samachara
www.samachara.com
‘ಮುಖ್ಯವಾಹಿನಿಯ ಕತೆ’: ಗಂಡನ ಜಾಮೀನಿಗೆ ‘ಭಿಕ್ಷೆ’ ಬೇಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ!
COVER STORY

‘ಮುಖ್ಯವಾಹಿನಿಯ ಕತೆ’: ಗಂಡನ ಜಾಮೀನಿಗೆ ‘ಭಿಕ್ಷೆ’ ಬೇಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ!

ಸಾಮಾಜಿಕ ಹೋರಾಟ ವೈಯಕ್ತಿಕವಾಗಿ ಕೆಲವರಿಂದಷ್ಟೆ ದುಬಾರಿ ಬೆಲೆಯನ್ನು ಬೇಡುತ್ತದೆ. ಹೋರಾಟದ ಹೆಸರಿನಲ್ಲಿ ಬದುಕು ಕಟ್ಟಿಕೊಂಡವರಿಗಿಂತ ಭಿನ್ನ, ಹೋರಾಟಕ್ಕಾಗಿ ಬದುಕು ಕಳೆದುಕೊಂಡವರ ಈ ಕತೆ. 

samachara

samachara

ಹೆಸರು ರೇಣುಕಾ; ವಯಸ್ಸು 38. ಹುಟ್ಟಿದ್ದು ಕೋಲಾರ ಜಿಲ್ಲೆಯಲ್ಲಿ. ಓದಿದ್ದು ಬಿಎ ಪದವಿ. ನಂತರ ಬದುಕು ಕಟ್ಟಿಕೊಂಡಿದ್ದು ರಾಜ್ಯದ ನಾನಾ ಭಾಗಗಳಲ್ಲಿ ನಡೆದ ಹೋರಾಟಗಳ ಕಣದಲ್ಲಿ. ಚಿಕ್ಕಮಗಳೂರಿನಲ್ಲಿ ಪುಟ್ಟ ಮಗನ ಜತೆ ವಾಸವಾಗಿದ್ದಾರೆ. ಸದ್ಯ ಅವರು ಪತಿ, ಮಾಜಿ ನಕ್ಸಲ್ ಹೋರಾಟಗಾರ ನೀಲಗುಳಿ ಪದ್ಮನಾಭ್ ಜಾಮೀನಿಗಾಗಿ ಅಲೆದಾಟ ಆರಂಭಿಸಿ ಇಂದಿಗೆ 12 ದಿನಗಳು ಕಳೆಯುತ್ತಿವೆ.

"ಪೊಲೀಸರು ಪದ್ಮನಾಭ್ ಕರೆದುಕೊಂಡು ಹೋಗಿ ಎರಡು ವಾರಗಳು ಕಳೆಯುತ್ತಿವೆ. ಇನ್ನೂ ಅವರು ಯಾವ ಕೇಸಿನಲ್ಲಿ ಬಂಧಿಸಿದ್ದಾರೆ ಎಂಬ ಮಾಹಿತಿ ಇಲ್ಲ. ಹಳೆಯ ಕೇಸ್‌ ಆಗಿರುವುದರಿಂದ ಎಫ್‌ಐಆರ್‌ ಸಿಗುತ್ತಿಲ್ಲ. ಅದು ಸಿಕ್ಕ ಮೇಲಷ್ಟೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ವಕೀಲರು ಹೇಳುತ್ತಿದ್ದಾರೆ. ನಮ್ಮ ಪಾಡಿಗೆ ಕೂಲಿ ನಾಲಿ ಮಾಡಿಯಾದರೂ ಬದುಕು ಕಟ್ಟಿಕೊಳ್ಳಲು ಈ ವ್ಯವಸ್ಥೆ ಬಿಡುತ್ತಿಲ್ಲ,’’ ಎಂದರು ರೇಣುಕಾ.

ಕನ್ನಡ, ತಮಿಳು ಹಾಗೂ ತೆಲಗು ಭಾಷೆಗಳನ್ನು ಸುಲಲಿತವಾಗಿ ಓದುತ್ತಾರೆ. ಅಷ್ಟೆ ಸರಾಗವಾಗಿ ಅವರು ಅನುವಾದನ್ನೂ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಕೆಜಿಎಫ್‌ ಚಿನ್ನದ ಗಣಿ ಮುಚ್ಚುವ ವಿರೋಧಿ ಹೋರಾಟದಿಂದ ಆರಂಭವಾಗಿ ಕುದುರೆಮುಖ ಅಭಯಾರಣ್ಯ ಘೋಷಣೆ ವಿರೋಧಿ ಆಂದೋಲನಗಳವರೆಗೆ ರೇಣುಕಾ ಎರಡು ದಶಕಗಳ ಕಾಲ ಹೋರಾಟದ ಹಿನ್ನೆಲೆ ಹೊಂದಿದ್ದಾರೆ. ಸಾಮಾಜಿಕ ಬದಲಾವಣೆಗಾಗಿ ತಮ್ಮ ಯವ್ವನವನ್ನು ಕಳೆದುಕೊಂಡ ಅವರು ಈ ಹಂತದಲ್ಲಿ ವ್ಯವಸ್ಥೆಯ ವಿರುದ್ಧ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ, ಅವರಿಗೀಗ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲೇಬೇಕಿದೆ.

ನಡೆದಿದ್ದೇನು?:

ಜೂನ್ 7ನೇ ತಾರೀಖು ನೀಲಗುಳಿ ಪದ್ಮನಾಭ್ ಉಡುಪಿಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಕುಂದಾಪುರದ ಪೊಲೀಸರು ನ್ಯಾಯಾಲಯದ ಆವರಣದಲ್ಲಿಯೇ ಬಂಧಿಸಿ ಕರೆದುಕೊಂಡು ಹೋಗಿದ್ದರು.

Also read: ‘ತೂತುಕುಡಿ ಎಫೆಕ್ಟ್’: ಮಾಜಿ ನಕ್ಸಲೈಟ್ ನೀಲಗುಳಿ ಪದ್ಮನಾಭ್ ಬಂಧನ

ಹಿಂದೆ ನಕ್ಸಲ್ ಹೋರಾಟದಲ್ಲಿದ್ದು ಕಾಲನ್ನು ಕಳೆದುಕೊಂಡ ಅವರು 2004ರ ಹೊತ್ತಿಗೆ ‘ಕಾಡಿನ ಬದುಕು’ ತೊರೆದು ಹೊರಬಂದಿದ್ದರು. ಆ ಸಮಯದಲ್ಲಿ ಅವರನ್ನು ನೋಡಿಕೊಳ್ಳಲು ನಿಂತವರು ರೇಣುಕಾ. ನಂತರದ ದಿನಗಳಲ್ಲಿ ಇಬ್ಬರೂ ಒಪ್ಪಿ ಮದುವೆಯೂ ಆದರು. ಒಂದು ಮಗು ಕೂಡ ಜನಿಸಿತು.

ನವೆಂಬರ್ 2016ರಲ್ಲಿ ಚಿಕ್ಕಮಗಳೂರು ಪೊಲೀಸರಿಗೆ, ಶಾಂತಿಗಾಗಿ ನಾಗರಿಕ ವೇದಿಕೆ ಮಧ್ಯಸ್ಥಿಕೆಯಲ್ಲಿ ನೀಲಗುಳಿ ಪದ್ಮನಾಭ್ ಶರಣಾದರು. ಈ ಸಮಯದಲ್ಲಿ ಅವರ ಮೇಲಿದ್ದ ಕೇಸುಗಳನ್ನು ಖುಲಾಸೆಗೊಳಿಸುವುದಾಗಿ ಹುಸಿ ಭರವಸೆ ಸಿಕ್ಕಿತ್ತು.

ರೇಣುಕಾ ಅವರ ವಿಚಾರಣೆ ನಡೆದಿತ್ತಾದರೂ, ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಅವರು ಇಲ್ಲದ ಕಾರಣಕ್ಕೆ ಪೊಲೀಸರು ಪ್ರಶ್ನೋತ್ತರ ಕಲಾಪ ನಡೆಸಿ ಬಿಟ್ಟು ಕಳುಹಿಸಿದ್ದರು. “ಈ ಸಮಯದಲ್ಲಿ ಪೊಲೀಸರೇ ಆಶ್ಚರ್ಯ ವ್ಯಕ್ತಪಡಿಸಿದ್ದರು. ಕಾಲ ಇಲ್ಲ ಎಂದು ಗೊತ್ತಿದ್ದೂ ಯಾಕೆ ಮದುವೆಯಾದೆ ಎಂದು ಕೇಳಿದ್ದರು. ಒಬ್ಬ ವ್ಯಕ್ತಿ ಹೋರಾಟಕ್ಕಾಗಿ ಇಡೀ ಜೀವನ ಕಳೆದುಕೊಂಡು, ಕೊನೆಗೆ ಕಾಲನ್ನೂ ಕಳೆದುಕೊಂಡಾಗ ಬದುಕಿನ ಹೆಗಲು ನೀಡುವುದು ಸರಿ ಅಂತ ನನ್ನ ಮನಸ್ಸು ಹೇಳಿತ್ತು. ಒಲವಿನ ಜೀವನಕ್ಕೆ ಲೆಕ್ಕಾಚಾರಗಳು ಬೇಕಿರಲಿಲ್ಲ,’’ ಎನ್ನುತ್ತಾರೆ ರೇಣುಕಾ.

ಶರಣಾಗತಿ ಪ್ರಕ್ರಿಯೆ ನಂತರ ನೀಲಗುಳಿ ಪದ್ಮನಾಭ್ ಸುಮಾರು 10 ತಿಂಗಳು ಜೈಲಿನಲ್ಲಿದ್ದು ಹೊರ ಬಂದಿದ್ದರು. ರೇಣುಕಾ ಕುಟುಂಬದ ಹೊಸ ಬದುಕೊಂದು ಚಿಕ್ಕಮಗಳೂರಿನಲ್ಲಿ ಶುರುವಾಗಿತ್ತು.

ರೇಣುಕಾ ಹೋರಾಟ ಹಾದಿ:

“ನಾವು ಸಾಮಾನ್ಯ ಜನ. ನಾನು ಮತ್ತು ಹಾಜೀಮಾ (ಪೊಲೀಸ್‌ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ಕಾರ್ಯಕರ್ತೆ) ಒಂದು ಕಾಲದಲ್ಲಿ ಒಂದೇ ರೂಮಿನಲ್ಲಿ ಇದ್ದೆವು. ಒಟ್ಟಿಗೆ ಹಲವು ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದೆವು. ಕಾರ್ಮಿಕರ ನಡುವೆ, ಕೊಳೆಗೇರಿಗಳ ಜನರ ಜತೆ ಕೆಲಸ ಮಾಡುತ್ತಿದ್ದೆವು. ಆದರೆ ಒಂದು ಹಂತದಲ್ಲಿ ಹಾಜೀಮ ನಮ್ಮನ್ನು ಬಿಟ್ಟು ಕಾಡಿಗೆ ಹೋದಳು. ಅಲ್ಲಿಂದ ನನಗೊಂದು ಪತ್ರವನ್ನೂ ಬರೆದಿದ್ದಳು. ಅದಾಗಿ ಒಂದು ತಿಂಗಳಿಗೆ ಆಕೆ ಎನ್‌ಕೌಂಟರ್‌ಗೆ ಬಲಿಯಾದಳು. ಅದು ನನ್ನ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರಿತ್ತು. ಆದರೆ ನಾನು ಯಾವತ್ತೂ ಕಾಡಿಗೆ ಹೋಗಿ ಬಂದೂಕು ಹಿಡಿಯಲಿಲ್ಲ. ಜನರಿಗಾಗಿ ನಡೆಯುತ್ತಿದ್ದ ಹೋರಾಟಗಳಿಂದ ಹಿಂದೆಯೂ ಸರಿಯಲಿಲ್ಲ,’’ ಎಂದು ಮಾಹಿತಿ ನೀಡುತ್ತಾರೆ ರೇಣುಕಾ.

ಸಾಮಾಜಿಕ ಹೋರಾಟ ವೈಯಕ್ತಿಕವಾಗಿ ಕೆಲವರಿಂದಷ್ಟೆ ದುಬಾರಿ ಬೆಲೆಯನ್ನು ಬೇಡುತ್ತದೆ. ರೇಣುಕಾ ರೀತಿಯ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವರು ತಮ್ಮ ಜೀವನವನ್ನೇ ಹೋರಾಟಗಳ ಹಾದಿಯಲ್ಲಿ ಸವೆಸಿದ್ದಾರೆ. ನೀಲಗುಳಿ ಪದ್ಮನಾಭ್ ತರಹದ ನಕ್ಸಲ್‌ ಹೋರಾಟಗಾರರು ಕಾಲು ಕಳೆದುಕೊಂಡು ಬಂದಾಗ, ಹೋರಾಟದ ಆಚೆಗೂ ಬದುಕಿನಲ್ಲಿ ಆಸರೆಯಾಗಿ ನಿಲ್ಲುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲಾ ದುಬಾರಿ ಬೆಲೆ ತೆತ್ತವರ ಇವತ್ತಿನ ಸ್ಥಿತಿ ಹೇಗಿದೆ? ಮುಖ್ಯವಾಹಿನಿ ಎಂದು ಕರೆದುಕೊಳ್ಳುವ ಈ ವ್ಯವಸ್ಥೆ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ? ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಸಾಮಾಜಿಕ ಹೋರಾಟದ ಗಟ್ಟಿ ಹಿನ್ನೆಲೆ ಇರುವ ರೇಣುಕಾ ಎದುರಿಗೆ ಇದ್ದಾರೆ.

ಕುಪ್ಪಳ್ಳಿಗೆ ಭೇಟಿ ನೀಡಿದ ಸಮಯದಲ್ಲಿ ರೇಣುಕಾ ಕುಟುಂಬ ತೆಗೆದುಕೊಂಡ ಸೆಲ್ಫಿ. 
ಕುಪ್ಪಳ್ಳಿಗೆ ಭೇಟಿ ನೀಡಿದ ಸಮಯದಲ್ಲಿ ರೇಣುಕಾ ಕುಟುಂಬ ತೆಗೆದುಕೊಂಡ ಸೆಲ್ಫಿ. 

ಬೇಡಿಕೆ ಇಷ್ಟೆ:

“ನನ್ನ ಈವರೆಗಿನ ನಿರ್ಧಾರಗಳ ಬಗ್ಗೆ ಬೇಸರ ಇಲ್ಲ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನಮಗೆ ಸಮಾಜದ ಬಗ್ಗೆ ತಿಳಿವಳಿಕೆ ನೀಡಿದ್ದು ಹೋರಾಟಗಳು. ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗೆ ಎಲ್ಲೋ ಮದುವೆಯಾಗಿ ಕಸ, ಮುಸರೆ ಮಾಡಿಕೊಂಡು ಇರುತ್ತಿದ್ದೆವು. ಇವತ್ತು ಅದನ್ನು ಮೀರಿ ಜನರ ಸಂಕಷ್ಟಗಳಿಗೆ ನೆರವಾದ ತೃಪ್ತಿ ಇದೆ. ನಮ್ಮ ಬಳಿ ಹಣ ಇಲ್ಲದೆ ಇರಬಹುದು, ಆದರೆ ಖುಷಿಗೆ, ನೆಮ್ಮದಿಗೆ ಕೊರತೆ ಇರಲಿಲ್ಲ. ನಮ್ಮನ್ನು ನೋಡಿದ ಜನ ಕೂಡ ಅಸೂಯೆ ಪಡುವಂತೆ, ಹೆಮ್ಮೆ ಪಡುವಂತೆ ಬದುಕು ಕಟ್ಟಿಕೊಂಡಿದ್ದೆವು. ಆದರೆ ಮುಖ್ಯವಾಹಿನಿ ಅಂತ ಕರೆದುಕೊಂಡು ಬಂದ ಪೊಲೀಸರು ಸಾಮಾನ್ಯ ಬದುಕನ್ನೂ ಬದುಕಲು ಅವಕಾಶ ನೀಡುತ್ತಿಲ್ಲ. ಹೀಗಾದರೆ, ನಮ್ಮಂತವರಿಗೆ ಬೇರೆ ದಾರಿಗಳಾದರೂ ಏನಿವೆ.” ಎನ್ನುತ್ತಾರೆ ಅವರು.

ಕೋಲಾರ ಜಿಲ್ಲೆಯಿಂದ ಮಲೆನಾಡಿಗೆ ಕರೆತಂದು ನಿಲ್ಲಿಸಿದ ರೇಣುಕಾ ಬದುಕು ಇವತ್ತು ಮತ್ತೊಂದು ಸವಾಲಗೆ ಒಡ್ಡಿಕೊಂಡಿದೆ. ದೈಹಿಕವಾಗಿ ಜರ್ಜರಿತ ಸ್ಥಿತಿಯಲ್ಲಿರುವ ಪತಿಯನ್ನು ಕಾನೂನು ಹೋರಾಟದ ಮೂಲಕವೇ ಸಾಮಾನ್ಯ ಬದುಕಿಗೆ ಕರೆದುಕೊಂಡು ಬರಬೇಕಿದೆ. ಅದರ ಜತೆಗೆ, ಒಳಗಿನ ಹೋರಾಟದ ಮನೋಭಾವನೆಯನ್ನೂ ಉಳಿಸಿಕೊಳ್ಳಬೇಕಿದೆ.

ಅದನ್ನೇ ಅಪಹಾಸ್ಯಕ್ಕೆ ಗುರಿಯಾಗಿಸುವ ಮನಸ್ಥಿತಿಗಳು ಈ ಸಮಾಜದಲ್ಲಿ ಇವೆ ಮತ್ತು ಅವು ವ್ಯತಿರಿಕ್ತ ವಾತಾವರಣವನ್ನು ಸೃಷ್ಟಿಸಿವೆ ಎಂಬ ಸಣ್ಣ ಕುರುಹೂ ಇಲ್ಲದ ರೇಣುಕಾ, ಪತಿಯ ಜಾಮೀನಿಗಾಗಿ ಕಂಡಕಂಡವರ ಬಳಿ ಅಂಗಲಾಚುತ್ತಿದ್ದಾರೆ. ನಾಡಿಗೆ ಬಂದರೂ ಅವರದ್ದು ಅರಣ್ಯ ರೋಧನವೇ ಆಗಿದೆ.