samachara
www.samachara.com
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶ್ರೀರಾಮ ಸೇನೆ ಬುಡಕ್ಕೆ ಬಂದು ನಿಂತ ಎಸ್‌ಐಟಿ ತನಿಖೆ
COVER STORY

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶ್ರೀರಾಮ ಸೇನೆ ಬುಡಕ್ಕೆ ಬಂದು ನಿಂತ ಎಸ್‌ಐಟಿ ತನಿಖೆ

ಹೆಚ್ಚು ಕಡಿಮೆ ಎಲ್ಲಾ ಪ್ರಕರಣಗಳ ಹಾದಿಯಲ್ಲಿ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಪ್ರಕರಣ ಕೂಡ ಸಾಗುತ್ತಿದೆ. ನ್ಯಾಯಾಲಯಕ್ಕಿಂತ ಮುಂಚೆಯೇ ಸಾಮಾಜಿಕ ನ್ಯಾಯದಾನದ ಉನ್ಮಾದ ಎಲ್ಲಾ ಕಡೆ ಕಂಡು ಬರುತ್ತಿದೆ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ, ರಾಜ್ಯದಲ್ಲಿ ಹೋರಾಟದ ಕಿಡಿಯನ್ನು ಹೊತ್ತಿಸಿದ ಪತ್ರಕರ್ತೆ- ಹೋರಾಟಗಾರ್ತಿಯ ಹತ್ಯೆ ಪ್ರಕರಣದಲ್ಲಿ ಸಾಲು ಸಾಲು ಬಂಧನಗಳ ಸುದ್ದಿಗಳು ಹೊರಬೀಳುತ್ತಿವೆ. ಸೆ. 5, 2017ರ ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಟೌನ್‌ಶಿಫ್‌ನ ಮನೆ ನಂಬರ್ 476/ ಎ ಮುಂದೆ ಗೌರಿ ಹೆಣ ಬಿದ್ದಿತ್ತು. ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ 8. 26ಕ್ಕೆ ಮಾಹಿತಿ ಸಿಕ್ಕಿತ್ತು.

ಹಾಗೆ ಆರಂಭಗೊಂಡ ಹತ್ಯೆ ಪ್ರಕರಣದ ತನಿಖೆ ಈಗ ಶ್ರೀರಾಮ ಸೇನೆ ಬುಡಕ್ಕೆ ಬಂದು ನಿಂತಿದೆ. ಸೈದ್ಧಾಂತಿಕ ವಿರೋಧದ ಹಿನ್ನೆಲೆಯಲ್ಲಿ ಗೌರಿ ಕೊಲೆಯಾಗಿರಬಹುದು ಎಂಬುದು ಸಾಮಾಜಿಕ ಸಂದೇಹವಾಗಿತ್ತು. ತನಿಖೆ ಹಲವು ದಿಕ್ಕಿನಲ್ಲಿ ನಡೆಯಿತಾದರೂ, ಕೊನೆಗೆ ಒಡನಾಡಿಗಳ ಸಂಶಯಕ್ಕೆ ಪೂರಕ ಸಾಕ್ಷಿಗಳನ್ನು ಹೊತ್ತು ತಂದಿದೆ. ಸಿಂಧಗಿಯಲ್ಲಿ ಸೈಬರ್ ಕೆಫೆಯೊಂದನ್ನು ಇಟ್ಟುಕೊಂಡಿದ್ದ 26 ವರ್ಷದ ಯುವಕ ಅಶೋಕ್ ವಾಘ್ಮೋರೆಯನ್ನು ಎಸ್‌ಐಟಿ ಬಂಧಿಸಿದೆ. ಈತ ಶ್ರೀರಾಮ ಸೇನೆಯ ಕಾರ್ಯಕರ್ತ ಎಂದು ‘ಪ್ರಜಾವಾಣಿ’ ವರದಿ ಹೇಳಿದೆ. ಇದರ ಜತೆಗೆ ಇನ್ನೂ, ನಾಲ್ವರ ಬಂಧನಗಳು ನಡೆದಿವೆ.

“ಅಶೋಕ್ ವಾಘ್ಮೋರೆಗೂ ಶ್ರೀರಾಮ ಸೇನೆಗೂ ಸಂಬಂಧ ಇಲ್ಲ. ಆತ ನಮ್ಮ ಕಾರ್ಯಕರ್ತ ಅಲ್ಲ. ಯಾಕೆಂದರೆ ಶ್ರೀರಾಮ ಸೇನೆಯಲ್ಲಿ ಸದಸ್ಯತ್ವ ನೀಡುವ, ಗುರುತಿನ ಚೀಟಿ ನೀಡುವ ಪದ್ಧತಿ ಇಲ್ಲ. ಎಸ್‌ಐಟಿ ಕೂಡ ಎಲ್ಲಿಯೂ ಅಶೋಕ್ ಶ್ರೀರಾಮ ಸೇನೆ ಕಾರ್ಯಕರ್ತ ಎಂದು ಹೇಳಿಲ್ಲ. ಆದರೆ ಮಾಧ್ಯಮಗಳು ಅನಾವಶ್ಯಕವಾಗಿ ನಮ್ಮ ಸಂಘಟನೆಯ ಹೆಸರನ್ನು ಎಳೆದು ತರುತ್ತಿವೆ,’’ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳುತ್ತಾರೆ.

‘ಸಮಾಚಾರ’ದ ಜತೆ ಗೌರಿ ಹತ್ಯೆ ಪ್ರಕರಣದ ಪ್ರಗತಿ ಕುರಿತು ಮಾತನಾಡಿದ ಅವರು, “ಪ್ರಕರಣದಲ್ಲಿ ನ್ಯಾಯಬದ್ಧವಾಗಿ ತನಿಖೆ ನಡೆಯಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಅದಕ್ಕೂ ಮುಂಚೆ ತೇಜೋವಧೆಗಳು ನಡೆಯದಿರಲಿ,’’ ಎಂದರು.

ನ್ಯಾಯಬದ್ಧ ತನಿಖೆ?:

ಗೌರಿ ಲಂಕೇಶ್ ಜತೆಗೆ ಸೈದ್ಧಾಂತಿಕ ವಿರೋಧ ಇಟ್ಟುಕೊಂಡವರು ಪ್ರಮೋದ್ ಮುತಾಲಿಕ್. ಅವರೂ ಕೂಡ ಈ ಪ್ರಕರಣದಲ್ಲಿ ನ್ಯಾಯ ಬದ್ಧ ತನಿಖೆ ನಡೆಯಲಿ ಎಂದು ಹೇಳುತ್ತಿದ್ದಾರೆ. ಗೌರಿ ಒಡನಾಡಿಗಳೂ ಪಾರದರ್ಶಕವಾಗಿರುವ ತನಿಖೆಗಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಕಳೆದ ಗೌರಿ ಲಂಕೇಶ್ ಹತ್ಯಾ ಪ್ರಕರಣದ ವಿಚಾರಣೆಗೆ ನೇಮಕಗೊಂಡ ವಿಶೇಷ ತನಿಖಾ ತಂಡ ನ್ಯಾಯಬದ್ಧ ವಿಚಾರಣೆ ನಡೆಸಿದೆಯಾ?

“ಈ ಪ್ರಕರಣ ಅಂತಲ್ಲ, ಯಾವುದೇ ಪ್ರಕರಣಗಳಾದರೂ ತನಿಖೆ, ವಿಚಾರಣೆ ನಡೆಯುವ ರೀತಿ ಹೀಗೇ ಇರುತ್ತದೆ. ಪೊಲೀಸರ ತನಿಖೆಯ ಬಗ್ಗೆ ಮಾಧ್ಯಮಗಳಲ್ಲಿಯೇ ವಿಚಾರಣೆ ಆರಂಭವಾಗುತ್ತದೆ. ನ್ಯಾಯಾಲಯದ ತೀರ್ಮಾನದವರೆಗೆ ಕಾಯುವ ವ್ಯವಧಾನ ಎಲ್ಲಿಯೂ ಕಾಣುವುದಿಲ್ಲ. ಇದೊಂದು ರೀತಿಯ ಸಾಮಾಜಿಕ ಉನ್ಮಾದ,’’ ಎನ್ನುತ್ತಾರೆ ವಕೀಲ ಬಿ. ಟಿ. ವೆಂಕಟೇಶ್. ಇವರು ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯವಾದಿ.

ಪ್ರಕರಣ ನಡೆದು 40 ದಿನಗಳ ನಂತರ ಎಸ್‌ಐಟಿ ಮೊದಲ ಬಾರಿಗೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಿತ್ತು. ಇಲ್ಲಿ ಮೂವರು ಶಂಕಿತರ ನಾಲ್ಕು ರೇಖಾ ಚಿತ್ರಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡಿತ್ತು. ಅದಾದ ನಂತರ ಮಾಧ್ಯಮಗಳಲ್ಲಿಯೇ ಗೌರಿ ಹಂತಕರ ಬಂಧನ, ಬಿಡುಗಡೆ ಪ್ರಹಸನಗಳು ನಡೆದುಕೊಂಡು ಬಂದವು. ಬಹುಶಃ ಅತಿ ಹೆಚ್ಚು ಬಾರಿ ಎಸ್‌ಐಟಿಯೊಂದು ಸ್ಪಷ್ಟೀಕರಣ ನೀಡಿದ ಪ್ರಕರಣ ಇದು. ಇದಾದ ನಂತರ ವಾರಗಳ ಮುಂಚೆ ಗೌರಿ ಲಂಕೇಶ್ ಪ್ರಕರಣದಲ್ಲಿ ಮೊದಲ ಹಂತದ ದೋಷಾರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿತು ಎಸ್‌ಐಟಿ. ಅದರಲ್ಲಿ ಇಬ್ಬರು ಆರೋಪಿಗಳ ಮೇಲೆ ಹತ್ಯೆಗೆ ನೆರವು ನೀಡಿದ ಆರೋಪವನ್ನು ಮಾಡಲಾಗಿದೆ. ಹಂತಕರ ಬಂಧನ ಇನ್ನೂ ಬಾಕಿ ಉಳಿಸಿಕೊಂಡಿತ್ತು.

ಈ ನಡುವೆ, ಹೊಸ ಸರಕಾರ ಅಸ್ಥಿತ್ವಕ್ಕೆ ಬರುತ್ತಲೇ ಎಸ್‌ಐಟಿ ವಿಚಾರಣೆಯಲ್ಲಿ ಎಲ್ಲಿಲ್ಲದ ವೇಗ ಕಂಡು ಬರುತ್ತಿದೆ. ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿ ನಡೆಸಿದ ವಿಚಾರಣೆ (?) ಕುರಿತು ಎಸ್‌ಐಟಿಗೆ ಬರೆದ ಪತ್ರದ ಪ್ರತಿಗಳು ಮಾಧ್ಯಮಗಳಿಗೆ ಸೋರಿಕೆಯಾಗುತ್ತದೆ. ಅಶೋಕ್ ವಾಘ್ಮೋರೆ ಬಂಧನವಾಗುತ್ತಲೇ ಗೌರಿ ಲಂಕೇಶ್ ಹತ್ಯಾ ಪ್ರಕರಣ ಒಟ್ಟಾರೆ ಶ್ರೀರಾಮ ಸೇನೆ ಬುಡಕ್ಕೆ ಬಂದು ನಿಲ್ಲುತ್ತದೆ.

“ಎಸ್‌ಐಟಿ ತನಿಖೆ ನಡೆಸಬೇಕು. ಆದರೆ ವಿಚಾರಣೆಯ ಹೊಣೆಗಾರಿಕೆ ನ್ಯಾಯಾಲಯದ್ದು. ಇಲ್ಲಿ ನಡೆಯುತ್ತಿರುವ ತನಿಖೆಯ ಪ್ರತಿ ಮಾಹಿತಿ ಸೋರಿಕೆಯಾಗುತ್ತಿದ್ದರೆ, ಅಂತಿಮವಾಗಿ ನ್ಯಾಯದಾನಕ್ಕೆ ಸಮಸ್ಯೆಯಾಗುತ್ತದೆ. ಗೌರಿ ಪ್ರಕರಣದಲ್ಲಿ ಎಸ್‌ಐಟಿ ಇನ್ನಷ್ಟು ಸಂಯಮದಿಂದ ನಡೆದುಕೊಳ್ಳಬೇಕಿದೆ,’’ ಎನ್ನುತ್ತಾರೆ ವಕೀಲ ಜೆ. ಡಿ. ಕಾಶೀನಾಥ್.

ಹೀಗಿರುವಾಗಲೇ, ಎಸ್‌ಐಟಿ ತನ್ನ ಬಂಧನಲ್ಲಿರುವ ಆರೋಪಿಗಳಿಗೆ ‘ಥರ್ಡ್‌ ಡಿಗ್ರಿ’ ಆತಿಥ್ಯ ನೀಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಈ ಕುರಿತು ಹೈಕೋರ್ಟ್‌ ಸೋಮವಾರ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಮುಂದಿನ ಹಾದಿ:

ಎಸ್‌ಐಟಿ ತನಿಖೆ, ನ್ಯಾಯಾಲಯದ ಅಂತಿಮ ತೀರ್ಪಿನ ಆಚೆಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಾಮಾಜಿಕ ಕಂಪನವನ್ನಂತೂ ಹುಟ್ಟುಹಾಕುತ್ತದೆ. ಈಗಾಗಲೇ ಗೌರಿ ಹಂತಕರ ಬಂಧನವಾಯಿತು, ಹಿಂದಿರುವ ಸೂತ್ರದಾರರ ಬಂಧನ ಯಾವಾಗ ಎಂಬ ಕೂಗು ಕೇಳಿಬರುತ್ತಿದೆ.ಸ್ಥಾಪಿಸಲು ಹೊರಟ ಸತ್ಯಗಳು ಅಂತಿಮವಾಗಿ ಸತ್ಯವನ್ನೇ ಕಾಣುವ ಆಶಯ ಹೊಂದಿರುತ್ತವೆ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅದಕ್ಕಾಗಿ ಉನ್ಮಾದದ ಅಲೆಯಲ್ಲಿ ಅರ್ಧಸತ್ಯವನ್ನೇ ಸತ್ಯ ಎಂದು ಅಂದುಕೊಳ್ಳುವ ಅಪಾಯವನ್ನು ಮರೆಯಬಾರದಷ್ಟೆ.