samachara
www.samachara.com
ಧರ್ಮಸ್ಥಳದ ‘ಮೀಟರ್ ಬಡ್ಡಿ’ ಸಾಲ ಮನ್ನಾ: ಸಮ್ಮಿಶ್ರ ಸರಕಾರದಿಂದ ಹೇಗೆ ಸಾಧ್ಯ? 
COVER STORY

ಧರ್ಮಸ್ಥಳದ ‘ಮೀಟರ್ ಬಡ್ಡಿ’ ಸಾಲ ಮನ್ನಾ: ಸಮ್ಮಿಶ್ರ ಸರಕಾರದಿಂದ ಹೇಗೆ ಸಾಧ್ಯ? 

ಧರ್ಮಸ್ಥಳ ಸಂಘಗಳ ಸಂಪೂರ್ಣ ಸಾಲಮನ್ನಾ ಅಸಾಧ್ಯವಾದರೆ, ಕನಿಷ್ಟ ವಸೂಲಿ ಮಾಡುತ್ತಿರುವ ‘ಮೀಟರ್ ಬಡ್ಡಿ’ಯಾದರೂ ವಜಾ ಆಗಬೇಕಿದೆ. ಈ ನಿಟ್ಟಿನಲ್ಲಿ ಹೀಗೊಂದು ಚಿಂತನೆ...

samachara

samachara

"ರೈತರ ಸಾಲ ಮನ್ನಾ ಮಾಡಿ. ಅದರ ಜೊತೆಗೆ ಧರ್ಮಸ್ಥಳ ಸಂಘದ ಸಾಲ ಇದೆಯಲ್ಲಾ ಅದನ್ನೂ ಮನ್ನಾ ಮಾಡಿ ಮಾರಾಯ್ರೆ. ಧರ್ಮಸ್ಥಳ ಸಂಘದ ಸಾಲ ಮನ್ನಾ ಮಾಡಿದ್ರೆ ಬರುವ ವರ್ಷ ನೀವು ಎಲ್ಲೂ ಓಟು ಕೇಳಲಿಕ್ಕೆ ಹೋಗುವುದು ಬೇಡ. ಹೆಂಗಸ್ರು ಬಂದು ನಿಮ್ಮ ಗುರುತಿಗೆ ಒತ್ತುತ್ತಾರೆ. ಈಗಿನ ಕಾಲದಾಗೆ ಸುಲಭದಲ್ಲಿ ಸಾಲ ಸಿಕ್ಕಿವುದು ಅಂದ್ರೆ ಧರ್ಮಸ್ಥಳ ಸಂಘದಾಗೆ. ಪಾಪ ಅದ್ರಲ್ಲಿ ಸಾಲ ಮಾಡ್ಕೊಂಡು, ಮನೆ ಕಟ್ಟಿ, ಬಾವಿ ತೋಡಿ, ಮದುವೆ ಎಲ್ಲಾ ಮಾಡಿರ್ತಾರೆ. ಎಷ್ಟೆಷ್ಟು ಕಷ್ಟ ಪಡ್ತಾರೆ ಗೊತ್ತಾ? ಒಂದು ವಾರ ತಪ್ಪಿಸಲಿಕ್ಕಿಲ್ಲ. ವಾರ ವಾರ ಕಂತು ಕಟ್ಟಬೇಕು. ಕಂತು ಕಟ್ಟದಿದ್ರೆ ಮನೆ ಬಾಗಿಲಿಗೆ ಬರ್ತಾರೆ. ಅದೆಲ್ಲ ನಮಗೆ ಹೇಸಿಗೆಯಲ್ವಾ? ಅದಕ್ಕೋಸ್ಕರ ಈ ಧರ್ಮಸ್ಥಳ ಸಂಘದ ಸಾಲ ಮನ್ನಾ ಮಾಡಿ ಎಂದು ನಾನು ಹೇಳುವುದು. ಎಷ್ಟೋ ಜನ ಹೆಂಗಸ್ರಿಗೆ ಸಹಾಯ ಆಗ್ತದೆ. ಇಡೀ ಕರ್ನಾಟಕದ ಜನ ಬಳಿ ಧರ್ಮಸ್ಥಳ ಸಂಘದ ಸಾಲ ಇದೆ...”

ಕರ್ನಾಟಕದ ಕರಾವಳಿ ಭಾಗದ ಸ್ಥಳೀಯ ವಾಹಿನಿ 'ಮುಕ್ತ'ದಲ್ಲಿ ಪ್ರಸಾರವಾದ ಹಾಸ್ಯ ಕಾರ್ಯಕ್ರಮವೊಂದರ ನಟನ ಮಾತುಗಳಿವು. ಇದರ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಹಾಗೆ ನೋಡಿದರೆ ಈ ವಿಡಿಯೋದಲ್ಲಿ ಆತನ ಇನ್ನಷ್ಟು ಮಾತುಗಳೂ ಇವೆ. ಆದರೆ ಅದೆಲ್ಲ ಬಿಟ್ಟು ಹೈಲೈಟ್ ಆಗಿದ್ದು ಮಾತ್ರ 'ಧರ್ಮಸ್ಥಳ ಸಂಘದ ಸಾಲ ಮನ್ನಾ'.

ಅದಕ್ಕೆ ಕಾರಣವೂ ಇದೆ. ಇವತ್ತಿಗೆ ಕರ್ನಾಟಕದಾದ್ಯಂತ ಹರಡಿಕೊಂಡಿರುವ ಸ್ವಸಹಾಯ ಸಂಘ ಅಂದರೆ ಅದು 'ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ' ಅಥವಾ ಎಸ್.ಕೆ.ಡಿ.ಆರ್.ಡಿ.ಪಿಯ ಸ್ವ ಸಹಾಯ ಸಂಘಗಳು. ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿನಲ್ಲಿ ಇಲ್ಲಿನ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುವ ಸಂಘಗಳಿವು.

ಎಸ್.ಕೆ.ಡಿ.ಆರ್.ಡಿ.ಪಿ ಅಡಿಯಲ್ಲಿ ಸದ್ಯ ಬರೋಬ್ಬರಿ 4.20 ಲಕ್ಷ ಸ್ವಸಹಾಯ ಸಂಘಗಳಿವೆ. 38.60 ಲಕ್ಷ ಜನರು ಇದರ ಸದಸ್ಯರಾಗಿದ್ದಾರೆ. ಇದರಲ್ಲಿ ಮುಕ್ಕಾಲಿಗೂ ಹೆಚ್ಚು ಪಾಲು ಸಂಘಗಳು ಕಾರ್ಯ ನಿರ್ವಹಿಸುವುದು ಕರ್ನಾಟಕದಲ್ಲಿಯೇ. 38.60 ಲಕ್ಷದಲ್ಲಿ 30 ಲಕ್ಷ ಜನ ಕರ್ನಾಟಕದವರು ಎಂದು ಅಂದಾಜಿಸಬಹುದು. ಇವರೆಲ್ಲಾ ಪ್ರತ್ಯೇಕ ಕುಟುಂಬಕ್ಕೆ ಸೇರಿದವರಾಗಿದ್ದರೆ, ಕರ್ನಾಟಕದಲ್ಲಿರುವ 1.31 ಕೋಟಿ ಕುಟುಂಬಗಳಲ್ಲಿ ಇವುಗಳ ಪಾಲು ಶೇಕಡಾ 23ರಷ್ಟಾಗುತ್ತದೆ. ಇವರಲ್ಲಿ ಅರ್ಧದಷ್ಟು ಜನರು ಮಾತ್ರ ಸಾಲಗಾರರಾಗಿದ್ದಾರೆ ಎಂದುಕೊಂಡರೂ ಶೇ. 10ಕ್ಕಿಂತ ಹೆಚ್ಚು ಜನರು ಧರ್ಮಸ್ಥಳ ಸಂಘದ ಸಾಲಗಾರರಾಗಿದ್ದಾರೆ. ಇಷ್ಟರ ಮಟ್ಟಿಗೆ ಅಗಾಧವಾಗಿದೆ ಈ ಜಾಲ.

ಇಷ್ಟೊಂದು ದೊಡ್ಡ ಜಾಲದಲ್ಲಿ ಕಾರ್ಯ ನಿರ್ವಹಿಸುವ ಧರ್ಮಸ್ಥಳದ ಸ್ವಸಹಾಯ ಸಂಘದ ಸದಸ್ಯರು ವಿವಿಧ ಬ್ಯಾಂಕ್ ಗಳಿಂದ ಸದ್ಯ ಪಡೆದುಕೊಂಡಿರುವ ಸಾಲದ ಮೊತ್ತ ಬರೋಬ್ಬರಿ 8,338 ಕೋಟಿ ರೂಪಾಯಿಗಳು. ಸಿದ್ದರಾಮಯ್ಯ ಸರಕಾರ ಮನ್ನಾ ಮಾಡಿದ ರೈತರ ಸಾಲದ ಮೊತ್ತಕ್ಕೆ ಇದು ಸಮೀಪವಾಗುತ್ತದೆ.

ಇಷ್ಟು ದೊಡ್ಡ ಮೊತ್ತದ ಹಣವನ್ನು (ಹೆಚ್ಚಿನ ಪಾಲು ಕರ್ನಾಟಕದ್ದೇ ಎಂದುಕೊಂಡರೆ) ಜನರು ಯಾಕೆ ಸಾಲವಾಗಿ ಪಡೆದುಕೊಂಡರು? ಕಾರಣಗಳು ಹಲವು. ಈ ಸಂಘಗಳಲ್ಲಿ ಹೆಚ್ಚು ಕಡಿಮೆ ಸದಸ್ಯರಾಗಿರುವವರು ತಳಮಟ್ಟದ ಸಮುದಾಯದ ಜನ. ಇವರು ಮನೆ ರಿಪೇರಿ, ಕೃಷಿ, ಶಿಕ್ಷಣ, ಮದುವೆ, ಬಾವಿ ಅಗೆಯಲು, ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ಇವುಗಳಿಂದ ಸಾಲವನ್ನು ಪಡೆಯುತ್ತಾರೆ. ಕೆಲವು ಕಾರಣಗಳನ್ನು ಹೊರತು ಪಡಿಸಿ ಉಳಿದೆಲ್ಲವೂ ತೀರಾ ಕಷ್ಟಕಾಲ, ಅನಿವಾರ್ಯ ಪರಿಸ್ಥಿತಿಗಳಲ್ಲೇ ಪಡೆದ ಸಾಲಗಳಿವು.

ಸ್ವ ಸಹಾಯ ಸಂಘಗಳ ಸಾಲ ಮನ್ನಾ:

ಧರ್ಮಸ್ಥಳದ ‘ಮೀಟರ್ ಬಡ್ಡಿ’ ಸಾಲ ಮನ್ನಾ: ಸಮ್ಮಿಶ್ರ ಸರಕಾರದಿಂದ ಹೇಗೆ ಸಾಧ್ಯ? 

ಇದೇ ರೀತಿ ಅನಿವಾರ್ಯ ಪರಿಸ್ಥಿತಿಯಲ್ಲಿ ರೈತರು ಬ್ಯಾಂಕ್‌ಗಳಿಂದ ಪಡೆದ ಬೆಳೆ ಸಾಲವನ್ನು ಸರಕಾರಗಳು ಮನ್ನಾ ಮಾಡುತ್ತವೆ. ಕೆಲವೊಮ್ಮೆ ರೈತರು ಬೆಳೆ ಬೆಳೆಯಲು ಇದೇ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿದ್ದೂ ಇದೆ. ಆದರೆ ಅವು ಕೃಷಿ ಕಾರಣಕ್ಕೆ ತೆಗೆದ ಸಾಲಗಳೇ ಆದರೂ ಮನ್ನಾ ಆಗುವುದಿಲ್ಲ. ಇನ್ನೊಂದು ಕಡೆ ಕೃಷಿ ಸಾಲದಾಚೆಗೂ ತುಂಬಾ ಅಗತ್ಯ ಸಂದರ್ಭಗಳಲ್ಲಿ ಈ ಸಾಲಗಳನ್ನು ಪಡೆದಿದ್ದರೂ, ಅವುಗಳಿಗೆ ಮನ್ನಾ ಭಾಗ್ಯ ಸಿಗುವುದಿಲ್ಲ.

"ನನಗೆ ಗೊತ್ತಿರುವ ಪ್ರಕಾರ ಸ್ವಸಹಾಯ ಸಂಘಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿರುವ ಉದಾಹರಣೆ ಎಲ್ಲೂ ಇಲ್ಲ ಎನ್ನುತ್ತಾರೆ,” ಸ್ವಸಹಾಯ ಸಂಘಗಳನ್ನು ನಡೆಸುವ ಎನ್ ಜಿಒ ಒಂದರ ಭಾಗವಾಗಿರುವ ರಂಜನ್ ರಾವ್ ಯರ್ಡೂರು.

ಹೀಗಿದ್ದೂ ಕರ್ನಾಟಕದಲ್ಲಿ ಸರಕಾರಿ ಪ್ರಾಯೋಜಿತ ಸ್ವಸಹಾಯ ಸಂಘ 'ಸ್ತ್ರೀ ಶಕ್ತಿ'ಯ ಸಾಲವನ್ನು ಮನ್ನಾ ಮಾಡುವುದಾಗಿ ಜೆಡಿಎಸ್ ಚುನಾವಣಾ ಪೂರ್ವದಲ್ಲಿ ಘೋಷಿಸಿತ್ತು. ಇವತ್ತು ಜೆಡಿಎಸ್ ಅಧಿಕಾರಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಚರ್ಚೆ ಮುನ್ನೆಲೆಗೆ ಬಂದಿದೆ.

ರಾಜ್ಯ ಕೃಷಿ ಮಾರಾಟ ಮಹಾ ಮಂಡಳಿ ಮಾಜಿ ಸದಸ್ಯೆ ಕುರ್ಕಿ ರಾಜೇಶ್ವರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಅವರು ಖುದ್ದು ಕುಮಾರಸ್ವಾಮಿಯವರಿಗೆ ಸ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಿ ಎಂದು ಮನವಿಯನ್ನೂ ಸಲ್ಲಿಸಿದ್ದಾರೆ. ರಾಜ್ಯದಲ್ಲಿನ ಸ್ತ್ರೀ ಶಕ್ತಿ ಸಂಘಗಳ 1100 ಕೋಟಿ ರೂ. ಸಾಲ ಮನ್ನಾ ಮಾಡಿ ಎಂಬುದು ಅವರ ಮನವಿಯ ತಿರುಳು. ಹಲವು ಕಡೆಗಳಲ್ಲಿ ಸ್ತ್ರೀ ಶಕ್ತಿಗಳ ಸಾಲ ಮನ್ನಾ ಮಾಡುವಂತೆ ಇಂದಿಗೂ ಒತ್ತಾಯಗಳು ಕೇಳಿ ಬರುತ್ತಲೇ ಇವೆ.

ಒಂದೊಮ್ಮೆ ಹೀಗೆ ಸಾಲಮನ್ನಾ ಮಾಡಿದರೂ ಅದರಿಂದ ದೊಡ್ಡ ಮಟ್ಟದ ಲಾಭವಾಗುತ್ತದೆಯೇ? ಉತ್ತರ ಇಲ್ಲ. ಸ್ತ್ರೀ ಶಕ್ತಿಗಿಂತ ಹಲವು ಪಟ್ಟು ದೊಡ್ಡ ಸಾಲಗಳು ಬೇರೆ ಬೇರೆ ಸ್ವಸಹಾಯ ಸಂಘಗಳಲ್ಲಿದೆ. ಅವೆಲ್ಲವೂ ಖಾಸಗಿ ಪ್ರಾಯೋಜಿತ ಸ್ವಸಹಾಯ ಸಂಘಗಳು. ಅದರಲ್ಲಿ ದೊಡ್ಡ ಪಾಲು ಧರ್ಮಸ್ಥಳದ ಸ್ವಸಹಾಯ ಸಂಘಗಳದ್ದು.

ಬಡ್ಡಿ ಆದರೂ ಮನ್ನಾ ಆಗಲಿ:

ಸಾಲ ಮನ್ನಾ ಬಿಟ್ಟು ಬಿಡಿ. 17,500 ಹಳ್ಳಿಗಳನ್ನು ಮತ್ತು ನಗರಗಳಲ್ಲಿ ಹಬ್ಬಿರುವ, “ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಕಳೆದ ಹಲವು ವರ್ಷಗಳಿಂದ ಶೇಕಡಾ 6 ವರೆಗೆ ಹೆಚ್ಚಿನ ಬಡ್ಡಿಗೆ ಧರ್ಮಸ್ಥಳದವರು ಸಾಲಗಳನ್ನು ನೀಡಿದ್ದಾರೆ. ಒಟ್ಟಾರೆ ಶೇಕಡಾ 18ಕ್ಕೆ ಸಾಲ ನೀಡಿದ್ದೇವೆ ಎಂದು ಅವರೇ ಹೇಳುತ್ತಾರೆ (ವೆಬ್‌ಸೈಟ್ ನಲ್ಲಿ ಈ ಮಾಹಿತಿ ಇದೆ). ಕನಿಷ್ಠ ಜನರಿಂದ ಕಿತ್ತುಕೊಂಡ ಈ ಬಡ್ಡಿಯ ಹಣವನ್ನಾದರೂ ವಾಪಸ್ ನೀಡಲಿ," ಎನ್ನುತ್ತಾರೆ ನಾಗರೀಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್.

ಇದೇ ರೀತಿಯ ಬಡ್ಡಿ ಸೇರಿದಂತೆ ಹಲವು ಚಟುವಟಿಕೆಯಿಂದ 2013ನೇ ವರ್ಷದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ 90 ಕೋಟಿವರೆಗೆ ಲಾಭ ತೋರಿಸಿಕೊಂಡಿದೆ. ಇದನ್ನು ಅವರು ತಾವು ಬೇರೆ ಬೇರೆ ದಾನ ಧರ್ಮಕ್ಕೆ ಬಳಸುತ್ತೇವೆ ಎನ್ನುತ್ತಾರೆ. ಅವರೇ ನೀಡಿದ ಪತ್ರಿಕಾ ಹೇಳಿಕೆಗಳು ಇದಕ್ಕೆ ಆಧಾರವಾಗಿವೆ. “ಈ ರೀತಿ ಬಡವರಿಂದ ಬಡ್ಡಿ ವಸೂಲಿ ಮಾಡಿಅವರು ದಾನ ಧರ್ಮ ಮಾಡಬೇಕೇ?,” ಎಂದು ಪ್ರಶ್ನಿಸುತ್ತಾರೆ ನಾಯಕ್.

ಬದಲಾದ ಕಾರ್ಯಸೂಚಿ:

ಧರ್ಮಸ್ಥಳದ ‘ಮೀಟರ್ ಬಡ್ಡಿ’ ಸಾಲ ಮನ್ನಾ: ಸಮ್ಮಿಶ್ರ ಸರಕಾರದಿಂದ ಹೇಗೆ ಸಾಧ್ಯ? 

ಈ ಧರ್ಮಸ್ಥಳ ಸಂಘಗಳೀಗ ತಮ್ಮ ಕಲ್ಪನೆಯನ್ನು ಸ್ವಲ್ಪ ಬದಲಾಯಿಸಿಕೊಂಡು ಬಿಸಿನೆಸ್ ಕರೆಸ್ಪಾಂಡೆನ್ಸ್ ಮಾಡೆಲ್ (ಸಂಘಗಳೇ ಇಲ್ಲಿ ನೇರವಾಗಿ ಬ್ಯಾಂಕ್ ನಿಂದ ಸಾಲ ಪಡೆಯುತ್ತವೆ. ಎನ್ ಜಿಒ ಏನಿದ್ದರೂ ಕೇವಲ ಮರುಪಾವತಿ, ಭದ್ರತೆಗೆ ಮೀಸಲಾಗಿರುತ್ತದೆ. ಇದಕ್ಕಾಗಿ ಅವುಗಳಿಗೆ ಕಮಿಷನ್ ಸಿಗುತ್ತದೆ) ಗೆ ಬಂದಿವೆ.

ಇಲ್ಲಿ ದೇಶದ ಉದ್ಧಾರಕ್ಕೆ ಹುಟ್ಟಿಕೊಂಡ ಸೋ ಕಾಲ್ಡ್ ಸಮಾಜ ಸುಧಾರಕ ಬ್ಯಾಂಕುಗಳು ಈ ಸ್ವಸಹಾಯ ಸಂಘಗಳಿಗೆ ಶೇಕಡಾ 15 ರ ವರೆಗಿನ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಅದರ ಮೇಲೆ "ಸುಮಾರು ಶೇಕಡಾ 5 ರಷ್ಟು ಎಸ್.ಕೆ.ಡಿ.ಆರ್.ಡಿ.ಪಿ ಕಮಿಷನ್ ಪಡೆಯುತ್ತಿರುವಂತೆ ಕಾಣಿಸುತ್ತಿದೆ,” ಎನ್ನುತ್ತಾರೆ ರಂಜನ್ ರಾವ್ ಯರ್ಡೂರು. ಅಲ್ಲಿಗೆ ಬಡ್ಡಿ ದರ ಶೇಕಡಾ 21ನ್ನೂ ಮೀರುತ್ತದೆ.

ಇವತ್ತು ಐಶಾರಾಮಿ ವಸ್ತುಗಳ ಮೇಲೆ ಬ್ಯಾಂಕ್ ಗಳು ಶೇಕಡಾ 8ರ ಬಡ್ಡಿ ದರದಲ್ಲೆಲ್ಲಾ ಸಾಲ ನೀಡುತ್ತವೆ. ಆದರೆ ತಳ ಸಮುದಾಯದ ಸಂಕಷ್ಟದಲ್ಲಿರುವ ಜನರು ಮಾತ್ರ ಶೇಕಡಾ 18-20ರ ಆಸುಪಾಸಿನಲ್ಲಿ 'ಮೀಟರ್ ಬಡ್ಡಿ' ಕಟ್ಟಬೇಕಾಗಿದೆ. ಈ ಎಲ್ಲಾ ಕಾರಣಕ್ಕೆ "ಸದ್ಯ ಪಡೆಯುತ್ತಿರುವ ಕಮಿಷನ್ ಹಣವನ್ನಾದರೂ ಮನ್ನಾ ಮಾಡಲಿ," ಎನ್ನುತ್ತಾರೆ ನಾಯಕ್.

ಸ್ವಸಹಾಯ ಸಂಘಗಳ ಸಾಲವನ್ನು ಮನ್ನಾ ಮಾಡಲು ಅವುಗಳ ಅಗಾಧ ಪ್ರಮಾಣ ರಾಜ್ಯ ಸರಕಾರಕ್ಕೆ ಅಡ್ಡಿಯಾಗಿರಬಹುದು. ಆದರೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ಸಿಗುವಂತಾಗಬೇಕು. ಆ ವ್ಯವಸ್ಥೆಯನ್ನು ಜಾರಿಗೆ ತರುವ ಅವಕಾಶ ರಾಜ್ಯ ಸರಕಾರದ ಮುಂದಿದೆ. ಜೊತೆಗೆ ಕಮಿಷನ್ ರೂಪದಲ್ಲಿ ಸುಲಿಗೆ ಮಾಡುವ ಎನ್‌ಜಿಒಗಳಿಗೆ ಪರ್ಯಾಯವನ್ನು ರಾಜ್ಯ ಸರಕಾರವೇ ಸೃಷ್ಟಿಬೇಕಿದೆ. ಅಥವಾ ಇದಕ್ಕೆ ಬ್ರೇಕ್ ಹಾಕಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿಂತನೆ ನಡೆಸಬೇಕಿದೆ.

ಇನ್ನೊಂದು ಕಡೆ ಧರ್ಮಸ್ಥಳ ಸಂಘಗಳ ಸಂಪೂರ್ಣ ಸಾಲಮನ್ನಾ ಅಸಾಧ್ಯವಾದರೆ, ಕನಿಷ್ಟ ವಸೂಲಿ ಮಾಡುತ್ತಿರುವ 'ಮೀಟರ್ ಬಡ್ಡಿ'ಯಾದರೂ ವಜಾ ಆಗಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಸಮಾಜ ಸುಧಾರಣೆಯ ಮಾತುಗಳನ್ನು ಸಾರ್ವಜನಿಕವಾಗಿ ಆಡುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಆಲೋಚನೆ ಮಾಡಲಿ ಎಂಬುದು ‘ಸಮಾಚಾರ’ದ ಆಶಯ.