samachara
www.samachara.com
ಉತ್ತರ ಕರ್ನಾಟಕದ ‘ರಕ್ತ ಚರಿತ್ರೆ’; ಭೀಮೆಯಲ್ಲಿ ನೀರಿಗಿಂತಲೂ ನೆತ್ತರು ಹರಿದಿದ್ದೇ ಜಾಸ್ತಿ!
COVER STORY

ಉತ್ತರ ಕರ್ನಾಟಕದ ‘ರಕ್ತ ಚರಿತ್ರೆ’; ಭೀಮೆಯಲ್ಲಿ ನೀರಿಗಿಂತಲೂ ನೆತ್ತರು ಹರಿದಿದ್ದೇ ಜಾಸ್ತಿ!

ಭೀಮಾ ತೀರದ ಕೌಟುಂಬಿಕ ದ್ವೇಷ ‘ಭೀಮಾ ತೀರದ ಹಂತಕರು’ ಎಂಬ ಕುಖ್ಯಾತಿಗೆ ಕಾರಣವಾಗಿದ್ದು ಈಗ ಇತಿಹಾಸ. ಆ ಕರಾಳ ಇತಿಹಾಸವನ್ನು ಈಗ ಮತ್ತೆ ನೆನಪಿಸಿರುವವರು ನಕಲಿ ಎನ್‌ಕೌಂಟರ್‌ ಆರೋಪ ಹೊತ್ತಿರುವ ಪೊಲೀಸರು.

ಪರಶುರಾಮ ಶಿವಶರಣ

ಪರಶುರಾಮ ಶಿವಶರಣ

ವೈಯಕ್ತಿಕ ಹಗೆತನ, ಕೌಟುಂಬಿಕ ದ್ವೇಷಗಳಿಂದಾಗಿ ಹಲವು ದಶಕಗಳಿಂದ ಭೀಮಾತೀರದಲ್ಲಿ ನೆತ್ತರು ಹರಿಯುತ್ತಲೇ ಬಂದಿದೆ. ಈ ಪವಿತ್ರ ಭೀಮೆಯಲ್ಲಿ ನೀರಿಗಿಂತಲೂ ನೆತ್ತರು ಹರಿದಿದ್ದೇ ಹೆಚ್ಚು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಹಾಗೂ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಎರಡು ಕುಟುಂಬಗಳ ಕಲಹ, ವೈರತ್ವ ಎರಡು ಮೂರು ತಲೆಮಾರಿನೂದ್ದಕ್ಕೂ ಹರಿದು ಬಂದಿದೆ.

ಕೆಲ ದಶಕಗಳ ಹಿಂದೆ ತುಂಬ ಅಟ್ಟಹಾಸದಲ್ಲಿದ್ದ ಭೀಮೆಯ ರಕ್ತಪಾತಕ್ಕೆ 2000ನೇ ಇಸ್ವಿಯಲ್ಲಿ ನಡೆದ ಚಂದಪ್ಪ ಹರಿಜನ ಎನ್‌ಕೌಂಟರ್ ಪ್ರಕರಣದಿಂದ ಕೊಂಚ ಕಡಿವಾಣ ಬಿದ್ದರೂ, ತೆರೆಮರೆಯಲ್ಲಿಯೇ ರಕ್ತಪಾತದ ಓಕುಳಿ ನಡೆಯುತ್ತಲೇ ಇತ್ತು.

ಹಂತಕ ಚಂದಪ್ಪ ಹರಿಜನ ಎನ್‌ಕೌಂಟರ್ ಬಳಿಕ 2007ರಲ್ಲಿ ಮುತ್ತು ಮಾಸ್ತರ ಕೊಲೆ ನಡೆದದ್ದು, ಆಸ್ತಿಯ ಕಲಹದಿಂದ. ಅನಂತರ 2008ರಲ್ಲಿ ಬಾಗಪ್ಪನ ಅಣ್ಣನ ಮಗ ಪರಶುರಾಮ ಹಾಗೂ ಅಳಿಯ ರಾಜುನನ್ನು ಸಿಂದಗಿ- ಆಲಮೇಲ ರಸ್ತೆಯ ರಾಂಪೂರ ಕಾಲುವೆ ಬಳಿ ಹತ್ಯೆ ಮಾಡಲಾಯಿತು.

ಇದಾದ ನಂತರ 2008ರಲ್ಲಿ ಪುತ್ರಪ್ಪ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಯಿತು. ಆಗ ಕಾಂಗ್ರೆಸ್‌ನ ಅಭ್ಯರ್ಥಿ ರಾಜು ಆಲಗೂರ ಪರ ಚುನಾವಣೆ ಪ್ರಚಾರದಲ್ಲಿದ್ದ ಪುತ್ರಪ್ಪ ಸಾಹುಕಾರ ಭೈರಗೊಂಡನಿಗೆ ಗುಂಡು ತಗುಲಿ, ಎರಡು ವರ್ಷಗಳ ಕಾಲ ಹಾಸಿಗೆ ಹಿಡಿದು, ಅನಂತರ ಅಸುನೀಗುವಂತಾಯಿತು.

2009ರಲ್ಲಿ ಧುಮಕನಾಳ ಬಳಿ ಶಿವಾಜಿ ಖಾನಡೆ ಹಾಗೂ ರಾಜು ಕೊಲೆಗೀಡಾದರು. ಅನಂತರ 2014ರಲ್ಲಿ ಆಲಮೇಲ ಭಾಗದಲ್ಲಿ ಚಂದಪ್ಪ ಹರಿಜನನ ಸಹೋದರ ಬಸವರಾಜ ಹರಿಜನ ಮೇಲೆ ಗುಂಡಿನ ದಾಳಿ ನಡೆಯಿತು. ಈ ಘಟನೆ ನಡೆದ ಕಲವೇ ದಿನಗಳಲ್ಲಿ ವಿಜಯಪುರದಲ್ಲಿ ಬಸ್ ಕಂಡಕ್ಟರ್ ಸುರೇಶ ಲಾಳಸಂಗಿ ಹತ್ಯೆಯಾಯಿತು.

ಅನಂತರ 2017ರಲ್ಲಿ ವಿಜಯಪುರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಚಂದಪ್ಪ ಹರಿಜನನ ಬಲಗೈ ಭಂಟನಾಗಿದ್ದ ಬಾಗಪ್ಪ ಹರಿಜನನ ಮೇಲೆ ಗುಂಡಿನ ದಾಳಿ ನಡೆಯಿತು. ಇದಾದ ಕೆಲವೇ ದಿನಗಳಲ್ಲಿ ನಡೆದ ಧರ್ಮರಾಜ ಚಡಚಣ ಎನ್‌ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ಹತ್ಯೆ ಪ್ರಕರಣ ಸದ್ಯ ನಾಡಿನಾದ್ಯಂತ ಸುದ್ದಿಯಾಗಿದೆ. ಹೀಗಾಗಿ ಭೀಮೆಯ ರಕ್ತ ಚರಿತ್ರೆಗೆ ಕೊನೆಯೇ ಇಲ್ಲವೇನೋ ಎನ್ನುವಂತಾಗಿ, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತಾಗಿದೆ.

ಪಿಎಸ್‌ಐ ಗೋಪಾಲ ಹಳ್ಳೂರ
ಪಿಎಸ್‌ಐ ಗೋಪಾಲ ಹಳ್ಳೂರ

ಖಾಕಿ ಕೈಗೆ ಅಂಟಿದ ರಕ್ತದ ಕಲೆ:

ಭೀಮಾತೀರದ ಹಗೆತನಕ್ಕೆ ತನ್ನದೇ ಆದ ರಕ್ತಚರಿತ್ರೆಯ ಇತಿಹಾಸವಿದೆ. ಈ ಹಗೆತನದ ವೈರತ್ವದ ಕುಲುಮೆಯಲ್ಲಿ ಅದೆಷ್ಟೋ ಮನೆತನ, ಅದೆಷ್ಟೋ ಹಂತಕರು ಬೆಂದು, ರಕ್ತದ ಮಡುವಿನಲ್ಲಿ ಅಸುನೀಗಿದ್ದಾರೆ. ಆದರೆ ಈ ಹಂತಕರ ರಕ್ತಪಾತದಲ್ಲಿ ಖಾಕಿ ಕೈಗೆ ಇದೇ ಮೊದಲ ಬಾರಿಗೆ ಭೀಮಾ ತೀರದ ರಕ್ತದ ಕಲೆಗಳು ಅಂಟಿಕೊಂಡಿವೆ.

ಕಾನೂನು ಸುವ್ಯವಸ್ಥೆ ಕಾಪಾಡಿ, ಸಾರ್ವಜನಿಕರ ಮಾನ, ಪ್ರಾಣ, ಆಸ್ತಿ ಸಂರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಂತಕರೊಂದಿಗೆ ಸೇರಿಕೊಂಡು ಮಾಡಬಾರದನ್ನು ಮಾಡಿ, ನಗರ ಹೊರ ವಲಯದ ದರ್ಗಾ ಜೈಲಿನ ತಂಗಳ ರೊಟ್ಟಿ ತಿಂದು, ಸದ್ಯ ಸಿಐಡಿ ಅಧಿಕಾರಿಗಳ ವಶದಲ್ಲಿದ್ದಾರೆ.

ಜೈಲು ಸೇರಿದ ಪೊಲೀಸರು:

ಕೆಲ ದಿನಗಳ ಹಿಂದೆ ಹಂತಕ ಧರ್ಮರಾಜ ಚಡಚಣನನ್ನು ಎನ್‌ಕೌಂಟರ್ ಮಾಡಿ, ನಾಡಿನಾದ್ಯಂತ ಖ್ಯಾತಿ ಪಡೆದಿದ್ದ ಚಡಚಣ ಠಾಣೆಯ ಈ ಹಿಂದಿನ ಪಿಎಸ್‌ಐ ಗೋಪಾಲ ಹಳ್ಳೂರ ಬಣ್ಣ ಸದ್ಯ ಬಯಲಾಗಿದ್ದು, ಈ ಪೊಲೀಸರ ದುಷ್ಕೃತ್ಯ ಜಿಲ್ಲೆಯ ಜನರನ್ನು ದಂಗುಬಡಿಸಿದ್ದು ಸುಳ್ಳಲ್ಲ.

ಈ ಮೊದಲು ಈ ಭಾಗದಲ್ಲಿ ‘ಸಿಂಗಮ್’ ಎಂದೇ ಖ್ಯಾತಿ ಪಡೆದಿದ್ದ, ಪಿಎಸ್‌ಐ ಗೋಪಾಲ ಹಳ್ಳೂರ ಸದ್ಯ ‘ಚ್ಯುಯಿಂಗಮ್’ ಆಗಿ, ಬಣ್ಣ, ಸ್ವಾದ, ರಸ ಕಳೆದುಕೊಂಡು ಜೈಲು ಪಾಲಾಗಿರುವುದು, ಧರ್ಮರಾಜ್ ಚಡಚಣನ ಸಹೋದರ ಗಂಗಾಧರ ಚಡಚಣ ಕೊಲೆ ಪ್ರಕರಣದಲ್ಲಿ.

ಕೆಲ ತಿಂಗಳ ಹಿಂದೆ ಹಂತಕ ಧರ್ಮರಾಜ ಚಡಚಣ ವಿರುದ್ಧ ಪಿಎಸ್‌ಐ ಗೋಪಾಲ ಹಳ್ಳೂರ ಏಕಾಏಕಿ ದಾಳಿ ನಡೆಸಿ, ಎನ್‌ಕೌಂಟರ್ ಮಾಡಿದ್ದರು. ಈ ಸಂದರ್ಭದಿಂದಲೂ ಧರ್ಮರಾಜನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ಕಣ್ಮರೆಯಾಗಿದ್ದ, ಈ ಘಟನೆಯಿಂದ ಕಂಗಾಲಾಗಿದ್ದ ಗಂಗಾಧರನ ತಾಯಿ ವಿಮಲಾಬಾಯಿ, ಪುತ್ರನ ಪತ್ತೆ ಮಾಡಿಕೊಡುವಂತೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ಧರ್ಮರಾಜ್ ಚಡಚಣ- ಪಿಎಸ್‌ಐ ಗೋಪಾಲ್ ಹಳ್ಳೂರ - ಗಂಗಾಧರ್ ಚಡಚಣ
ಧರ್ಮರಾಜ್ ಚಡಚಣ- ಪಿಎಸ್‌ಐ ಗೋಪಾಲ್ ಹಳ್ಳೂರ - ಗಂಗಾಧರ್ ಚಡಚಣ

ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಗಂಗಾಧರ ಚಡಚಣನ ಪತ್ತೆಗೆ ಮುಂದಾದರು. ಆಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾದೇವ ಸಾಹುಕಾರನ ಸಹಚರರಾದ ಹನುಮಂತ ಪೂಜಾರಿ ಮತ್ತು ಸಿದ್ದಗೊಂಡ ತಿಕ್ಕುಂಡಿ ಎಂಬವರನ್ನು ಬಂಧಿಸಿ ವಿಚಾರಿಸಿದಾಗ, ಗಂಗಾಧರನನ್ನು ಹತ್ಯೆ ಮಾಡಿ ಭೀಮಾನದಿಗೆ ಎಸೆಯಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಪೇದೆಗಳಾದ ಸಿದ್ದಾರೂಢ ರೂಗಿ, ಚಂದ್ರಶೇಖರ ಜಾಧವ, ಗೆದ್ದೆಪ್ಪ ನಾಯ್ಕೊಡಿ ಸೇರಿದಂತೆ 6 ಜನ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡು, ಅಜ್ಞಾತ ಸ್ಥಳದಲ್ಲಿ ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

ಹಂತಕರನ್ನು, ಕೊಲೆಪಾತಕರನ್ನು, ಸಮಾಜಘಾತುಕರನ್ನು ಸದೆಬಡೆದು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳು ಹಣದ ಆಸೆ, ದುರಾಸೆಗೆ ಬಲಿಯಾಗಿ, ಕಳ್ಳರೊಂದಿಗೆ ಕೈಜೋಡಿಸುವುದು ಎಷ್ಟು ಸರಿ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪೊಲೀಸರೇ ಈ ರೀತಿ ವರ್ತಿಸುವುದು ಇಡೀ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಪೊಲೀಸರ ಮೇಲಿನ ನಂಬಿಕೆ ಛಿದ್ರಗೊಳ್ಳುವಂತಾಗುತ್ತದೆ ಎಂದು ಪ್ರಜ್ಞಾವಂತರು ಎಚ್ಚರಿಸುವಂತಾಗಿದೆ.

ಅಲೋಕ್ ಕುಮಾರ
ಅಲೋಕ್ ಕುಮಾರ

ಕಳೆದ ಮರ‍್ನಾಲ್ಕು ತಿಂಗಳ ಹಿಂದೆ ಬೆಳಗಾವಿ ಉತ್ತರ ವಲಯಕ್ಕೆ ಐಜಿಪಿಯಾಗಿ ಅಲೋಕ್ ಕುಮಾರ ಅವರು ಕಾಲಿಟ್ಟನಂತರ, ಭೀಮಾತೀರದ ಮರಿ, ಪುಡಿ ರೌಡಿಗಳನ್ನು ಬೆಂಡೆತ್ತಿ, ಚಿಕಿತ್ಸೆ ನೀಡಿದರು. ಅಲ್ಲದೆ ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಿದ್ದರು. ಅಲ್ಲದೆ ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣ ಕೊಲೆ ಪ್ರಕರಣದಲ್ಲಿ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಮೂವರು ಪೇದೆಗಳನ್ನು ಬಂಧಿಸಿ, ಜೈಲಿಗೆ ಅಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜೀವ ಭಯವಿದೆ ಎಂದ ವಿಮಲಾಬಾಯಿ:

ಹಗೆತನ, ವೈರತ್ವದ ಸೇಡಿಗೆ ಸಿಲುಕಿ, ಪತಿ- ಪುತ್ರ, ಮನೆ- ಮಠವನ್ನು ಕಳೆದುಕೊಂಡು ನೊಂದು, ಬೆಂದಿರುವ ಧರ್ಮರಾಜ ಚಡಚಣನ ತಾಯಿ ವಿಮಲಾಬಾಯಿ, ಕಾನೂನು ಮೊರೆ ಹೋಗಿ ಹೋರಾಟ ನಡೆಸುತ್ತಿದ್ದು, ತನಗೆ ಜೀವ ಭಯವಿದೆ ಎಂದು ಆರೋಪಿಸಿದ್ದಾರೆ.

ತನ್ನ ಪುತ್ರ ಧರ್ಮರಾಜ ಚಡಚಣನ ಎನ್‌ಕೌಂಟರ್ ನಡೆದ ಮರುದಿನವೇ, “ಷಡ್ಯಂತ್ರ ಮಾಡಿ ನನ್ನ ಮಗನ ಹೊಡ್ದಾರ” ಎಂದು ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಪಿಎಸ್‌ಐ ಗೋಪಾಲ ಹಳ್ಳೂರ ವಿರುದ್ಧ ಮಾಧ್ಯಮಗಳ ಎದುರು ನೇರ ಆರೋಪ ಮಾಡಿದ್ದರು ವಿಮಲಾಬಾಯಿ.

ವಿಮಲಾಬಾಯಿ ಕಾನೂನು ಹೋರಾಟ ಮಾಡಿದ್ದರಿಂದ ಸದ್ಯ ಗಂಗಾಧರ ಚಡಚಣ ನಾಪತ್ತೆ ಪ್ರಕರಣ ಕೊಲೆ ಎನ್ನುವುದು ತಿಳಿದು ಬಂದಿದ್ದು, ಇದರ ಬೆನ್ನಲ್ಲೇ ಪಿಎಸ್‌ಐ ಗೋಪಾಲ ಹಳ್ಳೂರ ಸೇರಿದಂತೆ ನಾಲ್ವರು ಪೊಲೀಸರ ಬಂಧನವಾಗಿದೆ.

ಹಾಗಾದರೆ ಧರ್ಮರಾಜ ಚಡಚಣ ಎನ್‌ಕೌಂಟರ್ ಪ್ರಕರಣದ ಸುತ್ತ ಹಲವು ಅನುಮಾನ ಮೂಡುತ್ತಿದ್ದು, ಇದು ನಕಲಿ ಎನ್‌ಕೌಂಟರ್ ಇರಬಹುದಾ ಎನ್ನುವ ಅನುಮಾನವೂ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.

ಸ್ಥಳ ಪರಿಶೀಲನೆ ನಡೆಸಿದ ಸಿಐಡಿ ಎಡಿಜಿಪಿ ಚರಣ್‌ರೆಡ್ಡಿ. 
ಸ್ಥಳ ಪರಿಶೀಲನೆ ನಡೆಸಿದ ಸಿಐಡಿ ಎಡಿಜಿಪಿ ಚರಣ್‌ರೆಡ್ಡಿ. 

ಫೀಲ್ಡ್‌ಗೆ ಇಳಿದ ಸಿಐಡಿ ಅಧಿಕಾರಿ ಚರಣರೆಡ್ಡಿ:

ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅತ್ಯಂತ ಚುರುಕಿನಿಂದ ಕೈಗೊಂಡಿದ್ದು, ಸ್ವತಃ ಸಿಐಡಿ ಎಡಿಜಿಪಿ ಚರಣರೆಡ್ಡಿ ಜಿಲ್ಲೆಗೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಸಿಐಡಿ ಎಸ್‌ಪಿ ಹಾಗೂ ಇತರ ಅಧಿಕಾರಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿ ಮೊದಲಾದ ವಿವರಗಳನ್ನು ಪಡೆದುಕೊಂಡ ಎಡಿಜಿಪಿ ಚರಣರೆಡ್ಡಿ ಭೀಮಾತೀರದ ಹಂತಕ ಧರ್ಮರಾಜ ಎನಕೌಂಟರ್ ನಡೆದ ಸ್ಥಳ ಕೊಂಕಣಗಾಂವಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಇನ್ನು ಗಂಗಾಧರ ಚಡಚಣ ಕೊಲೆ ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿಗಳು ಭೀಮಾತೀರದ ಹಂತಕ ಹನುಮಂತ ಪೂಜಾರಿ, ಸಿದ್ಧಗೊಂಡಪ್ಪ ಅವರಿಗೆ ಹಸ್ತಾಂತರಿಸಿದ ಸ್ಥಳ ಎನ್ನಲಾದ ಕೊಂಕಣಗಾಂವ-ಚಡಚಣ ರಸ್ತೆಯ ಅಂಬಾಭವಾನಿ ದೇವಸ್ಥಾನದ ಬಳಿಯೂ ಚರಣರೆಡ್ಡಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.

ನಗರಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಂಗಾಧರ ಚಡಚಣ ನಿಗೂಢವಾಗಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. 3 ತಿಂಗಳೊಳಗಾಗಿ ತನಿಖೆ ಪೂರ್ಣಗೊಳ್ಳಲಿದೆ. ಈಗ ಗಂಗಾಧರ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗುತ್ತಿದೆ. ಪಿಎಸ್‌ಐ ಗೋಪಾಲ ಹಳ್ಳೂರ, ಮೂವರು ಪೇದೆಗಳನ್ನು ವಿಚಾರಣೆಗೊಳಪಡಿಸಲಾಗಿದೆ” ಎಂದು ತಿಳಿಸಿದರು.

ಗಂಗಾಧರ ಚಡಚಣ ಹತ್ಯೆ ಪ್ರಕರಣದ ತನಿಖೆ ನಡೆಸಲು ಸ್ವತಃ ಎಡಿಜಿಪಿ ಚರಣರೆಡ್ಡಿ ಅವರೇ ಆಗಮಿಸಿದ್ದು, ನಸುಕಿನಲ್ಲಿಯೇ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗಿನ 4 ಗಂಟೆಗೆ ಸಿಐಡಿ ಅಧಿಕಾರಿಗಳ ಸಭೆ ಕರೆದು ಪ್ರಕರಣದ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.

ಇವರೆಗೆ ಸಿಐಡಿ ಅಧಿಕಾರಿಗಳು ಸಂಗ್ರಹಿಸಿರುವ ಸಾಕ್ಷಿ, ಮಾಹಿತಿ, ಆರೋಪಿಗಳ ವಿವರ ಮೊದಲಾದವುಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಬೆಳಗಿನ 4 ಗಂಟೆಯಿಂದ ಸುಮಾರು ಮೂರು ಗಂಟೆಗೂ ಅಧಿಕ ಕಾಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯಯೋಜನೆಯನ್ನು ವಿವರಿಸಿದ್ದಾರೆ.

ಅತ್ತ ಸಿಐಡಿ ಎಡಿಜಿಪಿ ಚರಣರೆಡ್ಡಿ ಅವರು ಪ್ರಕರಣದ ತನಿಖೆ ಕೈಗೊಂಡರೆ, ಇತ್ತ ಸಿಐಡಿ ಎಸ್.ಪಿ. ಆನಂದಕುಮಾರ ನೇತೃತ್ವದ ಸಿಐಡಿ ತಂಡ ಇಂಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣದ ಆರೋಪಿಗಳಾದ ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರೂಗಿ, ಚಂದ್ರಶೇಖರ ಜಾಧವ, ಗೆದ್ದೆಪ್ಪ ನಾಯ್ಕೊಡಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನ್ಯಾಯಾಲಯ ಐದು ದಿನಗಳ ಕಾಲ ಕಾಲ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ವಹಿಸಿದೆ.

ಪ್ರಕರಣಕ್ಕೆ ಜೀವ ನೀಡಿದ್ದ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ 10 ದಿನಗಳ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದ್ದು, ಪ್ರಕರಣ ವಿಚಾರಣೆಯಲ್ಲಿರುವ ಸಂದರ್ಭ ಐಜಿಪಿ 10 ದಿನಗಳ ಕಾಲ ರಜೆಯಲ್ಲಿ ಹೋಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.