samachara
www.samachara.com
ಕುಮಾರಸ್ವಾಮಿ ಕನಸಿನ ಇಸ್ರೇಲ್ ಕೃಷಿ: ಏನಿದು ಮಂಡ್ಯದಲ್ಲಿ ಆರಂಭಗೊಂಡ  ‘ಕಿಬೂತ್’ ಪ್ರಯೋಗ?
COVER STORY

ಕುಮಾರಸ್ವಾಮಿ ಕನಸಿನ ಇಸ್ರೇಲ್ ಕೃಷಿ: ಏನಿದು ಮಂಡ್ಯದಲ್ಲಿ ಆರಂಭಗೊಂಡ ‘ಕಿಬೂತ್’ ಪ್ರಯೋಗ?

ಕುಮಾರಸ್ವಾಮಿ ಇಸ್ರೇಲ್‌ ಕೃಷಿ ಪದ್ಧತಿಯ ಬಗ್ಗೆ ಮತ್ತೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ಇಷ್ಟು ಕಾಡುತ್ತಿರುವ ಈ ಇಸ್ರೇಲ್‌ ಕೃಷಿ ಪದ್ಧತಿಯಲ್ಲಿ ಅಂತದ್ದೇನಿದೆ ಎನ್ನುವುದರ ಚಿಕ್ಕ ಮಾಹಿತಿ ಇಲ್ಲಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಎಚ್‌. ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಲ್ಲೇ ಅವರ ಬಹುದಿನಗಳ ಕನಸಾದ ಇಸ್ರೇಲ್ ಕೃಷಿ ಪದ್ಧತಿಯ ಅವಳಡಿಕೆಗೆ ವೇಗ ದೊರೆತಿದೆ. ರೈತರ ಸಾಲ ಮನ್ನಾ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಳೆ ಕೃಷಿ ಪದ್ಧತಿಯನ್ನು ಬಿಟ್ಟು ಹೊಸ ಪದ್ಧತಿಯ ಕಡೆಗೆ ಮುಖ ಮಾಡಬೇಕು ಎಂದು ಮಾತನಾಡುತ್ತಿರುವ ಕುಮಾರಸ್ವಾಮಿ 5 ವರ್ಷಗಳೊಳಗೆ ಇಸ್ರೇಲ್‌ ಕೃಷಿ ಪದ್ಧತಿಯನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದಾರೆ.

ಇಸ್ರೇಲ್ ಎಂಬ ಪುಟ್ಟ ದೇಶ ಅನುಸರಿಸುತ್ತಿರುವ ಕಾಂತ್ರಿಕಾರಕ ಕೃಷಿಪದ್ಧತಿಗಳಿಗೆ ಮನಸೋತ ಸಿಎಂ ಎಚ್.ಡಿ.ಕುಮಾರಸ್ವಾಮಿ 2017ರ ಆಗಸ್ಟ್‌ ತಿಂಗಳಲ್ಲಿ ಮೂರು ದಿನಗಳ ಕಾಲ ಇಸ್ರೇಲ್‌ ಪ್ರವಾಸವನ್ನು ನಡೆಸಿದ್ದರು. ಜೆಡಿಎಸ್‌ನ 10 ಜನ ಶಾಸಕರು ಎಚ್.ಡಿ.ಕುಮಾರಸ್ವಾಮಿಯೊಟ್ಟಿಗೆ ಕೈಜೋಡಿಸಿದ್ದರು. ಇಸ್ರೇಲ್‌ನ ಗುವಾಂಗ್‌ಡಾಂಗ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕುಮಾರಸ್ವಾಮಿ ಮಾಹಿತಿ ಕಲೆ ಹಾಕಿದ್ದರು. ಜರುಸಲೇಂನ ನೀರಿನ ಪುನರ್ಬಳಕೆ ಘಟಕ, ಬೀಜೋತ್ಪಾದನಾ ಘಟಕ, ರೈತರ ತೋಟಗಳು, ಹೈನುಗಾರಿಕಾ ಸ್ಥಳಗಳಿಗೆ ಭೇಟಿ ನೀಡಿ ವಾಪಾಸ್ಸಾಗಿದ್ದರು.

ತವರು ನೆಲಕ್ಕೆ ಹಿಂದಿರುಗಿದ ಬಳಿಕ ‘5 ವರ್ಷಗಳ ಅವಕಾಶ ನೀಡಿ, ಇಸ್ರೇಲ್‌ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸುತ್ತೇನೆ’ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಅಧಿಕಾರ ದೊರೆತ ನಂತರ ಈಗ ಸಿಎಂ ಕುಮಾರಸ್ವಾಮಿ ಇಸ್ರೇಲ್‌ ಕೃಷಿ ಪದ್ಧತಿಯ ಬಗ್ಗೆ ಮತ್ತೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ಇಷ್ಟು ಕಾಡುತ್ತಿರುವ ಈ ಇಸ್ರೇಲ್‌ ಕೃಷಿ ಪದ್ಧತಿಯಲ್ಲಿ ಅಂತದ್ದೇನಿದೆ ಎನ್ನುವುದರ ಚಿಕ್ಕ ಮಾಹಿತಿ ಇಲ್ಲಿದೆ.

ಇಸ್ರೇಲ್‌ ಕೃಷಿ:

ಇಸ್ರೇಲ್‌, ಕರ್ನಾಟಕದ ಕೆಲವು ಜಿಲ್ಲೆಗಳನ್ನು ಸೇರಿಸಿದರೆ ಅಗುವಷ್ಟು ಪುಟ್ಟ ರಾಷ್ಟ್ರ. ಸುತ್ತಲೂ ಬಯಲು ಪ್ರದೇಶವನ್ನೇ ಹೊಂದಿರುವ ಇಸ್ರೇಲ್‌ನಲ್ಲಿ ಮಳೆಯಾಗುವುದೇ ಕಡಿಮೆ. ವರ್ಷದ 365 ದಿನಗಳಲ್ಲಿ ಕೇವಲ 15 ದಿನಗಳಷ್ಟೇ ಇಸ್ರೇಲ್‌ ಮಳೆಯನ್ನು ಕಾಣುತ್ತದೆ. ಅದೂ ಕೂಡ ಎಲ್ಲಾ ಪ್ರದೇಶಗಳಲ್ಲಲ್ಲ. ಒಣಹವೆಯಿಂದ ಕೂಡಿರುವ, ಸಂಪನ್ಮೂಲಗಳ ಕೊರೆತೆಯಿರುವ ಈ ಪುಟ್ಟ ದೇಶ ಇಂದು ಇಡೀ ಜಗತ್ತಿಗೆ ಕೃಷಿ ಪಾಠ ಕಲಿಸುತ್ತಿದೆ. ಜಗತ್ತಿನ ಇತರೆ ದೇಶಗಳಿಗೆ ತನ್ನೊಳಗಿನ ತಂತ್ರಜ್ಞಾನವನ್ನು ಧಾರೆ ಎರೆಯುತ್ತಿದೆ.

ಅತಿ ಕಡಿಮೆ ಜಲ ಸಂಪನ್ಮೂಲವಿದ್ದರೂ ಕೂಡ ದೇಶದ ಬಹುಭಾಗವನ್ನು ಹಸಿರಾಗಿಸಿದೆ. ಸಾಮೂಹಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ರೀತಿಯ ಹಣ್ಣುಗಳು, ತರಕಾರಿ ಬೆಳೆಗಳು, ಹೈನುಗಾರಿಕೆ, ಪುಷ್ಯೋದ್ಯಮ, ಮೀನುಗಾರಿಕೆಗಳಲ್ಲೆಲ್ಲಾ ಮುಂದಿರುವ ಇಸ್ರೇಲ್‌ ಒಮ್ಮೆ ಹುಬ್ಬೇರಿಸುವಂತೆ ಮಾಡುವುದಂತು ನಿಜ.

‘ಕಿಬೂತ್‌’ ಸಮುದಾಯ:

ಸುಮಾರು 470 ಕಿಲೋಮೀಟರ್‌ ಉದ್ದ ಹಾಗೂ 150 ಕಿಲೋಮೀಟರ್‌ಗಳಷ್ಟು ಆಗಲಕ್ಕೆ ಮಲಗಿರುವ ಇಸ್ರೇಲ್‌ನಲ್ಲಿನ ಜನಸಂಖ್ಯೆ 85 ಲಕ್ಷ. ಮರಳಿನಿಂದ ತುಂಬಿದ ಕಲ್ಲು ಭೂಮಿ ಇಸ್ರೇಲ್‌ನಲ್ಲಿ ಸುಣ್ಣದ ಕಲ್ಲಿನ ಪ್ರಮಾಣವೇ ಹೆಚ್ಚು. ಇಂತಹ ಕೃಷಿಗೆ ಯೋಗ್ಯವೇ ಅಲ್ಲದ ಭೂಮಿಯನ್ನು ಇಸ್ರೇಲಿಯನ್ನರು ಪಳಗಿಸಿಕೊಂಡಿದ್ದಾರೆ. ಈ ಸಾಧನೆಯ ಗರಿ ಇಸ್ರೇಲ್‌ನ ‘ಕಿಬೂತ್‌’ ಎಂಬ ಜನ ಸಮುದಾಯಕ್ಕೆ ಸೇರುತ್ತದೆ.

‘ಕಿಬೂತ್‌’ ಎಂದರೆ ನೂರಾರು ಜನ ಒಟ್ಟಿಗೆ ಸೇರಿ, ಕೃಷಿ ಮಾಡಿ ಬಂದಿದ್ದರಲ್ಲಿ ಸಮಾನವಾಗಿ ಹಂಚಿಕೊಳ್ಳುವ ಜನ ಸಮುದಾಯ. ಇಂದು ಸುಮಾರು 300ಕ್ಕೂ ಹೆಚ್ಚು ‘ಕಿಬೂತ್‌’ ಜನ ಸಮುದಾಯಗಳು ಇಸ್ರೇಲ್‌ನಲ್ಲಿವೆ. 100 ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಈ ‘ಕಿಬೂತ್‌’ಗಳ ಕೃಷಿ ಪದ್ಧತಿ ಇಂದು ಜಗತ್ತಿನ ಕೃಷಿ ಬೆಳವಣೆಗೆಯಲ್ಲಿ ಹೊಸದೊಂದು ಭಾಷ್ಯ ಬರೆಯುತ್ತಿದೆ. ಕೃಷಿಯಿಂದ ಒಂದು ಹೆಜ್ಜೆ ಮುಂದಕ್ಕೆ ಸಾಗಿ, ವ್ಯವಸಾಯವನ್ನು ಉದ್ಯಮವನ್ನಾಗಿಸಿಕೊಂಡಿದೆ.

ಇಸ್ರೇಲ್‌ನಲ್ಲಿ ಬಳಕೆಯಾಗುತ್ತಿರುವ ಆಧುನಿಕ ಕೃಷಿ ಯಂತ್ರ.
ಇಸ್ರೇಲ್‌ನಲ್ಲಿ ಬಳಕೆಯಾಗುತ್ತಿರುವ ಆಧುನಿಕ ಕೃಷಿ ಯಂತ್ರ.

1948ರಲ್ಲಿ ಇಸ್ರೇಲ್ ಎಂಬ ಪುಟ್ಟ ದೇಶದ ಶೇ.20ರಷ್ಟು ಭೂಮಿ ಮಾತ್ರ ಕೃಷಿಯೋಗ್ಯ ಎನಿಸಿಕೊಂಡಿತ್ತು. ಉಳಿದ ಭಾಗಗಳನ್ನೆಲ್ಲಾ ಲವಣಯುಕ್ತ ಮಣ್ಣೇ ಆಕ್ರಮಿಸಿಕೊಂಡಿತ್ತು. ಆದರೆ ಇಂದು ಶೇ.80ರಷ್ಟು ಭೂಮಿಯಲ್ಲಿ ಕೃಷಿ ಕಾರ್ಯ ಎಗ್ಗಿಲ್ಲದೇ ಸಾಗುತ್ತಿದೆ. 20ನೇ ಶತಮಾನದ ಮಧ್ಯಭಾಗಕ್ಕೆ ಹೊಲಿಸಿಕೊಂಡರೆ, ಇಂದು ಇಸ್ರೇಲ್‌ನ ಕೃಷಿ ಉತ್ಪಾದನೆ 16 ಪಟ್ಟು ಹೆಚ್ಚಾಗಿದೆ.

ಒಂದೊಂದು ಕಿಬೂತ್‌ಗಳಲ್ಲೂ ಕೂಡ ನೂರಾರು ಜನರಿರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಬಾಳುತ್ತಾರೆ. ಒಂದೊಂದು ಕಿಬೂತ್‌ಗೂ ಒಂದೊಂದು ಸಮಿತಿ. ಅಹಾರದಿಂದ ಮೊದಲ್ಗೊಂಡು ದಿನನಿತ್ಯದ ಎಲ್ಲಾ ಬೇಕು ಬೇಡಗಳನ್ನು ಈ ಸಮಿತಿಯೇ ನೋಡಿಕೊಳ್ಳುತ್ತದೆ. ಬಾದಾಮಿ, ದ್ರಾಕ್ಷಿ, ಬಾಳೆ, ಮಾವು, ಖರ್ಜೂರ, ಗೋಧಿ ಏನನ್ನು ಬೆಳಯಬೇಕು ಎನ್ನುವುದನ್ನು ಸಮಿತಿಯೇ ನಿರ್ಧರಿಸುತ್ತದೆ. ಸಾಮಾನ್ಯವಾಗಿ ಅಯಾ ಬೆಳೆಯಲ್ಲಿ ಪರಿಣಿತಿ ಹೊಂದಿರುವ ಕಿಬೂತ್‌ಗಳೇ ಆಯಾ ಬೆಳಗಳನ್ನು ಬೆಳೆಯುತ್ತವೆ. ಸಮಿತಿಯ ಆದೇಶದಂತೆ ಕಿಬೂತ್‌ನ ಉಳಿದ ಸದಸ್ಯರು ನಡೆಯುತ್ತಾರೆ. ಪಾತ್ರೆ ತೊಳೆಯುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ಆಧುನಿಕ ತಂತ್ರಜ್ಞಾನವೇ ನೆರವೇರಿಸುತ್ತದೆ.

ಕಿಬೂತ್‌ಗಳ ಮುಖ್ಯ ಕಸುಬು ಕೃಷಿ. ಇರುವ ಅತ್ಯಲ್ಪ ನೀರನ್ನೇ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಳಸಿ, ಸ್ವಲ್ಪ ನೀರನ್ನು ಉಳಿಸಿಕೊಳ್ಳುವ ಕಲೆಯನ್ನು ಇಸ್ರೇಲಿಯನ್‌ ಕಿಬೂತ್‌ಗಳ ಕರಗತ ಮಾಡಿಕೊಂಡಿವೆ. ಇಸ್ರೇಲ್‌ನ ಉದ್ದಗಲಕ್ಕೂ ಕೂಡ ಹನಿ ನೀರಾವರಿ ಪದ್ಧತಿ ಬಳಕೆಯಲ್ಲಿದೆ. ಬೆಳೆಗೆ ಎಷ್ಟು ಅಗತ್ಯವೋ ಅಷ್ಟೇ ತೇವಾಂಶವನ್ನು ಕಿಬೂತ್‌ಗಳು ಭೂಮಿಗೆ ನೀಡುತ್ತವೆ.

‘ಥರ್ಮಲ್‌ ಇಮೇಜಿಂಗ್‌’ ಎಂಬ ತಂತ್ರಜ್ಞಾನ ಈ ತೇವಾಂಶವನ್ನು ಸದಾ ಕಾಯ್ದಿರಿಸುತ್ತದೆ. ವಾತಾವರಣದ ತೇವಾಂಶವನ್ನು ಹಾಗೇ ಉಳಿಸಬಲ್ಲ, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ತಟ್ಟೆಗಳನ್ನು ಕಿಬೂತ್‌ಗಳು ಬಳಸುತ್ತಿವೆ. ಈ ತಟ್ಟೆಗಳು ಬೆಳೆಗೆ ಅಗತ್ಯವಿರುವ ನೀರಿನ ಅಗತ್ಯತೆಯನ್ನು ಶೇ.50ರಷ್ಟು ಕಡಿಮೆಗೊಳಿಸಿವೆ. ದೊರೆಯುವ ನೀರನ್ನು ಬಳಸಿ, ಬಳಕೆಯಾದ ನೀರಿನ ಶೇ.86ರಷ್ಟನ್ನು ಇಸ್ರೇಲಿಯನ್ನರು ಮರುಬಳಕೆ ಮಾಡುತ್ತಿದ್ದಾರೆ. ಈ ಮರುಬಳಕೆ ಇಸ್ರೇಲ್‌ನ ನೀರಿನ ಬವಣೆಯನ್ನು ಅರ್ಧದಷ್ಟು ತಗ್ಗಿಸಿದೆ. ಕೃಷಿಗೆ ಬಳಕೆಯಾಗುವ ಶೇ.63ರಷ್ಟು ನೀರು ಸಮುದ್ರದಿಂದ ಸಂಸ್ಕರಿಸಿ ತಂದಿದ್ದಾಗಿರುತ್ತದೆ.

ನೀರಿನ ಮಿತಬಳಕೆಗಾಗಿ ಇಸ್ರೇಲಿಯನ್ನರು ಅನುಸರಿಸುತ್ತಿರುವ ವಿಧಾನ.
ನೀರಿನ ಮಿತಬಳಕೆಗಾಗಿ ಇಸ್ರೇಲಿಯನ್ನರು ಅನುಸರಿಸುತ್ತಿರುವ ವಿಧಾನ.

ಬೆಳೆಯ ಬೆಳವಣಿಗೆಗೆ ಮಾರಕವಾಗಬಲ್ಲ ಕೀಟಗಳು, ವೈರಾಣುಗಳನ್ನು ಬಗೆಬಗೆ ಬಣ್ಣದ ನೆಟ್‌ಗಳನ್ನು ಬಳಸಿ ದೂರವಿಡಲಾಗುತ್ತದೆ. ಜತೆಗೆ ಹಾನಿ ಮಾಡಬಲ್ಲ ಕೀಟಗಳು, ನುಸಿಗಳನ್ನು ನಿಯಂತ್ರಿಸುವುದಕ್ಕಾಗಿ ಜೇನು, ದುಂಬಿಗಳನ್ನು ಪೋಷಿಸಲಾಗುತ್ತಿದೆ. ಹಣ್ಣುಗಳಿಗೆ ಮುತ್ತಿಕೊಳ್ಳುವ ಒಂದು ಬಗೆಯ ನೊಣಗಳನ್ನು ತಡೆಯುವ ಸಲುವಾಗಿ, ಅವುಗಳ ಸಂತಾನೋತ್ಪತ್ತಿಯನ್ನೇ ಕಡಿಮೆಯಾಗಿಸುವ ಕ್ರಮಕ್ಕೆ ಇಸ್ರೇಲ್ ಮುಂದಾಗಿದೆ.

ಕಡಿಮೆ ನೀರನ್ನು ಬಳಸಿ ನಳನಳಸಿ ಬೆಳೆಯಬಲ್ಲ ಆಹಾರತಳಿಗಳ ಸಂಶೋಧನೆಗಳು ಸಾಗುತ್ತಿವೆ. ಒಣ ಹವೆ ಹಾಗು ಬಿಸಿಲಿನಲ್ಲೂ ಕೂಡ ಸಮುದ್ರದ ಉಪ್ಪು ನೀರನ್ನುಂಡು ಬೆಳೆಯಬಲ್ಲ ಆಲೂಗಡ್ಡೆ ತಳಿ ಇಸ್ರೇಲ್‌ನಲ್ಲಿದೆ. ಬೇರೆ ಬೇರೆ ರುಚಿ ನೀಡುವ ವಿವಿಧ ಬಗೆಯ ಟಮೋಟೋ ತಳಿಗಳು ಈಗಾಗಲೇ ಅಭಿವೃದ್ಧಿಗೊಂಡಿವೆ.

ಹೆಚ್ಚಿನ ಇಳುವರಿ ನೀಡುತ್ತಿರುವ ಟಮೋಟೊ ತಳಿ.
ಹೆಚ್ಚಿನ ಇಳುವರಿ ನೀಡುತ್ತಿರುವ ಟಮೋಟೊ ತಳಿ.

ಹೈನೋದ್ಯಮ:

ಇಸ್ರೇಲ್‌ನ ಹೈನೋದ್ಯಮ.
ಇಸ್ರೇಲ್‌ನ ಹೈನೋದ್ಯಮ.

ಇಸ್ರೇಲ್‌ನ ಈ ವಿಶೇಷ ಜನಸಮುದಾಯ ‘ಕಿಬೂತ್‌’ಗಳ ಪ್ರಮುಖ ಉಪಕಸುಬು ಹೈನೋದ್ಯಮ. ಒಂದೊಂದು ಕಿಬೂತ್‌ಗಳ ಬಳಿ ಕಡಿಮೆಯೆಂದರೂ ಸಾವಿರಾರು ಹಸುಗಳಿರುತ್ತವೆ. ಪ್ರತಿಯೊಂದು ಹಸುವಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡಿರಲಾಗುತ್ತದೆ. ಹಸುಗಳ ಮುಂಗಾಲಿಗೆ ಸೆನ್ಸಾರ್‌ ಉಪಕರಣವನ್ನು ಅಳವಡಿಸಲಾಗಿರುತ್ತದೆ. ಹಸು ನೀಡುವ ಹಾಲಿನ ಪ್ರಮಾಣ, ಹಸುವಿಗೆ ಅಂಟಿಕೊಂಡಿರುವ ರೋಗಗಳು, ಇತ್ಯಾದಿ ಮಾಹಿತಿಯನ್ನು ಈ ಸೆನ್ಸಾರ್‌ಗಳೇ ಒದಗಿಸುತ್ತವೆ. ಹಸುಗಳಿಗೆ ಬೇಕಾದ ಆಹಾರವನ್ನು ಒದಗಿಸುವುದರಲ್ಲೂ ಕೂಡ ಈ ಕಿಬೂತ್‌ಗಳು ಸ್ವಾವಲಂಭಿಗಳು. ಗೋಧಿ, ಶೇಂಗಾ ಹೊಟ್ಟುಗಳನ್ನು ಸಂಸ್ಕರಿಸಿ ಕಿಬೂತ್‌ ಸದಸ್ಯರೇ ಮೇವು ಸಿದ್ಧಪಡಿಸುತ್ತಾರೆ.

ಪ್ರತಿ ದಿನಕ್ಕೆ ಮೂರು ಬಾರಿ ಹಾಲು ಕರೆಯುವ ಹಸುಗಳು 40ರಿಂದ 60 ಲೀಟರ್ ಹಾಲು ನೀಡುತ್ತವೆ. ಹಾಲು ಕರೆಯುವ ಕೆಲಸ ಕೂಡ ಯಂತ್ರಗಳದ್ದೇ. ಇಷ್ಟು ಹಸುಗಳ ಜವಾಬ್ದಾರಿಯನ್ನು ಹೊರುವುದು ಕೇಲವ 8ರಿಂದ 10 ಜನರಷ್ಟೇ. ಮನುಷ್ಯರು ಕಂಪ್ಯೂಟರ್‌ಗಳನ್ನು ನಿಯಂತ್ರಿಸುತ್ತಾರೆ. ಕಂಪ್ಯೂಟರ್‌ಗಳು ಯಂತ್ರಗಳನ್ನು ನಿಯಂತ್ರಿಸುತ್ತವೆ. ಯಂತ್ರಗಳು ನಮ್ಮ ದೇಶದ ಕೊಟ್ಟಿಗೆಗಳಲ್ಲಿ ಮನುಷ್ಯರು ಮಾಡುವ ಎಲ್ಲಾ ಕೆಲಸವನ್ನು ಮಾಡುತ್ತವೆ.

ಹಸುಗಳ ಕೆಚ್ಚಲಿಗೆ ಅಳವಡಿಸಿದ ಯಂತ್ರ ತಾನೇ ಹಾಲು ಕರೆಯುತ್ತದೆ. ಕರೆದ ಹಾಲು ಪೈಪ್‌ಗಳ ಮೂಲಕ ನೇರವಾಗಿ ಶೀಥಲೀಕರಣ ಘಟಕವನ್ನು ತಲುಪುತ್ತದೆ. ಅಲ್ಲಿಂದ ಟ್ಯಾಂಕರ್‌ಗಳ ಒಡಲು ಸೇರುತ್ತದೆ. ಎಲ್ಲಿಯೂ ಕೂಡ ಮನುಷ್ಯರು ಹಾಲನ್ನು ಮುಟ್ಟುವುದೇ ಇಲ್ಲ. ಅದಕ್ಕಾಗಿಯೇ ಇಸ್ರೇಲ್‌ನ ಹಾಲಿನ ಗುಣಮಟ್ಟ ಉತ್ತಮವಾಗಿದೆ ಎನ್ನಲಾಗುತ್ತದೆ.

ಹಾಲು ಕರೆಯುವ ಯಂತ್ರ.
ಹಾಲು ಕರೆಯುವ ಯಂತ್ರ.

ಮಂಡ್ಯದಲ್ಲಿ ಇಸ್ರೇಲ್‌ ಮಾದರಿಯ ಕೃಷಿ:

ಇಷ್ಟೆಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಇಸ್ರೇಲ್‌ನ ಕೃಷಿ ಮಾದರಿಯನ್ನು ಕರ್ನಾಟಕದಲ್ಲೂ ಕೂಡ ಸಾಧ್ಯವಾಗಿಸುವ ಪ್ರಯತ್ನಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಮಂಡ್ಯದಲ್ಲಿ ಈ ಕುರಿತಾದ ಪೈಲೆಟ್‌ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.

ತಮ್ಮ ಬಹುದಿನಗಳ ಕನಸಾದ ಈ ಮಾದರಿಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಮಂಡ್ಯದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರಂ ಭೂಮಿಯನ್ನು ಬಳಸಲಾಗುತ್ತಿದೆ. ಸುಮಾರು 650 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದೆ. ದೇಶದ ಪ್ರಮುಖ ಕೃಷಿ ಸಂಶೋಧನಾ ಕ್ಷೇತ್ರಗಳಲ್ಲಿ ಒಂದಾಗಿರುವ ವಿ.ಸಿ.ಫಾರಂ ಈ ಪ್ರಾಯೋಗಿಕ ಪರೀಕ್ಷೆಗೆ ಸೂಕ್ತ ಸ್ಥಳ ಎಂದು ಎಚ್‌ಡಿಕೆ ನಿರ್ಧರಿಸಿದ್ದಾರೆ. ನೀರಿನ ಅವಶ್ಯಕತೆ ಬಿದ್ದಲ್ಲಿ, ಕೆಆರ್‌ಎಸ್‌ನಿಂದ ಸುಲಭವಾಗಿ ನೀರು ತರಬಹುದು ಎಂಬ ಯೋಚನೆಯೂ ಇದರ ಹಿಂದೆ ಇದೆ ಎನ್ನಲಾಗುತ್ತಿದೆ.

ಮಂಡ್ಯದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರಂ.
ಮಂಡ್ಯದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರಂ.

ಇಸ್ರೇಲ್‌ ಕೃಷಿ ಮಾದರಿಯ ಬಗ್ಗೆ ಕೇಳಿದೊಡನೇ ಮೈ ಜುಮ್ಮೆನ್ನಿಸಬಹುದು. ಇಂತಹದ್ದೊಂದು ಪದ್ಧತಿಯನ್ನು ಭಾರತಕ್ಕೂ ತರಬೇಕು ಎಂಬ ಆಸೆ ಚಿಗುರೊಡಯಬಹುದು. ಆದರೆ ಜತೆಗೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತಾದರೂ ಕೂಡ ಕಷ್ಟ. ಈ ಯೋಜನೆ ಸರಕಾರಕ್ಕಷ್ಟೇ ಅಲ್ಲದೇ ಸಾಮಾನ್ಯ ಜನರಿಗೂ ಹತ್ತಿರವಾಗಬಲ್ಲದೇ ಎಂದು ಕೂಡ ಚಿಂತಿಸಬೇಕಿದೆ.

ಇಸ್ರೇಲ್‌ನಷ್ಟು ಚಿಕ್ಕ ದೇಶದ ಕೈಲಿ ಸಾಧ್ಯವಾದದ್ದು ಭಾರತದಂತಹ ದೊಡ್ಡ ದೇಶಕ್ಕೆ ಸಾಧ್ಯವಾಗುವುದಿಲ್ಲವೇ ಎಂಬ ಪ್ರಶ್ನೆಯೂ ಕೂಡ ಮೂಡಬಹುದು. ಜತೆಗೆ ಇಸ್ರೇಲ್‌ ಚಿಕ್ಕ ದೇಶವಾದ ಕಾರಣದಿಂದಾಗಿಯೇ ಅಷ್ಟು ವೇಗವಾಗಿ ಮುಂದುವರೆಯಲು ಸಾಧ್ಯವಾಗಿದ್ದು ಎನ್ನುವ ಪ್ರಜ್ಞೆಯೂ ನಮ್ಮೊಳಗೆ ಇರಬೇಕಾಗುತ್ತದೆ. ಇದೆಲ್ಲದ್ದಕ್ಕೂ ಮುಂಚೆ, ಭಾರತದಲ್ಲಿ ಹಸಿರು ಕ್ರಾಂತಿಯಾಗಿ ರೈತ ಆಧುನಿಕತೆಯತ್ತ ಓಡಲು ಆರಂಭಿಸಿದ ನಂತರದ ದಿನಗಳಲ್ಲೇ ರೈತ ಸಮುದಾಯ ಎಂದೂ ಕಂಡರಿಯದ ನಷ್ಟಕ್ಕೆ ಒಳಗಾಗಿದ್ದು ಎನ್ನುವ ಅರಿವೂ ಕೂಡ ನಮ್ಮೊಳಗೆ ಜಾಗೃತವಾಗಿರಬೇಕಿದೆ.