samachara
www.samachara.com
‘ಎಸ್‌ಐಟಿ ತನಿಖೆಯ ಮಿಸ್ಸಿಂಗ್ ಲಿಂಕ್ಸ್’: ಗೌರಿ ಹಂತಕರು ಸಿಕ್ಕರು; ಹತ್ಯೆಗೆ ಬಳಸಿದ ಪಿಸ್ತೂಲು ಎಲ್ಲಿ?
COVER STORY

‘ಎಸ್‌ಐಟಿ ತನಿಖೆಯ ಮಿಸ್ಸಿಂಗ್ ಲಿಂಕ್ಸ್’: ಗೌರಿ ಹಂತಕರು ಸಿಕ್ಕರು; ಹತ್ಯೆಗೆ ಬಳಸಿದ ಪಿಸ್ತೂಲು ಎಲ್ಲಿ?

ಯಾವುದೇ ಅಪರಾಧ ಕೃತ್ಯಗಳು ನಡೆದರೂ, ಅದಕ್ಕೆ ಬಳಸಿದ ಮಾರಕಾಸ್ತ್ರಗಳು ಪ್ರಬಲ ಸಾಕ್ಷಿಗಳಾಗಿ ನಿಲ್ಲುತ್ತವೆ. ಗೌರಿ ಹತ್ಯೆ ತನಿಖೆಯಲ್ಲಿ ಈವರೆಗೆ ಏನೇ ಸುದ್ದಿ ಹೊರಬಿದ್ದಿದ್ದರೂ, ಹತ್ಯೆಗೆ ಬಳಸಿದ ಪಿಸ್ತೂಲು ಮಾತ್ರ ಇನ್ನೂ ಸಿಕ್ಕಿಲ್ಲ. 

ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಎಸ್‌ಐಟಿ ಅನಧಿಕೃತವಾಗಿ ಹೇಳಿಕೊಂಡಿದೆ. ಸಿಂಧಗಿ ಮೂಲದ ಪರಶುರಾಮ್ ವಾಘ್ಮೋರೆ ಸೆ. 5ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಯ ಮುಂದೆಯೇ ಗೌರಿಗೆ ಎರಡು ಅಡಿ ದೂರದಿಂದ ಗುಂಡು ಹಾರಿಸಿದಾತ. ಹಾಗಂತ ಎಸ್‌ಐಟಿ ಮೂಲಗಳು ಮಾಧ್ಯಮಗಳಿಗೆ ಹೇಳಿವೆ. ಆದರೆ ಆತ ಬಳಸಿದ ಪಿಸ್ತೂಲಿನ ಕತೆ ಏನಾಗಿದೆ?

ಸಾಮಾನ್ಯವಾಗಿ ಅಪರಾಧ ಪ್ರಕರಣಗಳು ನಡೆದಾಗ ಅದಕ್ಕೆ ಬಳಸಿದ ಮಾರಕಾಸ್ತ್ರಗಳು ಪ್ರಮುಖ ಸಾಕ್ಷಿಗಳಾಗಿ ನಿಲ್ಲುತ್ತವೆ. ಗೌರಿ ಹತ್ಯೆಗೆ ಕಾರಣವಾಗಿದ್ದು ಗುಂಡುಗಳು. ಅವುಗಳನ್ನು ಸಿಡಿಸಿದ ಬಂದೂಕು ವಶಕ್ಕೆ ಪಡೆಯುವುದು ತನಿಖಾ ತಂಡ ಮುಂದಿದ್ದ ಬಹುದೊಡ್ಡ ಸವಾಲು. ಸದ್ಯ ಹೊರಬಿದ್ದಿರುವ ಮಾಹಿತಿಯನ್ನು ಎದುರಿಗಿಟ್ಟುಕೊಂಡರೆ, ಎಸ್‌ಐಟಿ ತನಿಖೆಯಲ್ಲಿ ಇದೊಂದು ವಿಚಾರ ಮಿಸ್ಸಿಂಗ್ ಲಿಂಕ್ ರೂಪದಲ್ಲಿ ಕಾಣಿಸುತ್ತದೆ.

ಆ ಅನಾಮಿಕ ಯಾರು?:

ಪರಶುರಾಮ್‌ ವಾಘ್ಮೋರೆ.
ಪರಶುರಾಮ್‌ ವಾಘ್ಮೋರೆ.

ಗೌರಿ ಹತ್ಯೆ ಪ್ರಕರಣವನ್ನು ತನಿಖೆಯ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈಗ ಸಿಂಧಗಿ ಮೂಲದ ಪರಶುರಾಮ್ ವಾಘ್ಮೋರೆಯನ್ನು ವಶಕ್ಕೆ ಪಡೆದಿದೆ. ಆತ ವಿಚಾರಣೆ ವೇಳೆಯಲ್ಲಿ ಗೌರಿ ಮೇಲೆ ಗುಂಡು ಹಾರಿಸಿದ್ದಾಗಿ ‘ಪಾಪ ಪ್ರಜ್ಞೆ’ಯಿಂದ ಒಪ್ಪಿಕೊಂಡಿದ್ದಾನೆ ಎಂದು ವರದಿಗಳು ಹೇಳುತ್ತಿವೆ.

ಆದರೆ ಹತ್ಯೆ ನಡೆಸಲು ಬೈಕ್‌ನಲ್ಲಿ ಗೌರಿ ಮನೆಗೆ ಕರೆದುಕೊಂಡು ಹೋದ ವ್ಯಕ್ತಿ ಯಾರು ಎಂಬ ವಿವರಗಳು ಇನ್ನೂ ನಿಗೂಢವಾಗಿಯೇ ಇವೆ. ವಿಶೇಷ ಅಂದರೆ, ಇದೇ ಅನಾಮಿಕ ವ್ಯಕ್ತಿ ಹತ್ಯೆ ನಂತರ ವಾಘ್ಮೋರೆ ಕೈಯಿಂದ ಹತ್ಯೆಗೆ ಬಳಸಿದ ಪಿಸ್ತೂಲು ತೆಗೆದುಕೊಂಡು ಹೋಗಿದ್ದಾನೆ ಎಂದು ಎಸ್‌ಐಟಿ ಮೂಲವನ್ನು ಉಲ್ಲೇಖಿಸುವ ವರದಿಗಳು ಹೇಳುತ್ತಿವೆ.

ಅಷ್ಟೆ ಅಲ್ಲ, ಆತನೇ ಪರಶುರಾಮ್‌ಗೆ ಗೌರಿ ಹತ್ಯೆಗೆ ಅಣಿಗೊಳಿಸಿದ, ಆತನೇ ಗುಂಡು ಹಾರಿಸಲು ತರಭೇತಿಯನ್ನೂ ನೀಡಿದ, ಆತನೇ ಹತ್ಯೆ ದಿನ ಆರೋಪಿ ಹಂತಕವನ್ನು ಕಡೆದುಕೊಂಡು ಗೌರಿ ಮನೆಗೂ ಬಂದಿದ್ದ. ಆದರೆ ಆತ ಯಾರು? ವರದಿಗಳ ಪ್ರಕಾರ ಪರುಶರಾಮ್ ವಾಘ್ಮೋರೆಗೂ ಈತನ ಬಗ್ಗೆ ಮಾಹಿತಿ ಇಲ್ಲ.

“ಗೌರಿ ಹತ್ಯೆ ಪ್ರಕರಣದಲ್ಲಿ ಕೆಲವು ಮಿಸ್ಸಿಂಗ್ ಲಿಂಕ್ಸ್ ಇನ್ನೂ ಇವೆ. ಏನೇ ಮಾಧ್ಯಮಗಳಲ್ಲಿ ಅಬ್ಬರ ಮಾಡಿದರೂ, ಹತ್ಯೆಗೆ ಬಳಸಿದ ಪಿಸ್ತೂಲು ವಶಕ್ಕೆ ಪಡೆಯಬೇಕಿದೆ. ಅದಿಲ್ಲದೆ ಹೋದರೆ ಎಸ್‌ಐಟಿಯ ಅಷ್ಟೂ ಆರೋಪಗಳಿಗೆ ನ್ಯಾಯಾಲಯದಲ್ಲಿ ಬೆಲೆ ಸಿಗುವುದಿಲ್ಲ,’’ ಎನ್ನುತ್ತಾರೆ ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರು.

ಮರುಸೃಷ್ಟಿಯ ಪ್ರಕ್ರಿಯೆ:

ಇನ್ನು, ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿಗಳನ್ನು ಬಳಸಿಕೊಂಡು ಎಸ್‌ಐಟಿ ಒಟ್ಟಾರೆ ಕ್ರೈಂ ಸೀನ್‌ನ್ನು ಮರುಸೃಷ್ಟಿಗೆ ಹೊರಟಿದೆ ಎಂದು ವರದಿಗಳು ಹೇಳುತ್ತಿವೆ. ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ತನಿಖಾ ತಂಡ ಸದಸ್ಯರೊಬ್ಬರು, “ಮರುಸೃಷ್ಟಿ ಅಂತ ಅಲ್ಲ. ಅವರನ್ನು ಕರೆದುಕೊಂಡು ಸ್ಥಳದ ಪಂಚನಾಮೆ ಮಾಡಿದ್ದೇವೆ,’’ ಎಂದರು.

ಮರುಸೃಷ್ಟಿ ಮೂಲಕ ಸಾಕ್ಷಿಗಳನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದ ಅವರು, “ಹತ್ಯೆಗೆ ಬಳಸಿದ ಪಿಸ್ತೂಲವನ್ನು ವಶಕ್ಕೆ ಪಡೆಯುವುದು ನಮ್ಮ ಮುಂದಿರುವ ಸವಾಲು. ಆದರೆ ಆರೋಪಿಗಳು ಈ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ತನಿಖೆ ಅನಾಮಿಕ ವ್ಯಕ್ತಿಯೊಬ್ಬನ ಸುತ್ತ ಸುತ್ತಲು ಶುರುವಾಗಿ ಸುಮಾರು ದಿನಗಳಾದವು,’’ ಎಂದರು.

ಅಂತರ ಕಾಯ್ದುಕೊಂಡರು:

ಈ ನಡುವೆ, ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಂದ ಶ್ರೀರಾಮ ಸೇನೆ ಅಧಿಕೃತವಾಗಿ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದೆ. “ಗೌರಿ ಹತ್ಯೆಯಲ್ಲಿ ಗುಂಡು ಹಾರಿಸಿದ ಗುರುತರ ಆರೋಪ ಹೊತ್ತುಕೊಂಡಿರುವ ಸಿಂಧಗಿ ಮೂಲದ ಪರುಶುರಾಮ್ ವಾಘ್ಮೋರೆಗೂ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ,’’ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪುನರುಚ್ಚರಿಸಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ಅವರು, “ಪರುಶುರಾಮ್ ವಾಘ್ಮೋರೆ ಯಾವತ್ತೂ ಸಂಘಟನೆಯ ಜತೆ ಒಡನಾಟದಲ್ಲಿ ಇರಲಿಲ್ಲ. ಆತನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಮಾಧ್ಯಮಗಳ ವರದಿಗಳು ಹೇಳುತ್ತಿವೆ. ಈ ಕಾರಣಕ್ಕೆ ಸಿಂಧಗಿಯ ಶ್ರೀರಾಮ ಸೇನೆ ಘಟಕದ ಒಂದಷ್ಟು ಸ್ಥಳೀಯ ಯುವಕರು ವಾಘ್ಮೋರೆ ಕುಟುಂಬದ ಆರ್ಥಿಕ ಸಹಾಯಕ್ಕೆ ನಿಂತಿದ್ದಾರೆ. ಆದರೆ ಅದು ಶ್ರೀರಾಮ ಸೇನೆಯ ನಿರ್ಧಾರ ಅಲ್ಲ,’’ ಎಂದರು.

ಯಾವುದೇ ಸಂಘಟನೆ ಇರಲಿ, ಸಂಕಷ್ಟದ ಸ್ಥಿತಿಯಲ್ಲಿ ಬದಲಿ ಮಾರ್ಗಗಳನ್ನು ಹಿಡಿಯುತ್ತವೆ. ಸಿಂಧಗಿಯಲ್ಲಿ ವಾಘ್ಮೋರೆ ‘ಹಿಂದುತ್ವದ ಸರ್ಕಲ್‌’ನಲ್ಲಿ ಕಾಣಿಸಿಕೊಂಡಿದ್ದ ಎಂಬುದನ್ನು ಮೂಲಗಳು ಖಚಿತಪಡಿಸುತ್ತವೆ. “ನನಗೆ ಐದಾರು ವರ್ಷಗಳ ಹಿಂದೆ ವಾಘ್ಮೋರೆ ಪರಿಚಯವಾಗಿದ್ದ. ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆವು,’’ ಎನ್ನುತ್ತಾರೆ ಸ್ಥಳೀಯ ರಾಕೇಶ್. ಶನಿವಾರ ಎಸ್‌ಐಟಿ ವಿಚಾರಣೆಗಾಗಿ ಬೆಂಗಳೂರಿಗೆ ಬಂದಿದ್ದಾರೆ ರಾಕೇಶ್.

ಹೀಗೆ, ಒಂದು ಕಡೆ ತನಿಖೆ, ಮತ್ತೊಂದು ಕಡೆ ಅದನ್ನು ಮೀರಿ ಬೆಳೆಯುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸದ್ದು ಮಾಡುತ್ತಿದೆ. ಪರಿಣಾಮ, ಹೊಸ ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬರುತ್ತಲೇ ಕ್ರೀಯಾಶೀಲವಾದ ‘ವಿಶೇಷ ತನಿಖಾ ತಂಡ’ ಸುದ್ದಿಕೇಂದ್ರದಲ್ಲಿದೆ. ಸದ್ಯಕ್ಕೆ ಅದಷ್ಟೆ ಸತ್ಯ. ಅದರಾಚೆಯ ಅಷ್ಟೂ ವಿಚಾರಗಳಿಗೆ ಅಧಿಕೃತತೆ ಬರಬೇಕಿದ್ದರೆ ಹೆಚ್ಚುವರಿ ದೋಷಾರೋಪ ಪಟ್ಟಿಯವರೆಗೆ ಕಾಯಲೇಬೇಕಿದೆ.