samachara
www.samachara.com
ಕುಮಾರಸ್ವಾಮಿ ಅಂಗಳಕ್ಕೆ ‘ಫಿಟ್‌ನೆಸ್‌’ ಚೆಂಡು: ಏನಿದು ಸಾಮಾಜಿಕ ಸಮೂಹ ಸನ್ನಿ?  
COVER STORY

ಕುಮಾರಸ್ವಾಮಿ ಅಂಗಳಕ್ಕೆ ‘ಫಿಟ್‌ನೆಸ್‌’ ಚೆಂಡು: ಏನಿದು ಸಾಮಾಜಿಕ ಸಮೂಹ ಸನ್ನಿ?  

ಫಿಟ್ನೆಸ್ ಚಾಲೆಂಜ್ ಅನ್ನೋ ಸರಣಿ ಸಮೂಹ ಸನ್ನಿಯೊಂದು ರಾಜ್ಯದ ಪ್ರಭಾವಿ ವಲಯಕ್ಕೂ ಕಾಲಿಟ್ಟಿದೆ. ಇದರಿಂದ ಸದಾ ಪ್ರಚಾರ ಬಯಸುವ ವರ್ಗಕ್ಕೆ ಇನ್ನಷ್ಟು ಪ್ರಚಾರದಲ್ಲಿರಲು ನೆಪವೊಂದು ಸಿಕ್ಕಂತಾಗಿದೆ. 

ಕಳೆದೆರಡು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣಕ್ಕೆ ಕಾರಣವಾದ ‘ಫಿಟ್‌ನೆಸ್‌ ಚಾಲೆಂಜ್‌’ ಚೆಂಡು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಂಗಳಕ್ಕೆ ಬಂದು ನಿಂತಿತ್ತು. ಇದಕ್ಕೆ ಸೂಕ್ತ ರೀತಿಯಲ್ಲಿ ಕಿಕ್ ಮಾಡಿರುವ ಕುಮಾರಸ್ವಾಮಿ ಫಿಟ್‌ನೆಸ್‌ ಚಾಲೆಂಜ್‌ನ್ನು ರಾಜಕೀಯಕ್ಕೆ ತಿರುಗಿಸಿದ್ದಾರೆ.

ಪ್ರಧಾನಿ ಮೋದಿ, ಹಲವಾರು ಭಂಗಿಗಳಲ್ಲಿ ಯೋಗವನ್ನು ಮಾಡಿದ್ದು, ಆ ವೀಡಿಯೋವನ್ನು ಬುಧವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೋದಲ್ಲಿ ಪ್ರಧಾನಿ ಮೋದಿ ವೃತ್ತಾಕಾರದ ಹಾದಿಯಲ್ಲಿ ನಡೆದಿದ್ದು, ಪ್ರಕೃತಿಯ ಪಂಚತತ್ವಗಳಾದ ಭೂಮಿ, ಅಗ್ನಿ, ನೀರು, ವಾಯು ಮತ್ತು ಆಕಾಶಗಳ ಹೆಸರನ್ನು ತಮ್ಮ ಟ್ವಿಟ್‌ನಲ್ಲಿ ಸೇರಿಸಿದ್ದಾರೆ. ಇದರ ಜತೆಗೆ ಹಲವು ಪ್ರಕಾರದ ಯೋಗಗಳನ್ನೂ ಕೂಡ ಮೋದಿ ಮಾಡಿದ್ದಾರೆ.

ಈಗ ಮುಂದಿನ ಸರದಿಯಾಗಿ ಮೋದಿ ಸೂಚಿಸಿದ್ದು ಕರ್ನಾಟಕದ ನೂತನ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರನ್ನು. ತಮ್ಮ ಫಿಟ್‌ನೆಸ್‌ ಚಾಲೆಂಜ್‌ಅನ್ನು ಸ್ವೀಕರಿಸುವಂತೆ ಮೋದಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಭಾರತದ ಪ್ರಖ್ಯಾತ ಟೆಬಲ್‌ ಟೆನ್ನಿಸ್ ತಾರೆ ಮಣಿಕಾ ಭಾತ್ರಾರನ್ನು ಆಹ್ವಾನಿಸಿದ್ದಾರೆ. ಇವರಿಬ್ಬರಿಗೆ ಅಷ್ಟೇ ಅಲ್ಲದೇ ಮೋದಿ, 40 ವರ್ಷ ಮೇಲ್ಪಟ್ಟ ಪೊಲೀಸ್‌ ಅಧಿಕಾರಿಗಳಿಗೂ ಕೂಡ ಚಾಲೆಂಜ್‌ಅನ್ನು ಎಸೆದಿದ್ದಾರೆ.

ಪ್ರಧಾನಿ ಮೋದಿಯ ಫಿಟ್‌ನೆಸ್‌ ಕರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಟ್ಟಿರುವ ಉತ್ತರ ಸ್ವಲ್ಪ ಖಾರವಾಗಿಯೇ ಇದೆ. ಟ್ವಿಟರ್‌ ಪೋಸ್ಟ್‌ಗೆ ಟ್ವಿಟರ್‌ಲ್ಲೇ ಉತ್ತರ ನೀಡಿರುವ ಕುಮಾರಸ್ವಾಮಿ, “ಯೋಗ ತನ್ನ ದಿನನಿತ್ಯದ ಕೆಲಸಗಳಲ್ಲಿ ಒಂದು,” ಎಂದಿದ್ದಾರೆ. ತಾನು “ತನ್ನ ರಾಜ್ಯದ ಅಭಿವೃದ್ಧಿಯ ಫಿಟ್‌ನೆಸ್ ಕಡೆಗೆ ಹೆಚ್ಚು ಆಸಕ್ತಿನಾಗಿದ್ದು ಇದಕ್ಕೆ ತಮ್ಮ ಸಹಕಾರವೂ ಬೇಕು” ಎಂದು ಪ್ರತ್ಯುತ್ತರ ನೀಡಿದ್ದಾರೆ.

ಪ್ರಧಾನಿ ಮೋದಿಯವರ ಫಿಟ್‌ನೆಸ್‌ ಚಾಲೆಂಜ್‌ಅನ್ನು ಒಪ್ಪಿಕೊಂಡಿರುವ ಟಿನಿಸ್‌ ತಾರೆ ಮಣಿಕಾ ಭಾತ್ರಾ, ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕೇವಲ ಕ್ರೀಡಾಪಟುಗಳಷ್ಟೇ ಅಲ್ಲದೇ, ಎಲ್ಲರೂ ಕೂಡ ಫಿಟ್‌ನೆಸ್‌ನಲ್ಲಿ ತೊಡಗಿಕೊಳ್ಳಬೇಕು ಎಂದು ಮಾಣಿಕಾ ಭಾತ್ರಾ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಮಾರ್ಚ್‌ ತಿಂಗಳಿನಲ್ಲಿ ಪ್ರಧಾನಿ ಮೋದಿ ತಮ್ಮ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ “ಫಿಟ್‌ ಇಂಡಿಯಾ’ ಪದವನ್ನು ಬಳಸಿದ್ದರು. “ಕ್ಲೀನ್‌ ಇಂಡಿಯಾ ಹಾಗೂ ಹೆಲ್ದಿ ಇಂಡಿಯಾಗಳ ಮಧ್ಯೆ ಸಂಬಂಧವಿದೆ. ಆರೋಗ್ಯದ ವಿಷಯದಲ್ಲಿ ದೇಶ ಮುಂದೆ ಸಾಗುತ್ತಿದೆ. ಹಿಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲದಕ್ಕೂ ಕೂಡ ಕೇಂದ್ರ ಆರೋಗ್ಯ ಸಚಿವಾಲಯವೇ ಜವಾಬ್ದಾರಿಯಾಗುತ್ತಿತ್ತು. ಆದರೆ ಈಗ ಎಲ್ಲಾ ಇಲಾಖೆಗಳು, ರಾಜ್ಯ ಸರಕಾರಗಳು ಒಟ್ಟಾಗಿ ಹೆಲ್ದಿ ಇಂಡಿಯಾಗಾಗಿ ದುಡಿಯುತ್ತಿವೆ,” ಎಂದು ಹೇಳಿದ್ದರು.

ಈ ಹೇಳಿಕೆಯನ್ನು ನೀಡಿದ ಕೆಲವೇ ಹೊತ್ತಿನಲ್ಲಿ ಮೋದಿ ಯೋಗಾಸನದಲ್ಲಿ ತೊಡಗಿದ್ದ ವೀಡಿಯೋವೊಂದು ಯುಟೂಬ್‌ನಲ್ಲಿ ಅಪ್‌ಲೋಡ್‌ ಆಗಿತ್ತು.

ಎಲ್ಲಿಂದ ಪ್ರಾರಂಭವಾಯಿತು ಈ ಫಿಟ್‌ನೆಸ್ ಚಾಲೆಂಜ್‌?:

ದೇಶದಲ್ಲಿ ಮೊದಲು ಫಿಟ್‌ನೆಸ್‌ ಚಾಲೆಂಜ್‌ಅನ್ನು ಅರಂಭಿಸಿದ್ದು ಕೇಂದ್ರ ಮಾಹಿತಿ ತಂತ್ರಜ್ಞಾನ, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್. ಒಲಂಪಿಕ್‌ ಕ್ರೀಡಾಕೂಟದಲ್ಲಿ ಪದಕವನ್ನು ಗೆದ್ದಿದ್ದ ರಾಥೋಡ್‌, ಮಾರ್ಚ್‌ 22ರಂದು ತಮ್ಮ ಕಚೇರಿಯ ನೆಲದ ಮೇಲೆ ವ್ಯಾಯಾಮ ಮಾಡಿ, ಆ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಸೆಲೆಬ್ರಿಟಿಗಳಿಗೆ ತಮ್ಮಗಳ ಫಿಟ್‌ನೆಸ್‌ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು.

ಈ ವೀಡಿಯೋ ಜತೆಗೆ ರಾಜ್ಯವರ್ಧನ ಸಿಂಗ್‌ ರಾಥೋಡ್‌, ಭಾರತೀಯ ಕ್ರಿಕೆಟ್‌ ತಂಡನ ನಾಯಕ ವಿರಾಟ್‌ ಕೂಹ್ಲಿ, ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಮತ್ತು ಕ್ರೀಡಾಪಟು ಸೈನಾ ನೆಹ್ವಾಲ್‌ರನ್ನು ಚಾಲೆಂಜ್‌ ಸ್ವೀಕರಿಸುವಂತೆ ಆಹ್ವಾನಿಸಿದ್ದರು.

ಅಲ್ಲಿಂದ #FitnessChallenge ಮತ್ತು # #HumFitTohIndiaFit ಹೆಸರಿನಲ್ಲಿ ಹ್ಯಾಷ್‌ ಟ್ಯಾಗ್‌ ಟ್ರೆಂಡಿಂಗ್‌ ಶುರುವಾಗಿತ್ತು. ದೇಶದ ಜನರ ಗಮನವನ್ನು ತನ್ನತ್ತ ಸೆಳೆದಿತ್ತು.

ಕೇಂದ್ರ ಸಚಿವರ ಆಹ್ವಾನವನ್ನು ಸ್ವೀಕರಿಸಿ ಫಿಟ್‌ನೆಸ್‌ ಚಾಲೆಂಜ್‌ ಒಪ್ಪಿಕೊಂಡ ವೀರಾಟ್‌ ಕೋಹ್ಲಿ, ಭಾರತದ ಪ್ರಧಾನಿ ಮೋದಿಗೆ ಸವಾಲು ಎಸೆದಿದ್ದರು. ಹೃತಿಕ್‌ ರೋಷನ್‌ ಸೈಕಲ್‌ ತುಳಿದು ಸವಾಲನ್ನು ಪೂರ್ಣಗೊಳಿಸಿದ್ದರು.

ಸೈನಾ ನೆಹ್ವಾಲ್‌, ಪಿ.ಟಿ.ಉಷಾ, ನಿತಿಕಾ ಶರ್ಮ, ಅನುಷ್ಕಾ ಶರ್ಮಾ, ಸುಪ್ರಭಾ ರಾಯ್‌, ಸೌಮ್ಯ ತಂಡೋನ್‌, ಪಿವಿ ಸಿಂದು, ಮಿತಾಲಿ ರಾಜ್‌, ಅಮಿತಾಬ್‌ ಬಚ್ಚನ್‌, ಮೇಜರ್‌ ಸುರೇಂದ್ರ ಪೂನಿಯಾ ಸೇರಿದಂತೆ ದೇಶದ ಪ್ರಮುಖ ನಟರು ಹಾಗೂ ಕ್ರಿಡಾಪಟುಗಳು ಈ ಫಿಟ್‌ನೆಸ್‌ ಚಾಲೆಂಜ್ಅನ್ನು ಒಪ್ಪಿಕೊಂಡಿದ್ದರು. ತಮ್ಮ ಫಿಟ್‌ನೆಸ್‌ ಕಸರತ್ತುಗಳ ವೀಡಿಯೋಗಳನ್ನು ಟ್ವಿಟ್ಟರ್‌ ಖಾತೆ ಮೂಲಕ ಹಂಚಿಕೊಂಡಿದ್ದರು.

ಕರ್ನಾಟಕದಲ್ಲಿ ಫಿಟ್‌ನೆಸ್‌ ಚಾಲೆಂಜ್‌:

ರಾಜ್ಯವರ್ಧನ ಸಿಂಗ್‌ ರಾಥೋಡ್‌ ಹುಟ್ಟುಹಾಕಿದ ಈ ಫಿಟ್‌ನೆಸ್‌ ಹವಾ ದೇಶದ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಸದ್ದು ಮಾಡಿತು. ಬಾಲಿವುಡ್‌ಅನ್ನು ಸುತ್ತವರಿದು ಸ್ಯಾಂಡಲ್‌ವುಡ್‌ಗೂ ಕೂಡ ಕಾಲಿಟ್ಟಿತ್ತು.

ಕ್ರಿಕೆಟಿಗ ವಿನಯ್‌ ಕುಮಾರ್‌ ಕಿಚ್ಚ ಸುದೀಪ್‌ಗೆ ಸವಾಲು ಹಾಕಿದ್ದರು. ಜಿಮ್‌ ಒಂದರಲ್ಲಿ ನಡೆಸಿದ ತಮ್ಮ ಕಸರತ್ತುಗಳನ್ನು ಪೋಸ್ಟ್‌ ಮಾಡಿದ್ದ ಕಿಚ್ಚ ಸುದೀಪ್‌, ಶಿವರಾಜ್‌ಕುಮಾರ್‌, ಯಶ್‌ ಮತ್ತು ತಮ್ಮ ಪತ್ನಿಗೆ ಸವಾಲೆಸೆದಿದ್ದರು.

ನಂತರ ಕನ್ನಡ ಚಿತ್ರರಂಗದ ಸಾಲು ಸಾಲು ನಟರು ಈ ಫಿಟ್‌ನೆಸ್‌ ಹಿಂದೆ ಬಿದ್ದಿದ್ದರು. ಶಿವರಾಜ್‌ ಕುಮಾರ್‌, ಯಶ್‌, ಪ್ರಿಯಾಮಣಿ, ಗಣೇಶ್‌, ದಿಗಂತ್‌, ಹರ್ಷಿಕಾ ಪೂಣಚ್ಚ, ಹಿತಾ ಚಂದ್ರಶೇಖರ್, ಅನುಪಮಾ ಗೌಡ, ಪುನಿತ್‌ ರಾಜ್‌ಕುಮಾರ್‌, ರಕ್ಷಿತ್‌ ಶೆಟ್ಟಿ, ಧೃವ ಸರ್ಜಾ, ಶ್ರೀಮುರುಳಿ, ಜಗ್ಗೇಶ್‌ ಸೇರಿದಂತೆ ಇನ್ನೂ ಹಲವು ಸ್ಯಾಂಡಲ್‌ವುಡ್‌ ನಟ ನಟಿಯರ ಹೆಸರು ಫಿಟ್‌ನೆಸ್‌ ಚಾಲೆಂಜ್‌ ಜತೆ ಕೇಳಿಬಂದಿತ್ತು.

ಫಿಟ್‌ನೆಸ್‌ ಚಾಲೆಂಜ್‌ಗೆ ರಾಜಕೀಯ ಬಣ್ಣ:

ಕೇಂದ್ರ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಈ ಫಿಟ್‌ನೆಸ್‌ ಚಾಲೆಂಜ್‌ ಎಸೆದಾಗ ಅದು ಸದ್ದು ಮಾಡಿತ್ತಾದರೂ ರಾಜಕೀಯವಾಗಿ ತಿರುವು ಪಡೆದಿರಲಿಲ್ಲ. ಪ್ರಧಾನಿ ಮೋದಿ ವಿರಾಟ್‌ ಕೋಹ್ಲಿಯವರ ಸವಾಲನ್ನು ಸ್ವೀಕರಿಸಿ, “ಕೆಲವೇ ದಿನಗಳನ್ನು ವಿಡಿಯೋ ಹಾಕುತ್ತೇನೆ” ಎಂದು ತಿಳಿಸಿದಾಗಿನಿಂದ ಈ ಫಿಟ್‌ನೆಸ್‌ ಚಾಲೆಂಜ್‌ ರಾಜಕೀಯ ಬಣ್ಣವನ್ನು ಬಳಿದುಕೊಂಡಿದೆ.

ವಿರಾಟ್‌ ಕೋಹ್ಲಿ ಚಾಲೆಂಜ್‌ಗೆ ಉತ್ತರಿಸಿದ್ದ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದರು. ‘ನೀವು ಕೋಹ್ಲಿಯ ಚಾಲೆಂಜ್‌ ಸ್ವೀಕರಿಸಿದ್ದಕ್ಕೆ ಸಂತೋಷವಾಯಿತು. ನನ್ನದೂ ಒಂದು ಚಾಲೆಂಜ್‌ ಇದೆ. ತೈಲೆ ಬೆಲೆಯನ್ನು ಕಡಿಮೆ ಮಾಡಿ. ಇಲ್ಲವಾದರೆ ಕಾಂಗ್ರೆಸ್‌ ಪಕ್ಷದಿಂದ ದೇಶಾದ್ಯಂತ ಪ್ರತಿಭಟನೆ ನಡೆಸಿ ತೈಲಬೆಲೆಯನ್ನು ಕಡಿಮೆ ಮಾಡುವಂತೆ ಮಾಡುತ್ತೇವೆ’ ಎಂದು ರಾಹುಲ್‌ ಮೋದಿಯನ್ನು ಕುಟುಕಿದ್ದರು.

ಈ ಚಾಲೆಂಜ್‌ ರಾಜಕೀಯ ಇಲ್ಲಿಗೆ ನಿಲ್ಲದೇ, ಈಗ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಕೃಷಿ ಸಂಕಷ್ಟ, ರಾಷ್ಟ್ರೀಯ ಭದ್ರತೆಯಿಂದ ಹಿಡಿದು ಪ್ರತಿ ಭಾರತೀಯನ ಬ್ಯಾಂಕ್‌ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮೆ ಮಾಡುವವರೆಗೆ ವಿವಿಧ ಸವಾಲು ಸ್ವೀಕರಿಸುವಂತೆ ವಿರೋಧ ಪಕ್ಷಗಳ ಮುಖಂಡರು ಪ್ರಧಾನಿಗೆ ಸವಾಲು ಒಡ್ಡಿದ್ದರು.

ಕಾಂಗ್ರೆಸ್‌ ಮುಖಂಡ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿ, “ಮಾಧ್ಯಮ ಚಮತ್ಕಾರಗಳನ್ನು ನಿಲ್ಲಿಸಿ, ಆಡಳಿತ ಸವಾಲುಗಳನ್ನು ಸ್ವೀಕರಿಸಿ,” ಎಂದಿದ್ದರು. ಕಾಂಗ್ರೆಸ್‌ ವಕ್ತಾರ ಸಂಜಯ್‌ ಝಾ ತಮ್ಮ ಪದವಿ ಪ್ರಮಾಣ ಪತ್ರವನ್ನು ಟ್ವಿಟ್‌ ಮಾಡಿ, ನಿಮ್ಮ ಪ್ರಮಾಣಪತ್ರವನ್ನು ಪ್ರದರ್ಶಿಸುವಂತೆ ಮೋದಿಗೆ ಸವಾಲು ಹಾಕಿದ್ದರು.

ಜಿಡಿಯು ನಾಯಕ ಶರದ್‌ ಯಾದವ್‌ ಅಧಿಕಾರಕ್ಕೆ ಏರುವುದಕ್ಕೂ ಮುಂಚೆ ನೀಡಿದ್ದ 15 ಲಕ್ಷ ರುಪಾಯಿಗಳನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡುವುದರ ಕುರಿತು ಮೋದಿಯವರಿಗೆ ನೆನಪು ಮಾಡಿದ್ದರು. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ತೂತುಕುಡಿಯಲ್ಲಿ ಪೋಲಿಸರ ಗುಂಡಿಗೆ ಬಲಿಯಾದ 11 ಮಂದಿಯನ್ನು ತಮ್ಮ ಟ್ವೀಟ್‌ ಮಧ್ಯೆ ಪ್ರಸ್ತಾಪಿಸಿ, ‘ಅನುಕಂಪದ ಸವಾಲು ಸ್ವೀಕರಿಸಿ’ ಎಂದಿದ್ದರು.

ಹೀಗೆ ವಿರೋಧ ಪಕ್ಷಗಳ ನಾಯಕರ ಸರಣಿ ಟ್ವೀಟ್‌ಗಳು ಉದ್ಯೋಗ, ಸಾಲಮನ್ನಾ, ದಲಿತ ಮತ್ತು ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಿಂಸೆ, ಇತ್ಯಾದಿ ದೇಶದೊಳಗಿನ ಜ್ವಲಂತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ್ದವು.

ಈಗ ಮತ್ತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಫಿಟ್‌ನೆಸ್‌ ಚಾಲೆಂಜ್‌ಗೆ ರಾಜಕೀಯ ಬಣ್ಣ ನೀಡಿದ್ದಾರೆ. ತನ್ನ ದೈಹಿಕ ಫಿಟ್‌ನೆಸ್‌ಗಿಂತ ರಾಜ್ಯದ ಅಭಿವೃದ್ಧಿಯ ಫಿಟ್‌ನೆಸ್‌ ಮುಖ್ಯ ಎಂದಿರುವ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಕುಟುಕಿದ್ದಾರೆ. ಈಗಾಗಲೇ ಕುಮಾರಸ್ವಾಮಿಯವರ ಪೋಸ್ಟ್‌ ಕುರಿತು ಹಲವಾರು ಅಭಿಪ್ರಾಯಗಳ ವ್ಯಕ್ತವಾಗಿವೆ. ಕೆಲವರು ಕುಮಾರಸ್ವಾಮಿ ಪರ ಮಾತನಾಡಿದರೆ, ಮತ್ತೆ ಹಲವರು ಪ್ರಧಾನಿ ಮೋದಿ ಪರ ಬ್ಯಾಟಿಂಗ್‌ ನಡೆಸಿದ್ದಾರೆ. ವೈಯಕ್ತಿಕ ವಿಷಯಗಳಿಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ ಎಂಬ ಆರೋಪಗಳೂ ಕೂಡ ಕೇಳಿ ಬಂದಿವೆ.

ಒಟ್ಟಾರೆಯಾಗಿ ದೇಶದ ಜ್ವಲಂತ ಸಮಸ್ಯೆಗಳ ಕುರಿತು ನಡೆಯಬೇಕಿದ್ದ ಚರ್ಚೆಯ ಸಮಯವನ್ನು ಈ ಫಿಟ್‌ನೆಸ್‌ ಚಾಲೆಂಜ್‌ ನುಂಗಿ ಹಾಕುತ್ತಿದೆ. ದೇಶದ ಜನತೆಯ ಯೋಚನೆಯನ್ನು ಮೈ ಪಳಗಿಸುವುದರ ಕಡೆಗೆ ಸೆಳೆಯುತ್ತಿದೆ. ಚಾಲೆಂಜ್‌ ಹಾಕುವವರು ಹಾಗೂ ಸ್ವೀಕರಿಸುವವರು ಚಾಲೆಂಜ್‌ಗೆ ಮುಂದಾಗುವುದರಿಂದ ದೇಶಕ್ಕೆ ಲಾಭ ಆಗುತ್ತಿದೆಯೋ ಇಲ್ಲವೋ, ಪ್ರಚಾರ ಬಯಸುವವರಿಗೆ ನೆಪವೊಂದು ಸೃಷ್ಟಿಯಾದಂತಾಗಿದೆ. ಮತ್ತು, ಇಂತಹ ಸಮೂಹ ಸನ್ನಿ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಆವರಿಸಿಕೊಳ್ಳುವ ಇಂತಹ ಚಾಲೆಂಜ್‌ಗಳ ಒಟ್ಟಾರೆ ಲಾಭ ಆಗುವುದು ಟ್ವಿಟರ್ ಹಾಗೂ ಫೇಸ್‌ಬುಕ್‌ನಂತಹ ಸಂಸ್ಥೆಗಳಿಗೆ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಜನರಿಗೆ ಇದರಿಂದ ಏನು ಲಾಭ? ನೀವೇ ಕೇಳಿಕೊಳ್ಳಬೇಕಿದೆ.