samachara
www.samachara.com
ಸರಕಾರಿ ಹಾಸ್ಟೆಲ್‌ ಅವ್ಯವಸ್ಥೆ: ಸುಧಾರಣೆಗೆ ಮುನ್ನುಡಿ ಬರೆದ ವಿದ್ಯಾರ್ಥಿಗಳ ‘ವಿಡಿಯೋ’
COVER STORY

ಸರಕಾರಿ ಹಾಸ್ಟೆಲ್‌ ಅವ್ಯವಸ್ಥೆ: ಸುಧಾರಣೆಗೆ ಮುನ್ನುಡಿ ಬರೆದ ವಿದ್ಯಾರ್ಥಿಗಳ ‘ವಿಡಿಯೋ’

ಹದಗೆಟ್ಟಿದ್ದ ಹಾಸ್ಟೆಲ್‌ಅನ್ನು ಸರಿಪಡಿಸಲು ಮತ್ತಾರೋ ಬರಬೇಕೆಂದು ಇಲ್ಲಿನ ವಿದ್ಯಾರ್ಥಿಗಳು ಕಾಯಲಿಲ್ಲ. ಬದಲಾಗಿ ತಾವೇ ಸಂಘಟಿತಗೊಂಡರು. ಪರಿಣಾಮವಾಗಿ ಹಾಸ್ಟೆಲ್‌ನ ಬಿದ್ದು ಹೋಗುವಂತಿದ್ದ ಕಟ್ಟಡದ ಬದಲಾಗಿ ಹೊಸ ಕಟ್ಟಡವೊಂದು ನಿರ್ಮಾಣವಾಗುತ್ತಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಸರಕಾರಗಳು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ ಎನ್ನುವುದೇನೋ ನಿಜ. ಆದರೆ ಯೋಜನೆಗಳು ಎಷ್ಟು ವ್ಯವಸ್ಥಿತವಾಗಿರುತ್ತವೆ ಎನ್ನುವುದಕ್ಕೆ ನಮ್ಮ ಸುತ್ತಲಿರುವ ಸರಕಾರಿ ವಿದ್ಯಾರ್ಥಿ ನಿಲಯಗಳೇ ಉದಾಹರಣೆಗಳು. ಅವ್ಯವಸ್ಥೆಗಳ ಗೂಡಾಗಿದ್ದ ಇಂತಹದ್ದೇ ಒಂದು ಹಾಸ್ಟೆಲ್‌ಅನ್ನು ಅಲ್ಲಿನ ವಿದ್ಯಾರ್ಥಿಗಳ ವಿನೂತನ ಪ್ರಯತ್ನ ಬದಲಾವಣೆಯ ಹಾದಿಗೆ ತಂದು ನಿಲ್ಲಿಸಿದೆ.

ಬೆಂಗಳೂರಿನ ಜಯನಗರದ 9ನೇ ಬಡಾವಣೆಯ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ನಿಲಯದ ಕತೆಯಿದು. ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಆಹಾರ ಪೂರೈಕೆಯಲ್ಲಿಯೂ ಕೂಡ ಅವ್ಯವಸ್ಥೆ ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಆಹಾರ ತಿನ್ನುವುದೇ ಅಸಾಧ್ಯ ಎನ್ನುವ ಮಟ್ಟಿಗೆ ಗುಣಮಟ್ಟವಿತ್ತು.

ವಿದ್ಯಾರ್ಥಿಗಳ ಕೋಣೆಯಲ್ಲಿದ್ದ ಮಂಚಗಳು ತುಕ್ಕು ಹಿಡಿದಿದ್ದವು. ಗೋಡೆಗಳೆಲ್ಲಾ ಬಿರುಕು ಬಿಟ್ಟಿದ್ದವು. ಸುತ್ತೆತ್ತಲೂ ಕೂಡ ಬಣ್ಣ ಮಾಸಿ, ವಿದ್ಯಾರ್ಥಿ ನಿಲಯ ಭೂತ ಬಂಗಲೆಯಂತೆ ಗೋಚರಿಸುತ್ತಿತ್ತು. ಶೌಚಾಲಯದಲ್ಲಿನ ಕಮೋಡ್‌ಗಳು ಒಡೆದುಹೋಗಿದ್ದವು. ಬಾಗಿಲಿಗೆ ಚಿಲಕಗಳಿರಲಿಲ್ಲ. ಸ್ನಾನಗೃಹದ ಬಾಗಿಲುಗಳು ಮುರಿದ್ದವು. ನಲ್ಲಿಯಲ್ಲಿ ನೀರು ಸದಾ ಹರಿದು ಹೋಗುತ್ತಿತ್ತು. ನೀರಿನ ವ್ಯವಸ್ಥೆಗೆಂದು ಅಳವಡಿಸಿದ್ದ ಟ್ಯಾಂಕ್‌ ತೂತು ಬಿದ್ದು ಯಾವಾಗಲೂ ಸಹ ಹಾಸ್ಟೆಲ್‌ನ ಒಳಾಂಗಣ ನೀರಿನಿಂದ ತೋಯ್ದಿರುತ್ತಿತ್ತು.

ಇದು ಹಾಸ್ಟೆಲ್‌ ಒಳಗಿನ ಸಮಸ್ಯೆಯಾದರೆ, ಹೊರಗಿನ ಪಡ್ಡೆ ಹುಡುಗರ ಗುಂಪು ಕೂಡ ಹಾಸ್ಟೆಲ್‌ಗೆ ಹಾಗಾಗ ಲಗ್ಗೆಯಿಡುತ್ತಿತ್ತು. ವಿದ್ಯಾರ್ಥಿ ನಿಲಯದ ಆವರಣದೊಳಗೆ ಮಧ್ಯದ ಬಾಟಲಿಗಳು ಕಾಣಿಸುವುದು ಸಾಮಾನ್ಯ ಎನ್ನುವಂತಾಗಿತ್ತು.

ಇದೆಲ್ಲವನ್ನೂ ಕಂಡ ರೋಸಿಹೋಗಿ ವಿದ್ಯಾರ್ಥಿಗಳು ತಾವೇ ಹಾಸ್ಟೆಲ್‌ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು. ಹಾಸ್ಟೆಲ್‌ ಒಳಗೆ ‘ಜೈಭೀಮ್‌ ವಿದ್ಯಾರ್ಥಿ ಯುವಜನ ವೇದಿಕೆ’ ಹೆಸರಿನ ಅಡಿಯಲ್ಲಿ ತಂಡವೊಂದು ಸಿದ್ಧವಾಗಿತ್ತು. ವಿದ್ಯಾರ್ಥಿಗಳು ತಮ್ಮ ಹಕ್ಕುಗಳನ್ನು ಕೇಳಲು ಮುಂದಾಗಿದ್ದರು. ಹಾಸ್ಟೆಲ್‌ ನಿರ್ವಾಹಕರ ಜತೆ ಮಾತುಕತೆಗಳೂ ಕೂಡ ನೆದಿದ್ದವು. ಇದ್ಯಾವುದೂ ಉಪಯೋಗಕ್ಕೆ ಬಾರದ ಕಾರಣ ಹಾಸ್ಟೆಲ್‌ನ ವಸ್ತುಸ್ಥಿತಿಯನ್ನು ವಿವರಿಸುವ ವಿಡಿಯೋವೊಂದನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು.

ವಿದ್ಯಾರ್ಥಿಗಳ ಈ ಕಾರ್ಯ ಫಲಕೊಟ್ಟಿತ್ತು. ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದಿಯಾಗಿ ಹಲವು ಪ್ರಮುಖರು ಹಾಸ್ಟೆಲ್‌ಗೆ ಭೇಟಿಯಿತ್ತರು. ಹಾಸ್ಟೆಲ್‌ ಬದಲಾವಣೆಯತ್ತ ಹೆಜ್ಜೆ ಇಟ್ಟಿತು. ದಿನವೂ ಕುಡಿದು ಬಂದು ಇಷ್ಟ ಬಂದಂತೆ ಅಡಿಗೆ ಮಾಡುತ್ತಿದ್ದ ಅಡಿಗೆ ಭಟ್ಟನ ಬದಲಿಗೆ ಬೇರೊಬ್ಬರ ನೇಮಕವಾಯಿತು. ನೀರಿನ ವ್ಯವಸ್ಥೆ ಸುಧಾರಿಸಿತು. ತಾಜ್ಯ ವಿಲೇವಾರಿ ಸರಾಗವಾಯಿತು. ಹಾಸ್ಟೆಲ್‌ಗೆ ಹೊಸ ಮಂಚಗಳು ಬಂದವು. ಈಗ ಜೀರ್ಣಾವಸ್ಥೆಯನ್ನು ತಲುಪಿದ್ದ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ಕಟ್ಟಡ ನಿರ್ಮಾಣ ಕಾಮುಗಾರಿ ಸಂಪೂರ್ಣಗೊಳ್ಳುವವರೆಗೂ, ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿದೆ.

ಹಳೇ ಹಾಸ್ಟೆಲ್‌ ಸಂಪೂರ್ಣವಾಗಿ ಸರಿಯಿರಲಿಲ್ಲ. ಹಲವಾರಿ ಬಾರಿ ನಿರ್ವಾಹಕರೊಂದಿಗೆ ಮಾತುಕತೆಗಳು ನಡೆದವಾದರೂ ಕೂಡ ಪರಿಸ್ಥಿತಿ ಬದಲಾಗಲಿಲ್ಲ. ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಎದ್ದು ನಿಂತ ಮೇಲೆ ಪರಿಸ್ಥಿತಿ ಬದಲಾಗಿದೆ. ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಅಲ್ಲಿಯವೆರೆಗೂ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳನ್ನು ಇರಿಸಲಾಗುವುದೆಂದು ತಿಳಿಸಿಲಾಗಿದೆ. ಮೊದಲಿಗೆ ಹೋಲಿಸಿಕೊಂಡರೆ ಆಹಾರದ ಗುಣಮಟ್ಟವೂ ಕೂಡ ಉತ್ತಮವಾಗಿದೆ.
ಕಾವೇರಿದಾಸ್‌, ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿ.
ಬದಲಾದ ಹಾಸ್ಟೆಲ್‌ ವಸ್ತುಸ್ಥಿತಿ.
ಬದಲಾದ ಹಾಸ್ಟೆಲ್‌ ವಸ್ತುಸ್ಥಿತಿ.

ಇದು ಜಯನಗರ 9ನೇ ಬಡಲಾವಣೆಯಲ್ಲಿದ್ದ ಒಂದು ಹಾಸ್ಟೆಲ್‌ನ ಕತೆಯಷ್ಟೇ. ಇಂತಹದ್ದೇ ಪರಿಸ್ಥಿತಿಯಲ್ಲಿರುವ ಹಲವಾರು ಹಾಸ್ಟೆಲ್‌ಗಳು ನಮ್ಮ ಮುಂದಿವೆ. ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗಿಂತ ಸ್ವಲ್ಪ ಪರವಾಗಿಲ್ಲವಷ್ಟೇ ಎಂಬ ಮಾತುಗಳೂ ಕೂಡ ಇವೆ.

ಸರಕಾರಿ ಅಂಕಿ ಅಂಶಗಳೇ ಹೇಳುವ ಪ್ರಕಾರ ಕರ್ನಾಟಕದಲ್ಲಿ ಒಟ್ಟು 1820 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈ ಹಾಸ್ಟೆಲ್‌ಗಳಿಗೆ ಸರಿಸುಮಾರು 68,000 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಹಾಸ್ಟೆಲ್‌ಗಳ ಪೈಕಿ ಬಹುಪಾಲು ಹಾಸ್ಟೆಲ್‌ಗಳ ಸ್ಥಿತಿ ಜಯನಗರ 9ನೇ ಬ್ಲಾಕ್‌ನಲ್ಲಿದ್ದ ಹಾಸ್ಟೆಲ್‌ನಲ್ಲಿದ್ದ ಸ್ಥಿತಿಗಿಂತ ಭಿನ್ನವಾಗಿಯೇನೂ ಇರಲಿಕ್ಕಿಲ್ಲ.

ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಕಲ್ಪಿಸುವುದು ಹೇಗೆ ಸರಕಾರದ ಜವಾಬ್ದಾರಿಯೋ ಹಾಗೆಯೇ, ಆ ವಿದ್ಯಾರ್ಥಿ ನಿಲಯಗಳನ್ನು ಸುವ್ಯವಸ್ಥೆಯಲ್ಲಿಡುವುದೂ ಕೂಡ ಸರಕಾರದ ಹೊಣೆಗಾರಿಕೆಯೇ. ಆದರೆ ಸರಕಾರ ಅದನ್ನು ಮರೆತಾಗ, ಯೋಜನೆ ಫಲಾನುಭವಿಗಳಾದ ವಿದ್ಯಾರ್ಥಿಗಳು ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಜಯನಗರದ ವಿದ್ಯಾರ್ಥಿಗಳು ಮಾದರಿ ಎನ್ನುವಂತಹ ಹಾದಿಯೊಂದನ್ನು ತೋರಿಸಿಕೊಟ್ಟಿದ್ದಾರೆ. ಅದು ರಾಜ್ಯದ ಇತರೆ ಎಸ್‌ಸಿ/ ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಸುಲಭವಾಗಿ ಅನುಸರಿಸಬಹುದಾದ ವಿಧಾನವಾಗಿ ಕಾಣಿಸುತ್ತಿದೆ.