‘ಫಿಟ್‌ನೆಸ್‌ ಚಾಲೆಂಜ್‌’ ಅಗತ್ಯವೇ ಇಲ್ಲ ಅನ್ನುತ್ತಿದ್ದಾರೆ ಮನೆಗೆಲಸ ನಿರ್ವಹಿಸುವ ಈ ‘ದೇಶವಾಸಿ’ಗಳು!
COVER STORY

‘ಫಿಟ್‌ನೆಸ್‌ ಚಾಲೆಂಜ್‌’ ಅಗತ್ಯವೇ ಇಲ್ಲ ಅನ್ನುತ್ತಿದ್ದಾರೆ ಮನೆಗೆಲಸ ನಿರ್ವಹಿಸುವ ಈ ‘ದೇಶವಾಸಿ’ಗಳು!

‘ಫಿಟ್‌ನೆಸ್ ಚಾಲೆಂಜ್‌’ ಎಂಬ ಸಮೂಹ ಸನ್ನಿಯ ಹಿಂದೆ ಬಿದ್ದಿರುವ ಭಾರತದ ಸಲೆಬ್ರೆಟಿಗಳಿಗೆ, ಭಾರತಕ್ಕೆ ಅಗತ್ಯವಿರುವ ಫಿಟ್‌ನೆಸ್ ಯಾವುದು ಎನ್ನುವುದನ್ನು ಮನಗಾಣಿಸಬೇಕಿದೆ. ಆಗಷ್ಟೇ ಭಾರತ “ಫಿಟ್” ಆಗಿ ರೂಪುಗೊಳ್ಳಲು ಸಾಧ್ಯ.

ದೇಶದೆಲ್ಲೆಡೆ ಈಗ ಫಿಟ್‌ನೆಸ್‌ನದ್ದೇ ಸದ್ದು. ಸಲೆಬ್ರೆಟಿಗಳ ಗಮನವೆಲ್ಲಾ ಕಸರತ್ತುಗಳನ್ನು ನಡೆಸಿ, ಆ ಕಸರತ್ತುಗಳ ಫೋಟೋ, ವೀಡಿಯೋಗಳನ್ನು ಜಾಲತಾಣಗಳಲ್ಲಿ ಹಂಚಿ, “ಹಮ್ ಫಿಟ್‌ ಥೋ ಇಂಡಿಯಾ ಫಿಟ್‌” ಎಂದು ಪ್ರತಿಷ್ಠೆ ಮೆರೆಯುವ ಕಡೆಗಿದೆ. ಜತೆಗೆ ಇತರರಿಗೆ ಚಾಲೆಂಜ್‌ ಹಾಕುವ ಇರಾದೆ. ಪ್ರಖ್ಯಾತ ಕ್ರೀಡಾಪಟುಗಳ, ಹೆಸರಾಂತ ನಟ ನಟಿಯರ ‘ಫಿಟ್‌ನೆಸ್‌’ ವಿಡಿಯೋಗಳನ್ನು ಕಣ್ತುಂಬಿಕೊಳ್ಳುವ ಯವಜನತೆಗೆ ತಾವೂ ಹೀಗೆ ವೀಡಿಯೋ ಮಾಡಿ ಹಾಕುವ ಕನಸು.

ಆದರೆ ಇದ್ಯಾವುದರ ಅರಿವೂ ಇಲ್ಲದ ವರ್ಗ ನಮ್ಮ ನಡುವೆಯಿದೆ. ಅವರಲ್ಲೊಬ್ಬರ ಹೆಸರು ಲಕ್ಷ್ಮಿ. ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ಏಳುವ ಅವರು, ಮನೆಯಲ್ಲಿ ಬೆಳಗಿನ ಉಪಹಾರವನ್ನು ಸಿದ್ಧಪಡಿಸಿ, ಮನೆಯವರನ್ನು ಹಾಸಿಗೆಯಿಂದ ಎಬ್ಬಿಸಿ, ಮನೆ ಬಿಡುವ ಸಮಯಕ್ಕೆ ಗಂಟೆ 6:30ನ್ನು ತಲುಪಿರುತ್ತದೆ. ತಮ್ಮ ಮನೆಯಿಂದ ಹತ್ತಿರದಲ್ಲೇ ಇರುವ ಮನೆಯೊಂದಕ್ಕೆ ತೆರಳಿ, ಆ ಮನೆಯಲ್ಲಿ ಕೆಸ ಗುಡಿಸಲು ಆರಂಭಿಸುವ ಹೊತ್ತಿಗೆ ಗಂಟೆ 7 ಹೊಡೆದಿರುತ್ತದೆ. ಅಲ್ಲಿ ಕಸ ಗುಡಿಸಿ, ನೆಲವೊರೆಸಿ, ಪಾತ್ರೆ ತೊಳೆದಿಟ್ಟು ಹೊರಡುವ ವೇಳೆಗೆ 8 ಗಂಟೆ.

ಅಲ್ಲಿಂದ ಮತ್ತೊಂದು ಮನೆಯತ್ತ ಲಕ್ಷ್ಮಿ ಪಯಣ. ಅಲ್ಲಿಯೂ ಕೂಡ ಹಿಂದಿನ ಮನೆಯಲ್ಲಿಯೇ ಮಾಡಿದ ಕೆಲಸಗಳನ್ನು ಮಾಡಿ ಮುಗಿಸಬೇಕು. ಆ ಮನೆಯಲ್ಲೊಬ್ಬರು ವಯಸ್ಸಾದವರಿದ್ದು, ಸಕ್ಕರೆ ಕಾಯಿಲೆ ಇರುವುದರಿಂದ ಚಪಾತಿ ಬೇಯಿಸಿಕೊಡಬೇಕು. ಮನೆಯವರಿಗೆ ಮಕ್ಕಳಿಗೆ ಅಗತ್ಯವಿದ್ದರೆ ಬೆಳಗಿನ ಉಪಹಾರವನ್ನೂ ಸಿದ್ಧ ಪಡಿಸಿಬೇಕು. ಇಷ್ಟು ಮುಗಿಯುವ ವೇಳೆಗೆ ಮತ್ತೊಂದು ಮನೆಯವರು ಲಕ್ಷ್ಮಿಯ ಬರುವಿಕೆಗಾಗಿ ಕಾಯುತ್ತಿರುತ್ತಾರೆ.

ಎರಡು ಮನೆಗಳ ಕೆಲಸ ಮುಗಿಸಿ ಮೂರನೇ ಮನೆಯತ್ತ ತೆರಳುವಷ್ಟರಲ್ಲಿ ಸಮಯ 11 ಗಂಟೆಯ ಆಸುಪಾಸಿನಲ್ಲಿರುತ್ತದೆ. ಇಲ್ಲಿಯೂ ಕೂಡ ವಿಶೇಷ ಕೆಲಸಗಳೇನಿಲ್ಲ. ಹಿಂದಿನ ಮನೆಗಳಂತೆಯೇ ಕಸ ಗೂಡಿಸಿ, ನೆಲವೊರೆಸಿ, ಪಾತ್ರೆ ತೊಳೆಯಬೇಕು. ಕಲೆವೊಮ್ಮೆ ಬಟ್ಟೆಯನ್ನು ಒಗೆದು ಒಣಗಾಕಬೇಕು. ಊಟ ತಿಂಡಿಯ ಗೊಡವೆಯಿಲ್ಲ. ಇಷ್ಟು ಮುಗಿಸಿ ಮಗದೊಂದು ಮನೆಯತ್ತ ಪ್ರಯಾಣ.

ಮೂರು ಮನೆಗಳಲ್ಲಿ ಕಸ ಮುಸುರೆ ಮುಗಿ ನಾಲ್ಕನೇ ಮನೆಗೆ ಕಾಲಿಡುವ ಹೊತ್ತಿಗೆ ಸೂರ್ಯ ನೆತ್ತಿಯಿಂದ ಕೆಳಗಿಳಿದಿರುತ್ತಾನೆ. ನಾಲ್ಕನೇ ಮನೆ ತಲುಪಿದ ಕೂಡಲೇ ಕೆಲಸ ಆರಂಭವಾಗುತ್ತದೆ. ಇಲ್ಲಿ ಗುಡಿಸಿ, ಒರೆಸಿ, ಶುದ್ಧಗೊಳಿಸುವ ಕೆಲಸವೇನಿಲ್ಲ. ಮಧ್ಯಾಹ್ಯಕ್ಕೆ ಮತ್ತು ರಾತ್ರಿಗೆ ಅನ್ನ, ಸಾರು, ಎರಡು ಅಥವಾ ಮೂರು ರೀತಿಯ ಪಲ್ಯಗಳನ್ನು ಸಿದ್ಧಪಡಿಸಿಬೇಕು. ಅಲ್ಲಿಯೇ ಊಟ ಮುಗಿಸಿ ಹೊರಡುವ ವೇಳೆಗೆ ಮಧ್ಯಾಹ್ನ 3 ಗಂಟೆ ದಾಟಿರುತ್ತದೆ.

ಇನ್ನೊಂದೇ ಮನೆ ಬಾಕಿ. ಅದೂ ಕೂಡ ನಿತ್ಯ ಹೋಗಿ ಕೆಲಸ ಮಾಡಬೇಕಿಲ್ಲ. ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಹೋಗಿ ಬಟ್ಟೆ ಒಗೆದು, ಮನೆಯನ್ನು ಓರಣವಾಗಿಸಿ ಬರಬೇಕು. ಇದೆಲ್ಲಾ ಮುಗಿಯುವ ವೇಳೆಗೆ ಸಮಯ ಸರಿಯಾಗಿ ಸಂಜೆ 5ರ ಆಸುಪಾಸಿನಲ್ಲಿರುತ್ತದೆ. ತಮ್ಮ ಮನೆಗೆ ಹಿಂತಿರುಗಿದ ಮೇಲೆ ಕೂಡ ಬಿಡುವೇನು ಇರುವುದಿಲ್ಲ. ಇಲ್ಲಿಯೂ ಕೂಡ ಪಾತ್ರೆ ತೊಳೆಬೇಕಿರುತ್ತದೆ. ಕಸ ಗೂಡಿಸಿ, ಮನೆಯನ್ನು ಒಪ್ಪವಾಗಿಸಬೇಕಿರುತ್ತದೆ. ಬಟ್ಟೆಗಳಿದ್ದರೆ ಅವನ್ನೂ ಕೂಡ ಒಗೆದು ಹಾಕಬೇಕು. ತದ ನಂತರ ಕೆಲಹೊತ್ತು ಸಾವರಿಸಿಕೊಂಡು, ಟೀ ಮಾಡಿ ಸವಿಯುವ ವೇಳೆಗೆ ರಾತ್ರಿ ಊಟಕ್ಕೇನು ಎಂಬ ಚಿಂತೆ ಶುರುವಾಗುತ್ತದೆ.

ರಾತ್ರಿ ಅಡುಗೆಯೆಲ್ಲಾ ಮುಗಿಸಿ, ಮನೆಯವರೊಂದಿಗೆ ಕುಳಿತು ಊಟ ಮಾಡುವುದಷ್ಟೇ ಸ್ವಲ್ಪ ಖುಷಿಯನ್ನು ನೀಡುವ ವಿಷಯ. ರಾತ್ರಿ ಜಾಸ್ತಿ ಹೊತ್ತು ಹರಟುತ್ತಾ ಕುಳಿತುಕೊಳ್ಳುವಂತಿಲ್ಲ. ಬೆಳಗ್ಗೆ ಮತ್ತೆ ಬೇಗ ಎದ್ದು ಕೆಲಸಕ್ಕೆ ತೆರಳಬೇಕು. ಈ ವಿಷಯ ತಲೆಗೆ ಹೊಕ್ಕೊಡನೆ, ಬೆಳಗ್ಗೆಯಿಂದ ದುಡಿದ ಮೈಗೆ ಆಯಾಸವಂಟಿಕೊಂಡು ನಿದ್ರೆ ಆವರಿಸುತ್ತದೆ. ಹಾಸಿಗೆ ಮೇಲೆ ಮಲಗಿ ದಿಂಬಿಗೆ ತಲೆಯಿಡುವ ವೇಳೆಗೆ ರಾತ್ರಿ 10 ಗಂಟೆ ದಾಟಿರುತ್ತದೆ. ವಾರಕ್ಕೊಮ್ಮೆ ಬಿಡುವು ಸಿಗುತ್ತದೆ. ಅಂದಷ್ಟೇ ಮನೆ ಮಕ್ಕಳು ಎಂದು ಕಾಲ ಕಳೆಯಬಹುದು. ಕೆಲವೊಮ್ಮೆ ಅದೂ ಕೂಡ ಇರುವುದಿಲ್ಲ.

ಇದು ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸಿಸುತ್ತಿರುವ 45ರ ಆಸುಪಾಸಿನ ಗೃಹಿಣಿ ಲಕ್ಷ್ಮಿಯವರ ದಿನನಿತ್ಯದ ಕತೆ. ಐದು ಮನೆಗಳಲ್ಲಿ ಮನೆಗೆಲಸ ಮಾಡುವ ಲಕ್ಷ್ಮಿಯವರಿಗೆ ಸಾಮಾಜಿಕ ಆಗುಹೋಗುಗಳ ಬಗ್ಗೆ ಚಿಂತೆಯಿಲ್ಲ. ಅವರಿಗೆ ಅವರ ಕುಟುಂಬವನ್ನು ಗಟ್ಟಿಯಾಗಿ ಕಟ್ಟಿ ನಿಲ್ಲಿಸುವುದಷ್ಟೇ ಮುಖ್ಯ. ಇಷ್ಟೆಲ್ಲಾ ಕೆಲಸ ಮಾಡಿದರೂ ಕೂಡ ತಿಂಗಳಂತ್ಯದಲ್ಲಿ ಲಕ್ಷ್ಮಿ ಕೈಗೆ ದೊರೆಯುವುದು 10,000 ರೂಪಾಯಿಗಳು.

ಕೆಲವರು 5-6 ಮನೆಗಳಲ್ಲಿ ಕೆಲಸ ಮಾಡುತ್ತಾರೆ. 10 ರಿಂದ 12 ಸಾವಿರ ರೂಪಾಯಿಗಳು ಸಿಗುತ್ತದೆ. ನಾನು 5 ಮನೆಗಳಲ್ಲಿ ಕೆಸ ಮಾಡುತ್ತಿದ್ದೇನೆ. ಈಗ ಯಾವುದಾದರೂ ಮನೆಯಲ್ಲಿ ಕೆಲಸವನ್ನು ನಿಲ್ಲಿಸಬೇಕು ಎನ್ನಿಸುತ್ತಿದೆ. ದುಡ್ಡು ಕಡಿಮೆಯಾಗುತ್ತದೆ ನಿಜ. ಆದರೆ ನಮ್ಮ ಮನೆಯ ಕಡೆಗೂ ಗಮನ ಕೊಡಬೇಕಲ್ಲಾ?
ಲಕ್ಷ್ಮಿ, ಮನೆಗೆಲಸದ ಮೂಲಕ ಬದುಕು ಸಾಗಿಸುತ್ತಿರುವವರು.
ಸಾಂದರ್ಭಿಕ ಚಿತ್ರ. 
ಸಾಂದರ್ಭಿಕ ಚಿತ್ರ. 
livemint.com

ಲಕ್ಷ್ಮಿಯಂತೆಯೇ ಮನೆಗೆಲಸ ಮಾಡಿ ಬದುಕು ದೂಡುವ 2.5 ಕೋಟಿ ಮನೆಗೆಲಸದ ಹೆಂಗಸರ ಸಂಖ್ಯೆ ಭಾರತದಲ್ಲಿದೆ. ಪ್ರತಿನಿತ್ಯ ನಮ್ಮೆದುರೇ ಕಾಣಿಸಿಕೊಳ್ಳುತ್ತಿರುತ್ತಾರೆ. ನೆಲ ಗುಡಿಸುವುದು, ಒರೆಸುವುದು, ಪಾತ್ರೆ ತೊಳೆಯುವುದು, ಶೌಚಾಲಯವನ್ನು ಸ್ವಚ್ಛಗೊಳಿಸುವುದು, ಅಡಿಗೆ ಮಾಡುವುದು – ಹೀಗೆ ನಾನಾ ವಿಧದ ಕೆಲಸಗಳ ಜವಾಬ್ದಾರಿ ಅವರ ಮೇಲಿರುತ್ತದೆ.

ಕೆಲವರು ದಿನಪೂರ್ತಿ ಒಂದೇ ಮನೆಯಲ್ಲಿ ಕೆಲಸ ನಿರ್ವಹಿಸಿಸದರೆ, ಕೆಲವರು ಲಕ್ಷ್ಮಿಯಂತೆ ಹಲವಾರು ಮನೆಗಳ ಕೆಲಸ ಮಾಡುತ್ತಾರೆ. ಹಲವು ಮನೆಗಳಲ್ಲಿ 1 ಗಂಟೆ, 2 ಗಂಟೆ ಅಥವಾ ದಿನಕ್ಕಿಷ್ಟು ಸಮಯ ಎಂದು ಕಾರ್ಯ ನಿರ್ವಹಿಸುತ್ತಾರೆ. ಮನೆಯೊಂದರಿಂದ ಸುಮಾರು 1,500ದಿಂದ 2,000 ರೂಪಾಯಿಗಳವರೆಗೂ ಸಂಬಳ ದೊರೆಯುತ್ತದೆ. ದಿನಕ್ಕೆ 4 ಮನೆಗಳು ಎಂದರೆ 6ರಿಂದ 8,000 ರೂಪಾಯಿಗಳಷ್ಟು ಹಣ ಮನೆಗೆಲಸದ ಕಾರ್ಮಿಕರ ಕೈ ಸೇರುತ್ತದೆ. ಇದು ಒಂದು ತಿಂಗಳಿನ ಉದ್ದಕ್ಕೂ ಸೂರ್ಯ ಹುಟ್ಟುವುದಕ್ಕೂ ಮುಂಚಿನಿಂದಲೇ ಕೆಲಸ ಆರಂಭಿಸಿ, ಸಂಜೆಯವರೆಗೂ ದುಡಿಯುವುದಕ್ಕೆ ಸಿಗುವ ಪ್ರತಿಫಲ.

ಅಸಂಘಟಿತ ಕಾರ್ಮಿಕ ವಯಲಕ್ಕೆ ಸೇರುವ ಈ ಮನೆಗೆಲಸದ ಕಾರ್ಮಿಕರಿಗೆ ಯಾವ ಉದ್ಯೋಗ ಭದ್ರತೆಯೂ ಇಲ್ಲ. ಮಾಡುವ ಕೆಲಸಕ್ಕೆ ಮಾನ್ಯತೆಯೂ ಇಲ್ಲ. ಜತೆಗೆ ಮನೆ ಯಜಮಾನರ ಗುಮಾನಿಯ ನೆರಳಿನಲ್ಲಿ ನಿತ್ಯ ದುಡಿಯುವ ಈ ವರ್ಗದ ಬಹುಸಂಖ್ಯಾತರಿಗೆ ಫಿಟ್‌ನೆಸ್‌ ಚಾಲೆಂಜ್‌ ಬಗ್ಗಯ ಮಾಹಿತಿ ಇರಲಿ, ‘ಫಿಟ್‌ನೆಸ್‌’ ಪದದ ಪರಿಚಯವೂ ಇರಲಿಕ್ಕಿಲ್ಲ. ಈ ಪದಗಳನ್ನು ಪರಿಚಯಿಸಿಕೊಂಡು ಸಾಮಾಜಿಕ ಸಮೂಹ ಸನ್ನಿಯ ಜತೆ ಓಡುವ ಇರಾದೆಯೂ ಇವರಿಗಿಲ್ಲ. ಈ ಫಿಟ್‌ನೆಸ್ ಕಸರತ್ತುಗಳೆಲ್ಲಾ ಪೂರ್ತಿ ಅಥವಾ ಅರ್ಧಂಬರ್ಧ ಹೊಟ್ಟೆ ತುಂಬಿದವರ ಆಟಗಳು.

ಭಾರತದಲ್ಲಿ ಮನೆ ಕೆಲಸ ನಿರ್ವಹಿಸುತ್ತಿರುವವರ ಕುರಿತು ‘ಮೈಡ್‌ ಇನ್‌ ಇಂಡಿಯಾ’ ಪುಸ್ತಕವನ್ನು ರಚಿಸಿರುವ ಲೇಖಕಿ ತೃಪ್ತಿ ಲಹರಿ, ಹಿಂದೂಸ್ತಾನ್‌ ಟೈಮ್ಸ್ ಪತ್ರಿಕೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದರು.

ಮೈಡ್ ಇನ್ ಇಂಡಿಯಾ ಪುಸ್ತಕದ ಕವರ್ ಪೇಜ್. 
ಮೈಡ್ ಇನ್ ಇಂಡಿಯಾ ಪುಸ್ತಕದ ಕವರ್ ಪೇಜ್. 

ಅವರ ಪ್ರಕಾರ ಬಹುಪಾಲು ಮನೆಗೆಲಸದ ಕಾರ್ಮಿಕರು ಬಡತನ ರೇಖೆಗಿಂತ ಕೆಳಗಿವರು ಮತ್ತು ವಲಸಿಗರು. 1991ರ ವೇಳೆಗೆ ಸುಮಾರು 7.4 ಲಕ್ಷದಷ್ಟಿದ್ದ ಮನೆಗೆಲಸದ ಕಾರ್ಮಿಕರ ಸಂಖ್ಯೆ, 2001ರ ವೇಳೆಗೆ16.2 ಲಕ್ಷಕ್ಕೆ ಏರಿಕೆಯಾಗಿತ್ತು. ಇದರಲ್ಲಿ ಮಹಿಳೆಯರ ಸಂಖ್ಯೆ ಶೇ.75ಕ್ಕಿಂತಲೂ ಹೆಚ್ಚು.

ಮನೆಗೆಲಸ ನಿರ್ವಹಿಸುತ್ತಿರುವ ಮಹಿಳೆಯರಲ್ಲಿ ಬಹುಪಾಲು ಜನ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದರುವ ಭಾಗಗಳಿಂದ ಬಂದವರು. ಯಾವ ಕಾನೂನು ಕಟ್ಟಳೆಗಳನ್ನೂ ಅರಿಯದೆ, ಕೆಲಸವನ್ನರಸಿ ಊರಿಂದೂರಿಗೆ ವಲಸೆ ಹೋದವರು. ಸರಕಾರ ನಿಗಧಿ ಪಡಿಸಿರುವ ಕನಿಷ್ಟ ಕೂಲಿಯನ್ನೂ ಕೂಡ ಪಡೆಯದೇ, ಗೌರವಾದರಗಳಿಲ್ಲದೆ ಕೆಲಸ ನಿರ್ವಹಿಸುತ್ತಿರುವವರು. ಮಾನಸಿಕ, ದೈಹಿಕ ಹಿಂಸೆಯನ್ನು ಅನುಭವಿಸುತ್ತಲೇ ಬರುತ್ತಿರುವವರು.

ತೃಪ್ತಿ ಲಹರಿ ಹೇಳುವಂತೆ, 1931ರಲ್ಲಿ ನಡೆದ ಗಣತಿಯ ಪ್ರಕಾರ ಭಾರತದಲ್ಲಿ 27 ಲಕ್ಷ ಜನ ‘ಸೇವಕ’ರಾಗಿ ಕೆಲಸ ಮಾಡುತ್ತಿದರು. 1971ರ ವೇಳೆಗೆ ಈ ಸಂಖ್ಯೆ 67,000ಕ್ಕೆ ಕುಸಿದಿತ್ತು. 1991ರಿಂದ 2010ರ ದಶಕದಲ್ಲಿ ‘ಸೇವಕ’ರ ಸಂಖ್ಯೆ ಶೇ.120ರಷ್ಟು ಹೆಚ್ಚಾಗಿತ್ತು. 2011ರ ವೇಳೆಗೆ ದೇಶದೊಳಗಿನ ಒಟ್ಟು ಮನೆಗಲಸದ ಸೇವಕರ ಸಂಖ್ಯೆ ಸರಿಸುಮಾರು 2.5 ಕೋಟಿ. ಈ ಪೈಕಿ ಓದು ಬರಹ ಬಲ್ಲವರು ಕೆಲವರಷ್ಟೇ. ಈ ಮನೆಗೆಲಸದವರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದ್ದು ನಗರೀಕರಣ ಮತ್ತು ನಗರದ ಜನರ ಧಾವಂತದ ಬದುಕು.

ಭಾರತದಲ್ಲಿ ಹೀಗೆ ದೈಹಿಕ ‘ಫಿಟ್‌ನೆಸ್’ ಪರಿಕಲ್ಪನೆಯ ಹತ್ತಿರಕ್ಕೂ ಸುಳಿಯದೇ, ಆರ್ಥಿಕ ಹಾಗೂ ಕೌಟುಂಬಿಕ ಫಿಟ್‌ನೆಸ್‌ಗಾಗಿ ಬಡಿದಾಡುವವರ ಸಂಖ್ಯೆಯೇ ಹೆಚ್ಚು. ಈ ವರ್ಗದೊಳಗೆ ಮನೆಗೆಲಸದ ಕಾರ್ಮಿಕರು ಕೂಡ ಒಂದು ಭಾಗವಷ್ಟೇ.

ಅದೆಷ್ಟೋ ಪೌರ ಕಾರ್ಮಿಕರಿಗೆ ‘ಫಿಟ್‌ನೆಸ್‌’ ಎನ್ನುವುದು ನಿರ್ಲಕ್ಷ್ಯದ ಸಂಗತಿ. ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಅವರ ನಿತ್ಯದ ಕೆಲಸ ಮುಗಿಸಿ, ಮನೆಯತ್ತ ತೆರಳಿದರೆ ಸಾಕು ಎನ್ನಿಸಿರುತ್ತದೆ. ಕಟ್ಟಡ ಕಾರ್ಮಿಕರು ದಿನನಿತ್ಯ ಮಾಡುವ ಕೆಲಸ ಸೆಲೆಬ್ರೆಟಿಗಳು ವ್ಯಾಯಾಮ ಶಾಲೆಯಲ್ಲಿ ಮಾಡುವ ಕಸರತ್ತುಗಳಿಗೆ ಕಡಿಮೆಯೇನೂ ಇರುವುದಿಲ್ಲ.

ಸಫಾಯಿ ಕರ್ಮಚಾರಿಗಳು, ಮೂಟೆ ಹೊರುವವರು, ಕೃಷಿಕರು, ಕೃಷಿ ಕೂಲಿ ಕಾರ್ಮಿಕರು- ಹೀಗೆ ಹತ್ತು ಹಲವು ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರಿಗೆ ದೇಶದ ಪ್ರಧಾನಿ ಸೇರಿದಂತೆ ರಾಜಕಾರಣಿಗಳು, ಸಲೆಬ್ರೆಟಿಗಳ ಫಿಟ್‌ನೆಸ್‌ ಚಾಲೆಂಜ್‌ನ ಅಗತ್ಯವಿಲ್ಲ. ದೇಶದ ದುಡಿಯುವ ವರ್ಗಕ್ಕೆ ಈ ‘ಫಿಟ್‌ನೆಸ್‌’ ಬಿಡುಗಾಸಿನ ಲಾಭವನ್ನೂ ತಂದುಕೊಡುತ್ತಿಲ್ಲ.

ಇದ್ಯಾವುದನ್ನೂ ಕೂಡ ಚಿಂತಿಸದೇ ಸಮೂಹ ಸನ್ನಿಯಾಗಿರುವ ಫಿಟ್‌ನೆಸ್‌ ಹಿಂದೆ ಬಿದ್ದಿರುವ ಸೆಲೆಬ್ರೆಟಿಗಳು, ಕ್ರೀಡಾತಾರೆಗಳು, “ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌” ಎಂದು ಸ್ಟೇಟಸ್‌ಗಳನ್ನು ಹಾಕುತ್ತಿರುವುದು ಅವರ ಬೌದ್ಧಿಕ ಉಡಾಳತನವನ್ನು ತೋರಿಸುತ್ತಿದೆ. ಭಾರತ ಮೊದಲು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಫಿಟ್‌ ಆಗಿಬೇಕಿದೆ. ನಂತರದ ಮಾತು ದೈಹಿಕ ಫಿಟ್‌ನೆಸ್‌. ಭಾರತದಲ್ಲಿ ಮುನ್ನೆಲೆಯಲ್ಲಿದ್ದುಕೊಂಡು, ಸಮಾಜವನ್ನು ಅತಿಯಾಗಿ ಪ್ರಭಾವಿಸುವ ವ್ಯಕ್ತಿಗಳು ಈ ಕನಿಷ್ಟ ಸತ್ಯವನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರವೇ ಭಾರತ “ಫಿಟ್‌ನೆಸ್‌” ಸಾಧಿಸಲು ಸಾಧ್ಯವಾಗಬಹುದು.