‘ಪ್ರಜಾಪ್ರಭುತ್ವದ ಅನಿವಾರ್ಯತೆ’: ಸಚಿವ ಎನ್. ಮಹೇಶ್ ಪಾದುಕೆಗಳನ್ನೇಕೆ ಹೆಗಲೇರಿಸಿಕೊಂಡರು? 
COVER STORY

‘ಪ್ರಜಾಪ್ರಭುತ್ವದ ಅನಿವಾರ್ಯತೆ’: ಸಚಿವ ಎನ್. ಮಹೇಶ್ ಪಾದುಕೆಗಳನ್ನೇಕೆ ಹೆಗಲೇರಿಸಿಕೊಂಡರು? 

ವೈಯಕ್ತಿಕ ನಂಬಿಕೆಗಳು ಹಾಗೂ ಬಹಿರಂಗದಲ್ಲಿ ಕಾಣುವ ಆಚರಣೆಗಳು ಹಲವು ಬಾರಿ ಬೇರೆ ಬೇರೆಯಾಗಿರಬಹುದು. ಆದರೆ, ಅನುಕೂಲದ ಕಾರಣಕ್ಕೆ ಹಳೆಯ ಸಿದ್ಧಾಂತಗಳ ಜತೆಗೆ ರಾಜೀ ಮಾಡಿಕೊಳ್ಳುವ ಅನಿವಾರ್ಯ ಈಗ ರಾಜಕಾರಣಿಗಳಿಗೆ ಎದುರಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ‘ಅಮ್ಮ ಭಗವಾನ್‌’ ಪಾದುಕೆಗಳನ್ನು ಮೈಗೆ ಸವರಿಕೊಂಡಿರುವುದು ಹಾಗೂ ಸುತ್ತೂರು ಮಠದ ಸ್ವಾಮೀಜಿ ಕಾಲಿಗೆ ಬಿದ್ದಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇದರ ಬೆನ್ನಲ್ಲೇ ಮಹೇಶ್‌ ಅವರ ಈ ನಡೆಯ ಬಗ್ಗೆ ಪರ- ವಿರೋಧ ಚರ್ಚೆಗಳೂ ನಡೆಯುತ್ತಿವೆ.

ಮಹೇಶ್‌ ಪಾದುಕೆಗಳನ್ನು ಮೈಗೆ ಸವರಿಕೊಂಡಿರುವುದು ಹಾಗೂ ಸುತ್ತೂರು ಮಠದ ಸ್ವಾಮೀಜಿ ಕಾಲಿಗೆ ಬಿದ್ದಿರುವುದು ಅಂಬೇಡ್ಕರ್‌ ವಿಚಾರಗಳಿಗೆ ವಿರುದ್ಧವಾಗಿದೆ, ಹಿಂದಿನಿಂದಲೂ ಅಂಬೇಡ್ಕರ್‌ ವಾದವನ್ನು ಹೇಳಿಕೊಂಡು ಬಂದ ಮಹೇಶ್‌ ಈಗ ತಮ್ಮ ನಡೆಯ ಮೂಲಕ ಅವಕಾಶವಾದಿತನ ಪ್ರದರ್ಶಿಸುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.

ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಹೇಶ್‌ ಅವರ ಸರಕಾರಿ ಕೊಠಡಿಯಲ್ಲಿ ಗಾಂಧೀಜಿ ಫೋಟೊ ಇಲ್ಲದ ವಿಚಾರವೂ ವಿವಾದ ಸೃಷ್ಟಿಸಿತ್ತು. ಬುದ್ಧ, ಬಸವ ಫೋಟೊಗಳನ್ನು ತಮ್ಮ ಕೊಠಡಿಯಲ್ಲಿ ಹಾಕಿಸಿರುವ ಮಹೇಶ್‌ ಗಾಂಧೀಜಿ ಫೋಟೊ ಹಾಕದೆ ಗಾಂಧೀಜಿಗೆ ಅಪಮಾನ ಮಾಡಿದ್ದಾರೆ ಎಂಬ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಮಹೇಶ್‌ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಗೆದ್ದು, ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ವಿವಾದಗಳು ಅವರ ಸುತ್ತ ಸುತ್ತಿಕೊಳ್ಳತೊಡಗಿವೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಸಚಿವ ಸ್ಥಾನವೂ ಸಿಕ್ಕ ಕಾರಣಕ್ಕೆ ಅವರ ಏಳ್ಗೆಯನ್ನು ಸಹಿಸದವರು ಅವರ ಸುತ್ತ ವಿವಾದ ಹುಟ್ಟುಹಾಕುತ್ತಿದ್ದಾರೆ ಎಂಬ ವಾದ ಮಹೇಶ್‌ ಅಭಿಮಾನಿಗಳದ್ದು.

ಮಹೇಶ್‌ ಪಾದುಕೆಗಳನ್ನು ಹೆಗಲ ಮೇಲೆ ಇಟ್ಟುಕೊಂಡಿರುವುದು (ಎಡಚಿತ್ರ) ಮತ್ತು ಸುತ್ತೂರು ಮಠದ ಸ್ವಾಮೀಜಿ ಕಾಲಿಗೆ ಬಿದ್ದಿರುವುದು
ಮಹೇಶ್‌ ಪಾದುಕೆಗಳನ್ನು ಹೆಗಲ ಮೇಲೆ ಇಟ್ಟುಕೊಂಡಿರುವುದು (ಎಡಚಿತ್ರ) ಮತ್ತು ಸುತ್ತೂರು ಮಠದ ಸ್ವಾಮೀಜಿ ಕಾಲಿಗೆ ಬಿದ್ದಿರುವುದು

ಮಹೇಶ್‌ ಪಾದುಕೆಗಳನ್ನು ಮೈಗೆ ಸವರಿಕೊಂಡಿರುವ ವಿಡಿಯೊ ಚುನಾವಣೆಗೂ ಮೊದಲಿನದ್ದು ಎನ್ನಲಾಗಿದೆ. ಚುನಾವಣಾ ಪ್ರಚಾರದ ವೇಳೆ ಕೊಳ್ಳೇಗಾಲದ ದೇವಾಂಗ ಪೇಟೆಯ ಅಮ್ಮ ಭಗವಾನ್‌ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಮಹೇಶ್‌, ಪಾದುಕೆಗಳನ್ನು ಮೈಗೆ ಸವರಿಕೊಂಡರೆ ಒಳ್ಳೆಯದಾಗುತ್ತದೆ ಎಂಬ ಅಭಿಮಾನಿಗಳ ಮಾತಿಗೆ ಕಟ್ಟುಬಿದ್ದು ಹಾಗೆ ಮಾಡಿದ್ದಾರೆ ಎನ್ನುತ್ತಾರೆ. ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಉದ್ದೇಶದಿಂದ ಅವರು ಆ ರೀತಿ ನಡೆದುಕೊಂಡಿದ್ದಾರೆ ಎಂದೂ ಅವರ ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ.

ಪಾದುಕೆ ಮೈಗೆ ಸವರಿಕೊಂಡಿರುವುದನ್ನು ಹಾಗೂ ಸುತ್ತೂರು ಸ್ವಾಮೀಜಿ ಕಾಲಿಗೆ ಬಿದ್ದಿರುವುದನ್ನು ಮಹೇಶ್‌ ಸಮರ್ಥಿಸಿಕೊಂಡಿದ್ದಾರೆ. ಅಭಿಮಾನಿಗಳ ಮಾತಿಗೆ ಕಟ್ಟುಬಿದ್ದು ಪಾದುಕೆ ಮೈಗೆ ಸವರಿಕೊಂಡೆ ಎಂದಿರುವ ಮಹೇಶ್‌, ಸ್ವಾಮೀಜಿ ಕಾಲಿಗೆ ಬಿದ್ದಿರುವುದನ್ನು ‘ನಮ್ಮ ಪರಂಪರೆ’ ಎಂದು ಹೇಳಿಕೊಂಡಿದ್ದಾರೆ.

“ಹಿಂದಿನಿಂದಲೂ ಅಂಬೇಡ್ಕರ್‌ವಾದ, ವಿಚಾರವಾದವನ್ನು ಮಾತಾಡಿಕೊಂಡು ಬಂದ ಮಹೇಶ್‌ ಈಗ ಚುನಾವಣೆಯಲ್ಲಿ ಗೆಲ್ಲುವ ಕಾರಣಕ್ಕೆ ಹಾಗೂ ಗೆದ್ದ ಮೇಲೆ ಕೃತಜ್ಞತೆ ಸಲ್ಲಿಸುವ ಕಾರಣಕ್ಕೆ ತಾವು ಇಷ್ಟು ದಿನ ಹೇಳಿಕೊಂಡು ಬಂದ ಸಿದ್ಧಾಂತದೊಂದಿಗೆ ರಾಜೀ ಮಾಡಿಕೊಳ್ಳುವುದು ಎಷ್ಟು ಸರಿ” ಎಂಬುದು ಮೈಸೂರು ವಿಶ್ವವಿದ್ಯಾಲಯದಲ್ಲಿ ಮಹೇಶ್‌ ಅವರ ‘ವಿಚಾರವಾದ’ದ ಮಾತುಗಳನ್ನು ಕೇಳಿ ಬೆಳೆದ ದಲಿತ ಸಮುದಾಯದ ಪತ್ರಕರ್ತರೊಬ್ಬರ ಪ್ರಶ್ನೆ.

“ಮಹೇಶ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವುದು ಯಾವ ರೀತಿಯಿಂದಲೂ ಸರಿಯಲ್ಲ. ಅಮ್ಮ ಭಗವಾನ್‌ ದೇವಸ್ಥಾನಕ್ಕೆ ಹೋಗುವಂತೆ ಅಭಿಮಾನಿಗಳು ಒತ್ತಾಯಿಸಿದ್ದರೆ ಹೋಗಿ ಕೈ ಮುಗಿದು ಬರಬೇಕಿತ್ತು. ಸುತ್ತೂರು ಸ್ವಾಮೀಜಿಗೆ ಗೌರವ ಕೊಡಬೇಕೆಂದಿದ್ದರೆ ಹೋಗಿ ಹೂ ಹಣ್ಣು ಕೊಟ್ಟು ಕೈ ಮುಗಿದರೆ ಸಾಕಿತ್ತು. ಆದರೆ, ಅವರು ನಡೆದುಕೊಂಡಿರುವ ರೀತಿ ಹಾಗೂ ಈಗ ಅದನ್ನು ಸಮರ್ಥಿಸಿಕೊಳ್ಳುತ್ತಿರುವ ರೀತಿ ಎರಡೂ ಸರಿಯಲ್ಲ” ಎನ್ನುತ್ತಾರೆ ಅವರು.

“ಇಷ್ಟು ದಿನ ಮಹೇಶ್‌ ಬರೀ ಸೋತು ಬೀಳುತ್ತಿದ್ದರು. ಈ ಬಾರಿಗೆ ಕಾಲಿಗೆ ಬಿದ್ದು ಬಿದ್ದು ಗೆದ್ದಿದ್ದಾರೆ. ಕೃತಜ್ಞತೆ ಸಲ್ಲಿಸುವ ಹೆಸರಲ್ಲಿ ಮತದಾರರ ಕಾಲಿಗೆ ಬೀಳುವುದರಲ್ಲಿ ತಪ್ಪೇನಿಲ್ಲ. ಆದರೆ, ಸ್ವಾಮೀಜಿಗಳ ಕಾಲಿಗೆ ಬೀಳುವುದನ್ನು ಅವರು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಅಭಿಮಾನಿಗಳು ಹೇಳಿದರು ಅಭಿಮಾನಿಗಳ ಮೇಲೆ ಗೂಬೆ ಕೂರಿಸುವ ನಡೆ ಒಳ್ಳೆಯ ಬೆಳವಣಿಗೆ ಅಲ್ಲ” ಎಂಬುದು ಅವರ ಅಭಿಪ್ರಾಯ.

ನಾನು ಪ್ರಗತಿಪರ ಅಲ್ಲ. ಪಾದುಕೆಗಳಿಗೆ ಪೂಜೆ ಮಾಡಿ ಒಳ್ಳೆಯದಾಗುತ್ತದೆ ಎಂದರು, ಮಾಡಿದೆ. ಇನ್ನೊಬ್ಬರು ಮಂಟೇಸ್ವಾಮಿ ದೇವಸ್ಥಾನಕ್ಕೆ ಹೋಗಿ ತಲೆ ಬೋಳಿಸಿ ಎನ್ನುತ್ತಾರೆ, ಹೋಗುತ್ತೇನೆ. ಸ್ವಾಮೀಜಿ ಕಾಲಿಗೆ ನಮಸ್ಕಾರ ಮಾಡುತ್ತೇನೆ. ಏಕೆಂದರೆ, ಅದು ನಮ್ಮ ಪರಂಪರೆ. ವೈಯಕ್ತಿಕವಾಗಿ ನನಗೆ ಇದು ತಪ್ಪು ಎನಿಸುವುದಿಲ್ಲ.
- ಎನ್‌. ಮಹೇಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

‘ಕಾಲೆಳೆಯುವ ತಂತ್ರ’

ಮಹೇಶ್‌ ಅವರ ಸುತ್ತ ಎದ್ದಿರುವ ವಿವಾದ ಅವರ ಏಳ್ಗೆಯನ್ನು ಸಹಿಸದವರು ಮಾಡುತ್ತಿರುವ ಕಾಲೆಳೆಯುವ ತಂತ್ರ ಎನ್ನುತ್ತಾರೆ ಬಿಎಸ್‌ಪಿ ಮುಖಂಡರು.

“ಮಹೇಶ್‌ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಮಂತ್ರಿ ಸ್ಥಾನವನ್ನೂ ಪಡೆದಿದ್ದಾರೆ. ಇದನ್ನು ಸಹಿಸಲು ಬೇರೆ ಪಕ್ಷಗಳಲ್ಲಿರುವ ದಲಿತ ಮುಖಂಡರಿಗೆ ಆಗುತ್ತಿಲ್ಲ. ಹೀಗಾಗಿ ಅವರ ಹೆಸರು ಹಾಗೂ ವ್ಯಕ್ತಿತ್ವವನ್ನು ಹಾಳು ಮಾಡುವ ಉದ್ದೇಶದಿಂದ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ” ಎನ್ನುತ್ತಾರೆ ಬಿಎಸ್‌ಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಎ. ಹರಿರಾಂ.

“ಮಹೇಶ್ ದಲಿತ ಹೋರಾಟದಿಂದ ಬಂದವರು. ಅವರು ವೈಯಕ್ತಿಕವಾಗಿ ಯಾವ ಪೂಜೆ, ಆಚಾರಗಳನ್ನೂ ನಂಬುವುದಿಲ್ಲ. ಅಭಿಮಾನಿಗಳು ಹೇಳಿದಾಗ ಅದನ್ನು ಮಾಡುವುದಿಲ್ಲ ಎಂದು ಅವರು ಹೇಳಲು ಆಗುವುದಿಲ್ಲ. ಹೀಗಾಗಿ ಅವರು ಪಾದುಕೆ ಮೈಗೆ ಸವರಿಕೊಂಡಿದ್ದಾರೆ, ಸುತ್ತೂರು ಸ್ವಾಮೀಜಿ ಕಾಲಿಗೂ ಬಿದ್ದಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರ ಒತ್ತಡಕ್ಕೆ ಇದನ್ನೆಲ್ಲಾ ಮಾಡಿದ್ದಾರೆ. ಏನೇ ಮಾಡಿದರೂ ಅವರೊಳಗಿನ ವಿಚಾರವಾದಿ ಮಹೇಶ್‌ ಹಾಗೆಯೇ ಇರುತ್ತಾರೆ” ಎಂಬುದು ಹರಿರಾಂ ಮಾತು.

ದಲಿತನೊಬ್ಬನ ಏಳ್ಗೆ ಸಹಿಸದವರು ಮಹೇಶ್‌ ಅವರ ಹೆಸರನ್ನು ಕೆಡಿಸಲು ವಿಷಯವಲ್ಲದ ವಿಷಯವನ್ನು ವಿವಾದಕ್ಕೆ ಬಳಸುತ್ತಿದ್ದಾರೆ. ದಲಿತ ಎಂಬ ಕಾರಣಕ್ಕೆ ಮಹೇಶ್‌ ಟಾರ್ಗೆಟ್‌ ಆಗುತ್ತಿದ್ದಾರೆ.
- ಎ. ಹರಿರಾಂ, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ

“ಗಾಂಧೀಜಿ ಫೋಟೊ, ಪಾದುಕೆ ವಿಚಾರ, ಸುತ್ತೂರು ಸ್ವಾಮೀಜಿ ಕಾಲಿಗೆ ಬಿದ್ದ ವಿಚಾರಗಳನ್ನೇ ಮುಂದಿಟ್ಟುಕೊಂಡು ಮಹೇಶ್‌ ಅವರ ತೇಜೋವಧೆಗೆ ಕುತಂತ್ರ ನಡೆಸಲಾಗುತ್ತಿದೆ. ಆದರೆ, ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಶಿಕ್ಷಣ ಇಲಾಖೆಯ ಸುಧಾರಣೆಗೆ ಅವರು ತೆಗೆದುಕೊಂಡಿರುವ ಮಹತ್ತರ ನಿರ್ಧಾರಗಳ ಬಗ್ಗೆ ಎಲ್ಲೂ ಚರ್ಚೆ ನಡೆಯುತ್ತಿಲ್ಲ” ಎನ್ನುತ್ತಾರೆ ಅವರು.

“ಸರಕಾರದಿಂದ ಎಲ್‌ಕೆಜಿ ಶಿಕ್ಷಣ ಆರಂಭ, ಒಂದನೇ ತರಗತಿಯಿಂದ ಗುಣಮಟ್ಟದ ಶಿಕ್ಷಣ, ಕೊರತೆ ಇರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳನ್ನು ಮಹೇಶ್‌ ಆರಂಭಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಇಲಾಖೆಯ ಸಮಸ್ಯೆಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ. ಶಿಕ್ಷಣ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಗಿರುವ ಮಹೇಶ್‌ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಆದರೆ, ಇದಕ್ಕೆಲ್ಲಾ ಸೊಪ್ಪು ಹಾಕುವವರಲ್ಲ ಮಹೇಶ್‌” ಎಂಬುದು ಅವರ ಅಭಿಪ್ರಾಯ.

ಬಾಹ್ಯ ಆಚರಣೆಗಳೂ, ಒಳಗಿನ ನಂಬಿಕೆಗಳೂ…

ವ್ಯಕ್ತಿಯೊಬ್ಬನ ಬಾಹ್ಯ ಆಚರಣೆಗಳು ಆತನ ಒಳಗಿನ ನಂಬಿಕೆಗಳಿಂದಲೂ ಒಡಮೂಡಿರುತ್ತವೆ. ವ್ಯಕ್ತಿಯೊಬ್ಬ ಹಿಂದೆ ಒಂದು ಸಿದ್ಧಾಂತಕ್ಕೆ ಬದ್ಧನಾಗಿದ್ದು ಬಳಿಕ ಆ ಸಿದ್ಧಾಂತವನ್ನು ಬಿಟ್ಟು ಹೊಸ ನಂಬಿಕೆಯನ್ನು ಒಪ್ಪಿಕೊಳ್ಳುವುದೇ ಬೇರೆ; ಹಿಂದೆ ನಂಬಿರುವ ಸಿದ್ಧಾಂತ ಹಾಗೆಯೇ ಇದೆ, ಇದು ಹೊಸ ಆಚರಣೆ ಎಂದು ಹೇಳಿಕೊಳ್ಳುವುದೇ ಬೇರೆ. ಇದು ಆತ್ಮವಂಚನೆಯ ಮಾತಾಗುತ್ತದೆ ಎಂಬುದ ಮನೋವಿಜ್ಞಾನಿಗಳ ಮಾತು.

“ವ್ಯಕ್ತಿಯೊಬ್ಬ ಸಿದ್ಧಾಂತವೊಂದನ್ನು ಬಹಳಷ್ಟು ವರ್ಷ ಆಚರಿಸಿ, ಬಳಿಕ ಆ ಸಿದ್ಧಾಂತದಲ್ಲಿ ನಂಬಿಕೆ ಕಳೆದುಕೊಂಡು ಅದನ್ನು ತ್ಯಜಿಸಿ ಹೊಸ ಸಿದ್ಧಾಂತ ಅಥವಾ ಆಚರಣೆಗೆ ಮುಂದಾದರೆ ಅದನ್ನು ಬದಲಾವಣೆ ಎಂದು ಒಪ್ಪಿಕೊಳ್ಳಬಹುದು. ಆದರೆ, ವರ್ತಮಾನದ ಆಚರಣೆಯನ್ನು ವಿರೋಧಿಸುವ ಭೂತಕಾಲದ ಸಿದ್ಧಾಂತವನ್ನೂ ನಾನು ಬಿಟ್ಟಿಲ್ಲ ಎಂದು ವ್ಯಕ್ತಿ ಹೇಳಿಕೊಂಡರೆ ಅದು ನಯವಂಚನೆಯ ಮಾತಾಗುತ್ತದೆ” ಎನ್ನುತ್ತಾರೆ ಮನೋವಿಜ್ಞಾನಿ ಡಾ. ಅ. ಶ್ರೀಧರ್‌.

“ಹಿಂದಿನಿಂದಲೂ ಪೂಜೆ, ಹೋಮ, ಸ್ವಾಮೀಜಿಗಳ ಕಾಲಿಗೆ ಬೀಳುವುದನ್ನು ಮಹೇಶ್‌ ಅವರು ಮಾಡಿಕೊಂಡು ಬಂದಿದ್ದರೆ ಈಗ ಜನ ಅದನ್ನು ಪ್ರಶ್ನಿಸುತ್ತಲೇ ಇರಲಿಲ್ಲ. ರಾಜಕೀಯದ ಪ್ರಯೋಜನಕ್ಕಾಗಿ ಹೊರಗೆ ಆಚರಣೆಗಳನ್ನು ಮಾಡಿ, ಮನೆಯೊಳಗೆ ತಾನು ನಂಬಿರುವ ಸಿದ್ಧಾಂತಗಳನ್ನೇ ಅನುಸರಿಸುತ್ತೇನೆ ಎಂದು ಹೇಳಿಕೊಳ್ಳುವುದು ದ್ವಂದ್ವದ ವ್ಯಕ್ತಿತ್ವ ಅಥವಾ ಆತ್ಮವಂಚನೆಯಾಗುತ್ತದೆ” ಎಂಬುದು ಶ್ರೀಧರ್‌ ಅವರ ಅಭಿಪ್ರಾಯ.

ರಾಜಕಾರಣಿಗಳು ಅನುಕೂಲದ ಕಾರಣಕ್ಕಾಗಿ ತಾವು ನಂಬಿರುವ ಸಿದ್ಧಾಂತಗಳೊಂದಿಗೆ ರಾಜೀ ಮಾಡಿಕೊಂಡರೆ ಅದು ಜನರಿಗೆ ಮಾಡುವ ನಯವಂಚನೆ ಅಥವಾ ತಮಗೆ ತಾವೇ ಮಾಡಿಕೊಳ್ಳುವ ಆತ್ಮವಂಚನೆ.
- ಡಾ. ಅ. ಶ್ರೀಧರ್‌, ಮನೋವಿಜ್ಞಾನಿ

“ವ್ಯಕ್ತಿಯ ಬಾಹ್ಯ ಆಚರಣೆಗಳ ಮೇಲೆ ಒಳ ಮನಸ್ಸಿನ ಪ್ರಭಾವವೂ ಇರುತ್ತದೆ. ಹಲವು ವರ್ಷಗಳ ಕಾಲ ವ್ಯಕ್ತಿಯೊಬ್ಬ ಯಾವುದನ್ನು ಮಾಡುವುದು ಬೇಡ ಎಂದು ಹೇಳಿಕೊಂಡು ಬಂದನೋ ಈಗ ಆ ವ್ಯಕ್ತಿ ಅದೇ ಆಚರಣೆಗಳನ್ನು ಮಾಡಿದರೆ ಅದು ಅವರ ಅನುಯಾಯಿಗಳಿಗೇ ಆಘಾತ ಉಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಜನ ಅವರ ನಡೆಯನ್ನು ಪ್ರಶ್ನಿಸುವುದು ಸಾಮಾನ್ಯ. ಆದರೆ, ನನ್ನ ಚರ್ಮ ಹಾಗೆಯೇ ಇದೆ, ಅಂಗಿ ಬದಲಿಸುತ್ತೇನೆ ಎಂಬ ಮಾತುಗಳಿಂದ ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ಮುಚ್ಚಿಡಲು ಸಾಧ್ಯವಿಲ್ಲ” ಎನ್ನುತ್ತಾರೆ ಅವರು.

ಸುತ್ತೂರು ಮಠದ ‘ಆಶೀರ್ವಾದ’ ಇಲ್ಲದೆ ರಾಜಕಾರಣಿಯೊಬ್ಬರು ಮೈಸೂರು, ಚಾಮರಾಜನಗರ ಭಾಗದಲ್ಲಿ ಗೆಲ್ಲುವುದು ಸುಲಭವಲ್ಲ ಎಂಬುದು ಗೊತ್ತಿರುವ ವಿಚಾರವೇ. ರಾಜಕಾರಣಿಗಳ ಟೆಂಪಲ್‌ ರನ್, ಮಠದ ಭೇಟಿ, ಹೋಮ ಹವನಗಳ ಹಿಂದೆ ಜನರನ್ನು ಓಲೈಸುವ ತಂತ್ರವೂ ಇಲ್ಲದೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೋರಿಕೆಗಾದರೂ ಇವನ್ನೆಲ್ಲಾ ಮಾಡಬೇಕಾದ ಅನಿವಾರ್ಯ ಈಗ ಸೃಷ್ಟಿಯಾಗಿದೆ. ಇದೂ ಕೂಡಾ ‘ಬ್ಯೂಟಿ ಆಫ್‌ ಡೆಮಾಕ್ರಸಿ’ ಎಂದರೆ ತಪ್ಪಲ್ಲ!