samachara
www.samachara.com
ಕರ್ನಾಟಕದಲ್ಲಿ ‘ಹಿಂದೂ ಭಯೋತ್ಪಾದನೆ’: ಗೌರಿ ಹತ್ಯೆ ತನಿಖೆ ಮುಂದಿಟ್ಟ ಸಾಧ್ಯತೆಗಳ ಸುತ್ತ...
COVER STORY

ಕರ್ನಾಟಕದಲ್ಲಿ ‘ಹಿಂದೂ ಭಯೋತ್ಪಾದನೆ’: ಗೌರಿ ಹತ್ಯೆ ತನಿಖೆ ಮುಂದಿಟ್ಟ ಸಾಧ್ಯತೆಗಳ ಸುತ್ತ...

‘ವಿಶೇಷ ತನಿಖಾ ತಂಡ’ ಹೊರಹಾಕುತ್ತಿರುವ ಮಾಹಿತಿ, ಶ್ರೀರಾಮ ಸೇನೆ ಬುಡಕ್ಕೆ ಬಂದು ನಿಂತ ತನಿಖೆ, ಉತ್ತರ ಕರ್ನಾಟಕದಲ್ಲಿ ಹಿಂದೂ ಧರ್ಮ ಜಾಗೃತಿ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಅನುಮಾನಕ್ಕೆ ಕಾರಣವಾಗಿವೆ.

ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಕರ್ನಾಟಕದಲ್ಲಿ ಧರ್ಮ ರಕ್ಷಣೆ ಸೋಗಿನ ‘ಹಿಂದೂ ಭಯೋತ್ಪಾದನೆ’ಯ ಜಾಡು ಇರುವ ಸಾಧ್ಯತೆಯನ್ನು ಮುಂದಿಟ್ಟಿದೆ.

ಕಳೆದ ನಾಲ್ಕಾರು ದಿನಗಳ ಅಂತರದಲ್ಲಿ ‘ವಿಶೇಷ ತನಿಖಾ ತಂಡ’ ಹೊರಹಾಕುತ್ತಿರುವ ಮಾಹಿತಿ, ಶ್ರೀರಾಮ ಸೇನೆ ಬುಡಕ್ಕೆ ಬಂದು ನಿಂತ ತನಿಖೆ, ಉತ್ತರ ಕರ್ನಾಟಕದಲ್ಲಿ ಹಿಂದೂ ಧರ್ಮ ಜಾಗೃತಿ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಹೀಗೊಂದು ಅನುಮಾನಕ್ಕೆ ಕಾರಣವಾಗಿವೆ.

ಸೆ. 5, 2017ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಗೌರಿ ಲಂಕೇಶ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆಯೇ ಗುಂಡೇಟಿಗೆ ಬಲಿಯಾಗಿದ್ದರು. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಪ್ರಕರಣದ ತನಿಖೆಗೆ ಮಾರನೇ ದಿನವೇ ಅಂದಿನ ಸಿಎಂ ಸಿದ್ದರಾಮಯ್ಯ ಸರಕಾರ ‘ವಿಶೇಷ ತನಿಖಾ ತಂಡ’ವನ್ನು ರಚಿಸಿ, ಆದೇಶ ಹೊರಡಿಸಿತ್ತು.

ಅಲ್ಲಿಂದ ಮುಂದೆ, ಸುಮಾರು 9 ತಿಂಗಳುಗಳ ಕಾಲ ತನಿಖೆ ಮುಂದುವರಿಸಿದ ಎಸ್‌ಐಟಿ, ಸದ್ಯ ಸಿಂದಗಿಯ ಪರಶುರಾಮ ವಾಘ್ಮೋರೆ ಎಂಬ ಯುವಕನೇ ಹಂತಕ ಎಂದು ಮಾಧ್ಯಮಗಳ ಮೂಲಕ ಆರೋಪ ಹೊರಿಸಿದೆ. ಈತನ ಜತೆಗೆ ಹತ್ಯೆಗೆ ಸಂಚು ರೂಪಿಸಿದ ಹಾಗೂ ನೆರವು ನೀಡಿದ ಆರೋಪದ ಮೇಲೆ ಹಿಂದುತ್ವ ಹಿನ್ನೆಲೆಯ ಒಂದಷ್ಟು ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಇಬ್ಬರ ಮೇಲೆ ಮೊದಲ ಹಂತದ ದೋಷಾರೋಪ ಪಟ್ಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಯಾರೀ ಪರಶುರಾಮ?:

ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಜತೆ ಗೌರಿ ಹತ್ಯೆ ಆರೋಪಿ ಪರಶುರಾಮ ವಾಘ್ಮೋರೆ. 
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಜತೆ ಗೌರಿ ಹತ್ಯೆ ಆರೋಪಿ ಪರಶುರಾಮ ವಾಘ್ಮೋರೆ. 

ಈ ಹಂತದಲ್ಲಿ ಎಸ್‌ಐಟಿ ನೀಡುತ್ತಿರುವ ಮಾಹಿತಿಯನ್ನು ನಂಬುವುದೇ ಆದರೆ, ಸಿಂದಗಿ ಮೂಲದ ಪರಶುರಾಮ ವಾಘ್ಮೋರೆ ಗೌರಿ ಲಂಕೇಶ್‌ಗೆ ಎರಡು ಅಡಿ ದೂರದಿಂದ ಮೂರು ಗುಂಡು ಹಾರಿಸಿದ್ದಾನೆ. ನಾಲ್ಕನೇ ಗುಂಡು ತಪ್ಪಿ ಗೋಡೆಗೆ ಬಿದ್ದಿದೆ. ಅಂದು ಹತ್ಯೆ ವೇಳೆ ಹಂತಕ ಹೆಲ್ಮೆಟ್‌ ಧರಿಸಿದ್ದ ಎಂದು ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿ ಹೇಳಿದ್ದವು. ಹೀಗಿದ್ದೂ, ವಿದ್ಯಾರ್ಥಿಯೊಬ್ಬ ಪರಶುರಾಮನನ್ನು ಗುರುತಿಸಿದ್ದಾನೆ. ಗುಂಡು ಹಾರಿಸುವ ಮುನ್ನ ರಾಜರಾಜೇಶ್ವರ ನಗರಕ್ಕೆ ಪರಶುರಾಮನನ್ನು ಕರೆದುಕೊಂಡು ಬಂದಾತ, ಹತ್ಯೆ ಬಳಿಕ ಪಿಸ್ತೂಲು ತೆಗೆದುಕೊಂಡು ಹೋಗಿದ್ದಾನೆ. ಆದರೆ ಆತನ ಕುರಿತು ಮಾಹಿತಿ ಇಲ್ಲ.

ಇದಿಷ್ಟು ಎಸ್‌ಐಟಿ ತನಿಖೆ ವೇಳೆ ಕಂಡುಕೊಂಡಿದೆ ಎನ್ನಲಾದ ಮಾಹಿತಿ. ಇಷ್ಟಕ್ಕೂ ಯಾರು ಈ ಪರಶುರಾಮ? “ಪರಶು ಆರ್‌ಎಸ್‌ಎಸ್‌ ಶಾಖೆಗಳಿಗೆ ಆಗಾಗ ಬರುತ್ತಿದ್ದರು. ಅವರ ತಮ್ಮ ನನಗಿಂತ ಒಂದು ವರ್ಷಕ್ಕೆ ದೊಡ್ಡವನು. ನಾವು ಸ್ನೇಹಿತರು. ಚಿಕ್ಕ ವಯಸ್ಸಿನಲ್ಲಿಯೇ ಶಾಖೆಯ ಮೂಲಕ ಹಿಂದುತ್ವ ರಕ್ಷಣೆ ಕಡೆಗೆ ನಮ್ಮ ಒಲವು ಬೆಳೆಯಿತು. ನಂತರ ಹಿಂದೂ ಜಾಗರಣಾ ವೇದಿಕೆ ಮೂಲಕ ಧರ್ಮ ಜಾಗೃತಿ ಕೆಲಸ ಮಾಡುತ್ತಿದ್ದೆವು. ನಂತರ ಸ್ಥಳೀಯ ಹಿಂಜಾವೇ ನಾಯಕ ನಡುವೆ ಭಿನ್ನಭಿಪ್ರಾಯ ಬಂದು ನಾವು ಶ್ರೀರಾಮ ಸೇನೆ ಸೇರಿಕೊಂಡೆವು. ಸಿಂದಗಿಯಲ್ಲಿ ಅವರು ಬೇರೆ, ಇವರು ಬೇರೆ ಅಂತಿಲ್ಲ. ಯಾರೇ ಹಿಂದು ಧರ್ಮಕ್ಕಾಗಿ ಹೋರಾಟ ಮಾಡಿದರೂ, ನಾವೆಲ್ಲಾ ಒಟ್ಟಿಗೆ ಸೇರುತ್ತಿದ್ದೆವು. ಆಗಾಗೆ ಪರಶು ಕೂಡ ಬರುತ್ತಿದ್ದರು. ಅದು ಬಿಟ್ಟರೆ ನಿತ್ಯ ಒಡನಾಟ ಇರಲಿಲ್ಲ,’’ ಎನ್ನುತ್ತಾರೆ ಶ್ರೀರಾಮ ಸೇನೆಯ ವಿಜಯಪುರ ಘಟಕದ ಸಂಚಾಲಕ ರಾಕೇಶ್‌ ಮಠ.

ರಾಕೇಶ್ ಹೇಳುವ ಪ್ರಕಾರ, ಪರಶು ಅಲ್ಲಿನ ಹಿಂದುತ್ವದ ವೃತ್ತದೊಳಗೆ ಆಗಾಗ್ಗೆ ಬಂದು ಹೋಗುವ ಕಾರ್ಯಕರ್ತ. ಆದರೆ ಆತ ನಿತ್ಯ ಏನು ಮಾಡುತ್ತಿದ್ದ, ಯಾರ ಜತೆಗೆ ಸಂಪರ್ಕದಲ್ಲಿದ್ದ ಎಂಬುದರ ಮಾಹಿತಿ ಇವರಿಗೆ ಇಲ್ಲ.

ಸಿಂದಗಿಗೆ ಬರುವ ಮುನ್ನ ಪರಶುರಾಮನ ಕುಟುಂಬ ರಾಯಚೂರಿನ ಮಾನ್ವಿಯಲ್ಲಿತ್ತು. ಅಲ್ಲಿಂದ ಕೆಲವು ವರ್ಷಗಳ ಹಿಂದೆ ಸಿಂದಗಿಗೆ ಬಂದು ವ್ಯಾಪಾರ ಶುರುಮಾಡಿತ್ತು. ಮರಾಠಿ ಮೂಲದ ಗೊಂದಳಿ ಸಮಾಜದ ಹಿನ್ನೆಲೆಯ ಕುಟುಂಬ ಇದು.

“ಪರಶುರಾಮನ ಹಿನ್ನೆಲೆಯ ಕುರಿತು ಮಾಹಿತಿ ಕಲೆ ಹಾಕಿದ್ದೆವು. 2012ರ ಜನವರಿಯಲ್ಲಿ ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದ ಆರೋಪಿಯಾಗಿದ್ದಾತ. ಅದು ಬಿಟ್ಟರೆ ಆತ ಇತರೆ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ಇರಲಿಲ್ಲ,’’ ಎನ್ನುತ್ತಾರೆ ವಿಜಯಪುರದ ಎಸ್‌ಪಿ ನಿಕ್ಕಂ ಪ್ರಕಾಶ್ ಅಮ್ರಿತ್. 'ಸಮಾಚಾರ’ದ ಜತೆ ಮಾತನಾಡಿದ ಅವರು, “ಪರಶುರಾಮ ವಾಘ್ಮೋರೆ ಜಿಲ್ಲಾ ಪೊಲೀಸ್‌ ಕಡತಗಳಲ್ಲಿ ‘ಕಮ್ಯುನಲ್ ರೌಡಿ ಶೀಟರ್’ ಆಗಿದ್ದಾನೆ,’’ ಎಂದು ಮಾಹಿತಿ ನೀಡಿದರು.

ಹಿಂದೂ ಧರ್ಮ ರಕ್ಷಣೆ:

ಹಿಂದೂ ಧರ್ಮ ರಕ್ಷಣೆಯ ಅಭಿವ್ಯಕ್ತಿಗಳು. 
ಹಿಂದೂ ಧರ್ಮ ರಕ್ಷಣೆಯ ಅಭಿವ್ಯಕ್ತಿಗಳು. 

ಕರ್ನಾಟಕದಲ್ಲಿ ಹಿಂದೂ ಧರ್ಮ ಜಾಗೃತಿಗಾಗಿ ಸಂಘಪರಿವಾರದ ಅಡಿಯಲ್ಲಿ ನೇರವಾಗಿ ಬರುವ ಒಟ್ಟು 48 ಸಂಘಟನೆಗಳಿವೆ. ಇದರ ಜತೆಗೆ ಶ್ರೀರಾಮ ಸೇನೆಯಂತಹ ಭಿನ್ನಮತೀಯರದ್ದು ಪ್ರತ್ಯೇಕ ಸಂಘಟನೆಗಳಿವೆ. “ಸಂಘಪರಿವಾರಕ್ಕೂ ಶ್ರೀರಾಮ ಸೇನೆಗೂ ನೇರ ಸಂಬಂಧ ಇಲ್ಲ. ಆದರೆ ಅವರೂ ಕೂಡ ಹಿಂದೂ ಧರ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಿರುವವರು. ನಮ್ಮಲ್ಲಿ (ಸಂಘಪರಿವಾರ) ಧರ್ಮ ರಕ್ಷಣೆಯ ಪಾಠಗಳನ್ನು ಹೇಳಲಾಗುತ್ತದೆ. ಹೆಚ್ಚೆಂದರೆ ಲಾಠಿಗಳನ್ನು ನೀಡಲಾಗುತ್ತದೆ. ಬಂದೂಕು, ಬಾಂಬ್‌ ಎಲ್ಲಾ ಇರುವುದಿಲ್ಲ. ಆದರೆ ಶ್ರೀರಾಮ ಸೇನೆಯ ಕತೆ ಗೊತ್ತಿಲ್ಲ. ಅಲ್ಲಿಯೂ ಕೆಲವರು ಧರ್ಮ ರಕ್ಷಣೆಗೆ ಬಂದೂಕು ಅನಿವಾರ್ಯ ಅಂತ ಭಾವಿಸಿದ್ದರೂ ಅಚ್ಚರಿ ಏನಿಲ್ಲ,’’ ಎನ್ನುತ್ತಾರೆ ಚಿಕ್ಕಮಗಳೂರು ಮೂಲದ ಭಜರಂಗದಳದ ಸ್ಥಳೀಯ ನಾಯಕರೊಬ್ಬರು.

ಪರಶುರಾಮನ ಕುರಿತು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ ಎನ್ನುತ್ತಲೇ ‘ಸಮಾಚಾರ’ದ ಜತೆ ಅಭಿಪ್ರಾಯ ಹಂಚಿಕೊಂಡ ಇವರು, “ಶ್ರೀರಾಮ ಸೇನೆ ಮೊದಲಿನಷ್ಟು ಸದೃಢವಾಗಿಲ್ಲ. ಪ್ರಮೋದ್‌ಜಿ (ಪ್ರಮೋದ್ ಮುತಾಲಿಕ್) ಹಿಂದೆ ಇರುವಷ್ಟು ಕ್ರೀಯಾಶೀಲರಾಗಿಲ್ಲ. ಅವರ ಹತೋಟಿ ಮೀರಿ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಆಲೋಚನೆ ಮಾಡಿದ್ದರೂ ಮಾಡಿರಬಹುದು. ಅಥವಾ ಎಸ್‌ಐಟಿಯೇ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್ ನೀಡಿ ಹೇಳಿಕೆ ತೆಗೆದುಕೊಂಡಿರಬಹುದು,’’ ಎಂದರು.

ಸದ್ಯ, ಎಸ್‌ಐಟಿ ಮಾಡುತ್ತಿರುವ ಆರೋಪಗಳಿಗೆ ನ್ಯಾಯಾಲಯದಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಿದೆ. ಅದು ಸುದೀರ್ಘ ಪ್ರಕ್ರಿಯೆ. ಆದರೆ, ಹಿಂದೂ ಧರ್ಮದ ರಕ್ಷಣೆಗಾಗಿ ಕೆಲವರು ಸಂಘಟನೆಗಳ ಚೌಕಟ್ಟುಗಳನ್ನು ಮೀರಿ ‘ಒಂದು ಹೆಜ್ಜೆ ಮುಂದೆ ಹೋಗಿರುವ’ ಸಾಧ್ಯತೆಗಳನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

ಭಯೋತ್ಪಾದನೆಗೆ ಇಳಿದರೇ?:

ಧರ್ಮ ರಕ್ಷಣೆಗೆ ಆಯುಧ ಬಳಕೆ ಹೊಸತೇನೂ ಅಲ್ಲ. 
ಧರ್ಮ ರಕ್ಷಣೆಗೆ ಆಯುಧ ಬಳಕೆ ಹೊಸತೇನೂ ಅಲ್ಲ. 

ಸದ್ಯ ಲಭ್ಯ ಇರುವ ಮಾಹಿತಿ ಎದುರಿಗೆ ಇಟ್ಟುಕೊಂಡು ನೋಡಿದರೆ ಹಿಂದೂ ಧರ್ಮ ರಕ್ಷಣೆಗೆ ನಿಂತವರಲ್ಲಿ ಕೆಲವರು ‘ಭಯೋತ್ಪಾದನೆ’ ಇಳಿದರಾ ಎಂಬ ಅನುಮಾನ ಕಾಡುತ್ತದೆ. ಧರ್ಮದ ಅವಹೇಳನದ ವಿರುದ್ಧ ಹತ್ಯೆ ಮಾಡಿಯಾದರೂ ಸರಿ, ಭಯವನ್ನು ಸೃಷ್ಟಿಸುವ ಮಾರ್ಗವನ್ನು ಅವರು ತುಳಿದ ಸಾಧ್ಯತೆಗಳಿವೆ. ಪನ್ಸಾರೆ, ಧಾಬೋಲ್ಕರ್ ಸೇರಿದಂತೆ ರಾಜ್ಯದಲ್ಲಿ ನಡೆದ ಕಲ್ಬುರ್ಗಿ ಹಾಗೂ ಗೌರಿ ಹತ್ಯೆಗಳ ನಡುವೆ ಮೇಲ್ನೋಟಕ್ಕೆ ಸಾಮ್ಯತೆಯೊಂದು ಕಂಡು ಬರುತ್ತದೆ. ಇದು ಒಬ್ಬ ವ್ಯಕ್ತಿ ಅಥವಾ ವೈಯಕ್ತಿಕ ಸಂಪರ್ಕಗಳಿಂದ ಮಾಡಿದ ಹತ್ಯೆಗಳಾಗಿ ಕಾಣಿಸುತ್ತಿಲ್ಲ. ಬದಲಿಗೆ, ಇದರ ಹಿಂದೆ ವ್ಯವಸ್ಥಿತ ಜಾಲವೊಂದು ಕೆಲಸ ಮಾಡಿದೆ.

“ಗೌರಿ ಹತ್ಯೆ ತನಿಖೆಯನ್ನು ಗಮನಿಸಿದರೆ ವ್ಯವಸ್ಥಿತ ಸಂಘಟನೆಯೊಂದು ಇದರ ಹಿಂದೆ ಕೆಲಸ ಮಾಡಿದೆ ಅನ್ನಿಸುತ್ತದೆ. ಹತ್ಯೆ ಆರೋಪ ಹೊತ್ತಿರುವ ಪರಶುರಾಮನಿಗೆ ತನ್ನನ್ನು ಘಟನಾ ಸ್ಥಳಕ್ಕೆ ಕರೆತಂದಾತ ಗೊತ್ತಿಲ್ಲ. ಆತನನ್ನು ಗುಂಡಿಕ್ಕಲು ಆಯ್ಕೆ ಮಾಡಿಕೊಂಡವರು ಯಾರು, ಅವರ ಹಿನ್ನೆಲೆ ಏನು ಎಂಬುದು ಇನ್ನೂ ಗೊತ್ತಾಗಬೇಕಿದೆ. ಅದರ ಅರ್ಥ ಇಷ್ಟೆ, ಇಂತಹ ಹತ್ಯೆಗಳಿಗೂ ಮುನ್ನ ನಾನಾ ಪದರಗಳಲ್ಲಿ ಯೋಜನೆ ರೂಪುಗೊಂಡಿದೆ. ಕೆಳಹಂತದಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಕರ್ನಾಟಕ ಮೂಲದ ಅಥವಾ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಇಂತಹದೊಂದು ಆಲೋಚನೆಯ ಜಾಲವೊಂದು ಸಕ್ರಿಯವಾಗಿರುವ ಸಾಧ್ಯತೆಯನ್ನು ಈವರೆಗಿನ ಎಸ್‌ಐಟಿ ತನಿಖೆ ಮುಂದೆ ಮಾಡುತ್ತಿದೆ,’’ ಎನ್ನುತ್ತಾರೆ ಡಿವೈಎಸ್ಪಿ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರು.

ಹಿಂದೆ ಕಲ್ಬುರ್ಗಿ ಹತ್ಯೆ ನಡೆದಾಗ ‘ಟೈಗರ್ ಗ್ಯಾಂಗ್’ ಹೆಸರು ತೇಲಿ ಬಂದಿತ್ತು. ಅದು ಶ್ರೀರಾಮಸೇನೆಯಿಂದ ಹೊರಬಿದ್ದ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದವರಾಗಿತ್ತು. ಆ ಜಾಡಿನಲ್ಲಿ ಅಂದು ಸಿಐಡಿ ತನಿಖೆ ಸಾಗಿತ್ತಾದರೂ ತಾರ್ಕಿಕ ಅಂತ್ಯ ಕಂಡಿರಲಿಲ್ಲ.

ಇದೀಗ, ಗೌರಿ ಹತ್ಯೆ ಬೆನ್ನತ್ತಿದ ಎಸ್‌ಐಟಿ ಹೆಚ್ಚು ಕಡಿಮೆ ಅದೇ ಹಾದಿಗೆ ಹೊರಳಿಕೊಂಡಿದೆ. ಆದರೆ ಈವರೆಗೆ ವಿಚಾರವಾದಿಗಳ ಹತ್ಯೆ ಹಿಂದಿನ ‘ಬ್ರೈನ್’ ಸಿಕ್ಕಿಲ್ಲ. ಬದಲಿಗೆ, ತಳಹಂತದಲ್ಲಿ ಹತ್ಯೆ ಆಲೋಚನೆಯನ್ನು ಕಾರ್ಯಗತಗೊಳಿಸಿದ ಆರೋಪಿಗಳು ಮಾತ್ರವೇ ಸಿಕ್ಕಿದ್ದಾರೆ.

ಅಂದರೆ, ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಇರಾದೆ ಹೊಂದಿರುವ ಒಂದು ತಂಡ ಅಥವಾ ಜಾಲ ಅಥವಾ ಸಂಘಟನೆಯ ಮುಖ್ಯ ಕೊಂಡಿ ಬೆಳಕಿಗೆ ಬರಬೇಕಿದೆ. ಒಂದು ವೇಳೆ, ಎಸ್‌ಐಟಿ ಈ ನಿಟ್ಟಿನಲ್ಲಿ ಸಾಗಿದ್ದೇ ಆದರೆ, ಕರ್ನಾಟಕದಲ್ಲೂ ‘ಭಯೋತ್ಪಾದನೆ’ ಮೂಲಕವೇ ಹಿಂದೂ ಧರ್ಮ ಉಳಿಸುವ ದುಸ್ಸಾಹಸಕ್ಕೆ ಇಳಿದವರನ್ನು ಕಾನೂನಿನ ಅಡಿಗೆ ತರುವ ದೂರದ ವಿಶ್ವಾಸವೊಂದು ಪೊಲೀಸ್ ಇಲಾಖೆಯಲ್ಲಿ ಮೂಡಿದೆ.