samachara
www.samachara.com
ರೈತರ ಸಾಲ ಮನ್ನಾ: ಜನಪ್ರಿಯತೆ ಆಚೆಗೆ ಸ್ವಾಮಿನಾಥನ್ ವರದಿಯ ಬೆಳಕು
COVER STORY

ರೈತರ ಸಾಲ ಮನ್ನಾ: ಜನಪ್ರಿಯತೆ ಆಚೆಗೆ ಸ್ವಾಮಿನಾಥನ್ ವರದಿಯ ಬೆಳಕು

ಸಿಎಂ ಕುಮಾರಸ್ವಾಮಿ ಮುಂದಿನ ಬಜೆಟ್ ಸಮಯಲ್ಲಿ ಸಾಲ ಮನ್ನಾ ಮಾಡುವ ಮಾತುಗಳನ್ನಾಡಿದ್ದಾರೆ. ನಿಜಕ್ಕೂ ಸಾಲ ಮನ್ನಾ ಎಂಬುದು ಜನಪ್ರಿಯ ಘೋಷಣೆ ಆಚೆಗೂ ರೈತಾಪಿ ವರ್ಗಕ್ಕೆ ಸಹಾಯ ಮಾಡಿಲಿದೆಯಾ?

ರೈತರ ಬೆಳೆ ಸಾಲ ಮನ್ನಾ ಘೋಷಣೆಯನ್ನು ಸಮ್ಮಿಶ್ರ ಸರಕಾರದ ಕೈಲಿ ಮಾಡಿಸಲೇಬೇಕು ಎಂಬ ಹಠವೊಂದು ಎದ್ದು ಕಾಣಿಸುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮತ್ತೆ ರೈತರ ಸಾಲ ಮನ್ನಾ ವಿಚಾರ ಹಲವು ಹಿರಿಯ ನಾಯಕರ ಬಾಯಲ್ಲಿ ಪ್ರಸ್ತಾಪವಾಗಿದೆ.

ಕರ್ನಾಟಕದ ಪಾಲಿಗೆ ಜನಪ್ರಿಯ ರಾಜಕೀಯ ಘೋಷಣೆಗಳ ಪೈಕಿ ಸಾಲ ಮನ್ನಾ ಕೂಡ ಒಂದು. ಹಿಂದಿನ ಸರಕಾರದಲ್ಲಿ ಸಿಎಂ ಸಿದ್ದರಾಮಯ್ಯ ಕೊನೆಯ ಹಂತದಲ್ಲಿ ಬೆಳೆ ಸಾಲ ಮನ್ನಾ ಮಾಡಿದ್ದರು. ಇದು ಅವರ ‘ಜನಪರ’ ಆಡಳಿತದ ಗರಿಗೆ ಮತ್ತೊಂದು ಸೇರ್ಪಡೆಯಾಗಿತ್ತು.

ಇದೀಗ ಸಿಎಂ ಕುಮಾರಸ್ವಾಮಿ ಮುಂದಿನ ಬಜೆಟ್ ಸಮಯದಲ್ಲಿ ಸಾಲ ಮನ್ನಾ ಮಾಡುವ ಮಾತುಗಳನ್ನಾಡಿದ್ದಾರೆ. ನಿಜಕ್ಕೂ ಸಾಲ ಮನ್ನಾ ಎಂಬುದು ಜನಪ್ರಿಯ ಘೋಷಣೆಯ ಆಚೆಗೂ ರೈತಾಪಿ ವರ್ಗಕ್ಕೆ ಸಹಾಯ ಮಾಡಿಲಿದೆಯಾ? ಹಿಂದೆ ನಡೆದ ಸಾಲ ಮನ್ನಾದಿಂದ ಕೃಷಿಕರಿಗೆ ಆದ ಲಾಭ ಏನು? ಇದರ ಬಗ್ಗೆ ನಡೆದ ಅಧ್ಯಯನಗಳೇನಾದರೂ ಇವೆಯಾ? ಎಂದು ಹುಡುಕಿಕೊಂಡು ಹೋದರೆ, ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದಿಲ್ಲ.

ಬದಲಿಗೆ, ಸಾಲ ಮನ್ನಾ ಯೋಜನೆಯ ನೆರಳಿನಲ್ಲಿ ನಡೆದ ಅಕ್ರಮಗಳ ಮಾಹಿತಿ ಕೇಳಿಬರುತ್ತದೆ. ವಿಧಾನಸೌಧದಲ್ಲಿಯೇ ಪ್ರಾಮಾಣಿಕರಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರೇ ಸತ್ಯ ಒಪ್ಪಿಕೊಂಡ ಮೇಲೆ, ಡಿಸಿಸಿ ಬ್ಯಾಂಕ್‌ಗಳಲ್ಲಿ, ಸಹಕಾರಿ ಸಂಘಗಳಲ್ಲಿ ಅತ್ಯಂತ ಪ್ರಾಮಾಣಿಕ ವ್ಯವಹಾರಗಳು ನಡೆಯುತ್ತವೆ ಎಂದು ನಂಬುವ ಅಗತ್ಯವಿಲ್ಲ. ಹೀಗಾಗಿ ರೈತರ ಸಾಲ ಮನ್ನಾ ಯೋಜನೆ ಜಾರಿಯಲ್ಲಿ ನ್ಯೂನತೆಗಳು ನಿರಿಕ್ಷಿತ. ಆದರೆ ಅಕ್ರಮಗಳ ಕಾರಣಕ್ಕೆ ಯೋಜನೆಯೊಂದನ್ನು ವಿರೋಧಿಸಿದರೆ ನಿಜವಾದ ಫಲಾನುಭವಿಗಳ ಸಂಕಷ್ಟಕ್ಕೆ ಕಾರಣವಾಗುತ್ತದೆ.

ಇಷ್ಟಕ್ಕೂ ರೈತರ ಸಾಲ ಮನ್ನಾ ಯೋಜನೆಯ ಮೂಲ ಆಶಯವೇನು? ರಾಜ್ಯದಲ್ಲಿ ಕೃಷಿ ನಂಬಿಕೊಂಡು ಬದುಕುವವರ ಬದುಕು ಹಸನಾಗಬೇಕು. ಅವರ ಸಂಕಷ್ಟಗಳಿಗೆ ಆರ್ಥಿಕ ನೆರವು ಸಿಗಬೇಕು ಎಂಬ ಉದಾತ್ತವಾದ ಅಲೋಚನೆ ಇದರ ಹಿಂದಿದೆ. ಸಾಲ ಮನ್ನಾಗಳ ಆಚೆಗೂ ಸರಕಾರ ರೈತರ ಬದುಕನ್ನು ಸಹನೀಯಗೊಳಲು ಯೋಜನೆಯೊಂದನ್ನು ರೂಪಿಸಬೇಕು ಎಂಬುದನ್ನೂ ಇದೇ ಸಮಯದಲ್ಲಿ ನೆನಪಿಸಿಕೊಳ್ಳಬೇಕಿದೆ.

ಈಗಾಗಲೇ ಕರ್ನಾಟಕವನ್ನೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು, ರೈತ ಪರ ಸಂಘಟನೆಗಳು ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಜಾರಿಗೆ ಆಗ್ರಹಿಸುತ್ತಿವೆ. ಸದ್ಯ ಉತ್ತರ ಭಾರತದ ರಾಜ್ಯಗಳಲ್ಲಿ ಇಂತಹದೊಂದು ಹೋರಾಟ ಜಾರಿಯಲ್ಲಿದೆ. ಎಲ್ಲರೂ ಸ್ವಾಮಿನಾಥನ್ ವರದಿ ಜಾರಿಗಾಗಿ ಆಗ್ರಹಿಸುತ್ತಿದ್ದಾರೆ.

ಏನಿದು ಸ್ವಾಮಿನಾಥನ್ ವರದಿ?:

ಎಮ್.ಎಸ್. ಸ್ವಾಮಿನಾಥನ್‌
ಎಮ್.ಎಸ್. ಸ್ವಾಮಿನಾಥನ್‌

‘ರೈತರಿಗಾಗಿ ರಾಷ್ಟ್ರೀಯ ಸಮಿತಿ’ (ಎನ್‌ಸಿಎಫ್‌) 2004, ನವೆಂಬರ್ 18ರಂದು ಅಸ್ಥಿತ್ವಕ್ಕೆ ಬಂತು. ಇದರ ಅಧ್ಯಕ್ಷರಾಗಿದ್ದವರು ಪ್ರೊ. ಎಂ. ಎಸ್. ಸ್ವಾಮಿನಾಥ್. ಈ ಸಮಿತಿ ದೇಶದ ಕೃಷಿ ಬಿಕ್ಕಟ್ಟುಗಳ ಕುರಿತು ನಾನಾ ಆಯಾಮಗಳನ್ನು ಅಧ್ಯಯನ ನಡೆಸಿ ಒಟ್ಟು ಐದು ವರದಿಗಳನ್ನು ಸರಕಾರಕ್ಕೆ ನೀಡಿತ್ತು. ಮೊದಲ ನಾಲ್ಕು ವರದಿಗಳು ಕ್ರಮವಾಗಿ ಡಿಸೆಂಬರ್ 2004, ಆಗಸ್ಟ್ 2005, ಡಿಸೆಂಬರ್ 2005 ಮತ್ತು ಏಪ್ರಿಲ್ 2006ರಲ್ಲಿ ಸಲ್ಲಿಕೆಯಾದವು. ಕೊನೆಯ ಹಾಗೂ ಅಂತಿಮ ವರದಿ ಅಕ್ಟೋಬರ್ 4, 2006ರಲ್ಲಿ ಸಲ್ಲಿಕೆಯಾಯಿತು.

ವರದಿಯು ರೈತರ ಆತ್ಮಹತ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿತ್ತು. ದೇಶದ ಕೃಷಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲು ಸಾಲು ರೈತಾಪಿ ನಂಬಿಕೊಂಡವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಭೂ ಸುಧಾರಣೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತಾರದೆ ಇರುವುದು, ನೀರಿನ ಲಭ್ಯತೆ, ತಂತ್ರಜ್ಞಾನದ ಅಲಭ್ಯತೆ ಸೇರಿದಂತೆ ಸಾಲ ಕೂಡ ಪ್ರಮುಖ ಕಾರಣಗಳು ಎಂದು ವರದಿ ಗುರುತಿಸಿತ್ತು.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಸಾಲ ಮನ್ನಾ ವಿಚಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ, ಸಣ್ಣ ಹಿಡುವಳಿದಾರರಿಗೆ ಸಕಾಲಕ್ಕೆ ಸಾಲ ನೀಡುವ ಅಗತ್ಯವಿದೆ ಎಂದು ಹೇಳಿತ್ತು. ಜತೆಗೆ ಕೆಳಕಂಡ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿತ್ತು:

1. ನಿಜವಾಗಿಯೂ ಸಣ್ಣ ರೈತರಿಗೆ ಹಾಗೂ ಅಗತ್ಯ ಇರುವವರಿಗೆ ಸಾಲ ನೀಡುವ ಯೋಜನೆಗಳನ್ನು ವಿಸ್ತರಿಸಬೇಕು.

2. ಸರಕಾರದ ಬೆಂಬಲದೊಂದಿಗೆ ಕೃಷಿ ಸಾಲದ ಬಡ್ಡಿ ದರವನ್ನು ಶೇ. 4ಕ್ಕೆ ಇಳಿಸಬೇಕು.

3. ಅತ್ಯಂತ ಸಂಕಷ್ಟದ ಸ್ಥಿತಿ ತಲುಪಿರುವ ಪ್ರದೇಶಗಳಲ್ಲಿ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಬೇಕು.

4. ನೈಸರ್ಗಿಕ ವಿಕೋಪಗಳಿಂದ ಹಾನಿಗೆ ಒಳಗಾದ ಕೃಷಿ ಬೆಳೆಗಳಿಗೆ ಪರಿಹಾರ ನೀಡಲು ‘ಅಗ್ರಿಕಲ್ಚರ್ ಡಿಸ್ಟ್ರೆಸ್‌ ಫಂಡ್’ ಸ್ಥಾಪಿಸಬೇಕು.

5. ರೈತರು, ಸಾಕು ಪ್ರಾಣಿಗಳು, ಬೆಳೆಗಳು ಸೇರಿದಂತೆ ಸಮಗ್ರ ವಿಮಾ ನೀತಿಯನ್ನು ಜಾರಿಗೆ ತರಬೇಕು. ಕೃಷಿ ವಿಮೆಯ ಕಂತು ಮೊತ್ತವನ್ನು ಕಡಿಮೆ ಮಾಡಬೇಕು.

ಹೀಗೆ, ಸ್ವಾಮಿನಾಥನ್ ಆಯೋಗ ಸಾಲ ಮನ್ನಾ ಆಚೆಗೆ ಕೃಷಿ ಕ್ಷೇತ್ರಕ್ಕಾಗಿ ದೂರಾಲೋಚನೆಯ ಯೋಜನೆಗಳನ್ನು ಶಿಫಾರಸು ಮಾಡಿದೆ. ಸ್ವಾಮಿನಾಥನ್ ವರದಿಯ ಬೆಳಕಿನಲ್ಲಿ ಈಗಾಗಲೇ ಘೋಷಿಸಿರುವ ‘ಷರತ್ತುಬದ್ಧ ಸಾಲ ಮನ್ನಾ’ ಯೋಜನೆಯನ್ನು ಇನ್ನಷ್ಟು ರೈತ ಸ್ನೇಹಿಯಾಗಿರುವ ಅವಕಾಶ ಸಿಎಂ ಕುಮಾರಸ್ವಾಮಿ ಮುಂದಿದೆ.