samachara
www.samachara.com
‘ಭಯೋತ್ಪಾದನೆ ಬಕ್ವಾಸ್’: ಬಿಜೆಪಿ- ಪಿಡಿಪಿ ಮೈತ್ರಿ ಮುರಿದು ಬೀಳಲು ಇಲ್ಲಿವೆ ಅಸಲಿ ಕಾರಣಗಳು!
COVER STORY

‘ಭಯೋತ್ಪಾದನೆ ಬಕ್ವಾಸ್’: ಬಿಜೆಪಿ- ಪಿಡಿಪಿ ಮೈತ್ರಿ ಮುರಿದು ಬೀಳಲು ಇಲ್ಲಿವೆ ಅಸಲಿ ಕಾರಣಗಳು!

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಮುರಿದು ಬೀಳುವ ಮೂಲಕ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಬಿಜೆಪಿ ತನ್ನ ಬೆಂಬಲ ವಾಪಾಸ್ ತೆಗೆದುಕೊಂಡಿದ್ದಕ್ಕೆ ಕಾರಣಗಳನ್ನು ನೀಡಿದೆ. ಆದರೆ, ಆಳದಲ್ಲಿ ಅಸಲಿ ವಿಚಾರ ಬೇರೆಯದೇ ಇದೆ. 

Team Samachara

ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದ್ದ ಪೀಪಲ್ಸ್ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ) ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ಪತನಗೊಂಡಿದೆ. ಈ ವಿದ್ಯಮಾನ ದೇಶದ ರಾಜಕಾರಣದಲ್ಲಿ ಹೊಸದೊಂದು ಸಂಚಲನವನ್ನು ಮೂಡಿಸಿದೆ. ಬಿಜೆಪಿ ನಾಯಕ, ಕಣಿವೆ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿವಹಿಸಿದ್ದ ರಾಮ್‌ ಮಾಧವ್‌ ಮಂಗಳವಾರ ಸುದ್ದಿ ಗೋಷ್ಠಿ ನಡೆಸಿ, ಪಿಡಿಪಿ ನೀಡಿದ್ದ ಬೆಂಬಲವನ್ನು ಹಿಂಪಡೆಯುವುದಾಗಿ ಮಾಧ್ಯಮಗಳ ಮುಂದೆ ತಿಳಿಸಿದರು. 

ಪಿಡಿಪಿ ಜತೆಗಿನ ಮೈತ್ರಿಯನ್ನು ಅಂತ್ಯಗೊಳಿಸುವುದಾಗಿ ಹೇಳಿದ ರಾಮ್‌ ಮಾಧವ್‌, ಶಾಂತಿ, ಸೌಹಾರ್ದತೆ, ಭಯೋತ್ಪಾದನೆ ಇತ್ಯಾದಿ ಕಾರಣಗಳನ್ನು ದೇಶದ ಮುಂದಿಟ್ಟಿದ್ದಾರೆ. ರಾಮ್‌ ಮಾಧವ್‌ರ ಸುದ್ದಿ ಗೋಷ್ಠಿ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಟ್ರೆಂಡಿಂಗ್‌ ಶುರುವಾಗಿದೆ. #BJPDumpsPDP ಹ್ಯಾಷ್‌ ಟ್ಯಾಗ್‌ ಮುನ್ನೆಲೆಗೆ ಬಂದಿದೆ.

ಬಿಜೆಪಿಯೇ ಪಿಡಿಪಿಯೊಂದಿಗಿನ ಮೈತ್ರಿಗೆ ಕೊನೆ ಹಾಡಿದೆ ಎಂಬ ಪ್ರಚಾರ ಮುನ್ನೆಲೆ ಬಂದಿದೆ. ಇದನ್ನು ಹೊರತುಪಡಿಸಿದ ಸತ್ಯಗಳನ್ನು ಕಾಶ್ಮೀರದ ಸ್ಥಳೀಯ ಮಾಧ್ಯಮಗಳು ಸೇರಿದಂತೆ ಕೆಲವು ರಾಷ್ಟ್ರೀಯ ಮಾಧ್ಯಮಗಳು ಹೊರಹಾಕುತ್ತಿವೆ.

ಈ ಎಲ್ಲಾ ಸುದ್ದಿ ಸಂಸ್ಥೆಗಳು ಪ್ರಕಟಿಸಿರುವ, ಬಿಜೆಪಿ- ಪಿಡಿಪಿ ಮೈತ್ರಿ ಮುರಿಯಲು ಇರುವ ಸರಳ ಸತ್ಯಗಳನ್ನು ‘ಸಮಾಚಾರ’ ಇಲ್ಲಿ ಪಟ್ಟಿ ಮಾಡಿದೆ.

1. ಈ ಮೊದಲೇ ಪಿಡಿಪಿ ಬಿಜೆಪಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಎರಡೂ ಪಕ್ಷಗಳ ನಡುವೆ ನಡೆದಿದ್ದ ಕೆಲವು ಒಪ್ಪಂದಗಳು ನೆನೆಗುದಿಗೆ ಬಿದ್ದಿದ್ದವು. ಇನ್ನು ಕೆಲವೇ ತಿಂಗಳಿಲ್ಲಿ ಪಿಡಿಪಿ ಬಿಜೆಪಿಯೊಂದಿಗಿನ ತನ್ನ ಮೈತ್ರಿಗೆ ಕೊನೆ ಹಾಡುತ್ತದೆ ಎಂಬ ಮಾತುಗಳು ಜಮ್ಮು ಮತ್ತು ಕಾಶ್ಮೀರದ ಉದ್ದಗಲಕ್ಕೂ ತೇಲಿ ಬಂದಿದ್ದವು. ಅದಾಗಲೇ ಮಹಾರಾಷ್ಟ್ರದ ಶಿವಸೇನೆ ಮತ್ತು ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷಗಳು ಬಿಜೆಪಿ ಜತೆಗಿನ ಸಂಬಂಧವನ್ನು ಕಡಿದುಕೊಂಡಿದ್ದವು. ಈಗ ಪಿಡಿಪಿ ಕೂಡ ಬಿಜೆಪಿ ಜತೆಗಿನ ನಂಟಿಗೆ ಮುಕ್ತಿ ಹಾಡಿ, ದೇಶಾದ್ಯಂತ ಸುದ್ದಿಯಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಕಷ್ಟವನ್ನು ಎದುರಿಸಬೇಕಾಗಿತ್ತು. ಈ ಸಂಕಷ್ಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪಿಡಿಪಿಗಿಂತ ಮುಂಚೆಯೇ ಬಿಜೆಪಿ ಮೈತ್ರಿ ಕಡಿದುಕೊಂಡಿರುವುದಾಗಿ ಘೋಷಿಸಿದೆ.

2. 2015ರಲ್ಲಿ ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಯಾವ ಪಕ್ಷವೂ ಕೂಡ ಸ್ಪಷ್ಟ ಬಹುಮತ ಪಡೆದಿರಲಿಲ್ಲ. ಆಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಿಡಿಪಿ ಜತೆ ಸಮ್ಮಿಶ್ರ ಸರಕಾರ ರಚಿಸಲು ಮುಂದಾಗಿತ್ತು. ಈ ವೇಳೆ ಮೈತ್ರಿ ಕುರಿತಾದ ಮಾತುಕತೆಗಳನ್ನೆಲ್ಲಾ ಬಿಜೆಪಿ ನಾಯಕ ರಾಮ್‌ ಮಾಧವ್‌ ಮುಂದೆ ನಿಂತು ನಡೆಸಿದ್ದರು. ಸರಕಾರ ರಚನೆಯ ನಂತರ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯಿರಲಿಲ್ಲ.

ಆಡಳಿತದ ಆರಂಭದಿಂದಲೂ ಕೂಡ ರಾಮ್‌ ಮಾಧವ್‌ ಎರಡೂ ಪಕ್ಷಗಳ ನಡುವೆ ನಿಂತು ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬರುತ್ತಿದ್ದರು. ಆದ್ಯಾಗೂ ಕೂಡ ಅಸಮಾಧಾನ ಹೊಗೆಯಾಡುತ್ತಿತ್ತು. ಪಿಡಿಪಿ ಮೈತ್ರಿಯನ್ನು ಕಡಿದುಕೊಳ್ಳುವ ಹಂತ ತಲುಪಿರುವ ಬೆನ್ನಲ್ಲೇ ಈಗ ಅದೇ ರಾಮ್‌ ಮಾಧವ್‌ ಬೆಂಬಲವನ್ನು ಹಿಂಪಡೆಯುತ್ತಿದ್ದೇವೆ ಎಂದಿದ್ದಾರೆ. ಇದರ ಹಿಂದೆ ಬಿಜೆಪಿ ಸ್ಥಾನಗಳನ್ನು ಗಳಿಸಿದ್ದ ಜಮ್ಮು ಮತ್ತು ಲಡಾಕ್‌ನಲ್ಲಿ ತಲೆ ಎತ್ತಿದ್ದ ಆಡಳಿತ ವಿರೋಧಿ ಅಲೆ.

3. ಮೈತ್ರಿ ಸರಕಾರ ರಚನೆಯಾಗುವ ಹೊತ್ತಿನಲ್ಲಿ ಬಿಜೆಪಿ, ‘ನಮ್ಮ ಮೈತ್ರಿ ಸರಕಾರಕ್ಕೆ ಕಾಶ್ಮೀರದ ಅಭಿವೃದ್ಧಿ ಕುರಿತಂತೆ ಹಲವಾರು ಯೋಜನೆಗಳಿವೆ. ಕೇಂದ್ರದಲ್ಲಿಯೂ ಕೂಡ ಬಿಜೆಪಿ ಸರಕಾರವೇ ಇರುವುದರಿಂದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಅನುಕೂಲವಾಗುವುದು’ ಎಂಬ ಮಾತುಗಳನ್ನಾಡಿತ್ತು.

ಈಗ ಸಂಬಂಧವನ್ನು ಕಡಿದುಕೊಳ್ಳುವ ಕಾಲಘಟ್ಟದಲ್ಲಿ ಬಿಜೆಪಿ ಆಡಿರುವ ಮಾತುಗಳೇ ಬೇರೆಯಾಗಿವೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿರುವ ರಾಮ್‌ ಮಾಧವ್‌ , ಶಾಂತಿ, ರಾಷ್ಟ್ರದ ಏಕತೆ, ಭಯೋತ್ಪಾದನೆ, ಅಹಿಂಸೆ ಎಂಬ ಪದಗಳನ್ನು ಮುಂದಿಟ್ಟಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ಕೂಡ ಮೈತ್ರಿಗೂ ಮುಂಚೆ ಹೇಳಿದ ಅಭಿವೃದ್ಧಿಯ ಯೋಜನೆಗಳು ಯಾರಿಗೂ ನೆನಪಾಗುತ್ತಿಲ್ಲ. ಅಸಲಿಗೆ, ಕಳೆದ ಮೂರು ವರ್ಷಗಳಲ್ಲಿ ಜಮ್ಮು ಕಾಶ್ಮೀರದ ಜನರಿಗೆ ಅಭಿವೃದ್ಧಿ ಪರವಾದ ಆಡಳಿತ ನೀಡಲು ಸಮ್ಮಿಶ್ರ ಸರಕಾರ ವಿಫಲವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳ ಹೇಳುತ್ತಿವೆ.

4. ಮೈತ್ರಿ ಸರಕಾರದ ರಚನೆಯ ಸಂದರ್ಭದಲ್ಲಿ ಬಿಜೆಪಿ ಕೆಲವು ಬೇಡಿಕೆಗಳನ್ನು ಮೆಹಬೂಬಾ ಮುಫ್ತಿಯವರ ಮುಂದಿಟ್ಟಿತ್ತು. 2008ರಲ್ಲಿ ಶ್ರೀ ಅಮರನಾಥ್‌ ಭೂಮಿ ಹೋರಾಟ ನಡೆದಾಗ ಬಿಜೆಪಿಯ ಕೆಲ ಯುವ ಸದಸ್ಯರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಆ ಎಫ್‌ಐಆರ್‌ಗಳನ್ನು ವಜಾಗೊಳಿಸಬೇಕು ಎಂಬ ಬೇಡಿಕೆಯನ್ನು ಬಿಜಿಪಿ ಮುಂದಿಟ್ಟಿತ್ತು. ಮೆಹಬೂಬಾ ಮುಫ್ತಿ ಇದಕ್ಕೆ ಒಪ್ಪಿದ್ದರು. ಆದರೆ ಸರಕಾರ ರಚನೆಯಾಗಿ ಮೂರು ವರ್ಷ ಕಳೆದರೂ ಕೂಡ ಈ ಕುರಿತು ಕಾರ್ಯಪ್ರವೃತ್ತರಾಗಿಲ್ಲ. ಇದೂ ಕೂಡ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪಿಡಿಪಿ ಜತೆ ಮೈತ್ರಿ ಮುರಿದುಕೊಂಡಾದರೂ, ಮುಂದಿನ ಚುನಾವಣೆ ಹೊತ್ತಿಗೆ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಇದೆ.

5. ಮೊಹಬೂಬಾ ಮುಫ್ತಿ, ಜಮಾಯಿತ್ ಅಹ್ಲೇ ಹದೀಸ್‌ಗೆ ಸರಕಾರಿ ಭೂಮಿ ಹಂಚಿಕೆ ಮಾಡುವುದರ ಕುರಿತೂ ಕೂಡ ಬಿಜೆಪಿ ಅಸಮಾಧಾನ ಹೊರಹಾಕಿತ್ತು. ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಕೂಡ ಮುಫ್ತಿ ಈದ್ಗಾಹ್‌ಗೆ ಸರಕಾರಿ ಭೂಮಿ ನೀಡಿದ್ದರು. ಇದು ಬಿಜೆಪಿಯ ಬೇಸರಕ್ಕೆ ಕಾರಣವಾಗಿತ್ತು. ಜತೆಗೆ, ಪಕ್ಷದ ಮೂಲ ನಿಲುವುಗಳನ್ನು ಈ ನಿಟ್ಟಿನಲ್ಲಿ ಪಕ್ಕಕ್ಕಿಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

6. ಜಮ್ಮು ಹಾಗೂ ಲಡಾಕ್ ಜನ ಬಿಜೆಪಿಯನ್ನು ಬೆಂಬಲಿಸಿದ್ದವರು. ಆದರೆ ಅವರೇ ಈಗ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ಕತುವಾದಲ್ಲಿ ನಡೆದ ಪುಟ್ಟ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ಕ್ರಮಗಳು. ಇದೀಗ ಸಮ್ಮಿಶ್ರ ಸರಕಾರದ ಸೋಲುಗಳನ್ನು ಪಿಡಿಪಿ ತಲೆ ಕಟ್ಟುವ ಸಲುವಾಗಿ ದೋಸ್ತಿ ಕಡಿದುಕೊಳ್ಳಲು ಬಿಜೆಪಿಯೇ ಮುಂದಾಗಿದೆ ಎನ್ನುತ್ತಿವೆ ಕೆಲವು ವಿಶ್ಲೇಷಣೆಗಳು.

ಇಷ್ಟೆಲ್ಲಾ ಕಾರಣಗಳನ್ನು ಬದಿಗೊತ್ತಿ ತಾನೇ ಮೈತ್ರಿಯನ್ನು ಕಡಿದುಕೊಂಡು ಹೊರಬರುತ್ತಿರುವುದಾಗಿ ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ, #BJPDumpsPDP ಎಂಬ ಹ್ಯಾಷ್‌ಟ್ಯಾಗ್‌ ಸೃಷ್ಟಿಸಿ ದೇಶದ ದೃಷ್ಟಿಯಲ್ಲಿ ಪಿಡಿಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದೆಲ್ಲದರ ಹಿಂದಿನ ಉದ್ದೇಶ 2019ರ ಲೋಕಸಭಾ ಚುನಾವಣೆ ಮತ್ತು ಕಷ್ಟಪಟ್ಟು ಹಾದಿ ಮಾಡಿಕೊಂಡ ಜಮ್ಮುವನ್ನು ಉಳಿಸಿಕೊಳ್ಳುವುದಾಗಿದೆ. ಇದರ ಆಚೆಗೆ, ಭಯೋತ್ಪಾದನೆ, ಶಾಂತಿ ಅಂತೆಲ್ಲಾ ಮಾತನಾಡುವುದು ಬಕ್ವಾಸ್‌ ಅಷ್ಟೆ.