಆಚರಣೆ. 2015ರ ಜೂನ್‌ 21ರಂದು ಮೊದಲ ಯೋಗ ದಿನ ಆಚರಿಸಲ್ಪಟ್ಟಿತ್ತು. ದೆಹಲಿಯ ರಾಜಪಥ್‌ನಲ್ಲಿ ಮೊದಲ ಬಾರಿಗೆ 35,000ಕ್ಕೂ ಹೆಚ್ಚು ಜನ ಸೇರಿ ಯೋಗಸಾನ ಮಾಡಿದ್ದರು. ಅಂದು ಯೋಗ ಇಡೀ ಜಗತ್ತಿನ ಗಮನ ಸೆಳೆದಿತ್ತು.

ರಾಜ್‌ಪಥ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚಾರಣೆ.
ರಾಜ್‌ಪಥ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚಾರಣೆ.

ಬಾಲಿವುಡ್‌ ನಟನಟಿಯರು ಕೂಡ ಯೋಗದ ಪ್ರಾಮುಖ್ಯತೆ ಹೆಚ್ಚಾಗಲು ಕಾರಣರಾಗಿದ್ದರು. ಪ್ರಖ್ಯಾತ ನಟಿ ಶಿಲ್ಪ ಶೆಟ್ಟಿ ತಮ್ಮ ಯೋಗಾಸನದ ವಿಡಿಯೋಗಳನ್ನು ಬಿಡುಗಡೆಗೊಳಿಸಿ ಜನರನ್ನು ಯೋಗದತ್ತ ತಿರುಗುವಂತೆ ಪ್ರೇರೇಪಿಸಿದ್ದರು. ಕರೀನಾ ಕಪೂರ್‌, ಬಿಪಾಷಾ ಬಸು ಕೂಡ ಯೋಗದ ಮೇನಿಯಾ ಹೆಚ್ಚಾಗಲು ಕಾರಣರಾಗಿದ್ದರು.

ನಗರೀಕರಣದ ಹೆಚ್ಚಳ ಮತ್ತು ಒತ್ತಡ ತುಂಬಿದ ಜೀವನ ಶೈಲಿಯ ಕಾರಣದಿಂದಲೂ ಕೂಡ ಯೋಗ ಮುನ್ನೆಲೆಗೆ ಬಂದಿತ್ತು. ದೈಹಿಕವಾಗಿ ಅಷ್ಟೇ ಅಲ್ಲದೇ ಮಾನಸಿಕವಾಗಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ಯೋಗವನ್ನು ಹೆಚ್ಚಿನ ಜನರು ಅಭ್ಯಾಸಿಸಿತೊಡಗಿದ್ದರು. ಟೈಮ್ಸ್‌ ಜಾಬ್ಸ್ ಎಂಬ ಸಂಸ್ಥೆ ನಡೆಸಿದ ಅಧ್ಯಯನ ಶೇ.80ರಷ್ಟು ಭಾರತೀಯರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ ಯೋಗ ಅತಿದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲಿದೆ ಎಂದಿತ್ತು.

ಆ ಸಮಯಕ್ಕೆ ಮುನ್ನೆಲೆಗೆ ಬಂದಿದ್ದ ಬಾಬಾ ರಾಮ್‌ದೇವ್ ದೇಶ ದೊಡ್ಡ ಯೋಗ ಉದ್ಯಮಿಯಾಗಿ ಕಂಡಿದ್ದರು. ‘ಪತಂಜಲಿ’ ಹೆಸರಿನಲ್ಲಿ ಯೋಗದ ಜತೆಗೆ ಆಯುರ್ವೇದ ಉತ್ಪನ್ನಗಳನ್ನು ಉತ್ಪಾದಿಸಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದರು. ಹರಿದ್ವಾರದಲ್ಲಿ ಯೋಗಕ್ಕೆ ಸಂಬಂಧಿಸಿದ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದರು. 2012-17ರಲ್ಲಿ ಬಾಬಾ ರಾಮ್‌ದೇವ್ ಯೋಗದಿಂದ ಗಳಿಸಿದ ಲಾಭ 10,000 ಕೋಟಿ ರೂಪಾಯಿಗಳು.

ಸದ್ಯ ದೇಶದ ಯೋಗ ಮಾರುಕಟ್ಟೆ ದಿನದಿಂದ ದಿನಕ್ಕೆ ವೃದ್ಧಿಗೊಳ್ಳುತ್ತಾ ಸಾಗಿದೆ. ಯೋಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ನಗರಗಳಲ್ಲಿ ಯೋಗ ಕೇಂದ್ರಗಳಿಗೆ, ಯೋಗ ತರಭೇತಿದಾರರ ಬೇಡಿಕೆ ವರ್ಷಕ್ಕೆ ಶೇ.35ರಷ್ಟು ಹೆಚ್ಚಿದೆ. ಯೋಗ ಶಾಲೆಗಳು, ಸರ್ಟಿಫಿಕೇಟ್‌ ಕೋರ್ಸ್‌ಗಳು, ಪಾರ್ಕ್‌ಗಳು ಹೀಗೆ ಯೋಗ ಸುತ್ತಲಿನ ಚಟುವಟಿಕೆ ಸಾಗಿದೆ. ಈಗ ಭಾರತದಲ್ಲಿ ತೀವ್ರಗತಿಯಲ್ಲಿ ಬೆಳೆವಣಿಗೆ ಕಾಣುತ್ತಿರುವ ಮಾರುಕಟ್ಟೆಗಳಲ್ಲಿ ಯೋಗದ ಮಾರುಕಟ್ಟೆಯೂ ಒಂದು.

ಅಮೆರಿಕಾದಲ್ಲಿ ಯೋಗ:

‘ಯೋಗ’: ಭಾರತೀಯ ಸಂಪ್ರದಾಯವಷ್ಟೇ ಅಲ್ಲ, ಜಗತ್ತಿನ ಮಲ್ಟಿ ಬಿಲಿಯನ್‌ ಡಾಲರ್‌ ಮಾರುಕಟ್ಟೆ!

ಯೋಗ ಜನ್ಮ ತಾಳಿದ್ದು, ಹೆಚ್ಚು ಪ್ರಚಾರಕ್ಕೆ ಬಂದಿದ್ದು ಭಾರತದಲ್ಲಾದರೂ ಅತಿದೊಡ್ಡ ಮಾರುಕಟ್ಟೆಯನ್ನು ವೃದ್ಧಿಸಿಕೊಂಡಿರುವುದು ಅಮೆರಿಕಾದಲ್ಲಿ. ಸದ್ಯ ಅಮೆರಿಕಾದಲ್ಲಿ ವೇಗವಾಗಿ ವೃದ್ಧಿಯಾಗುತ್ತಿರುವ ಮಾರುಕಟ್ಟೆಗಳ ಪೈಕಿ ಯೋಗದ್ದು 4ನೇ ಸ್ಥಾನ. ಪ್ರತಿ ವರ್ಷ ಅಮೆರಿಕಾದಲ್ಲಿ ಯೋಗವನ್ನು ಅಭ್ಯಾಸಿಸುವವರ ಸಂಖ್ಯೆ ಶೇ.20ರಷ್ಟು ಹೆಚ್ಚಾಗುತ್ತಿದೆ. 2015ರಲ್ಲಿ 1.53 ಕೋಟಿ ಅಮೆರಿಕನ್ನರು ಯೋಗದಲ್ಲಿ ತೊಡಗಿದ್ದರು. ಈಗ ಈ ಸಂಖ್ಯೆ 2 ಕೋಟಿಯನ್ನು ದಾಟಿದೆ. ಕಳೆದ 5 ವರ್ಷಗಳಲ್ಲಿ ಯೋಗಾಸನಕ್ಕೆ ಮಾರುಹೋಗಿರುವವರ ಸಂಖ್ಯೆ ಶೇ.87ರಷ್ಟು ಹೆಚ್ಚಾಗಿದೆ. ಅಂದರೆ ಅಮೆರಿಕಾದಲ್ಲಿ ಯೋಗಾಸನ ಮಾಡುವವರ ಸಂಖ್ಯೆ 5 ವರ್ಷಗಳಲ್ಲಿ ದುಪ್ಪಟ್ಟಾಗುವ ಹಂತ ತಲುಪಿದೆ.

ಅಮೆರಿಕಾದಲ್ಲಿ ಯೋಗದಲ್ಲಿ ನಿರತರಾಗಿರುವವರ ಪೈಕಿ ಶೇ.82.2ರಷ್ಟು ಮಂದಿ ಮಹಿಳೆಯರು. ಶೇ.41ರಷ್ಟು ಜನ 18ರಿಂದ 35 ವರ್ಷದವ ಒಳಗಿನವರಾಗಿದ್ದು, ಶೇ.41ರಷ್ಟು ಜನ 35-58 ವರ್ಷದವರಾಗಿದ್ದಾರೆ. ಉಳಿದ 18ರಷ್ಟು ಮಂದಿ 58 ವರ್ಷ ದಾಟಿದವರು. ಯೋಗ ಅಭ್ಯಾಸುತ್ತಿರುವ 2 ಕೋಟಿ ಜನರ ಪೈಕಿ ಶೇ.78ಕ್ಕಿಂತಲೂ ಹೆಚ್ಚು ಜನ ಕಾಲೇಜು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಅಮೆರಿಕಾದ ಯೋಗಪಟುಗಳಲ್ಲಿ ಶೇ.84 ಮಂದಿ ಬಿಳಿಯರು. ಜತೆಗೆ ಬಹುಪಾಲು ಜನರು ಆರ್ಥಿಕ ಹಿನ್ನೆಲೆ ಗಟ್ಟಿಯಾಗಿರುವವರೇ.

ಪ್ರತಿ ಅಮೆರಿಕನ್ನರು ವರ್ಷದಲ್ಲಿ ಯೋಗಕ್ಕೆಂದು ವ್ಯಯಿಸುವ ಅಂದಾಜು ಮೊತ್ತ 500 ಡಾಲರ್‌ಗಳನ್ನು ದಾಟುತ್ತದೆ. ಇದು ಕೇವಲ ಯೀಗಕ್ಕೆ ಅಗತ್ಯವಾದ ಪರಿಕರಗಳನ್ನು ಕೊಳ್ಳಲು ಬಳಸುವ ಹಣವಷ್ಟೇ. ಪ್ರತಿ ವರ್ಷ ಅಮೆರಿಕಾದ ಎಲ್ಲಾ ಯೋಗಿಗಳು ಒಟ್ಟಾಗಿ ಸೇರಿ ಯೋಗಕ್ಕೆಂದು ವ್ಯಯಿಸುವ ಹಣದ ಪ್ರಮಾಣ ಸರಿಸುಮಾರು 110 ಕೋಟಿ ಡಾಲರ್‌ಗಳನ್ನು ದಾಟುತ್ತದೆ.

ಜಗತ್ತಿನಲ್ಲಿ ಯೋಗ:

ಇಂದು ಜಗತ್ತಿನಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು 30 ಕೋಟಿಗೂ ಹೆಚ್ಚು ಜನ ಯೋಗಾಸನ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳ ಯೋಗ ಮಾಡುವವರ ಸಂಖ್ಯೆ ಶೇ.413ರಷ್ಟು ಹೆಚ್ಚಳಗೊಂಡಿದೆ. ಅಂದರೆ ಯೋಗ ಮಾರುವವರ ಸಂಖ್ಯೆ 4 ಪಟ್ಟು ಹೆಚ್ಚಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇಂದು ಯೋಗ ಸೆಂಟರ್‌ಗಳಿವೆ. 170ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ಜಗತ್ತಿನ ರಾಷ್ಟ್ರಗಳ ಪೈಕಿ ಯೋಗದ ಕಡೆ ಆಸಕ್ತಿ ತೊರಿಸುತ್ತಿರುವ ಶೇಕಡವಾರು ಜನರ ಪೈಕಿ ಜಪಾನ್‌ ಮೊದಲ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾದಲ್ಲಿ 14 ವರ್ಷ ಮೇಲ್ಪಟ್ಟ 10 ಜನರಲ್ಲಿ ಒಬ್ಬರು ಯೋಗಿಗಳು. 2015ರ ವೇಳೆಗೆ ಆಸ್ಟ್ರೇಲಿಯಾದಲ್ಲಿ ಯೋಗ 1 ಬಿಲಿಯನ್‌ ಡಾಲರ್‌ ಮಾರುಕಟ್ಟೆಯನ್ನು ಹೊಂದಿತ್ತು. ಜತೆಗೆ 12,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿತ್ತು. ಅಸ್ಟ್ರೇಲಿಯಾದಲ್ಲಿ ಯೋಗ ಏರೋಬಿಕ್ಸ್‌ಗಿಂತಲೂ ಎರಡು ಪಟ್ಟು ಜಾಸ್ತಿ ಜನರಿಂದ ಅಭ್ಯಾಸಿಸಲ್ಪಡುತ್ತಿದೆ. ವರದಿಗಳ ಪ್ರಕಾರ ಅಸ್ಟ್ರೇಲಿಯಾದಲ್ಲಿ ಟೇಬಲ್‌ ಟೆನ್ನಿಸ್‌ಗಿಂತ ಯೋಗವೇ ಫೇಮಸ್‌.

ಇಂದು ಇಡೀ ಜಗತ್ತಿನಲ್ಲಿ 50ಕ್ಕೂ ಹೆಚ್ಚು ವಿಧವಾದ ಯೋಗಗಳು ಚಾಲ್ತಿಯಲ್ಲಿವೆ. ಅವುಗಳ ಪೈಕಿ ನಗ್ನ ಯೋಗಾಸನ, ಕಸರತ್ತುಗಳನ್ನು ಒಳಗೊಂಡ ಆಕ್ರೋ ಯೋಗಾಸನ ಮತ್ತು ಸಾಕುನಾಯಿಗಳೊಂದಿಗೆ ನಡೆಸುವ ಯೋಗಾಸನಗಳು ಹೆಚ್ಚು ಪ್ರಚಲಿತಕ್ಕೆ ಬರುತ್ತಿವೆ.

‘ಯೋಗ’: ಭಾರತೀಯ ಸಂಪ್ರದಾಯವಷ್ಟೇ ಅಲ್ಲ, ಜಗತ್ತಿನ ಮಲ್ಟಿ ಬಿಲಿಯನ್‌ ಡಾಲರ್‌ ಮಾರುಕಟ್ಟೆ!

ಯೋಗಾಸನದ ವೇಳೆ ಬಳಸುವ ಬಟ್ಟೆಗಳಿಗೆ ಜಗತ್ತಿನಾದ್ಯಂತ ದೊಡ್ಡ ಪೈಪೋಟಿ ಸೃಷ್ಟಿಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ಉಡುಪು ತಯಾರಿಕಾ ಕಂಪನಿಗಳಾದ ನೈಕ್, ಅಡಿಡಾಸ್‌, ಮಾಂಡುಕ, ಪೂಮಾ, ಅಂಡರ್‌ ಆರ್ಮರ್‌, ವಿಎಫ್‌ಸಿ, ಕೊಲಂಬಿಯಾ ಸ್ಪೋರ್ಟ್ಸ್‌ ವೇರ್ ಸೇರಿದಂತೆ ಇನ್ನೂ ಕೆಲವು ಕಂಪನಿಗಳು ಪೈಪೊಟಿಗೆ ಬಿದ್ದಿವೆ. ಬಟ್ಟೆಗಳಿಗಷ್ಟೇ ಅಲ್ಲದೇ, ಯೋಗದ ವೇಳೆ ಬಳಸುವ ನೆಲಹಾಸುಗಳಿಗೂ (ಮ್ಯಾಟ್‌) ಕೂಡ ದೊಡ್ಡ ಪೈಪೋಟಿ ಸೃಷ್ಟಿಯಾಗಿದೆ. ಮ್ಯಾಟ್‌ಗಳ ತಯಾರಿಕೆಗೆಂದೇ ಬೇರ್‌ಫೂಟ್‌ ಯೋಗ, ಗಯಾಮ್‌, ಜೇಡ್‌ಯೋಗ ಇತ್ಯಾದಿ ಕಂಪನಿಗಳು ಜನ್ಮ ತಾಳಿವೆ. ಈ ವಸ್ತುಗಳಿಗೆಲ್ಲಾ ಅತಿದೊಡ್ಡ ಮಾರುಕಟ್ಟೆಯಾಗಿರುವುದು ಅಮೆರಿಕಾ.

ಯೋಗದ ತರಗತಿಗಳನ್ನು ತೆಗೆಯುವುದು ಹೇಗೆ ಎನ್ನುವುದನ್ನು ವಿವರಿಸುವುದಕ್ಕಾಗಿಯೇ ಕೆಲವು ವೆಬ್‌ಸೈಟ್‌ಗಳು ತೆರೆದುಕೊಂಡಿವೆ. ಯೋಗ ಕ್ಲಾಸ್‌ಗಳನ್ನು ನಡೆಸಲು ಬೇಕಾದ ಮಾಹಿತಿ, ಯೋಗವನ್ನು ಹೇಗೆ ಉದ್ಯಮವನ್ನಾಗಿ ಮಾಡಿಕೊಳ್ಳಬಹುದು, ಯೋಗದಿಂದ ಅಭಿವೃದ್ಧಿಗೊಂಡವರು ಹೀಗೆ ನಾನಾ ವಿಷಯಗಳ ಕುರಿತ ನೂರಾರು ಮಾಹಿತಿಗಳನ್ನು ‘ಯೋಗ ಜರ್ನಲ್‌’ ಎಂಬ ಜಾಲತಾಣ ಒದಗಿಸುತ್ತಿದೆ.

ಉತ್ತಮ ಆರೋಗ್ಯವನ್ನು ಹೊಂದುವುದಕ್ಕಾಗಿ ಇಂದು ಲಕ್ಷಾಂತರ ಮಂದಿ ವೈದ್ಯರಿಂದ ಸೂಚಿಸಲ್ಪಡುತ್ತಿರುವ ಯೋಗ ಅರೋಗ್ಯ ಕ್ಷೇತ್ರಗಳ ಹಲವಾರು ತೆರಪಿಗಳಿಗೆ ಪ್ರತಿಸ್ಫರ್ಧಿಯಾಗಿ ರೂಪುತಳೆದಿದೆ. ಇಂದು ಯೋಗ ಕೇವಲ ಭಾರತೀಯ ಸಂಪ್ರದಾಯವಲ್ಲ. ಬದಲಿಗೆ, ಬದಲಾಗುತ್ತಿರುವ ಜಗತ್ತಿನ ಹೊಸ ಲೈಫ್‌ ಸ್ಟೈಲ್. ಜತೆಗೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವರ್ಲ್ಡ್‌ ವೈಡ್‌ ಮಾರ್ಕೆಟ್.