ಗಲಭೆ ನಿಯಂತ್ರಣದಿಂದ ಎಸಿಬಿ ದೂರಿನವರೆಗೆ; ಯಾರಿದು ರಾಜ್ಯ ಕಂಡ 3ನೇ ಮಹಿಳಾ ಸಿಎಸ್‌ ಕೆ.ರತ್ನಪ್ರಭಾ?
COVER STORY

ಗಲಭೆ ನಿಯಂತ್ರಣದಿಂದ ಎಸಿಬಿ ದೂರಿನವರೆಗೆ; ಯಾರಿದು ರಾಜ್ಯ ಕಂಡ 3ನೇ ಮಹಿಳಾ ಸಿಎಸ್‌ ಕೆ.ರತ್ನಪ್ರಭಾ?

ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದು ಎರಡು ಬಾರಿ ಸೇವಾವಧಿ ವಿಸ್ತರಣೆಯ ಶಿಫಾರಸು ಕಾಣುತ್ತಿರುವ ಈ ರತ್ನಪ್ರಭಾ ಯಾರು? ಇಲ್ಲಿದೆ ‘ಸಮಾಚಾರ’ದ ವಿಶೇಷ ವರದಿ...

ರಾಜಕೀಯ ಮೇಲಾಟಗಳ ಬೆಳವಣಿಗೆಯಲ್ಲಿ ಸುದ್ದಿಕೇಂದ್ರಕ್ಕೆ ಬಂದಿದ್ದ ಐಎಎಸ್‌ ಅಧಿಕಾರಿ ಕೆ. ರತ್ನಪ್ರಭಾ, ಈ ಬಾರಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯ ಆರೋಪದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ರಾಜ್ಯ ಕಂಡ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿ ಎನ್ನುವ ಹಿರಿಮೆ ಹೊತ್ತಿರುವ ಕೆ. ರತ್ನಪ್ರಭಾ ಯಾರು? ರಾಜ್ಯದ ಆಡಳಿತಾಂಗದ ಅತ್ಯುನ್ನತ ಹುದ್ದೆಯಲ್ಲಿರೋ ಕೆ.ರತ್ನಪ್ರಭಾ ಬಗ್ಗೆ ‘ಸಮಾಚಾರ’ದ ಈ ವಿಶೇಷ ವರದಿ ಇಲ್ಲಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಸೇವಾವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಣೆ ಮಾಡಲು ಅನುಮತಿ ಕೋರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ.

“ಸಮ್ಮಿಶ್ರ ಸರ್ಕಾರಕ್ಕೆ ಅನುಭವಿ ಮತ್ತು ಸಾಮರ್ಥ್ಯವುಳ್ಳ ಅಧಿಕಾರಿಯ ಅವಶ್ಯಕತೆ ಇದೆ. ಅಂತಹ ಅರ್ಹತೆಯನ್ನು ರತ್ನಪ್ರಭಾ ಹೊಂದಿದ್ದಾರೆ” ಎಂದು ಕುಮಾರಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಹಾಗಾದರೆ ಯಾರು ಈ ‘ಅನುಭವಿ’ ಮತ್ತು ‘ಸಾಮರ್ಥ್ಯವುಳ್ಳ’ ಅಧಿಕಾರಿ ರತ್ನಪ್ರಭಾ?

ಮೂರು ದಿನದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಮತ್ತು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ - ಈ ಎರಡೂ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ.

ಅದು 1992 ರ ಸಮಯ. ಅಂದರೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಇಡೀ ದೇಶ ಕೋಮುಗಲಭೆಗಳ ಬೆಂಕಿಯಲ್ಲಿ ಬೇಯುವಂತೆ ಮಾಡಿದ್ದ ಕಾಲವದು. ಕರ್ನಾಟಕದಲ್ಲೂ ಕೋಮುಗಲಭೆಗಳು ಶುರುವಾಗಿದ್ದವು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋಮು ಧ್ರುವೀಕರಣದ ಕೆಲಸ ನಡೆದಿತ್ತು. ಆಗ ಕೋಮುಕಲಹದ ಬಲೆಗೆ ಸಿಕ್ಕಿಹಾಕಿಕೊಳ್ಳದ ಏಕೈಕ ಜಿಲ್ಲೆ ಎಂದರೆ ಅದು ರಾಯಚುರು.

ಆಗ ರಾಯಚೂರು ಜಿಲ್ಲೆಯಲ್ಲಿ ಯಾವುದೇ ಕೋಮು ಗಲಭೆ ನಡೆಯಲಿಲ್ಲ. ಅದಕ್ಕೆ ಕಾರಣ ಇಂದು ರಾಜ್ಯದ ಅತ್ಯುನ್ನತ ಅಧಿಕಾರಿಯಾಗಿರುವ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ. 1992 ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಕೆ.ರತ್ನಪ್ರಭಾ ‘ಅಭಿವೃದ್ಧಿ ಸಭೆ’ (ಕೆ.ರತ್ನಪ್ರಭಾ ಶಾಂತಿ ಸಭೆಗಳನ್ನ ಅಭಿವೃದ್ಧಿ ಸಭೆ ಎಂದು ಕರೆದಿದ್ದರು) ಕರೆದು ದೇಶದ ಕೋಮುದಳ್ಳುರಿ ರಾಯಚೂರು ಜಿಲ್ಲೆಯನ್ನ ಭಾದಿಸದಂತೆ ತಡೆದಿದ್ದರು.

ತಮ್ಮ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಿದ್ದ ಏಕೈಕ ಜಿಲ್ಲಾಧಿಕಾರಿ ಎನಿಸಿಕೊಂಡಿದ್ದರು ಕೆ.ರತ್ನಪ್ರಭಾ. ರತ್ನಪ್ರಭಾ ಅವರ ಈ ದಿಟ್ಟ ಕಾರ್ಯಕ್ಕೆ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸಹ ಮೆಚ್ಚುಗೆ ಸೂಚಿಸಿದ್ದರು. ಇನ್ನೊಂದು ವಿಶೇಷ ಎಂದರೆ ಕೆ.ರತ್ನಪ್ರಭಾ ಆಗ ರಾಜ್ಯದಲ್ಲಿರುವ ಏಕೈಕ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಅಲ್ಲಿಂದ ಕೆ.ರತ್ನಪ್ರಭಾ ಸೇವೆಗೆ ಹಲವು ಮೆಚ್ಚುಗೆಗಳು ವ್ಯಕ್ತವಾಗುತ್ತಲೇ ಬಂದಿವೆ.

ಗಲಭೆ ನಿಯಂತ್ರಣದಿಂದ ಎಸಿಬಿ ದೂರಿನವರೆಗೆ; ಯಾರಿದು ರಾಜ್ಯ ಕಂಡ 3ನೇ ಮಹಿಳಾ ಸಿಎಸ್‌ ಕೆ.ರತ್ನಪ್ರಭಾ?

ರತ್ನಪ್ರಭಾ ಓದು, ಬಾಲ್ಯ:
ಕೆ. ರತ್ನಪ್ರಭಾ ಹೈದರಾಬಾದ್‌ ಮೂಲದ ಕೊಂಕಣಿ ದಲಿತ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳು. ರತ್ನಪ್ರಭಾ ತಂದೆ ಕೆ. ಚಂದ್ರಯ್ಯ ವೃತ್ತಿಯಿಂದ ಐಎಎಸ್ ಅಧಿಕಾರಿ, ತಾಯಿ ವೈದ್ಯೆ. ಸಹೋದರ ಪ್ರದೀಪ್ ಚಂದ್ರ ಸಹ ಐಎಎಸ್‌ ಅಧಿಕಾರಿ, ಜೊತೆಗೆ ತೆಲಂಗಾಣ ರಾಜ್ಯದ ಮಾಜಿ ಮುಖ್ಯಕಾರ್ಯದರ್ಶಿ.

ಬಿಎಸ್ಸಿ ಅಧ್ಯಯನ ಮಾಡಿರುವ ಕೆ. ರತ್ನಪ್ರಭಾ 22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾದರು. ಮೊದಲ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ ರತ್ನಪ್ರಭಾ, ಎರಡನೇ ಪ್ರಯತ್ನದಲ್ಲಿ ಐಎಎಸ್‌ಗೆ ಆಯ್ಕೆಯಾದರು. 1981ನೇ ಐಎಎಸ್‌ ಬ್ಯಾಚ್‌ನ ರತ್ನಪ್ರಭಾ ಬೆಳಗಾವಿಯಲ್ಲಿ ಪರೀಕ್ಷಾಣಾರ್ಥಿಯಾಗಿದ್ದರು.

1982ರಲ್ಲಿ ಬೀದರ್‌ನ ಅಸಿಸ್ಟಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿದರು. ಕುಳಿತಲ್ಲೇ ಕೂರದ ಕೆ.ರತ್ನಪ್ರಭಾ ಬೀದರ್ ಜಿಲ್ಲೆಯನ್ನು ಸುತ್ತಿ ಜನರ ಕಷ್ಟಗಳಿಗೆ ಕಿವಿಯಾಗಿದ್ದರು. 1986ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ (DWCR) ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಚಿಕ್ಕಮಗಳೂರಿನಲ್ಲಿ ಮಹಿಳೆಯರ ಪರವಾಗಿ ಉತ್ತಮ ಕೆಲಸ ಮಾಡಿ ಹೆಜ್ಜೆಗುರುತು ಉಳಿಸಿದ್ದಾರೆ.

ಬಳಿಕ ರಾಯಚೂರು ಜಿಲ್ಲಾಧಿಕಾರಿಯಾಗಿ ಕೋಮುಗಲಭೆ ನಡೆಯದಂತೆ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. 2014ರಲ್ಲಿ ಇವರು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದಾಗ ಎಲ್ಲರೂ ಹುಬ್ಬೆರಿಸಿದ್ದರು. ಕೈಗಾರಿಕಾ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳು ಉನ್ನತ ಹುದ್ದೆಗೇರುವುದು ಇಂದಿಗೂ ಅಪರೂಪ. ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಕೈಗಾರಿಕೆ ನೀತಿಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಕೆ. ರತ್ನಪ್ರಭಾ.

ಹೀಗಾಗೇ, 2016ರಲ್ಲಿ ನಡೆದ ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹಿಳಾ ಉದ್ಯಮಿಗಳಿಗಾಗಿ ವಿಶೇಷ ಸೆಷನ್ ನಡೆಸಲಾಗಿತ್ತು. ಈ ಕಾರ್ಯಕ್ರಮಗಳಿಂದಾಗಿ ‘We connect International’ ಸಂಸ್ಥೆ ಕರ್ನಾಟಕಕ್ಕೆ ಮಹಿಳಾ ಉದ್ಯಮಿಗಳಿಗೆ ಅತಿಹೆಚ್ಚು ಸಹಕಾರ ನೀಡುತ್ತಿರುವ ಸರ್ಕಾರ ಎಂಬ ಪ್ರಶಸ್ತಿ ನೀಡಿತ್ತು.

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಕೆ. ರತ್ನಪ್ರಭಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ದರು. ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ಕೆ.ರತ್ನಪ್ರಭಾ ಶಾಲೆ ಮುಂದೆ ಕುರಿ ಮೇಯುಸುತ್ತಿದ್ದ ಬಾಲಕನೊಬ್ಬನನ್ನು ಶಾಲೆಗೆ ಕಳುಹಿಸಿದ್ದರು. ಕೆ.ರತ್ನಪ್ರಭಾ ಅವರಿಂದಾಗಿ ಶಾಲೆಯ ಮೆಟ್ಟಿಲು ಹತ್ತಿದ್ದ ಬಾಲಕ ಇಂದು ಹೆಡ್‌ಕಾನ್ಸ್‌ಟೇಬಲ್ ಆಗಿದ್ದಾನೆ. ಈ ಘಟನೆಯ ಬಗ್ಗೆ ರತ್ನಪ್ರಭಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಮೂರನೇ ಮಹಿಳಾ ಸಿಎಸ್‌:

ಕರ್ನಾಟಕ ಈಗಾಗಲೇ ಇಬ್ಬರು ಮಹಿಳಾ ಮುಖ್ಯಕಾರ್ಯದರ್ಶಿಗಳನ್ನು ಕಂಡಿದೆ. 2000ರಲ್ಲಿ ತೆರೆಸಾ ಭಟ್ಟಾಚಾರ್ಯ ಮತ್ತು 2006ರಲ್ಲಿ ಮಾಲತಿ ದಾಸ್ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಾಗಿದ್ದರು. 2017ರ ನವೆಂಬರ್ 28ರಂದು ಕೆ.ರತ್ನಪ್ರಭಾ ಅವರನ್ನು ಮುಖ್ಯಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಯಿತು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ರತ್ನಪ್ರಭಾ ಪರ ಬ್ಯಾಟಿಂಗ್ ಮಾಡಿದ್ದರು ಎನ್ನುವ ಮಾತುಗಳು ವಿಧಾನಸೌಧದ ಅಂಗಳದಲ್ಲಿ ಕೇಳಿಬಂದಿದ್ದವು. ಅಸಲಿಗೆ ಕೆ.ರತ್ನಪ್ರಭಾ 2016ರಲ್ಲೇ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಬೇಕಿತ್ತು. ಸಿದ್ದರಾಮಯ್ಯ ಸರಕಾರ ರತ್ನಪ್ರಭಾ ಬದಲಾಗಿ ಸುಭಾಷ್ ಚಂದ್ರ ಕುಂಟಿಅ ಅವರನ್ನು ನೇಮಕ ಮಾಡಿತ್ತು.

ಆಗ ಬಿ.ಎಸ್‌. ಯಡಿಯೂರಪ್ಪ, “ಸಿದ್ದರಾಮಯ್ಯ ಸರಕಾರ, ತಾನು ದಲಿತ ಮತ್ತು ಹಿಂದುಳಿದವರ ಪರ ಎಂದು ಹೇಳಿಕೊಂಡರೆ ಸಾಲದು, ಸರಕಾರಕ್ಕೆ ದಲಿತ ಪರ ಕಾಳಜಿ ಇರೋದನ್ನು ಸಾಬೀತು ಮಾಡಬೇಕಿದ್ರೆ, ಕೆ.ರತ್ನಪ್ರಭಾ ಅವರನ್ನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನೇಮಕ ಮಾಡಲಿ” ಎಂದು ಆಗ್ರಹಿಸಿದ್ದರು. 2016ರಲ್ಲೇ ಕೆ. ರತ್ನಪ್ರಭಾ ರಾಜ್ಯದ ಸೇವೆಯಲ್ಲಿದ್ದ ಅತ್ಯಂತ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದರು.

ರಾಜ್ಯ ಕಂಡ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಸೇವಾವಧಿ 2018ರ ಮಾರ್ಚ್ 31ಕ್ಕೆ ಮುಕ್ತಾಯಗೊಂಡಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೂನ್ 30ರ ವರೆಗೆ ಕೆ.ರತ್ನಪ್ರಭಾ ಸೇವಾವಧಿಯನ್ನ ವಿಸ್ತರಣೆ ಮಾಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಮನವಿ ಮಾಡಿದ್ದರು. ಕೆ. ರತ್ನಪ್ರಭಾ ಸೇವಾವಧಿ ಜೂನ್ 30 ಕ್ಕೆ ಅಂತ್ಯವಾಗಬೇಕಿತ್ತು. ಆದರೆ, ಮತ್ತೆ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಕುಮಾರಸ್ವಾಮಿ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.

ವೃತ್ತಿ ಜೀವನದ ಕೊನೆಯಲ್ಲಿ ಕೇಸ್

ನಿವೃತ್ತಿಯ ಹೊಸ್ತಿನಲ್ಲಿರುವ ಕೆ. ರತ್ನಪ್ರಭಾ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ. ಸುಪ್ರೀಂಕೋರ್ಟ್‌ ರಾಜ್ಯ ಸರಕಾರದ ‘ಬಡ್ತಿ ಮೀಸಲು ಕಾಯ್ದೆ-2002’ ಕಾಯ್ದೆಯನ್ನು 2017ರ ಫೆಬ್ರುವರಿ 9 ರಂದು ರದ್ದು ಮಾಡಿದೆ. ಈ ಸಂಬಂಧ ಸರಕಾರದ ಮೇಲೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಹ ದಾಖಲಾಗಿದೆ. ಈ ಪ್ರಕರಣ ಜುಲೈ 4ರಂದು ವಿಚಾರಣೆ ಬರಲಿದೆ. ಈ ನಡುವೆ ನ್ಯಾಯಾಂಗ ನಿಂದನೆ ಏಟಿನಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ.

2017ರ ನವೆಂಬರ್ 30 ರಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದ ರತ್ನಪ್ರಭಾ 2018ರ ಮಾರ್ಚ್ 31ಕ್ಕೆ ನಿವೃತ್ತರಾಗಬೇಕಿತ್ತು. ಆದರೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರತ್ನಪ್ರಭಾ ಸೇವಾವಧಿ ವಿಸ್ತರಣೆ ಕೋರಿ ಕೇಂದ್ರಕ್ಕೆ ಪತ್ರ ಬರೆದು ರತ್ನಪ್ರಭಾ ಸೇವಾವಧಿಯನ್ನ ಮೂರು ತಿಂಗಳ ಮಟ್ಟಿಗೆ ವಿಸ್ತರಣೆ ಮಾಡಿಸಿದ್ದರು.

ಹೀಗಾಗಿ ಜೂನ್ 30ಕ್ಕೆ ರತ್ನಪ್ರಭಾ ಸೇವಾವಧಿ ಕೊನೆಯಾಗಲಿದೆ. ಕುಮಾರಸ್ವಾಮಿ ಅವರ ಮನವಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದರೆ ಇನ್ನೂ ಮೂರು ತಿಂಗಳು ರತ್ನಪ್ರಭಾ ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಆದರೆ, ಬಡ್ತಿ ಮೀಸಲಿನ ಸಂಬಂಧ ಸುಪ್ರೀಂಕೋರ್ಟ್‌ ನೀಡುವ ಆದೇಶದ ಮೇಲೆ ಅವರ ಭವಿಷ್ಯ ನಿಂತಿದೆ.