samachara
www.samachara.com
ದೆಹಲಿ ದರ್ಬಾರ್‌ನಿಂದ ಬಿಜೆಪಿ ಹೊರಗಟ್ಟಲು ಇರುವುದೊಂದೇ ಮಂತ್ರ ದಂಡ ‘ಉತ್ತರ ಪ್ರದೇಶ’
COVER STORY

ದೆಹಲಿ ದರ್ಬಾರ್‌ನಿಂದ ಬಿಜೆಪಿ ಹೊರಗಟ್ಟಲು ಇರುವುದೊಂದೇ ಮಂತ್ರ ದಂಡ ‘ಉತ್ತರ ಪ್ರದೇಶ’

2019ರ ಚುನಾವಣೆ ವಿರೋಧ ಪಕ್ಷಗಳ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟ. ಈ ಸಂದರ್ಭದಲ್ಲಿ ಈ ವರ್ಗಕ್ಕೆ ಕಾಣಿಸುತ್ತಿರುವ ಏಕೈಕ ಆಶಾಕಿರಣ ಎಂದರೆ ಅದು ಉತ್ತರ ಪ್ರದೇಶ. ರಾಜಕೀಯವಾಗಿ ದೇಶದ ಬಹುದೊಡ್ಡ, ನಿರ್ಣಾಯಕ ರಾಜ್ಯ ಇದು.

2019ರ ಚುನಾವಣೆ ವಿರೋಧ ಪಕ್ಷಗಳ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟ. ಈ ಸಂದರ್ಭದಲ್ಲಿ ಈ ವರ್ಗಕ್ಕೆ ಕಾಣಿಸುತ್ತಿರುವ ಏಕೈಕ ಆಶಾಕಿರಣ ಎಂದರೆ ಅದು ಉತ್ತರ ಪ್ರದೇಶ. ರಾಜಕೀಯವಾಗಿ ದೇಶದ ಬಹುದೊಡ್ಡ, ನಿರ್ಣಾಯಕ ರಾಜ್ಯ ಇದು.

ಇಲ್ಲಿ ಕಳೆಗಟ್ಟಿರುವ ಒಂದು ಕಾಲದ ಹಾವು-ಮುಂಗುಸಿ, ಮಾಯಾವತಿ ಮತ್ತು ಅಖಿಲೇಶ್ ಯಾದವ್ ನಡುವಿನ ಮೈತ್ರಿ ಇಡೀ ದೇಶದ ರಾಜಕಾರಣಕ್ಕೆ ತಿರುವು ನೀಡಬಲ್ಲದು ಎನ್ನುತ್ತಾರೆ ಹಿರಿಯ ಪತ್ರಕರ್ತ ಬಿ. ಆರ್. ಪಿ. ಭಾಸ್ಕರ್.

‘ದಿ ವೈರ್’ಗೆ ಬರೆದಿರುವ ಒಳನೋಟಗಳುಳ್ಳ ಅವರ ವಿಶೇಷ ಲೇಖನದ ಭಾವಾನುವಾದ ಇಲ್ಲಿದೆ.

ನಿರೀಕ್ಷೆಗೂ ಮೀರಿ 2014ರ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದ್ದು ಉತ್ತರ ಪ್ರದೇಶದಿಂದ. 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ 73 (ಬಿಜೆಪಿ 71 + ಅಪ್ನಾ ದಳ 2) ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡು ದೆಹಲಿ ಗದ್ದುಗೆ ಏರಿತ್ತು. ಇವತ್ತು ದೆಹಲಿ ದರ್ಬಾರ್ ನಡೆಸುತ್ತಿರುವ ಬಿಜೆಪಿಯನ್ನು ಕೆಳಗಿಳಿಸಬೇಕಾದರೆ ಊರುಗೋಲನ್ನು ವಿಪಕ್ಷಗಳು ಕಿತ್ತುಕೊಳ್ಳಬೇಕು; ಅದು ಉತ್ತರ ಪ್ರದೇಶ.

ಆದರೆ ಸಮಸ್ಯೆ ಇರುವುದೇ ಇಲ್ಲಿ. ದೇಶದಲ್ಲಿ ಬಿಜೆಪಿಯ ಬಹುದೊಡ್ಡ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಇವತ್ತಿಗೆ ನೆಲೆ ಇಲ್ಲ. ಇಲ್ಲಿ ವಿರೋಧ ಪಕ್ಷದ ಜಾಗದಲ್ಲಿ ಇರುವವರು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ದ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷ (ಎಸ್ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್. ಇವರಿಬ್ಬರೂ ಪರಸ್ಪರ ವಿರೋಧಿಗಳಾಗಿದ್ದವರು. ಆದರೆ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಬಳಿಕ ಇಬ್ಬರೂ ವಿರೋಧ ಪಕ್ಷವೆಂಬ ಒಂದೇ ಕುರ್ಚಿಯಲ್ಲಿ ಕುಳಿತಿದ್ದಾರೆ. ಸಹಜವಾಗಿಯೇ ನೆರೆ ಹೊರೆಯವರ ಮೇಲೆ ಮಮಕಾರ ಬಂದು ಅದೀಗ ಮೈತ್ರಿ ಬಾಗಿಲಿನಲ್ಲಿ ಬಂದು ನಿಂತಿದೆ.

ಹಾಗೆ ನೋಡಿದರೆ ಕಾಂಗ್ರೆಸಿಗೆ ಅಖಿಲೇಶ್ ಯಾದವ್ 2017 ರಿಂದ ಮಿತ್ರರು. ಇದೀಗ ಹೊಸ ಸಂಬಂಧದಲ್ಲಿ ಅಖಿಲೇಶ್ ಮತ್ತು ಮಾಯಾವತಿ ಹತ್ತಿರವಾಗಿದ್ದಾರೆ. ಹೀಗೆ ತ್ರಿಕೋನ ಪ್ರೇಮ ಕತೆಯಂತಾಗಿದೆ ಉತ್ತರ ಪ್ರದೇಶದ ರಾಜಕೀಯ. ಅಂದ ಹಾಗೆ ಈ ತ್ರಿಕೋನ ಪ್ರೇಮ ಕಥೆಯೇ 2019ರ ಚುನಾವಣೆಯ ಮಾಂತ್ರಿಕ ಕೀಲಿ ಕೈ.

ರಾಜಕೀಯ ಸಂಖ್ಯಾಶಾಸ್ತ್ರ:

2014ರ ಲೋಕಸಭೆ ಚುನಾವಣೆ ನಡೆದಾಗ ಶೇ. 42.63 ಮತಗಳನ್ನು ಪಡೆದು ಬಿಜೆಪಿ 71 ಸ್ಥಾನಗಳನ್ನೂ, ಮಿತ್ರ ಪಕ್ಷ ಅಪ್ನಾ ದಳ 2 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಶೇಕಡಾ 22.36 ಮತಗಳೊಂದಿಗೆ ಎಸ್ಪಿ 5, ಶೇಕಡಾ 7.53 ಮತಗಳೊಂದೊಗೆ ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೆದ್ದಿದ್ದರು. ಶೇ. 19.77 ಮತಗಳನ್ನು ಪಡೆದರೂ ಬಿಎಸ್ಪಿಗೆ ಇಲ್ಲಿ ಯಾವುದೇ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ರಾಷ್ಟ್ರೀಯ ಪಕ್ಷವಾಗಿದ್ದು ಇಡೀ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಬಿಎಸ್ಪಿಗೆ ಗೆಲ್ಲಲು ಆಗಿರಲಿಲ್ಲ.

ಇಲ್ಲಿ ಬಿಎಸ್ಪಿ ಮತ್ತು ಎಸ್ಪಿಯ ಒಟ್ಟಾರೆ ಮತಗಳಿಗೆ ಶೇ. 42.13. ಬಿಜೆಪಿಗಿಂತ ಇದು ಸ್ವಲ್ಪವೇ ಕಡಿಮೆ ಎಂಬುದು ಗಮನಾರ್ಹ. ಇದರ ಜೊತೆಗೆ ಕಾಂಗ್ರೆಸ್ ಕೂಡ ಸೇರಿಕೊಂಡರೆ ಈ ಪ್ರಮಾಣ ಶೇಕಡಾ 49.66; ಅಂದರೆ ಅರ್ಧದಷ್ಟು.

2014ರ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳ್ಲಲೂ ಪ್ರಚಂಡ ಜಯವನ್ನೇನೂ ದಾಖಲಿಸಿರಲಿಲ್ಲ. 20 ಕ್ಷೇತ್ರಗಳಲ್ಲಿ ಶೇಕಡಾ 40 ಕ್ಕಿಂತ ಕಡಿಮೆ ಮತ ಪಡೆದೂ ಬಿಜೆಪಿ ಅಭ್ಯರ್ಥಿಗಳು ಜಯ ದಾಖಲಿಸಿದ್ದರು. 37 ಸ್ಥಾನಗಳಲ್ಲಿ ಇವರ ಮತಗಳಿಕೆ ಶೇಕಡಾ 40-50ರ ಮಧ್ಯೆ ಇತ್ತು. ಸ್ಟಾರ್ ನಾಯಕರಾದ ನರೇಂದ್ರ ಮೋದಿ, ಮುರಳಿ ಮನೋಹರ್ ಜೋಶಿ, ಹೇಮಮಾಲಿನಿ, ಯೋಗಿ ಆದಿತ್ಯನಾಥ್, ಮೇನಕಾ ಗಾಂಧಿ ತರಹದವರು ಮಾತ್ರ ಶೇಕಡಾ 50ಕ್ಕಿಂತ ಹೆಚ್ಚು ಮತಗಳೊಂದಿಗೆ ಜಯಭೇರಿ ಬಾರಿಸಿದ್ದರು.

ಇದರಲ್ಲೇ ಶೇಕಡಾ 50 ಹೆಚ್ಚು ಮತಗಳಿಸಿ ಗೆದ್ದಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಗೋರಖಪುರ ಕ್ಷೇತ್ರವನ್ನೇ ವಿಪಕ್ಷಗಳೆಲ್ಲಾ ಒಗ್ಗಟ್ಟಾಗಿ ಬಿಜೆಪಿ ಕೈಯಿಂದ ಉಪಚುನಾವಣೆಯಲ್ಲಿ ಕಿತ್ತುಕೊಂಡವು. ಎಸ್ಪಿ ಅಭ್ಯರ್ಥಿಗೆ ಕಾಂಗ್ರೆಸ್, ಬಿಎಸ್ಪಿ ಪರೋಕ್ಷ ಬೆಂಬಲ ನೀಡಿ ಇಲ್ಲಿ ಗೆಲ್ಲಿಸಿಕೊಂಡವು. ಒಗ್ಗಟ್ಟಿನ ಹೋರಾಟದ ಮುಂದೆ ಬಿಜೆಪಿಯನ್ನು ಬಗ್ಗು ಬಡಿಯುವುದು ಸಾಧ್ಯ ಎಂಬುದು ಅಲ್ಲಿಗೆ ಸಾಕ್ಷಿ ಸಮೇತ ಸಾಬೀತಾಯಿತು. ವಿಪಕ್ಷಗಳ ಗುರಿಯೂ ಸ್ಪಷ್ಟವಾಯಿತು. ಮುಂದೆ ಕೈರಾನದಲ್ಲಿ ಆರ್.ಎಲ್.ಡಿ (ರಾಷ್ಟ್ರೀಯ ಲೋಕದಳ) ಅಭ್ಯರ್ಥಿಯನ್ನು ಆನೆ -ಸೈಕಲ್ ಜೊತೆಯಾಗಿ ಬೆಂಬಲಿಸಿ ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾದವು. ಅಲ್ಲಿಗೆ ಮೈತ್ರಿ ಎಂಬುದು ಬಿಜೆಪಿ ವಿರುದ್ಧ ಪ್ರಬಲ ಅಸ್ತ್ರ ಎಂಬುದು ಮತ್ತೊಮ್ಮೆ ರುಜುವಾತಾಯಿತು.

ಬೆಸೆಯುತ್ತಿರುವ ತಂತುಗಳು:

ಬಿಎಸ್ಪಿ ಮತ್ತು ಎಸ್ಪಿಯ ಈ ನಡೆಯ ನಡುವೆ ಅಚ್ಚರಿ ಎಂಬಂತೆ ಕರ್ನಾಟಕದಲ್ಲೊಂದು ಬೆಳವಣಿಗೆ ನಡೆದು ಹೋಯಿತು.

ಬಿಎಸ್ಪಿ ಪಕ್ಷ ಹುಟ್ಟಿದಾಗಿನಿಂದಲೂ ದೇಶದಾದ್ಯಂತ ಅಭ್ಯರ್ಥಿಗಳನ್ನು ನಿಲ್ಲಿಸುವ ಪರಿಪಾಠವನ್ನು ಇಟ್ಟುಕೊಂಡು ಬಂದಿದೆ. ಸೋಲೋ ಗೆಲುವೋ ಅದು ಆ ಪಕ್ಷಕ್ಕೆ ಮುಖ್ಯವಾಗಿದ್ದಿಲ್ಲ. ಈ ಸಂಪ್ರದಾಯ ಪಕ್ಷಕ್ಕೆ ಅಷ್ಟೇನು ಲಾಭ ತಂದು ಕೊಡದಿದ್ದರೂ ರಾಷ್ಟ್ರೀಯ ಪಕ್ಷ ಎಂಬ ಸ್ಥಾನಮಾನವನ್ನು ಮಾತ್ರ ಅದು ಪಡೆದುಕೊಂಡಿತು. ಇದೇ ಪಕ್ಷ ಕರ್ನಾಟಕದ ಚುನಾವಣಾ ಅಖಾಡಕ್ಕೆ ಇಳಿಯಿತು. ಅದೂ ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆಗೂಡಿ.

ದೇಶದೆಲ್ಲಡೆ ಪ್ರಾದೇಶಿಕ ಪಕ್ಷಗಳು ತೃತೀಯ ರಂಗದ ಮಾತುಕತೆಗಳನ್ನು ಚಾಲ್ತಿಯಲ್ಲಿಟ್ಟಿದ್ದ ಹೊತ್ತಲ್ಲಿ ಕರ್ನಾಟಕ ಚುನಾವಣೆ ನಡೆಯಿತು. ಜಾತ್ಯಾತೀತ ಜನತಾದಳ (ಜೆಡಿಎಸ್) ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡು 38 + 1 ಸ್ಥಾನಗಳನ್ನು ಗೆದ್ದುಕೊಂಡವು. ಬಿಎಸ್ಪಿಯಿಂದ ಕೊಳ್ಳೇಗಾಲದಲ್ಲಿ ಸ್ಪರ್ಧಿಸಿ ಗೆದ್ದು ಕರ್ನಾಟಕದಲ್ಲಿ ಆನೆ ಪಕ್ಷದ ಖಾತೆ ತೆರೆದರು ಎನ್. ಮಹೇಶ್.

ಅತಂತ್ರ ವಿಧಾನಸಭೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು. ಬಿಎಸ್ಪಿ ಕೂಡ ಇದರಲ್ಲಿ ಪಾಲುದಾರ ಪಕ್ಷವಾಯಿತು. ಈ ಸರಕಾರದಲ್ಲೀಗ ಎನ್.ಮಹೇಶ್ ಸಚಿವರು. ದೇಶದಲ್ಲಿರುವ ಬಿಎಸ್ಪಿಯ ಏಕೈಕ ಸಚಿವರೆಂದರೆ ಅದು ಮಹೇಶ್ ಮಾತ್ರ.

ಹೀಗೆ ಕರ್ನಾಟಕ ಸರಕಾರದ ನೆಪದಲ್ಲಿ ಬಿಎಸ್ಪಿ ಮತ್ತೊಮ್ಮೆ ಕಾಂಗ್ರೆಸ್ ಸಂಪರ್ಕಕ್ಕೆ ಬಂತು. ಭವಿಷ್ಯದ ರಾಜಕೀಯ ಸಂಬಂಧಗಳ ಬಗ್ಗೆ ಕರ್ನಾಟಕ ಈ ಬೆಳವಣಿಗೆಗಳು ಬೆಳಕು ಚೆಲ್ಲುತ್ತಿದ್ದವು. ಜೊತೆ ಜೊತೆಗೆ ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪದಗ್ರಹಣ ಸಮಾರಂಭದಲ್ಲಿ ಮಾಯಾವತಿ ಮತ್ತು ಸೋನಿಯಾ ಗಾಂಧಿಯವರ ನಡುವಿನ ಆಪ್ತ ಕ್ಷಣಗಳು ಮುಂಬರಲಿರುವ ದಿನಗಳ ಬಗ್ಗೆ ಇನ್ನೇನನ್ನೋ ಹೇಳುವಂತಿದ್ದವು.

ದೆಹಲಿ ದರ್ಬಾರ್‌ನಿಂದ ಬಿಜೆಪಿ ಹೊರಗಟ್ಟಲು ಇರುವುದೊಂದೇ ಮಂತ್ರ ದಂಡ ‘ಉತ್ತರ ಪ್ರದೇಶ’

ಭವಿಷ್ಯದ ಲೆಕ್ಕಾಚಾರ:

ಕರ್ನಾಟಕ ಒಂದು ಉದಾಹರಣೆ ಮಾತ್ರ. ಹೀಗೆ ಉತ್ತರ ಪ್ರದೇಶದ ಹೊರಗೆ ಬಿಎಸ್ಪಿ ಜತೆಗೆ ಎಸ್ಪಿಗೂ ಒಂದಷ್ಟು ಮತಗಳಿವೆ. ಇವು ಆ ಪಕ್ಷಕ್ಕೆ ನೆರವಾಗದೇ ಇರಬಹುದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ನೆರವಿಗೆ ಬರಲಿದೆ. ಜೆಡಿಎಸ್ ಗೆ ಕರ್ನಾಟಕದಲ್ಲಿ ಇದು ನೆರವಾದ ಉದಾಹರಣೆ ಕಣ್ಣ ಮುಂದಿದೆ.

ಸಾಮಾನ್ಯವಾಗಿ ಈ ರೀತಿಯ ಮೈತ್ರಿಕೂಟಗಳು ರಚನೆಯಾದಾಗ ಸೀಟು ಹಂಚಿಕೆಯೇ ಒಡಕು ಮೂಡಲು ಕಾರಣವಾಗುತ್ತದೆ. ಆದರೆ ಇದಕ್ಕೆ ಒಂದು ಸೂತ್ರವನ್ನು ಜಾರಿಗೆ ತಂದರೆ ಉಳಿದೆಲ್ಲವೂ ಸರಿಯಾಗುತ್ತದೆ. ಈಗ ಗೆದ್ದಿರುವ ಸ್ಥಾನಗಳನ್ನು ಆಯಾ ಪಕ್ಷಕ್ಕೆ ಬಿಟ್ಟು ಕೊಟ್ಟು, ಉಳಿದೆಡೆ ಕಳೆದ ಬಾರಿ ಯಾರು ಎರಡನೇ ಸ್ಥಾನ ಪಡೆದಿದ್ದಾರೋ ಅವರಿಗೆ ಸೀಟು ಬಿಟ್ಟುಕೊಟ್ಟರೆ ಸಮಸ್ಯೆ ಬಗೆಹರಿಯುತ್ತದೆ. ಹೀಗೇನಾದರೂ ಆದರೆ, ಎಸ್ಪಿಗೆ ಗೆದ್ದಿರುವ 7 ಸ್ಥಾನಗಳು ಜೊತೆಗೆ ಕಳೆದ ಬಾರಿ ಎರಡನೇ ಸ್ಥಾನ ಪಡೆದ 30 ಸ್ಥಾನಗಳು ಸೇರಿ 37 ಸೀಟುಗಳು ಸಿಗಲಿವೆ. ಬಿಎಸ್ಪಿ ಕಳೆದ ಬಾರಿ ಎಲ್ಲೂ ಗೆದ್ದಿರಲಿಲ್ಲ; 33 ಕಡೆ ಎರಡನೇ ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್ ಗೆದ್ದಿರುವ 2, ರನ್ನರ್ ಅಪ್ ಆದ 5 ಸೇರಿ ಆ ಪಕ್ಷಕ್ಕೆ ಎಂಟು. ಆರ್.ಎಲ್.ಡಿ ಗೆ ಗೆದ್ದಿರುವ ಒಂದು ಮತ್ತು ಸೋತಿರುವ ಮತ್ತೊಂದು ಸೇರಿ 2 ಸ್ಥಾನಗಳು ಸಿಗಲಿವೆ.

ಕಾಂಗ್ರೆಸ್ ತನಗೆ ಉತ್ತರ ಪ್ರದೇಶದಲ್ಲಿ ಕಡಿಮೆ ಸೀಟು ಸಿಕ್ಕಿ ನಷ್ಟವಾಗಲಿದೆ ಎಂದುಕೊಳ್ಳಬಹುದು. ಆದರೆ ಬೇರೆ ರಾಜ್ಯಗಳಲ್ಲಿ ಅದಕ್ಕೆ ಬಿಎಸ್ಪಿ ಮತ್ತು ಎಸ್ಪಿಯಿಂದ ಲಾಭವಾಗುತ್ತದೆ. ಈ ಭಾವನೆಯಲ್ಲಿ ಅದು ಹೋರಾಟಕ್ಕೆ ಇಳಿದಿದ್ದೇ ಆದಲ್ಲಿ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟು ಬುತ್ತಿ. ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಮತ್ತು ಆರ್.ಎಲ್.ಡಿ ಒಟ್ಟಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 50 ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದವು. ಇದನ್ನು ಈ ಬಾರಿ ಪುನರಾವರ್ತನೆ ಮಾಡಿದಲ್ಲಿ ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಹೊರಗಟ್ಟಬಹುದು. ಜೊತೆಗೆ ದೆಹಲಿಯ ಸಿಂಹಾಸನದಿಂದಲೂ.