ಕೊಟ್ಟ ಕುದುರೆಯ ಏರಲು ಹಿಂದೇಟು; ಖಾತೆ ತಗಾದೆ ಹೊತ್ತಲ್ಲಿ ನೆನಪಾದ ಅಲ್ಲಮ!
COVER STORY

ಕೊಟ್ಟ ಕುದುರೆಯ ಏರಲು ಹಿಂದೇಟು; ಖಾತೆ ತಗಾದೆ ಹೊತ್ತಲ್ಲಿ ನೆನಪಾದ ಅಲ್ಲಮ!

ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಬದಲಿಗೆ ಮತ್ತೊಂದು ಖಾತೆ ಬಯಸುತ್ತಿರುವ ಈ ಇಬ್ಬರೂ ಸಚಿವರು ತಮ್ಮ ಅಸಮಾಧಾನಕ್ಕೆ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ.

‘ಕಾಲೇಜು ಮೆಟ್ಟಿಲು ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ’

‘ನನಗೆ ಸಾರಿಗೆ ಖಾತೆ ಬೇಕಿತ್ತು. ಸಣ್ಣ ನೀರಾವರಿ ಕೊಟ್ಟಿದ್ದಾರೆ’

ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಇಂಥದ್ದೊಂದು ಖಾತೆ ಕ್ಯಾತೆಯ ತಗಾದೆ ನಡೆಯುತ್ತಿದೆ. ಜೆಡಿಎಸ್‌ನ ಇಬ್ಬರು ಸಚಿವರು ತಮಗೆ ನೀಡಿರುವ ಖಾತೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಶಾಸಕರಾಗಿದ್ದಾಗ ಸಚಿವ ಸ್ಥಾನ ಸಿಕ್ಕರೆ ಸಾಕು ಎಂದು ಹಾತೊರೆಯುವ ಶಾಸಕರು ಸಚಿವರಾದ ಮೇಲೆ ‘ಪ್ರಭಾವಿ’ ಖಾತೆ, ‘ಲಾಭದಾಯಕ’ ಖಾತೆಯ ಕಡೆಗೆ ಕಣ್ಣು ಹಾಕುವುದು ಇದ್ದೇ ಇದೆ. ಆದರೆ, ಈ ಅಸಮಾಧಾನ ಈ ಬಾರಿ ಜನಸಾಮಾನ್ಯರು ಕಂಪೆನಿಯಿಂದ ಕಂಪೆನಿಗೆ ಕೆಲಸ ಬದಲಿಸುವ ಟ್ರೆಂಡ್‌ ಅನ್ನು ಹೋಲುತ್ತಿದೆ.

ಸಂಬಳ, ಉನ್ನತ ಸ್ಥಾನ ಮತ್ತಿತರ ಕಾರಣಗಳಿಗೆ ಉದ್ಯೋಗಿಗಳು ಒಂದು ಕಂಪೆನಿ ಬಿಟ್ಟು ಮತ್ತೊಂದು ಕಂಪೆನಿ ಸೇರುವ ಟ್ರೆಂಡ್‌ ಈಗ ಸಾಮಾನ್ಯ. ಕೆಲಸದ ಭದ್ರತೆಗಿಂತ ಸಿಗುವ ಸ್ಥಾನದ ಬಗ್ಗೆ ಯೋಚಿಸುವವರೇ ಈಗ ಹೆಚ್ಚು. ಹೀಗಾಗಿ ಕಂಪೆನಿ ಬದಲಿಸುವ ಟ್ರೆಂಡ್‌ ಕಾರ್ಪೊರೇಟ್‌ ಜಗತ್ತಿನಲ್ಲಿ ನಡೆಯುತ್ತಿದೆ.

ಆದರೆ, ಈ ಟ್ರೆಂಡ್ ಈಗ ವಿಧಾನಸೌಧದಲ್ಲೂ ಶುರುವಾಗಿದೆ. ತಮಗೆ ಕಂದಾಯ ಖಾತೆ ಬೇಕಿತ್ತು ಎಂದಿರುವ ಸಚಿವ ಜಿ.ಟಿ. ದೇವೇಗೌಡ, “ಕಾಲೇಜು ಮೆಟ್ಟಿಲು ಹತ್ತಿದ ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ” ಎಂದು ಅಸಮಾಧಾನ ಹೊರಹಾಕಿದ್ದರು.

ಇನ್ನು ಸಾರಿಗೆ ಖಾತೆ ಬಯಸಿದ್ದ ಸಿ.ಎಸ್‌. ಪುಟ್ಟರಾಜು ಸಣ್ಣ ನೀರಾವರಿ ಖಾತೆ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿದ್ದರು. ಆದರೆ, ಜೆಡಿಎಸ್ ವರಿಷ್ಠರು ಸದ್ಯಕ್ಕೆ ಇಬ್ಬರನ್ನೂ ಸಮಾಧಾನ ಮಾಡಿದ್ದಾರೆ.

“ಜನರೊಂದಿಗೆ ಬೆರೆತು ಕೆಲಸ ಮಾಡಲು ಸಾಧ್ಯವಾಗುವ ಖಾತೆ ಬಯಸಿದ್ದೆ. ಕಂದಾಯ ಅಥವಾ ಸಾರಿಗೆ ಖಾತೆ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಕಾಲೇಜು ಮೆಟ್ಟಿಲು ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ” ಎಂದು ಜಿ.ಟಿ. ದೇವೇಗೌಡ ಆಪ್ತರ ಬಳಿ ಹೇಳಿಕೊಂಡಿದ್ದರು.

ಆದರೆ, ಕಾಲೇಜು ಮೆಟ್ಟಿಲು ಹತ್ತದ ನೆಪ ಕಂದಾಯ ಖಾತೆಯ ಮೇಲಿನ ಆಸೆಗಾಗಿಯೇ ಹೊರತು ಉನ್ನತ ಶಿಕ್ಷಣ ಖಾತೆಯಲ್ಲಿದ್ದುಕೊಂಡು ಜನರ ಮಧ್ಯೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಮಾತು ಬಾಲಿಶವಾದುದು.

ಅದೇ ರೀತಿ ಸಣ್ಣ ನೀರಾವರಿಗಿಂತ ಹೆಚ್ಚಿನ ‘ಲಾಭ’ವಿರುವ ಖಾತೆ ಸಾರಿಗೆಯನ್ನ ಪುಟ್ಟರಾಜು ಬಯಸಿದ್ದಾರೆ. ಈ ಬಯಕೆಯ ಹಿಂದೆ ಇರುವುದೂ ಹೆಚ್ಚಿನ ಲಾಭದ ಲೆಕ್ಕಾಚಾರವೇ ಹೊರತು ‘ಜನಸೇವೆ’ಯ ಆಶಯವಲ್ಲ.

‘ನೀರ್‌ ಸಾಬ್‌’ ಎಂದೇ ಹೆಸರಾಗಿದ್ದ ಅಬ್ದುಲ್‌ ನಜೀರ್ ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಹೊಂದಿದ್ದರೂ ಇಂದು ನಾಡು ನೆನಪಿಸಿಕೊಳ್ಳುವಂಥ ಕೆಲಸ ಮಾಡಿ ಚರಿತ್ರೆಯ ಪುಟ ಸೇರಿದ್ದಾರೆ. ಆದರೆ, ಈಗಿನ ರಾಜಕಾರಣಿಗಳಿಗೆ ಕೊಟ್ಟಿರುವ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುವ ಬದಲು ಮತ್ತೊಂದು ‘ಲಾಭದಾಯಕ’ ಖಾತೆಯ ಮೇಲೇ ಕಣ್ಣು.

ತಾನು ಕಾಲೇಜು ಮೆಟ್ಟಿಲು ಹತ್ತದಿದ್ದರೂ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಯೋಜನೆ ರೂಪಿಸುವ ಖಾತೆ ತನಗೆ ಸಿಕ್ಕಿದೆ, ಈ ಖಾತೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಜಿ.ಟಿ. ದೇವೇಗೌಡ ಯೋಚನೆ ಮಾಡಲು ಹೋಗಿಲ್ಲ. ಬದಲಿಗೆ ಕಂದಾಯ ಖಾತೆಯ ಆಸೆಗೆ ಕಾಲೇಜು ಮೆಟ್ಟಿಲು ಹತ್ತದ ನೆವ ಹೇಳಿದ್ದಾರೆ.

ಇನ್ನು ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಿನ ಹಂಚಿಕೆಯ ಸಮಸ್ಯೆ ಇದೆ. ಪ್ರತಿ ವರ್ಷ ಜಲಾಶಯಗಳು ತುಂಬಿದರೂ ಆಯಾ ಜಲಾಶಯ ವ್ಯಾಪ್ತಿಯ ನಾಲೆಗಳು ಹಾದು ಬರುವ ಕೆರೆಗಳಿಗೆ ಪೂರ್ತಿಯಾಗಿ ನೀರು ತುಂಬುವುದಿಲ್ಲ ಎಂದು ರೈತ ಕಣ್ಣೀರಿಡುತ್ತಿದ್ದಾನೆ. ರೈತರ ಹೊಲ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿಸುವ ಖಾತೆ ಕೊಟ್ಟಿದ್ದರೂ ಸಿ.ಎಸ್‌. ಪುಟ್ಟರಾಜು ಅವರಿಗೆ ಸಾರಿಗೆ ಖಾತೆಯ ಮೇಲೆ ಕಣ್ಣಿದೆ.

ಕಾವೇರಿ, ಹೇಮಾವತಿ, ತುಂಗಭದ್ರಾ, ವರದಾ, ಕೃಷ್ಣಾ, ಮಲಪ್ರಭ ಜಲಾಶಯಗಳ ವ್ಯಾಪ್ತಿಯಲ್ಲಿ ನೀರು ಹಂಚಿಕೆ ವ್ಯವಸ್ಥೆಯನ್ನು ಯೋಜನಬದ್ಧಗೊಳಿಸುವ ಅಧಿಕಾರ ಇರುವ ಸಣ್ಣ ನೀರಾವರಿ ಖಾತೆಯನ್ನು ನಿಭಾಯಿಸಲಾಗದೆ ಮತ್ತೊಂದು ಖಾತೆಯ ಮೇಲೆ ಕಣ್ಣು ಹಾಕಿದ್ದಾರೆ ಪುಟ್ಟರಾಜು.

ಅಸಮಾಧಾನ ವಿಚಾರ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಇಬ್ಬರೂ ಸಚಿವರು ಕುಮಾರಸ್ವಾಮಿ ಬಗ್ಗೆ ತಮ್ಮ ಬೇಸರವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಅಸಮಾಧಾನಕ್ಕೆ ‘ಬೆಂಬಲಿಗರ ಒತ್ತಾಯ’ ಎಂಬ ಗೂಬೆ ಕೂರಿಸುವ ನಾಟಕವನ್ನೂ ಮಾಡಿದ್ದಾರೆ.

ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡಿರುವ ಈ ಇಬ್ಬರಿಗೂ ಖಾತೆ ಬದಲಾವಣೆ ಅಥವಾ ಹೆಚ್ಚುವರಿಯಾಗಿ ಮತ್ತೊಂದು ಖಾತೆ ನೀಡುವ ಭರವಸೆ ಸಿಕ್ಕಿದೆ ಎನ್ನಲಾಗಿದೆ.

ಆದರೆ, ಇರುವ ಖಾತೆಯನ್ನು ಬಿಟ್ಟು ಬೇರೊಂದು ಖಾತೆಯನ್ನು ಕೇವಲ ಲಾಭದ ಕಾರಣಕ್ಕೆ ಬೆನ್ನತ್ತುವುದು, “ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ” ಎಂಬ ಅಲ್ಲಮಪ್ರಭುವಿನ ವಚನವನ್ನು ನೆನಪಿಸುತ್ತಿದೆ.